ನಾರಾಯಣ ಗುರು ನೆನೆಯುತ್ತಾ….  ʻಅವರು ಎಲ್ಲರನ್ನೂ ಒಂದಾಗಿ ಕಂಡವರುʼ

“ಮನುಷ್ಯರನ್ನು ಮನುಷ್ಯರಂತೆ ಬದುಕಲು ಬಿಡುವ ಧರ್ಮವೇ ನಿಜವಾದ ಧರ್ಮ. ಎಲ್ಲ ಧರ್ಮಗಳ ಸಾರ ದಯೆ, ಕರುಣೆ, ಕ್ಷಮೆ, ಮೈತ್ರಿ. ಇವೆಲ್ಲದರ ಸಂಗಮ ಶಕ್ತಿ ಮನುಷ್ಯ ಹೃದಯದಲ್ಲಿದೆ. ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ. ದೇವರಿಗಾಗಿ, ಧರ್ಮಕ್ಕಾಗಿ ಹೋರಾಟ ಬಲಿದಾನದ ಅಗತ್ಯವಿಲ್ಲ. ನಮ್ಮ ಶಿವನನ್ನು ನಾವು ಪೂಜಿಸುವ’ ಎಂದು ನದಿಯ ಕಲ್ಲನ್ನು ತಂದು ಕಣ್ಣೀರಿನ ಅಭಿಷೇಕದ ಮೂಲಕ ಅರವಿಪುರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ನಾರಾಯಣ ಗುರು ಅವರು ಧಾರ್ಮಿಕ ಸ್ವಾತಂತ್ರ್ಯ ನೀಡಿದರು.

ನಾರಾಯಣ ಗುರು ಜನ್ಮದಿನವಾಗಿದ್ದು, ಅವರ ಸಾಧನೆಗಳನ್ನು ನೆನೆಯುತ್ತಾ, ಸಮಾಜ ಸುಧಾರಣೆಯಲ್ಲಿ ಅವರ ಗುರಿ ಸಾಧನೆಯಲ್ಲಿ ಹಲವು ಮಹತ್ತರ ಕಾರ್ಯಗಳನ್ನು ಕೈಗೊಂಡದವರು. ಕೇರಳದಲ್ಲಿ ಜನಿಸಿದ ನಾರಾಯಣ ಗುರು, ಬಾಲ್ಯದಲ್ಲೇ ಭವಿಷ್ಯದ ಸ್ಪಷ್ಟ ನಿಲುವು ಹೊಂದಿದ್ದರು. ಜನರಲ್ಲಿ ಸ್ವಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಗುರುಗಳು, ನೂರಾರು ಸಾವಿರಾರು ಜನರಿಗೆ ಶಿಕ್ಷಣ ಕೊಡಿಸಿದರು. ಎಲ್ಲ ವರ್ಗದ ಜನರು ಒಟ್ಟಿಗೆ ಕಲಿಯಬೇಕು ಎಂದು ಪ್ರೇರೇಪಿಸಿದರು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು.

ನಾರಾಯಣ ಗುರುಗಳು ಒಂದು ಧರ್ಮದ ಅಥವಾ ಒಂದು ಜಾತಿಗೆ ಮಾತ್ರ ಸೀಮಿತರಾಗಿರಲಿಲ್ಲ. ನಾರಾಯಣ ಗುರು ಹುಟ್ಟಿದ್ದು ಸರ್ವಧರ್ಮದ, ಬಹು ಸಂಸ್ಕೃತಿಯ ನೆಲೆಯಾದ ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದ ಚೆಂಬಿಳಂತಿ ಎಂಬ ಗ್ರಾಮದಲ್ಲಿ.

1854ನೇ ಇಸವಿ ಶ್ರಾವಣ ಮಾಸದ ಶತಭಿಷ ನಕ್ಷತ್ರದಲ್ಲಿ ಓಣಂ ಹಬ್ಬದ ಮೂರನೇ ದಿನದಂದು ತಂದೆ ಮಾದನ್‌ ಆಶಾನ್‌ ತಾಯಿ ಕುಟ್ಟಿ ಅಮ್ಮಾಳ್‌ ಅವರು. ಅವರು ಮಗುವಿಗೆ ನಾರಾಯಣ ಎಂಬ ಹೆಸರಿಟ್ಟು ಪ್ರೀತಿಯಿಂದ ‘ನಾಣು’ ಎಂದು ಕರೆಯುತ್ತಿದ್ದರು. ನಾಣು ಹುಟ್ಟಿದ್ದು ಬ್ರಿಟೀಷ್‌ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ. ಆಗಿನ ಕಾಲದಲ್ಲಿ ಅತ್ಯಂತ ಪ್ರಬಲವಾಗಿ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಆಚರಣೆಗಳು ಎಗ್ಗಿಲ್ಲದೆ ಆಚರಣೆಗೊಳ್ಳುತ್ತಿದ್ದ ಕಾಲವದು.

ಅವರನ್ನು ಓರ್ವ ಸಮಾಜ ಸುಧಾರಕರಾಗಿ ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ. ಲೋಕ ಗುರುವಾಗುವರು. ಅವರು ಹೇಳಿದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ. ಅವರ ನೀತಿ ಮುಖ್ಯ. ಚತುರ್ವರ್ಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆಯ ಸಾರವಾಗಿದೆ.

ಅದ್ವೈತದ ಸಾರದಲ್ಲಿ ತಮ್ಮ ದಾರ್ಶನಿಕತೆಯನ್ನು ಪ್ರತಿಪಾದಿಸಿದ ನಾರಾಯಣ ಗುರುಗಳು, ಎಲ್ಲರನ್ನೂ ಒಂದಾಗಿ ಕಂಡವರು. ಇರುವವನು ಒಬ್ಬನೇ ಪರಮಾತ್ಮ, ಒಂದೇ ತತ್ವ, ಒಂದೇ ಸತ್ಯ. ಎಲ್ಲವೂ ಒಂದೇ ಅಂದಮೇಲೆ ಭೇದ-ಭಾವವಿಲ್ಲ, ಮೇಲು ಕೀಳಿಲ್ಲ. ಎಲ್ಲರಲ್ಲಿರುವ ಪರಮಾತ್ಮ ಒಬ್ಬನೇ ಅಂದಮೇಲೆ, ಅಲ್ಲಿ ಮೇಲು ಕೀಳೆಂಬ ಮಾತೆಲ್ಲಿ ಎಂದು ಪ್ರಶ್ನಿಸಿದರು.

ಮಾನವೀಯತೆ ಮಲಗಿ, ಮೂಢನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್‌ ಮನವತಾವಾದಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಅವರು ಸಮಾಜದ ಕಣ್ಣರಳಿಸಿದ ಮಹಾನ್‌ ವ್ಯಕ್ತಿ. ಅವರು ಸತ್ತರೂ ಸಮಾಜಕ್ಕೆ ಸಾರಿದ ಸಾಮಾಜಿಕ ಹಾಗೂ ಮನವೀಯ ಮೌಲ್ಯಗಳು ಸಾಯಬಾರದು. ಅದು ಎಂದೆಂದಿಗೂ ಜೀವಂತ. ಇದು ನಾರಾಯಣ ಗುರುಗಳ ಚಿಂತನೆಯನ್ನು ನೋಡಿ ಹೇಳಿರುವ ಮಾತಿನಂತಿದೆ.

ಅಸ್ಪೃಶ್ಯತೆ ಎಂಬ ಅನಿಷ್ಠ ಆಚರಣೆ ನಿರ್ಮೂಲನೆಗೆ ಅವರ ಪ್ರಯತ್ನ ಅವಿರತವಾದದ್ದು. ಇದಕ್ಕಾಗಿ ಕಂಡುಕೊಂಡ ಮಾರ್ಗ ‘ಧರ್ಮ’. ರಾಜಕೀಯ ನಂಟಿನೊಂದಿಗೆ ಅರ್ಥಹೀನವಾಗಿರುವ ಧರ್ಮ ಎಂಬ ಪದವು, ನಾರಾಯಣ ಗುರುಗಳ ಆಧ್ಯಾತ್ಮದೊಂದಿಗೆ ಸೇರಿಕೊಂಡಾಗ ಅರ್ಥಗರ್ಭಿತ ಎಂದೆನಿಸಿಕೊಳ್ಳುತ್ತದೆ. ಸಮಾಜದಲ್ಲಿ ಮೇಲು-ಕೀಳುಗಳೆಂಬ ಕಷ್ಟಕೋಟೆಗಳು ದಮನಿತರನ್ನು ಜಡಿಯುತ್ತಿದ್ದಾಗ, ಪರಿಹಾರೋಪಾಯದ ಮಾರ್ಗದರ್ಶಕರಂತೆ ಬಂದವರು ನಾರಾಯಣ ಗುರುಗಳು.

ಆಗಿನ ದಿನಗಳಲ್ಲಿ ‘ಮಡಿ’ಯ ವಿರುದ್ಧ ಕ್ರಾಂತಿಯನ್ನು ಹರಡಿದವರು. ಬ್ರಿಟೀಷ್‌ ಅರಸೊತ್ತಿಗೆಯ ಕಪಿಮುಷ್ಟಿಯಲ್ಲಿದ ಕಾಲವದು. ಮಡಿವಂತಿಕೆಗೆ ಏನೂ ಕಮ್ಮಿ ಇರಲಿಲ್ಲ. ಹಲವು ಅನಿಷ್ಟ ಆಚರಣೆಗಳು ತಾಂಡವವಾಡುತ್ತಿದ್ದ ಕಾಲವದು. ಈದನ್ನೆಲ್ಲ ನೋಡಿ ಬೇಸತ್ತ ಗುರುಗಳು ಇದನ್ನು ಹಿಮ್ಮೆಟ್ಟುವಲ್ಲಿ ಮುಂದಡಿ ಇಟ್ಟರು.

“ಕೊಲುವವನೆ ಮಾದಿಗ ಹೊಲಸ ತಿಂಬವನೆ ಹೊಲೆಯ’ ಎಂಬ ಶರಣರ ವಚನದಂತೆ ಜಾತಿ ಹುಟ್ಟಿನಿಂದ ಬರುವುದಿಲ್ಲ. ಬದುಕಿನ ನೀತಿಯಿಂದ ಬರುತ್ತದೆ. ಸಂಸ್ಕಾರವೇ ಸಂಸ್ಕೃತಿಯಾಗಿ ಪರಿವರ್ತನೆ ಆಗುವಂತೆ ಆಚಾರ, ವಿಚಾರ, ಜ್ಞಾನದ ಪೊರೆಯೊಳ ಗಡೆ ನಿಜ ಜಾತಿ ಅಡಗಿದೆ ಎನ್ನುವುದನ್ನು ನಾರಾಯಣ ಗುರುಗಳ ಬದುಕು, ಬರಹ, ಸಾಧನೆ, ಬೋಧನೆ ಲೋಕಮುಖಕ್ಕೆ ತೋರಿಸಿಕೊಟ್ಟಿದೆ.

ಸಂಸ್ಕೃತ, ಮಲೆಯಾಳ, ತಮಿಳು ಭಾಷೆಗಳಲ್ಲಿ 79 ಕೃತಿಗಳನ್ನು ರಚಿಸಿದ ನಾರಾಯಣ ಗುರುಗಳು ಎಲ್ಲ ಕಡೆಯಲ್ಲೂ ಹೇಳಿರುವುದು ಹಸಿವು, ಬಡತನ, ಸ್ವಾಭಿಮಾನ, ಸಮಾನತೆಯ ಬಗ್ಗೆ. ಅವರ ಬದುಕು ಪವಾಡವಲ್ಲ, ಪರಿಶ್ರಮ. ಸ್ವಾಮಿ ಎಂದುಕೊಂಡು ಪೀಠದಲ್ಲಿ ಕೂರಲಿಲ್ಲ, ತಲೆ ಮೇಲೆ ಕಿರೀಟ ಇಡಲಿಲ್ಲ. ಸಮಾಜದಲ್ಲಿ ತಲೆಯೆತ್ತಿ ನಡೆಯಲಾರದವನಿಗೆ ಸಾಮಾಜಿಕ ನ್ಯಾಯ ಕೊಡುವುದೇ ನನಗೆ ಪೀಠ. ಅವರ ಬದುಕಿನಲ್ಲಿ ಬೆಳಕು ಕಂಡು ಮುಖದಲ್ಲಿ ನಗುವನ್ನು ಕಾಣುವುದೇ ನನಗೆ ಕಿರೀಟ ಎಂದು ಕನ್ನಡಿಯಲ್ಲಿ ನಿಮ್ಮ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದರು.

ನಾರಾಯಣ ಗುರುಗಳು ಸಂಸ್ಕೃತ ಭಾಷೆಯಲ್ಲಿ ಬರೆದ “ಮಾಯಾದರ್ಶನಂ’ʼ ಎಂಬ ಗ್ರಂಥದಲ್ಲಿ “ಹಗ್ಗದೊಳ್‌ ಸರ್ಪಮಂ ಕಾಣಲ್‌ ಪೋದೊಡೆ ಸರ್ಪಮಿಲ್ಲ ಬರಿ ಹಗ್ಗವಿರ್ಪುದುಂ ಎಂದು ಅರಿವಪ್ಪ ತೆರದೊಳ್‌ ಆತ್ಮದೊಳ್‌ ಕಾಂಬ ಜಡಮಿದು ಸತ್ಯವಲ್ಲ ಆತ್ಮವದು ಸತ್ಯ ಎಂದು ಅದಾವ ಶಕ್ತಿ ತೋರ್ಪುದೋ ಆ ಶಕ್ತಿಯದು ವಿದ್ಯೆಯೆಂದು ಅರಿಯಲಕ್ಕುಂ’. ಎಂದು ಉಲ್ಲೇಖಿಸಿದ್ದಾರೆ.

ನಾರಾಯಣ ಗುರುಗಳು “ಅಸತ್ಯ ದರ್ಶನ’ ಎಂಬ ಸಂಸ್ಕೃತ ಕೃತಿಯಲ್ಲಿ ಈ ಲೋಕದಲ್ಲಿ ಸತ್ಯ ಎಂಬುದು ಒಂದೇ, ಎರಡಿಲ್ಲ. ಪಂಚೇಂದ್ರಿಯಗಳ ಬಲೆಯಲ್ಲಿ ಸಿಲುಕಿ ಮನುಷ್ಯ ಜೀವಕ್ಕೆ ಅಸತ್ಯವೂ ಸತ್ಯದಂತೆ ಕಾಣುತ್ತದೆ. ಗುಡ್ಡದ ಸಾಮಾನ್ಯ ಕಲ್ಲೊಂದು ಶಿಲ್ಪಿಯ ಹೃದಯದ ಮೂಲೆಯಲ್ಲಿದ್ದ ದೇವರ ಕಲ್ಪನೆಯ ಮೂಲಕ ಕಲೆಯ ಬಲೆಯಲ್ಲಿ ಒಂದೊಂದು ಹೊಡೆತಕ್ಕೆ ವಿವಿಧ ದೇವರ ಮೂರ್ತಿಗಳಾಗುತ್ತದೆ. “ದೇವರು’ ಎನ್ನುವುದು ಶಿಲ್ಪಿಯೊಳಗಿನ ಆತ್ಮದಲ್ಲಿರುವ ರೂಪ. ಒಬ್ಬನೇ ದೇವರೆಂಬ ಈ ಸತ್ಯವನ್ನು ಹೃದಯಕ್ಕೆ ಮುಟ್ಟುವಂತೆ ಹೇಳಿದ ನಾರಾಯಣ ಗುರುಗಳು ಕೃಷಿ  ಮೂಲದ, ವೈದ್ಯ ಮೂಲದ ಪಂಡಿತ ಪರಂಪರೆಯ ತಾಯಿ ಬೇರಿನಿಂದ ಚಿಗುರಿದವರು.

ನಾವು ದೇವರನ್ನು ಕಾಣಬೇಕಾದುದು ಮೂರ್ತಿಯಲ್ಲಿ ಅಲ್ಲ, ದೇವಸ್ಥಾನದಲ್ಲಿ ಅಲ್ಲ. ಭಜನೆ, ಬಲಿ, ಮೆರವಣಿಗೆಗಳಲ್ಲಿ ಅಲ್ಲ. ನಮ್ಮ ಒಳಗಿನ ಗುಡಿಯನ್ನು ಅರಿತುಕೊಳ್ಳುವುದರಲ್ಲಿ. ನಮ್ಮ ವಿದ್ಯೆ, ಸಂಘಟನೆ ನಮ್ಮ ಉದ್ಧಾರಕ್ಕೆ, ಸಮಾಜದ ಒಳಿತಿಗೆ. ಇನ್ನೊಬ್ಬರಿಗೆ ನೋವು ಕೊಡುವುದಕ್ಕಲ್ಲ. ಶಾಲೆಗಳು ವಿದ್ಯಾಮಂದಿರಗಳಾಗಬೇಕು. ಜ್ಞಾನಕ್ಕೆ ಜಾತಿಯಿಲ್ಲ. ವಿದ್ಯೆಯಿಂದ ಮಾತ್ರ ಉದ್ಧಾರ, ಸಮಾನತೆ ಸಾಧ್ಯ ಎಂದರು.

ಆರಂಭದ ಗುರುಗಳಾದ ಮೂತ್ತ ಪಿಳ್ಳೆ ಆಶಾನ್‌, ಸುಂದರ ಪಿಳ್ಳೆ ಆಶಾನ್‌, ಇವರಿಂದ ಮಳೆಯಾಳ ಸಂಸ್ಕೃತ ಅಭ್ಯಾಸ, ಪುರಾಣ ಜ್ಞಾನ, ರಾಮಾಯಣ, ಭಾರತ, ಭಾಗವತವೇ ಮೊದಲಾದ ಧರ್ಮಗ್ರಂಥಗಳ ಜ್ಞಾನ ದೊರೆಯಿತು. ಕೇರಳದ ಕರುನಾಗಪಳ್ಳಿಯ ಚೆರುವನ್ನಾರ್‌ ಮನೆತನದ ಶ್ರೀರಾಮನ್‌ ಆಶಾನ್‌ ಎಂಬ ಗುರುಗಳಲ್ಲಿ ಅಗತ್ಯ ಶಿಕ್ಷಣವೂ ಸಿಕ್ಕಿತು. ಅಧ್ಯಾತ್ಮ, ಆಯುರ್ವೇದ, ಜ್ಯೋತಿಷ್ಯ ಶಾಸ್ತ್ರ, ವೇದ ಉಪನಿಷತ್, ಕಾವ್ಯ, ನಾಟಕ, ವ್ಯಾಕರಣ, ತರ್ಕಶಾಸ್ತ್ರ ಹೀಗೆ ಸಕಲ ವಿದ್ಯೆಗಳನ್ನೂ ಕಲಿತು ಆಧ್ಯಾತ್ಮದ ಗುರುವಾದರು. ಸಮಾಜದೊಂದಿಗೆ ಬೆರೆತು ಸಾಮಾನ್ಯನ ಬದುಕನ್ನು ಅರಿತು, ಬದುಕಿನ ಪಾಠ ಕಲಿತರು. ಸಾಮಾನ್ಯ ‘ನಾಣು’‌ ಎಂಬ ಬಾಲಕನಾಗಿದ್ದವರು ಬ್ರಹ್ಮಜ್ಞಾನವನ್ನು ಪಡೆದು, ನಾರಾಯಣ ಗುರುವಾದರು.

1928ನೇ ಇಸವಿ ಸೆಪ್ಟಂಬರ್‌ 20ರಂದು ಕೇರಳದ ವರ್ಕುಳದ ಶಿವಗಿರಿಯಲ್ಲಿ ಲೋಕದ ಬೆಳಕು ಸಮಾಧಿಯಾಗಿ ಬೆಳಗಿತು. ದೇವರು ಧರ್ಮದ ಬೆಳಕಿನಿಂದ ವಂಚಿತರಾದ ಜನಕ್ಕೆ ದೇವರನ್ನು ಕೊಟ್ಟ ನಾರಾಯಣ ಗುರುಗಳು ಯೋಗನಿದ್ರೆಗೆ ಜಾರಿದ ದಿನವದು. ಸಮಾಧಿಯಾಗುವ ದಿನ ‘ನನ್ನನ್ನು ಎದ್ದು ಕೂರಿಸಿ ಯೋಗ ವಾಸಿಸ್ಟ ಪಾರಾಯಣ ಮಾಡಿ ಎಂದರಂತೆ. ಪಾರಾಯಣ ‘ಮೋಕ್ಷ ಕಾಂಡ’ಕ್ಕೆ ಬರುವಾಗ ಪ್ರಾಣ ಹೋಯಿತಂತೆ. ಅವರು ಬದುಕಿರುವಾಗ ಹೇಳಿದಂತೆ ಯೋಗ ಸ್ಥಿತಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಅಂದು ಸಮಾಧಿಯಲ್ಲಿ ಬೆಳಗಿದ ಬೆಳಕು ಇಂದಿಗೂ ಬೆಳಗುತ್ತಿದೆ. ಅಲ್ಲಿ ಗುರು ಮೂರ್ತಿಗೆ. ಪೂಜೆಯಿಲ್ಲ ಪಾದಪೂಜೆ ಮಾತ್ರ.

ನಾರಾಯಣ ಗುರುಗಳ ಕೊನೆಯ ಕಾಲದಲ್ಲಿ ಅವರು ತಿರುಗುತ್ತಿದ್ದ ಸೈಕಲ್‌ ರಿಕ್ಷಾ ಈಗಲೂ ಶಿವಗಿರಿಯಲ್ಲಿದೆ. ತೀರ್ಥಾಟನೆಯ ಸಂದರ್ಭದಲ್ಲಿ ಅದನ್ನು ಮೆರವಣಿಗೆಯಲ್ಲಿ ತರಲಾಗುತ್ತಿದೆ. ತೀರ್ಥಾಟನೆಯ ಹೊತ್ತಿಗೆ 5 ಲಕ್ಷಕ್ಕೂ ಅಧಿಕ ಜನ ಸೇರುತ್ತಾರೆ. 1956ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ ನೆಹರು, 1982ರಲ್ಲಿ ಪ್ರಧಾನಿ ಇಂದಿರಾಗಾಂಧಿ ತೀರ್ಥಾಟನೆಗೆ ಬಂದಿದ್ದರು. ಇಂದಿರಾ ಗಾಂಧಿಯವರು ನಾರಾಯಣ ಗುರುಗಳ ಬಗ್ಗೆ ತಿಳಿದು ‘ಇದುವರೆಗೆ ಇಂತಹ ಮಹಾತ್ಮನನ್ನು ಲೋಕ ತಿಳಿಯದೆ ಹೋಯಿತಲ್ಲಾ’ ಎಂದಿರುವುದು ಗುರುಗಳ ವ್ಯಕ್ತಿತ್ವದ ಆಕರ್ಷಣೆಗೆ ನಿದರ್ಶನ.

Donate Janashakthi Media

Leave a Reply

Your email address will not be published. Required fields are marked *