ಈಗ ರಾಜ್ಯೋತ್ಸವದ ಸಂಭ್ರಮ. ಎಲ್ಲರಿಗೂ 67ನೇಯ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡದ ಭಾಷೆಗೂ ಕರ್ನಾಟಕದ ಜನರ ಬದುಕಿಗೂ ಅವಿನಾವಭಾವ ಸಂಬಂಧವಿದೆ. ಭಾಷೆ ಎನ್ನುವುದು ಕೇವಲ ಅಭಿವ್ಯಕ್ತಿಯ ಮಾಧ್ಯಮ ಮಾತ್ರವಲ್ಲ. ಅದು ಸಜೀವ ಸಂಸ್ಕೃತಿ ಮತ್ತು ಜನ ಜೀವನದ, ನಾಗರೀಕತೆಯ ಜೀವತಂತು. ಹಾಗಾಗಿ ಜಗತ್ತಿನಾದ್ಯಂತ ಭಾಷೆಯ ಆಧಾರದಲ್ಲೇ ರಾಷ್ಟ್ರೀಯತೆಯನ್ನು ಗುರುತಿಸುವುದು ಅತ್ಯಂತ ವೈಜ್ಞಾನಿಕ ಮತ್ತು ಸಮರ್ಥನೀಯ ಎಂದು ಪರಿಗಣಿಸಲಾಗಿದೆ. ರಾಜ್ಯಗಳ ಸಂರಚಿಸುವಾಗ ಭಾಷಾವಾರು ಪ್ರಾಂತ್ಯಗಳಾಗಿಯೇ ಪರಿಗಣಿಸಿ ರಾಜ್ಯಗಳನ್ನು ಸಂಘಟಿಸಿರುವುದು ನಿಜ. ನಾವು ಭಾಷಾವಾರು ಪ್ರಾಂತ್ಯದ ರಚನೆಯ ದಿನವನ್ನು ಆಚರಿಸುವಾಗಲೂ ಇದು ಕೇವಲ ಕನ್ನಡಿಗರ ರಾಜ್ಯೋತ್ಸವವಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕದ ರಾಜ್ಯೋತ್ಸವವೂ ಹೌದು. ರಾಷ್ಟ್ರಕವಿ ಕುವೆಂಪು ಅವರು ಹಾಡಿದಂತೆ ಸರ್ವ ಜನಾಂಗದ, ಸರ್ವ ಭಾಷೆಯ ವಿವಿಧ ಧರ್ಮಗಳ ಶಾಂತಿಯ ತೋಟ ಕರ್ನಾಟಕ. ಹೀಗಾಗಿ ಕರ್ನಾಟಕದ ರಾಜ್ಯೋತ್ಸವವನ್ನು ಕನ್ನಡೇತರರೂ ಆಚರಿಸುವುದು ಮತ್ತು ಅವರೆಲ್ಲರನ್ನೂ ನಮ್ಮವರಾಗಿ ಒಳಗೊಳ್ಳುವುದು ಕೂಡ ಅತಿ ಮುಖ್ಯವಾಗಿದೆ. ಇವನಾರವ ಯುವ ನಾರವ ಎಂದೆನಿಸದೆ ಒಳಗೊಳ್ಳುವುದು ಕನ್ನಡ ನಾಡಿನ ಸಂಸ್ಕೃತಿ.
ಉದಯವಾಗಲಿ ಚೆಲುವ ಕನ್ನಡ ನಾಡು ಎಂದು ಸಂಕಲ್ಪಿಸಿ ತ್ಯಾಗ ಬಲಿದಾನಗಳ ಹೋರಾಟಗಳನ್ನು ಗೈದು ಹೊಸ ನಾಡೊಂದನ್ನು ಕಟ್ಟಿ ಸುಖದ ಬೀಡು ನಿರ್ಮಿಸುವ ಕನಸು ಕಂಡದ್ದು ಸಹ ನಿಜ. ಅದು ಅಂದು ಎಲ್ಲರದೆಯ ಹಾಡು. ಪ್ರತಿ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಕನಸುಗಳು ನನಸಾಗಿವೆಯೇ? ಸಂಕಲ್ಪ, ಸಾಧನೆ ಮತ್ತು ಸವಾಲುಗಳ ಪರಿವ್ಯಾಪ್ತಿಯಲ್ಲಿ ಪ್ರತಿಯೊಂದನ್ನೂ ಪುನರ್ ಅವಲೋಕನ ಮಾಡುವುದು ಸಹ ಎಲ್ಲ ಪ್ರಜೆಗಳ ಅಲಿಖಿತ ಹೊಣೆಗಾರಿಕೆ.
ಭಾರತದ ಒಕ್ಕೂಟದಲ್ಲಿ ಒಂದು ಭಾಷಿಕ ಜನರು ಒಂದುಗೂಡಿ ಒಂದು ಆಡಳಿತದ ಅಡಿಯಲ್ಲಿ ಪುನರ್ ಸಂಘಟಿತಗೊಂಡು ಹಲವು ದಶಕಗಳು ಕಳೆದಿವೆ. ಭಾರತದ ಅಭಿವೃದ್ಧಿಯ ಪಥಕ್ಕೆ ಹೊಂದಿಕೊಂಡೇ ಕರ್ನಾಟಕವು ಅದೇ ಜಾಡಿನಲ್ಲಿ ಅಭಿವೃದ್ಧಿಯ ವಿವಿಧ ಸ್ಥಿತ್ಯಂತರಗಳನ್ನು ಕಂಡಿದೆ. ಆದರೆ ದೇಶದಲ್ಲಿ ಇಂದು ಅಂತಹ ಮೂಲ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನಗಳು ನಮ್ಮೆದುರು ದಟ್ಟವಾಗಿ ಕಾಣಿಸಿಕೊಳ್ಳುತ್ತಿವೆ. ನಮ್ಮದೇ ಭಾಷೆ, ಅಸ್ಮಿತತೆ, ಸಾಂಸ್ಕೃತಿಕ ವೈಶಿಷ್ಟತೆಗಳನ್ನು ಹೊಸಕಿ ಹಾಕಬಹುದೇ ಎನ್ನುವ ಆತಂಕವು ತಲೆದೋರಿದೆ. ಈ ಒಟ್ಟು ಸನ್ನಿವೇಶವನ್ನು ಸರಿಯಾದ ರೀತಿಯಲ್ಲಿ ಅವಲೋಕಿಸಿ ಭಾರತದ ಸಂವಿಧಾನ ಕೊಡ ಮಾಡಿದ ಒಕ್ಕೂಟದ ಸ್ವರೂಪವನ್ನು, ವೈವಿಧ್ಯತೆಯಲ್ಲಿನ ಏಕತೆಯನ್ನು ಸಂರಕ್ಷಿಸಿಕೊಳ್ಳಬೇಕಿದೆ. ಬಲಿಷ್ಠ ಭಾರತ ಕಟ್ಟುವುದು ಎಂದರೆ ಅಪರಿಮಿತ ಅಧಿಕಾರದ ಕೇಂದ್ರ ಇದ್ದರೆ ಸಾಕು ಎನ್ನುವುದು ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಆ ಮೂಲಕ ದೇಶವನ್ನೂ ದುರ್ಬಲಗೊಳಿಸುತ್ತದೆ. ಬಲಿಷ್ಠ ರಾಜ್ಯಗಳಿಲ್ಲದೆ ಬಲಿಷ್ಠ ಕೇಂದ್ರ ಎನ್ನುವುದು ಸರ್ವಾಧಿಕಾರತ್ವದ ಅತಿರೇಕವಾಗಬಲ್ಲದು.
ಹೀಗೇಕಾಗುತ್ತದೆ ಎನ್ನುವುದರತ್ತ ವಿವೇಚನಾಯುತವಾದ ಅವಲೋಕನವೂ ಅಗತ್ಯ. ವಿಶೇಷವಾಗಿ ‘ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ದೇಶ-ಒಂದು ಸಮವಸ್ತ್ರ, ಒಂದು ದೇಶ ಒಂದೇ ಫರ್ಮಾನು ಇತ್ಯಾದಿ ಮಾತುಗಳನ್ನು ಕೇಳುವಾಗ ಅಪಾಯದ ಗಂಟೆ ಅತಿಯಾಗಿ ಸನಿಹದಲ್ಲೇ ಬಾರಿಸುವುದು ಗಂಭೀರ ಸಂಗತಿ.
ಈ ಕಾಲದ ಪ್ರಕ್ರಿಯೆಯನ್ನು ಹೀಗೆ ಅರಿಯಬಹುದು. ಪ್ರಭುತ್ವದ ನೇತೃತ್ವ ವಹಿಸಿದ್ದ ಹಿರಿಯ ಬಂಡವಾಳಗಾರರು ಏಕಸ್ವಾಮ್ಯ ಬಂಡವಾಳಗಾರಾಗುತ್ತಿದ್ದಾರೆ. ಏಕಸ್ವಾಮ್ಯ ಬಂಡವಾಳಗಾರರು ಆರ್ಥಿಕತೆ ಮತ್ತು ಮಾರುಕಟ್ಟೆಯ ಏಕಸ್ವಾಮ್ಯತೆಯನ್ನೂ ಏಕ ಕಾಲದಲ್ಲೇ ಬಯಸುತ್ತಾರೆ. ಅಂತಹ ಬದಲಾವಣೆಗೆ ಅನುವಾಗಲು ಅವರು ಪ್ರಾದೇಶಿಕ ಆರ್ಥಿಕತೆಯನ್ನು ಅಪೋಶನ ಮಾಡಿ ಇಲ್ಲವೇ ನಾಶಗೊಳಿಸಿ ತಮ್ಮದೇ ಏಕಸ್ವಾಮ್ಯವನ್ನು ಸ್ಥಾಪಿಸ ಬಯಸುತ್ತಾರೆ. ಇಂತಹ ವರ್ಗಗಳ ನೇತೃತ್ವದ ಪ್ರಭುತ್ವ ತನ್ನೆಲ್ಲಾ ಬುದ್ದಿ, ಬಲ, ಕೌಶಲ್ಯಗಳನ್ನು ಬಳಸಿ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಮುರಿದಿಕ್ಕಲು ತನ್ನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಬಳಸುತ್ತದೆ. ಈಗಿನ ಕೇಂದ್ರ ಸರಕಾರ ಸಂವಿಧಾನಾತ್ಮ ವಿಧಿ ವಿಧಾನಗಳನ್ನು ಅನುಸರಿಸದೆ, ಉಲ್ಲಂಘಿಸಿ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಒಕ್ಕೂಟದ ಪ್ರಜಾಸತ್ತಾತ್ಮಕ ಸ್ವರೂಪ, ಕಾರ್ಯ ವಿಧಾನಗಳನ್ನು ಬುಡಮೇಲು ಮಾಡುತ್ತಾ ಏಕಸ್ವಾಮ್ಯದ ಸರ್ವಾಧಿಕಾರವನ್ನು ಹೇರುತ್ತಿದೆ. ಹೀಗಾಗಿಯೇ ಒಕ್ಕೂಟದ ರಾಜ್ಯ ವ್ಯವಸ್ಥೆಯಲ್ಲಿನ ಭಾಷೆ, ಸಂಸ್ಕೃತಿ ಮುಖ್ಯವಾಗಿ ಆರ್ಥಿಕತೆಯನ್ನು ನೆಲ ಸಮಗೊಳಿಸುತ್ತದೆ. ಒಂದು ದೇಶ, ಒಂದು ಭಾಷೆ, ಒಂದು ಸಮವಸ್ತ್ರ ಎನ್ನುವುದರ ಹಿಂದೆ ರಾಜ್ಯಗಳ ಅಸ್ಮಿತತೆ, ಅಸ್ತಿತ್ವವನ್ನೇ ನಾಶಗೊಳಿಸುವ ಸರ್ವಾಧಿಕಾರದ ಹುನ್ನಾರವಿದೆ. ಈ ನೆಲೆಯಲ್ಲೇ ಅದು ಬಹುಮುಖಿ ಯುದ್ಧ ಸಾರಿದೆ.
ದೇಶಕ್ಕೆ ವಸಾಹತುಶಾಹಿಗಳಿಂದ ಸ್ವಾತಂತ್ರ‍್ಯ ಬಂದಾಗ ಹಿರಿಯ ಬಂಡವಾಳಿಗರು ಭಾರತದಂತಹ ವಿಶಾಲ ದೇಶಕ್ಕೆ ಅಗತ್ಯವಿದ್ದ ಉತ್ಪಾದನೆ ಮಾಡುವಷ್ಟು ಕೈಗಾರಿಕಾ, ಕೃಷಿ ಬಂಡವಾಳ ಇರಲಿಲ್ಲ ಮತ್ತು ಪ್ರಾದೇಶಿಕ ಹಾಗೂ ಭಾಷಾವಾರು ಪ್ರದೇಶಗಳ ವೈಶಿಷ್ಟ್ಯಗಳ ಪ್ರಬಲ ಪ್ರತಿಪಾದನೆಗಳ ಕಾರಣದಿಂದ ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಕಾಲಾನುಕ್ರಮದಲ್ಲಿ ಪ್ರಭುತ್ವದ ಪ್ರಾಯೋಜಿತ ಬಂಡವಾಳಶಾಹಿ ಬೆಳೆದಂತೆ ದೇಶದ ಆರ್ಥಿಕತೆಯನ್ನು ತನ್ನ ಕೈಗೆ ತೆಗೆದುಕೊಳ್ಳುವ ಧಾವಂತ ಆರ್ಥಿಕತೆಯ ಬೆನ್ನೆಲುಬಾದ ಸಾರ್ವಜನಿಕ ವಲಯದ ಕಳಚುವಿಕೆ ಇತ್ಯಾದಿ ಉದಾರೀಕರಣ, ಖಾಸಗೀಕರಣದ ನೀತಿಗಳು ಸ್ವಾಯತ್ತ, ಸಾರ್ವಭೌಮತ್ವದ ಬೆಳವಣಿಗೆಯ ಕಲ್ಪನೆಯನ್ನೇ ಬುಡಮೇಲುಗೊಳಿಸಿವೆ.
ಇದಕ್ಕೆ ಪರ್ಯಾಯ ಕಟ್ಟುವ ಚಿಂತನೆ ಮತ್ತು ಆಂದೋಲನ ಇಂದಿನ ಅಗತ್ಯ. ಏಕಸ್ವಾಮ್ಯ ಬಂಡವಾಳದ ಮಾರುಕಟ್ಟೆ ಆರ್ಥಿಕತೆಯನ್ನು ಹಿಮ್ಮೆಟ್ಟಿಸದೇ, ಭಾಷಾವಾರು ಪ್ರಾಂತ್ಯಗಳ ಅಸ್ತಿತ್ವ, ಅಸ್ಮಿತತೆಯನ್ನಾಗಲೀ, ಪ್ರಾದೇಶಿಕ ವೈಶಿಷ್ಟ್ಯತೆಯನ್ನಾಗಲೀ ಸಂರಕ್ಷಿಸಿಕೊಳ್ಳುವುದು ಆಗದು.
ಈ ಸಂಚಿಕೆಯು ರಾಜ್ಯಗಳ ಸ್ವಾಯತ್ತತೆಗೆ ವಿವಿಧ ಮುಖಗಳಲ್ಲಿ ನಡೆಯುತ್ತಿರುವ ದಾಳಿಗಳ ಅವಲೋಕನ ಮಾಡಿದ ವಿಶ್ಲೇಷಣಾತ್ಮಕ ಲೇಖನಗಳನ್ನು ಒಳಗೊಂಡಿದೆ. ತಾವು ಇದೆಲ್ಲವನ್ನು ಸ್ವಾಗತಿಸುತ್ತೀರಿ ಎಂದು ಭಾವಿಸುತ್ತೇವೆ.