ನಾಟಿ ವೈದ್ಯ.. ಹೇಗೆ ನಾಟೀತು?

– ಡಾ: ಎನ್.ಬಿ.ಶ್ರೀಧರ

ನಾಟಿ ವೈದ್ಯ.. ಇದು ಪಾರಂಪರಿಕ ಪಶು”ವೈದ್ಯ” ಪದ್ಧತಿ. ಅನೇಕ ಬಾರಿ ಈ ನಾಟಿ ವೈದ್ಯರಿಗೆ ಬಿಟ್ಟು ಬಿಡಿ ಮನುಷ್ಯರ ಅಂಗರಚನೆಯ ಬಗ್ಗೆ ಅಥವಾ ಅದರ ರೋಗಗಳ ಬಗ್ಗೆ ಒಂದಿನಿತೂ ಜ್ಞಾನವಿರುವುದಿಲ್ಲ. ನಾಟಿ ವೈದ್ಯದಲ್ಲಿ ಚೀಟಿ, ಮಂತ್ರ, ತುಂಡೆ, ಗಿಡ ಮೂಲಿಕೆ ಚಿಕಿತ್ಸೆಗಳೆಲ್ಲಾ ಒಕೆ. ಆದರೆ ಅವರೇ ವೈದ್ಯಕೀಯ ಚಿಕಿತ್ಸೆ ಮಾಡಿ ಅದು ರಣವೈದ್ಯವಾಗಿ ದನ ಸತ್ತ ಅನೇಕ ಘಟನೆಗಳಿವೆ. ಇದು ಸರಿಯೇ?. ಆದರೂ ಸಹ ಅನೇಕ ಜನ ಈ ನಾಟಿ ವೈದ್ಯರನ್ನು ಏಕೆ ಇಷ್ಟ ಪಡುತ್ತಾರೆ ಮತ್ತು ಆಧುನಿಕ ಪಶುವೈದ್ಯಕೀಯ ಪದ್ಧತಿಯನ್ನು ದ್ವೇಷಿಸುತ್ತಾರೆ ಎಂಬ ಬಗ್ಗೆ ಗೊತ್ತಿದೆಯೇ? ಇಲ್ಲದಿದ್ದರೆ ಈ ಲೇಖನ ಓದಿ.

ನನ್ನ ಅತ್ಯಂತ ಸನಿಹದ ಸಂಬಂಧಿಯೊಬ್ಬರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದರು. “ನಮ್ಮ ಮನೆಯ ದನ ನೆಲ ಹಿಡಿದಿದೆ. ಇಲ್ಲಿಯ ನಾಟಿವೈದ್ಯರು ಬಂದು ಪರೀಕ್ಷಿಸಿ “ಇದು ಕಾಗೆ ರೋಗ” ಇದಕ್ಕೆ ಚಿಕಿತ್ಸೆ ಮಾಡಲು ಐದು ಸಾವಿರ ಖರ್ಚಾಗುತ್ತದೆ ಎಂದಿದ್ದಾರೆ. ಪಶುವೈದ್ಯರು ಬಂದು ಪರೀಕ್ಷಿಸಿ ಗಾಯ ಕೀವು ಆಗಿರುವುದರಿಂದ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಏನಿದು ಹೊಸರೋಗ?” ಎಂದರು. ನನಗೆ ಪರಮಾಶ್ಚರ್ಯ. ಕಳೆದ 33 ವರ್ಷಗಳಿಂದಲೂ ಜಾನುವಾರುಗಳ ಚಿಕಿತ್ಸೆ, ಸಂಶೋಧನೆ, ಬೋಧನೆಗಳಲ್ಲಿ ತೊಡಗಿದ ನನಗೆ ಈ “ಕಾಗೆ ರೋಗ”ದ ಹೆಸರೇ ಗೊತ್ತಿರಲಿಲ್ಲ. ನಾನು “ ಸರಿ ಅವರ ದೂರವಾಣಿ ಸಂಖ್ಯೆ ನೀಡಿ.. ನಾನು ಮಾತಾನಾಡುತ್ತೇನೆ” ಎಂದೆ. ದೂರವಾಣಿ ಕರೆಮಾಡಿ ನನ್ನ ಪರಿಚಯ ತಿಳಿಸಿ “ ಏನಿದು ಕಾಗೆ ರೋಗ? ನನಗೆ ಹೊಸದು. ಯಾವುದಾದರೂ ಆಯುರ್ವೇದದ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖವಿದೆಯೇ? ಆಧುನಿಕ ಪಶುವೈದ್ಯಕೀಯ ಪುಸ್ತಕದಲ್ಲಿ ಅಥವಾ ಸಂಶೋಧನಾ ಲೇಖನಗಳಲ್ಲಿ ಇದರ ಬಗ್ಗೆ ಉಲ್ಲೇಖಗಳಿಲ್ಲ. ಈ ಕುರಿತು ಕಾರಣ ಮತ್ತು ಚಿಕಿತ್ಸೆಯೇನು ತಿಳಿಯಬಹುದೇ? ಅದಕ್ಕೆ ತಗಲುವ ವೆಚ್ಚ ಎಷ್ಟು? ಗುಣವಾಗುವುದು ಖಚಿತವೇ? ಎಷ್ಟು ಈ ರೀತಿಯ ಜಾನುವಾರುಗಳ ಮೇಲೆ ಪ್ರಯೋಗಿಸಿದ್ದೀರಿ? ನನಗೆ ಈ ಕುರಿತು ಮಾಹಿತಿ ನೀಡಿ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದೆ. ಅವರು “ಹೆ… ಹೆ… ಹಾಗೆ ಹೊಸರೋಗವೇನಿಲ್ಲ. ಸುಮ್ಮನೆ ಅಂದೆ.. ಚಿಕಿತ್ಸೆ ನನ್ನ ಅನುಭವದಲ್ಲಿ ಕಂಡು ಹಿಡಿದದ್ದು. ಸುಮಾರಷ್ಟು ಗುಣವಾಗಿವೆ. ನಾನು ಔಷಧಿಗಷ್ಟೇ ದುಡ್ಡು ತೆಗೆದುಕೊಳ್ಳುವೆ.

ಇದು ನನ್ನ ಜಾನುವಾರು ಸೇವೆ” ಎಂದರು. ನಾನು “ನೀವು ಜಾನುವಾರು ಸೇವೆ ಮಾಡಿ. ಆದರೆ ಜನರಿಗೆ ವೈಜ್ಞಾನಿಕ ಮಾಹಿತಿ ಹೋಗಬೇಕಲ್ಲವೇ? ನೂರಾರು ವರ್ಷಗಳ ಕಾಲ ಸಹಸ್ರಾರು ದನಗಳ ಮೇಲೆ ಮಾಡಿದ ಚಿಕಿತ್ಸೆ ಮಾಡಿದ ಅನುಭವಗಳ ಮೇಲೆ ವಿವಿಧ ವೈಜ್ಞಾನಿಕ ಮಾಸಿಕಗಳಲ್ಲಿ ಪ್ರಕಟವಾದ ಲೇಖನಗಳನ್ನು ಆಧರಿಸಿ ಬರೆದ ಪುಸ್ತಕಗಳನ್ನು ಓದಿ ನಾವೆಲ್ಲಾ ಚಿಕಿತ್ಸೆ ಮಾಡುವುದು ಮತ್ತು ವಿದ್ಯಾರ್ಥಿಗಳಿಗೂ ಪಾಠ ಹೇಳುವುದು. ಜನರಿಗೆ ಸತ್ಯವಾದ ಮಾಹಿತಿ ನೀಡೋಣ. ನೀವು ಹಳ್ಳಿಗಳಲ್ಲಿ ಪಶುವೈದ್ಯರು ಸಿಗದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಮಾಡಿ. ನಂತರ ಮಾಲಕರಿಗೆ ಪಶುವೈದ್ಯರನ್ನು ಸಂಪರ್ಕಿಸಲು ತಿಳಿಸಿ. ಅದು ಬಿಟ್ಟು ನೀವೇ ತಜ್ಞರೆಂದು ತಿಳಿದು ಈ ರೀತಿಯ ಸುಳ್ಳು ವಿಧಾನದ ಚಿಕಿತ್ಸೆ ನೀಡಿ ಆಕಳು ಮರಣ ಹೊಂದಿದರೆ ಗೋಶಾಪ ನಿಮಗೆ ತಟ್ಟುವುದಿಲ್ಲವೇ ? ಎಂದು ಕೇಳಿದೆ. ನಮಗೆ ಸರಿಯಾದ ಮಾಹಿತಿ ಇರುವುದು ಅಸಾಧ್ಯದ ಮಾತು. “ತಜ್ಞ ಪಶುವೈದ್ಯರ ಮಾರ್ಗದರ್ಶನದಲ್ಲಿ ಬೇಕಾದರೆ ಪ್ರಥಮ ಚಿಕಿತ್ಸೆ ಮಾಡಿ. ಹಳ್ಳಿಗಳಲ್ಲಿ ಪಶುವೈದ್ಯರೇ ಇರದ ಈ ಕಾಲದಲ್ಲಿ ಇದು ಅನಿವಾರ್ಯ ಸಹ” ಎಂದೆ. ಅವರು ಒಲ್ಲದ ಮನಸ್ಸಿನಿಂದ “ಸರಿ.. ಸರಿ” ಎಂದರು. ಆದರೂ ಅವರ ಜ್ಞಾನ ಕೋಶದಿಂದ “ಕಪ್ಪೆ ರೋಗ” “ಗೂಬೆ ರೋಗ” ಇತ್ಯಾದಿ ಹೊಸ ರೋಗಗಳು ಹೊರಬರುತ್ತಿವೆ ಎಂದು ತಿಳಿದು ಬಂದಿತು.

ಸ್ಥಳೀಯ ಪಶುವೈದ್ಯರನ್ನು ವಿಚಾರಿಸಿದಾಗ ಅವರು ಯಾವುದೇ ಪಶು ಚಿಕಿತ್ಸಾ ಪ್ರಕರಣಗಳನ್ನು ಈವರೆಗೂ ಪಶುವೈದ್ಯರ ಗಮನಕ್ಕೆ ತಂದಿಲ್ಲವೆಂದೂ, ಬದಲಾಗಿ ಪಶುವೈದ್ಯರ ಬಗ್ಗೆ ಅಪಪ್ರಚಾರ ಮಾಡುವವರೆಂದೂ, ಪಶುವೈದ್ಯರು ಯಾವಾಗಲೂ ಕಂಪ್ಯೂಟರಿನ ಮುಂದೆ ಕೂರುವುದರಿಂದ ಅವರಿಗೆ ಪುರಸೊತ್ತಿಲ್ಲವೆಂದು ಹೇಳುವರೆಂದೂ, ತಾನು ವಿವಿಧ ಹೊಸ ರೀತಿಯ ಪುಸ್ತಕಗಳನ್ನು ಓದಿ ಹೊಸ ಕಾಯಿಲೆಗಳಿವೆ ಎಂದು ಕಾಗೆ ಕಾಯಿಲೆ, ಗುಬ್ಬಿಕಾಯಿಲೆ ಎಂದು ಬಾಯಿಗೆ ಬಂದ ಹಾಗೆ ರೈತರಿಗೆ ಮೋಸ ಮಾಡುವನೆಂದೂ, ಕೆಲವೊಮ್ಮೆ “ಉಚಿತ” ಚಿಕಿತ್ಸೆ ಮಾಡಿ ಪಶು ಸೇವೆಯ ಹೆಸರಿನಲ್ಲಿ “ಜನ ಮನ” ಗೆಲ್ಲುವನೆಂದೂ” ತಿಳಿಸಿದರು. ಅಲ್ಲದೇ ಈತನಿಗೆ “ಉತ್ತಮ ನಾಟಿ ಪಶುವೈದ್ಯ” ಎಂದು ವಿವಿಧ ಸಂಘ ಸಂಸ್ಥೆಗಳು ಸನ್ಮಾನ ಮಾಡಿರುವರೆಂದು ತಿಳಿಸಿದರು.

ಇನ್ನೊಂದು ಪ್ರಕರಣ. ಒಬ್ಬರ ಮನೆಯಲ್ಲಿ ದನ ಕರು ಹಾಕಿ ೮ ದಿನ ಆಯಿತು. ಏನೂ ಹೊಟ್ಟೆಗೆ ತೆಗೆದುಕೊಳ್ಳಲ್ಲ ಎಂದು ಕರೆ ಮಾಡಿದರು. ಇವೆಲ್ಲ ಕಿಟೋಸಿಸ್ ಎಂಬ ಕಾಯಿಲೆಯ ಲಕ್ಷಣಗಳು. ಚಿಕಿತ್ಸೆ ಮಾಡಿದರಾಯಿತು ಎಂದು ಕೊಂಡು ಹೋದೆ. ದನ ಮೂಳೆ ಚಕ್ಕಳವಾಗಿ ಹೋಗಿತ್ತು. ಅದಕ್ಕೆ ಹಸಿ ಹುಲ್ಲೇ ಹಾಕುತ್ತಿಲ್ಲವಂತೆ. ಅದರ ಹೊಟ್ಟೆ “ಹಸಿ” ಇರುವುದರಿಂದ ಹಸಿ ಹುಲ್ಲು ಹಾಕಿದರೆ ನಂಜು ಏರುತ್ತದೆ ಎಂದು ನಾಟಿ ವೈದ್ಯ ಸಲಹೆ ನೀಡಿ ಕಾಳುಮೆಣಸು, ಅತ್ಯಂತ ಖಾರವಿರುವ ಸೂಜಿಮೆಣಸು, ಹಸಿ ಮೆಣಸು, ಶುಂಟಿ, ಕಾಳು ಜೀರಿಗೆ, ಬ್ಯಾಡಗಿ ಮೆಣಸಿನ ಕೆಂಪು ಕಾಯಿ ಎಲ್ಲಾ ಹಾಕಿ ಖಾರದ ಕಷಾಯ ನೀಡಿದ್ದಾನಂತೆ. ಪಾಪ ! ದನದ ಗತಿ ಏನಾಗಬೇಕು?

ಹೊಟ್ಟೆಯೆಲ್ಲಾ “ಖಾರ” ಮಯವಾಗಿ ಸಹಜವಾಗಿಯೇ ಮೇವು ಬಿಟ್ಟಿದೆ. ಯಾವ ಕೀಟೋಸಿಸ್ಸೂ ಇಲ್ಲ. ಈ ನಾಟಿ ವೈದ್ಯರಿಗೆ ಹೊಟ್ಟೆ ಮತ್ತು ಗರ್ಭಕೋಶದ ನಡುವೆ ವ್ಯತ್ಯಾಸವೇ ಗೊತ್ತಿಲ್ಲ. ಪಶುಗಳಿಗೆ ರುಮೆನ್, ರೆಟಿಕ್ಯುಲಮ್, ಒಮಾಸಮ್ ಮತ್ತು ಅಬೋಮಾಸಮ್ ಎಂಬ ನಾಲ್ಕು ಹೊಟ್ಟೆಗಳಿರುತ್ತಿದ್ದು ಸೂಕ್ಷ್ಮಾಣುಗಳ ಸಹಾಯದಿಂದ ದರ ಜೀರ್ಣಕ್ರಿಯೆ ನಡೆಯುತ್ತದೆ. ಗರ್ಭಕೋಶ ಪಶುವಿನ ಹಿಂಬಾಗದ ಗುದದ್ವಾರದ ಅಡಿಗಿರುವ ಜನನಾಂಗ. ಒಂದಕ್ಕೊಂದು ಸಂಬಂಧವೇ ಇಲ್ಲ. ಕರು ಹಾಕಿದ ಸಮಯದಲ್ಲಿ ೧೦-೧೧ ಕಿಲೋ ಇದ್ದು ನಂತರ ೩೦-೩೫ ದಿನಗಳಲ್ಲಿ ಅದು ೦.೫- ೧ ಕೆಲೋ ತೂಗಬಹುದು. ಈ ಕುಗ್ಗುವಿಕೆಯ ಸಮಯದಲ್ಲಿ ಜಾನುವಾರುಗಳ ಮಡಿಲಿನಿಂದ ಸುಮಾರು ಹದಿನೈದು ದಿನಗಳವರೆಗೆ ಬಿಳಿಕೆಂಪು ಮಿಶ್ರಿತ ಲೋಳೆ/ಕೊಳೆ ಹೋಗುವುದು ಸಹಜ. ಇಷ್ಟು ದಿನಗಳ ನಂತರವೂ ಲೋಳೆ ಹೋದರೆ ಅಥವಾ ಲೋಳೆಯು ದುರ್ವಾಸನೆಯಿಂದ ಕೂಡಿದ್ದರೆ ಚಿಕಿತ್ಸೆ ಅಗತ್ಯ. ಬದಲಿಗೆ ಇಂತಹ ಕೊಳೆಯೇ ಹೋಗಬಾರದೆಂದರೆ ಅವುಗಳ ಹೊಟ್ಟೆ ಒಣಗಿಸಬೇಕೆಂದು ಕೆಲವರು ವಿವಿಧ ಬಗೆಯ ಕಷಾಯವನ್ನೋ ಇಲ್ಲವೇ ಪಥ್ಯವನ್ನೋ ಮಾಡಿಸುತ್ತಾರೆ. ಲೋಳೆ ಬರುವುದು ಗರ್ಭಕೋಶದಿಂದಲೇ ಹೊರತು ಹೊಟ್ಟೆಯಿಂದಲ್ಲ. ಹಾಗಾಗಿ ಹೊಟ್ಟೆಯನ್ನು ಒಣಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಯಾರು ಇದರ ಬಗ್ಗೆ ಎಷ್ಟು ಜನರಿಗೆ ಜ್ಞಾನವಿರುತ್ತದೆ? ಕೊನೆಗೆ ಇವರ ರಣ ಚಿಕಿತ್ಸೆಯಿಂದ ಅಸು ನೀಗುವುದು ಬಡಪಾಯಿ ಹಸು ಮತ್ತು ನಷ್ಟವಾಗುವುದು ಗೋಪಾಲಕರಿಗೆ ಅಲ್ಲವೇ?

ಒಮ್ಮೆ ದೂರದೂರಿನಿಂದ ದೂರವಾಣಿ ಕರೆ ಬಂತು. ಆ ಕಡೆಯಿಂದ “ ಡಾಕ್ಟ್ರೇ. ನಮ್ಮನೇಲಿ ದನ ಜಾರಿ ಬಿದ್ದು ಏಳಕ್ಕೆ ಆಗ್ತಿಲ್ಲ. ಚಿಕಿತ್ಸೆ ಮಾಡಬೇಕು, ಬನ್ನಿ” ಎಂದು ಬೇಡಿಕೆ. ಸರಿ. ಹೋಗಿ ನೋಡಿದೆ. ಎಲ್ಲಾ ತಪಾಸಣೆ ಮಾಡಿದಾಗ ಎಲುಬಿನ ಕೊಂಡಿಯ ಬಿರುಕಿರಬೇಕು, ಯಾವುದೇ ರೀತಿಯ ಎಲುಬು ಮುರಿದಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಿತು. ಬಲಗಡೆ ಕಾಲಿಗೆ ತುಂಬಾ ನೋವಿತ್ತು. ನಾನು ಪರೀಕ್ಷೆ ಮಾಡುವುದನ್ನು ದನದ ಮಾಲಕರು ಗಮನಿಸುತ್ತಿದ್ದರು. ಅವರ ಕೈಯನ್ನೂ ಸಹ ಎಲುಬಿನ ಮೇಲೆ ಊರಿಸಿ ಯಾವುದೇ ಮೂಳೆ ಮುರಿತ ಇಲ್ಲ ಎಂಬುದನ್ನು ತೋರಿಸಿದರೂ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇತ್ತು. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಪಶುವೈದ್ಯರ ದುರಾದೃಷ್ಟಕ್ಕೆ ಕ್ಷ ಕಿರಣದ ಉಪಕರಣ ತಂದು ಎಕ್ಸ್ ರೇ ತೆಗೆದು ಮೂಳೆ ಮುರಿತ ಅಥವಾ ಎಲುಬು ಕಳಚಿದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈವತ್ತಿನವರೆಗೂ ಸಹ ಅವು ಜಿಲ್ಲಾ ಮಟ್ಟದ ಆಸ್ಪತ್ರೆ ಅಥವಾ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಸೀಮಿತವಾಗಿವೆ. ಪಶುವೈದ್ಯರು ಅವರ ಅಂಗರಚನಾ ಶಾಸ್ತ್ರದ ಜ್ಞಾನದ ಮೇಲೇಯೇ ಹೇಳಬೇಕು. ಹಿಂಗಾಲಿನ ಮೇಲ್ಬಾಗದ ಮೂಳೆ ಮುರಿತದ ಬಗ್ಗೆ ಕೆಲವೊಮ್ಮೆ ಖಚಿತವಾಗಿ ಹೇಳುವುದು ಬಲಿಷ್ಟವಾದ ಮಾಂಸಖಂಡಗಳು ಸುತ್ತಲೂ ತುಂಬಿರುವುದರಿಂದ ಕಷ್ಟವಾಗುತ್ತದೆ. ನೋವಿಗೆ ಚುಚ್ಚುಮದ್ದು ಕೊಟ್ಟು ಅದರ ಸ್ಥಿತಿಯ ಬಗ್ಗೆ ತಿಳಿಸಿ ಎಂದು ಹೇಳಿ ಬಂದೆ. ಒಂದು ವೇಳೆ ಮೂಳೆಯ ಮುರಿತವಿದ್ದರೂ ಸಹ ವಿಶ್ರಾಂತಿ ನೀಡಿದರೆ ಅದು ನೈಸರ್ಗಿಕವಾಗಿ ೪೫ ದಿನಗಳ ನಂತರ ಅದರಷ್ಟಕ್ಕೆ ಅದೇ ಕೂಡಿಕೊಳ್ಳುತ್ತದೆ ಎಂದು ಹೇಳಿ ಬಂದೆ.

ನಾಟಿ ವೈದ್ಯ.. ಹೇಗೆ ನಾಟೀತು?

ನಂತರ ಕೆಲಸದ ಒತ್ತಡದಲ್ಲಿ ನನಗೆ ಈ ವಿಷಯ ಮರೆತೇ ನಾಲ್ಕೈದು ದಿನ ನನಗೆ ವಿಷಯ ಮರೆತೇ ಹೋಯಿತು. ಐದಾರು ದಿನಗಳ ನಂತರ ಅದೇ ದಾರಿಯಲ್ಲಿ ಹೋಗುವಾಗ “ಹೌದಲ್ಲ. ಇಲ್ಲೊಂದು ದನಕ್ಕೆ ಕಾಲು ಮುರಿದಿತ್ತು. ಏನಾಯ್ತೋ ಏನೋ? ನೋಡೋಣ” ಎಂದು ಅವರ ಮನೆಗೆ ಹೋದೆ. ಅಲ್ಲಿನ ದೃಶ್ಯ ನೋಡಿ ಗರಬಡಿದು ಹೋದೆ. ಆ ದನವನ್ನು ನಾಲ್ಕು ಕಾಲು ಕಟ್ಟಿ ಸಿಮೆಂಟ್ ನೆಲದ ಮೇಲೆ ಕೇಡವಿ ಹಾಕಿದ್ದರು. ಒಬ್ಬ ದಡೂತಿ ಆಸಾಮಿ ದನದ ಹತ್ತಿರ ನಿಂತು ನಿರ್ದೇಶನ ನೀಡುತ್ತಿದ್ದ. ಅವನ ಪ್ರಕಾರ ದನದ ಮೂಳೆ ಅಥವಾ ಸೊಂಟದ “ರೊಂಡಿ” “ಜಾರಿ” ಹೋಗಿದೆಯಂತೆ. ಅದನ್ನು ಆತ ಸ್ವಸ್ಥಾನದಲ್ಲಿ ಕೂಡ್ರಿಸುತ್ತಾನಂತೆ. ನಾನು ಮೂಕ ಪ್ರೇಕ್ಷಕನಾಗಿ ಕುತೂಹಲದಿಂದ ಆತ ಏನುಮಾಡಬಹುದು ಎಂದು ಗಮನಿಸುತ್ತಾ ನಿಂತು ಕೊಂಡೆ. ಆತ ನೊಗದಷ್ಟು ದೊಡ್ಡ ಕಟ್ಟಿಗೆಯ ತುಂಡನ್ನು ಬಲಗಾಲ ಮೇಲೆ ಇಟ್ಟ. ದನದ ಕೆಚ್ಚಲಿನ ಸಂದಿನಲ್ಲಿ ಹಿಂಗಾಲ ಮಧ್ಯೆ ಒಂದು ತೆಂಗಿನ ಕಾಯಿಯನ್ನಿಟ್ಟು ಮರದ ಕಂಬದ ಮೇಲೆ ಇಬ್ಬರು ಬಲಶಾಲಿಗಳು ಒಮ್ಮೆಯೇ ಹತ್ತಿ ಒತ್ತಿ ಎಂದ ಅವರು ಹಾಗೆಯೇ ಮಾಡಿದರು. ದನ ಅತ್ಯಂತ ನೋವಿನಿಂದ “ಅಂಬಾ” ಎಂದು ನರಳಿತು. ತೊಡೆಯ ಮಾಂಸಖಂಡದ ಮಧ್ಯದಿಂದ “ಕಟಕ್” ಎಂಬ ಶಬ್ಧವು ಬಂತು. ಆತ “ ಸರಿಯಾಯ್ತು…ಸರಿಯಾಯ್ತು” ಎಂದು ಕಿರುಚಾಡಿದ. ನನಗೋ ಹೃದಯವೇ ಬಾಯಿಗೆ ಬಂದ ಹಾಗಾಯ್ತು.

ನಂತರ ಆತ ಕೊಡದಂತ ಪಾತ್ರೆಯನ್ನು ಬಿಸಿ ನೀರು ತುಂಬಿಸಿ ಅದರ ಮೇಲೆ ಇಟ್ಟು ಪರೀಕ್ಷೆ ಮಾಡಿ “ಎಲ್ಲವೂ ಸರಿಯಾಗಿದೆ” ಎಂದು ಸರ್ಟಿಫಿಕೇಟ್ ನೀಡಿ ಅವನ “ಸಂಭಾವನೆ” ತನ್ನ ತಜ್ಞರ ಪಡೆಯೊಂದಿಗೆ ಪಡೆದು ಹೊರಟೇಹೋದ. ನಾನು ಕುತೂಹಲಕ್ಕೆ ದನದ ಕಾಲನ್ನು ಪರೀಕ್ಷಿಸಿದೆ. ದುರಂತವೇ ನಡೆದಿತ್ತು.. ಬಲಗಡೆಯ ಕಾಲಿನ ಫ಼್ಯೂಮರ್ ತಲೆ ಮತ್ತು ಅದು ಕೂರಬೇಕಾದ ಅಸಿಟಾಬುಲಮ್ ಹೊಂಡದ ಹತ್ತಿರ ಮುರಿದು ಕಾಲು ಯಾವ ದಿಕ್ಕಿನಲ್ಲಿ ಬೇಕಾದರೂ ತಿರುಗುತ್ತಿತ್ತು. ಮಾಲಕರನ್ನು ಕರೆದು ಆದ ಅನಾಹುತವನ್ನು ತೋರಿಸಿದೆ. ಅವರು ನಂಬಲೂ ಸಿದ್ಧರಿರಲೇ ಇಲ್ಲ. ಬದಲಾಗಿ ನನ್ನದೇ ತಪ್ಪು ಗ್ರಹಿಕೆ ಎಂದರು. ಕೊನೆಗೆ ಆ ಆಕಳು ಏಳಲು ಸಾಧ್ಯವಾಗದೇ ಹುಳವಾಗಿ ದಯಾಮರಣ ಕೊಡಿಸುವ ಗ್ರಹಚಾರ ಬಂತು. ಅಂತೂ “ರಣವೈದ್ಯ”ದಿಂದ ಸರಳವಾಗಿ ಗುಣವಾಗಬಹುದಾದ ಆಕಳಿನ ಕಾಲು ಮುರಿದು ಅದು ಶಿವನ ಪಾದ ಸೇರುವ ಹಾಗಾಯ್ತು.

ನಾಟಿ ವೈದ್ಯ.. ಹೇಗೆ ನಾಟೀತು?

ನನ್ನ ಅಮ್ಮನಿಗೆ ವಯೋಸಹಜವಾದ ಬೆನ್ನು ನೋವು ಬಂದಿತು. ವೈದ್ಯರ ಹತ್ತಿರ ತೋರಿಸಿದಾಗ ಬೆನ್ನು ಮೂಳೆ ಸವೆದಿದೆಯೆಂದೂ “ಡಿಸ್ಕುಗಳು ಜಾಮ್” ಆಗಿದೆಯೆಂದೂ ಜಾಸ್ತಿ ಕೆಲಸ ಮಾಡಬಾರದೆಂದೂ ತಿಳಿಸಿದ್ದರು. ಆದರೂ ನಮ್ಮ ಅಮ್ಮನಿಗೆ ಯಾರೋ ಯಂಟಗಾನಹಳ್ಳಿ ಎಂಬಲ್ಲಿ ಅತ್ಯುತ್ತಮ ನಾಟಿ ಔಷಧಿ ಮಾಡುವವರು ಇದ್ದಾರೆಂದೂ ಹಾಗೂ ಅವರು ಮರದಿಂದ ಬಿದ್ದು ಮೂಳೆ ಪುಡಿ ಪುಡಿ ಆದವರನ್ನು “ಒಳ”ರೋಗಿಯಾಗಿ ಸೇರಿಸಿಕೊಂಡು ಸರಿಪಡಿಸಿರುವುರೆಂದೂ, ಅವರ ಚಿಕಿತ್ಸೆ ಅತ್ಯದ್ಭುತವೆಂದೂ ತಿಳಿದ ಮೇಲೆ ಅಲ್ಲಿಗೇ ಹೋಗಲೇ ಬೇಕೆಂದು ನಿರ್ಧಾರವಾಯ್ತು. ಮಂಗಳವಾರ ಔಷಧಿ ಪಡೆಯಲು ಶುಭ ದಿನ ಎಂದು ತಿಳಿದು ಬೆಂಗಳೂರಿನಿಂದ ಬೆಳಿಗ್ಗೆಯೇ ಕಾರಿನಲ್ಲಿ ಅಮ್ಮನನ್ನು ಕರೆದುಕೊಂಡು ಹೊರಟೆ. ಇನ್ನೇನು ಯಂಟಗಾನಹಳ್ಳಿ ಹತ್ತಿರ ಬಂತು ಅನ್ನುವಷ್ಟರಲ್ಲಿ ಅನೇಕ ನಾಟಿ ವೈದ್ಯ ಚಿಕಿತ್ಸಾಲಯಗಳು ದಾರಿಯುದ್ದಕ್ಕೆಲ್ಲಾ ಕಂಡು ಬಂದವು. ಕೆಲವರಂತೂ ನಮ್ಮನ್ನು ಅಟಕಾಯಿಸಿಕೊಂಡು ಕಾರಲ್ಲಿ ಇಣುಕಿ “ರೋಗಿ” ಗಾಗಿ ಹುಡುಕಲಾರಂಭಿಸಿದರು.

ಹಾಗಿದ್ದರೆ “ಒರಿಜಿನಲ್” ವೈದ್ಯರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವುದೇ ದೊಡ್ಡ ಸಾಹಸವಾಯಿತು. ಅಂತೂ ಇಂತೂ ಅವರಿವರನ್ನು ಕೇಳಿಕೊಂಡು ಮುಂದೆ ಸಾಗುವಷ್ಟರಲ್ಲಿ ಒಂದು ಮನೆಯ ಮುಂದೆ ಜನಸಮೂಹವೇ ನೆರೆದಿತ್ತು. ಸರಿಯಾದ ಅಡ್ರೆಸ್ಸಿಗೆ ಬಂದೆವೆಂದು ತಿಳಿದು ಹೆಸರು ಬರೆಸಿ ಕಾಯುತ್ತಾ ಕುಳಿತೆವು. ಅಲ್ಲಿ “ಒಳರೋಗಿ”ಗಳಾಗಿ ಅನೇಕರು ಅಡ್ಮಿಟ್ ಆಗಿದ್ದರು. ಇನ್ನು ಕೆಲವರು ವಾಕಿಂಗ್ ಸ್ಟಿಕ್ ತರದ್ದನ್ನು ಹಿಡಿದು ನಡೆಯಲು ಪ್ರಯತ್ನಿಸುತ್ತಿದ್ದರು. ಸುತ್ತಲೂ ಘಂ ಎಂದು (ಸು)ವಾಸನೆ ಬರುವ ತೈಲದ ಗಮಲು. ಅಲ್ಲಿರುವವರೆಲ್ಲಾ ಬಹುತೇಕ ಕೆಳಮಧ್ಯಮ ವರ್ಗದವರೆಂದು ಗೊತ್ತಾಗುತ್ತಿತ್ತು.

ಬೆಳಿಗ್ಗೆ ೯ ಘಂಟೆಗೆ ಹೆಸರು ಬರೆಸಿದ ನಮ್ಮ ಪಾಳಿ ಮಧ್ಯಾಹ್ನ ೧ ಘಂಟೆಗೆ ಬಂತು. ವೈದ್ಯ ಮಹಾಶಯ ನಮ್ಮಮ್ಮನ್ನು ಪರೀಕ್ಷಿಸಿದ. ನಾನು ತೆಗೆದುಕೊಂಡು ಹೋಗಿದ್ದ ಎಕ್ಸ್ ರೇ ನೋಡಿದ. ಅದನ್ನು ಯಾವ ದಿಕ್ಕಿನಲ್ಲಿ ಹಿಡಿದನೋ ಗೊತ್ತಾಗಲಿಲ್ಲ. ನರ ಉಳುಕಿದೆಯೆಂದೂ ಅದಕ್ಕೆ ವಿಶೇಷ ಚಿಕಿತ್ಸೆ ಬೇಕೆಂದೂ ಅದಕ್ಕೆ ೧ ರೂ ನಾಣ್ಯ ಬೇಕೆಂದೂ ಹೇಳಿದ. ನನ್ನ ಹತ್ತಿರ ಇರುವ ನಾಣ್ಯ ನೀಡಿದೆ. ಆತ ನಮ್ಮ ಅಮ್ಮನನ್ನು ಬೋರಲು ಮಲಗುವಂತೆ ಹೇಳಿ, ನಾಣ್ಯವನ್ನು ಬೆನ್ನಮೂಳೆಯ ಮೇಲೆ ಇರಿಸಿದ. ನಂತರ ಇದ್ದಕ್ಕಿದ್ದಂತೆ ಬೆನ್ನಮೂಳೆಯ ಮೇಲೆ ಹತ್ತಿ ನಿಂತು ಬಿಟ್ಟ. ನಾನು “ಹೋಯಿತು, ಕಥೆ ಮುಗಿಯಿತು” ಎನ್ನುವಷ್ಟರಲ್ಲಿ ಎಲ್ಲ “ಸರಿಯಾಯಿತು. ಕರೆದುಕೊಂಡು ಹೋಗಿ ಎನ್ನುತ್ತಾ ಒಂದು ಬಾಟ್ಲಿ ತುಂಬಾ ತೈಲ ನೀಡಿ ಇದನ್ನು ಚೆನ್ನಾಗಿ ಹಾಕಿ ಉಜ್ಜಿ ಎಂದ. ಬದುಕಿದೆ ಎಂದುಕೊಂಡು ಹೊರಬಂದೆ. ಅಮ್ಮನಿಗೆ ಕಡಿಮೆಯಾಯಿತೇ ಎಂದರೆ ಮತ್ತೊಂದು ಉಪಕಥೆ ಹುಟ್ಟಿಕೊಳ್ಳುತ್ತೆ. “ಚೆನ್ನಾಗಿ ತಿಕ್ಕಿ” ಎಂಬ ಶಬ್ಧ ಕೇಳಿಸಿಕೊಂಡ ನಮ್ಮಮ್ಮ ಚೆನ್ನಾಗಿ ತಿಕ್ಕಿದ್ದೂ ತಿಕ್ಕಿದ್ದೆ. ಇನ್ನೂ ನೋವು ಜಾಸ್ತಿಯಾಗಿ ಎದ್ದೇಳಲು ಆಗದ ಹಾಗಾಯ್ತು. ನಂತರ ಮೂಳೆ ತಜ್ಞರು ಈ ರೀತಿ ಉಜ್ಜುವುದು ವರ್ಜ್ಯವೆಂದೂ ಅದರಿಂದ ಸವೆದ ಮೂಳೆಗಳು ಮುರಿಯುವ ಸಾಧ್ಯತೆ ಇದೆಯೆಂದೂ ಹೇಳಿದ್ದರಿಂದ ತೈಲವನ್ನು ಮೂಲೆಗೆಸೆದಿದ್ದು.

ಈ ಮೂಳೆ ಮುರಿದಾಗ ಅದರ ಕೂಡುವಿಕೆ ಒಂದು ಸಹಜ ಕ್ರಿಯೆ. ಏನೇ ಮಾಡಿದರೂ ಅದಕ್ಕೆ ಕೂಡಿಕೊಳ್ಳಲು ಮೂರು ವಾರಗಳು ಬೇಕೇ ಬೇಕು. ಈ ಅವಧಿಯಲ್ಲಿ ಅದನ್ನು ನಿಶ್ಚಲತೆ (ಇಮ್ಮೊಬಿಲೈಜೇಶನ್) ಗೊಳಿಸಬೇಕು. ಇದಕ್ಕೆ ಯಾವುದೇ ಔಷಧಿ ಬೇಡ. ಮೂರು ವಾರಗಳ ನಂತರ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುತ್ತದೆ.ಸರಿಯಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿದಲ್ಲಿ ಸರಿಯಾಗಿ ಕೂಡಿಕೊಳ್ಳುತ್ತದೆ. ಯುವಕರಲ್ಲಿ ಬೇಗ ಕೂಡಿಕೊಳ್ಳುತ್ತದೆ. ವಯಸ್ಕರಲ್ಲಿ ಸ್ವಲ್ಪ ನಿಧಾನ. ಅದಕ್ಕೆ ಯಂಟಗಾನಹಳ್ಳಿಯ ಔಷಧಿ ಬೇಕೇಂದೇನೂ ಇಲ್ಲ. ಜನ ಮಳ್ಳೋ.. ಜಾತ್ರೆ ಮಳ್ಳೋ..?

ನಾನೊಮ್ಮೆ ಸಾಗರದ ನಮ್ಮ ಸ್ನೇಹಿತರ ಮನೆಗೆ ಹೋಗಿದ್ದೆ. ಬೆಳಿಗ್ಗೆ ೬ ಘಂಟೆಗೆ ದೇವರ ಪೂಜೆಗೆ ನನ್ನ ಸ್ನೇಹಿತನ ತಾಯಿ ಹೋಗಿದ್ದಾರೆ. ಏನೋ ಕಡಿದ ಹಾಆಗೆ ಆಗಿದೆ. ಆಗ ಹೂಗಿಡದ ಮೇಲೆ ಹಾವೊಂದು ಕಾಣಿಸಿದೆ. ಹಾವು ಕಚ್ಚಿತೆಂದು ಮನೆಯಲ್ಲಾ ರಂಪ. ಡಾಕ್ಟರುಗಳ ಹತ್ತಿರ ಒಯ್ಯೋಣ ಎಂದು ಜೀಪು ಸಿದ್ಧ ಮಾಡಿದೆ. ಆದರೆ ಆವರು ಸಮೀಪದ ಹಳ್ಳಿಯಲ್ಲಿ ನಾಟಿ ವೈದ್ಯರೊಬ್ಬರಿದ್ದಾರೆ. ಅವರೆಂಥ ಪ್ರಚಂಡೆರೆಂದರೆ ಅವರ ಹತ್ತಿರ ಹಾವು ಕಚ್ಚಿಸಿಕೊಂಡವರನ್ನು ಕರೆದುಕೊಂಡು ಹೋಗುವುದೇ ಬೇಡವಂತೆ. ಫೋನಿನಲ್ಲಿಯೇ ಮಂತ್ರ ಹೇಳಿದರೆ ಸಾಕಂತೆ.

ಮೈಗೇರಿದ ನಂಜೆಲ್ಲಾ ಇಳಿದು ಬಿಡುವುದಂತೆ. ಜಾಸ್ತಿ ಸಿರಿಯಸ್ ಅನಿಸಿದರೆ ಕರೆದುಕೊಂಡು ಬರಲು ತಿಳಿಸುತ್ತಾರಂತೆ. ನಮ್ಮ ಕೇಸಿನಲ್ಲಿ ಕರೆದುಕೊಂಡು ಬರಬೇಕೆಂದರು. ಹೋಗುವುದೊರೊಳಗೆ “ಮಂತ್ರಿಸಿದ ನೀರ”ನ್ನು ಸಿದ್ಧ ಪಡಿಸಿ ಇಟ್ಟುಕೊಂಡಿದ್ದರು. ಅದನ್ನು ಕುಡಿಸಿ ನಿಮ್ಮ ವಿಷವೆಲ್ಲಾ ಹೋಯ್ತು ಎಂದ ಕೂಡಲೇ ನಮ್ಮ ಪೇಶಂಟು ಗುಣವಾದರು. ಹಾವಿನ ವಿಷದ ಬಗ್ಗೆ ಗೊತ್ತಿರುವ ನನಗೆ ಏನೂ ವಿಶೇಷ ಅನಿಸಲಿಲ್ಲ. ಏಕೆಂದರೆ ಶೇ ೮೦ ರಷ್ಟು ಹಾವುಗಳು ವಿಷ ಹೊಂದಿಲ್ಲ. ಹಾವು ಕಚ್ಚಿದ ಬಹುತೇಕ ಜನ ಹಾವಿನ ಭಯದಿಂದ (ಸ್ನೇಕ್ ಫೋಬಿಯಾ) ದಿಂದ ಹ್ರದಯ ಸ್ಥಂಭನವಾಗಿ ಮರಣಹೊಂದುತ್ತಾರೆ. ಹಾವು ಕಡಿಸಿಕೊಂಡವರಿಗೆ ಗಾಬರಿಯಾಗದಂತೆ ಧೈರ್ಯ ಹೇಳಿ ಪ್ರಥಮ ಚಿಕಿತ್ಸೆ ಮಾಡಿದರೆ ಸಾಕು. ವಿಷದ ಹಾವಲ್ಲದಿದ್ದರೆ ಏನೂ ಆಗಲ್ಲ. ಆದರೆ ನಾಗರ ಹಾವು ಕಡಿಸಿಕೊಂಡವರ ಜೀವ ಕೆಲವು ನಿಮಿಷಗಳಲ್ಲಿಯೇ ಹೋಗುವುದಲ್ಲ. ಇದಕ್ಕೇನು ಮಾಡುತ್ತಾರೋ?. ಮಂತ್ರಕ್ಕೆ ಮಾವಿನ ಕಾಯಿ ಉದುರುವುದೇ? ಖಂಡಿತಾ ಇಲ್ಲ. ಆದರೂ ಉದುರಿಸುವವರು ಇದ್ದಾರೆ.

ಇದನ್ನೂ ಓದಿ : ಕಾಯಕ ಸಿದ್ಧಾಂತದ ಮೂಲಕ “ಸ್ವರ್ಗ” ಕಂಡಿದ್ದವರ ಬದುಕಲ್ಲಿ – ದೇವರನ್ನು ತೋರಿಸುತ್ತೇನೆಂದು ನಂಬಿಸಿ “ನರಕ” ತೋರಿಸಿದವರು ಯಾರು?

ಪುನ: ಪಶುಗಳ ವಿಚಾರಕ್ಕೆ ಬರೋಣ. ಒಂದೂರಿನ ಒಂದು ಮನೆಯ ಎಲ್ಲಾ ಎಮ್ಮೆಗಳಲ್ಲಿ ಬಾಲವೆಲ್ಲಾ ಮೋಟಾಗಿ ಉದುರಿ ಹೋಗುತ್ತಾ ಇತ್ತು, ಕೆಲ ಎಮ್ಮೆಗಳಲ್ಲಿ ಕಿವಿಯೂ ಒಣಗಿ ಅಡಿಕೆ ಹಾಳೆಯಂತಾಗಿತ್ತು. ನಾನು ಈ ರೀತಿಯ ಕಾಯಿಲೆಗಳ ಬಗ್ಗೆ ಆಗಲೇ ಅಧ್ಯಯನ ನಡೆಸಿದ್ದರಿಂದ ಇದರ ಕಾರಣ ಗೊತ್ತಾಗಿತ್ತು. ಅವರ ಮನೆಯಲ್ಲಿರುವ ಭತ್ತದ ಒಣ ಹುಲ್ಲು ಮಳೆಯ ನೀರಿನಲ್ಲಿ ನೆನೆದು ಮುಗ್ಗಲು ಬಂದು ಬೂಸ್ಟು ಹಿಡಿದಿರುವುದರಿಂದ ಮತ್ತು ಅನೇಕ ದಿನಗಳಿಂದ ಇದನ್ನೇ ಎಲ್ಲಾ ಎಮ್ಮೆಗಳಿಗೆ ತಿನ್ನಿಸಿದ್ದರಿಂದ ಶಿಲೀಂದ್ರ ವಿಷದಿಂದ ಈ ರೀತಿ ಆಗಿದೆಯೆಂದು ಅದಕ್ಕೆ ತಕ್ಕ ಸತು ಮತ್ತು ಗಂಧಕ ಹೊಂದಿದ ಖನಿಜ ಮಿಶ್ರಣ ಮತ್ತು ಲೇಪನ ಔಷಧಿ ಹೇಳಿ ಇದನ್ನು ೧೫ ದಿನ ನೀಡಬೇಕೆಂದು ಹೇಳಿ ಬಂದೆ.

ಈ ಕಾಯಿಲೆಯ ಫೋಟೊ ನನಗೆ ಬೇಕಿತ್ತು. ಆದರೆ ಆ ದಿನ ಕ್ಯಾಮರಾ ತರದೇ ಇದ್ದುದರಿಂದ ಇನ್ನೊಂದು ದಿನ ಅವರ ಮನೆಗೆ ಹೋದಾಗ ಎಲ್ಲಾ ಎಮ್ಮೆಗಳ ಬಾಲ ಇನ್ನೂ ಮೋಟಾಗಿ ರಕ್ತ ಬಸಿಯುತ್ತಿತ್ತು. ಕೆಲವಕ್ಕೆ ಹುಳಗಳಾಗಿ ಪುತು ಪುತು ಉದುರುತ್ತಿದ್ದವು. ಏನಾಯಿತು ಎಂದಾಗ ಬಿಚ್ಚಿಟ್ಟರು ಕಥೆ. ಪಕ್ಕದ ಊರಿನ ಪ್ರಸಿದ್ಧ ನಾಟಿ ವೈದ್ಯ ಬಂದು ನೋಡಿ ಇದೆಲ್ಲಾ “ಬಾಲ ಹುಳ” ಹಿಡಿಯುವ ಕಾಯಿಲೆಯೆಂದು “ಡಯಾಗ್ನೋಸ್” ಮಾಡಿ ಎಲ್ಲಾ ಎಮ್ಮೆಗಳ ಬಾಲವನ್ನು ಒಂದು ಮರದ ಬೊಡ್ಡೆಯ ಮೇಲಿರಿಸಿ ಕಚಕ್ ಕಚಕ್ ಎಂದು ಕಡಿದು ಕುದಿಯುವ ಎಣ್ಣೆಯಲ್ಲಿ ಆ ಬಾಲದ ತುದಿಯನ್ನು ಅದ್ದಿದನಂತೆ. ಸುಲಭವಾಗಿ ಕಡಿಮೆಯಾಗಬಲ್ಲ ಕಾಯಿಲೆಗೆ ಔಷಧಿಯನ್ನು ನೀಡಲು ಮಾಲೀಕನ ಸೋಮಾರಿತನದಿಂದ “ರಣವೈದ್ಯ”ಕ್ಕೆ ಸುಖಾಸುಮ್ಮನೆ ಎಮ್ಮೆಗಳು ನೋವು ಅನುಭವಿಸದವು. ಇದರಲ್ಲಿ ಪಶುಗಳು ನೋವು ಅನುಭವಿಸಿದರೂ ಸತ್ತು ಹೋಗಿಲ್ಲವಲ್ಲ ಎಂದು ಸಮಾದಾನ ಪಟ್ಟುಕೊಂಡು ಬಂದೆ.

ಅವರು ವಿದ್ಯಾವಂತರು. ಒಳ್ಳೆಯ ಮೂರು ಮಿಶ್ರ ತಳಿ ಜಾನುವಾರುಗಳನ್ನು ಸಾಕಿದ್ದರು. ಒಂದು ಜಾನುವಾರು ಮೇವು ಬಿಟ್ಟಿತು. ನಾನು ಹೋಗಿ ಪರೀಕ್ಷೆ ಮಾಡಿದೆ. ತುಂಬಾ ಜ್ವರ ಇತ್ತು. ಮೈಮೇಲೆಲ್ಲಾ ಉಣ್ಣೆಗಳಿದ್ದವು. ಉಣ್ಣೆಯಿಂದ ಪೀಡೆಯಾದ ಥೈಲೇರಿಯಾ ಕಾಯಿಲೆಯಾಗಿದ್ದರಿಂದ ಅದಕ್ಕೆ ಒಳ್ಳೆಯ ಔಷಧಿ ದುಬಾರಿಯಾಗಿದ್ದು ಅದನ್ನು ಔಷಧದ ಅಂಗಡಿಯಿಂದ ತರಬೇಕೆಂದು ಹೇಳಿ ಪರ್ಯಾಯ ಚಿಕಿತ್ಸೆ ಮಾಡಿ ಚೀಟಿ ಕೊಟ್ಟು ಬಂದೆ. ಮರು ದಿನ ದೂರವಾಣಿ ಕರೆ ಮಾಡಿದಾಗ ಜಾನುವಾರು ಸುಧಾರಿಸಿದೆಯೆಂದೂ, ಹಣಕಾಸಿನ ಸಮಸ್ಯೆಯಿರುವುದರಿಂದ ಇನ್ನೆರಡು ದಿನಕ್ಕೆ ಔಷಧಿ ತರುವುನೆಂದೂ ಹೇಳಿದರು. ಇದಾದ ಎರಡು ದಿನಕ್ಕೆ ಔಷಧಿ ತಂದಿರುವುದಾಗಿಯೂ ಮತ್ತು ಚಿಕಿತ್ಸೆಗೆ ಬರಬೇಕೆಂದು ಕರೆ ಬಂತು. ಹೋದರೆ ದನ ನೆಲ ಹಿಡಿದು ಬಿಟ್ಟಿದೆ!. ಬಾಯಿಯಿಂದ ಜೊಲ್ಲಿನ ಧಾರೆಯೇ ಸುರಿಯುತ್ತಿದೆ. ಮುಖವೂ ಬಾತಂತಿದೆ. ನಾನು ದನದ ಬಾಯಿ ತೆಗೆಸಿ ನೋಡಿದರೆ ದಂಗಾಗಿ ಬಿಟ್ಟೆ. ದನದ ಬಾಯಿಯ ತುಂಬಾ ಸುಟ್ಟ ಗಾಯದಂತಿರುವ ಆಳವಾದ ಅಲ್ಸರುಗಳು ಇದ್ದವು. ನಾಲಿಗೆಯಂತು ಕೈಯಲ್ಲೇ ಕಿತ್ತು ಬರುವ ಹಾಗಿತ್ತು. ದನ ನೋವಿನಿಂದ ಒರಲುತ್ತಿತ್ತು. “ಏನಾಯಿತು ದನಕ್ಕೆ. ಏನಾದ್ರೂ ನಾಟಿ ಚಿಕಿತ್ಸೆ ಮಾಡಿಸಿದ್ರಾ? ಎಂದು ಕೇಳಿದೆ. ಅಯ್ಯೋ ಡಾಕ್ಟ್ರೇ.. ಏನು ಹೇಳ್ಲಿ. ತಪ್ಪು ಕೆಲಸ ಮಾಡಿ ಬಿಟ್ಟೆ” ಎಂದು ಹೇಳಿ ಆದ ಪ್ರವರ ಹೇಳಿದರು.

ನಾಟಿ ವೈದ್ಯ.. ಹೇಗೆ ನಾಟೀತು?

ಅವರ ಸ್ನೇಹಿತರು ಒಳ್ಳೆ ನಾಟಿ ವೈದ್ಯನೊಬ್ಬನಿದ್ದಾನೆಂದೂ ಅವನು ಚಿಕಿತ್ಸೆ ಮಾಡಿದರೆ ಎರಡೇ ದಿನಗಳಲ್ಲಿ ದನ ಮೇವು ತಿನ್ನುವುದೆಂದೂ ತಿಳಿಸಿದರಂತೆ. ಆತ ಬಂದು ದನಕ್ಕೆ “ಕಪ್ಪೆ” ಕಾಯಿಲೆಯಾಗಿದೆಯೆಂದೂ, ನಾಲಿಗೆ ದಪ್ಪವಾಗಿ ನುಂಗಲು ಸಾಧ್ಯವಾಗುತ್ತಿಲ್ಲವೆಂದೂ ಅದನ್ನು ಸುಟ್ಟು ತೆಗೆದರೆ ಬೇಗ ಹುಶಾರಾಗುತ್ತದೆಂದೂ ತಿಳಿಸಿದನಂತೆ. ಆತ ಬಿಸಿಯಾದ ಕಬ್ಬೀಣದ ರಾಡುಗಳನ್ನು ಬಳಸಿ ನಾಲಿಗೆಯ ಮೇಲಿರುವ ಬುಗುಟೆಯಂತ ವಸ್ತುಗಳನ್ನು ಸುಟ್ಟು ಬಿಟ್ಟನಂತೆ. ಹೀಗೆ ಸುಡುವಾಗ ಸ್ವಾಭಾವಿಕವಾಗಿ ದನ ಕೊಸರಾಡಿದೆ.ಕೆಂಪಾದ ಕಬ್ಬಿಣದ ರಾಡು ಎಲ್ಲೆ ಬೇಕೆಂದಲ್ಲಿ ತಾಗಿದ್ದರಿಂದ ಬಾಯಲ್ಲಿರುವ ವಿವಿಧ ಭಾಗಗಳೆಲ್ಲಾ ಸುಟ್ಟು ಹೋಗಿದ್ದು ದನ ಅತ್ಯಂತ ನೋವಿನಿಂದ ಬಳಲಿದೆ. ಒಂದೆರಡು ಗಿಡಮೂಲಿಕೆಗಳನ್ನು ನೀಡಿ ಆತ ಜಾಗ ಖಾಲಿ ಮಾಡಿದ್ದಾನೆ. ಇದು ಅನೇಕ ರೈತರು ಜಾನುವಾರುಗಳಿಗೆ ಮಾಡುವ ಅನ್ಯಾಯ.

ಸಾಮಾನ್ಯವಾಗಿ ಜಾನುವಾರಿಗೆ ಯಾವುದೇ ಕಾಯಿಲೆ ಬಂದರೂ ಮೊದಲಿಗೆ ಅದು ಮೇವು ಬಿಡುತ್ತದೆ. ಮೇವು ಬಿಟ್ಟಾಗ ಅದಕ್ಕೆ ಕಾರಣವಾದ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ನೆನಪಿಡಿ, ಜೀವಮಾನದಲ್ಲಿಯೇ ದನದ ಬಾಯಿ ತೆಗೆಸಿ ನೋಡದ ಜನ ಈ ಸಂದರ್ಭದಲ್ಲಿ ಬಾಯಿ ತೆಗೆಸಿ ನೊಡುತ್ತಾರೆ. ಮೊದಲ ಬಾರಿ ದನದ ನಾಲಿಗೆ ನೋಡಿದಾಗ ನಾಲಿಗೆಯ ಹಿಂಬಾಗದಲ್ಲಿ ಉಬ್ಬಿದ ಆಕೃತಿ ಕಾಣ ಸಿಗುತ್ತದೆ. ಇದು ಅಹಾರವನ್ನು ಅನ್ನನಾಳದೊಳಗೆ ದಬ್ಬಲು ಇರುವ ಸಹಜ ಸಾಧನ. ಜನ ಯಾರದೋ ಮಾತು ಕೇಳಿ ಅದಕ್ಕೆ “ಕಪ್ಪೆ” ಎಂದುಕೊಂಡು ಇದು ಅಹಾರ ನುಂಗಲು ತೊಂದರೆ ಮಾಡುತ್ತಿದೆ ಎಂದು ಅದನ್ನು ಸುಟ್ಟು ತೆಗೆದು ಬಿಟ್ಟರೆ ದನ ಹುಶಾರಾಗಿಬಿಡುತ್ತದೆ ಎಂದುಕೊಂಡು ಬಿಡುತ್ತಾರೆ. ನಾಟಿವೈದ್ಯರು ನೆಗ್ಗಿಲಮುಳ್ಳಿನಲ್ಲಿ ಇದನ್ನು ಕೊರೆದು ಹಾಕುವುದು, ಬರೆ ಹಾಕುವುದು ಇತ್ಯಾದಿ ರಣವೈದ್ಯ ಮಾಡಿ ದನದ ಪರಿಸ್ಥಿತಿಯನ್ನು ಚಿಂತಾಜನಕ ಮಾಡಿಬಿಡುತ್ತಾರೆ. ಇದು ಪ್ರಾಣಿಹಿಂಸೆಯೂ ಹೌದು, ಗೋಹಿಂಸೆಯೂ ಹೌದು. ಇದು ನಮಗೆ ಬೇಕೇ?

ಒಂದು ದನಕ್ಕೆ ಮುಳ ಬಿಟ್ಟಿದೆ ಬನ್ನಿ ಚಿಕಿತ್ಸೆ ಮಾಡಿ ಎಂದು ಕರೆದರು. ಈ ಮುಳಬಿಡುವುದೆಂದರೇನು ಎಂಬುದನ್ನು ಹೇಳಿಬಿಡುವೆ. ಹಾಗಿದ್ದಲ್ಲಿ ಮಾತ್ರ ನಾನು ಮುಂದೆ ಹೇಳುವುದು ಅರ್ಥವಾದೀತು. ಸಾಮಾನ್ಯವಾಗಿ ಕೆಲವೊಮ್ಮೆ ಎತ್ತುಗಳು, ಎಮ್ಮೆಗಳು, ಆಕಳುಗಳು ಮುಂದಿನ ಕಾಲನ್ನು ಕುಂಟುತ್ತವೆ. ಕಾಲಿನ ಮೇಲೆ ಭಾರ ಬಿಡದೇ ಇರುವುದರಿಂದ ಪಕ್ಕೆಲುಬಿನ ಮೇಲೆ ಒಂದು ಗುಣಿ ಬಿದ್ದ ಹಾಗೇ ಕಾಣುತ್ತದೆ. ಇದಕ್ಕೆ ಸ್ಕ್ಯಾಪ್ಯುಲಾ ಎಂಬ ಎಲುಬಿನ ಮೇಲಿನ ಮಾಂಸಖಂಡದ ಗಾತ್ರ ಚಿಕ್ಕದಾಗುವುದು ಅಥವಾ ಅದರ ಮೇಲೆ ಹಾದು ಹೋಗುವ ಒಂದು ನರದ ತೊಂದರೆಯಾಗಿರುತ್ತದೆ. ಇದಕ್ಕೆ ನಿಖರ ಕಾರಣ ಗೊತ್ತಿಲ್ಲದಿದ್ದರೂ ಅನೇಕ ಪ್ರಕರಣಗಳು ಶಿಲೀಂದ್ರ ಪೀಡಿತ ಹುಲ್ಲನ್ನು ತಿಂದಾಗ ಆಗುತ್ತವೆ. ಇದಕ್ಕೆ ಚಿಕಿತ್ಸೆ ಇದ್ದರೂ ಸಹ ಸಮಯ ಬೇಕು. ನೋಡುತ್ತೇನೆ.. ಎಲುಬಿನ ಮೇಲ್ಬಾಗದಲ್ಲಿ ಅಂಗೈಗಲದ ಚರ್ಮ ಸುಟ್ಟು ಹೋಗಿ ಮಾಂಸಖಂಡಗಳು ಕೆಂಪಗೇ ಕಂಡು ಬರುತ್ತಿದ್ದವು. ನಾಟಿವೈದ್ಯನೊಬ್ಬ ಈ ಮಾಂಸಖಂಡಗಳೆಲ್ಲಾ ಕೊಳೆತಿವೆ. ಸುಟ್ಟು ಹೊಸ ಮಾಂಸ ಬಂದರೆ ಸರಿಯಾಗುತ್ತದೆ ಎಂದು ಹೇಳಿ ಕೆಂಪಗೇ ಕಾಸಿದ ಕಬ್ಬಿಣದ ಪಟ್ಟಿಯನ್ನು ಆ ಜಾಗದ ಮೇಲೆ ಇಟ್ಟಿದ್ದಾನಂತೆ. ಆಗ ಮಾಂಸ ಸಮೇತ ಚರ್ಮವು ಸುಟ್ಟು ಕರಕಲಾಗಿ ಅಂಟಿಕೊಂಡು ಬಂದಿದೆ. ನಾಟಿ ವೈದ್ಯ ಕಾಲು ಕಿತ್ತಿದ್ದಾನೆ.

ನಾಟಿ ವೈದ್ಯ.. ಹೇಗೆ ನಾಟೀತು?

ಹೌದು !!. ಇಂತಹ ಸಹಸ್ರಾರು ನಾಟಿವೈದ್ಯರ ಪ್ರಕರಣ ನನ್ನ ಮುಂದಿದೆ. ಹೇಳುತ್ತಾ ಹೋದರೆ ಇದು ಮುಗಿಯದ ಕಥೆ. ಇದು ನನಗೆ ಅನುಭವವಾಗಿರುವುದು. ಇದಲ್ಲದೇ ನಮ್ಮ ಗಮನಕ್ಕೆ ಬರದೇ ಜಾನುವಾರುಗಳು ಮೂಕ ವೇದನೆ ಎಷ್ಟು ಅನುಭವಿಸುತ್ತವೆಯೋ? ನನ್ನಂತೆ ಸಹಸ್ರಾರು ಪಶುವೈದ್ಯರಿಗೂ ಇದೇ ರೀತಿಯ ಅನುಭವವಾಗಿರುತ್ತದೆ. ಇತ್ತೀಚೆಗಂತೂ ಇದರ ಹಾವಳಿ ಮಿತಿ ಮೀರಿದೆ ಎನ್ನುತ್ತಾರೆ ಪಶುವೈದ್ಯರು. ನಾಟಿವೈದ್ಯರೆಂದು ಹೇಳುವವರು ಆಕ್ಸಿಟೆಟ್ರಾಸೈಕ್ಲಿನ್, ಸಿಪಿಎಂ, ಬೆಲಾಮಿಲ್ ಗಳೆಂಬ ತ್ರಿವಳಿ ರತ್ನಗಳನ್ನು ಜೋಬಿನಲ್ಲಿರಿಸಿಕೊಂಡು ಎಲ್ಲಾ ಕಾಯಿಲೆಗಳಿಗೆ ಇವುಗಳನ್ನೇ ರಾಮಬಾಣವಾಗಿ ಪ್ರಯೋಗಿಸಿ ಕಾಕತಾಳೀಯವಾಗಿ ಗುಣವಾದರೆ ತಾನು ಮಾಡಿದ್ದೆಂದು ಕ್ರೆಡಿಟ್ಟು ತೆಗೆದುಕೊಂಡು ಸತ್ತು ಹೋದರೆ “ನಿಮ್ಮ ನಸೀಬು ಸರಿಯಿಲ್ಲ ಬಿಡಿ” ಎಂದು ಯಾಮಾರಿಸುತ್ತಾರೆ. ಇತ್ತೀಚೆಗೆ ಮಾಹಿತಿ ಪ್ರಸರಣ ಫೇಸ್ಬುಕ್, ಯುಟ್ಯೂಬ್ ಇತ್ಯಾದಿಗಳಲ್ಲಿ ಧಾರಾಳವಾಗಿ ಸಿಗುವುದರಿಂದ ಬೇಕಾದ್ದು ಮಾಡಿ ಎಲ್ಲಾ ಮುಗಿದ ಮೇಲೆ “ ನಾನು ಮಾಡುವುದೆಲ್ಲಾ ಮಾಡಿದೆ. ಬೇಕಾದರೆ ಡಾಕ್ಟರಿಗೆ ತೋರಿಸಿ. ಅವರು ಬಂದರೂ ಅದೇ ಮಾಡುತ್ತಾರೆ. ಸರಿ ಆಗಲಿಕ್ಕಿಲ್ಲ” ಎಂದು ಕೈ ಚೆಲ್ಲುತ್ತಾರೆ. ಆ ಸಮಯದಲ್ಲಿ ಪ್ರಾಣಿಯ ಖಾಯಿಲೆ ಅಂತಿಮ ಹಂತದಲ್ಲಿರುವುದರಿಂದ ತಜ್ಞ ಪಶುವೈದ್ಯರು ಬಂದರೂ ಗುಣವಾಗುವುದು ಅಷ್ಟರಲ್ಲೇ ಇರುತ್ತದೆ.

ಇದನ್ನೆಲ್ಲಾ ಇಷ್ಟೆಲ್ಲಾ ಅಧೀಕೃತವಾಗಿ ನಾನು ಹೇಗೆ ಹೇಳುತ್ತೇನೆಂದರೆ ಪಶುವೈದ್ಯಕೀಯದಲ್ಲಿ ಈ ನಾಟಿ ಮೂಲಿಕಾ ಪಶುವೈದ್ಯ ಪದ್ಧತಿಯ ಬಗ್ಗೆ ನಾನು ಯೋಜನೆಯೊಂದರಡಿ ೫ ವರ್ಷ ಸಂಶೋಧನೆ ನಡೆಸಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹೀಗೆ ಅನೇಕ ಜಿಲ್ಲೆಗಳ ಸುಮಾರು ೧೯೮೪ “ನಾಟಿ ಪಶು ವೈದ್ಯ” ಸಂದರ್ಶನ ನಡೆಸಿದೆ. ಶೇ ೯೭ ರಷ್ಟು ನಾಟಿವೈದ್ಯರಿಗೆ ಪಶುಗಳ ಅಂಗರಚನೆ, ಜೀವರಸಾಯನಶಾಸ್ತ್ರ, ರೋಗಶಾಸ್ತ್ರ ಇತ್ಯಾದಿಗಳ ಬಗ್ಗೆ ಅಲ್ಪಜ್ಞಾನವೂ ಸಹ ಇರುವುದಿಲ್ಲ. ಇರಲು ಸಾಧ್ಯವೂ ಸಹ ಇಲ್ಲ. ಬಹುತೇಕರು ಇದನ್ನು ಪರಂಪರೆಯಿಂದ ಅನುಕರಣೆ ಮಾಡಿಕೊಂಡು ಬರುತ್ತಿರುತ್ತಾರೆ. ಅವರಿಗೆ ತಿಳಿದ ಔಷಧಿ ನೀಡಿ ಬಂದ ಜನರ ಪಶುಗಳ ರೋಗವೆಲ್ಲಾ ಗುಣವಾದವು ಎಂದುಕೊಳ್ಳುತ್ತಾರೆ. ಈ ಚಿಕಿತ್ಸೆಗೆ ಯಾವುದೇ ದಾಖಲೆ ಇರುವುದಿಲ್ಲ. ಇವರು ಜಾಸ್ತಿ ಹಣ ಪಡೆಯಲ್ಲ. ಒಂದು ತೆಂಗಿನ ಕಾಯಿ. ಕೊಟ್ಟರೆ ದೇವರಿಗೆ ಒಂದಷ್ಟು ದುಡ್ಡು. ಉತ್ತರದಾಯಿತ್ವ ಮೊದಲೇ ಇಲ್ಲ. ಜನರಿಗೆ ಬದಲಾವಣೆ ಬೇಕು. ಅದರಲ್ಲೂ ಕಡಿಮೆ ಖರ್ಚಿನಲ್ಲಾದರೆ ಒಳ್ಳೆಯದು. ಆಧುನಿಕ ಪಶುವೈದ್ಯಕೀಯ ಔಷಧಿಯ ಬಗ್ಗೆ ಯಾಕೋ ಅವ್ಯಕ್ತ ದ್ವೇಷ. ಬೆರಳೆಣಿಕೆಯಷ್ಟು ನಾಟಿ ಔಷಧಿ ಪದ್ಧತಿಗಳು ಪರಿಣಾಮಕಾರಿಯಾಗಿದ್ದರೂ ಅವರು ಆ ಗಿಡಮೂಲಿಕೆಯ ಹೆಸರು ಬಿಟ್ಟು ಕೊಡಲ್ಲ. ಪರಂಪರೆ. ಮನೆತನ ಇತ್ಯಾದಿ ಹೇಳುತ್ತಾರೆ. ಇವರನ್ನು ಬೆನ್ನು ಹತ್ತಿದರೆ ಸಮಯ ವ್ಯರ್ಥ ಎಂದು ಸುಮ್ಮನಾದೆ. ಕೆಲವೊಮ್ಮೆ ತೀರಾ ಒತ್ತಾಯ ಮಾಡಿದರೆ ತಪ್ಪು ಗಿಡದ ಹೆಸರು ಹೇಳುತ್ತಾರೆ. ಅನೇಕ ಸಲ ಇವರು ಬಳಸುವ ಗಿಡಮೂಲಿಕೆಗಳು ಸರಳವಾದ ನೋವು ನಿವಾರಕ ಅಥವಾ ಊತ ನಿವಾರಕ ಗುಣಹೊಂದಿದ ಗಿಡಗಳೂ ಇರಬಹುದು.

ನಾಟಿ ವೈದ್ಯ ಪದ್ಧತಿ “ಜನ” ಪ್ರಿಯವಾಗಲು ಅನೇಕ ಕಾರಣಗಳಿವೆ. ಅದಕ್ಕೆ ಜನರ ನಿರೀಕ್ಷೆ. ಬಹಳ ಜನ ಆಧುನಿಕ ಪಶುವೈದ್ಯಕೀಯ ಪದ್ಧತಿ ಕಲಿತ ಪಶುವೈದ್ಯರು ಬಂದು ಜಾನುವಾರು ಮುಟ್ಟಿ ನೋಡಿದ ಕೂಡಲೇ ಅದರ ಕಾಯಿಲೆಯು ಆ ಕ್ಷಣದಲ್ಲೇ ಪತ್ತೆಯಾಗಿರಬೇಕೆಂದು ನಿರೀಕ್ಷಿಸುತ್ತಾರೆ. ಚಿಕಿತ್ಸೆಯು ಅಂತರಾಷ್ಟ್ರೀಯ ಮಟ್ಟದ್ದಾಗಿರಬೇಕು ಮತ್ತು ಆದರೆ ಅದರ ಬೆಲೆ ಕಡಿಮೆ ಖರ್ಚಿನಲ್ಲಾಗಬೇಕು ಎಂಬುದು ಬಹುತೇಕರ ನಿರೀಕ್ಷೆ. ಸ್ವತ: ಮಾತನಾಡಿ ಇಂತಿಂತ ಭಾಗಗಳಲ್ಲಿ ನೋವು ಅಥವಾ ತೊಂದರೆ ಇದೆ ಎನ್ನುವ ಮನುಷ್ಯರ ಖಾಯಿಲೆಗಳ ನೈಜ ಕಾರಣ ಪತ್ತೆ ಮಾಡಲು ವಿವಿಧ ಆಧುನಿಕ ಉಪಕರಣಗಳಿದ್ದರೂ ಸಹ ಅನೇಕ ದಿನಗಳನ್ನು ತೆಗೆದುಕೊಳ್ಳುತ್ತದೆ. ಪಶುಗಳು ಮಾತನಾಡುವುದಿಲ್ಲ. ಅವುಗಳ ಜೀವಕ್ಕೆ ಮನುಷ್ಯನ ಜೀವದಷ್ಟು ಬೆಲೆಯೂ ಇಲ್ಲ. ಕೆಲವೊಮ್ಮೆ ಚಿಕಿತ್ಸೆಯ ವೆಚ್ಚವೇ ಪಶುವಿನ ಬೆಲೆಗಿಂತ ಜಾಸ್ತಿಯಾಗುವ ಸಾಧ್ಯತೆ ಇದೆ. ಅದು ಯಾವುದೇ ಕಾಯಿಲೆಯಾದರೂ, ಯಾವ ಹಂತದಲ್ಲಿದ್ದರೂ ಸಹ ಒಂದೇ ದಿನದ ಚಿಕಿತ್ಸೆಯಲ್ಲಿ ಏನೂ ತೊಂದರೆಯಿಲ್ಲದೇ ಬಗೆಹರಿಹಬೇಕು ಎನ್ನುವುದೂ ಎಂಬುದು ಜನರ ನಿರೀಕ್ಷೆ. ಚಮತ್ಕಾರಿಕೆ ಚಿಕಿತ್ಸೆ, ಕೂಡಲೇ ಎಲ್ಲಾ ಸರಿಯಾಗಬೇಕು ಎಂಬ ಸಿನೀಮಿಯ ನಿರೀಕ್ಷೆ ಕೆಲವರನ್ನು ಸಿನಿಕರನ್ನಾಗಿ ಮಾಡಿದೆ ಎಂದರೆ ತಪ್ಪಗಲಿಕ್ಕಿಲ್ಲ.

ತಜ್ಞ ಪಶುವೈದ್ಯರ ಅಪಾರ ಕೊರತೆ, ಅವರ ಕೆಲಸದ ಒತ್ತಡ, ಮನೆ ಮನೆ ಬಾಗಿಲೆಗೆ ಚಿಕಿತ್ಸೆಗೆ ತೆರಳುವುದರಲ್ಲೇ ಸಮಯ ವ್ಯರ್ಥವಾಗುವುದು, ಪಶು ಔಷಧಿಗಳ ಹೆಚ್ಚಿನ ಪ್ರಮಾಣ ಮತ್ತು ಜಾಸ್ತಿ ಬೆಲೆ, ಸಕಾಲದಲ್ಲಿ ಪಶುವೈದ್ಯರು ದೊರಕದಿರುವುದು, ದೊಡ್ಡ ಪಶುಚಿಕಿತ್ಸೆಯಲ್ಲಿ ಜನಪ್ರಿಯವಾಗದ ಖಾಸಗಿ ಪಶುವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆಯ ಪಶುವೈದ್ಯರಿಗೆ ಅತ್ಯಂತ ಹೆಚ್ಚಿನ ಕೆಲಸದ ಒತ್ತಡ, ಕೆಲವೊಮ್ಮೆ ಸಿಕ್ಕಿದರು ಅವರಿಗೆ ರೋಗಪತ್ತೆಯಲ್ಲಿ ಆಸಕ್ತಿ ಇರದಿರುವುದು, ಹಾಲನ್ನು ಮಾರಿಕೊಂಡ ಹಣ ನನಗೆ, ಚಿಕಿತ್ಸೆ ಮಾತ್ರ ಉಚಿತವಾಗಿ ದೊರಕಲಿ ಎಂಬ ಭಾವನೆ, ಎಲ್ಲಾ ಕ್ಷೇತ್ರದಲ್ಲಿಯೂ ಇರುವಂತೆ ಕೆಲವರ ಹಣಬಾಕತನ ಇಂತಹ ನೂರಾರು ಕಾರಣಗಳು ಸಹ ಜನ ಸುಲಭವಾಗಿ ಅವರ ಹಳ್ಳಿಯಲ್ಲೇ ಸಿಗುವ ನಾಟಿವೈದ್ಯದತ್ತ ತೆರಳಲು ಕಾರಣವಾಗಿರಬೇಕು.

ನಾಟಿ ವೈದ್ಯದ ಹೆಸರಿನಲ್ಲಿ ಜಾನುವರುಗಳ ಶೋಷಣೆ, ನೋವು, ಹಿಂಸೆ ನಡೆಯಬಾರದು. ದನಕ್ಕೆ ಬಾಯಿ ಇರಲ್ಲ. ಮಾಲಕನಿಗೆ ಖರ್ಚು ಮಾಡಲು ಕಷ್ಟಪಡಲು ಮನಸ್ಸು ಇರಲ್ಲ. ಇಂತಹವರೆಲ್ಲಾ ಈ ನಾಟಿ ವೈದ್ಯ ಪದ್ದತಿಗೆ ಮೊರೆ ಹೋಗುವುದು. ಗಿಡಮೂಲಿಕೆ ಮೂಲದ ಅಥವಾ ನಾಟಿ ಮೂಲದ ಈ ತರಹದ ಚಿಕಿತ್ಸೆಗಳನ್ನೆಲ್ಲಾ ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಬೇಕಾದ ಅಗತ್ಯವಿದೆ. ಈ ತರದ ನಾಟಿವೈದ್ಯದಿಂದ ಯಾವುದೋ ಕಾಕತಾಳೀಯವಾಗಿ ಗುಣವಾದ ಪ್ರಕರಣವನ್ನು ತಾವೇ ಮಾಡಿದ್ದೆಂದು ಬಿಂಬಿಸಿ ಊರೆಲ್ಲಾ ಪ್ರಚಾರ ಪಡೆಯುವುದು ನಿಲ್ಲುವುದು ಅವಶ್ಯ. ಆ ಚಿಕಿತ್ಸೆ ಸರಿಯಾಗಿದ್ದರೆ ಅದರ ಪುನರಾವರ್ತನೆಯ ಪ್ರಮಾಣವೂ ಇರಬೇಕು. ಜಾನುವಾರುಗಳಲ್ಲಿ ಅಥವಾ ಮನುಷ್ಯನಲ್ಲಿ ಆಧುನಿಕ ಪದ್ಧತಿಗಳ ಚಿಕಿತ್ಸೆಗಿಂತ ಈ ತರದ ನಾಟಿ ಚಿಕಿತ್ಸೆಗಳು ಬೇಗ ಒಬ್ಬರ ಬಾಯಿಯಿಂದ ಮತ್ತೊಮ್ಮೆ ಹಬ್ಬಿ ಸಾಮಾಜಿಕ ಜಾಲತಾಣಗಳ ಮೂಲಕ “ಜನಪ್ರಿಯ” ವಾಗುತ್ತಿರುವುದು ದುರಂತ. ಜನಕ್ಕೆ ಬದಲಾವಣೆ ಬೇಕಾಗಿದೆ. ಸತ್ಯವಲ್ಲ..

ಹೀಗಿದ್ದರೂ ಒಂದಿಷ್ಟು ನಾಟಿ ವೈದ್ಯ ಪದ್ಧತಿಗಳು ಸತ್ವವನ್ನು ಹೊಂದಿವೆ. ಕೆಲವರು ನಾಟಿ ವೈದ್ಯ ಪದ್ದತಿಯಲ್ಲಿ ಗಿಡಮೂಲಿಕೆ ಔಷಧಿಯನ್ನು ನೀಡಿ ಕಾಮಾಲೆ ಇತ್ಯಾದಿ ಗೂಣಪಡಿಸುವವರಿದ್ದಾರೆ. ಅಷ್ಟಕ್ಕೂ ಕಾಮಾಲೆ ಒಂದು ರೋಗವೇ ಅಲ್ಲ. ಅದೊಂದು ಪಿತ್ತಜನಕಾಂಗದ ರೋಗದ ಲಕ್ಷಣ. ಮೂಲಕಾರಣ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ತನ್ನಷ್ಟಕ್ಕೆ ತಾನೆ ಗುಣವಾಗುತ್ತದೆ. ಆದರೆ ಕ್ಯಾನ್ಸರಿನಂತ ಮಹಾಮಾರಿಗೆ ನಾಟಿ ಔಷಧಿಯಿಂದ ಕಡಿಮೆಯಾಗಿದೆ ಎಂದರೆ ಅಷ್ಟೊಂದು ಸುಲಭಕ್ಕೆ ನಂಬಬಾರದು. ಕ್ಯಾನ್ಸರಿನಿಂದ ಬಳಲುತ್ತಿರುವ ರೋಗಿಯು ವಿವಿಧ ಕಿಮೊಥೆರಪಿ, ರೇಡಿಯೋಥೆರಪಿಗಳ ಅಡ್ಡಪರಿಣಾಮದಿಂದ ಬಳಲಿ ಮನೋಸ್ಥೈರ್ಯ ಕಳೆದುಕೊಂಡಾಗ ಜನ ನೀಡುವ ಸಹಸ್ರಾರು ಉಚಿತ ಸಲಹೆಗಳನ್ನು ನಂಬಿ ಈ ರೀತಿಯ “ಬದಲಿ” ಚಿಕಿತ್ಸೆಗೆ ಹೋಗುವುದು ಸಹಜ. ಮನುಷ್ಯನಿಗೆ ಇರುವ ಇದೊಂದು “ಪ್ಲಾಸೆಬೋ” ಪರಿಣಾಮದಿಂದಲೂ ಸಹ ಕೆಲವೊಮ್ಮೆ ಔಷಧಿಯಿಲ್ಲದೇ ಕಾಯಿಲೆ ಗುಣವಾಗಬಹುದು.

ಈ ವಿಷಯದಲ್ಲಿ ಪ್ರತಿಯೊಬ್ಬರ ಅನುಭವವೂ ಬೇರೆಯಾಗಿರುತ್ತದೆ. ಆದರೆ ಪ್ರತಿಯೊಬ್ಬರ ಅಥವಾ ನನ್ನ ಅನುಭವಕ್ಕಿಂತ ಜಾಗತಿಕವಾಗಿ ಅನೇಕ ಸ್ಥರಗಳಲ್ಲಿ ಪರಿಕ್ಷೆ ನಡೆದು ವೈಜ್ಞಾನಿಕವಾಗಿ ಸಿದ್ಧವಾದ ವಿಷಯಗಳನ್ನು ನಂಬಬೇಕು ಮತ್ತು ವೈಜ್ಞಾನಿಕ ಮನೋಭಾವ ಹೊಂದುವುದು ಈ ಕಾಲದಲ್ಲಿ ಅತ್ಯಂತ ಪ್ರಸ್ತುತ. ಇಷ್ಟಾದರೂ ನಾಟಿ ಔಷಧಿಯೇ ಉತ್ತಮ ಎಂದರೆ ಅದು ಅವರವರ ಇಷ್ಟ. ಅವರ ಆರೋಗ್ಯಕ್ಕೆ ಅವರೇ ಹೊಣೆ. ಆರೋಗ್ಯದ ಕುರಿತು ಯಾವುದು ಸೂಕ್ತ ಎನ್ನುವ ಆಯ್ಕೆಯ ಮತ್ತು ಅದರ ಪರಿಣಾಮವನ್ನು ಅವರೇ ಅನುಭವಿಸಬೇಕು. ಅದರಲ್ಲಿಯೂ ಮೂಕಪ್ರಾಣಿ ಪಶುವಿನಿಂದ ವಿವಿಧ ಪ್ರಯೋಜನ ಪಡೆಯುವಾಗ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಸೂಕ್ತ ತಜ್ಞರೆನಿಸಿದ ಪಶುವೈದ್ಯರಿಂದ ಕೊಡಿಸಿ ಎನ್ನುವುದು ಕಳಕಳಿಯ ಮನವಿ.

ಇದನ್ನೂ ನೋಡಿ : ದೇಶದ ಮೊದಲ ಮುಸ್ಲಿಂ ಶಿಕ್ಷಕಿ | ಫಾತಿಮಾ ಶೇಖ್ : ಶಿಕ್ಷಣಕ್ಕೆ ಅವರ ಕೊಡುಗೆಗಳೇನು? ವಿಶ್ಲೇಷಣೆ : ಕೆ. ಪರೀಫಾ

Donate Janashakthi Media

Leave a Reply

Your email address will not be published. Required fields are marked *