ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಮಾದರಿಯಲ್ಲೇ ನಗರದಲ್ಲೂ ಒಂದು ಉದ್ಯೋಗ ಖಾತ್ರಿ ಕಾನೂನನ್ನು ಕುರಿತು ಚಿಂತಿಸುವ ಸಮಯ ಬಂದಿದೆ. ಕೆಲಸ ಕಳೆದುಕೊಂಡವರಿಗೆ ಅವಶ್ಯಕವಾದ ಪರ್ಯಾಯ ಉದ್ಯೋಗ ನರೇಗಾ ಮಾದರಿಯ ನಗರ ಉದ್ಯೋಗ ಯೋಜನೆಯಿಂದ ದೊರೆಯಬಹುದು. ಇಂತಹ ಒಂದು ಯೋಜನೆಯ ಪ್ರಸ್ತಾಪವನ್ನು, DUET ಯೋಜನೆ, ಅಂದರೆ ವಿಕೇಂದ್ರೀಕೃತ ನಗರ ಉದ್ಯೋಗ ಮತ್ತು ತರಬೇತಿ ಯೋಜನೆ ಎಂಬುದನ್ನು ಪ್ರಖ್ಯಾತ ಆರ್ಥಿಕ ತಜ್ಞ ಜೀನ್ ಡ್ರೆಜ್ ಮುಂದಿಟ್ಟಿದ್ದಾರೆ.
ಅನುವಾದ: ಟಿ.ಎಸ್.ವೇಣುಗೋಪಾಲ್ ಕೃಪೆ: Bloomberg
ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ದ 2020-21ರ ಮೊದಲ ತ್ರೈಮಾಸಿಕ ಆವಧಿಯ ಅಂದಾಜು ಬಿಡುಗಡೆಯಾಗುತ್ತಿದ್ದಂತೆ ಆತಂಕ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಕುಸಿದಿದ್ದವು. ಇದನ್ನು ಹಲವು ಕೌಟಂಬಿಕ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿವೆ. ನಿರುದ್ಯೋಗ, ಬಡತನ ಮತ್ತು ಹಸಿವು ಇವೆಲ್ಲಾ ವ್ಯಾಪಕವಾಗಿದ್ದಾಗ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲಿರುವ ಸಾಧ್ಯತೆಗಳು ಕಡಿಮೆ.
ಇತ್ತೀಚೆಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಆರ್ಥಿಕ ಪರಿಸ್ಥಿತಿಯ ಅಧ್ಯಯನ ಕೇಂದ್ರವು 8500 ನಗರ ಕಾರ್ಮಿಕರನ್ನು ವಿಶೇಷವಾಗಿ ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಅದು ಒಟ್ಟಾರೆ ಪರಿಸ್ಥಿತಿಯ ಕುರಿತಂತೆ ಸ್ಪಷ್ಟವಾದ ಚಿತ್ರವನ್ನು ಕೊಡುತ್ತದೆ. ಸಮೀಕ್ಷೆಗೆ ಒಳಗಾದವರಲ್ಲಿ ಸುಮಾರು ಅರ್ಧದಷ್ಟು ಜನರ ಸರಾಸರಿ ವರಮಾನ ಕಮ್ಮಿಯಾಗಿತ್ತು. ವಲಸೆ ಕಾರ್ಮಿಕರ ವಿಷಯದಲ್ಲಿ ವರಮಾನದ ಇಳಿತ ಇನ್ನೂ ಹೆಚ್ಚೇ ಆಗಿತ್ತು. ಅವರ ವರಮಾನ ಶೇಕಡ 82ರಷ್ಟು ಕಡಿಮೆಯಾಗಿತ್ತು. ಈ ಮೊದಲೇ ಬಡತನದಲ್ಲಿ ಇದ್ದವರಲ್ಲಿ ಈ ವರಮಾನದ ಕುಸಿತ ಇನ್ನೂ ತೀವ್ರವಾಗಿತ್ತು. ಇದರಿಂದ ಪಟ್ಟಣದ ಕಾರ್ಮಿಕರಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಯಿತು. ಮೇಲ್‌ತ್ಸರದ ಶೇಕಡ 25ರಷ್ಟು ಕಾರ್ಮಿಕರ ವರಮಾನ ಲಾಕ್‌ಡೌನ್ ಮೊದಲು ಶೇಕಡ 64ರಷ್ಟು ಇದ್ದುದು, ಲಾಕ್ ಡೌನ್ ನಂತರ ಶೇಕಡ 84ರಷ್ಟಾಯಿತು. ಅಂದರೆ ಕೆಳಸ್ತರದಲ್ಲಿದ್ದ ಶೇಕಡ 75ರಷ್ಟು ಜನ ಕೇವಲ ಶೇಕಡ 16ರಷ್ಟು ವರಮಾನವನ್ನು ಹಂಚಿಕೊಂಡು ಜೀವನ ನಡೆಸುತ್ತಿದ್ದರು.
ಕಳೆದ ಕೆಲವು ವಾರಗಳಲ್ಲಿ ನಗರದ ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಅನ್ನಿಸುತ್ತದೆ. ವಲಸೆ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ಹೋಗಿದ್ದರಿಂದ, ಅವರು ಕೆಲಸ ಮಾಡುತ್ತಿದ್ದ ಪ್ರದೇಶಗಳಲ್ಲಿ ಕೆಲಸಗಾರರ ಕೊರತೆಯಿಂದಾಗಿ ಸ್ಥಳೀಯ ಕೆಲಸಗಾರರಿಗೆ ಒಂದಿಷ್ಟು ಅನುಕೂಲವಾಗಿರಬಹುದು. ಆದರೂ ವಿಶೇಷವಾಗಿ ಲಾಕ್‌ಡೌನ್ ಮುಂದುವರಿದಿರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಸಾಮಾನ್ಯ ಮಟ್ಟಕ್ಕಿಂತ ತುಂಬಾ ಕಡಿಮೆಯೇ ಇದೆ. ಕೆಲವು ವೃತ್ತಿಗಳಲ್ಲಂತೂ ಜನರಿಗೆ ಹಲವು ತಿಂಗಳುಗಳಿಂದ ಕೆಲಸವೇ ಇಲ್ಲ. ಸಧ್ಯದಲ್ಲಿ ಕೆಲಸ ಸಿಗುವ ಸಾಧ್ಯತೆಯೂ ಇಲ್ಲ. ತಿಂಡಿ ಮಾರುವವರು, ಬಸ್ ಕಂಡಕ್ಟರುಗಳು, ಸಿನಿಮಾ ಹಾಲಿನಲ್ಲಿ ಕೆಲಸ ಮಾಡುತ್ತಿರುವವರು, ಲೈಂಗಿಕ ಕಾರ್ಯಕರ್ತೆಯರು, ಬ್ಯಾಂಡ್ ಕಲಾವಿದರು, ವಲಸೆ ಕಾರ್ಮಿಕರು ಇವರ ಬಗ್ಗೆ ಯೋಚಿಸಿ. ಅವರಲ್ಲಿ ಬಹುಪಾಲು ಜನ ಆಸರೆಗೆ ಹತಾಶೆಯಿಂದ ಪರ್ಯಾಯ ಕೆಲಸಗಳನ್ನು ಹುಡುಕುತ್ತಿದ್ದಾರೆ.
ಈ ಪರಿಸ್ಥಿತಿಯಿಂದಾಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಮಾದರಿಯಲ್ಲೇ ನಗರದಲ್ಲೂ ಒಂದು ಉದ್ಯೋಗ ಖಾತ್ರಿ ಕಾನೂನನ್ನು ಕುರಿತು ಚಿಂತಿಸುವ ಸಮಯ ಬಂದಿದೆ. ಕೆಲಸ ಕಳೆದುಕೊಂಡವರಿಗೆ ಅವಶ್ಯಕವಾದ ಪರ್ಯಾಯ ಉದ್ಯೋಗ ನರೇಗಾ ಮಾದರಿಯ ನಗರ ಉದ್ಯೋಗ ಯೋಜನೆಯಿಂದ ದೊರೆಯಬಹುದು. ಕೇವಲ ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡವರಿಗೆ ಮಾತ್ರವಲ್ಲ, ಕೆಲಸವೇ ಇಲ್ಲದವರಿಗೂ ಇದರಿಂದ ಉದ್ಯೋಗ ಸಿಗುತ್ತದೆ. ಆದರೆ ನಗರದಲ್ಲಿ ಅಂತಹ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸುವುದಕ್ಕೆ ಹೆಚ್ಚಿನ ಅನುಭವಬೇಕು. ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಸಂಬಂಧಿಸಿದಂತೆ ಈಗ ಇರುವ ಅನುಭವ ಸಾಲುವುದಿಲ್ಲ. ನರೇಗಾ ಯೋಜನೆಯನ್ನು ರೂಪಿಸುವುದರ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕ್ಷಾಮದ ಪರಿಹಾರಕ್ಕೆ ಸಂಬಂಧಿಸಿದಂತೆ ಹಲವು ದಶಕಗಳ ಅನುಭವ ಇತ್ತು ಅನ್ನುವುದನ್ನು ಮರೆಯಬಾರದು. ಆ ಅನುಭವ ನರೇಗಾ ಯೋಜನೆಯನ್ನು ರೂಪಿಸುವಲ್ಲಿ ನೆರವಾಯಿತು.
ಸಿದ್ಧ ಚೌಕಟ್ಟನ್ನು ಮೀರಿ ಯೋಚಿಸೋಣ
ಸಿದ್ಧ ಚೌಕಟ್ಟನ್ನು ಮೀರಿ ಯೋಚಿಸಿದರೆ ನಗರ ಕಾರ್ಮಿಕರಿಗೆ ತಕ್ಷಣದ ಪರಿಹಾರ ಕೊಡುವಂತಹ ನಗರ ಉದ್ಯೋಗ ಯೋಜನೆಯನ್ನು ರೂಪಿಸುವುದಕ್ಕೆ ಸಾಧ್ಯ. ಅದು ನಮಗೆ ಬೇಕಾದ ಅನುಭವವನ್ನು ಕೊಡುತ್ತದೆ. ಕೆಲವು ರಾಜ್ಯಗಳು ಈ ರೀತಿಯ ಯೋಜನೆಗಳನ್ನು ರೂಪಿಸಲು ಈಗಾಗಲೇ ಪ್ರಯತ್ನಿಸಿವೆ. ಕೇರಳ 10 ವರ್ಷದ ಹಿಂದೆಯೇ ಅಯ್ಯನಕಲಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಿತ್ತು. 2019-20ರಲ್ಲಿ ಅದರಿಂದ 27 ಲಕ್ಷ ವ್ಯಕ್ತಿ-ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು. ಈ ವರ್ಷ ಹಿಮಾಚಲ ಪ್ರದೇಶ, ಜಾರ್ಖಂಡ್, ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಕೂಡ ನಗರ ಉದ್ಯೋಗ ಖಾತ್ರಿ ನೀಡುವ ಯೋಜನೆಗಳನ್ನು ಪ್ರಾರಂಭಿಸಿವೆ. ಆದರೆ ಬಜೆಟ್ ಕೊರತೆಯಿಂದ, ಈ ಯೋಜನೆಗಳು ಬಹುಪಾಲು ಸಾಂಕೇತಿಕ ಯೋಜನೆಗಳಾಗಿಬಿಟ್ಟಿವೆ. ಇದಕ್ಕಾಗಿ ವಿನಿಯೋಗಿಸಿರುವ ಹಣ ಅತ್ಯಲ್ಪ.
ಇನ್ನೊಂದು ಪರ್ಯಾಯ ಯೋಜನೆಯನ್ನು ನೋಡೋಣ. ಇದನ್ನು ವಿಕೇಂದ್ರಿಕೃತ ನಗರ ಉದ್ಯೋಗ ಹಾಗೂ ತರಬೇತಿ ಅಥವಾ ಡುಎಟ್ (ಡಿಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್) ಯೋಜನೆ ಎಂದು ಕರೆಯೋಣ. ಅದರ ಮೂಲಭೂತ ಯೋಚನೆ ಹೀಗಿದೆ. ಸರ್ಕಾರ ಉದ್ಯೋಗದ ಸ್ಟಾಂಪುಗಳನ್ನು ಬಿಡುಗಡೆ ಮಾಡುತ್ತದೆ. ಅವನ್ನು ಅಂಗೀಕೃತ ಸಾರ್ವಜನಿಕ ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಉದಾಹರಣೆಗೆ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್ಲುಗಳು, ವಸತಿ ಗೃಹಗಳು, ಬಂದಿಖಾನೆಗಳು, ಮ್ಯೂಸಿಯಂಗಳು, ಮುನಿಸಿಪಾಲಿಟಿಗಳು, ಸರ್ಕಾರಿ ಇಲಾಖೆಗಳು, ಆರೋಗ್ಯ ಕೇಂದ್ರಗಳು, ಸಾರಿಗೆ ಕಾರ್ಪೋರೇಷನ್ನುಗಳು, ನೆರೆಹೊರೆಯ ಅಸೋಸಿಯೇಷನ್ನುಗಳು, ನಗರದ ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ಅವುಗಳನ್ನು ವಿತರಿಸಲಾಗುತ್ತದೆ. ಒಂದು ಉದ್ಯೋಗ ಸ್ಟಾಂಪು ಅಂದರೆ ಒಬ್ಬ ವ್ಯಕ್ತಿಯ ಒಂದು ದಿನದ ಕೆಲಸ. ಪ್ರತಿಯೊಂದು ಸಂಸ್ಥೆಯು ತಮ್ಮಲ್ಲಿ ಇರುವ ಸ್ಟಾಂಪುಗಳನ್ನು ಈ ಕ್ರಮದಲ್ಲಿ ಬಳಸಿಕೊಳ್ಳಬಹುದು. ಆದರೆ ಅದನ್ನು ನಿಗದಿತ ಆವಧಿಯಲ್ಲಿ ಬಳಸಿಕೊಳ್ಳಬೇಕು. ಜೊತೆಗೆ ನೇಮಕಗೊಂಡ ಕೆಲಸಗಾರರಿಗೆ ಕೆಲಸ ಕೊಡುವುದಕ್ಕೆ ಆ ಸಂಸ್ಥೆಗಳಿಗೆ ಸಾಧ್ಯವಾಗಬೇಕು. ಕೆಲಸದ ನಂತರ ಆ ಸಂಸ್ಥೆಗಳು ತಮ್ಮ ದೃಢೀಕರಣದೊಂದಿಗೆ ಸ್ಟಾಂಪುಗಳನ್ನು ಕೆಲಸಗಾರರಿಗೆ ನೀಡಬೇಕು. ಆ ದೃಢೀಕೃತ ಉದ್ಯೋಗದ ಸ್ಟಾಂಪುಗಳನ್ನು ಕೆಲಸಗಾರರು ಪಾವತಿಸಿದ ಕೂಡಲೇ ಅವರ ಕೂಲಿಯನ್ನು ಸರ್ಕಾರ ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಬೇಕು. ಸಂಸ್ಥೆಗಳು ಹಾಗೂ ಕಾರ್ಮಿಕರು ಶಾಮೀಲಾಗುವುದನ್ನು ತಪ್ಪಿಸಲು ಕೆಲಸಗಾರರನ್ನು ನೇಮಿಸುವುದಕ್ಕೆ ಒಂದು ಸ್ವತಂತ್ರ ನೇಮಕಾತಿ ಏಜೆನ್ಸಿ ಇರಬೇಕು. ಕೆಲವು ಉದ್ಯೋಗವನ್ನು ಅರೆಕಾಲಿಕ ಉದ್ಯೋಗವನ್ನಾಗಿಯೂ ಯೋಚಿಸಬಹುದು. ಉದಾಹರಣೆಗೆ ದಿನಕ್ಕೆ ನಾಲ್ಕು ಗಂಟೆಯಂತೆ. ಆಗ ಮಹಿಳೆಯರಿಗೆ ಅದರಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ.
ಈ ಕ್ರಮದಿಂದ ಹಲವು ಅನುಕೂಲಗಳಿವೆ:
ಮೊದಲನೆಯದಾಗಿ ವಿಭಿನ್ನ ಅನುಮೋದಿತ ಉದ್ಯೋಗದಾತರನ್ನು ಸಕ್ರಿಯಗೊಳಿಸುವುದರಿಂದ, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬಹುದು.
ಎರಡನೆಯದಾಗಿ, ಅನುಮೋದಿತ ಉದ್ಯೋಗದಾತರು ಕೆಲಸ ಹೆಚ್ಚು ಉತ್ಪಾದಕವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಮೂರನೆಯದಾಗಿ, ಈ ಯೋಜನೆಯಲ್ಲಿ ಕೆಲಸವನ್ನು ನೀಡುತ್ತಿರುವ ಸಂಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ಅದಕ್ಕೆ ವಿಶೇಷವಾಗಿ ಕೆಲಸಗಾರರನ್ನು ನೇಮಿಸಿಕೊಳ್ಳಬೇಕಾಗಿಲ್ಲ.
ನಾಲ್ಕನೆಯದಾಗಿ ಕೆಲಸಗಾರರಿಗೆ ಕನಿಷ್ಠ ಕೂಲಿ ಜೊತೆಗೆ ಬಹುಶಃ ಇತರ ಅನುಕೂಲಗಳ ಖಾತರಿ ಇರುತ್ತದೆ.
ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಡ್ಯುಯೆಟ್ ಯೋಜನೆಯಲ್ಲಿ ಯಾವೆಲ್ಲಾ ಕೆಲಸಗಳು ಸೇರಿಕೊಳ್ಳುತ್ತವೆ? ಮಾಡುವುದಕ್ಕೆ ತುಂಬಾ ಕೆಲಸಗಳಿವೆ. ಮೊದಲಿಗೆ ಭಾರತದ ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳು (ಪಾರ್ಕುಗಳು, ಕೆರೆಗಳು, ಬಾವಿಗಳು, ಆಟದ ಮೈದಾನಗಳು, ಬಸ್‌ಸ್ಟಾಂಡುಗಳು, ರೈಲ್ವೆ ಸ್ಟೇಷನ್ನುಗಳು ಇವೆಲ್ಲಾ) ಸರಿಯಾದ ಉಸ್ತುವಾರಿ ಇಲ್ಲದೆ ತುಂಬಾ ಹಾಳಾಗುತ್ತಿವೆ. ಲಾಕ್ ಡೌನ್ ನಂತರ ಕೆಲವು ತಿಂಗಳಲ್ಲಿ ಅವು ಮತ್ತೆ ಪ್ರಾರಂಭವಾದಾಗ ಅವುಗಳನ್ನು ದುರಸ್ತಿಗೊಳಿಸುವುದಕ್ಕೆ ತುಂಬಾ ಕೆಲಸ ಹಿಡಿಯುತ್ತದೆ. ಶುಚಿಮಾಡುವುದು, ಬಣ್ಣ ಹೊಡೆಯುವುದು, ಕಳೆ ಕೀಳುವುದು, ರಿಪೇರಿ ಮಾಡುವುದು, ಪೈಪುಗಳ ರಿಪೇರಿ ಹೀಗೆ ಹಲವು ಕೆಲಸಗಳು ಇರುತ್ತವೆ. ನಗರದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಅಂದೋಲನಕ್ಕೆ ಇದೊಂದು ಒಳ್ಳೆಯ ಸಮಯ. ಸಾರ್ವಜನಿಕ ಸ್ಥಳಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ, ಪರಿಸರ ಸುಧಾರಣೆ, ಬಹುಶಃ ಗೃಹಕೃತ್ಯದ ಕೆಲಸಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ಪಾದಕ ಕೆಲಸಗಳಿಗೆ ತುಂಬಾ ಅವಕಾಶಗಳಿವೆ. ನಗರ ಪ್ರದೇಶಗಳಲ್ಲಿ ಮಾಡಬಹುದಾದ ಸಾರ್ವಜನಿಕ ಕೆಲಸಗಳ ಒಂದು ಪಟ್ಟಿಯನ್ನೇ ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ತಾಳಿಕೆಯ ಉದ್ಯೋಗ ಕೇಂದ್ರವು ಯೋಚಿಸಿ ಸಿದ್ಧಪಡಿಸಿದೆ. ನಗರ ಉದ್ಯೋಗ ಖಾತ್ರಿಗಾಗಿ ಅದು ಇತ್ತೀಚೆಗೆ ಸಲ್ಲಿಸಿರುವ ಸಲಹೆಯಲ್ಲಿ ನೀಡಿದೆ. ಇನ್ನು ಡುಎಟ್‌ನಲ್ಲಿ ಬರುವ ಟಿ, ಅಂದರೆ ಟ್ರೈನಿಂಗ್- ತರಬೇತಿಯು ಮುಖ್ಯವಾಗಿ ಕೆಲಸ ಮಾಡುತ್ತಲೇ ಪಡೆಯುವ ತರಬೇತಿಯ ರೂಪದಲ್ಲಿರುತ್ತದೆ. ಕೌಶಲವಿಲ್ಲದ ಕಾರ್ಮಿಕರು ಕೌಶಲವಿರುವ ಕಾರ್ಮಿಕರ ಜೊತೆ ಕೆಲಸ ಮಾಡುವ ಪ್ರಕ್ರಿಯೆಯಲ್ಲಿ ಕೆಲಸ ಕಲಿಯುತ್ತಾರೆ. ನೇಮಕಾತಿ ಏಜೆನ್ಸಿಗಳು ಕೇವಲ ಕೆಲಸಗಾರರನ್ನು ನಿಗದಿ ಮಾಡುವುದರ ಜೊತೆಗೆ ಕುಶಲತೆಯನ್ನು ನೀಡುವ ಹಾಗೂ ಅದನ್ನು ಪ್ರಮಾಣೀಕರಿಸುವ ಕೆಲಸವನ್ನು ಮಾಡಬಹುದು.
ತಾತ್ವಿಕವಾಗಿ ಮುನಿಸಿಪಾಲಿಟಿಗಳು ವಿಭಿನ್ನ ನೇಮಕಾತಿ ಏಜೆನ್ಸಿಗಳನ್ನು ಇಟ್ಟುಕೊಂಡಿರಬಹುದು. ಕೆಲವು ಕಾರ್ಮಿಕರ ಸಹಕಾರ ಸಂಸ್ಥೆಗಳಾಗಿ ಕೆಲಸ ಮಾಡಬಹುದು. ಡುಎಟ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಂತಹ ಸಂಸ್ಥೆಗಳು ಹಾಗೂ ಯೋಜನೆಗಳಿಂದ ಬೆಂಬಲ ಪಡೆದುಕೊಳ್ಳಬಹುದು.
ಕೆಲವು ದೇಶಗಳು ತಮ್ಮಲ್ಲಿ ಡುಎಟ್ ರೀತಿಯ ಉದ್ಯೋಗ ಸಬ್ಸಿಡಿ ಯೋಜನೆಯಂತಹ ಯೋಜನೆಗಳನ್ನು ಆಚರಣೆಗೆ ತಂದಿವೆ. ಉದಾಹರಣೆಗೆ ಹಲವು ಐರೋಪ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ‘ಸೇವಾ ವೋಚರ್ ಯೋಜನೆ’(ಎಸ್‌ವಿಎಸ್-ಸರ್ವಿಸ್ ವೋಚರ್ ಸ್ಕೀಮ್). ಆದರೆ ಇಲ್ಲಿ ಇರುವ ಮುಖ್ಯ ವ್ಯತ್ಯಾಸ ಅಂದರೆ ಎಸ್‌ವಿಎಸ್ ವೋಚರುಗಳನ್ನು ಸಾಮಾನ್ಯವಾಗಿ ಮನೆ ಶುಚಿಗೊಳಿಸುವುದು, ಅಡಿಗೆ ಮಾಡುವುದು, ಇಸ್ತ್ರಿ ಮಾಡುವುದು ಮೊದಲಾದ ಗೃಹಕೃತ್ಯದ ಕೆಲಸಗಳಿಗೆ ಬಳಸಲಾಗುತ್ತದೆ. ಆದರೂ ಇದು ಉತ್ತೇಜನಕಾರಿಯಾದ ಪೂರ್ವನಿದರ್ಶನ – ಒಳ್ಳೆಯ ಎಸ್‌ವಿಎಸ್ ಯೋಜನೆಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಹಾಗೂ ಅವು ತುಂಬಾ ಜನಪ್ರಿಯವಾಗಿವೆ. ಈಗ ಹೆಚ್ಚು ಮಹದಾಸೆಯ ಯೋಜನೆಗಳಿಗೆ ರಾಜ್ಯ ಬಜೆಟ್ಟುಗಳಲ್ಲಿ ಅಷ್ಟಾಗಿ ಅವಕಾಶವಿಲ್ಲ. ಆದರೆ ಡ್ಯುಯೆಟ್ಟನ್ನು ಒಂದು ತುರ್ತು, ಕೇಂದ್ರ ಆಯೋಜಿತ ಯೋಜನೆಯಾಗಿ ಪ್ರಾರಂಭಿಸಬಹುದು. ಪರಿಸ್ಥಿತಿ ಅನುಕೂಲಕರವಾಗಿದ್ದಾಗ ಇವನ್ನು ರಾಜ್ಯ ಸರ್ಕಾರಗಳು ನೋಡಿಕೊಳ್ಳುತ್ತವೆ. ಇದು ನಿರುದ್ಯೋಗಿಗಳಿಗೆ ನೆರವಾಗುವುದರ ಜೊತೆಗೆ ಲಾಕ್ ಡೌನ್ ನಂತರದ ಆವಧಿಯಲ್ಲಿ ಆರ್ಥಿಕ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಸಾರ್ವಜನಿಕ ಸೇವೆಗಳು ಪುನಶ್ಚೇತನಗೊಳ್ಳಲು ಸಹ ನೆರವಾಗುತ್ತವೆ.