ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ʻನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣʼವೆಂದು ವಾಟ್ಸಾಪ್ ಸ್ಟೇಟಸ್ ಹಾಕಿ ಪಟ್ಟಣ ಪಂಚಾಯತಿ ಸದಸ್ಯೆ ಜುಬೇದಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಜುಬೇದಾ ಅವರನ್ನು ಎನ್.ಆರ್. ಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ನೆನ್ನೆ ರಾತ್ರಿ 9.30ರ ಸುಮಾರಿಗೆ ಜುಬೇದಾ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಅವರು ಮಾತ್ರೆಗಳನ್ನು ಸೇವಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ತಿಳಿಸಿದರು.
ಒಳಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿಲ್ಲವೆಂದು ಮನನೊಂದು ಈ ಕೃತ್ಯಕ್ಕೆ ಮಂದಾಗಿದ್ದು, ಕಾಂಗ್ರೆಸ್ ಮುಖಂಡರ ವಿರುದ್ಧ ಜುಬೇದಾ ಆರೋಪ ಮಾಡಿದ್ದಾರೆ. ಮಾತುಕತೆಯಂತೆ ಪ್ರಸ್ತುತ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷಾವಧಿ ಮುಗಿದಿದೆ. ಆದರೆ ಸ್ಥಾನ ಬಿಟ್ಟುಕೊಡಲು ಸುರಯ್ಯಾ ಭಾನು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮನನೊಂದು ಸದಸ್ಯೆ ಜುಬೇದಾ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.
ಒಪ್ಪಂದದಂತೆ ತನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಜುಬೇದಾ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ. ಹಾಲಿ ಅಧ್ಯಕ್ಷೆ ಸುರಯ್ಯಾ ಮತ್ತು ಜುಬೇದಾ ಸಂಬಂಧಿಕರು.