ಜ್ಯೋತಿ ಶಾಂತರಾಜು
ಮಹಿಳೆಯೆಂದರೆ ಬರೀ ಗಂಡ ಮಕ್ಕಳು ಮನೆ ನೋಡಿಕೊಂಡಿರಬೇಕು ಎಂಬ ಮಾತೊಂದಿತ್ತು. ಮಹಿಳೆ ಇವತ್ತು ಅಸೀಮಳು. ಕುಡುಕ ಗಂಡ ಚಿಕ್ಕ ಮಕ್ಕಳು ಮನೆ ಸಾಗಿಸಲು ಸಮಸ್ಯೆಗಳ ಸರಮಾಲೆಯೇ ಇದ್ದಾಗಿಯೂ ಯಾವುದೇ ನೆಪ ಹೇಳದೇ ಅಚ್ಚುಕಟ್ಟು ಜೀವನಕ್ಕಾಗಿ ಯಾವ ನೋವನ್ನೂ ತೋರಿಸಿಕೊಳ್ಳದೆ ಮನೆಗಾಗಿ ಮಕ್ಕಳಿಗಾಗಿ ದಿನವಿಡೀ ದುಡಿದು ಸವೆಯುವ ಹೆಣ್ಣುಮಕ್ಕಳು ಆದರ್ಶವಾಗದಿರಲು ಹೇಗೆ ಸಾಧ್ಯ…. ಅಂಥದ್ದೇ ಆದರ್ಶ ಮಹಿಳೆಯೊಬ್ಬರ ಜೀವನಗಾಥೆ ನಿಮ್ಮ ಓದಿಗಾಗಿ.
ನಾಗವೇಣಿ ಅವರು ಟಿವಿಎಸ್ ಎಕ್ಸೆಲ್ ಓಡಿಸಿಕೊಂಡು ತೆಂಗಿನಕಾಯಿ, ಸೊಪ್ಪು, ನಿಂಬೆಹಣ್ಣು ಮಾರುತ್ತಾ ಎದುರಾದದ್ದು ಜಕ್ಕೂರ್ ಲೇಔಟಿನ ಸಮೀಪ. ಅವರನ್ನು ನೋಡಿ ಖುಷಿಯಾಯ್ತು. ಇಲ್ಲಿತನಕ ಗಂಡಸರು ಹೀಗೆ ಗಾಡಿಯಲ್ಲಿ ಸೊಪ್ಪು, ತರಕಾರಿ ವ್ಯಾಪಾರ ಮಾರುತ್ತಾ ಬರುವುದನ್ನು ನೋಡಿದ್ದೇನೆ. ಹೆಣ್ಣುಮಕ್ಕಳು ನನಗೆ ಬರಲ್ಲ, ಗೊತ್ತಿಲ್ಲ, ಓದಿಲ್ಲ ಎಂಬ ನೆಪಗಳನ್ನು ಹೇಳದೆ ಸ್ವಾವಲಂಬನೆಯಿಂದ ನಾನೂ ಮಾಡಬಲ್ಲೆ ಅಂತ ಗಾಡಿ ಓಡಿಸಿಕೊಂಡು ವ್ಯಾಪಾರ ಮಾಡುತ್ತಿರುವ ದೃಶ್ಯ ನನ್ನ ಮನ ಸೆಳೆಯಿತು. ಅವರೊಂದಿಗೆ ಮಾತಿಗಿಳಿದಾಗ ‘ಕುರಗೋಡು ಗ್ರಾಮ, ಬಳ್ಳಾರಿ ನನ್ನ ಸ್ವಂತ ಊರು ಎಂದು ಮಾತನ್ನು ಪ್ರಾರಂಭಮಾಡುತ್ತಾರೆ. ಈಗ ನನಗೆ ಮೂವತ್ತೆರಡು ವರ್ಷ. ಎರಡು ಗಂಡು ಒಂದು ಹೆಣ್ಣು ಮಗು ಸೇರಿ ಮೂರು ಮಕ್ಕಳು. ಬಾಗಲೂರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಜೀವನೋಪಾಯಕ್ಕಾಗಿ ಬಾಗಲೂರಿಗೆ ಬಂದು ಒಂಭತ್ತು ವರ್ಷವಾಯ್ತು. ನಮ್ಮ ಮಾತೃ ಭಾಷೆ ತೆಲುಗು ಬೆಂಗಳೂರಿಗೆ ಬಂದಮೇಲೆ ವ್ಯಾಪಾರ ಮಾಡುವಷ್ಟು ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಮಾತನಾಡುವುದನ್ನು ಕಲಿತಿದ್ದೇನೆ’.
‘ನನಗೆ ಮದುವೆಯಾಗಿ ಹದಿನೆಂಟು ವರ್ಷವಾಗಿದೆ. ಋತುಮತಿಯಾದ ಒಂದು ವರ್ಷಕ್ಕೆ ಅಂದರೆ ನನ್ನ ಹದಿನೈದನೇ ವಯಸ್ಸಿಗೆ ಮದುವೆ ಮಾಡಿದ್ರು. ಮದುವೆಗಿಂತ ಮುಂಚೆ ನಾನು ಎಂಟು ವರ್ಷದವಳಿದ್ದಾಗ ಅಪ್ಪ ನೆಟ್ಕಂಟಯ್ಯ ಟಿಬಿ ಖಾಯಿಲೆಯಿಂದ ತೀರಿಕೊಂಡರು. ಅಮ್ಮ ಸುಜಾತ ಆಸ್ಪತ್ರೆಗೆ ತುಂಬ ಓಡಾಡಿ ಎಷ್ಟು ಪ್ರಯತ್ನಪಟ್ಟರು ಅಪ್ಪನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನು ಓದಿ: ಮಕ್ಕಳ ಶಿಕ್ಷಣಕ್ಕಾಗಿ ಪ್ರತಿದಿನ 130 ಕಿ.ಮೀ. ಪ್ರಯಾಣ ಮಾಡುವ ಶಿಕ್ಷಕ ಮಂಜುನಾಥ್
ಅಪ್ಪ ತೀರಿಕೊಂಡ ಮೇಲೆ ಅಮ್ಮನಿಗೆ ಸಂಸಾರ ನಡೆಸುವುದು ತುಂಬ ಕಷ್ಟವಾಗಿಬಿಡ್ತು. ಒಟ್ಟು ನಾವು ಮೂರು ಜನರು ಮಕ್ಕಳು ನಾನು, ನನ್ನ ತಂಗಿ ಮತ್ತು ಚಿಕ್ಕವನು ತಮ್ಮ. ಆಗ ನಮ್ಮವ್ವನೇ ದುಡಿದು ನಮ್ಮನ್ನೆಲ್ಲ ಸಾಕಬೇಕು. ಜೊತೆಗೆ ಅಪ್ಪನನ್ನು ಆಸ್ಪತ್ರೆಗೆ ತೋರಿಸಲು ನಮ್ಮಮ್ಮ ಸಾಲ ಮಾಡಿದ್ಲು. ಎಷ್ಟು ದುಡಿದರೂ ಸಾಲ ತೀರಿ, ಹತ್ತೋ ಇಪ್ಪತ್ತೋ ರೂಪಾಯಿ ಕೈಗೆ ಬರುತ್ತಿತ್ತು. ಅಮ್ಮನ ಕಷ್ಟಕ್ಕೆ ಜೊತೆಯಾಗಿ ತೋಟದ ಕೆಲಸಕ್ಕೆ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಅಮ್ಮನಿಗೆ ಇಪ್ಪತ್ತು ರೂಪಾಯಿ ಕೂಲಿ ಕೊಟ್ಟರೆ ನನಗೆ ಹದಿನೈದು ರೂಪಾಯಿ ಕೊಡುತ್ತಿದ್ದರು. ಹೊಲಗಳಲ್ಲಿ ನೆಲ್ಲು ಕೊಯ್ಯುವುದು, ನಾಟಿ ನೆಡುವುದು, ಹಣ್ಣು ಮೆಣಸಿನಕಾಯಿ ಕೀಳುವುದು ಹೀಗೆಲ್ಲ ಹನ್ನೊಂದು ವರ್ಷಕ್ಕೆ ಹೊಲದ ಕೆಲಸಗಳಿಗೆ ಕರೆದುಕೊಂಡು ಹೋಗುತ್ತಿದ್ದಳು ಅಮ್ಮ’.
‘ನಂತರ ಆಂಧ್ರದ ವಿಜಯವಾಡ, ಗುಂಟೂರಿಗೆ ಹತ್ತಿ ಬಿಡಿಸುವ ಕೆಲಸಕ್ಕೆ ಹೋದೆವು. ಅಲ್ಲಿ ಒಂದು ಕೆಜಿ ಹತ್ತಿ ಬಿಡಿಸಿದರೆ ಎರಡು ರೂಪಾಯಿ ಕೊಡುತ್ತಿದ್ದರು. ದಿನವೊಂದಕ್ಕೆ ಹಗಲಿನಿಂದ ಸಂಜೆವರೆಗೆ ಕೆಲಸ ಮಾಡಿದ್ರು ಹದಿನೆಂಟರಿಂದ ಇಪ್ಪತ್ತು ಕೆಜಿ ಹತ್ತಿ ಬಿಡಿಸುತ್ತಿದ್ದೆವು. ಬೆಳಗ್ಗೆನೇ ಹೋಗಿ ಸಾಯಂಕಾಲದವರೆಗೂ ಕೆಲಸ ಮಾಡಿದ್ರೆ ಮೂವತ್ತು ಕೆಜಿ ಬಿಡಿಸುತ್ತಿದ್ದೆವು. ಆ ದಿನ ನಮಗೆ ತುಂಬ ಖುಷಿ. ಅದೇ ದೊಡ್ಡ ದುಡಿಮೆ ನಮಗೆ.’
‘ನಂತರ ನಮ್ಮೂರಿಗೆ ಬಂದ್ವಿ. ಅಲ್ಲಿ ಇಲ್ಲಿ ತೋಟದ ಕೆಲಸ, ಮನೆ ಕೆಲಸ ಮಾಡುತ್ತಿದ್ದೆವು. ಅಮ್ಮನಿಗೆ ಮನೆ ಕೆಲಸ ಮಾಡುವುದು ಕಷ್ಟವಾಗಿ ಹಣ್ಣು ಮಾರಲು ಹೋದಳು. ಮನೆಯಲ್ಲಿ ಕೆಲಸ ಮಾಡಿಕೊಂಡು ಟೈಲರಿಂಗ್ ಉಚಿತವಾಗಿ ಕಲಿಸಿ ಕೊಡುತ್ತಾರೆ ಎನ್ನುವ ಯೋಜನೆ ಬಂದಿತ್ತು ಹಾಗಾಗಿ ಕಲಿಯಲು ಹೋದೆ. ಸ್ವಲ್ಪ ದಿನಗಳಲ್ಲಿ ಋತುಮತಿಯಾದೆ. ನಂತರ ನಮ್ಮ ಮನೆಯಲ್ಲಿ ನನ್ನನ್ನು ಟೈಲರಿಂಗ್ ಕಲಿಯಲು ಕಳುಹಿಸಲಿಲ್ಲ. ಮತ್ತೆ ತೋಟದ ಕೆಲಸಕ್ಕೆ ಹೋಗುತ್ತಿದ್ದೆ. ಆಗ ನನಗೆ ಮದುವೆ ಮಾಡಲು ಗಂಡು ನೋಡಿದರು. ಆ ಗಂಡಿಗೆ ಮೊದಲೇ ಮದುವೆಯಾಗಿದ್ದು, ಹೆಂಡತಿ ಇಷ್ಟ ಇಲ್ಲ ಅಂತ ಮೂರು ತಿಂಗಳಿಗೆ ಬಿಟ್ಟು ಹೋಗಿದ್ದಳಂತೆ. ನಮ್ಮೂರಿಗೆ ಬಂದು ಇರುವುದನ್ನೇ ಹೇಳಿ ನನ್ನ ಮದುವೆ ಮಾಡಿಕೊಡಿ ಅಂತ ಕೇಳಿದರು. ನಿಮ್ಮ ಹುಡುಗಿಯನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೇವೆ. ಚೆನ್ನಾಗಿ ಕೆಲಸ ಮಾಡುತ್ತಾಳೆ. ಒಂದು ಎಕರೆ ಜಮೀನು ಬರೆದು ಕೊಡುತ್ತೇವೆ ಎಂದು ನನ್ನ ಮದುವೆ ಮಾಡಿಕೊಂಡರು. ಹುಡುಗಿ ಇಷ್ಟ ಇಲ್ಲ ಅಂತ ತಾನೆ ಓಡಿ ಹೋಗಿದ್ದಾಳೆ. ಇವರಾಗೇ ಕಳಿಸಿಲ್ಲವಲ್ಲ ಅಂತ ಅಮ್ಮ ಕೂಡ ಒಪ್ಪಿಕೊಂಡಳು. ಒಡವೆ, ವರದಕ್ಷಿಣೆ ಬೇಡ ಅನ್ನುತ್ತಿದ್ದಾರೆ. ನನಗೆ ನಮ್ಮಪ್ಪ ಇಲ್ಲ ನಮ್ಮಮ್ಮನಿಗೆ ಒಡವೆ ವರದಕ್ಷಿಣೆ ಕೊಡೋಕೆ ಆಗಲ್ಲ. ನಮ್ಮಪ್ಪನ ಅನಾರೋಗ್ಯಕ್ಕಾಗಿ ಮಾಡಿದ ಸಾಲವನ್ನೇ ತೀರಿಸುತ್ತಿದ್ದಳು ಅಮ್ಮ. ಯಾವುದೇ ಹಬ್ಬ ಬಂದರೂ ನಮಗೊಂದು ಒಳ್ಳೆಯ ಬಟ್ಟೆ ಇಲ್ಲ. ಯಾರಾದರೂ ಅವರು ಇವರು ಕೊಟ್ಟ ಬಟ್ಟೆಗಳನ್ನೇ ತುಂಬ ಇಷ್ಟ ಪಟ್ಟು ಹಾಕಿಕೊಳ್ಳುತ್ತಿದ್ದೆವು. ಹಾಕಿಕೊಳ್ಳಲು ಒಂದು ಒಳ್ಳೆಯ ಬಟ್ಟೆಯೂ ಇಲ್ಲದೆ ಬದುಕಿದ್ದೆನಲ್ಲ… ಮದುವೆಯಾದರೆ ನನ್ನ ಗಂಡ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂಬ ಆಸೆಯಿಂದ ನಾನು ಒಪ್ಪಿಕೊಂಡೆ. ಹುಡುಗ ನೋಡಲು ಚೆನ್ನಾಗಿದ್ದಾನೆ ಅಂತ ಅಮ್ಮ ಸಹ ಒಪ್ಪಿ ಮದುವೆ ಮಾಡಿದಳು.’
ಇದನ್ನು ಓದಿ: ನದಿ, ಜಲಪಾತಗಳಲ್ಲಿ ಮುಳುಗಿದ ಶವ ತೆಗೆಯುವ ಬಾಬಾ ಅಣ್ಣು ಸಿದ್ದಿ ಅವರ ಸಾಹಸ ಗಾಥೆ
‘ಮದುವೆ ಆದ ಮೇಲೆ ಮೇಕೆ ಮೇಯಿಸುವುದು, ಹಸುವಿಗೆ ಹುಲ್ಲು ಕೊಯ್ದು ತಲೆಯ ಮೇಲೆ ಹೊತ್ಕೊಂಡ್ ಬರಬೇಕಿತ್ತು. ಗಂಡನ ಮನೆಯಲ್ಲಿ ಆರು ಜನರು ಅಣ್ಣ ತಮ್ಮಂದಿರು, ಎರಡು ಹೆಣ್ಣುಮಕ್ಕಳ ಕೂಡು ಕುಟುಂಬ. ಅಷ್ಟೂ ಜನರಿಗೆ ಅಡುಗೆ ಮಾಡಬೇಕಿತ್ತು. ಮೂರ್ನಾಲ್ಕು ತಾಸು ಅಡಿಗೆ ಮಾಡಿದರೂ ಎಲ್ಲರಿಗೂ ರೊಟ್ಟಿ ತಟ್ಟಿ, ಕಾಯಿ ಪಲ್ಯ ಮಾಡುವುದು ಮುಗಿಯುತ್ತಿರಲಿಲ್ಲ. ಅಷ್ಟೂ ಜನರ ಬಟ್ಟೆಗಳನ್ನು ಕಾಲುವೆ ನೀರಿನಲ್ಲಿ ಒಗೆದು ತರಬೇಕಿತ್ತು. ಒಂದು ದಿನ ಅಡುಗೆ ಮಾಡಿಲ್ಲ ಅಂದರೂ ನನ್ನ ಗಂಡ ಕುಡಿದು ಬಂದು ಮನಸ್ಸೋ ಇಚ್ಛೆ ಹೊಡೆಯುತ್ತಿದ್ದರು. ಅದು ಸಗಣಿ ಮನೆ, ಎರಡು ದಿನಕ್ಕೊಮ್ಮೆ ಸಗಣಿ ಸಾರಿಸಬೇಕು. ಕುಡಿಯುವ ನೀರಿಗೆ ಸುಮಾರು ಒಂದು ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು. ಒಮ್ಮೆಗೆ ತಲೆಯ ಮೇಲೊಂದು ಕಂಕುಳಲ್ಲೊಂದು ಎರಡು ಕೊಡ ಹೊತ್ತು ತರಬೇಕು. ಒಂದು ದಿನಕ್ಕೆ ಕುಡಿಯುವ ನೀರು ಮತ್ತು ಬಳಸುವ ನೀರು ಸೇರಿ ಮೂವತ್ತು ಕೊಡ ತರಬೇಕಿತ್ತು.
ಹೀಗೆ ಎರಡೂವರೆ ವರ್ಷಗಳ ಕಾಲ ಕಳೆಯಿತು. ಅಷ್ಟು ಹೊತ್ತಿಗೆ ನನಗೆ ನಾಲ್ಕು ಸಲ ಗರ್ಭಪಾತವಾಗಿತ್ತು. ಎರಡೆರಡು ಬಿಂದಿಗೆ ನೀರು ಹೊರಬೇಕಲ್ಲ, ಒಂದು ಬಿಂದಿಗೆ ಹೊತ್ಕೊಂಡ್ ಬಂದರೆ ಬೈತಿದ್ರು, ಒಂದೊಂದೇ ಬಿಂದಿಗೆ ನೀರು ಎಷ್ಟು ಸಲ ತರುತ್ತೀಯ. ನೀರು ತಂದರೆ ತಾನೆ ಮನೆ ಕೆಲಸ ಆಗೋದು. ನೀನೇನು ಸಂಸಾರ ಮಾಡಲು ಬಂದಿದೀಯ… ನಾಟಕ ಮಾಡೋಕೆ ಬಂದಿದೀಯ ಅಂತ ಬೈತಿದ್ರು. ಕಷ್ಟ ಸಹಿಸಲಾರದೇ ಒಂದು ದಿನ ನನ್ನ ಗಂಡನಿಗೆ ಹೇಳಿ ಅತ್ತುಕೊಂಡೆ. ನಮ್ಮ ಅಮ್ಮನ ಮನೆಯಲ್ಲೂ ಸುಖವಿಲ್ಲ, ಇಲ್ಲಿಯೂ ಈ ಕಷ್ಟ. ನಾನು ಬದುಕಲ್ಲ ಸತ್ತು ಹೋಗಬೇಕು ಅನ್ನಿಸಿದೆ ಅಂದಾಗ ನನ್ನ ಗಂಡ ಮಾವನ ಹತ್ತಿರ ಮಾತಾಡಿ ನಾವು ಹೈದರಾಬಾದಿಗೆ ಹೋಗುತ್ತೇವೆ ಅಂತ ಹೇಳಿ, ಹೇಗೂ ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದದ್ದರಿಂದ ಹಣ ಸಂಪಾದನೆಯ ಆಸೆಯಿಂದ ನನ್ನ ಗಂಡ ಅಲ್ಲಿಯೂ ಸಹ ಬಂಡೆ ಕೆಲಸಕ್ಕೆ ಕರೆದುಕೊಂಡು ಹೋದರು. ಒಂದು ಟ್ರಿಪ್ ಬಂಡೆಕಲ್ಲು ಹೊಡೆದರೆ 450/- ರೂಪಾಯಿ ಹಣ ಸಿಗುತ್ತಿತ್ತು.
ಹೈದರಾಬಾದಿನ ಹನುಮಂತನಗರದಲ್ಲಿ ಒಂದು ವರ್ಷ ಹೀಗೆ ಕಷ್ಟ ಪಟ್ಟೆ. ಒಂದು ವರ್ಷ ಕಳೆಯುವಷ್ಟರಲ್ಲಿ ನನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದೆ. ಹಾಗಿದ್ದರೂ ಏಳು ತಿಂಗಳವರೆಗೂ ದುಡಿದೆ. ನಂತರ ಅಮ್ಮನ ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿಬಿಟ್ಟರು. ಡೆಲಿವರಿ ಆಗಿ ಒಂದು ತಿಂಗಳ ನಂತರ ಗಂಡುಮಗು ಹುಟ್ಟಿದೆ ಅಂತ ಗಂಡನ ಮನೆಯವರು ನೋಡಲು ಬಂದರು. ಎರಡು ತಿಂಗಳ ಬಾಣಂತಿ ಏನೂ ಕೆಲಸ ಮಾಡೋದುಬೇಡ ಅಡಿಗೆ ಮಾಡಿಕೊಂಡು ಮನೆಯಲ್ಲಿದ್ದರೆ ಸಾಕು ಅಂತ ಅಮ್ಮನನ್ನು ಒಪ್ಪಿಸಿ ಮತ್ತೆ ನನ್ನ ಗಂಡನ ಮನೆಗೆ ಕರೆದುಕೊಂಡು ಹೋಗಿ ಯಾವ ಪಥ್ಯವೂ ಇಲ್ಲದೆ ಮತ್ತೆ ಕೆಲಸಕ್ಕೆ ದೂಡಿಯೇಬಿಟ್ಟರು. ಮತ್ತದೇ ಕುಡಿತ ಹೊಡೆತ ಮುಂದುವರೆಯುತ್ತಲೇ ಇತ್ತು. ಆಗ ಹತ್ತು ತಿಂಗಳ ಮಗುವನ್ನು ಕರೆದುಕೊಂಡು ಹೋಟೆಲ್ಲಿನಲ್ಲಿ ಪಾತ್ರೆ ತೊಳೆಯಲು ಹೋಗುತ್ತಿದ್ದೆ.
ಇದನ್ನು ಓದಿ: ದುಡಿಮೆ ಮಾಡುವ ಹಂಬಲವಿದ್ದರೂ ಚೈತನ್ಯ ತುಂಬವವರು ಯಾರು..?
ಮಗುವಿಗೆ ವರ್ಷ ತುಂಬುವ ಹೊತ್ತಿಗೆ ಮತ್ತೆ ಜಗಳ, ಕುಡಿದು ಬಂದು ಹೊಡೆಯುವುದು, ಇಸ್ಪೀಟು ಆಡುವುದು, ಸೋತು ಬಂದರೆ ಆ ಕೋಪವನ್ನು ನನ್ನ ಮೇಲೆ ತೋರಿಸುವುದು ಜಾಸ್ತಿಯಾಯ್ತು. ನನಗೆ ಹಿಂಸೆ ತಡೆಯಲಾಗದೆ ಮಗುವನ್ನು ಎತ್ತಿಕೊಂಡು ಅಮ್ಮನ ಮನೆಗೆ ಬಂದುಬಿಟ್ಟೆ. ನನಗೆ ಗಂಡ ಬೇಡಮ್ಮ ಮಗುವನ್ನು ಸಾಕಿಕೊಂಡು ಬದುಕುತ್ತೇನೆ, ನಾನಿನ್ನು ಅಲ್ಲಿಗೆ ಹೋಗಲ್ಲ ಅಂದಾಗ ಅಮ್ಮನೂ ವಿಧಿಯಿಲ್ಲದೆ ಮಗಳು ಕಣ್ಮುಂದೆ ಚೆನ್ನಾಗಿರಲಿ ಅಂತ ಸುಮ್ಮನಾದಳು. ಒಂದು ವರ್ಷ ಅಮ್ಮನ ಮನೆಯಲ್ಲೇ ಇದ್ದೆ, ಆಮೇಲೆ ಬುದ್ಧಿಹೇಳಿ, ಮತ್ತೆ ಗಂಡನ ಮನೆಗೆ ಕಳುಹಿಸಿದಳು. ಮತ್ತದೇ ತೊಂದರೆ ಮುಂದುವರೆದಾಗ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಟ್ಟು ಬಂದೆ. ಪೊಲೀಸಿನವರು ನನ್ನ ಗಂಡನಿಗೆ ಬೈದು ಬುದ್ಧಿ ಹೇಳಿದರು. ಆದರೂ ಕೊಡಲಿ ತಗೊಂಡ್ ಕಡಿಯುತ್ತೇನೆ ಅಂತ ಬರುತ್ತಿದ್ದ. ಡೈವೋರ್ಸ್ ಕೊಡುತ್ತೇನೆ ಅಂದಾಗ ಇಲ್ಲ ಇನ್ನು ಹೊಡೆಯುವುದಿಲ್ಲ, ನನಗೆ ಹೆಂಡತಿ ಮಗು ಬೇಕು ಅಂತ ಒಪ್ಪಿಕೊಂಡು ಕರೆದುಕೊಂಡು ಹೋದರು. ಆಗಿನಿಂದ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆಗ ನನ್ನ ಎರಡನೇ ಮಗ ಹುಟ್ಟಿದ. ಹೆಣ್ಣು ಮಗು ಬೇಕು ಅಂತ ಹಠ ಮಾಡಿ ಆಪರೇಷನ್ ಮಾಡಿಸಲಿಲ್ಲ. ನಂತರ ಹೆಣ್ಣು ಮಗುವೂ ಹುಟ್ಟಿತು. ಎಂಟು ತಿಂಗಳ ಹೆಣ್ಣು ಮಗುವನ್ನು ಎತ್ತಿಕೊಂಡು ಕುಟುಂಬ ಸಮೇತ ಬೆಂಗಳೂರಿಗೆ ಬಂದ್ವಿ.
ಬೆಂಗಳೂರಿಗೆ ಬಂದಮೇಲೆ ಇಬ್ಬರು ಗಂಡು ಮಕ್ಕಳನ್ನು ಅಂಗನವಾಡಿಗೆ ಬಿಟ್ಟು, ಒಂದು ಉದ್ದ ಸೀರೆ ತಗೊಂಡ್ ಹೋಗಿ ಮನೆಕೆಲಸದವರ ಬಾಗಿಲಿಗೆ ಮಗುವಿನ ಕಾಲಿಗೆ ಕಟ್ಟಿ ಮುಂದೆ ಕಡಲೆಪುರಿ ಹಾಕಿ ಆಟ ಆಡಿಕೊಳ್ಳಲು ಬಿಟ್ಟು ಮನೆಗೆಲಸ ಮಾಡಿ ಮಗುವನ್ನು ಎತ್ತಿಕೊಂಡು ಬರುತ್ತಿದ್ದೆ. ಗಂಡ ಏನೂ ಕೆಲಸ ಮಾಡುತ್ತಿರಲಿಲ್ಲ. ಆಗ ಮನೆ ಕೆಲಸದ ಜೊತೆಗೆ ಬೇರೆ ಬೇರೆ ಮನೆಗಳಲ್ಲಿ ಎರಡು ಟಬ್ ಬಟ್ಟೆ ಒಗೆದು ಕೊಟ್ಟರೆ ನೂರು ರೂಪಾಯಿ ಕೊಡುತ್ತಿದ್ದರು. ಮಗುವಿಟ್ಟುಕೊಂಡು ಮನೆ ಕೆಲಸ ಮಾಡುವುದು ಕಷ್ಟವಾಗುತ್ತಿತ್ತು. ಆಗ ಬಾಗಲೂರಿನಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದೆ. ಸೊಪ್ಪು ಕಂತೆ ಕಟ್ಟಿ ಮಾರಿ ಯಜಮಾನರಿಗೆ ಹಣ ಕೊಡುತ್ತಿದ್ದೆ. ಒಂದು ಕಟ್ಟು ಹತ್ತು ರೂಪಾಯಿಗೆ ಮಾರು ಅಂತ ಯಜಮಾನರು ಹೇಳಿ ಹೋಗಿದ್ರೆ ನಾನು ಎರಡು ಕಟ್ಟು ಮೂವತ್ತು ರೂಪಾಯಿಗೆ ಮಾರಿ ಹೆಚ್ಚು ಲಾಭ ಮಾಡಿಕೊಡುತ್ತಿದ್ದೆ. ಆಗ ಅವರು ನನ್ನ ಜಾಣತನವನ್ನು ಪ್ರಾಮಾಣಿಕತೆಯನ್ನು ಮೆಚ್ಚಿ ನಮಗೆ ಲಾಭ ಮಾಡಿಕೊಡಬೇಡಮ್ಮ ನಿನಗೆ ಮೂರು ಜನರು ಮಕ್ಕಳಿದ್ದಾರೆ. ನೀನೆ ಸ್ವಂತವಾಗಿ ದುಡಿಮೆ ಮಾಡಿಕೋ ಅಂತ ದಿನಕ್ಕೆ ಐವತ್ತು ಕಂತೆ ಸೊಪ್ಪು ಕೊಟ್ಟು ಹೋಗುತ್ತಿದ್ದರು. ನಾನು ಸಂಜೆ ಹೊತ್ತಿಗೆ ಅದನ್ನೆಲ್ಲ ಮಾರಿ, ಬಂಡವಾಳದ ಹಣವನ್ನು ಅವರಿಗೆ ಕೊಟ್ಟು ಉಳಿದ ಲಾಭದ ಹಣವನ್ನು ಮನೆಗೆ ತರುತ್ತಿದ್ದೆ. ಆಗಲೇ ನಾನು ಮೊದಲು ವ್ಯಾಪಾರ ಅಂತ ಶುರು ಮಾಡಿದ್ದು. ಮೊದಲ ದಿನ ನೂರು ರೂಪಾಯಿ ಲಾಭ ಸಿಕ್ಕಿತ್ತು. ಹಾಗೆ ಮಾರುತ್ತಾ ಒಂದು ವರ್ಷ ಕಳೆಯಿತು. ವ್ಯಾಪಾರ ಮಾಡುವುದನ್ನು ಕಲಿತು ಬಿಟ್ಟೆ. ಈ ವಸ್ತು ತಂದರೆ ಇಷ್ಟು ವ್ಯಾಪಾರ ಮಾಡಬಹುದು, ಈ ವಸ್ತು ತಂದರೆ ನಾಳೆಗೂ ಇಡಬಹುದು ಎಲ್ಲಾ ವ್ಯಾಪಾರದ ಟ್ರಿಕ್ಸ್ ಕಲಿತು ಜೊತೆಗೆ ಸೊಪ್ಪು, ತರಕಾರಿ, ತೆಂಗಿನಕಾಯಿ, ಎಳನೀರು, ನಿಂಬೆಹಣ್ಣು, ಮೆಣಸಿನಕಾಯಿ ಇತ್ಯಾದಿ ಮಾರುವುದು. ಆಗ ಗಂಡನೂ ಜೊತೆಗೆ ಬರುತ್ತಿದ್ದರು. ಸಡನ್ ಆಗಿ ಹೆಚ್ಚು ಕುಡಿಯುವುದನ್ನು ಕಲಿತುಬಿಟ್ಟರು. ಬನ್ನಿ ವ್ಯಾಪಾರಕ್ಕೆ ಹೋಗೋಣ ಅಂದ್ರೆ ಕುಡಿಯಲು ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ರು. ಹಣ ಕೊಡದಿದ್ದರೆ ನಾನು ಬರಲ್ಲ ಹೋಗು ಅದ್ ಹೇಗೆ ವ್ಯಾಪಾರ ಮಾಡ್ತೀಯ ಮಾಡು ಅಂತ ಬೆದರಿಕೆ ಹಾಕ್ತಿದ್ರು. ಇವರು ಕುಡಿದರೆ ಅ ವಾಸನೆಗೆ ನಮ್ಮ ಹತ್ತಿರ ವ್ಯಾಪಾರ ಮಾಡೋಕೆ ಯಾರೂ ಬರುತ್ತಿರಲಿಲ್ಲ. ಆಗ ಒಂದು ನಿರ್ಧಾರಕ್ಕೆ ಬಂದೆ, ಕಷ್ಟವಾದರೂ ನಷ್ಟವಾದರೂ ಗಾಡಿ ಓಡಿಸುವುದನ್ನು ಕಲಿಯಲೇ ಬೇಕು ಅಂತ. ಆಗ ನಮ್ಮ ಚರ್ಚಿನ ಜಯಶೀಲ ಮೇಡಂ ಅವರ ಗಾರ್ಡನ್ನಿನಲ್ಲಿ ನಾವು ವಾಸವಿದ್ದೆವು. ಅವರು ನನ್ನ ತುಂಬ ಪ್ರೇರಣೆ ಮಾಡುತ್ತಿದ್ದರು. ನಿನ್ನಿಂದಾಗತ್ತೆ ಕಲಿ, ಇದನ್ನು ಮಾಡು ಅಂತ ಸದಾ ಪ್ರೋತ್ಸಾಹ ಮಾಡುತ್ತಿದ್ದರು. ಮೊದಲ ಬಾರಿಗೆ ಟಿವಿಎಸ್ ಎಕ್ಸೆಲ್ ಹಳೆಯ ಗಾಡಿಯಲ್ಲಿ ಕಲಿಯಲು ಹೋಗಿ ವೇಗವಾಗಿ ಹೋಗಿ ರಸ್ತೆಯ ತಿರುವಿನಲ್ಲಿ ಎರಡೂ ಬ್ರೇಕ್ ಹಿಡಿದು ಪ್ರಜ್ಞೆ ತಪ್ಪಿ ಬಿದ್ದೆ. ಆಗ ಟ್ರ್ಯಾಕ್ಟರ್ನವರು ಯಾರೋ ನೋಡಿ ನಿಲ್ಲಿಸಿ ನನ್ನ ಮುಖಕ್ಕೆ ನೀರು ಚುಮುಕಿಸಿ ಏನಾಯ್ತು ಅಂತ ವಿಚಾರಿಸಿ ನನ್ನ ಮನೆಯವರೆಗೂ ಕರೆದುಕೊಂಡು ಬಂದು ಬಿಟ್ಟು ಹೋದರು. ಆಮೇಲೆ ಜಯಶೀಲ ಮೇಡಂ ಗಾರ್ಡನ್ ಒಳಗೇ ಎರಡು ಕಲ್ಲಿಟ್ಟು ಎಡಕ್ಕೆ ತಿರುಗಿಸು, ಬಲಕ್ಕೆ ತಿರುಗಿಸು ನಿಧಾನಕ್ಕೆ ಹೋಗಿ ಟರ್ನ್ ಮಾಡು ಎಂದು ಗಾಡಿ ಕಲಿಸಿದರು. ನಾನು ಅಂತದ್ದೇ ಹೊಸ ಗಾಡಿ ತೆಗೆದುಕೊಂಡು ವ್ಯಾಪಾರಕ್ಕೆ ನಾನೊಬ್ಬಳೇ ಹೊರಟೆ.
ಇದನ್ನು ಓದಿ: ದೇವದಾಸಿ ಅನಿಷ್ಟ ಪದ್ದತಿಯಿಂದ ಹೊರ ಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿ
ಬ್ಯಾಟರಾಯನಪುರ ಸಂತೆಯಲ್ಲಿ ಹೋಲ್ ಸೇಲ್ ನಲ್ಲಿ ತರಕಾರಿ, ತೆಂಗು, ಸೊಪ್ಪು, ಇತ್ಯಾದಿ ತೆಗೆದುಕೊಂಡು ಕಟ್ಟಿಗೇನಹಳ್ಳಿ, ಯಲಹಂಕ, ದ್ವಾರಕಾನಗರ, ಹೊಸಬೀದಿ, ಮಾರುತಿನಗರ, ಇಟ್ಟಿಗೆ ಫ್ಯಾಕ್ಟರಿ, ಜಕ್ಕೂರು ಹೀಗೆ ಒಂದೊಂದು ಊರಲ್ಲಿ ಒಂದೊಂದು ದಿನ ವ್ಯಾಪಾರ ಮಾಡುತ್ತೇನೆ.’
‘ಜೊತೆ ಜೊತೆಗೆ ಮಕ್ಕಳೂ ನನ್ನ ಜೊತೆಗೆ ಸಹಾಯಕ್ಕೆ ನಿಂತರು. ಶಾಲೆ ಮುಗಿಸಿಕೊಂಡು ಬಂದು ಬಾಗಲೂರು ಸಂತೆ, ಚಿಕ್ಕಜಾಲ ಸಂತೆ, ಗುಬ್ಬಿ ಸಂತೆ, ಯಲಹಂಕ ಸಂತೆಗಳಲ್ಲೂ ವ್ಯಾಪಾರ ಮಾಡುತ್ತಿದ್ದೆವು. ಮಕ್ಕಳು ಇಂಗ್ಲಿಷ್, ಹಿಂದಿ, ತಮಿಳು ಭಾಷೆ ಮಾತನಾಡುವುದರಿಂದ ಗಿರಾಕಿಗಳ ಹತ್ತಿರ ಅವರ ಭಾಷೆಯಲ್ಲೇ ಮಾತಾಡಿ ವ್ಯಾಪಾರ ಹೆಚ್ಚಾಗಲು ಜೊತೆಯಾಗುತ್ತಿದ್ದರು. ಈಗ ಹಗಲೆಲ್ಲ ಕಷ್ಟ ಪಟ್ಟು ಬಂದರೂ ಮಕ್ಕಳನ್ನು ನೋಡಿ ಆ ಕಷ್ಟವನ್ನೆಲ್ಲ ಮರೆಯುತ್ತೇನೆ. ನನ್ನ ಕಷ್ಟ ಅರ್ಥ ಮಾಡಿಕೊಂಡು ಮಕ್ಕಳು ಮನೆ ಸ್ವಚ್ಛವಾಗಿ ಇಟ್ಟುಕೊಂಡು, ಒಬ್ಬರು ಬಟ್ಟೆ ಒಗೆದು, ಮತ್ತೊಬ್ಬರು ಅಡುಗೆ ಮಾಡಿ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಬಂದ ಕೂಡಲೇ ಟೀ ಮಾಡಿಕೊಟ್ಟು ಊಟ ಹಾಕಿಕೊಡುತ್ತಾರೆ.’
‘ಅವತ್ತು ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಬಂದ್ವಿ. ಈಗ ಮಗಳಿಗೆ ಏನು ಬೇಕೋ ಅದನ್ನು ಮಾಡಿದ್ದೇನೆ. ಗಂಡು ಮಕ್ಕಳಿಬ್ಬರಿಗೂ ಅವರವರ ಹೆಸರಿನಲ್ಲಿ ಸ್ವಲ್ಪ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿ ಬಳ್ಳಾರಿಯಲ್ಲಿ ಮನೆ ಕಟ್ಟಿಸಿದ್ದೇನೆ. ಈಗ ನನ್ನ ಮಾವನವರಿಗೆ ನಾವೆಂದರೆ ತುಂಬ ಪ್ರೀತಿ. ನನ್ನ ಸೊಸೆ ತುಂಬ ಕಷ್ಟ ಪಟ್ಟಿದ್ದಾಳೆ, ಮಗನಂತೆ ದುಡಿದಿದ್ದಾಳೆ ಅಂತ ಆಗಾಗ ಫೋನ್ ಮಾಡಿ ಊರಿಗೆ ಕರೆಯುತ್ತಾರೆ. ಊರಲ್ಲೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾನಂತೂ ಓದಲಿಲ್ಲ. ನನ್ನ ಹಾಗೆ ನನ್ನ ಮಕ್ಕಳು ಕಷ್ಟ ಪಡಬಾರದು ಅಂತ, ಸಾಕಿನ್ನು ನೀವು ವ್ಯಾಪಾರಕ್ಕೆ ಬರಬೇಡಿ ಅಂತ ಅವರನ್ನು ಓದಿಸುತ್ತಿದ್ದೇನೆ. ದೊಡ್ಡ ಮಗ ನಂದ ಕಿಶೋರ್ 9ನೇ ತರಗತಿ, ಎರಡನೇ ಮಗ ಸಂತೋಷ್ ಕುಮಾರ್ 7ನೇ ತರಗತಿ, ಮಗಳು ಅಂಜಲಿ 4ನೇ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲಿಯವರೆಗೂ ಓದುತ್ತಾರೋ ಅಲ್ಲಿಯವರೆಗೂ ಓದಿಸುತ್ತೇನೆ.’
ಇದನ್ನು ಓದಿ: ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಛಲವಾದಿ ನೀಲಿ ಲೋಹಿತ್
ಪಟ್ಟ ಕಷ್ಟವನ್ನೆಲ್ಲ ಒಮ್ಮೆ ಕಣ್ಣಮುಂದೆ ತಂದುಕೊಂಡು ಕಣ್ಣಂಚಿನಲ್ಲಿ ನೀರು ತಂದು…. ‘ಒಂದು ಕಾಲಕ್ಕೆ, ಕೆಲಸದ ಮನೆಯವರು ಕೊಟ್ಟ ಊಟವನ್ನು, ನಾನೀಗ ತಿಂದು ಬಂದಿದ್ದೇನಮ್ಮ ಅಂತ ಸುಳ್ಳು ಹೇಳಿ, ಮಕ್ಕಳು ಉಪವಾಸ ಇದ್ದಾರೆ ಅಂತ ಮನೆಗೆ ತಂದು ಮಕ್ಕಳಿಗೆ ಮೊಸರು ಹಾಕಿ ತಿನ್ನಿಸುತ್ತಿದ್ದೆ. ಇವತ್ತು ನನ್ನ ಮಕ್ಕಳು ನನಗೆ ಊಟ ಹಾಕಿ ಕೊಡುತ್ತಿದ್ದಾರೆ, ಅವರು ಕೂಡಿಟ್ಟ ಹಣದಲ್ಲಿ ನನಗೆ ಹೊಸ ಸೀರೆ ತಂದು ನನ್ನ ಹುಟ್ಟು ಹಬ್ಬಕ್ಕೆ ಗಿಫ್ಟ್ ಅಂತ ಕೊಡುತ್ತಾರೆ. ನನಗ್ಯಾಕಪ್ಪ ಅಂದರೆ? ಇಷ್ಟು ದಿನ ಹಳೆಯ ಬಟ್ಟೆ ಹಾಕಿಕೊಂಡದ್ದು ಸಾಕಮ್ಮ, ಇನ್ನಾದರೂ ಹೊಸ ಬಟ್ಟೆ ಹಾಕು. ಇಲ್ಲದಿದ್ದರೆ ನಮಗೂ ಹೊಸ ಬಟ್ಟೆ ತರಬೇಡ ನಾವೂ ಹರಿದದ್ದು ಹಳೆಯದ್ದೆ ಹಾಕಿ ಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಹೀಗೆ ನನ್ನ ಮಕ್ಕಳು ಖುಷಿ ತುಂಬಿಕೊಡುತ್ತಿದ್ದಾರೆ’ ಎಂದು ನಾಗವೇಣಿ ಹೆಮ್ಮೆಪಡುತ್ತಾರೆ.
ದೊಡ್ಡ ಡಿಗ್ರಿ ದೊಡ್ಡ ಕೆಲಸ ದೊಡ್ಡ ಸಂಬಳದ ಮಹಿಳೆಯರಷ್ಟೇ ಆದರ್ಶವಲ್ಲ. ಗಂಡಸರನ್ನೂ ಮೀರಿಸುವ ಧೈರ್ಯ, ಚೆನ್ನಾಗಿ ಬದುಕಬೇಕೆಂಬ ಧ್ಯೇಯ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವ ಇಂಥವರ ಬದುಕೂ ದೊಡ್ಡ ಆದರ್ಶವಾಗಬಲ್ಲದು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ