-ಕೆ.ಎಸ್.ವಿಮಲ
ಈಗ ಕೂಗೇಳಬೇಕು ಪರಸ್ಪರ ಪ್ರೀತಿಸಿ ವಿವಾಹ ವಯಸ್ಕ ಯುವಜನರು ಮದುವೆಯಾಗ ಬಯಸಿದರೆ ಯಾವುದೇ ವಿಳಂಬವಿಲ್ಲದೇ ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಮದುವೆಯಾಗಲು ಅವಕಾಶ ಕಲ್ಪಿಸಿ ವಿಶೇಷ ವಿವಾಹ ಕಾಯ್ದೆಗೆ ತಕ್ಷಣ ತಿದ್ದುಪಡಿ ತರಬೇಕು. ಯುವಜನರ ಸಂಗಾತಿ ಆಯ್ಕೆಯ ಹಕ್ಕನ್ನು ಕಾಪಾಡುವ ಮತ್ತು ಅದನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಈಗ ಬೇಕಿರುವುದು. ದೇಶದ ಜಾತ್ಯಾತೀತ ಗುಣ ಲಕ್ಷಣಗಳನ್ನು ಉಳಿಸುವತ್ತ ಇದೂ ಒಂದು ಹೆಜ್ಜೆ ಎಂಬುದು ಸರಳ ಮತ್ತು ಸಹಜ ಸತ್ಯ. ದೇಶದ ಸಂವಿಧಾನವನ್ನು ಗೌರವಿಸಲು ಮೊದಲು ಕಲಿಯಿರಿ ಎಂಬುದೇ ಭೊಗಿಗಳ ರಾಜ್ಯವನ್ನಾಳುತ್ತಿರುª ಯೋಗಿಗೂ ಮತ್ತು ಮಹಿಳಾ ವಿರೋಧೀ ಸಾಂಕ್ರಾಮಿಕ ರೋಗ ಪೀಡಿತ ಬಿ.ಜೆ.ಪಿಗರಿಗೂ ತಿಳಿಸುವುದೇ ಮಾರ್ಗ ಉಳಿದಿರುವುದು.
ಕಾನೂನು ಕುಣಿಕೆಯಾಗಿ ಬಿಡುವ, ಎತ್ತ ಎಳೆದರೂ ಸುತ್ತಿ ಸಾಯಿಸಿಬಿಡುವಂತೆ ಅಸ್ತ್ರವನ್ನಾಗಿ ಮಾಡಿಕೊಳ್ಳುವ ವಿಪರೀತಗಳ ನಡುವೆ ನಾವಿದ್ದೇವೆ. ತಪ್ಪು ಮಾಡುವವರನ್ನು ಶಿಕ್ಷಿಸುವ ಸಲುವಾಗಿ ಸರಿ ತಪ್ಪುಗಳ ಮಧ್ಯೆ ನಿಖರ ರೇಖೆಗಳನ್ನು ಎಳೆಯುವ ಸಾಧನವಾಗಬೇಕಾದ ಕಾನೂನನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ಬಿಡುವ ಪೃವೃತ್ತಿ ಕೂಡಾ ನಮಗೆ ಹೊಸದಲ್ಲ. ಆಗಾಗ್ಗೆ ಇಂಥಹವುಗಳು ನಡೆಯುತ್ತಲೇ ಇವೆ. ಬಹುತೇಕ ಸಂದರ್ಭಗಳಲ್ಲಿ ಹೀಗೆ ನಡೆಯುವುದು, ಮಹಿಳೆಯರು ಮತ್ತು ಒಂದಲ್ಲ ಒಂದು ರೀತಿಯಲ್ಲಿ ಟಾರ್ಗೇಟೆಡ್ ವಲಯದಲ್ಲಿಯೇ ಇರುವ ಅಲ್ಪ ಸಂಖ್ಯಾತ ಮತ್ತು ದಮನಿತ ವಿಭಾಗವನ್ನು ಕೇಂದ್ರೀಕರಿಸಿ, ಎಂಬುದನ್ನೂ ಗಮನಿಸಬೇಕಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಒಂದು ಪ್ರಕರಣ. ವಯೋಸಹಜ ಪ್ರೀತಿ ಆಕರ್ಷಣೆ ಮತ್ತು ಬೆಳೆದ ಒಲವು ವಿವಾಹದಲ್ಲಿ ಅಂತ್ಯವಾಗಿದೆ. ಪ್ರೀತಿಗೆ ಜಾತಿ ಧರ್ಮ ವರ್ಗ ಅಂತಸ್ತುಗಳ ಹಂಗಿಲ್ಲ. ಅಂಥಹ ಒಂದು ಪ್ರೀತಿ ಮಾಡಿದ ಯುವತಿ ಮತ್ತು ಯುವಕ ಈ ಸಮಾಜದ ರೀತಿನೀತಿಗಳ ನೆಲೆಯಲ್ಲಿ ಅಂತರ್ಧರ್ಮೀಯರು. ಯುವತಿ ಮುಸ್ಲಿಂ, ಯುವಕ ಹಿಂದೂ. ಯುವತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಳು, ಮತ್ತು ಮದುವೆಯಾದಳು. ಮದುವೆಯಾದ ನಂತರ ಜೀವಕ್ಕಿರುವ ಭೀತಿಯ ಕಾರಣದಿಂದ ತಮ್ಮ ಬದುಕಿಗೆ ರಕ್ಷಣೆ ಬೇಕೆಂದು ಅಲಹಾಬಾದ್ ಕೋರ್ಟಿಗೆ ಮೊರೆ ಹೋದರು. ಕೋರ್ಟು ರಕ್ಷಣೆಯನ್ನು ನಿರಾಕರಿಸಿ ಮದುವೆಗಾಗಿ ಮತಾಂತರಗೊಳ್ಳುವುದು ಸ್ವೀಕಾರಾರ್ಹವಲ್ಲ ಎಂದಿದೆ. ಅದಕ್ಕೆ ಈ ಮೊದಲಿನ ತನ್ನ ತೀರ್ಪನ್ನು ಉಲ್ಲೇಖಿಸಿದೆ. ಮತಾಂತರ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಂತ್ಯವಾಗದ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಎಲ್ಲಿಯ ವರೆಗೆ ಜನರಿಗಿರುವ ವ್ಯಕ್ತಿ ಸ್ವಾತಂತ್ಯವನ್ನು ಗೌರವಿಸುವ ಮತ್ತು ಧರ್ಮ, ಜಾತಿ ಆಚರಣೆಗಳ ನಂಬಿಕೆಗಳು ಅವರವರ ಇಷ್ಟಕ್ಕೇ ಬಿಟ್ಟಿದ್ದು ಮತ್ತು ಅದರಲ್ಲಿ ಇತರರ, ಸರಕಾರಗಳ ಮಧ್ಯ ಪ್ರವೇಶದ ಅಗತ್ಯ ಅಥವಾ ಅವಕಾಶ ಎರಡೂ ಇರಕೂಡದೆಂಬ ದೃಢ ನಿರ್ಧಾರಕ್ಕೆ ಬಂದು ಆಚರಣೆಗೆ ಬರದ ಹೊರತೂ ಇದು ಬಗೆಹರಿಯುವುದಿಲ್ಲ.
ಆದರೆ ಈಗ ಎದ್ದಿರುವ ಪ್ರಶ್ನೆ, ಅಲಹಾಬಾದ್ ನ್ಯಾಯಾಲಯ ಸಹಾಯ ಕೋರಿ ಬಂದವರಿಗೆ ರಕ್ಷಣೆ ನಿರಾಕರಿಸಿ ಮದುವೆಯನ್ನೇ ಗುರಿಯಾಗಿಸಿಕೊಂಡು ನಡೆಯುವ ಮತಾಂತರ ಸರಿಯಲ್ಲವೆಂದಿತು. ಇದು ನ್ಯಾಯದ ಕಟಕಟೆಯಲ್ಲಿ ಚರ್ಚೆಯಾಗಬೇಕಾದ ಸಂಗತಿ. ಆದರೆ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿ.ಜೆ.ಪಿಗರು ಥಟ್ಟನೆ ಇಳಿದಿದ್ದೇ ಎಚ್ಚರಿಕೆಯ ಘಂಟೆಯಾಗಬೇಕು. ರಾಜ್ಯದಲ್ಲಿ ಮಹಿಳೆಯರು, ಅದರಲ್ಲಿಯೂ ದಲಿತ ಸಮುದಾಯದ ಮಹಿಳೆಯರ ಮೇಲೆ ತೀವ್ರ ತೆರನ ದೌರ್ಜನ್ಯಗಳು ನಡೆಯುತ್ತಿರುವಾಗ ಅದರತ್ತ ಗಮನ ಹರಿಸದ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮತ್ತವರ ಸರಕಾರ ಈ ವಿಷಯದತ್ತ ಅತೀವ ಗಮನ ಕೊಡುತ್ತಿದೆ. ತಮ್ಮ ರಾಜ್ಯದಲ್ಲಿ ಮದುವೆಗಾಗಿ ನಡೆಯುವ ಮತಾಂತರ ನಿಷೇಧವನ್ನು ವಿರೋಧಿಸುವವರು ‘ರಾಮ ನಾಮ್ ಸತ್ಯ ಹೈ’ (ಅಂದರೆ ಮಸಣಕ್ಕೆ ಅಟುತ್ತೇವೆ ಅಂತ) ಆಗಬೇಕಾದೀತು ಎಂದು ಸಂವಿಧಾನದ ವಿಧಿಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ವ್ಯಕ್ತಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳುತ್ತಾರೆ! ಸಾಂಕ್ರಾಮಿಕ ಅಲ್ಲಿಗೇ ಸೀಮಿತವಾಗಿ ಉಳಿಯದೇ ಇತರ ಬಿ.ಜೆ.ಪಿ ಅಧಿಕಾರದ ರಾಜ್ಯಗಳಾದ ಮಧ್ಯಪ್ರದೇಶ ಹರ್ಯಾಣಾಗಳು ಧ್ವನಿ ಸೇರಿಸಿದವು. ಸಾಲದೆಂಬಂತೆ ಆ ರಾಜ್ಯಗಳಿಗೆ ಹೋಲಿಸಿದಲ್ಲಿ ‘ಮುಂದುವರೆದ’ ಎನ್ನುವ ಹಣೆಪಟ್ಟಿಯನ್ನು ಹೊತ್ತ ಕರ್ನಾಟಕದಲ್ಲಿಯೂ ಮುದುವೆಗಾಗಿ ನಡೆಯುವ ಮತಾಂತರವನ್ನು ನಿಷೇಧಿಸುವ ಕಾನೂನು ತರುವುದಾಗಿ ಸ್ವತಃ ಮುಖ್ಯಮಂತ್ರಿಗಳೆ ಹೇಳಿಕೆ ನೀಡಿದರು. ಇದರ ಮೊದಲು ಅಂದಿನ ಸಂಸ್ಕøತಿ ಸಚಿವರು ಅವರ ಧ್ವನಿಗೆ ಪ್ರತಿಧ್ವನಿಯಾಗಿ ಗೃಹ ಸಚಿವರು ಕೂಡಾ ಇದೇ ಮಾತು ಹೇಳಿದ್ದರು. ಅಲ್ಲದೇ ಅದೇ ಹೊತ್ತಿಗೆ ನಡೆದ ಬಿ.ಜೆ.ಪಿ ಯ ಕಾರ್ಯಕಾರಿಣಿ ಕೂಡಾ ಅಂಥಹ ಒಂದು ಪ್ರಸ್ತಾಪವನ್ನು ಚರ್ಚೆ ಮಾಡಿದೆ.
ಮದುವೆಯ ಆಮಿಷ ಮತ್ತು ಪ್ರೀತಿಯ ನಾಟಕ ಮತಾಂತರಕ್ಕೆ ಎಂದು ತೀರ್ಮಾನ ಮಾಡುವವರು ಯಾರು? ಧರ್ಮ ಜಾತಿ ಕುಲ ಗೋತ್ರಗಳ ಹಂಗಿಲ್ಲದೇ ಹುಟ್ಟುವ ಪ್ರೀತಿ ಮದುವೆಯಲ್ಲಿ ಪರ್ಯಾವಸಾನವಾಗುವುದು ಈ ಸಮಾಜಕ್ಕೆ ಹೊಸತೇನಲ್ಲ. ಆದರೆ ಅದು ಅಂತರ್ಧರ್ಮೀಯವಾದಾಗ ಅದಕ್ಕೊಂದು ಬಳಕೆಯಲ್ಲಿಲ್ಲದ ‘ಲವ್ ಜಿಹಾದ್’ ಎಂಬ ಶಬ್ದವನ್ನೇ ಟಂಕಿಸಿ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಸುಳ್ಳು ಸುದ್ದಿಗಳನ್ನು ಹರಡಿದ ರಾಜ್ಯ ನಮ್ಮದೆಂಬ ಕುಖ್ಯಾತಿ ನಮಗಿದೆ.
ಸೈನೈಡ್ ಮೋಹನ್ ಮತ್ತು ಲವ್ ಜಿಹಾದ್!! ಎಂಬ ಹುಯ್ಲು
2005-06ರ ಸಂದರ್ಭದಲ್ಲಿಯೇ ಸರಣಿ ಅತ್ಯಾಚಾರ ಮಾಡಿ ಮತ್ತು ಸೈನೈಡ್ ತಿನ್ನಿಸಿ 20 ಮಹಿಳೆಯರನ್ನು ಒಬ್ಬ ಮೋಹನ್ ಎಂಬ ವ್ಯಕ್ತಿ ಕೊಲೆ ಮಾಡಿದ್ದ. ದಿಕ್ಕು ದೆಸೆಯಿಲ್ಲದ ಬಸ್ ಸ್ಟ್ಯಾಂಡ್ ಗಳಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿ ಸಿಕ್ಕ ಹೆಣಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ಪೋಲೀಸ್ ಇಲಾಖೆ ಅಸಹಜ ಅಪರಿಚಿತ ವ್ಯಕ್ತಿ ಎಂದು ಶವ ಸಂಸ್ಕಾರ ಮಾಡಿ ಹಾಕಿದ ಪ್ರಕರಣಗಳನ್ನು ಅಲ್ಪ ಸಂಖ್ಯಾತ ಯುವಕರು ಮತಾಂತರ ಮಾಡಲು ಕದ್ದೊಯ್ದಿದ್ದಾರೆಂದು ಸುದ್ದಿ ಹರಡಿ ಗದ್ದಲ ಎಬ್ಬಿಸಿದ್ದರು. ಸೈನೈಡ್ ಮೋಹನನಿಂದ ಅನ್ಯಾಯಕ್ಕೊಳಗಾದ ಮಹಿಳೆಯರ ಪ್ರಕರಣಗಳಲ್ಲಿ ಸಂಘಿಗಳು, ಅವರೆಲ್ಲರನ್ನೂ ಮುಸ್ಲಿಂ ಯುವಕರು ಆಕರ್ಷಿಸಿ ಮತಾಂತರ ಮಾಡಲೆಂದೇ ಪ್ರೀತಿಯ ನಾಟಕವಾಡುತ್ತಿದ್ದಾರೆಂದರು. ಇಸ್ಲಾಂ ನಲ್ಲಿ ಬಳಕೆಯಲ್ಲಿಲ್ಲವೆಂದು ಹೇಳಲಾಗುವ ‘ಲವ್ ಜಿಹಾದ್’ ಎಂಬ ಶಬ್ದವನ್ನು ಟಂಕಿಸಿದ್ದರು. ಆದರೆ ಅವರದೇ ಹೋರಾಟದ ಕಾರಣದಿಂದ ಪೋಲೀಸ್ ತನಿಖೆ ಚುರುಕುಗೊಂಡು ಸತ್ಯ ಹೊರಬಿದ್ದಿತ್ತು. ಮತ್ತು ಆ ವ್ಯಕ್ತಿಯ ಮೇಲಿದ್ದ ಪ್ರತಿ ಆರೋಪಕ್ಕೂ ಜೀವಾವಧಿ ಮತ್ತು ಒಮ್ಮೆ ಮರಣ ದಂಡನೆಯ ಶಿಕ್ಷೆ ಎಂಬ ತೀರ್ಪು ಬಂತು. ಇಷ್ಟೆಲ್ಲ ಆದರೂ ತಮ್ಮ ಚಾಳಿಯನ್ನು ಬಿಡದ ಸಂಘಿಗಳು ಆಗಾಗ್ಗೆ ಅದೇ ಜಾಡಿನಲ್ಲಿ ಮಾತನಾಡುತ್ತಲೇ ಇದ್ದಾರೆ. ಅದಕ್ಕೆ ಇಂಬು ಕೊಡುವಂತೆ ಆಗಾಗ್ಗೆ ನ್ಯಾಯಾಲಯದ ತೀರ್ಪುಗಳೂ ಬರುತ್ತಿವೆ. ದೇಶದ ಗೃಹಮಂತ್ರಾಲಯದಲ್ಲಿ ಕೂಡ ಲವ್ ಜಿಹಾದ್ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಎನ್.ಐ.ಏ ಕೂಡಾ ಕೇರಳದ ಹಾದಿಯಾ ಪ್ರಕರಣದಲ್ಲಿ ಲವ್ ಜಿಹಾದ್ ನ್ನು ಸಾಬೀತು ಪಡಿಸಲು ವಿಫಲವಾಗಿದೆ.
ನಮ್ಮ ಸಂವಿಧಾನದ ಕಲಮು 25 ರಿಂದ 28 ರ ವರೆಗೆ ಧಾರ್ಮಿಕ ಸ್ವಾತಂತ್ರ ಮತ್ತು ಧರ್ಮ ಪ್ರಚಾರದ ಅವಕಾಶಗಳ ಹಕ್ಕು ನೀಡಿದೆ. ಅದೇ ಹಕ್ಕಿನ ಬಗ್ಗೆ ಮಾತನಾಡುತ್ತಲೇ ಹಲವಾರು ಪ್ರಕರಣಗಳಲ್ಲಿ ಪ್ರಲೋಭನೆ ಆಸೆ ಆಮಿಷಗಳಿಗೆ ಬಲಿಯಾಗಿ ಆತ್ಮ ಸಾಕ್ಷಿಗೆ ವ್ಯತಿರಿಕ್ತವಾಗಿ ಮತಾಂತರಗೊಳ್ಳುವುದನ್ನು ಒಪ್ಪುವುದಿಲ್ಲ ಎಂದಿದೆ. ಇಲ್ಲಿರುವ ಪ್ರಶ್ನೆ ವಯಸ್ಕ ವ್ಯಕ್ತಿ ತನ್ನ ಇಚ್ಛೆಯ ವಿವಾಹ, ತನ್ನ ಆಯ್ಕೆಯ ಕೆಲಸ, ವ್ಯಾಪಾರ ವ್ಯವಹಾರ, ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಟ್ಟ ಮೇಲೆ ಅಂತರ್ಧರ್ಮೀಯ ಎಂಬ ಒಂದೇ ಕಾರಣಕ್ಕೆ ಅದನ್ನು ಒಪ್ಪಲಾರದ ಸಂದಿಗ್ದತೆಯನ್ನೇಕೆ ಸೃಷ್ಟಿಸುವುದು ಎಂಬುದಕ್ಕೆ ಪರಿಹಾರ ಕ್ರಮವೇನು? ತಮ್ಮ ಇಚ್ಛೆಯಂತೆಯೇ ಮದುವೆಯಾದೆನೆಂದು ವಯಸ್ಕ ಯುವ ಜೋಡಿ ಹೇಳಿದ ಮೇಲೂ ಅದಕ್ಕನುಗುಣವಾಗಿ ಅವರಿಗೆ ಅಗತ್ಯವಿದ್ದ ಜೀವ ರಕ್ಷಣೆಯ ವ್ಯವಸ್ಥೆ ನೀಡುವುದು ಭಾರತದ ಸಂವಿಧಾನದ ಅಡಿಯ ಅಗತ್ಯವೆನಿಸುವುದಿಲ್ಲವೇ?
ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ಯೋಗಿಯ ರಾಜ್ಯದಲ್ಲಿ ಭೋಗಿಗಳದೇ ಕಾರುಬಾರು..
ಆದರೆ ಈಗ ನಮ್ಮ ರಾಜ್ಯವೂ ಸೇರಿದಂತೆ ಇತರ ಬಿ.ಜೆ.ಪಿ ಅಧಿಕಾರದ ಸರಕಾರಗಳು ಇದನ್ನೇ ನೆಪವಾಗಿಸಿಕೊಂಡು ತರಹೊರಟಿರುವ ಕಾನೂನು ಮಹಿಳೆಯರ ಮತ್ತು ಯುವಜನರ ಆಯ್ಕೆ ಸ್ವಾತಂತ್ರ್ಯದ ಮೇಲೆ ನೇರ ಪ್ರಹಾರವಾಗಲಿದೆ. ಮಹಿಳೆಯರ ಶೋಷಣೆಯನ್ನು ತಡೆಗಟ್ಟುವ ಹೆಸರಿನಲ್ಲಿ ಕಾನೂನು ತರುವ ಮಾತಾಡುತ್ತಿರುವ ಬಿ.ಜೆ.ಪಿಗರಿಗೆ ನಿಜವಾಗಿ ಮಹಿಳೆಯರ ಮೇಲಾಗುತ್ತಿರುವ ಶೋಷಣೆಗಳ ಬಗ್ಗೆ ಕಾಳಜಿ ಇದೆಯೇ? ಹಾಗಿದ್ದರೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯಗಳ ಕುರಿತ ಗಂಭೀರ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ? ನಮ್ಮದೇ ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಮರ್ಯಾದೆಗೇಡು ಹತ್ಯೆಗಳು ಯಾಕೆ ಸಿ.ಟಿ.ರವಿಯವರಿಗಾಗಲಿ, ಮಾನ್ಯ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗಾಗಲಿ ಅಥವಾ ಸ್ವತಃ ಮುಖ್ಯಮಂತ್ರಿಗಳಿಗಾಗಲಿ ನಿದ್ದೆಗೆಡಿಸಲಿಲ್ಲ. ರಾಷ್ಟ್ರೀಯ ಮಹಿಳಾ ಸಂಘಟನೆಗಳು ಮರ್ಯಾದೆಗೇಡು ಹತ್ಯೆಗಳನ್ನು ನಿಲ್ಲಿಸಲು, ಅಪರಾಧಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲು ಸಾಧ್ಯವಾಗುವಂತೆ ಕಾನೂನು ರೂಪಿಸಲು ಕೇಳುತ್ತಲೆ ಇವೆ. ಮಾನ್ಯ ಕರ್ನಾಟಕ ಘನ ಸರಕಾರವು ಅಂತಹ ಒಂದು ರಾಜ್ಯ ಕಾನೂನು ತಂದು ಇತರರಿಗೆ ಮಾದರಿಯಾಗಬಹುದಲ್ಲ. ಮಹಿಳಾ ಪರ ಕಾಳಜಿ ಉಕ್ಕಿ ಹರಿಯುತ್ತಿರುವ ಮಾನ್ಯ ಸಿ.ಟಿ.ರವಿಯವರು ಅತ್ತಲೂ ಗಮನ ಹರಿಸಿದರೆ ಹಣದ ಸೊಕ್ಕು, ಜಾತಿಯ ಮದ, ಅಂತಸ್ತಿನ ಅಹಂಕಾರದಲ್ಲಿ ಅಂಧರಾಗಿ ಕರುಳಿನ ಕುಡಿಗಳನ್ನೇ ಹತ್ಯೆಗೈಯುವ ಪಾತಕಿಗಳಾಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬಹುದಲ್ಲ.
ಮರ್ಯಾದೆಗೇಡು ಹತ್ಯೆ ತಡೆಯಲು ಕಾನೂನು ಬೇಕು, ಇಲ್ಲದ ‘ಲವ್-ಜಿಹಾದ್’ಗಲ್ಲ!
ಕಳೆದ ತಿಂಗಳು ರಾಮನಗರ ಜಿಲ್ಲೆಯಲ್ಲಿ ನಡೆದ ಅನ್ಯಾಯದ ಹತ್ಯೆ ಮತ್ತು ಅದಕ್ಕೆ ಅತ್ಯಾಚಾರದ ಸುಳ್ಳು ಆರೋಪಗಳು ತಮ್ಮ ಸರಕಾರಕ್ಕೆ ಮೆತ್ತುವ ಕಳಂಕವೆಂದು ಶುದ್ದಾಂಗ ಸಚ್ಚಾರಿತ್ರ್ಯದ ಧರ್ಮ ಪ್ರತಿಪಾದಕರಿಗೇಕೆ ಅನಿಸಲಿಲ್ಲವೆಂಬ ಪ್ರಶ್ನೆಗೆ ಉತ್ತರ ಸಿಕ್ಕೀತೆ. ನ್ಯಾಯದಾನದ ಭಾಗವಾಗಿಯೇ ನಿರ್ಭಯಾ ಪ್ರಕರಣದ ನಂತರ ಜಸ್ಟೀಸ್ ವರ್ಮಾ ಆಯೋಗ ಕೊಟ್ಟ ಶಿಫಾರಸ್ಸುಗಳನ್ನು ಮಾನ್ಯ ಮಾಡಿ ಜಾರಿಗೆ ತಂದಿದ್ದರೂ ಮಹಿಳೆಯರ ಮೇಲಿನ ಶೋಷಣೆಯ ಬಹುಪಾಲು ನಿಯಂತ್ರಣ ಸಾಧ್ಯವಾಗುತ್ತಿತ್ತು. ಆದರೆ ಅಲ್ಲಿಲ್ಲದ ತರಾತುರಿ ಇಲ್ಲೇಕೆ ಎಂದರೆ ಇದು ಅವರ ಘೋಷಿತ ಅಜೆಂಡಾದ ಭಾಗವಾಗಿ, ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ ಗದ್ದಲ ಎಬ್ಬಿಸುವ ಕುತ್ಸಿತ ರಾಜಕಾರಣದ ಭಾಗವೆಂದು ಯಾರಿಗೂ ಅರ್ಥವಾಗುತ್ತದೆ.
ಇದಕ್ಕಾಗಿಯೇ ಈಗ ಕೂಗೇಳಬೇಕು ಪರಸ್ಪರ ಪ್ರೀತಿಸಿ ವಿವಾಹ ವಯಸ್ಕ ಯುವಜನರು ಮದುವೆಯಾಗ ಬಯಸಿದರೆ ಯಾವುದೇ ವಿಳಂಬವಿಲ್ಲದೇ ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಮದುವೆಯಾಗಲು ಅವಕಾಶ ಕಲ್ಪಿಸಿ ವಿಶೇಷ ವಿವಾಹ ಕಾಯ್ದೆಗೆ ತಕ್ಷಣ ತಿದ್ದುಪಡಿ ತರಬೇಕು. ಯುವಜನರ ಸಂಗಾತಿ ಆಯ್ಕೆಯ ಹಕ್ಕನ್ನು ಕಾಪಾಡುವ ಮತ್ತು ಅದನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಈಗ ಬೇಕಿರುವುದು. ದೇಶದ ಜಾತ್ಯಾತೀತ ಗುಣ ಲಕ್ಷಣಗಳನ್ನು ಉಳಿಸುವತ್ತ ಇದೂ ಒಂದು ಹೆಜ್ಜೆ ಎಂಬುದು ಸರಳ ಮತ್ತು ಸಹಜ ಸತ್ಯ. ದೇಶದ ಸಂವಿಧಾನವನ್ನು ಗೌರವಿಸಲು ಮೊದಲು ಕಲಿಯಿರಿ ಎಂಬುದೇ ಭೊಗಿಗಳ ರಾಜ್ಯವನ್ನಾಳುತ್ತಿರು ಯೋಗಿಗೂ ಮತ್ತು ಮಹಿಳಾ ವಿರೋಧೀ ಸಾಂಕ್ರಾಮಿಕ ರೋಗ ಪೀಡಿತ ಬಿ.ಜೆ.ಪಿಗರಿಗೂ ತಿಳಿಸುವುದೇ ಮಾರ್ಗ ಉಳಿದಿರುವುದು.