ಲಖಿಂಪುರ ಖೇರಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್‌

ನವದೆಹಲಿ: ಅಕ್ಟೋಬರ್ 03 ರ ಭಾನುವಾರದಂದು ಉತ್ತರ ಪ್ರದೇಶದ ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ​ ಖೇರಿ ಗ್ರಾಮದಲ್ಲಿ ನಡೆದ ರೈತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್ ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಮುಂದಿನ ಹಂತದ ವಿಚಾರಣೆಯನ್ನು ಅಕ್ಟೋಬರ್​ 26ಕ್ಕೆ ಮುಂದೂಡಿದೆ.

ಪ್ರತಿಭಟನಾ ನಿರತ ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಕಾರು ಚಲಾಯಿಸಿದ್ದ ಕಾರಣ ನಾಲ್ವರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು. ಆದರೂ, ಸಹ ಪೊಲೀಸರು ಪ್ರಮುಖ ಆರೋಪಿ ಆಶೀಶ್ ಮಿಶ್ರಾ ವಿರುದ್ಧ ಎಫ್​ಐಆರ್ ದಾಖಲಿಸಿರಲಿಲ್ಲ. ಈ ವೇಳೆ ಸ್ವತಃ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶಿಸಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಪೊಲೀಸರಿಗೆ ಸೂಚನೆ ನೀಡಿತ್ತು. ಅಲ್ಲದೆ, ಪ್ರಕರಣದ ವಿಚಾರಣೆಗೆ ಮುಂದಾಗಿತ್ತು.

ಇದನ್ನು ಓದಿ: ಲಖಿಂಪುರ್ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಸೇರಿ ಇತರರ ವಿರುದ್ಧ ಎಫ್ಐಆರ್

ಲಖಿಂಪುರ​ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಕಾರ್ಯ ವೈಖರಿ ಬಗ್ಗೆ ದೇಶದೆಲ್ಲೆಡೆ ಆಕ್ರೋಶವ್ಯಕ್ತವಾಗಿತ್ತು. ಅಲ್ಲದೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಕೂಗು ಕೇಳಿಬಂದಿದ್ದವು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಅಕ್ಟೋಬರ್ 8 ರಂದು ಎಂಟು ಜನರ ಕ್ರೂರ ಹತ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಇಂದು ವಿಚಾರಣೆ ಆರಂಭವಾಗಿದ್ದು ವಿಚಾರಣೆಯಲ್ಲಿ ಇಲ್ಲಿಯವರೆಗೆ ಈ ಹತ್ಯಾಕಾಂಡದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಕೇಳಲಾಯಿತು. 164 ಸಾಕ್ಷಿಗಳಲ್ಲಿ ಇನ್ನು 44 ಮಂದಿಯನ್ನು ಮಾತ್ರ ಏಕೆ ವಿಚಾರಣೆ ನಡೆಸಿದ್ದಿರಿ?, ಹೆಚ್ಚು ಜನರನ್ನು ಇನ್ನೂ ವಿಚಾರಣೆ ನಡೆಸದಿರಲು ಕಾರಣವೇನು? ಎಂದು ಪ್ರಶ್ನಿಸಲಾಗಿದೆ.

ಇದನ್ನು ಓದಿ: ಲಖಿಂಪುರ ಹಿಂಸಾಚಾರದಲ್ಲಿ ಮಡಿದ ರೈತರ ‘ಅಂತಿಮ ದರ್ಶನ’ಕ್ಕೆ ಎಸ್‌ಕೆಎಂ ನಾಯಕರ ಭೇಟಿ

ಇದಕ್ಕೆ ಉತ್ತರಿಸಿರುವ ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿ ವಕೀಲ ಹರಿಶ್ ಸಾಳ್ವೆ, “ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆʼʼ ಎಂದು ಮಾಹಿತಿ ನೀಡಿದ್ದಾರೆ. ಎಷ್ಟು ಜನರನ್ನು ಬಂಧಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ʻʻಇದುವರೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಕೆಲಸಕ್ಕೆ ಕೋರ್ಟ್ ಆಕ್ಷೇಪ:

ಕೊನೆ ಕ್ಷಣದಲ್ಲಿ ಪ್ರಕರಣದ ವಿವರಗಳನ್ನು ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, “ಕೊನೆಯ ನಿಮಿಷದಲ್ಲಿ ವರದಿ ಸಲ್ಲಿಸಿದರೆ ನಾವು ಹೇಗೆ ಓದುವುದು. ಕನಿಷ್ಠ ಒಂದು ದಿನ ಮೊದಲು ಫೈಲ್ ಮಾಡಿ. ನಾವು ವರದಿ ಸಿಗುತ್ತದೆ ಎಂದು ನಿನ್ನೆ ರಾತ್ರಿ 1 ಗಂಟೆವರೆಗೆ ಕಾಯುತ್ತಿದ್ದೆವು”  ಎಂದು ಅಸಮಾಧಾನ ಹೊರಹಾಕಿದೆ. ಬಳಿಕ ಅಕ್ಟೋಬರ್ 26ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಲಖಿಂಪುರ ಖೇರಿ ದುರ್ಘಟನೆ: ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾಗೊಳಿಸಲು ರೈತರಿಂದ ರೈಲು ತಡೆ

ಘಟನೆಯ ಕುರಿತು ಸಿಬಿಐ ಒಳಗೊಂಡಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ಕೋರಿ ಇಬ್ಬರು ವಕೀಲರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್  ಲಖಿಂಪುರ ಖೇರಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಭಾರತ ಸರ್ಕಾರದ ಆಡಳಿತ ನಡೆಸುತ್ತಿರುವ ಬಿಜೆಪಿಯು ನೂತನ ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸುತ್ತಿದ್ದು ಅವು ಇಡೀ ದೇಶದ ಜನತೆಯ ವಿರುದ್ಧವಾಗಿದೆ ಎಂದು ಆಂದೋಲನ ಮಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ರೈತ ಹೋರಾಟದ ಬಗ್ಗೆ ಅತ್ಯಂತ ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಅಂದರೆ, ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಕಾರು ಹರಿಸಲಾಗಿದೆ, ನಾಲ್ಕು ರೈತರನ್ನು ಹತ್ಯೆ ಮಾಡಲಾಗಿತ್ತು. ಈ ಹೇಯ ಘಟನೆಗೆ ರಾಷ್ಟ್ರಾದ್ಯಂತ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಪೊಲೀಸರೆ ಆರೋಪಿ ಆಶಿಶ್​ ಮಿಶ್ರಾ ರಕ್ಷಣೆಗೆ ನಿಂತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿತ್ತು. ಅಲ್ಲದೆ ದೇಶವ್ಯಾಪಿಯಾಗಿ ಕೇಂದ್ರ ಸಚಿವ ಅಜಯ್‌ ಮಿಶ್ರಾರನ್ನು ವಜಾಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *