ಟಿ ಯಶವಂತ
ರಾಜ್ಯದ ಕಬ್ಬು ಬೆಳೆಗಾರ ರೈತರು ಮತ್ತೊಮ್ಮೆ ಬೀದಿಗೆ ಇಳಿದಿದ್ದಾರೆ. ಅಪಜಲ್ ಪುರ, ಹಳಿಯಾಳ ಸೇರಿದಂತೆ ರಾಜ್ಯದ ಎಲ್ಲೆಡೆ ಕಬ್ಬು ಬೆಳೆಗಾರರ ಕೂಗು ಮಾರ್ದನಿಸುತ್ತಿದೆ. ಕಬ್ಬು ಬೆಳೆಗಾರರ ಆಕ್ರೋಶದ ಬಿಸಿಗೆ ರಾಜ್ಯದ ಹಲವೆಡೆ ಆಡಳಿತರೂಢ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಜನ ಸಂಕಲ್ಪ ಯಾತ್ರೆಯೇ ರದ್ದುಗೊಂಡಿದೆ. ರೈತರ ಪ್ರತಿಭಟನೆ ಭಯದಿಂದ ಮಂತ್ರಿಗಳು ಹೆಚ್ಚುವರಿ ಪೊಲೀಸ್ ಭದ್ರತೆಯೊಂದಿಗೆ ಸಂಚರಿಸುತ್ತಿದ್ದಾರೆ.
ಈ ಮಧ್ಯೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಿಗಳು, ಕಬ್ಬು ಬೆಳೆಗಾರರ ಸಂಘಟನೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜಂಟಿ ಸಭೆ ಕರೆದು ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳ ಲಾಭಾಂಶದ ಬಗ್ಗೆ ವರದಿ ನೀಡಲು ಸಕ್ಕರೆ ನಿರ್ದೇಶನಾಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗುವುದು ಹಾಗೂ ಈ ಸಮಿತಿಯಿಂದ ಹತ್ತು ದಿನಗಳಲ್ಲಿ ವರದಿ ಪಡೆದು ಆನಂತರ ದರ ನಿರ್ಧರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇಕಡಾ 50ರಷ್ಟನ್ನು ರೈತರಿಗೆ ಪಾವತಿಸಬೇಕು ಎಂದು ಕಬ್ಬು ಬೆಳೆಗಾರರು ನ್ಯಾಯಯುತವಾಗಿ ಆಗ್ರಹಿಸುತ್ತಾ ಬಂದಿರುವುದು ವಾಸ್ತವವಾಗಿದ್ದರೂ ಕಬ್ಬು ಖರೀದಿ ದರಕ್ಕೆ ಇದನ್ನು ಜೋಡಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ರೈತರು ತಮ್ಮ ಉತ್ಪಾದನಾ ವೆಚ್ಚವನ್ನು ಆಧರಿಸಿ ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಶೇಕಡಾ 50 ರಷ್ಟು ಹೆಚ್ಚುವರಿ ಖರೀದಿ ದರಕ್ಕೆ ಆಗ್ರಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೀಗಿದ್ದರೂ ಉಪ ಉತ್ಪನ್ನಗಳ ಲಾಭಾಂಶದ ಅಧ್ಯಯನದ ನೆಪದಲ್ಲಿ ಖರೀದಿ ದರ ಪ್ರಕಟಿಸದೇ ರೈತರನ್ನು ವಂಚಿಸುವ ಹೀನ ಪ್ರಯತ್ನವನ್ನು ಬಿಜೆಪಿ ಸರ್ಕಾರ ನಡೆಸಿದೆ. ಇದು ಅತ್ಯಂತ ಖಂಡನೀಯ.
ಏಕೇ ಈ ಆಕ್ರೋಶ
ಕಬ್ಬು ಬೆಳೆಯ ಉತ್ಪಾದನಾ ವೆಚ್ಚ ನಿರಂತರವಾಗಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಸಗೊಬ್ಬರ, ಡೀಸೆಲ್, ಕೀಟನಾಶಕಗಳು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ದುಬಾರಿಯಾಗಿವೆ. ಅದೇ ಸಂದರ್ಭದಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಬ್ಬು ಬೆಳೆಗಾರರನ್ನು ಗೋಳು ಹುಯ್ದುಕೊಳ್ಳುವ ಸಾಧನವಾಗಿ ಮಾರ್ಪಟ್ಟು ಕಟಾವು ಮಾಡಲೇಬೇಕಾದ ಒತ್ತಡಕ್ಕೆ ಒಳಗಾದಂತೆಲ್ಲಾ ದರ ಏರಿಸಿ ಶೋಷಣೆಗೆ ಗುರಿಪಡಿಸಲಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ದರದಲ್ಲಾಗುವ ಏರಿಳಿತವನ್ನು ಅನುಸರಿಸಿ ಸಕ್ಕರೆ ಕಾರ್ಖಾನೆಗಳು ತಮ್ಮ ಗರಿಷ್ಠ ಲಾಭಾಂಶವನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಕಾರ್ಖಾನೆಯನ್ನು ವಿಳಂಭವಾಗಿ ಆರಂಭಿಸುವುದು, ಕಬ್ಬು ಅರೆಯುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುವುದು, ಕರಾರು ಹಾಗೂ ಸ್ಥಳೀಯ ರೈತರ ಕಬ್ಬು ಅರೆಯುವ ಬದಲು ದೂರದ ಕಬ್ಬು ಅರೆಯಲು ಅಧ್ಯತೆ ನೀಡುವುದು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ ಆರ್ ಪಿ (ನ್ಯಾಯಯುತ ಹಾಗೂ ಲಾಭದಾಯಕ ದರ) ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದ್ದರೂ ಅದನ್ನು ಕೂಡ ಪಾವತಿಸದೇ ಸತಾಯಿಸುವುದು ಮತ್ತು ಈ ದರದಲ್ಲೂ ವರ್ಷಗಟ್ಟಲೆ ಬಾಕಿ ಉಳಿಸಿಕೊಳ್ಳುವುದು ಹೀಗೆ ವಿವಿಧ ರೀತಿಯಲ್ಲಿ ಕಬ್ಬು ಬೆಳೆಗಾರರಿಗೆ ಕಿರುಕುಳ ನೀಡಿ ಶೋಷಿಸುತ್ತಿವೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆನೇಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ ಈ ಒಂಬತ್ತು ವರ್ಷಗಳಲ್ಲಿ ಕಬ್ಬಿನ ಎಫ್ ಆರ್ ಪಿ ದರ ಕೇವಲ ಟನ್ ಗೆ 72 ರೂ ಮಾತ್ರ ಹೆಚ್ಚಾಗಿದೆ ಮಾತ್ರವಲ್ಲ ಎಫ್ ಆರ್ ಪಿ ದರ ಪಾವತಿಗೆ ಇದ್ದ ಬೇಸ್ ಲೇನ್ ಅನ್ನೇ ಕಾರ್ಖಾನೆಗಳ ಮಾಲೀಕರ ದರೋಡೆಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆ. ಶೇಕಡಾ 9.5 ಇಳುವರಿಗೆ ಇದ್ದ ಬೇಸ್ ಲೇನ್ (ಒಂದು ಟನ್ ಕಬ್ಬು ಅರೆದರೆ 95 ಕೆಜಿ ಸಕ್ಕರೆ ಉತ್ಪತ್ತಿ) ಅನ್ನು ಮೋದಿ ಸರ್ಕಾರ ಶೇಕಡಾ 10.25 ಕ್ಕೆ (ಒಂದು ಟನ್ ಕಬ್ಬು ಅರೆದರೆ ಒಂದು ಕ್ವಿಂಟಾಲ್ ಇಪ್ಪತೈದು ಕೆಜಿ ಸಕ್ಕರೆ ಉತ್ಪತ್ತಿ) ಬದಲಾಯಿಸಿದೆ. ಅಂದರೆ ಈ ಒಂಬತ್ತು ವರ್ಷಗಳಲ್ಲಿ ಹೆಚ್ಚಳವಾಗಿರುವ ಕನಿಷ್ಠಾತಿಕನಿಷ್ಠ ಮೊತ್ತವು ಕೂಡ ರೈತರಿಗೆ ಸಿಗದಂತೆ ಆಗಿದೆ.
ಈ ಕಳೆದ 4 ವರ್ಷಗಳ ಏರಿಕೆ ಪ್ರಮಾಣ ಪರಿಗಣಿಸಿದರೆ ಅಂದರೆ 2018-19 ರಿಂದ 2022-23 ರವರೆಗಿನ ಅವಧಿಯಲ್ಲಿ ಕಬ್ಬಿನ ಖರೀದಿ ದರ ಕೆಜಿಗೆ ಕೇವಲ ಇಪ್ಪತೈದು ಪೈಸೆ ಮಾತ್ರ ಹೆಚ್ಚಳ ಆಗಿದೆ.
ಒಂದು ಕಡೆ ರಸಗೊಬ್ಬರ, ಡೀಸೆಲ್, ಕೀಟನಾಶಕ, ಕಟಾವು, ಸಾಗಾಣಿಕೆ ವೆಚ್ಚ ನಾಗಾಲೋಟದಲ್ಲಿ ನೂರಾರು ರೂ.ಗಳ ಲೆಕ್ಕದಲ್ಲಿ ಏರಿಕೆ ಆಗುತ್ತಿದ್ದರೆ ಇನ್ನೊಂದು ಕಡೆ ಕಬ್ಬು ಖರೀದಿ ದರ ಮಾತ್ರ ಕುಂಟುತ್ತಾ, ತೆವಳುತ್ತಾ ಪೈಸೆಗಳಲ್ಲಿ ಏರಿಕೆ ದಾಖಲಿಸಿದೆ. ಈ ಅನ್ಯಾಯವೇ ಕಬ್ಬು ಬೆಳೆಗಾರರು ಆಕ್ರೋಶಗೊಳ್ಳಲು ಕಾರಣ.
ಏನಿದು ಎಫ್ ಆರ್ ಪಿ ಮತ್ತು ಎಸ್ ಎ ಪಿ
2012ರಲ್ಲಿ ಅಸ್ತಿತ್ವಕ್ಕೆ ಬಂದ ರಂಗರಾಜನ್ ಸಮಿತಿ 2013ರಲ್ಲಿ ತನ್ನ ವರದಿ ನೀಡಿತು. ಇಡೀ ಸಕ್ಕರೆ ಉದ್ಯಮವನ್ನು ಸಂಪೂರ್ಣ ನಿಯಂತ್ರಣ ಮುಕ್ತ ಮಾಡುವ ಶಿಪಾರಸ್ಸು ಮಾಡಿದ ಈ ಸಮಿತಿ ಅದುವರೆಗೆ ಜಾರಿಯಲ್ಲಿ ಇದ್ದ ಎಸ್ ಎಂ ಪಿ (ಶಾಸನಬದ್ಧ ಕನಿಷ್ಠ ದರ) ಹಾಗೂ ಎಸ್ ಎ ಪಿ (ರಾಜ್ಯ ಸಲಹಾ ದರ) ಪದ್ದತಿಯನ್ನು ರದ್ದುಪಡಿಸಿತು. ಸಕ್ಕರೆ ಮಾಲೀಕರ ಕಪಿಮುಷ್ಠಿಯಲ್ಲಿ ಇದ್ದ ಸರ್ಕಾರಗಳು ರೈತರ ವಿರೋಧವನ್ನು ಲೆಕ್ಕಿಸದೇ ರಂಗರಾಜನ್ ವರದಿಯನ್ನು ಸಂಪೂರ್ಣವಾಗಿ ಒಪ್ಪಿ ಜಾರಿ ಮಾಡಲು ಆರಂಭಿಸಿದವು . ಎಸ್ ಎಂ ಪಿ ಹಾಗೂ ಎಸ್ ಎ ಪಿ ಪದ್ದತಿಯ ಬದಲಿಗೆ ಎಫ್ ಆರ್ ಪಿ (ನ್ಯಾಯಯುತ ಹಾಗೂ ಲಾಭದಾಯಕ ದರ) ವ್ಯವಸ್ಥೆಯನ್ನು ಜಾರಿಗೆ ತಂದವು. ಸಿಎಸಿಪಿ (ಕೃಷಿ ವೆಚ್ಚ ಮತ್ತು ದರ ಆಯೋಗ) ನಿಗದಿಪಡಿಸಿದ ಉತ್ಪಾದನಾ ವೆಚ್ಚವನ್ನು ಆಧರಿಸಿ ಎಪ್ ಆರ್ ಪಿ ಯನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತಾ ಬಂದಿದೆ. ಸಿಎಸಿಪಿಯು ಲೆಕ್ಕ ಹಾಕುವ ಉತ್ಪಾದನಾ ವೆಚ್ಚ ರೈತನ ಬಂಡವಾಳ ಮತ್ತು ಮೂಲಸೌಕರ್ಯಗಳ ಮೇಲೆ ಮಾಡಿರುವ ವೆಚ್ಚವನ್ನಾಗಲಿ ಹಾಗೂ ನಿರ್ವಹಣಾ ಶ್ರಮವನ್ನಾಗಲಿ ಒಳಗೊಳ್ಳುವುದಿಲ್ಲ. ಕೇವಲ ಆಯಾ ಸೀಸನ್ನಿನ ಕೃಷಿ ವೆಚ್ಚವನ್ನು ಮಾತ್ರ ಪರಿಗಣಿಸುತ್ತದೆ. ಈ ಕೃಷಿ ವೆಚ್ಚವೂ ಕೂಡ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಇರುವ ಕೃಷಿ ವೆಚ್ಚವನ್ನೇ ಸಂಪೂರ್ಣ ಆಧರಿಸಿದೆ. ಹೀಗೆ ಉತ್ಪಾದನಾ ವೆಚ್ಚದ ಲೆಕ್ಕದಲ್ಲೇ ಬಹಳ ಅನ್ಯಾಯ ಸಿಎಸಿಪಿ ಲೆಕ್ಕಾಚಾರದಲ್ಲಿ ಆಗುತ್ತಿದೆ. ಇದನ್ನು ಆಧರಿಸಿದ ಎಫ್ ಆರ್ ಪಿ ದರ ನ್ಯಾಯ ಮತ್ತು ಲಾಭದ ಅಣಕವಷ್ಟೇ .
ಕೇಂದ್ರ ಸರ್ಕಾರ ಎಸ್ ಎಂ ಪಿ (ಶಾಸನಬದ್ಧ ಕನಿಷ್ಠ ದರ) ಪ್ರಕಟಿಸುತ್ತಿದ್ದಾಗ ಪ್ರತಿ ಕಬ್ಬು ಬೆಳೆಯುವ ರಾಜ್ಯವು ರಾಜ್ಯ ಸಲಹಾ ದರವನ್ನು ಪ್ರಕಟಿಸುತ್ತಿತ್ತು. ಇದು ಎಸ್ ಎಂ ಪಿ ಗಿಂತ ಹೆಚ್ಚು ಇರುತ್ತಿತ್ತು. ಸಹಜವಾಗಿ ರೈತರು ತಮ್ಮ ಪ್ರತಿಭಟನೆಗಳ ಮೂಲಕ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹಾಕುವ ಸಾಮಾರ್ಥ್ಯ ಹೆಚ್ಚಾಗಿರುತ್ತದೆ. ಆದರೆ ಯಾವಾಗ ಎಫ್ ಆರ್ ಪಿ ವ್ಯವಸ್ಥೆ ಬಂತೋ ಆಗ ರಾಜ್ಯ ಸಲಹಾ ದರ ಪ್ರಕಟಿಸುವ ಪದ್ದತಿಯನ್ನು ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣೆ ಹಾಕಿ ಕೈ ಬಿಟ್ಟವು.
ಆದರೂ ಪ್ರತಿಭಟನೆಗಳು ತೀವ್ರವಾಗಿ ನಡೆದಾಗಲೆಲ್ಲಾ ಆಗಾಗ್ಗೆ ರಾಜ್ಯ ಸಲಹಾ ದರವನ್ನು ರಾಜ್ಯ ಸರ್ಕಾರಗಳು ಪ್ರಕಟಿಸಿವೆ. ರಂಗರಾಜನ್ ಸಮಿತಿ ಶಿಪಾರಸ್ಸು ಜಾರಿಗೆ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಆಗಲಿ, ಕೇಂದ್ರ ಸರ್ಕಾರಕ್ಕೆ ಆಗಲಿ ದರ ನಿಗದಿಪಡಿಸುವ ಅಧಿಕಾರ ಇಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಪ್ರಭಾವಿ ಸಂಘಟನೆ ಮೂಲಕ ಕರ್ನಾಟಕ ಹೈಕೋರ್ಟ್ ಕದ ತಟ್ಟಿದಾಗ ಮಾಲೀಕರ ವಿರುದ್ದವಾಗಿ ತೀರ್ಪು ಬಂತು. ಈ ತೀರ್ಪಿಗೆ ಮೆಲ್ಮನವಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠ ಆಗಸ್ಟ್ 2020 ರಲ್ಲಿ ಕಬ್ಬು ಖರೀದಿ ದರ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿತು.
ಹೀಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳು ರಾಜ್ಯ ಸಲಹಾ ದರ ನಿರ್ಧರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿ ಹಿಡಿದಿದ್ದರೂ ತಮ್ಮ ಅಧಿಕಾರ ಚಲಾಯಿಸಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.
ಕಾರ್ಖಾನೆ ಆರಂಭಕ್ಕೂ ಮುಂಚೆ ಕಬ್ಬು ಬೆಳೆ ಉತ್ಪಾದನಾ ವೆಚ್ಚ ಆಧರಿಸಿ ರಾಜ್ಯ ಸಲಹಾ ದರವನ್ನು ನಿಗದಿಪಡಿಸುವ ಬದಲು ಉಪ ಉತ್ಪನ್ನಗಳ ಲಾಭಾಂಶ ಮತ್ತು ಕಾರ್ಖಾನೆಗಳ ರೆವಿನ್ಯೂವನ್ನು ಪರಿಗಣಿಸುವ ಬಿಜೆಪಿ ಸರ್ಕಾರದ ವರಸೆ ಕಬ್ಬು ಬೆಳೆಗಾರರಿಗೆ ಮೋಸ ಮಾಡುವ ದುರುದ್ದೇಶವನ್ನು ಹೊಂದಿರುವಂತಹದ್ದು. ಲಾಭವನ್ನು ನಷ್ಟವಾಗಿ ತೋರಿಸಿಕೊಳ್ಳುವುದು ಕಾರ್ಖಾನೆಗಳ ಮಾಲೀಕರಿಗೆ ಚೆನ್ನಾಗಿ ಗೊತ್ತು.
ರಾಜ್ಯ ಸಲಹಾ ದರ ನಿಗದಿಯನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬಾರದು ಮತ್ತು ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇಕಡಾ 50ರಷ್ಟು ಪಾಲು ಕಬ್ಬು ಪೂರೈಸಿರುವ ರೈತರಿಗೆ ಸಿಗಬೇಕು. ಇದರಲ್ಲಿ ಯಾವ ವಂಚನೆಯನ್ನು ಕಬ್ಬು ಬೆಳೆಗಾರರು ಸಹಿಸುವುದಿಲ್ಲ.
ಈಗ ಎದ್ದಿರುವ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಇದೇ ನವೆಂಬರ್ 28, 2022ರಂದು ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರ ಸಂಘಟನೆಯ ಕಾರ್ಯಕರ್ತರ, ಬೆಳೆಗಾರರ ಸಭೆ ನಡೆಯಲಿದ್ದು ಅಖಿಲ ಭಾರತ ಕಬ್ಬು ಬೆಳೆಗಾರರ ಒಕ್ಕೂಟದ ರವೀಂದ್ರನ್ ಅವರನ್ನು ಆಹ್ವಾನಿಸಲಾಗಿದೆ.
(ಲೇಖಕರು – ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ)