- ಸಿಆರ್‌ಝಡ್ ವ್ಯಾಪ್ತಿಯ ಮರಳು ಬಲವರ್ಧನೆಗೆ ಮಾತ್ರ ಬಳಕೆ
- ಹಸಿರು ನ್ಯಾಯಮಂಡಳಿ ಕಟ್ಟುನಿಟ್ಟಾದ ನಿರ್ಧಾರ
ಚೆನ್ನೈ: ಕರಾವಳಿ ಜಿಲ್ಲೆಯ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ತೆಗೆಯುವ ಮರಳನ್ನ ಮಾರಾಟ ಮಾಡದಂತೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಉಡುಪಿ ಜಿಲ್ಲೆಯ ಕೆಲವರು ಸಿಆರ್‌ಜೆಡ್ ವಲಯದಲ್ಲಿ ನಡೆಯುತ್ತಿರುವ ಮರಳುಗಾರಿಕೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನದಿಯಲ್ಲಿನ ದಿಬ್ಬಗಳಿಂದ ಮರಳು ತೆಗೆದು ಸಮತಟ್ಟಾಗಿ ಮಾಡುವುದರ ಬದಲು, ಮರಳು ಮಾಫಿಯಕ್ಕೆ ದಾರಿ ಮಾಡಿಕೊಡುತ್ತಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರನ್ನ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಹಸಿರು ಪೀಠ, ಸಿಆರ್‌ಜೆಡ್ ವಲಯದಲ್ಲಿ ತೆಗೆದ ಮರಳನ್ನ ಮಾರಾಟ ಮಾಡದಂತೆ ಆದೇಶಿಸಿದೆ
ಸಿಆರ್‌ಜೆಡ್ ವಲಯದಲ್ಲಿ ಮರಳು ದಿಬ್ಬಗಳಿಂದ ನದಿಯ ಹರಿವಿಗೆ ಸಮಸ್ಯೆ ಆಗಲಿದ್ದು, ಅಂತಹ ದಿಬ್ಬಗಳಿಂದ ಮರಳನ್ನ ತೆಗೆಯುವಂತೆ ತಾತ್ಕಾಲಿಕ ಪರವಾನಗಿಗಳನ್ನ ನೀಡಲಾಗಿದೆ. ಆದರೆ ಪರವಾನಗಿದಾರರಿಂದ ಕೆಲ ಗುತ್ತಿಗೆದಾರರು ಸಬ್ ಲೀಸ್ ಪಡೆದು ನಿಯಮಗಳನ್ನ ಗಾಳಿಗೆ ತೂರಿ, ಬೃಹತ್ ಯಂತ್ರಗಳನ್ನ ಬಳಸಿ ಮರಳುಗಾರಿಕೆ ಮಾಡುತ್ತಿರುವುದು ಮಾಫಿಯಾ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮರಳು ಮಾಫಿಯಾದಿಂದ ಸಿಆರ್‌ಜೆಡ್ ವಲಯ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಮರಳು ತೆಗೆಯುವುದರ ಬದಲು ಮರಳು ಗಣಿಗಾರಿಕೆಯಾಗಿ ಇದು ಬದಲಾಗಿದೆ. ಇನ್ನು ಮರಳು ತೆಗೆದು ಬಳಕೆ ಮಾಡಿಕೊಳ್ಳಲು ಸ್ಥಳೀಯರಿಗೆ ಅವಕಾಶ ನೀಡಲಾಗಿತ್ತು. ಆದರೆ ಸದ್ಯ ಮರಳುಗಾರಿಕೆಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಬ್ ಲೀಸ್ ಪಡೆದ ಗುತ್ತಿಗೆದಾರರು ಸ್ಥಳೀಯರನ್ನ ಕಡೆಗಣಿಸಿ ಬೇರೆ ರಾಜ್ಯದ ಕಾರ್ಮಿಕರನ್ನ ಬಳಸಿಕೊಂಡು ಬೇರೆ ಕಡೆಗಳಲ್ಲಿ ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದೆ.
ಸರ್ಕಾರ ಹಣ ಪಡೆದು ಮರಳನ್ನ ತೆಗೆಯಲು ತಾತ್ಕಾಲಿಕ ಪರವಾನಗಿ ಕೊಡುತ್ತದೆ. ಲೀಸ್ ಪಡೆದವರು ನಂತರ ನಿಯಮಾವಳಿಗಳನ್ನ ಉಲ್ಲಂಘಿಸುತ್ತಾರೆ. ಸಿಆರ್‌ಜೆಡ್ ವಲಯದಲ್ಲಿ ನದಿಗೆ ಹಾನಿಯಾಗುವಂತೆ ಮರಳು ತೆಗೆಯುತ್ತಿದ್ದರೂ, ಮರಳುಗಾರಿಕೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಬೇಕಿದ್ದ ಜಿಲ್ಲಾ ಸಿಆರ್‌ಜೆಡ್ ನಿರ್ವಹಣಾ ಸಮಿತಿ ಗಮನಹರಿಸುತ್ತಿಲ್ಲ. ಕೂಡಲೇ ಕ್ರಮ ಕೈಗೊಂಡು ಮರಳುಗಾರಿಕೆ ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಿಆರ್‌ಜೆಡ್ ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ರಾಷ್ಟ್ರೀಯ ಹಸಿರು ಪೀಠದ ಆದೇಶದಿಂದ ಮೂರು ಜಿಲ್ಲೆಗಳಲ್ಲಿ ಮರಳುಗಾರಿಕೆ ಬಂದ್ ಆಗಲಿದೆ. ಇದು ಕಟ್ಟಡ ಕಾಮಗಾರಿ, ಅಭಿವೃದ್ದಿ ಕಾಮಗಾರಿಗಳ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವರಿಗೆ ಇದು ಅನ್ಯಾಯವಾಗಲಿದೆ ಎನ್ನಲಾಗಿದೆ.