ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು

ರಾಜಾರಾಂ ತಲ್ಲೂರ

ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ ನಿಂತಿದ್ದೆ. ಬಿ ಎಸ್ಸಿ ಮೊದಲ ವರ್ಷ ಇರಬೇಕು. ಎಬಿವಿಪಿಯಿಂದ ಕಳಚಿಕೊಂಡು ಆಗಷ್ಟೇ ಕನ್ನಡ ಸಾಹಿತ್ಯ ಜಗತ್ತು ಪರಿಚಯ ಆಗುತ್ತಿದ್ದ ದಿನಗಳು.

ಇಡ್ಯರೂ ಇದ್ದರು. ಅವರ ಬಳಿಗೆ ಹಸಿರು ಕಂದು ಚೌಕುಳಿ ಅಂಗಿ ಧರಿಸಿದ, ಕೆದರು ತಲೆಯ, ಜೋಳಿಗೆ ಹಾಕಿದ ಒಬ್ಬರು ಬಂದು ಒಂದು ಹದಿನೈದು ನಿಮಿಷಗಳ ಕಾಲ ಹರಟಿ ಹೋದರು. ಹೋದ ಬಳಿಕ ಇಡ್ಯರು ನನ್ನಲ್ಲಿ ಅವರು ಯಾರು ಗೊತ್ತಾಯ್ತಾ? ಕೇಳಿದರು. ಇಲ್ಲ ಎಂದೆ. ಅದು ಚಂಪಾ ಅಂತ. ಚಂದ್ರ ಶೇಖರ ಪಾಟೀಲರು ಎಂದು ಹಿನ್ನೆಲೆ ಹೇಳಿ, ಪರಿಚಯಿಸಿದರು.

ಆ ಬಳಿಕ ಒಂದು ದಿನ, ಕಾಲೇಜು ಲೈಬ್ರರಿಯ ನಿಯತಕಾಲಿಕ ಸೆಕ್ಷನ್‌ನಲ್ಲಿ “ಸಂಕ್ರಮಣ” ತೆಗೆದು ತೋರಿಸಿ, ಇದು ಆ ದಿನ ನಾನು ಪರಿಚಯಿಸಿದ ಪಾಟೀಲರದು. ಓದು ಎಂದು ಕೊಟ್ಟರು.

ಅಲ್ಲಿಂದಾಚೆಗೆ ನಿಯಮಿತವಾಗಿ ಸಂಕ್ರಮಣ ನನ್ನ ಕುತೂಹಲದ ಭಾಗ ಆಗಿತ್ತು. ಲಂಕೇಶ್ – ಚಂಪಾ ಕೋಳಿ ಜಗಳಗಳು, ಬಂಡಾಯದ ಕತೆಗಳು, ಚಂಪಾ ಅವರ ಕುಕ್ಕುವ ವ್ಯಂಗ್ಯ… ಹೀಗೆ. ಆ ಬಳಿಕ ಎರಡೂ ಮೂರು ಬಾರಿ ಮಂಗಳೂರಿನ ವಿಚಾರ ಸಂಕಿರಣಗಳಲ್ಲಿ ಅವರ ಮಾತುಗಳನ್ನೂ ಕೇಳಿದ್ದೆ. ಬಹುತೇಕ ಅವರು ಕಸಾಪ ಅಧ್ಯಕ್ಷತೆ ವಹಿಸುವ ತನಕ ಅವರ ಬರಹಗಳನ್ನೂ ಹಿಂಬಾಲಿಸಿದ್ದೆ.

ಆ ಕಾಲದ “ಪ್ರಭಾವೀ” ಮಾಧ್ಯಮಗಳ ಸಂಪಾದಕರಾಗಿ ಚಂಪಾ ಅವರ ಬರಹಗಳಲ್ಲಿ ವ್ಯಂಗ್ಯದ ಮೊನಚಿಗೂ ಲಂಕೇಶರ ಬರಹಗಳಲ್ಲಿನ ವ್ಯಂಗ್ಯದ ಮೊನಚಿಗೂ ಇರುವ ವ್ಯತ್ಯಾಸ ನನಗೆ ಬಹಳ ಕೌತುಕದ್ದೆನ್ನಿಸಿತ್ತು. ಅವೆರಡರ ನಡುವೆ ಧಾರವಾಡದ ಭಾಷೆಯ ಮೊನಚೇ ನನಗೆ ಇಷ್ಟ ಆಗುತ್ತಿತ್ತು. ಲಂಕೇಶ್ ಪತ್ರಕರ್ತರಾಗಿ ನನಗೆ ಎಷ್ಟು ಬೇಸರ ತರಿಸುತ್ತಿದ್ದರೋ ಅವರ ಸಾಹಿತ್ಯದ, ಸಾಂಸ್ಕೃತಿಕ ಒಳನೋಟಗಳಿಗಾಗಿ ಅಷ್ಟೇ ಇಷ್ಟ ಆಗುತ್ತಿದ್ದರು.

ನಮ್ಮ ಪೀಳಿಗೆಯ ಓದುವ ಆಸಕ್ತಿಗೆ ಇಂತಹದೆಲ್ಲ ಸಿಕ್ಕಿತ್ತು, ಅದರಿಂದಾಗಿ ಏನೋ ಚೂರುಪಾರು ರಾಜಕೀಯ-ಸಾಮಾಜಿಕ ಪ್ರಜ್ಞೆ ಬೆಳೆಯಿತು ಎಂಬ ಬಗ್ಗೆ ಇಂದು ಹಿಂತಿರುಗಿ ನೋಡಿದಾಗ ಸಮಾಧಾನ ಇದೆ.

ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರಲ್ಲಿ ನೀವೂ ಒಬ್ಬರು. ಚಂಪಾಕಾಲಂ ಮುಗಿಸಿದಿರಿ. ಹೋಗಿಬನ್ನಿ ಸರ್.

Donate Janashakthi Media

Leave a Reply

Your email address will not be published. Required fields are marked *