ಈಜಿಪ್ಟ್ ನಲ್ಲಿ ಹವಾಮಾನ ಬದಲಾವಣೆ ಸಮ್ಮೇಳನ COP27
ವಸಂತರಾಜ ಎನ್.ಕೆ.
ಹವಾಮಾನ ಬದಲಾವಣೆಯಿಂದ ಬಡದೇಶಗಳಿಗೆ ಆಗುತ್ತಿರುವ ‘ನಷ್ಟ’ಕ್ಕೆ, ಅದಕ್ಕೆಕಾರಣವಾದ ಕೈಗಾರಿಕೀಕೃತ ಮುಂದುವರೆದ ದೇಶಗಳು ‘ಪರಿಹಾರ’ ಕೊಡಲು ನಿಧಿ ಸ್ಥಾಪಿಸಬೇಕೆಂಬ ನಿರ್ಧಾರ ಈಜಿಪ್ಟ್ ನ ಶರ್ಮ್-ಎಲ್-ಶೇಕ್ ನಲ್ಲಿ ನಡೆದ ಹವಾಮಾನ ಬದಲಾವಣೆ ಸಮ್ಮೇಳನದ (COP2) ಏಕಮಾತ್ರ ಮಹತ್ವದ ಸಕಾರಾತ್ಮಕ ಬೆಳವಣಿಗೆ. ಆದರೆ ಹವಾಮಾನ ಬದಲಾವಣೆಯ ಪ್ರಕೋಪ ತಡೆಯುವ ಜಾಗತಿಕ ಕಾರ್ಯಾಚರಣೆಯಲ್ಲಿ ಒಟ್ಟಾರೆಯಾಗಿ ಹಿನ್ನಡೆಯೇ ಆಗಿದೆ ಎನ್ನಬೇಕು. ಇದು ಮುಂದೆ ಇನ್ನಷ್ಟು ಹೆಚ್ಚಿನ ‘ನಷ್ಟ’ಕ್ಕೆ ಕಾರಣವಾಗಬಹುದೇ?
ಈಜಿಪ್ಟ್ ನ ಶರ್ಮ್-ಎಲ್-ಶೇಕ್ ನಲ್ಲಿ ನವೆಂಬರ್ 6-18 ರ ವರೆಗೆ ನಡೆದು ಎರಡು ದಿನ ‘ಓವರ್ ಟೈಮ್’ ಕೆಲಸ ಮಾಡಿದ ಹವಾಮಾನ ಬದಲಾವಣೆ 27ನೆಯ ಸಮ್ಮೇಳನದ (COP27) ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತಿತರ ಸಂಘಟಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ‘ನಷ್ಟ ಮತ್ತು ಪರಿಹಾರ ನಿಧಿ’ ಯ (ಲಾಸ್ ಅಂಡ್ ಡ್ಯಾಮೇಜ್ ಫಂಡ್) ಕುರಿತು ಒಪ್ಪಂಧ ಬಿಟ್ಟರೆ, ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿದರೆ ಉಳಿದಂತೆ ನಿರಾಶಾದಾಯಕವೇ ಆಗಿತ್ತು.
ಕಳೆದ ಮೂರು ದಶಕಗಳಿಂದಲೂ ಆಭಿವೃದ್ಧಿಶೀಲ ದೇಶಗಳು ‘ನಷ್ಟ ಮತ್ತು ಪರಿಹಾರ ನಿಧಿ’ಗೆ (ಲಾಸ್ ಅಂಡ್ ಡ್ಯಾಮೇಜ್ ಫಂಡ್) ಈ ಸಮಸ್ಯೆಯನ್ನು ಸೃಷ್ಟಿಸುವಲ್ಲಿ ಸಿಂಹಪಾಲು ಪಡೆದ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳು ದೇಣಿಗೆ ಕೊಡಬೇಕೆಂದು ಒತ್ತಾಯಿಸುತ್ತಿದ್ದವು. ಈಗಾಗಲೇ ಕಂಡು ಬಂದಿರುವ ಭಾರೀ ಚಂಡಮಾರುತ, ತೀವ್ರ ನೆರೆ, ಶೀತ ಮತ್ತು ಉಷ್ಣ ಅಲೆಗಳಲ್ಲದೆ, ನಿಧಾನವಾಗಿ ಆದರೆ ಮತ್ತೆ ಸರಿಹೋಗದ ಪ್ರಮಾಣದಲ್ಲಿ ಆಗುತ್ತಿರುವ ಸಮುದ್ರ ಮಟ್ಟದ ಏರಿಕೆ, ಮರುಭೂಮಿಕರಣ ಇತ್ಯಾದಿಗಳಿಂದ ಆಗುತ್ತಿರುವ ನಷ್ಟವನ್ನು ಪರಿಹರಿಸಲೂ ಅಗತ್ಯವಾಗಿದೆ. ಈ ಸಮಸ್ಯೆಯನ್ನು ಕೆಲವು ಸಂತ್ರಸ್ತ ಸಣ್ಣ ದ್ವೀಪ ದೇಶಗಳು ಅತ್ಯಂತ ಬಡ ದೇಶಗಳು ಈಗಾಗಲೇ ಎದುರಿಸುತ್ತಿದ್ದು ತೀವ್ರ ನಷ್ಟ-ಹಾನಿ ಅನುಭವಿಸಿವೆ.
ಅವುಗಳ ಸತತ ಒತ್ತಡದಿಂದಾಗಿ ಈ ಕುರಿತು 19ನೆಯ ಸಮ್ಮೇಳನದಲ್ಲಿ (COP19) ಚರ್ಚೆಗೆ ಬಂದು ಒಂದು ಚೌಕಟ್ಟನ್ನು ಪ್ರಸ್ತಾವಿಸಲಾಯಿತು.. ಆದರೆ ಶ್ರೀಮಂತ ದೇಶಗಳು, ವಿಶೇ಼ವಾಗಿ ಯು.ಎಸ್ ಮತ್ತು ಯುರೋ ಕೂಟ. ಈ ಒತ್ತಾಯವನ್ನು ಅಂಗೀಕರಿಸುವುದು ಎಂದರೆ ಶ್ರೀಮಂತ ದೇಶಗಳು ‘ಅಪರಾಧ’ಗಳನ್ನು ಎಸಗಿದ್ದಕ್ಕೆ ಇದು ‘ಶಿಕ್ಷೆ’ ಎಂದು ಒಪ್ಪಿಕೊಂಡಂತೆ. ಇಂತಹ ‘ಪರಿಹಾರ’ ಮಿತಿಯಿಲ್ಲದೆ ಹೋಗಬಹುದು ಎಂದು ಭಾವಿಸಿದವು. COP19 ಪ್ರಸ್ತಾವಿಸಿದ ಚೌಕಟ್ಟು ಸ್ಪಷ್ಟವಾಗಿ ಇಂತಹ ನಿಲುವನ್ನು ಹೊಂದಿರಲಿಲ್ಲವಾದರೂ, ಈ ಪ್ರಸ್ತಾವಕ್ಕೆ ಪ್ರತಿರೋಧ ಒಡ್ಡುತ್ತಾ ಬಂದವು. 2021ರಲ್ಲಿ ಶ್ರೀಮಂತ ದೇಶಗಳು ಪ್ರತಿ ವರ್ಷ 100 ಶತಕೋಟಿ ಡಾಲರುಗಳನ್ನು ನೀಡುವವು ಎಂಬ ಅಸ್ಪಷ್ಟ ವಾಗ್ದಾನ ಬಿಟ್ಟರೆ ಏನೂ ಈ ವರೆಗೆ ಸಾಧಿತವಾಗಿರಲಿಲ್ಲ. ಈಗ ಆ ಪ್ರಸ್ತಾವ ಒಂದು ವಿದ್ಯುಕ್ತ ಒಪ್ಪಂದದಲ್ಲಿ ಸೇರಿರುವುದು ಮಹತ್ವದ ಪ್ರಗತಿ. ಇದಕ್ಕಾಗಿ ಭಾರತ, ಚೀನಾ ಸೇರಿದಂತೆ ಜಿ-77 ದೇಶಗಳು ಐಕ್ಯ ಹೋರಾಟ ನಡೆಸಿದ್ದು ಗಮನಾರ್ಹವಾಗಿತ್ತು.
ಇದಲ್ಲದೆ ಜಿ-77 ದೇಶಗಳು ಸಾರ್ವಜನಿಕ ನಿಧಿ ಬಳಸುವ ಜಾಗತಿಕ ಹಣಕಾಸು ಸಂಸ್ಥೆಗಳ ಸುಧಾರಣೆಗೆ ಒತ್ತಡ ಹೇರಿದ್ದೂ ಗಮನಾರ್ಹ ಪ್ರಗತಿಯಾಗಿತ್ತು. ಜಾಗತಿಕ ಹಣಕಾಸು ಸಂಸ್ಥೆಗಳು ಬಡ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಹವಾಮಾನ ಬದಲಾವಣೆ ಶಮನಕ್ಕೆ ಮಾತ್ರವಲ್ಲ, ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಹಣಕಾಸು ಒದಗಿಸುವುದರಲ್ಲಿ ವಿಫಲವಾಗಿವೆ. ಈ ಸ್ಥಿತಿ ಬದಲಾಯಿಸಬೇಕು. ಈ ಸಂಸ್ಥೆಗಳ ಸುಧಾರಣೆ ಬೇಕು ಎಂದು ಒತ್ತಾಯಿಸಿದವು. ಈ ಕುರಿತು ಒಪ್ಪಂದದಲ್ಲಿ ಬರದಿದ್ದರೂ ಭವಿಷ್ಯದಲ್ಲಿ ಇದು ಪ್ರಮುಖ ವಿಷಯವಾಗಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.
‘ನಷ್ಟ ಮತ್ತು ಪರಿಹಾರ ನಿಧಿ’ಯ ವಿವರಗಳು ಅಸ್ಪಷ್ಟ
ಆಭಿವೃದ್ಧಿಶೀಲ ದೇಶಗಳಿಗೆ ಹವಾಮಾನ ಬದಲಾವಣೆ ಪರಿಣಾಮಗಳನ್ನು ಶಮನಗೊಳಿಸುವ ಮತ್ತು ಅವುಗಳಿಗೆ ಸರಿಹೊಂದಿಕೊಳ್ಳುವ ನಿಧಿಗಿಂತ ಇದು ಭಿನ್ನವಾದ್ದು ಎಂದು ಗಮನಿಸಬೇಕು. ಇದು ಅತ್ಯಂತ ಗಮನಾರ್ಹ ಪ್ರಗತಿ. ಆದರೆ ನಿಧಿಯಲ್ಲಿ ಎಷ್ಟು ಹಣ ಇರುತ್ತದೆ, ಯಾವಾಗ ಈ ನಿಧಿ ಸಂಗ್ರಹವಾಗುತ್ತದೆ? ಯಾವ ದೇಶಗಳು ಎಷ್ಟು ಈ ನಿಧಿಗೆ ದೇಣಿಗೆ ನೀಡುತ್ತವೆ? ಸರಕಾರಗಳಲ್ಲದೆ ಇತರ ಯಾವ ಸಂಸ್ಥೆಗಳು ದೇಣಿಗೆ ಕೊಡುತ್ತವೆ? ಯಾವ ದೇಶಗಳಿಗೆ ಯಾವ ಮಾನದಂಡದ ಮೇಲೆ ಈ ನಿಧಿಯ ಭಾಗವನ್ನು ಕೊಡಲಾಗುತ್ತದೆ? ಇದು ಸಾಲದ ಅಥವಾ ಅನುದಾನದ ರೂಪದಲ್ಲಿರುತ್ತದಾ? ಈ ನಿಧಿಯ ನಿರ್ವಹಣೆಗೆ ಯಾವ ರೀತಿಯ ಸಂಸ್ಥೆ ರಚಿಸಲಾಗುತ್ತದೆ? ಎಂಬಿತ್ಯಾದಿ ಪ್ರಮುಖ ಪ್ರಶ್ನೆಗಳು ಇತ್ಯರ್ಥವಾಗಿಲ್ಲ ಅಥವಾ ಚರ್ಚೆಯೇ ಆಗಿಲ್ಲವಾದ್ದರಿಂದ ಈ ಕುರಿತು ಹೆಚ್ಚು ಸಂಭ್ರಮಪಡುವುದು ತಪ್ಪಾದೀತು. ಮಾರ್ಚ್ 2023ರೊಳಗೆ ಒಂದು ‘ತಾತ್ಕಾಲಿಕ ಸಮಿತಿ’ ರಚಿಸಿ ಈ ವಿವರಗಳ ಕುರಿತು ನಿರ್ದಿಷ್ಟ ಪ್ರಸ್ತಾವಗಳನ್ನು ಸಿದ್ಧಪಡಿಸಲಾಗುವುದು. ಮುಂದಿನ ಅಂದರೆ ನವೆಂಬರ್-ಡಿಸೆಂಬರ್ 2028ರಲ್ಲಿ ನಡೆಯಲಿರುವ COP28 ಸಮ್ಮೇಳನದಲ್ಲಿ ಇದನ್ನು ಅಂತಿಮಗೊಳಿಸಲಾಗುವುದು ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಈ ನಿಧಿಗೆ ಸರಕಾರಗಳು ಅಥವಾ ಸಾರ್ವಜನಿಕ ಸಂಸ್ಥೆಗಳಿಂದ ಮಾತ್ರ ದೇಣಿಗೆ ಬರುವುದಿಲ್ಲವೆಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ ಶ್ರೀಮಂತ ದೇಶಗಳ ಸರಕಾರಗಳು ತಾವು ಉಂಟು ಮಾಡಿದ ‘ನಷ್ಟ’ಕ್ಕೆ ‘ಪರಿಹಾರ’ ಕೊಡಲು ಒಪ್ಪಿವೆ ಎಂದು ಹೇಳುವಂತಿಲ್ಲ.
ಶರ್ಮ್-ಎಲ್-ಶೇಕ್ COP27 ಜಾರಿ ಯೋಜನೆಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಆಭಿವೃದ್ಧಿಶೀಲ ದೇಶಗಳಿಗೆ ಸುಮಾರು 5.8-5.9 ಲಕ್ಷ ಕೋಟಿ ಡಾಲರು ಹಣಕಾಸು ನೆರವು ಕೊಡಬೇಕಾಗುತ್ತದೆ ಎಂದು ಅಂದಾಜು ಮಾಡಿದೆ. ಇದು ಬಹುಶಃ ಶಮನ ಮತ್ತು ಸರಿಹೊಂದಿಕೊಳ್ಳುವ ಕ್ರಮಗಳು ಹಾಗೂ ನಷ್ಟ-ಪರಿಹಾರವನ್ನು ಒಳಗೊಂಡಿರುತ್ತವೆ. 2021ರಲ್ಲಿ ಶ್ರೀಮಂತ ದೇಶಗಳು ಮಾಡಿದ 100 ಶತಕೋಟಿ ಡಾಲರುಗಳ ಸಹಾಯಧನದ ವಾಗ್ದಾನ ಜಾರಿಯಾಗಿಲ್ಲವೆಂದು ಈ ದಸ್ತಾವೇಜು ‘ಗಂಭೀರ ಆತಂಕ’ ವ್ಯಕ್ತಪಡಿಸಿದೆ. ಹೀಗಾಗಿ ಯಾವುದೇ ಹೆಸರಲ್ಲಿ ಕರೆಯಲಿ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಆಭಿವೃದ್ಧಿಶೀಲ ದೇಶಗಳಿಗೆ ಸಹಾಯಧನ ಕೊಡುವ ಈ ಮಹತ್ವದ ಸಕಾರಾತ್ಮಕ ಬೆಳವಣಿಗೆಯೂ ಬರಿಯ ಮರೀಚಿಕೆ ಆಗುವ ಅಪಾಯ ಇನ್ನೂ ಇದೆ. COP28ರ ನಂತರವಷ್ಟೇ ಈ ಕುರಿತು ವಿಶ್ವಾಸ ಮೂಡೀತು.
ಶಮನದ ಕಾರ್ಯಯೋಜನೆಯಲ್ಲಿ ತೀವ್ರ ಹಿನ್ನಡೆ
ಹವಾಮಾನ ಬದಲಾವಣೆಯ ಶಮನಕ್ಕೆ ಬೇಕಾಗಿದ್ದ ತುರ್ತು ಕಾರ್ಯಯೋಜನೆಯಲ್ಲಿ COP27ರಲ್ಲಿ ಪ್ರಗತಿಯಾಗಿಲ್ಲ. ಮಾತ್ರವಲ್ಲ, ಹಿನ್ನಡೆಯಾಗಿದೆ ಎಂಬುದು ಗಂಭೀರ ಬೆಳವಣಿಗೆ. ಇದಕ್ಕಾಗಿ ಕಾರ್ಬನ್ ಸೂಸುವಿಕೆಯಲ್ಲಿ ಕಡಿತವನ್ನು ಹೆಚ್ಚಿಸಲಿಲ್ಲ. ಮಾತ್ರವಲ್ಲ, ವೈಜ್ಞಾನಿಕ ವರದಿಗಳು ಸೂಚಿಸಿದ ಗಂಭಿರ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ. ಗ್ಲಾಸ್ಗೊದ COP26ರಲ್ಲಿ ವಿಧಿಸಿದ ಸೂಸುವಿಕೆಯಲ್ಲಿ ಕಡಿತಗಳು ಮತ್ತು ಕಾರ್ಬನ್ ಬಜೆಟ್ ತಾಪಮಾನ ಹೆಚ್ಚಳವನ್ನು 2 ಡಿಗ್ರಿ ಸೆಂ. ಗೆ ಮಿತಿಗೊಳಿಸುವ ಗುರಿ ಹೊಂದಿದ್ದಾಗಿತ್ತು. ಈ ವರೆಗೆ ಕಂಡು ಬಂದ ಹವಾಮಾನ ವೈಪರೀತ್ಯದ ಅನಾಹುತಗಳ ನಿರ್ದಿಷ್ಟ ಉದಾಹರಣೆಗಳು ಮತ್ತು ಹೊಸ ವೈಜ್ಞಾನಿಕ ಅಂದಾಜುಗಳು 1.5 ಡಿಗ್ರಿ ಸೆಂ. ಏರಿಕೆಯ ಗುರಿಯಿಟ್ಟುಕೊಂಡು ತಕ್ಕ ಸೂಸುವಿಕೆ ಕಡಿತಗಳು ಮತ್ತು ಕಾರ್ಬನ್ ಬಜೆಟ್ ರೂಪಿಸುವ ತುರ್ತಿನತ್ತ ಬೊಟ್ಟುಮಾಡಿದ್ದವು. ಆದರೆ COP27 ಇದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವೆಂಬುದು ಗಂಭೀರ ವೈಫಲ್ಯವೆನ್ನಬೇಕು.
.ಈಗಿನ ಸೂಸುವಿಕೆ, ಗ್ಲಾಸ್ಗೊದ COP26ರಲ್ಲಿ ವಿಧಿಸಿದ ಸೂಸುವಿಕೆಯ ಆಧಾರದ ಮೇಲೆ 2010ರ ಮಟ್ಟದಿಂದ 2030ರ ಹೊತ್ತಿಗೆ ಶೇ.10.6ರಷ್ಟು (ಕಳೆದ ವರ್ಷ ಶೇ.13.7 ಏರಿಕೆಯೆಂದು ಅಂದಾಜು ಇತ್ತು) ಏರಿಕೆ ಕಾಣುವ ಮೂಲಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಉನ್ನತ ಮಟ್ಟದ ಸಚಿವರ ದುಂಡುಮೇಜಿನ ಸಭೆಯ ವರದಿಯಲ್ಲಿ ಹೇಳಲಾಗಿದೆ. ಆದರೆ ವೈಜ್ಞಾನಿಕ ವರದಿ ಈಗಿನ ಗುರಿ ಮುಟ್ಟಲು 2010 ರ ಮಟ್ಟದಿಂದ ಏರಿಕೆಯನ್ನು 2025ರಲ್ಲೇ ಸ್ಥಗಿತಗೊಳಿಸಿ 2030ರ ಹೊತ್ತಿಗೆ ಶೇ.43ರಷ್ಟು ಕಡಿತಗೊಳಿಸಬೇಕು ಎಂದು ಹೇಳಿದೆ. ಆದರೂ COP27 ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಕ ಕ್ರಮ ರೂಪಿಸಲು ಮುಂದಾಗಲಿಲ್ಲವೆಂಬುದು ಆತಂಕದ ವಿಷಯ.
ಯು.ಕೆ ಮತ್ತು ಯುರೋ ಕೂಟಗಳ ಪ್ರತಿನಿಧಿಯಾಗಿ COP26ರ ಮುಖ್ಯಸ್ಥ ಆತಂಕ ವ್ಯಕ್ತಪಡಿಸಿದರೂ, ಸೂಸುವಿಕೆ ಕಡಿತಗೊಳಿಸುವುದರಲ್ಲಿ ಆ ದೇಶಗಳ ಸಾಧನೆ ಇದಕ್ಕೆ ತಕ್ಕುದಾಗಿಲ್ಲ. ಯುರೋ ಕೂಟ COP27ರ ಕೊನೆಯಲ್ಲಿ 1990ರ ಸೂಸುವಿಕೆ ಮಟ್ಟದಿಂದ ಕಡಿತವನ್ನು ಈಗಾಗಲೇ ಕೊಟ್ಟ ಆಶ್ವಾಸನೆಯಾದ ಶೇ.55ರಿಂದ ಶೇ57ಕ್ಕೆ ಮಾತ್ರ ಏರಿಸಿತು. ಹವಾಮಾನ ಬದಲಾವಣೆಯ ವೈಜ್ಞಾನಿಕ ಸಮಿತಿ ತನ್ನ 4ನೆಯ ವರದಿಯಲ್ಲೇ (ಇತ್ತೀಚಿನ ವರದಿ 6ನೆಯದು) ಶ್ರೀಮಂತ ದೇಶಗಳು ಶೇ.80-90ರಷ್ಟು ಕಡಿತ ಮಾಡಬೇಕು ಎಂದು ಹೇಳಿತ್ತು. ಆಗ ಅದನ್ನು ಗುರಿಯಾಗಿ ಸ್ವೀಕರಿಸಿತ್ತು. ಈಗ ಮಾತ್ರ ಆ ಬಗ್ಗೆ ಜಾಣಮರೆವು ಪ್ರದರ್ಶಿಸಿದೆ.
ಈ ವರ್ಷದ ಉಕ್ರೇನ್ ಯುದ್ಧ ಮತ್ತು ಅದರಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಇದನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ ಎಂಬುದು ನಿಜ. ಆದರೆ ಇಂಧನ ಬಿಕ್ಕಟ್ಟು ಜತೆ ಯುದ್ಧದಲ್ಲೇ ಅನುತ್ಪಾದಕವಾಗಿ ವ್ಯರ್ಥವಾಗುವ ಇಂಧನ ಮತ್ತು ಹೆಚ್ಚಾಗುವ ಸೂಸುವಿಕೆಯೇ ಉಕ್ರೇನ್ ಕದನವಿರಾಮಕ್ಕೆ ಪ್ರಚೋದಕವಾಗಬೇಕಿತ್ತು. ಯುರೋಪಿನಲ್ಲೇ ಈಗಾಗಲೇ ಕಂಡ ಹವಾಮಾನ ಬದಲಾವಣೆಯ ಅನಾಹುತಗಳು ಸಹ ಈ ತುರ್ತು ಮೂಡಿಸಲಿಲ್ಲ. ಬದಲಿಗೆ ಇಂಧನ ಬಿಕ್ಕಟ್ಟು ಪರಿಹರಿಸಲು ಹವಾಮಾನ ಬದಲಾವಣೆಯ ಅನಾಹುತಗಳನ್ನು ಹೆಚ್ಚಿಸುವ ತುರ್ತು ಕ್ರಮಗಳನ್ನು ಯು.ಕೆ ಮತ್ತು ಯುರೋ ಕೂಟ ಕೈಗೊಂಡಿದೆ. ರಶ್ಯಾದ ಪ್ರಾಕೃತಿಕ ಅನಿಲದ ಕೊರತೆಯಿಂದಾಗಿ ಮುಚ್ಚಲು ಸಿದ್ಧವಾಗಿದ್ದ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಯು.ಕೆ, ಫ್ರಾನ್ಸ್, ಜರ್ಮನಿ, ನಾರ್ವೆ, ಫಿನ್ ಲ್ಯಾಢ್ ಗಳಲ್ಲಿ ಸಕ್ರಿಯಗೊಳಿಸಲಾಗಿದೆ. ಇಂಡೋನೇಶ್ಯಾದಿಂದ ಕಲ್ಲಿದ್ದಲು ಆಮದು ಮಾಡಲಾಗುತ್ತಿದೆ. ದ್ರವೀಕೃತ ಪ್ರಾಕೃತಿಕ ಅನಿಲ (ಎಲ್.ಎನ್.ಜಿ) ಪೂರೈಕೆ, ಶೇಖರಣೆಗೆ ಭಾರೀ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಜರ್ಮನಿ ಇಂತಹ ದೈತ್ಯ ಸ್ಥಾವರವನ್ನು 6 ತಿಂಗಳಲ್ಲೇ ಸ್ಥಾಪಿಸಿದೆ. ಕಟಾರ್ ಎಲ್.ಎನ್.ಜಿ ಪೂರೈಕೆಯ ಹಲವು ದೀರ್ಘ ಒಪ್ಪಂದಗಳನ್ನು ಮಾಡಿಕೊಂಡಿದೆ.
ಕಳೆದ COP ಸಮ್ಮೇಳನದಲ್ಲಿ ಭಾರತ, ಚೀನಾ ಗಳು ಹೊಸ ಕಲ್ಲಿದ್ದಲು ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಬಾರದು, ಹಳೆಯವನ್ನು ಬೇಗ ಮುಚ್ಚಬೇಕೆಂದು ಶ್ರೀಮಂತ ದೇಶಗಳು ತೀವ್ರ ಒತ್ತಡ ತಂದಿದ್ದವು. ಆದರೆ ಅವು ಬಳಸುವ ತೈಲ, ಪ್ರಾಕೃತಿಕ ಅನಿಲ ಸ್ಥಾವರಗಳಿಗೆ ಇದೇ ನೀತಿ ಅನ್ವಯಿಸಲು ತಯಾರಿಲ್ಲದ ಇಬ್ಬಗೆ ಧೋರಣೆ ತೋರಿಸಿದ್ದವು. ಆದರೆ ಅಭಿವೃದ್ಧಿಶೀಲ ದೇಶಗಳು ಹಸಿರು ಪುನರ್ನವಿಕರಿಸಬಹುದಾದ ಶಕ್ತಿ ಮೂಲಗಳನ್ನು ಮಾತ್ರ ಬಳಸಬೇಕು ಎಂದು ತಾಕೀತು ಮಾಡಿದ್ದವು. ಇದರ ಫಲವಾಗಿಯೇ ಎಂಬಂತೆ ಈ ಬಾರಿ “ಪುನರ್ನವೀಕರಿಸಬಹುದಾದ” ಬದಲು “ಕಡಿಮೆ ಸೂಸುವಿಕೆ”ಯ ಶಕ್ತಿ ಮೂಲಗಳನ್ನು ಬಳಸಬೇಕು ಎಂದು ಹೇಳಿಕೆ ಸೂಚಿಸುತ್ತದೆ. ಸೂಸುವಿಕೆ ಹೆಚ್ಚಿರುವ ಪಳೆಯುಳಿಕೆ ಇಂಧನ ಗಳನ್ನು ಕ್ರಮೇಣ ಕಡಿಮೆ ಮಾಡುವುದನ್ನು ಅಜೆಂಡಾದಿಂದಲೇ ಬಿಟ್ಟಿರುವುದು ತಾಪಮಾನ ಏರಿಕೆ ಮಿತಿಗೊಳಿಸುವ ಅಜೆಂಡಾಕ್ಕೆ ಆಘಾತ ತರಲಿದೆ. ಹವಾಮಾನ ಬದಲಾವಣೆಯ ಪ್ರಕೋಪ ತಡೆಯುವ ಜಾಗತಿಕ ಕಾರ್ಯಾಚರಣೆಯಲ್ಲಿ ಒಟ್ಟಾರೆಯಾಗಿ ಹಿನ್ನಡೆಯೇ ಆಗಿದೆ ಎನ್ನಬೇಕು. ಇದು ಮುಂದೆ ಇನ್ನಷ್ಟು ಹೆಚ್ಚಿನ ‘ನಷ್ಟ’ಕ್ಕೆ ಕಾರಣವಾಗಬಹುದೇ?