ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ – ಡಾ.ಸಿ.ಎನ್.‌ಅಶ್ವತ್ಥನಾರಾಯಣ

  • ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆದೇಶ ತಕ್ಷಣ ಹಿಂಪಡೆಯಬೇಕು -ಸಿದ್ದರಾಮಯ್ಯ
  • ಯಾರನ್ನೋ ಮೆಚ್ಚಿಸಲು ನೀತಿ ಜಾರಿ ಮಾಡುವುದು ಸರಿಯಲ್ಲ- ಎಸ್‌.ಎಫ್‌.ಐ ಆರೋಪ
  • ಪೋಷಕ – ಅಧ್ಯಾಪಕ ಸಂಘಟನೆಗಳಿಂದಲೂ ತೀವ್ರ ವಿರೋಧ 

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2021- 22) ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದು ದೇಶದಲ್ಲೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಅನುಷ್ಠಾನಗೊಳಿಸುತ್ತಿರುವುದಾಗಿದೆ. ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮುಂತಾದ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ಆದೇಶಕ್ಕೆ ಅಸ್ತು ಎಂದರು.

 

 

 

ಹೊಸ ನೀತಿಯಲ್ಲೇನಿದೆ?: ಹೊಸ ನೀತಿಯ ಬಗ್ಗೆ ವಿವರಣೆ ನೀಡಿದ ಅಶ್ವತ್ಥ ನಾರಾಯಣ ಅವರು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರ ಅನುಸಾರ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಆ ಪ್ರಕಾರ ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನದಲ್ಲಿ ಆಯಾ ಕಾಲೇಜಿನಲ್ಲಿ ಲಭ್ಯವಿರುವ ಎರಡು ಐಚ್ಛಿಕ ವಿಷಯಗಳನ್ನು (ಡಿಸಿಪ್ಲಿನ್‌ ಕೋರ್‌) ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೆ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿಯೂ, ಇನ್ನೊಂದು ವಿಷಯವನ್ನು ಮೈನರ್‌ ವಿಷಯವನ್ನಾಗಿ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ಇವುಗಳ ಜತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್‌ ವಿನ್ಯಾಸಕ್ಕೆ (ಕರಿಕ್ಯುಲಮ್‌ ಸ್ಟ್ರಕ್ಚರ್‌) ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು.

ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದ್ದು, ಮಾತೃಭಾಷೆ ಕಲಿಕೆಗೆ ಈ ನೀತಿಯಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ ಎಂದು ಹೇಳಿದರು.

ಬಿ.ಕಾಂ, ಬಿಸಿಎ, ಬಿಬಿಎ, ವಿಬಿಎ ಸೇರಿದಂತೆ ವಿಷಯಾಧಾರಿತ ಪದವಿ ಅಧ್ಯಯನದಲ್ಲಿ ವಿಷಯಗಳನ್ನು ಬಹುಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ಕನ್ನಡ ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ಮೂರು ವರ್ಷದ ಪದವಿ ಅಧ್ಯಯನ ವೇಳೆ ಯಾವುದೇ ವರ್ಷದ ಅಧ್ಯಯನ ಪೂರ್ಣಗೊಂಡ ಬಳಿಕ ಮೊದಲ ವರ್ಷಕ್ಕೆ ಪ್ರಮಾಣ ಪತ್ರ, ಎರಡನೇ ವರ್ಷಕ್ಕೆ ಡಿಪ್ಲೊಮಾ, ಮೂರನೇ ವರ್ಷಕ್ಕೆ ಪದವಿ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಮೊಟಕುಗೊಳಿಸಿದವರು ಯಾವಾಗ ಬೇಕಾದರೂ ಮತ್ತೆ ಅಧ್ಯಯನ ಮುಂದುವರೆಸಬಹುದು. ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನಲ್ಲಿ ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್‌ ಪದವಿ ಪಡೆಯಬಹುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್‌ ಪದವೀಧರರು ನೇರವಾಗಿ ಡಾಕ್ಟರೇಟ್‌ (ಪಿಎಚ್‌ಡಿ) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು ಎಂದು ತಿಳಿಸಿದರು.

ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಕಾಲೇಜಿನಲ್ಲಿ ಸ್ನಾತಕ ಹಾನರ್ಸ್‌ ಪದವಿ ಲಭ್ಯವಿಲ್ಲದಿದ್ದರೆ, ಬೇರೊಂದು ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸಬಹುದು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆದೇಶ ತಕ್ಷಣ ಹಿಂಪಡೆಯಬೇಕು -ಸಿದ್ದರಾಮಯ್ಯ : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ನೀತಿಯನ್ನು ತರಾತುರಿಯಲ್ಲಿ ಹೇರಬೇಡಿ, ಸಂಬಂಧಿಸಿದ ವಲಯಗಳ ಜನರ ಜೊತೆ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು. ಆ ರೀತಿ ಮಾಡದೆ ಈ ಅನಾಹುತಕಾರಿ ನೀತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ನೀತಿ ಜಾರಿಗೊಳಿಸಲಾಗುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ, ಅಂದರೆ ಒಂದು ವರ್ಷ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ವಿರೋಧ ಬಂದ ಮೇಲೆಉನ್ನತ ಶಿಕ್ಷಣ ಸಚಿವಡಾ. ಅಶ್ವತ್ಥ ನಾರಾಯಣ ಈ ಸಮಸ್ಯೆ ಸರಿಪಡಿಸುವುದಾಗಿ ಹೇಳಿದ್ದರು. ಆದರೆ, ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೊ ಇಲ್ಲ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೊ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೊ ಎಂಬ ಬಗ್ಗೆ ಉಲ್ಲೇಖ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಜಗತ್ತಿನ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಈ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿ ಶೇ 40ರಷ್ಟು ಕ್ರೆಡಿಟ್ಟುಗಳನ್ನು, ಅಂಕಗಳನ್ನು, ಆನ್ ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಯಾವುದೇ ವಿಶ್ವವಿದ್ಯಾಲಯದಿಂದ ಶೇ 50ರಷ್ಟು ಅಂಕ, ಕ್ರೆಡಿಟ್ಟುಗಳನ್ನು‌ ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಉಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. (ಈಗಾಗಲೆ ಉಪನ್ಯಾಸಕರುಗಳಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿದೆ).  ಈ ನೀತಿಯ ಪ್ರಕಾರ, ವಿಶ್ವವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ’ ಎಂದೂ ಟೀಕಿಸಿದ್ದಾರೆ.

ಯಾರನ್ನೋ ಮೆಚ್ಚಿಸಲು ನೀತಿ ಜಾರಿ ಮಾಡುವುದು ಸರಿಯಲ್ಲ : ದೇಶದಲ್ಲಿ ನಾವೇ ಮೊದಲಿಗೆ ಜಾರಿ ಮಾಡಿದ ರಾಜ್ಯ ಎಂದು ಮೋದಿಯವರನ್ನು ಮೆಚ್ಚಿಸುವ ಕೆಲಸಕ್ಕೆ ಉನ್ನತ ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಇದು ಸಚಿವರ ಆತುರದ ನಿರ್ಧಾರ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್.ಎಪ್.ಐ) ರಾಜಾಧ್ಯಕ್ಷ ಅಮರೇಶ್‌ ಕಡಗದ್‌ ಪ್ರತಿಕ್ರಿಯಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವರು ವಿದ್ಯಾರ್ಥಿ- ಪೋಷಕರ ಸಂಘಟನೆ, ಶಿಕ್ಷಕ – ಉಪನ್ಯಾಸಕರ ಸಂಘಟನೆ, ಶಿಕ್ಷಣ ತಜ್ಞರ ಜೊತೆ, ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸದೆ ಈ ತೀರ್ಮಾನಕ್ಕೆ ಮುಂದಾಗಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ದೋಷಗಳಿವೆ, ಅವುಗಳನ್ನು ಸರಿಪಡಿಸಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ. ಅನೇಕ ತಿದ್ದುಪಡಿಗಳಾಗಬೇಕು ಎಂದು ಬಹಳಷ್ಟು ಜನ ದೂರು ಸಲ್ಲಿಸಿದ್ದಾರೆ.  ಹೊಸ ಶಿಕ್ಷಣ ನೀತಿಜಾರಿ ಮಾಡುವ ಬಗ್ಗೆ ಇತರೆ ರಾಜ್ಯಗಳು ಚರ್ಚೆ ನಡೆಸುತ್ತಿವೆ. ಕೇರಳ, ತಮಿಳುನಾಡು ಸರಕಾರಗಳು ಜಾರಿ ಮಾಡುವುದಿಲ್ಲ ಎಂದು ಹೇಳುತ್ತಿವೆ. ಆದರೆ ನಮ್ಮ ರಾಜ್ಯದ ಸಚಿವರು ಯಾಕಷ್ಟು ಆತುರದಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಶಿಕ್ಷಣ ಮತ್ತು ಮಕ್ಕಳ ಮೇಲೆ ಇದು ಯಾವ ರೀತಿ ಪರಿಣಮಾ ಬೀರಲಿದೆ ಎಂಬುದು ಯಾಕೆ ಸಚಿವರಿಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *