ಪವಿತ್ರ ಎಸ್
ಸಹಾಯಕ ಪ್ರಾಧ್ಯಾಪಕರು
ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು, ಎಂಬ ಸಂಚಿಹೊನ್ನಮ್ಮನ ಉಕ್ತಿಯನ್ನು ಗಮನಿಸಿದಾಗ, ಹೆಣ್ಣನ್ನು ಸದಾ ಕಾಲದಿಂದಲೂ ಅಬಲೆಯೆಂದು ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಮನುಸ್ಮೃತಿ ಹೆಣ್ಣಿನ ಕುರಿತು ಹೀಗೆ ಹೇಳುತ್ತದೆ;
ಹೆಣ್ಣು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ, ವೃದ್ಧಾಪ್ಯದಲ್ಲಿ ಮಗನ ಆಶ್ರಯದಲ್ಲಿ ಇರಬೇಕು. ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ. ಹೆಣ್ಣು ಒಂದು ವಸ್ತುವಿನಂತೆ ರಕ್ಷಣೆ ಮಾಡಬೇಕು ಎಂದು ಹೇಳುತ್ತದೆ. ಹೀಗೆ ಹೆಣ್ಣನ್ನು ಬಂಧಿಯಾಗಿಸಿದ್ದ ಧರ್ಮವು ಆಕೆಯನ್ನು ಎಲ್ಲಾ ರೀತಿಯಲ್ಲಿಯೂ ಶೋಷಣೆ ಮಾಡಿರುವುದನ್ನು ಅಲ್ಲಗಳೆಯುವಂತಿಲ್ಲ.
ಹೆಣ್ಣಿಗೆ ಘನತೆಯ ಬದುಕನ್ನು ಕೊಟ್ಟು ಆಕೆಯೂ ಮನುಷ್ಯಳೆ… ಪುರುಷರಂತೆ ಹೆಣ್ಣಿಗೂ ಸ್ವಾತಂತ್ರ್ಯವಿದೆ, ಗೌರವಯುತವಾದ ಜೀವನವಿದೆ, ಕಲಿಯುವ ಕಲಿಸುವ, ನ್ಯಾಯಕ್ಕಾಗಿ ಹೋರಾಡುವ ಹಕ್ಕಿದೆ ಎಂದು ನಮ್ಮ ಭಾರತದ ಸರ್ವಶ್ರೇಷ್ಠ ಗ್ರಂಥ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. 14 ರಿಂದ 18ನೇ ವಿಧಿಯು ಸಮಾನತೆಯ ಹಕ್ಕನ್ನು ನೀಡಿದೆ. 32ನೇ ವಿಧಿಯು ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕನ್ನು ನೀಡಿದೆ. ಅಷ್ಟಾಗಿಯೂ ಮಹಿಳೆಯರು ನ್ಯಾಯಾಲಯದ ಕದ ತಟ್ಟಿರುವುದು ತೀರಾ ಇತ್ತೀಚೆಗೆ.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆಯುತ್ತಿದ್ದರು, ತಾರತಮ್ಯ ಮಾತ್ರ ಕಡಿಮೆಯಾಗಿಲ್ಲ. ಹೆಣ್ಣು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾಳೆ ಎಂದರೆ, ಆಕೆಯನ್ನು ಸಮಾಜ ಇನ್ನಿಲ್ಲದಂತೆ ಕಾಡುವುದಂತೂ ತೆಗೆದುಹಾಕಲಾಗದ ಸಂಗತಿ. ಹೆಣ್ಣೆಂದರೆ ಎಂದರೆ ಅಡುಗೆಮನೆಯ ವಾರಸುದಾರಳು ಎಂಬ ನಂಬಿಕೆಗೆ ಬಲವಾದ ಪೆಟ್ಟುಗಳು ಬೀಳತೊಡಗಿದಾಗ, ಆ ಪೆಟ್ಟುಗಳಿಗೆ ನಲುಗಿ ಹೋಗುತ್ತಿರುವ ಈ ಪುರುಷಪ್ರಧಾನ ಸಮಾಜ ಇಂದಿಗೂ ಆಕೆಯನ್ನು ಓರೆಗಣ್ಣಿನಲ್ಲಿ ಬಂಧಿಸುವುದನ್ನು ಬಿಡುತ್ತಿಲ್ಲ…
ನ್ಯಾಯಾಲಯಕ್ಕೆ ಹೋದ ಮಾತ್ರಕ್ಕೆ ಎಲ್ಲಾ ಸಮಯದಲ್ಲಿಯೂ ಅರ್ಜಿದಾರರ ಪರವಾದ ತೀರ್ಪುಗಳೇ ಬರುತ್ತವೆ ಎಂದಲ್ಲ. ಹೋರಾಟದ ಕಿಚ್ಚನ್ನು ಹೊತ್ತಿಸಿಕೊಂಡಿರುವ ಮಹಿಳೆಯರು ಸುಮ್ಮನೇ ಕೂತಿದ್ದರೆ ಇಂದಿಗೆ ಇತಿಹಾಸವಾಗುತ್ತಿರಲಿಲ್ಲ. ಮುತ್ತಮ್ಮನಿಗೆ ಬಡ್ತಿಯಲ್ಲಿ ಆದ ತಾರತಮ್ಯಕ್ಕೆ ಆಕೆ ಸುಮ್ಮನೆ ಕೂತಿದ್ದರೆ ಪದೋನ್ನತಿ ಸಿಗುತ್ತಿರಲಿಲ್ಲ. ಅಸನ್ ಬಾನು ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಧೈರ್ಯವಾಗಿ ನ್ಯಾಯಕ್ಕಾಗಿ ಹೋರಾಡಿದಳು. ಅವಳ ಪರವಾಗಿ ತೀರ್ಪು ಬಂದಿತ್ತು, ಹಾಗೆಯೇ ಹೋರಾಟದ ಸಮಯದಲ್ಲಿ ಎದುರಿಸಿದ ನೋವು, ಅವಮಾನ, ಹಿಂಸೆಗಳನ್ನು ಸಹ ಪರಿಗಣಿಸಬೇಕು.
ಅಮುದ ಅವರ ಕೇಸಿನಲ್ಲಿ ಅವರಿಗೆ ಹಿನ್ನಡೆಯಾದರೂ ಮಕ್ಕಳ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದರು ಅಲ್ಲಿ ನ್ಯಾಯ ಪಡೆದುಕೊಂಡು ಬಂದ ಮಹಿಳೆ ಅಮುದ. ಮಾಲತಿ ಸ್ವತಃ ಪೊಲೀಸ್ ಇಲಾಖೆಯಲ್ಲಿದ್ದರು, ತನಗಾದ ಅನ್ಯಾಯದ ವಿರುದ್ಧ ಕಾನೂನು ಸಮರ ನಡೆಸಬೇಕಾಯಿತು. ವಿಧವೆ ಎಂಬ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾ ಮಾಡಲಾಯಿತು. ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿ ವಿಧವೆಯರ ಗೌರವಯುತ ಜೀವನಕ್ಕಾಗಿ ನ್ಯಾಯಪಡೆದುಕೊಂಡ ಮಹಿಳೆಯಾಗಿದ್ದಾರೆ.
ಹೆಣ್ಣುಮಕ್ಕಳು ಹೆಚ್ಚಾಗಿ ಲೈಂಗಿಕ ಕಿರುಕುಳ ಅನುಭವಿಸಿದ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದ ಪೋದುಂಬು ಹುಡುಗಿಯರು.
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಮಹಿಳೆಯರು, ಕಿರುಕುಳ ನೀಡಿದವರ ವಿರುದ್ಧ ದಾವೆ ಹೂಡಿದಾಗ ವಿಶಾಖ ಎಂಬ ಸರ್ಕಾರೇತರ ಸಂಸ್ಥೆಯು ಮಹಿಳೆಯರ ಭದ್ರತೆಗಾಗಿ ರೂಪಿಸಿದ ನಿಯಮಾವಳಿಗಳ ಆಧಾರದಲ್ಲಿ ಅವರಿಗೆ ನ್ಯಾಯ ದೊರಕಿರುವುದನ್ನು ಕಾಣಬಹುದು.
ಜಾನಕಿ ಎಂಬ ದಿಟ್ಟ ಅಜ್ಜಿಯು ಒಂದು ಪೋಸ್ಟ್ ಕಾರ್ಡಿನಲ್ಲಿ ನ್ಯಾಯಾಧೀಶರಿಗೆ ದೂರು ಬರೆದು ಕಳುಹಿಸಿದರು. ಆ ಪತ್ರಕ್ಕೆ ಸ್ಪಂದಿಸಿದ ನ್ಯಾಯಾಧೀಶರ ಸಾರ್ವಜನಿಕ ಹಿತಾಸಕ್ತಿ ಮತ್ತು ಮಾನವೀಯತೆಯನ್ನು ಮರೆಯುವ ಹಾಗಿಲ್ಲ.
ಅಷ್ಟೇ ಏಕೆ ದಿನಪತ್ರಿಕೆಯಲ್ಲಿ ಪ್ರಕಟವಾದ ಶೌಚಾಲಯಕ್ಕೆ ಬೀಗ ಹಾಕಿದ ಬಗ್ಗೆ ವರದಿಯನ್ನು ನೋಡಿ ತಾವೇ ಸ್ವತಃ ಮುತುವರ್ಜಿವಹಿಸಿ ಪತ್ರಿಕಾ ಬರಹವನ್ನೇ ಅರ್ಜಿಯಾಗಿ ಸ್ವೀಕರಿಸಿ ಮುನ್ಸಿಪಾಲಿಟಿ ಆಯುಕ್ತರಿಗೆ ಸಮನ್ಸ್ ಜಾರಿ ಮಾಡಿದರು. ನ್ಯಾಯಾಲಯಕ್ಕೆ ಬಂದು ಆಯುಕ್ತರು ಕ್ಷಮೆ ಕೋರಿದರು ಮತ್ತು ಸ್ವಚ್ಛಗೊಳಿಸಿ, ಬಣ್ಣ ಬಳಿದು, ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿದರು. ಪ್ರಸ್ತುತ ಇಂಥ ನ್ಯಾಯಾಧೀಶರ ಅವಶ್ಯಕತೆ ನಮ್ಮ ಈಗಿನ ಸಮಾಜಕ್ಕೆ ಇದೆ.
ಇಲ್ಲಿರುವ 20 ಲೇಖನಗಳಲ್ಲಿ ವ್ಯಕ್ತಗೊಂಡಿರುವ ಕಥೆಗಳೆಲ್ಲವೂ ಮಹಿಳೆಯರಿಗೆ ಸೇರಿದ್ದು ಅದರಲ್ಲಿಯೂ ಹೆಚ್ಚಿನವು ಬಡವರಿಗೆ ಸೇರಿದ್ದು. ಶ್ರೀಮಂತರಿಗೆ ಮಾತ್ರ ನ್ಯಾಯ ದೊರಕುತ್ತದೆ ಬಡವರಿಗಲ್ಲ ಎಂಬ ಅಭಿಪ್ರಾಯ ಹೊಂದಿರುವ ಯಾರೇ ಆದರೂ ಸರಿ, ಕೃತಿಯನ್ನು ಓದಿದ ನಂತರ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುತ್ತಾರೆ. ಹೊರಗಿನ ಅಡೆತಡೆಗಳು ಏನೇ ಇರಲಿ ನ್ಯಾಯಾಲಯದ ಒಳಗಿನ ತೀರ್ಪು ನೆಮ್ಮದಿ ನೀಡುತ್ತದೆ. ಎಲ್ಲಾ 20 ಲೇಖನಗಳಲ್ಲಿನ ಎಲ್ಲರಿಗೂ ನ್ಯಾಯ ಸಿಗದೇ ಇರಬಹುದು ಆದರೆ ಹೆಚ್ಚಿನವರಿಗೆ ನ್ಯಾಯ ಸಿಕ್ಕಿದೆ. ಕೋರ್ಟ್ ಎಂಬುದು ಎಲ್ಲರಿಗಾಗಿ, ನ್ಯಾಯ ಎಂಬುದು ಎಲ್ಲರಿಗಾಗಿ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಕೃತಿಯ ಮೂಲ ಲೇಖಕರಾದ ನ್ಯಾಯಮೂರ್ತಿ ಕೆ. ಚಂದ್ರು ಅವರಿಗೆ ಹಾಗೂ ಈ ಪುಸ್ತಕದ ಅನುವಾದಕರಾದ ಭಾರತಿ ದೇವಿ .ಪಿ ಮತ್ತು ಸತೀಶ್ ಜಿ.ಟಿ ಅವರಿಗೆ, ಮತ್ತು ಪ್ರಕಟಿಸಿದ ಕ್ರಿಯಾ ಮಾಧ್ಯಮದವರಿಗೆ ಧನ್ಯವಾದಗಳು.