ಪೂಜಾ ಸಿಂಗೆ
ಪುಸ್ತಕ ಪರಿಚಯ
ಪುಸ್ತಕ: ಡಾ.ಅಂಬೇಡ್ಕರ್ ಸಹವಾಸದಲ್ಲಿ (ಆತ್ಮಕಥನ)
ಪರಿಚಯ: ಡಾ. ಸವಿತಾ ಭೀಮರಾವ್ ಅಂಬೇಡ್ಕರ್, ಕನ್ನಡಕ್ಕೆ: ಅನಿಲ ಹೊಸಮನಿ
ಲಡಾಯಿ ಪ್ರಕಾಶನ, ಗದಗ, ಬೆಲೆ: ರೂ. 330/-
ಬಾಬಾಸಾಹೇಬ್ ಎಂಬ ಘನ ವ್ಯಕ್ತಿತ್ವವನ್ನು ಈ ದೇಶಕ್ಕೆ ಸಿಗಲು ಕಾರಣಿಕರ್ತರು ರಮಾತಾಯಿಯ ತ್ಯಾಗದ ಫಲ, ಸವಿತಾ ತಾಯಿಯ ನಿಸ್ವಾರ್ಥ ಸೇವೆಯಿಂದ ತಾಯಿ ಹೃದಯದ ವ್ಯಕ್ತಿತ್ವ ನಮಗೆ ದಕ್ಕಿತು…
ಬಾಬಾಸಾಹೇಬರ ಕುರಿತು ಮಾಯಿಸಾಹೇಬರು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಕೇವಲ ಜಾತಿಯಿಂದ ಬ್ರಾಹ್ಮಣಳು ಎನ್ನುವ ಕಾರಣಕ್ಕೆ ಅವಳ ಕುರಿತು ಇಲ್ಲಸಲ್ಲದ ಆಪಾದನೆ ಮಾಡಿ, ಆ ಮಹಾನ್ ಮಾನವತಾವಾದಿ ಹೆಂಡತಿಯ ಹೆಸರಿಗೆ ಚ್ಯುತಿ ತರುವಂತಹ ಕೆಲಸ ಮಾಡಿಸಿದ್ದು ಇದೆ. ಮನುವಾದಿ ಮನಸ್ಥಿತಿಯ ಬ್ರಾಹ್ಮಣರೆ, ಸ್ವಾರ್ಥ ಸಾಧನೆಗೋಸ್ಕರ ದಲಿತರು ಅವರ ತಾಳಕ್ಕೆ ಕುಣಿದು ಮಾಯಿಸಾಹೇಬರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ ಅಂಬೇಡ್ಕರ್ ಕನಸುಗಳನ್ನು ಸಾಕಾರಗೊಳಿಸಲು ಬಿಡದ ದಲಿತ ಮುಖಂಡರಿಗೆ ಪ್ರತಿ ಪದಗಳಲ್ಲಿ ಉತ್ತರಿಸುತ್ತಾ ಹೋಗುತ್ತಾರೆ.
ಬಾಬಾಸಾಹೇಬ್ ಮತ್ತು ಮಾಯಿಸಾಹೇಬರ ನಡುವೆ ಇರುವ ಅಧಮ್ಯ ಪ್ರೀತಿ, ಪ್ರತಿ ಅಕ್ಷರಗಳಲ್ಲೂ ಕಾಣುತ್ತೇವೆ. ಬಾಬಾಸಾಹೇಬರು ಹಿಂದೂ ಕೋಡ್ ಬಿಲ್ ಜಾರಿ ಮಾಡಲು ಪಣತೊಟ್ಟು ನಿಲ್ಲುತ್ತಾರೆ, ಆದರೆ ಅಂದಿನ ಕಾಂಗ್ರೆಸ್ ಸರ್ಕಾರದ ಸಚಿವರುಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಜಾರಿಯಾಗಲು ಬಿಡದೆ ಸಮಯ ವ್ಯರ್ಥ ಮಾಡುತ್ತಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯ ಪರಿಣಾಮ ಬೀರದಿದ್ದರು “ಅಜೀಜುದ್ದೀನ್ ಅಹ್ಮದ್” ಅವರು ವಿರೋಧ ಮಾಡುತ್ತಾ ಕಾಲಹರಣ ಮಾಡುತ್ತಾರೆ.
ಹಿಂದೂ ಕೋಡ್ ಬಿಲ್ ರಚಿಸಿದಂತೆ, ಮಹಿಳೆಯರಿಗೆ ಯಾವ ಸ್ಥಾನಮಾನ ಸಿಗಬೇಕು ಎಂಬುವುದರ ಕುರಿತು ಅವರ ಕಾರ್ಯದಲ್ಲಿಯೂ ಸಹ ನಾವು ಕಾಣುತ್ತೇವೆ. ರಮಾತಾಯಿಯ ಜೊತೆಗೆ ಮತ್ತು ಸವಿತಾತಾಯಿಯ ಜೊತೆಗೆ ಇರುವ ಸಂಬಂಧದಲ್ಲಿ ನಾವು ಕಾಣುತ್ತೇವೆ. ಬಾಬಾಸಾಹೇಬರ ಆ ಮೃದುತ್ವ, ಆ ಪ್ರೇಮ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿರುವ ಪರಿ ವರ್ಣನೆಗೆ ನಿಲುಕದ ಭಾಷೆ.
ಯಾವುದೇ ಆಸ್ತಿ ಮಾಡಬೇಕೆನ್ನುವ, ಅಧಿಕಾರಿ ಸ್ಥಾನದಲ್ಲಿ ಇರಬೇಕೆಂಬ ಯಾವ ಸ್ವಾರ್ಥವು ಅವರಲ್ಲಿ ಇರಲಿಲ್ಲ, ಅಸ್ಪೃಶ್ಯರ ಬದುಕಿಗೆ ಒಂದು ಮೌಲ್ಯಯುತ ಬದುಕು ಇರಬೇಕು ಅನ್ನೋದೆ ಅವರ ಅಶಯವಾಗಿತ್ತು. ತಮ್ಮ ವೈಯಕ್ತಿಕ ಬದುಕಿಗಿಂತ ಸಾರ್ವಜನಿಕ ಬದುಕಿನಲ್ಲಿ ಹೆಚ್ಚು ಬದುಕಿದರು ಕೂಡ.
ಈ ಪುಸ್ತಕ ಓದುವ ಮುಂಚೆ ನಾನು ತಿಳಿದುಕೊಂಡಿದ್ದು ಬಾಬಾಸಾಹೇಬರು ಕಠೋರ ಮತ್ತು ಸಿಟ್ಟಿನ ಮನುಷ್ಯನೆಂದು. ಆದರೆ ಈ ಪುಸ್ತಕ ಓದುತ್ತಾ ಹೋದಂತೆ ಬಾಬಾಸಾಹೇಬರ ಒಳಗಿದ್ದ ಮುಗ್ಧ ಪ್ರೇಮಿಯ ಪರಿಚಯ ಆಯಿತು ಹಾಗೂ ನಿರಂತರವಾಗಿ ಓದಿಸಿಕೊಂಡು ಹೋಯಿತು.
ಇದರಲ್ಲಿ ಸವಿತಾತಾಯಿಯ ಬದುಕು ತುಂಬಾ ವಿಶಿಷ್ಟ ಅಂತಾನೇ ಹೇಳಬಹುದು. ಅವರು ತಮ್ಮ ಅಪ್ಪನ ಜೊತೆ ಇರುವಾಗಲೇ ತುಂಬಾ ಗಟ್ಟಿಗಿತ್ತಿ ಮತ್ತು ಯಾವುದೇ ಕಟ್ಟುಪಾಡುಗಳ ಜೊತೆಗೆ ಹೊಂದಿಕೊಂಡಿದ್ದವರಲ್ಲವೆಂದು ತಿಳಿಯುತ್ತದೆ. ಅವರ ಅಪ್ಪನ ಕನಸಿನಂತೆ ಡಾಕ್ಟರ್ ಓದಿ, ಮುಂದೆ ಡಾಕ್ಟರ್ ವೃತ್ತಿ ಸೇರಿರುವ ಇವರು ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡು ತಂದೆ ಪ್ರೀತಿಯಲ್ಲಿ ಬೆಳೆಯುತ್ತಾರೆ. ಆಗಿನ ಕಾಲದಲ್ಲಿಯೇ ಬಾಬ್ ಕಟ್ ಮಾಡಿಸಿಕೊಂಡು ದಿಟ್ಟ ಹೆಣ್ಣಾಗಿ ಕಾಣುತ್ತಾರೆ. ಒಟ್ಟು ಎಂಟು ಜನ ಸಹೋದರ ಸಹೋದರಿಯರು ಅವರಲ್ಲಿ ಮುಖ್ಯವಾಗಿ ಆರು ಜನ ಅಂತರ್ಜಾತಿ ವಿವಾಹಕ್ಕೆ ಪ್ರಾಮುಖ್ಯತೆ ನೀಡಿರುತ್ತಾರೆ, ಈ ಪುರುಷ ಪ್ರಧಾನ ವ್ಯವಸ್ಥೆಯನ್ನು ಮೀರಿ ನಡೆಯುವಂತೆ, ಅವರ ತಂದೆನೇ ಅವರಿಗೆ ಸಾಥ್ ಕೊಡುತ್ತಾರೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಗತಿಪರ ವಿಚಾರವುಳ್ಳವರಾಗಿದ್ದರೆಂದು ತಿಳಿಯುತ್ತದೆ. ಸವಿತಾ ತಾಯಿ ಕಾರನ್ನು ಕೂಡ ಓಡಿಸುತ್ತಿದ್ದರು ಹಾಗೂ ಸಾಹಿತ್ಯ ಮತ್ತು ಇತಿಹಾಸ ಅವರ ನೆಚ್ಚಿನ ವಿಷಯಗಳಾಗಿದ್ದವು ಮತ್ತು ಬೌದ್ಧ ಧರ್ಮದ ಕುರಿತು ಅಪಾರ ಪ್ರೀತಿಯುಳ್ಳವರಾಗಿದ್ದರು.
ಬಾಬಾಸಾಹೇಬರು ಕೂಡ ಪ್ರತಿಯೊಂದನ್ನು ತುಂಬಾ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿತಾ ಇದ್ದರು. ಆದರೆ ಕಾರ್ ಓಡಿಸುವುದು ಮಾತ್ರ ಅವರಿಗೆ ಕಷ್ಟವೇ ಆಗಿತ್ತು. ಇಂತಹ ವಿಚಾರಗಳಿಂದೆ ಬಾಬಾಸಾಹೇಬರು ಮತ್ತು ಸವಿತಾತಾಯಿ ಒಂದಾಗೊಕೆ ಸಾಧ್ಯವಾಯಿತು ಎಂಬುದು ನಮಗೆ ಅರ್ಥ ಆಗುತ್ತದೆ. 1947ರಿಂದ 1948-04-14 ತಾರೀಖಿನವರೆಗೂ ಪತ್ರ ವ್ಯವಹಾರದ ಮೂಲಕ ಮಾತುಕತೆ ನಡೆಸುತ್ತಾ ಇರುತ್ತಾರೆ, ಅವರ ವಯುಕ್ತಿಕ ವಿಚಾರಗಳನ್ನಷ್ಟೆ ಅಲ್ಲದೆ ಸಾಮಾಜಿಕ ಚಿಂತನೆಗಳು ಆ ಪತ್ರಗಳಲ್ಲಿ ಕಾಣುತ್ತೇವೆ.
ಬಾಬಾಸಾಹೇಬರು ಮಾತೃಹೃದಯಿ ಮತ್ತು ಸ್ತ್ರೀವಾದಿಯಾಗಿದ್ದರು ಎಂಬುವುದಕ್ಕೆ ಅವರು ಸವಿತಾತಾಯಿಯ ಜೊತೆಗಿನ ಒಡನಾಟ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಉಳಿದಿವೆ. ಕೆಲವೊಂದಿಷ್ಟು ಘಟನೆಗಳು, ಸವಿತಾತಾಯಿಯವರು ಮದುವೆ ರಿಜಿಸ್ಟರ್ ಮಾಡಿಸಲು ದೆಹಲಿಗೆ ತೆರಳುತ್ತಾರೆ. ಅಲ್ಲೆ ಅವರ ಮದುವೆ ನಡೆಯುತ್ತದೆ, ಸವಿತಾತಾಯಿ ಮುಂಬೈಯಿಂದ ದೆಹಲಿಗೆ ವಿಮಾನದಲ್ಲಿ ಹೋಗುತ್ತಾರೆ. ಆಗ ಬಾಬಾಸಾಹೇಬರು ಸವಿತಾತಾಯಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗ್ಬೇಕೆಂದಾಗ ಅವರ ಸಂಗಡಿಗರು ಅವರನ್ನು ತಡೆದು, ಇಲ್ಲ ನೀವೊಬ್ಬರು ಕಾನೂನು ಮಂತ್ರಿ ಹಾಗೆಲ್ಲಾ ಹೋಗುವುದು ಸರಿ ಇಲ್ಲವೆಂದು ಹೇಳ್ದಾಗ ತುಂಬಾ ಬೇಸರದಿಂದ ಕುಳಿತುಕೊಳ್ಳುತ್ತಾರೆ. ಸವಿತಾತಾಯಿ ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಬಾಬಾಸಾಹೇಬರು ಎದ್ದು ಹೋಗಿ ಅವರ ಯೋಗ ಕ್ಷೇಮ ವಿಚಾರಿಸಿ, ನೀನು ಬರುವಾಗ ಯಾವುದೇ ತೊಂದರೆ ಆಗಲಿಲ್ಲ ಅಲ್ಲ..? ನಾನೇ ನಿನ್ನ ಕರೆಯಲು ಬರಬೇಕು ಅಂತ ರೆಡಿಯಾಗಿದ್ದೆ ಆದರೆ ನನ್ನ ಜೊತೆಗಾರರು ತಡೆದರು ಎಂದು ವಿವರಿಸುತ್ತಾ ಸ್ವಾಗತ ಮಾಡಿಕೊಳ್ಳುತ್ತಾರೆ.
ಪ್ರವಾಸಕ್ಕೆ ಡೆಹ್ರಾಡೂನ್ ಗೆ ಹೋಗಿದ್ದಾಗ ಅಲ್ಲಿ ಸ್ವತಃ ಬಾಬಾಸಾಹೇಬರೆ ಅಡುಗೆ ಮಾಡುತ್ತಾರೆ. ಇವರಿಗೆ ವಿದೇಶಿ ಅಡುಗೆ ಎಂದರೆ ತುಂಬಾ ಇಷ್ಟ. ಚಿಕನ್ ಫ್ರೈ, ಮಟನ್, ಇನ್ನಿತರ ಖಾದ್ಯಗಳನ್ನು ಮಾಡುತ್ತಾರೆ. ನಾನು ಅಡುಗೆ ಮಾಡುವವರೆಗೂ ನೀನು ಒಳಗಡೆ ಬರಬೇಡ ಅಂತ ಸವಿತಾ ಅವರಿಗೆ ಹೇಳುತ್ತಾರೆ, ಅವರ ನಡುವಿನ ಸ್ನೇಹ ಒಂದೇ ಎನ್ನುವ ಭಾವ.
ಸವಿತಾತಾಯಿಗೆ ಎದೆ ಮೇಲೆ ಗಡ್ಡೆ ಬೆಳೆಯುತ್ತಿರುತ್ತದೆ. ಅದಕ್ಕೆ ಡಾಕ್ಟರ್ ಹೇಳ್ತಾರೆ, ಕ್ಯಾನ್ಸರ್ ಎಂಬ ಸಣ್ಣ ಸಂಶಯ ಬರುತ್ತದೆ. ಸವಿತಾ ಅವರಿಗಿಂತ ಬಾಬಾಸಾಹೇಬರೆ ಹೆಚ್ಚು ಆತಂಕಕ್ಕೆ ಒಳಗಾಗಿ, ಮಗುವಿನಂತೆ ಅಳ್ತಾರೆ. ಶಾರು ನಿಂಗೇನಾದರೂ ಆದರೆ ನನ್ನ ಗತಿ? ಅಂತ ಹೇಳುತ್ತಾರೆ. ಇದನ್ನು ಓದುವಾಗ ನಿಜಕ್ಕೂ ಕರಳು ಹಿಂಡಿದಂತಾಯಿತು, ಸವಿತಾ ತಾಯಿನೆ ಇವರಿಗೆ ಧೈರ್ಯ ಹೇಳ್ತಾರೆ. ನನಗೇನೂ ಆಗಲ್ಲ ನೀವು ಸಮಾಧಾನವಾಗಿ ಇರಿ ಅಂತ, “ಕೇವಲ ಒಂದು ಹೆಣ್ಣು ಒಂದು ಗಂಡು ಆತ್ಮಕ್ಕೆ ಅಂಟಿದ್ದ ಪ್ರೀತಿಗಿಂತ ಮೆದುಳಿಗೆ ಅಂಟಿದ ಜಾತಿಯ ಮನಸ್ಥಿತಿಗಳ ಕೆಲಸವೇ ಹೆಚ್ಚಾಗಿದ್ದರ ಕಾರಣ ಇವರಿಬ್ಬರ ನಡುವಿನ ನಿಷ್ಕಲ್ಮಶ ಪ್ರೇಮ ಮರೆಯಾಯಿತು.
ಬಾಬಾಸಾಹೇಬರು ಪ್ರತಿಯೊಬ್ಬರಿಗೂ ತಮ್ಮ ಖಡಕ್ ಮಾತುಗಳಲ್ಲೆ ಉತ್ತರಿಸುತ್ತಾ ಇದ್ರು. ಹಾಗೆ ಮನುಷ್ಯ ಸಂಬಂಧಗಳು ಎಲ್ಲೆ ಮೀರಿ ಸ್ನೇಹ ಬೆಳೆಸಿಕೊಂಡಿದ್ದರು.
ದಲಿತರೇ ಬಾಬಾಸಾಹೇಬರಿಗೆ ವಿರೋಧ ಮಾಡುತ್ತಾರೆ, ತಮ್ಮ ಸ್ವಾರ್ಥಕ್ಕಾಗಿ ಅಧಿಕ್ಕಾರಕ್ಕಾಗಿ ದಲಿತರನ್ನೇ ಬಲಿಪಶು ಮಾಡುತ್ತಾರೆ, ಅದಕ್ಕೆ ತಾಜಾ ಉದಾಹರಣೆ ಬಾಬು ಜಗಜೀವನರಾಂ ಅವರು ಬದುಕಿನ ಕೊನೆಗಾಲದವರೆಗೂ ಅಧಿಕಾರದಾಸೆ ಬಿಡಲಿಲ್ಲ. ವಿಠ್ಠಲ ಕದಮ್ ಎಂಬ ಹುಡುಗನಿಗೆ ಬಾಬಾಸಾಹೇಬರು ಓದಲು ಸಹಾಯ ಮಾಡುತ್ತಾರೆ, ನಾಮದೇವ ವಾಘಮೋರೆ ಅವರು ಕೂಡ ಬಾಬಾಸಾಹೇಬರನ್ನು ಭೇಟಿ ಮಾಡಿ ಸಹಾಯ ಪಡೆದಿದ್ದರು.
ಬಾಬಾಸಾಹೇಬರ ಕೊನೆಯ ಇಚ್ಛೆ ಭಾರತವನ್ನು ಬುದ್ಧಮಯ ಮಾಡಬೇಕು ಎಂಬ ಅಧಮ್ಯ ಇಚ್ಛಾಶಕ್ತಿ ಅವರಲ್ಲಿತ್ತು…
ಜಗತ್‌ಪ್ರಸಿದ್ದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ “ಡಾಕ್ಟರ್ ಆಫ್ ಲಾ” ಪದವಿ ಪಡೆಯುತ್ತಾರೆ.
ಬಾಬಾಸಾಹೇಬರಿಗೆ ಹೆಣ್ಣು ಮಗುವಿನ ಮೇಲೆ ಅಪಾರ ಪ್ರೀತಿ ಇತ್ತು, ಅವರ ಕನಸು ಮುಂದೆ ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. 1953ರಲ್ಲಿ, ಕಾಶ್ಮೀರ ಪ್ರಶ್ನೆ ಕುರಿತು ಚರ್ಚಿಸಲು ಶೇಖ ಅಬ್ದುಲ್ ಅವರಿಗೆ ಭೇಟಿಯಾಗಲು ಹೋಗುತ್ತಾರೆ. ಆಗ ಸವಿತಾತಾಯಿ ಗರ್ಭಿಣಿ, ಕಾಶ್ಮೀರದಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ ಬರುವಾಗ, ವಿಪರೀತ ಹೊಟ್ಟೆ ಕಿವುಚಿದಂತಾಗಿ ತಲೆಸುತ್ತು ಬಂದು ವಾಂತಿಯಾಗಿ ದೆಹಲಿ ವಿಮಾ ನಿಲ್ದಾಣದಲ್ಲಿ ಔಷಧಿ ತೆಗೆದುಕೊಳ್ಳುತ್ತಾರೆ. ಆದ ಕಾರಣ ಅವರಿಗೆ ಗರ್ಭಪಾತ ಆಗುತ್ತದೆ. ಇದನ್ನು ಓದಿ ತುಂಬಾ ಬೇಸರ ಆಯ್ತು ಒಂದು ಹೆಣ್ಣೊ ಗಂಡೊ ಯಾವುದಾದರೂ ಸರಿ, ಇವರಿಗೆ ಮಗು ಇರಬೇಕಿತ್ತು ಅಂತ ಅನಿಸಿತು… ಮುಂದೆ ಒಂದು ಹೆಣ್ಣು ಮಗು ದತ್ತು ತೆಗೆದುಕೊಳ್ಳಬೇಕೆನ್ನುತ್ತಾರೆ, ಆದರೆ ಅದು ಸಾಧ್ಯವಾಗಲ್ಲ…
ಬಾಬಾಸಾಹೇಬರಿಗೂ ಅಋೋಗ್ಯದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಇರುತ್ತಿದ್ದವು. ಕೀಲು ನೋವು, ರಕ್ತದೊತ್ತಡ, ಮಧುಮೇಹ, ಕಣ್ಣು ನೋವು, ಕಿವಿ ನೋವು, ಬೆನ್ನು ಮೂಳೆ ನೋವು ಅವರು ಎಷ್ಟೋ ರಾತ್ರಿಗಳು ನಿದ್ದೆನೆ ಮಾಡಲ್ಲ, ಅವರ ಅಪ್ತರಿಗೆ ಬರೆದ ಪತ್ರದಲ್ಲಿ ಆರೋಗ್ಯ ಕುರಿತು ಬರೆದದ್ದು ಕಾಣುತ್ತೇವೆ.
ಬಾಲ್ಯದಿಂದಲೂ ಅವಮಾನ, ಆರ್ಥಿಕ ಸ್ಥಿತಿ, ತಾಯಿ ಪ್ರೀತಿ ಕಾಣದೆ ಇದ್ದಿದ್ದು, ರಮಾತಾಯಿಯ ಸಾವು, ತಂದೆ ಸಾವು, ಮಕ್ಕಳು ಸಾವು ಹೀಗೆ ನಿರಂತರ ನೊಂದುಬೆಂದ ಜೀವ ಬಾಬಾಸಾಹೇಬರದು. ಜೀವನದ ಕೊನೆಯವರೆಗೂ ಅಷ್ಟಾಂಗ ಮಾರ್ಗಗಳ ಪರಿಪಾಲಕ, ನಿಜ ಅಂಬೇಡ್ಕರವಾದಿಯರನ್ನು ಹುಡುಕುವ ಕಾಲ ಬಂತು ನನಗೆ ಈ ಪುಸ್ತಕ ಓದಿ…
ಹೀಗೆ ಬುದುಕಿದ್ರಾ ಬಾಬಾಸಾಹೇಬರು ನಮಗೆ ಪ್ರತಿ ಕ್ಷಣ ನಮ್ಮೊಳಗೆ ಜಾಗೃತ ವ್ಯಕ್ತಿಯಾಗಿ ಎದೆಯೊಳಗೆ ಇಳಿಸಿಕೊಳ್ಳಬೇಕು, ಪ್ರತಿಮೆಗಳಲ್ಲಿ ಅಲ್ಲ ನಡಾವಳಿಯಲ್ಲಿ ನಮ್ಮ ಕೆಲಸಗಳಲ್ಲಿ ಕಾಣಬೇಕು.
ಬಾಬಾಸಾಹೇಬರು ಓದಿದವರಿಗೆ ನಂಬಲಿಲ್ಲ, ಓದಿದವರೆ ಸಮಾಜವನ್ನು ಹಾಳು ಮಾಡ್ತಿರುವುದು… ಆ ನನ್ನ ಹಳ್ಳಿಯ ಮುಗ್ಧ ಜನರನ್ನು ಎಚ್ಚರಗೊಳಿಸಬೇಕು ಅಂತ ಒದ್ದಾಡುತ್ತಾರೆ. ಮಾಯಿಸಾಹೇಬ ಕೂಡ ಬಾಬಾಸಾಹೇಬರು ಕಾರ್ಯಗಳನ್ನೆ ಮುಂದುವರಿಸಿಕೊಂಡು ಹೋಗುತ್ತಾರೆ…
ಹೀಗೆ ಸಾಕಷ್ಟು ವಿಷಯಗಳು ತುಂಬಾ ಪ್ರಾಮಾಣಿಕವಾಗಿ ಪ್ರಸ್ತುತ ಪಡಿಸಿದ್ದಾರೆ.
ತುಂಬಾ ಸರಳ ಭಾಷೆಯಲ್ಲಿ, ಓದುಗನಿಗೆ ಹಿಡಿದಿಟ್ಟುಕೊಳ್ಳುವ ಅನುವಾದಕರ ಬರಹ ಮೆಚ್ಚುವಂತಹದು. ಯಾವ ಪದವು ಗುರುತಿಸಲು ಸಾಧ್ಯವಾಗದಷ್ಟು ಅನುವಾದಗೊಂಡಿದೆ ಎಂದು, ಅಷ್ಟು ಅಚ್ಚುಕಟ್ಟಾಗಿ ಅನುವಾದ ಮಾಡಿ, ನಿಜ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಮಾಯಿ ಸಾಹೇಬರನ್ನು ಕರ್ನಾಟದಲ್ಲೂ ಮಾಯಿಸಾಹೇಬರ ಕುರಿತು ಮಾತಾನಾಡಲು ಈ ಪುಸ್ತಕ ಹೆಜ್ಜೆ ಇಡುತ್ತದೆ. ಭೀಮಾಮಯಿ ಜೀವನ ಜೊತೆಗೆ ನಡೆದು ಬಂದಂತೆ ಪ್ರತಿಯೊಂದು ಘಟನೆ ಕಣ್ಣಿಗೆ ಕಟ್ಟಿದಂತೆ ಅಚ್ಚೊತ್ತಿವೆ ಮನಸ್ಸಿನಲ್ಲಿ…