ನಾರಾಯಣ ಗುರು ಬ್ರಾಹ್ಮಣ ಕೇಂದ್ರಿತ ವೈದಿಕ ಪರಂಪರೆ ತಿರಸ್ಕರಿಸಿದವರು

ರಾಜೇಂದ್ರ ಚೆನ್ನಿ

ಹಾಗಿದ್ದರೆ ನಾವು ಏನು ಮಾಡಬೇಕು? ಜನವರಿ 26ರಂದು ಕೇರಳದಲ್ಲಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪರ್ಯಾಯವಾಗಿ ನಾರಾಯಣ ಗುರು ಅವರಿಗೆ ಗೌರವ ತೋರಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಅವರ ಚಿಂತನೆ, ಸಮಾಜ ಸುಧಾರಣೆಯ ಕ್ರಮಗಳನ್ನು ನೆನಪು ಮಾಡಿಕೊಳ್ಳಬೇಕು. ಅಲ್ಲದೆ ‘ನಮ್ಮ ಸಂಸ್ಕೃತಿ, ನಮ್ಮ ನಿರ್ಧಾರ’ ಎನ್ನುವ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ರವಾನಿಸಬೇಕು. ಕೇಂದ್ರ ಸರಕಾರದ ನಿರ್ಧಾರವನ್ನು ಬೆಂಬಲಿಸುತ್ತಿರುವ ಕರ್ನಾಟಕದ ರಾಜಕೀಯ ಮುಖಂಡರು ದಲಿತ ದ್ವೇಷಿಗಳು ಹಾಗೂ ಹಿಂದುಳಿದ ಜಾತಿಗಳ ವಿರೋಧಿಗಳು ಎನ್ನುವುದನ್ನು ವ್ಯಾಪಕವಾಗಿ ಚರ್ಚಿಸಬೇಕು. ಈ ಮುಖಂಡರುಗಳಲ್ಲಿ ಕೆಲವರು ಸ್ವಜಾತಿ ದ್ವೇಷಿಗಳು ಇರುವುದನ್ನು ಅರ್ಥಮಾಡಿಕೊಳ್ಳಬೇಕು.

ಜನವರಿ 26ರ ಗಣರಾಜ್ಯೋತ್ಸವ ಆಚರಣೆಯಲ್ಲಿ ಕೇರಳವು ಸೇರಿದಂತೆ ನಾಲ್ಕು ರಾಜ್ಯಗಳು ಪ್ರದರ್ಶನಕ್ಕೆ ಎಂದು ಪ್ರಸ್ತಾವನೆ ಸಲ್ಲಿಸಿದ್ದ ಸ್ಥಬ್ಧ ಚಿತ್ರಗಳನ್ನು ಕೇಂದ್ರ ಸರಕಾರವು ತಿರಸ್ಕರಿಸಿದೆ. ಈಗ ಕೇವಲ 12 ರಾಜ್ಯಗಳ ಸ್ಥಬ್ಧ ಚಿತ್ರಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರ ಸರಕಾರದ ಅನಾಗರೀಕ ದಾರ್ಷ್ಟ್ಯ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಈ ನಿರ್ಧಾರಕ್ಕೆ ಯಾವ ಕಾರಣವನ್ನು ಸೂಚಿಸಿಲ್ಲ. ಅಲ್ಲದೆ ಸುದ್ದಿ ಮೂಲಗಳ ಪ್ರಕಾರ ಹೀಗೆ ಕೇರಳದ ಸ್ಥಬ್ಧಚಿತ್ರವನ್ನು ಕೇಂದ್ರ ಸರಕಾರವು ತಿರಸ್ಕರಿಸುತ್ತಿರುವುದು ಮೂರನೇ ಬಾರಿ. ತೀವ್ರ ಆಕ್ರೋಶವನ್ನು ಹುಟ್ಟಿಸಿರುವ ಸಂಗತಿಯೆಂದರೆ ಕೇಂದ್ರವು ತಿರಸ್ಕರಿಸಿದ ಸ್ಥಬ್ಧ ಚಿತ್ರವು ಮಹಾನ್ ಸಂತ ಹಾಗೂ ಸಮಾಜ ಸುಧಾರಕರಾದ ನಾರಾಯಣ ಗುರು ಅವರದು. ನಾರಾಯಣ ಗುರು ಭಾರತದ ಚರಿತ್ರೆಯಲ್ಲಿ ಕಂಡ ಅಪರೂಪದ ಆಧುನಿಕ ಸಂತರು. ಅನೇಕ ಹಿಂದುಳಿದ ಜಾತಿಗಳಿಗೆ ಆತ್ಮವಿಶ್ವಾಸವನ್ನು ತಂದುಕೊಟ್ಟು ಅವುಗಳಿಗೆ ಚಾರಿತ್ರಿಕವಾದ ಸಾಮಾಜಿಕವಾದ ಚಾಲನೆಯನ್ನು ತಂದುಕೊಟ್ಟ ಸಮಾಜ ಸುಧಾರಕರು. ಅವರ ಚಿಂತನೆ ಹಾಗೂ ಕ್ರಿಯಾಶೀಲತೆಗಳು ವಿಶ್ವದ ವಿದ್ವಾಂಸರ ಗಮನ ಸೆಳೆದಿವೆ. ಆದುದರಿಂದಲೇ ಕೇರಳದ ಸಂಸ್ಕೃತಿಯ ಹೆಮ್ಮೆಯ ಅವಿಭಾಜ್ಯ ಸಂಕೇತವಾಗಿರುವ ನಾರಾಯಣ ಗುರು ಅವರು   ಜಾತಿ, ಪಂಥಗಳನ್ನು ಮೀರಿ ಭಾರತೀಯ ಸಂಸ್ಕೃತಿಯ ಸಂಕೇತವೂ ಆಗಿದ್ದಾರೆ. ಕೇಂದ್ರ ಸರಕಾರದ ಪರಿಣತ ಸಮಿತಿಯ  ಅವಿವೇಕಿ ನಿರ್ಧಾರವು ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನವಾಗಿದೆ. ಉದ್ದೇಶಪೂರ್ವಕವಾಗಿ ಭಾರತದ ಹಿಂದುಳಿದ ಜಾತಿ ಜನಾಂಗಗಳಿಗೆ ಮಾಡಿದ ಅವಮಾನವೂ ಆಗಿದೆ.

ಕೇಂದ್ರದ ಸಮಿತಿಯ ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದನ್ನು ಅದೇ ಬಿಟ್ಟು ಕೊಟ್ಟಿದೆ. ನಾರಾಯಣ ಗುರು ಅವರ ಬದಲಾಗಿ ಶಂಕರಾಚಾರ್ಯರ ಸ್ಥಬ್ಧ ಚಿತ್ರವನ್ನು ಪ್ರದರ್ಶಿಸಬಹುದು ಎಂದು ಅದು ಸೂಚಿಸಿದೆ ಎಂದು ವರದಿಯಾಗಿದೆ. ನಾರಾಯಣ ಗುರು ಅವರು ತಮ್ಮದೇ ವಿಶಿಷ್ಟವಾದ ರೀತಿಯಲ್ಲಿ ಬ್ರಾಹ್ಮಣ ಕೇಂದ್ರಿತ ವೈದಿಕ ಪರಂಪರೆಯನ್ನು ತಿರಸ್ಕರಿಸಿದವರು. ಅಂದಿನ ಕಾಲದಲ್ಲಿ ಸಮಾಜದಲ್ಲಿ ಕೀಳು ಅನ್ನಿಸಿಕೊಂಡಿದ್ದ ಜಾತಿಗಳಿಗೆ ಆಧ್ಯಾತ್ಮಿಕವಾದ ಘನತೆ ಹಾಗೂ ಆತ್ಮವಿಶ್ವಾಸವನ್ನು ತಂದು ಕೊಟ್ಟರು. ಅಂದಿನ ಚರಿತ್ರೆಯ ಸಂದರ್ಭದಿಂದಾಗಿ ಬ್ರಾಹ್ಮಣ ವಿರೋಧಿ ಚಳುವಳಿಗೆ ಪರೋಕ್ಷವಾಗಿ ಸಮರ್ಥನೆಯನ್ನು ನೀಡಿದರು. ಅವರು ಸ್ವತಃ ಜಾತಿ, ಪಂಥಗಳನ್ನು ಮೀರಿದ ದಾರ್ಶನಿಕರು, ಆಸ್ತಿಕರು ಹಾಗೂ ಸಂತ ವ್ಯಕ್ತಿತ್ವದವರು. ಆದರೆ ಅವರು ಜೀವಿಸಿದ ಕಾಲದ ಯುಗಧರ್ಮದಿಂದಾಗಿ ಹಿಂದುಳಿದ ಜಾತಿಗಳ ವೈದಿಕೇತರ ಆಧ್ಯಾತ್ಮಿಕತೆಯ ಸಂಕೇತವಾದರು. ಶಂಕರಾಚಾರ್ಯರು ದಾರ್ಶನಿಕರು, ತತ್ವಜ್ಞಾನಿಗಳು ತಾತ್ವಿಕ ಜಿಜ್ಞಾಸೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದವರು. ಆದರೆ ಬೌದ್ಧ ಚಿಂತನೆಯನ್ನು ತಮ್ಮ ತತ್ವಜ್ಞಾನದಲ್ಲಿ ಬಳಸಿಕೊಂಡು ‘ಪ್ರಚ್ಛನ್ನ ಬೌದ್ದ’ರೆಂದು ಕರೆಸಿಕೊಂಡರೂ ಬೌದ್ಧ ಧರ್ಮದ ಹಿನ್ನಡೆಗೆ ಕಾರಣರಾದರು. ಅಲ್ಲದೆ ನಂತರದ ಕಾಲದಲ್ಲಿ ಮತ್ತು ಇಂದಿನ ಬಲಪಂಥೀಯ ವಲಯಗಳಲ್ಲಿ ಬ್ರಾಹ್ಮಣ ಕೇಂದ್ರಿತ ಹಿಂದು ಧರ್ಮದ ಸಂಕೇತವಾದರು. ಈ ವಲಯಗಳು ಅವರು ಜಾತಿ ವ್ಯವಸ್ಥೆ ಮತ್ತು ವರ್ಣ ವ್ಯವಸ್ಥೆಯನ್ನು ವಿರೋಧಿಸಲಿಲ್ಲವೆನ್ನುವ ಕಾರಣಕ್ಕೆ ಅವರನ್ನು ಹಿಂದುತ್ವದ ಸಂಕೇತವೆಂದು ಭಾವಿಸಿವೆ. ಇದು ಶಂಕರಾಚಾರ್ಯರಿಗೆ ಮಾಡಿದ ಅವಮಾನ. ಏಕೆಂದರೆ ಅವರ ಚಿಂತನೆಯನ್ನು ಒಪ್ಪದವರೂ ಕೂಡ ಶಂಕರಾಚಾರ್ಯರು ಶ್ರೇಷ್ಠ ತತ್ವಜ್ಞಾನಿಯೆಂದು ಒಪ್ಪುತ್ತಾರೆ. ಅಂಥವರನ್ನು ಹಿಂದುತ್ವದ ಸಂಕೇತವೆಂದುಕೊಳ್ಳುವ ಬಲಪಂಥೀಯರ ಸಾಂಸ್ಕೃತಿಕ ಅಜ್ಞಾನವು ಹಾಸ್ಯಾಸ್ಪದವಾಗಿದೆ. ಹೀಗಾಗಿ ಕೇರಳ ಸರಕಾರಕ್ಕೆ ನಾರಾಯಣ ಗುರುಗಳ ಬದಲಾಗಿ ಶಂಕರಾಚಾರ್ಯರ ಸ್ಥಬ್ಧಚಿತ್ರವಿರಲಿ ಎಂದು ಹೇಳಿದ ಅಧಿಕಾರಿಗಳಿಗೆ ಮತ್ತು ಅವರಿಗೆ ನಿರ್ದೇಶನ ಕೊಟ್ಟ ಬಲಪಂಥೀಯ ಸಂಘಟನೆಗಳಿಗೆ ಹಿಂದು ಧರ್ಮದ ಹಾಗೂ ಭಾರತದ ಬಗ್ಗೆ ಇರುವ ಅಜ್ಞಾನವು ಜಗತ್ತಿನಲ್ಲಿ ಇನ್ನಾರಿಗೂ ಇಲ್ಲ. ಅವರ ಲೆಕ್ಕಾಚಾರವೆಂದರೆ ಹಿಂದುಳಿದ ಜಾತಿಗಳ ಸಂತನನ್ನು ಅವಮಾನಿಸಿ ಬ್ರಾಹ್ಮಣ ಕೇಂದ್ರಿತ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿಯೆಂದು ಬಿಂಬಿಸುವುದು. ಅನಾವಶ್ಯಕವಾಗಿ ನಾರಾಯಣ ಗುರುಗಳು ಹಾಗೂ ಶಂಕರಾಚಾರ್ಯರನ್ನು ವಿರೋಧಿಗಳನ್ನಾಗಿ ಬಿಂಬಿಸುವುದು. ಭಾರತದ ಸಾಮಾನ್ಯ ಅಶಿಕ್ಷಿತ ವ್ಯಕ್ತಿಯು ನಾರಾಯಣ ಗುರುಗಳನ್ನು ಹಾಗೂ ಶಂಕರಾಚಾರ್ಯರನ್ನು ಸಮಾನ ಗೌರವದಿಂದ ನೋಡುತ್ತಾನೆ. ದಲಿತ ದ್ವೇಷ ಹಾಗೂ ಹಿಂದುಳಿದ ಜಾತಿಗಳ ಬಗೆಗಿನ ದ್ವೇಷವೇ ಬಲಪಂಥೀಯ ಚಿಂತನೆಯ ಮೂಲವಾಗಿರುವುದರಿಂದ ಇಂಥ ಅವಿವೇಕಿ ನಿರ್ಧಾರದ ಮೂಲಕ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡುತ್ತಿದೆ.

ಇಲ್ಲಿ ಎರಡು ಮುಖ್ಯ ಅಂಶಗಳಿವೆ ಮೊದಲನೆಯದು, ಕೇರಳ ಸಂಸ್ಕೃತಿ ಯಾವುದು ಅನ್ನುವುದು ಎನ್ನುವುದನ್ನು ಯಾರು ನಿರ್ಧಾರ ಮಾಡುವವರು? ಕೇರಳದ ಸಾಮಾನ್ಯ ಜನರಲ್ಲವೇ? ಅಥವಾ ಅಲ್ಲಿಯ ನಾಡು, ನುಡಿ ಸಂಸ್ಕೃತಿಗಳನ್ನು ಅಧ್ಯಯನ ಮಾಡುವವರು ಅಲ್ಲವೇ? ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಲಿಯ ಸರಕಾರವಲ್ಲವೆ? ಆದರೆ ಇಂದಿನ ಕೇಂದ್ರ ಸರಕಾರವು ಸಂಸ್ಕೃತಿಯೆಂದರೆ ಜಿ.ಎಸ್.ಟಿ. ಎಂದು ಅಂದುಕೊಂಡಿದೆ. ಅಲ್ಲದೆ ಅಪಾರವಾದ ವೈವಿಧ್ಯತೆ ಇರುವ ಭಾರತೀಯ ಸಂಸ್ಕೃತಿಯನ್ನು, ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನಿರ್ಧರಿಸುವ ಅಧಿಕಾರ ತನಗಿದೆ ಎನ್ನುವ ಭ್ರಮೆಯಲ್ಲಿದೆ. ಇಂದು ನಮ್ಮ ಕಾಲದ ಯಾವುದೇ ನಾಗರೀಕ ರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಸರಕಾರವು ಸಂಸ್ಕೃತಿಯ ವಿಷಯದಲ್ಲಿ ತಾನೇ ನಿರ್ಧಾರ ಕೈಗೊಳ್ಳುತ್ತದೆ ಎಂದರೆ ಅದು ಹಾಸ್ಯಾಸ್ಪದವಾಗಿದೆ. ಎರಡನೇಯ ಅಂಶವೆಂದರೆ, ಸಂವಿಧಾನದ ಪ್ರಕಾರ ಭಾರತವು ಒಕ್ಕೂಟ ಮಾದರಿಯನ್ನು ಒಪ್ಪಿಕೊಂಡಿರುವಾಗ ಕೇಂದ್ರದ ಏಕಪಕ್ಷೀಯ ನಿರ್ಧಾರವು ಸಂವಿಧಾನ ವಿರೋಧಿಯಾಗಿದೆ. ಇದರ ಆಚೆಗೆ ಭಾರತೀಯ ಸಂಸ್ಕೃತಿಯನ್ನು ಬ್ರಾಹ್ಮಣ ಸಂಸ್ಕೃತಿಯಾಗಿ ಬಿಂಬಿಸಲು ಹೊರಟಿರುವ ಬಲಪಂಥೀಯ ಚಿಂತನೆಯು ದಲಿತ ವಿರೋಧಿ ಹಾಗೂ ಹಿಂದುಳಿದ ಜಾತಿಗಳ ವಿರೋಧಿ ಎನ್ನುವುದನ್ನು ಈ ಪ್ರಸಂಗವು ಸಾಬೀತು ಮಾಡಿದೆ.

ಹಾಗಿದ್ದರೆ ನಾವು ಏನು ಮಾಡಬೇಕು? ಜನವರಿ 26ರಂದು ಕೇರಳದಲ್ಲಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪರ್ಯಾಯವಾಗಿ ನಾರಾಯಣ ಗುರು ಅವರಿಗೆ ಗೌರವ ತೋರಿಸುವ ಕಾರ್ಯಕ್ರಮಗಳನ್ನು ನಡೆಸಬೇಕು. ಅವರ ಚಿಂತನೆ, ಸಮಾಜ ಸುಧಾರಣೆಯ ಕ್ರಮಗಳನ್ನು ನೆನಪು ಮಾಡಿಕೊಳ್ಳಬೇಕು. ಅಲ್ಲದೆ ‘ನಮ್ಮ ಸಂಸ್ಕೃತಿ, ನಮ್ಮ ನಿರ್ಧಾರ’ ಎನ್ನುವ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ರವಾನಿಸಬೇಕು. ಕೇಂದ್ರ ಸರಕಾರದ ನಿರ್ಧಾರವನ್ನು ಬೆಂಬಲಿಸುತ್ತಿರುವ ಕರ್ನಾಟಕದ ರಾಜಕೀಯ ಮುಖಂಡರು ದಲಿತ ದ್ವೇಷಿಗಳು ಹಾಗೂ ಹಿಂದುಳಿದ ಜಾತಿಗಳ ವಿರೋಧಿಗಳು ಎನ್ನುವುದನ್ನು ವ್ಯಾಪಕವಾಗಿ ಚರ್ಚಿಸಬೇಕು. ಈ ಮುಖಂಡರುಗಳಲ್ಲಿ ಕೆಲವರು ಸ್ವಜಾತಿ ದ್ವೇಷಿಗಳು ಇರುವುದನ್ನು ಅರ್ಥಮಾಡಿಕೊಳ್ಳಬೇಕು.

ಈ ಚರ್ಚೆಯು ಇಲ್ಲಿಗೆ ನಿಲ್ಲಬಾರದು. ಇಂದಿನ ಸಂದರ್ಭದಲ್ಲಿ ಸಂಸ್ಕೃತಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಅತ್ಯಂತ ಅಲ್ಪಸಂಖ್ಯಾತರಿಗೆ ಸೇರಿದ ವೈದಿಕ ಸಂಸ್ಕೃತಿಯನ್ನು ಮೂಲತಃ ಅವೈದಿಕ ಪರಂಪರೆಗಳ ಜನಸಮುದಾಯಗಳ ಮೇಲೆ ಹೇರಲಾಗುತ್ತಿದೆ. ಈ ಪ್ರಯತ್ನದ ಭಾಗವಾಗಿ ನಾರಾಯಣ ಗುರುಗಳಂಥ ಜನಪರಂಪರೆಯ ಶ್ರೇಷ್ಠ ಸಂತರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗುತ್ತಿದೆ. ಆದ್ದರಿಂದ ಯಾವುದು ನಮ್ಮ ಸಂಸ್ಕೃತಿ ಅಲ್ಲವೆನ್ನುವುದನ್ನು ಖಚಿತವಾಗಿ ಹೇಳಬೇಕಾಗಿರುವ ಅವಶ್ಯಕತೆಯಿದೆ.

ನಾರಾಯಣ ಗುರುಗಳು ಅದ್ವೈತ ತತ್ವಜ್ಞಾನದಲ್ಲಿ ಅಪಾರವಾದ ಶ್ರದ್ಧೆಯುಳ್ಳವರು. ಶಂಕರಾಚಾರ್ಯರು ಬರೆದ ಭಾಷ್ಯವನ್ನು ಗೌರವಿಸಿದವರು. ವೈಕಮ್ ಸತ್ಯಾಗ್ರಹದ ಪ್ರಕರಣದ ಸಂಬಂಧ (ಇಂದಿನ) ಕೇರಳಕ್ಕೆ ಬಂದಿದ್ದ ಗಾಂಧಿ ನಾರಾಯಣ ಗುರುಗಳ ಆಶ್ರಮದಲ್ಲಿ ತಂಗಿ ಅವರೊಡನೆ ದೀರ್ಘವಾದ ಸಂಭಾಷಣೆ ನಡೆಸುತ್ತಾರೆ. ನಾರಾಯಣ ಗುರುಗಳು ಸಂಸ್ಕೃತದಲ್ಲಿ, ಗಾಂಧಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ವರ್ಣವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಾರೆ. ಸಂಸ್ಕೃತದಲ್ಲಿ ಮಾತನಾಡುವ ನಾರಾಯಣ ಗುರುಗಳು ವರ್ಣ ಹಾಗೂ ಜಾತಿ ವ್ಯವಸ್ಥೆಯ ಬಗೆಗಿನ ತಮ್ಮ ಚಿಂತನೆಯಲ್ಲಿ ಗಾಂಧಿಯವರಿಗಿಂತ ಆಧುನಿಕರು ಹಾಗು ಹೆಚ್ಚು ವಾಸ್ತವಿಕ ಜ್ಞಾನವುಳ್ಳವರಾಗಿದ್ದರು. ನಾರಾಯಣ ಗುರುಗಳನ್ನು ಭೇಟಿಯಾದ ಮೇಲೆ ಆ ಭೇಟಿ ತಮ್ಮ ಜೀವನದ ಅಮೂಲ್ಯ ಗಳಿಗೆ ಎಂದು ಗಾಂಧಿ ಹೇಳಿದರು. ಅವರ ಹಾಗೆಯೆ ಗುರುಗಳನ್ನು ಭೇಟಿಯಾಗಿದ್ದ ರವೀಂದ್ರನಾಥ ಟಾಗೋರ್ ಅವರು “ಆಧ್ಯಾತ್ಮದಲ್ಲಿ ನಾರಾಯಣ ಗುರುಗಳಿಗೆ ಹೋಲಿಸಬಹುದಾದವರು ಯಾರೂ ಇಲ್ಲ” ಎಂದು ಹೇಳಿದರು. ಹಾಗಿದ್ದರೆ ನಮ್ಮ ಕೇಂದ್ರ ಸರಕಾರ ಮಾತ್ರ ನಾರಾಯಣ ಗುರುಗಳು ಸ್ಥಬ್ಧ ಚಿತ್ರವು ಬೇಡವೆಂದು ಏಕೆ ಹೇಳುತ್ತಿದೆ? ಹೀಗೆ ಹೇಳುವ ಸರಕಾರಕ್ಕೆ ಭಾರತೀಯ ಸಂಸ್ಕೃತಿಯ ಪ್ರಾಥಮಿಕ ಪರಿಚಯವಾದರೂ ಇದೆಯೇ?

Donate Janashakthi Media

Leave a Reply

Your email address will not be published. Required fields are marked *