ನಾಡು ಒಡೆಯುವ ಮಾತು ಬರೀ ಮಾತಲ್ಲವೋ!

ಎಸ್.ವೈ. ಗುರುಶಾಂತ್

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಬಗ್ಗೆ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೆ ಮಾತನಾಡಿದ್ದಾರೆ. ಹೀಗೆ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಹೊಸದೇನಲ್ಲ. ಆದರೆ ಈ ಬಾರಿ ಅವರ ಹೇಳಿಕೆ ಕೆಲವು ಗಂಭೀರ ಅಂಶಗಳ ಮುನ್ಸೂಚನೆಯನ್ನು ಒಳಗೊಂಡಿದೆ. ಅವರು ಹೇಳುವಂತೆ ‘2024 ರ ಲೋಕಸಭಾ ಚುನಾವಣೆ ನಂತರ ಕರ್ನಾಟಕ ಎರಡು ರಾಜ್ಯಗಳಾಗುವುದು ಖಚಿತ. ಅಷ್ಟೇ ಅಲ್ಲ, ದೇಶದಲ್ಲಿ ಇಂತಹ 50 ಹೊಸ ರಾಜ್ಯಗಳು ಉದಯವಾಗಲಿವೆ. ಈ ಬಗ್ಗೆ ಚರ್ಚೆ ನಡೆದಿದ್ದು ಪ್ರಧಾನಿ ಮೋದಿಯವರೇ ಇವುಗಳನ್ನು ರಚನೆ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ. ‘ಈ ಬಗ್ಗೆ ಯಾವುದೇ ಚರ್ಚೆ ತಮ್ಮಲ್ಲಿ ಇಲ್ಲ’ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ನಿಜ, ಇದು ಇಂದೋ, ನಾಳೆಯೇ ಆಗಿ ಬಿಡುವ ನಿರ್ಧಾರವೇನೂ ಅಲ್ಲ. ಆದರೆ ಇಂತಹ ವಿಷಯ ಸಂಘಪರಿವಾರದ ವಲಯದಲ್ಲಿ ಜೀವಂತ ಇರುವುದರಲ್ಲಿ ಅನುಮಾನವೇ ಇಲ್ಲ.

 

ಉಮೇಶ ಕತ್ತಿಯವರ ಈ ಹೇಳಿಕೆ ಹಿಂದಿನಂತೆ ಕೇವಲ ಬೇಡಿಕೆಯ ಸ್ವರೂಪದಲ್ಲಿ ಇಲ್ಲ. ಬದಲಾಗಿ ಅದು ಈಡೇರುವ ’ಸುಳಿವು’ ನೀಡಿದ್ದಾರೆ. ರಾಜ್ಯ ವಿಭಜನೆ ಮತ್ತು ಕತ್ತಿ ಮುಖ್ಯಮಂತ್ರಿಯಾಗುವುದು ಈಡೇರದ ಬೇಡಿಕೆ ಎಂದು ಭಾವಿಸಿದ ಬೆಂಬಲಿಗರಿಗೆ ಇಂತಹ ಮಾತುಗಳು ಒಂದಿಷ್ಟು ಭರವಸೆ ಹುಟ್ಟಿಸಲೂ ಬಹುದು. ಈ ಮೂಲಕ ವಿಭಜನೆಯ ಬೇಡಿಕೆಗೆ ಒಂದಿಷ್ಟು ಜೀವಕೊಡಲೂ ಬಹುದು. ಕೆಲವು ಪ್ರಾದೇಶಿಕ ಪಾಳೇಗಾರಿ ಶಕ್ತಿಗಳು ಹೊಸ ಜಿಲ್ಲೆಗಳ ರಚನೆ ಆಗಬೇಕೆಂದು ಕೇಳಿದರೆ, ಇನ್ನು ಕೆಲವರು ರಾಜ್ಯ ರಚನೆಯನ್ನೇ ಕೇಳುವರು. ಉತ್ತರ ಕರ್ನಾಟಕದಂತೆ ಮಾಜಿ ಸಚಿವ ವೈಜನಾಥ್ ಪಾಟೀಲ್ ಪ್ರತ್ಯೇಕ ಹೈದ್ರಾಬಾದ್ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬಹು ಹಿಂದಿನಿಂದಲೇ ಮಂಡಿಸುತ್ತಿದ್ದರು, ಆ ಬೇಡಿಕೆ ಈಗಲೂಇದೆ. ಈಗ ಕೊಂಚ ಮಲಗಿದಂತೆ ಇದೆ. ಹಾಗೇ ಪ್ರತ್ಯೇಕ ಕೊಡಗು ದೇಶ ’ಸುಧಾರಿತ’ಗೊಂಡು ಪ್ರತ್ಯೇಕ ರಾಜ್ಯ ರಚನೆ ಆಗಬೇಕೆಂಬ ಕೊಡವ ಲ್ಯಾಂಡ್ ನಾಚಪ್ಪನಂತಹವರ ಆಗ್ರಹ ಜೀವಂತವಿದೆ. ಮಾತ್ರವಲ್ಲ, ಅದಕ್ಕೆ ಬೇಕಾದ ತಾಂತ್ರಿಕತೆಯ ಭೂಮಿಕೆಯನ್ನೂ ಅವರು ಅತ್ಯಂತ ಎಚ್ಚರಿಕೆಯಿಂದ ಸಿದ್ಧಗೊಳಿಸುತ್ತಿದ್ದಾರೆ. ಕೊಡವರನ್ನು ಬುಡಕಟ್ಟೆಂದು ಪರಿಗಣಿಸಿ ಎಸ್.ಟಿ.ಸ್ಥಾನಮಾನ ನೀಡಬೇಕೆಂಬ ಬೇಡಿಕೆಯ ಹಿಂದೆ ಪ್ರತ್ಯೇಕ ರಾಜ್ಯದ ಬೇಡಿಕೆ ಬೆಸೆದುಕೊಂಡಿದೆ. ಜೊತೆಗೆ ಅಧಿಕಾರದ ಏಕಸ್ವಾಮ್ಯ ಸಾಧಿಸುವ ದುರಾಸೆ ಇದೆ. ಇಂತಹ ಪ್ರತ್ಯೇಕತೆಯ ಬೇಡಿಕೆಗಳನ್ನು ಮಂಡಿಸುವವರು ಎಲ್ಲರೂ ಆ ಭಾಗದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಮುಂದುವರಿದವರೂ ಮತ್ತು ಒಂದಿಲ್ಲೊಂದು ಬಗೆಯಲ್ಲಿ ಚಲಾವಣೆಯಲ್ಲಿರುವ ಅಧಿಕಾರ ವಲಯದಲ್ಲಿ ಸ್ಥಾನ ಗಿಟ್ಟಿಸಿಕೊಂಡವರೇ ಆಗಿದ್ದಾರೆ. ಸಮಾಜದ ಬೆಳವಣಿಗೆಯಲ್ಲಿ ತಮ್ಮ ಅಭಿವೃದ್ದಿಯೂ ಅಡಗಿದೆ ಎನ್ನುವುದನ್ನು ಒಪ್ಪದ ಇವರು ಯಾರು ಏನಾದರೂ ಆಗಲಿ ತಾವು ಮಾತ್ರ ಬೆಳೆಯಬೇಕು, ಬೆಳಗಬೇಕು ಎಂದು ಬಯಸುವವರು ಇವರು. ಅಲ್ಲದೇ  ಪ್ರತ್ಯೇಕತೆಯ ತಮ್ಮ ಬೇಡಿಕೆಗೆ ಹಿಂದುಳಿದಿರುವಿಕೆಯ ಸಬೂಬು ಹೇಳುವ  ಇವರು ಆ ಭಾಗದಲ್ಲಿ ಅಧಿಕಾರದ ಕೇಂದ್ರವೂ ಆಗಿದ್ದವರು, ಗಂಟು ಕಟ್ಟಿದವರೂ ಆದವರು. ಅಭಿವೃದ್ದಿ ಸಾಧಿಸುವ ಭರವಸೆಯೊಂದಿಗೆ ಚುಕ್ಕಾಣಿಯನ್ನು ಒಂದಿಲ್ಲೊಂದು ಬಾರಿ ಹಿಡಿದು ತಮ್ಮ ಅಭಿವೃದ್ದಿ ಸಾಧಿಸಿದ ಸಾಧಕರೇ ಆಗಿದ್ದಾರೆ. ಬಂಡವಾಳದ ಗುಣದಂತೆ ಮಾರುಕಟ್ಟೆಯ ವಿಸ್ತರಣಾಕಾಂಕ್ಷಿಗಳೂ ಆಗಿದ್ದಾರೆ! ಇನ್ನೂ ಕೆಲವೊಮ್ಮೆ ಜನತೆಯ ಬೇಡಿಕೆಗಳಿಗೆ ಸರಕಾರ ಸ್ಪಂದಿಸದೇ ಹೋದಾಗ ಪ್ರತ್ಯೇಕ ರಾಜ್ಯ ಕೇಳಿದವರೂ ಇದ್ದಾರೆ. ಪ್ರೊ.ಚಂಪಾ ರವರು ಹಾಗೆ ಕೇಳುತ್ತಿದ್ದರು. ಅದಕ್ಕಾದರೂ ಅಧಿಕಾರಸ್ಥರು ಮಣಿಯಬಹುದು ಎಂದು!

ಅಖಂಡ ರಾಷ್ಟ್ರವನ್ನು ಪ್ರತಿಪಾದಿಸುವ, ಭಾರತದ ಗಡಿಯಾಚೆಗೂ ಕಾರ್ಪೊರೇಟ್ ಸಾಮ್ರಾಜ್ಯ ವಿಸ್ತರಿಸ ಬಯಸುವ ಬಿ.ಜೆ.ಪಿ. ಯು ವಿಭಜನೆಯನ್ನು ಪ್ರತಿಪಾದಿಸಬಲ್ಲುದೇ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಬರಬಹುದು. ಆದರೆ ವಿಭಜನೆಯೇ ಅದರ ಸಿದ್ಧಾಂತದ ಮೂಲ ಹೂರಣ ಎನ್ನುವುದು ಅದರ ಕೃತ್ಯಗಳನ್ನು ಕಂಡವರು ಆಶ್ಚರ್ಯ ಪಡುವುದಿಲ್ಲ. ’ಚಿಕ್ಕ ರಾಜ್ಯ ಚೊಕ್ಕ ರಾಜ್ಯ’ ಎನ್ನುವ ವಾದವನ್ನು ಅದು ಅಧಿಕೃತವಾಗಿಯೇ ಪ್ರತಿಪಾದಿಸಿ ತಾನು ಭಾಷಾವಾರು ಪ್ರಾಂತ್ಯದ ಮೂಲ ಆಶಯದ ಕಡು ವಿರೋಧಿ ಎಂದು ಗಟ್ಟಿ ದನಿಯಲ್ಲೇ ಘೋಷಿಸಿದೆ. ಅದು ಒಕ್ಕೂಟದ ವ್ಯವಸ್ಥೆಯನ್ನೇ ಛಿದ್ರಗೊಳಿಸ ಬಯಸುತ್ತದೆ. ಮತ್ತು ಸಂಪನ್ಮೂಲ ಕಡಿತವನ್ನು ಒಳಗೊಂಡು ರಾಜ್ಯಗಳನ್ನು ಎಲ್ಲಾ ರೀತಿಯಿಂದ ದುರ್ಬಲಗೊಳಿಸಲು ಹವಣಿಸುತ್ತದೆ. ಆ ಮೂಲಕ ರಾಜ್ಯದ ಜನತೆ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲಾಗದಂತೆ  ದುರ್ಬಲಗೊಳಿಸುತ್ತದೆ.

ವಿಭಜನೆಯ ರಾಜಕಾರಣಕ್ಕೆ ಅನುಗುಣವಾಗಿ ತನ್ನ ಬೆಂಬಲಿಗ ಲೂಟಿಕೋರರನ್ನು ಸಂತೃಪ್ತ ಪಡಿಸಲು ಸಹ ಅದು ಹಿಂಜರಿಯುವುದಿಲ್ಲ. ಆನಂದಸಿಂಗ್ ರಂತಹ ಗಣಿಗಳ್ಳರು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಕೇಳಿದಾಗ ರೆಡ್ಡಿ ಸಹೋದರರ ಪ್ರತಿಭಟನೆ ಇದ್ದರೂ ಒಂದು ಸಾಮ್ರಾಜ್ಯ ನಡೆಸಲು ಜಹಗೀರು ಸೃಷ್ಟಿಸಿಕೊಟ್ಟರಲ್ಲವೇ? ಹಿಂದೆ ಉತ್ತರ ಪ್ರದೇಶ, ಬಿಹಾರ, ದಂತಹ ರಾಜ್ಯಗಳನ್ನು ವಿಭಜಿಸಿ ಉತ್ತರಖಾಂಡ್, ಝಾರ್ಖಂಡ್, ಛತ್ತೀಸ್ ಘಡ್ ಎಂಬಿತ್ಯಾದಿ ರಾಜ್ಯಗಳನ್ನು ಸೃಷ್ಟಿಸಲಿಲ್ಲವೇ? ಅತ್ಯಂತ ನೈಸರ್ಗಿಕ ಸಂಪನ್ಮೂಲಗಳಿರುವ ಈ ಪ್ರದೇಶಗಳು ಸಂಪನ್ಮೂಲಗಳ ಕೊರತೆಯಿಂದ ಅಭಿವೃದ್ದಿ ಕಾಣದೇ ಪ್ರತಿ ಬಾರಿಯೂ ಕೇಂದ್ರದ ಮುಂದೆ ಸದಾ ಸಹಾಯಕ್ಕೆ ಕೈ ಒಡ್ಡಿಯೇ ನಿಲ್ಲಬೇಕಾದ ದುಃಸ್ಥಿತಿ ಒದಗಿದೆ. ಮಾತ್ರವಲ್ಲ, ಸಣ್ಣ ಸಂಖ್ಯೆಯಲ್ಲಿ ಶಾಸನ ಸಭೆ ಹೊಂದಿರುವ ಇಲ್ಲಿ ಬಹು ಸುಲಭವಾಗಿ ಸರಕಾರವನ್ನು ಬದಲಿಸಿ ಬಿಡಬಹುದು.

ಹೀಗಾಗಿ ಕಂಪನಿಗಳ ಸಂಪನ್ಯೂಲ ಲೂಟಿಗೆ, ತಮ್ಮ ತಾಳಕ್ಕೆ, ಕುಣಿಯುವುದಿಲ್ಲ ಎನಿಸಿದಾಗ ಆ ಆಡಳಿತ ಪಕ್ಷ ವಿಭಜನೆಯಾಗಿ ಅಧಿಕಾರ ಕಳೆದುಕೊಳ್ಳುವಸದಾ ಅಸ್ಥಿರತೆ ಅಲ್ಲಿ ಕಾಣುತ್ತೇವೆ. ಹೀಗಾಗಿ ಭಾಷಾವಾರು ಪ್ರಾಂತ್ಯಗಳನ್ನು ವಿಭಜಿಸಿ ಚಿಕ್ಕ ರಾಜ್ಯಗಳನ್ನಾಗಿಸುವ ಉದ್ದೇಶದ ಹಿಂದೆ ಅಭಿವೃದ್ದಿ ಸಾಧನೆಗಿಂತ ಸಂಪನ್ಮೂಲಗಳ ಲೂಟಿ, ಪಾಳೇಗಾರಿ ಶಕ್ತಿಗಳ ಅಧಿಕಾರ ದಾಹ ತಣಿಸುವಿಕೆ ಮತ್ತು ಅವನ್ನು ತಮಗಾಗಿ ಸೇವೆ ಸಲ್ಲಿಸುವಂತೆ ಬಗ್ಗಿಸುವ ಉದ್ದೇಶ ಅಡಗಿರುತ್ತದೆ.
ಕತ್ತಿಯವರ ಸೂಚನೆಯಂತೆ ಭಾರತ ಸರಕಾರ ಒಂದು ವೇಳೆ ಉತ್ತರ ಕರ್ನಾಟಕ ರಾಜ್ಯ ರಚನೆಗೆ ತಥಾಸ್ತು ಎಂದರೆ ಅದು ಅಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದೂ ಸ್ಪಷ್ಟ. ಕಲ್ಯಾಣ ಕರ್ನಾಟಕ, ಪ್ರತ್ಯೇಕ ಕೊಡಗು ಬೇಡಿಕೆಗಳೂ ಎದ್ದು ನಿಲ್ಲುತ್ತವೆ. ಅಂದರೆ ಕರ್ನಾಟಕ ಹಲವು ಚೂರುಗಳಾಗಿ ಒಡೆಯ ಬೇಕಾಗುತ್ತದೆ.

ಇತ್ತೀಚೆಗೆ `ಹೈದ್ರಾಬಾದ್ ಕರ್ನಾಟಕ’ವೆಂದು ಚಾರಿತ್ರಿಕ ಹಿನ್ನೆಲೆಯಲ್ಲಿ ರೂಢೀಗತವಾಗಿ  ಗುರುತಿಸಲಾಗುತ್ತಿದ್ದ ಭೌಗೋಳಿಕ ಪ್ರದೇಶವನ್ನು  ’ಕಲ್ಯಾಣ ಕರ್ನಾಟಕ’ ವೆಂದು ಸರಕಾರವೇ ನಾಮಕರಣ ಮಾಡಿದ್ದೇಕೆ? ಇದು ಈ ಪ್ರದೇಶದ ಚಾರಿತ್ರಿಕ, ರಾಜಕೀಯ ವಾಸ್ತವವನ್ನು ಮರೆಸಿದಂತೆ ಆಗಲಿಲ್ಲವೇ? ಇದು ಕೇವಲ ನಿಜಾಮ್ ಶಾಹಿಯನ್ನು ವಿರೋಧಿಸುವ ಅಂಶ ಇತ್ತೇ ಅಥವಾ ಬೇರೇನು?  ಶರಣರ ಕಲ್ಯಾಣದ ವ್ಯಾಪ್ತಿ ಭೌಗೋಳಿಕವಾಗಿ ಅಥವಾ ಚಾರಿತ್ರಿಕವಾಗಿ ಆರು ಜಿಲ್ಲೆಗಳನ್ನು ಮೀರಿದ್ದಾಗಿದೆ. ಆದಾಗ್ಯೂ ಕಲ್ಯಾಣ ಕರ್ನಾಟಕದಂತಹ ಹೊಸ ಅಸ್ಮಿತತೆಯ ಸೃಷ್ಟಿಯನ್ನು ಎತ್ತ ಕಡೆ ಕೊಂಡೊಯ್ಯಬಹುದು? ಎನ್ನುವುದು ಕಾಡುವ ಪ್ರಶ್ನೆ! ಜನತೆಯ ಸಮಗ್ರ ಅಭಿವೃದ್ದಿ, ಅಭ್ಯದಯದ ಸಾಧನೆ ಹಾಗೂ ಅವರ ಪ್ರಜಾಸತ್ತಾತ್ಮಕ ಆಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿರುವಾಗ ಆಳುವವರ್ಗಗಳು ವಿಭಜಕ ಮಾರ್ಗ ಅನುಸರಿಸುತ್ತವೆ.

ಬಿಜೆಪಿ ತಾತ್ವಿಕವಾಗಿಯೂ ಅದು ಭಾಷಾವಾರು ಪ್ರಾಂತ್ಯಗಳ ಪರವಾಗಿಲ್ಲ. ಒಕ್ಕೂಟದ ವ್ಯವಸ್ಥೆಗೂ ಕಡು ವಿರೋಧ. ಮಾತ್ರವಲ್ಲ, ಭಾರತದ ಪರಂಪರೆಯ ಹೃದಯವಾಗಿರುವ ಭಾಷಾ ಹಾಗೂ ಸಾಂಸ್ಕೃತಿಕ ವೈವಿದ್ಯತೆಯನ್ನು ತನ್ನ ಪರಮ ಶತೃವೆಂದೇ ಭಾವಿಸುತ್ತದೆ. ಅದಕ್ಕಾಗಿ ಒಂದು ದೇಶ, ಒಂದು ಭಾಷೆಯಂತಹ ಭಾಷಾ ಏಕಸ್ವಾಮ್ಯದ ಹೇರಿಕೆಯನ್ನು ಪಟ್ಟು ಬಿಡದ ಒತ್ತಡದಿಂದ ಹೇರುತ್ತಿದೆ. ಆರ್.ಎಸ್.ಎಸ್. ಗುರಿಯಂತೆ 2025 ಕ್ಕೆ ಮತನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ಒಕ್ಕೂಟ ಭಾರತವನ್ನು ಅಸಹನೆಯ, ಫ್ಯಾಶಿಸ್ಟ್ ’ಹಿಂದೂ ರಾಷ್ಟ್ರ’ ಎಂದು ಘೋಷಣೆ ಮಾಡುವುದಕ್ಕೆ ಮೊದಲು ಹಿಂದಿ, ಹಿಂದು, ಹಿಂದುಸ್ಥಾನ್ ನ ಘೋಷಿತ ಗುರಿ ಸಾಧಿಸ ಬಯಸಿದೆ. ಈ ಮೂಲಕ ಏಕಸ್ವಾಮ್ಯ ಬಂಡವಾಳಗಾರರಿಗೆ ಸುಲಭವಾಗುವಂತೆ ಭಾರತದ ಆರ್ಥಿಕತೆಯನ್ನೂ ಪೂರ್ಣ ಬಿಟ್ಟು ಕೊಡಲು ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಮಾರುಕಟ್ಟೆ ಹಿತಾಸಕ್ತಿಗೆ ಬಿಜೆಪಿ-ಆರ್.ಎಸ್.ಎಸ್.ಸೋಪಾನ ಕಲ್ಪಿಸಲಿವೆ.

ಕತ್ತಿಯವರ ಮರುಕಳಿಸುವ ಇಂತಹ ಹೇಳಿಕೆ ವ್ಯಸನದಂತೆ ಕಂಡರೂ ರಾಜ್ಯಗಳ ವಿಭಜನಾ ಯೋಜನೆಯ ಪ್ರಬಲ ಸಾದ್ಯತೆಗಳ ಮುನ್ಸೂಚನೆಯೂ ಆಗಿರಬಹುದು. ಆದ್ದರಿಂದ ಒಂದು ಭಾಷಿಕರು ಒಂದು ಆಡಳಿತದಡಿ ಇರಬೇಕೆಂಬ, ನಾಡು, ನುಡಿ, ಬದುಕಿನ ಅಸ್ಮಿತತೆ ಬಯಸುವವರೆಲ್ಲಾ ಎಚ್ಚರದಿಂದಲೇ ಇರಬೇಕಾಗುತ್ತದೆ. ಸ್ವಾತಂತ್ರ್ಯದ ನಂತರದಲ್ಲಿ ಉದಯವಾದ ಈ ಚೆಲುವ ಕನ್ನಡ ನಾಡು ಸುಲಿಗೆಗಾರರ ಬಾಯಿಗೆ ಈಡಾಗದಂತೆ ನಾಡಿನ ಜನತೆ ನಡೆವ ಸಂಘರ್ಷದಲ್ಲಿ ರಕ್ಷಣಾ ಕೋಟೆಯಾಗಿ ನಿಲ್ಲಬೇಕು.

Donate Janashakthi Media

Leave a Reply

Your email address will not be published. Required fields are marked *