2022ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿಯು ನಾಗರಾಜ ಕೋರಿ ಅವರ ‘ಕಳವಳದ ದೀಗಿ ಕುಣಿದಿತ್ತವ್ವ’ ಎಂಬ ಕಥೆಗೆ ಸಂದಿದೆ. ಹಿರಿಯ ಬರಹಗಾರರಾದ ಎಂ.ಬಿ. ಅಡ್ನೂರ ಮತ್ತು ಡಾ. ಚಿದಾನಂದ ಕಮ್ಮಾರ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.
ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಐದನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ ಮಾಸದಲ್ಲಿ ನಡೆಯಲಿದೆ ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗರಾಜ ಕೋರಿ ಪರಿಚಯ
ನಾಗರಾಜ ಕೋರಿ, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ, ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಎಂಬ ಗ್ರಾಮದವರು.
ಇವರ ಬುದ್ದಗಿತ್ತಿಯ ನೆನಪು ಎಂಬ ಕವನ ಸಂಕಲನ ಮತ್ತು ತನುಬಿಂದಿಗೆ ಎಂಬ ಕಥಾ ಸಂಕಲನ ಈಗಾಗಲೇ ಪ್ರಕಟಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ, ಮೋಹನ ಕುರಡಗಿಕಾವ್ಯ ಪ್ರಶಸ್ತಿ, ಮುಂಗಾರು ಕಥಾ ಬಹುಮಾನ ಮತ್ತು ಅಕ್ಷರ ಸಂಗಾತ ಕಥಾ ಬಹುಮಾನಗಳು ದೊರೆತಿವೆ. ಪ್ರಜಾವಾಣಿ, ಹೊಸತು, ಅಕ್ಷರ ಸಂಗಾತ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟಗೊಂಡಿವೆ.
‘ಕಳವಳದ ದೀಗಿ ಕುಣಿದಿತ್ತವ್ವ’ ಕಥೆಯ ಆಯ್ದ ಭಾಗ
ಉರುಕುಂದಿ ಈರಣ್ಣನ ಜಾತ್ರಿ ಸುತ್ತ ಹೆಸರಾಗಿದ್ದರಿಂದ ತುಂಬಿ ತುಳುಕುತಿತ್ತು. ಅದ್ರಾಗ ಹೆಂಗ್ಸುಗಂಡ್ಸು ತಲೆ ಬೋಳಿಸಿಕೊಳ್ಳುವುದರಲ್ಲಿ ಬಿಸಿಯಾಗಿತ್ತು. ಎಲ್ಲಿ ನೋಡಿದ್ರು ಕರಿ, ಕೆಂಪನ ಬೋಳುತಲಿನೇ ಇದ್ವು. ಎಲ್ಲಿಬೇಕಲ್ಲಿ ಬಂಡಾರ, ಕುಂಕುಮ ಬಡಕಂದು ದೆವ್ವದಂಗ ಎದಿರಾಗುತಿದ್ವು. ಅದ್ರಾಗ ತಲಿ ಬೋಳಿಸಿಕೊಂಡ ಹೆಂಗಸರ ಮೆತ್ತನ ಬೋಳುತಲಿಗಳು ಮಿಣಿಮಿಣಿ ಮಿಂಚುತಿದ್ವು. ಅಲ್ಲಿಲ್ಲಿ ತಲೆಬೋಳಿಸಿಕೊಂಡ ಗಂಡಸ್ರನ್ನ ನೋಡಿ, ನನ್ ಗಂಡ ಕೂಡ ಬೋಳುಗುಂಡ ಆಗ್ತಾನಂತ ಮುಸುಮುಸು ನಕ್ಕು ಅಭಿನ ಗಲ್ಲಹಿಂಡಿ ‘ನಿಮ್ಮಪ್ಪ ಬೋಳುಗುಂಡ.. ಬೋಳುಗುಂಡ..’ ಅಂತ ಛೇಡಿಸಿ ಮುದ್ದುಕೊಟ್ಟೆ, ಹಾಲುಗಲ್ಲದ ಅಭಿ ಅದೇನು ಕಂಡಿತೋ.. ದವಡಿ ಉಬ್ಬಿಸಿ ಕುಚುಕುಚು ನಕ್ಕಿತು. ಇದೆ ಖುಷಿಲೆ ಬಂಗಾರದ ಗುಂಡಂತ ಇನ್ನೊಂದು ಮುದ್ದು ಲಚಕ್ಕನ ಕೊಟ್ಟು ಗಿಲಿಗಿಂಚಿ ಕೊಡಿಸಿದೆ. ಆಗ ಸುಮ್ಮನಾತು. ಗುಡಿಗೆ ಕರಕೊಂಡೋಗಿ ಕಾಯಿ, ಕರ‍್ಪೂರ, ಹೆಡೆ ಅರ್ಪಿಸಿ ಡೋಲು, ಡಮಾರಿನಿಂದ ತೇರು ಎಳೆಟೈಮಿನ್ಯಾಗ ಹೊಳೆಗೆ ಕರಕೊಂಡು ಬಂದ. ತೇರು ನೋಡಬೇಕನಿಸಿ ಗುಡಿಕಡೆ ಮುಖಮಾಡಿದೆ.
ತೇರಿನಮುಂದ ಎಷ್ಟುಮಂದಿ ಇದ್ರೋ.. ಅಷ್ಟೇಮಂದಿ ಹೊಳೆದಂಡಿಗೆ ತಲೆಬೋಳಿಸಿಕೊಂಡು ತಣ್ಣೀರಿನ್ಯಾಗ ‘ಈರಣ್ಣ..ಈರಣ್ಣ..’ಅಂತ ಮುಳುಗುತಿದ್ರು. ಹೊಳೆದಂಡಿ ತುಂಬ ಕೂದಲು ಗುಡ್ಡೆನೇ ಬಿದ್ದಿತ್ತು. ‘ಬೋಳುಗುಂಡ ಈಗ ಆಗ್ತಾನ.. ಆಗ ಆಗ್ತಾನ..’ ಅಂತ ಗಂಡನ ದಿಟ್ಟಿಸಿ ನೋಡುತ್ತ ಅಭಿನ ಎತ್ತಿಕೊಂಡು ಹೊಳೆದಂಡಿಮ್ಯಾಲೆ ತೇರಿನ ಕಡೆನೆ ಮುಖಮಾಡಿ ನಿಂತಿದ್ದೆ. ಯಾರೋ ಸಣ್ಣಪೆಟಾರಿ ಹಿಡಿದು ಗಂಡನ ಬದಿಗೆಬಂದು ಏನೆನೋ ಮಾತಾಡುತ್ತ ನಿಂತ. ಗಂಡ ಒಮ್ಮೆಲೆ ‘ಏ..ಅಭಿನ ತಾ.. ಎಂದ. ಯಾಕಂದೆ. ‘ಉರುಕುಂದಿ ಈರಣ್ಣಗ ತಲೆಮುಂಡೆ ಚೊಚ್ಚಲ ಹಡ್ದ ಹೆಣ್ತಿನೇ ಕೊಡಬೇಕಂಥ.. ನನಗ ಕೊಡಾಕ ಬರಲ್ಲ..’ ಅಂತ ಅಭಿನ ಕಸಕೊಂಡ. ಒಮ್ಮಿಗೆ ಜೀವ ಝಲ್ಲೆಂತು. ತಲಿಮುಂಡೆ ಕೊಡಲ್ಲ.. ಬೇಕಾದ್ರ ನೀನೇ ಕೊಡು.. ನೀನೆ ಬೇಡಿಕೊಂಡಿದ್ದೆಲ್ಲಾ.. ಒಲ್ಲಒಲ್ಲೆಂತ ಎದಿಮ್ಯಾಗಿದ್ದ ಅಭಿನ ಕಿತ್ತಿಕೊಳ್ಳಾಕ ಕೊಸರಾಡಿದೆ. ಅಭಿನ ಬಿಡಲಿಲ್ಲ. ಗಟ್ಟಿಗೆ ಎತ್ತಿಕೊಂಡಿದ್ದ. ಇಬ್ಬರ ಗಲಾಟೆಗೆ ಅಭಿ ಬೋರಾಡಿ ಅತ್ತ. ಅಲ್ಲಿದ್ದ ಹೆಂಗ್ಸರೆಲ್ಲರೂ ನಮ್ ಗಲಾಟೆಗೆ ‘ಚೊಚ್ಚಲ ಗಂಡುಮಗಾದ್ರ ಹೆಣ್ತಿನೆ ತಲೆಮುಂಡೆ ಕೊಡಬೇಕನ್ನೋದು ಈರಣ್ಣನ ಪದ್ಧತಿ ಐತೆವ್ವಾ ಕೊಟ್ರ ಒಳ್ಳೆದಾಗುತ್ತ..’ ಅಂತ ಏನೆನೋ ತತ್ವಹೇಳಿ ರಮಿಸಿ ಸಣ್ಣ ಪೆಟಾರಿಯವನ ಮುಂದ ಕೂರಿಸಿದ್ರು.
ಸಣ್ಣ ಪೆಟಾರಿ ಹಿಡಿದವ ತಲೆಬಗ್ಗಿಸಿ ಕರಕರಂತ ಕೂದಲು ಬೋಳುಸಾಕ ಮುಂದಾದ. ತಲೆ ಕರಕರ ಅಂದಷ್ಟು ಹಲ್ಲುಕಡಿದು ಎದಿರಿಗೆ ನಿಲುಗಂಬಾಗಿ ನಿಂತಿದ್ದ ಗಂಡನ ಎಗಿರಿ ಒದಿಬೇಕನಿಸ್ತು. ಆದ್ರ ತಲೆ ಬೋಳಿಸುವಾತ ಕತ್ರಿಗಾಲಲಿ ಕುರಿಯಂಗ ತಲೆ ಸಿಕ್ಕಿಸಿಕೊಂಡಿದ್ದ. ತಲೆ ಎತ್ತಲೂ ಆಗಲಿಲ್ಲ. ಕಣ್ಣೀರೊಂದೆ ದಳದಳ ಇಳಿತಿದ್ವು. ಏಟು ಕೊಸರಾಡಿದ್ರೂ ಕೊನಿಗೆ ಬೋಳ್ಯಾದೆ. ನಡ ಹೊಳ್ಯಾಗ ನಿಲ್ಲಿಸಿ ತಣ್ಣೀರಿನ್ಯಾಗ ಐದುಬ್ಯಾರೆ ಮುಳುಗಿಸಿದಾಗ ಚಿಟ್ಟಿಮೀನು, ಏಡಿ ಒಂದಕ್ಕೊಂದು ಕಲ್ಲುಪಡಿಕಿನ್ಯಾಗ ಬಿದ್ದಿದ್ದ ಅನ್ನ, ಹೋಳಿಗಿ, ಉಂಡಿ, ಪ್ರಸಾದ ಕ್ಕುಕ್ಕಿ ತಿಂದಾಡುತಿದ್ವು. ‘ಇವ್ನು ಹೆಣ್ತ್ಯಾಗಿ ಹುಟ್ಟುವುದಕ್ಕಿಂತ ಈ ಮೀನ, ಏಡಿ, ಕಸ ಕಡ್ಡ್ಯಾಗಿ ಹುಟ್ಟಿದ್ರ ಎಷ್ಟೋ ಬೇಸಿತ್ತು..’ ಅಂತ ಮುಳುಗಿದಾಗೊಮ್ಮೆ ಅತ್ತೆ. ಹೊಳೆಮಾತ್ರ ತನ್ನ ಪಾಡಿಗೆ ತಾನು ಸೆವ್ವಂತ ದನ ಓಡಿದಂಗ ಓಡುತಿತ್ತು. ನಡ ಹೊಳ್ಯಾಗ ಕಲ್ಲಾಗಿ ನಿಂತವಳು ತೇರು ನೋಡಾಕ ಮನಸ್ಸು ಆಗಲಿಲ್ಲ. ಗಂಡನಂಬೋದು ತೇರು ನೋಡಿ ಪಳಾರ, ಈಭೂತಿ, ಬಂಡಾರ, ಕುಂಕುಮ, ಬಳೆ ಮತ್ತು ಹುಲಿಮ್ಯಾಲೆ ಕೂತ ಈರಣ್ಣನ ಪೋಟನೂ ತಗಂದು ಬಂದ.