ನಗರ ಉದ್ಯೋಗ ಖಾತ್ರಿ ಯೋಜನೆ ಕೊನೆಗೂ ಬರಬಹುದೇ?

  • ನಿರುದ್ಯೋಗ ದರ ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಹೆಚ್ಚಿದೆ

ನಿರುದ್ಯೋಗ ಈ ಕೊವಿಡ್ ಸಮಯದಲ್ಲಿ ಲಾಕ್‌ಡೌನಿನ ಪರಿಣಾಮವಾಗಿ ಪ್ರಮುಖ ಸಮಸ್ಯೆಯಾಗಿ ಮೇಲೆದ್ದು ಬಂದಿರುವುದು ಎಲ್ಲರೂ ಗಮನಿಸಿರುವ ಸಂಗತಿಯೇ. ಆದರೆ ಪ್ರಧಾನ ಮಂತ್ರಿಗಳ ‘ಮನ್‌ಕೀ ಬಾತ್’ಗಳಲ್ಲಿ ಟ್ವೀಟ್‌ಗಳಲ್ಲಿ, ಸರಕಾರದ ವೆಬ್ ತಾಣಗಳಲ್ಲಿ, ಒಟ್ಟಾರೆಯಾಗಿ ಸರಕಾರದ ಬೃಹತ್ ಪ್ರಚಾರಯಂತ್ರದಲ್ಲಿ ಈ ಬಗ್ಗೆ ದಿವ್ಯಮೌನವನ್ನು ಇನ್ನೂ ಕಾದುಕೊಳ್ಳಲಾಗಿದೆ.

ನಿರುದ್ಯೋಗದ ಒಂದು ಗಮನಾರ್ಹ ಸಂಗತಿಯೆಂದರೆ ನಿರುದ್ಯೋಗ ದರ ನಗರಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಿದೆ. ಕೊವಿಡ್ ಎರಗುವ ಮೊದಲು ಈ ವರ್ಷದ ಜನವರಿಯಲ್ಲಿ ಗ್ರಾಮೀಣ ಪ್ರದೇಗಳಲ್ಲಿ ನಿರುದ್ಯೋಗ ದರ 6.1ಶೇ. ಇದ್ದಾಗ ನಗರಗಳಲ್ಲಿ ಆಗಲೇ ಅದು 9.7ಶೇ. ಆಗಿತ್ತು. ಲಾಕ್‌ಡೌನಿನಿಂದಾಗಿ ನಗರಪ್ರದೇಶಗಳಲ್ಲಿ ಎಪ್ರಿಲ್‌ನಲ್ಲಿ 25ಶೇ.ಕ್ಕೆ, ಜೂನ್‌ನಲ್ಲಿ 25.8 ಶೇ .ಕ್ಕೆ ಜಿಗಿದಾಗ, ಗ್ರಾಮೀಣ ಪ್ರದೇಶದಲ್ಲಿಯೂ ಈ ಜಿಗಿತ ಕಂಡಿದ್ದರೂ, ಅಲ್ಲಿ ಅದು ಅನುಕ್ರಮವಾಗಿ 22.9ಶೇ. ಮತ್ತು 22.5ಶೇ,. ಇತ್ತು (ನ್ಯೂಸ್‌ಕ್ಲಿಕ್, ಸುಬೋಧ್ ವರ್ಮ, ಸಪ್ಟಂಬರ್ 3).

ಅಲ್ಲದೆ ಪ್ರಧಾನಿಗಳ ಚಪ್ಪಾಳೆ, ತಟ್ಟೆ, ದೀಪ ಹಚ್ಚುವ ಕರೆಗಳಿಗೆ ಓಗೊಟ್ಟ ನಗರ ಪ್ರದೇಶಗಳಲ್ಲೂ ಕೊವಿಡ್ ಮತ್ತು ಲಾಕ್‌ಡೌನ್ ನಿರ್ವಹಣೆ ನಕಾರಾತ್ಮಕ ಭಾವನೆಯನ್ನು ಉಂಟು ಮಾಡಿರುವಂತೆ  ಕಾಣುತ್ತದೆ.

ಈ ಹಿನ್ನೆಲೆಯಲ್ಲಿ ಮೋದಿ ಸರಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೂ, ಆರಂಭದಲ್ಲಿ ಸಣ್ಣ ನಗರಗಳಿಗೆ ವಿಸ್ತರಿಸುವ ಬಗ್ಗೆ ಯೋಚಿಸಲಾರಂಭಿಸಿದೆ ಎಂಬ ಸುದ್ದಿ ಬಂದಿದೆ. ಆರಂಭದಲ್ಲಿ ಇದಕ್ಕೆ 35,000 ಕೋಟಿ ರೂ.ಗಳನ್ನು ಕೊಡಲಾಗುವುದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಹೇಳಿರುವುದಾಗಿ ವರದಿಯಾಗಿದೆ. ಇದು ಮನರೇಗದಂತೆ ರಸ್ತೆ ನಿರ್ಮಾಣ, ಬಾವಿ ತೋಡುವುದು, ಮರು ಅರಣ್ಯೀಕರಣ ಮುಂತಾದ ಕಾಮಗಾರಿಗಳಲ್ಲಿ ಉದ್ಯೋಗ ಒದಗಿಸುವ ಯೋಜನೆ ಹೊಂದಿದೆಯಂತೆ(ಲೈವ್‌ಮಿಂಟ್, ಸಪ್ಟಂಬರ್2). ಇನ್ನೂ ಅಧಿಕೃತವಾಗಿ ಇದರ ಪ್ರಕಟಣೆ ಆಗಿಲ್ಲ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯುಪಿಎ-1 ಆಳ್ವಿಕೆಯಲ್ಲಿ ಎಡಪಕ್ಷಗಳ ಒತ್ತಡದಿಂದ ಜಾರಿಗೆ ಬಂದ ಹಕ್ಕು-ಆಧಾರಿತ ಯೋಜನೆ. ಅದೀಗ ಜಗತ್ತಿನ ಅತಿ ದೊಡ್ಡ ಉದ್ಯೋಗ ಯೋಜನೆ ಎನಿಸಿಕೊಂಡಿದೆ. ಸೀಮಿತವಾದರೂ ಗಮನಾರ್ಹವಾದ ಇದರ ಯಶಸ್ಸು ಇದನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆಗೆ ಕಾರಣವಾಗಿದೆ. ಆದರೆ ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮನರೇಗವನ್ನು ಹೀಗಳೆಯುವ, ಕುಂಠಿತಗೊಳಿಸುವ ಪ್ರಯತ್ನಗಳು ಯಶಸ್ವಿಯಾಗದಿದ್ದರೂ ಸತತವಾಗಿ ನಡೆದಿವೆ. ಇಂತಹ ಸರಕಾರ ಇದನ್ನು ನಗರಪ್ರದೇಶಗಳಿಗೆ ನಿಜವಾಗಿಯೂ ವಿಸ್ತರಿಸುತ್ತದೆಯೇ, ಗ್ರಾಮೀಣ ಯೋಜನೆಗೆ ಹಣ ಕಡಿತ ಮಾಡುತ್ತಿರುವ ಸರಕಾರ ಇದಕ್ಕೆ ನಿಜವಾಗಿಯೂ ಕೊಡುತ್ತದೆಯೇ ಎಂಬಿತ್ಯಾದಿ ಸಂದೇಹ ಬಾರದಿರದು.

ಜನವರಿ-ಎಪ್ರಿಲ್ 2020ರ ತ್ರೈಮಾಸಿಕದಲ್ಲಿ ನಗರಪ್ರದೇಶಗಳಲ್ಲಿನ ಒಟ್ಟು ಶ್ರಮಶಕ್ತಿ 14.5 ಕೋಟಿ ಎಂದು ಸಿಎಂಐಇ ಲೆಕ್ಕ ಹಾಕಿದೆ. ಇದರಲ್ಲಿ 11.7 ಕೋಟಿ ಉದ್ಯೋಗದಲ್ಲಿದ್ದರು. ಅಂದರೆ ಉದ್ಯೋಗವಿಲ್ಲದರ ಸಂಖ್ಯೆ ಸುಮಾರು 2.8 ಕೋಟಿ. ಇವರಲ್ಲಿ 1.1 ಕೋಟಿ ಉದ್ಯೋಗ ಹುಡುಕಿ-ಹುಡುಕಿ ಹತಾಶರಾಗಿ ಕೈಚೆಲ್ಲಿ ಕೂತವರು ಎನ್ನಲಾಗಿದೆ. ಈ 2.8 ಕೋಟಿಯಲ್ಲಿ 60ಶೇ. 29ವರ್ಷಗಳಿಗಿಂತ ಕಡಿಮೆ ವಯಸ್ಸಿನವರು.

ಲಾಕ್‌ಡೌನಿನಿಂದ ಮುಚ್ಚಿರುವ ಸಣ್ಣ-ದೊಡ್ಡ ಉದ್ದಿಮೆಗಳು ಬಹಳಷ್ಟು ಇನ್ನೂ ತೆರೆದಿಲ್ಲ. ಬೇಡಿಕೆ ಹೆಚ್ಚಿಸುವ ಕ್ರಮಗಳಿಲ್ಲದೆ ಅವು ಬೇಗನೇ ತೆರೆಯುವಂತೆಯೂ ಕಾಣುತ್ತಿಲ್ಲ. ಇನ್ನು ರಸ್ತೆ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ತಿಂಗಳಿಗೆ ಒಂದು ವಾರ, ಮನರೇಗ ದರದಲ್ಲಿ ಕೂಲಿ ಕೊಟ್ಟರೆ, ಅಂದರೆ ತಿಂಗಳಿಗೆ 1400ರೂ.ನಷ್ಟು ಆದಾಯಕ್ಕೆ ಎಷ್ಟು ಮಂದಿ ಇಂತಹ ಕೆಲಸಗಳಿಗೆ ಬಂದಾರು ಎಂಬ ಪ್ರಶ್ನೆಯೂ ಇದೆ. (ನ್ಯೂಸ್‌ಕ್ಲಿಕ್, ಸುಬೋಧ್ ವರ್ಮ, ಸಪ್ಟಂಬರ್ 3)

ಎಡಪಕ್ಷಗಳು, ಮತ್ತು ಕೆಲವು ಅರ್ಥಶಾಸ್ತ್ರಜ್ಞರು ಕೂಡ ಮೊದಲು ಜನಗಳ ಕೈಗಳಲ್ಲಿ ಹಣ ಮತ್ತು ಆಹಾರಧಾನ್ಯಗಳನ್ನು ಇಡುವ ಕ್ರಮಗಳ ಬಗ್ಗೆ ಒತ್ತಾಯ ಮಾಡುತ್ತ ಬಂದಿದ್ದಾರೆ. ಆದರೆ ಸರಕಾರ ಇದಕ್ಕೆ ಖರ್ಚು ಮಾಡಲು ಸಿದ್ಧವಿಲ್ಲ. ಸಿಪಿಐ(ಎಂ) ಸಲ್ಲಿಸಿದ ಪ್ರಸಕ್ತ ಕಾಲದ ಆರ್ಥಿಕ ಕ್ರಮಗಳಲ್ಲಿ ಮನರೇಗವನ್ನು ನಗರಪ್ರದೇಶಗಳಿಗೂ ವಿಸ್ತರಿಸಿ ಈ ಯೋಜನೆಯಲ್ಲಿ ಸಣ್ಣ ಉದ್ದಿಮೆಗಳಲ್ಲಿ, ಅದರಲ್ಲೂ ಅಗತ್ಯ ಸಾಮಗ್ರಿಗಳ, ಸೇವೆಗಳ ಪೂರೈಕೆ ಮಾಡುವ ಉದ್ದಿಮೆಗಳಲ್ಲಿನ ಉದ್ಯೋಗವನ್ನೂ ಸೇರಿಸಬಹುದು ಎಂದಿತ್ತು. ಇದು ಒಂದು ರೀತಿಯಲ್ಲಿ ಒಂದು ನಿರ್ದಿಷ್ಟ ಅವಧಿಯ ವರೆಗೆ ಅಂತಹ ಸಣ್ಣ ಉದ್ದಿಮೆಗಳ ಸಂಬಳದ ಮೊತ್ತಗಳಿಗೆ ಸಬ್ಸಿಡಿ ಕೊಟ್ಟಂತಾಗಿ ಅವುಗಳು ಪುನಶ್ಚೇತನಗೊಳ್ಳಲು ನೆರವಾಗಬಲ್ಲದು.

ಆದರೆ ಸರಕಾರಕ್ಕೆ ಇಂತಹ ಯೋಜನೆಯೇನೂ ಇದ್ದಂತಿಲ್ಲ. ನಗರ ಪ್ರದೇಶಗಳಲ್ಲಿ ಮತ್ತೆ ಬೆಂಬಲ ಪಡೆಯುವುದಂತೂ ಈ ಸರಕಾರಕ್ಕೆ ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ನಗರ ಉದ್ಯೋಗ ಖಾತ್ರಿಯ ಬಗ್ಗೆ ಸರಕಾರ ಕೊನೆಗೂ ಯೋಚಿಸಬೆಕಾಗಿ ಬಂದಿರಬಹುದು. ಸರಕಾರದ ವಕ್ತಾರರು ಹೇಳಿರುವ ರೀತಿಯಲ್ಲಿ ಬಂದರೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ವಿಭಾಗಗಳಿಗೆ ಒಂದು ರೀತಿಯ ಪರಿಹಾರ ಎಂದು ಇದನ್ನು ಬಗೆಯಬಹುದು. ಇದರ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲವಾದ್ದರಿಂದ, ನಿಜವಾಗಿಯೂ ಇಂತಹ ಒಂದು ಯೋಜನೆ ಇದ್ದರೆ ಅದು ಕಾರ್ಯರೂಪಕ್ಕೆ ಬರಲು ತಿಂಗಳುಗಳೇ ಹಿಡಿಯಬಹುದು. ಆದರೆ ಸದ್ಯಕ್ಕಂತೂ ಇದು ನಗರಗಳಲ್ಲಿನ ಅಸಂತೃಪ್ತಿಗೆ ತುಸು ಮುಲಾಮು ಹಚ್ಚಬಹುದಷ್ಟೇ. ಅದಕ್ಕಿಂತ ಹೆಚ್ಚೇನೂ ಆಗದು ಎನ್ನುತ್ತಾರೆ ಪರಿಣಿತರು.

Donate Janashakthi Media

Leave a Reply

Your email address will not be published. Required fields are marked *