ಜಾತಿ ರಾಜಕಾರಣದಲ್ಲಿ ಮಠಾಧೀಶರ ಪ್ರಾಬಲ್ಯ-ಪಾರಮ್ಯ

       ನಾ ದಿವಾಕರ

ಪ್ರತಿಯೊಂದು ಜಾತಿಕೇಂದ್ರಿತ ಮಠವೂ ಅಧಿಕಾರ ರಾಜಕಾರಣದ ಸಹಭಾಗಿತ್ವ ಬಯಸುತ್ತಿದೆ

 

                                                                                                                                                                                                        2023ರ ಕರ್ನಾಟಕ ವಿಧಾನಸಭಾ ಚುನಾವಣೆಗಳು ಎರಡು ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಮೊದಲನೆಯದಾಗಿ ಎರಡು ದಶಕಗಳ ನಂತರ ಮತದಾರರು ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವುದರ ಮೂಲಕ ಆಪರೇಷನ್‌ಗಳ ಅಕ್ರಮ ಮಾರ್ಗಗಳಿಗೆ ಕಡಿವಾಣ ಹಾಕಿದ್ದಾರೆ. ತತ್ಪರಿಣಾಮವಾಗಿ ಚುನಾಯಿತ ಶಾಸಕರು ತಮ್ಮ ಮಾರುಕಟ್ಟೆ ಮೌಲ್ಯವನ್ನು ಮರೆತು ಈಗ ಜನಸ್ಪಂದನೆಯ ಮೂಲಕ ಕ್ರೋಢೀಕರಿಸಬಹುದಾದ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಪಕ್ಷಾಂತರ ಮತ್ತು ವಲಸೆ ಶಾಸಕರ ದುಷ್ಟ ಪರಂಪರೆಯಿಂದ ರಾಜಕೀಯ ವ್ಯವಸ್ಥೆ ಹೊರಬರಲು ಈ ಚುನಾವಣೆ ನಾಂದಿ ಹಾಡಿದೆ ಎಂದು ಹೇಳಲಾಗುವುದಿಲ್ಲವಾದರೂ, ಚುನಾಯಿತ ಪ್ರತಿನಿಧಿಗಳನ್ನು ಕೊಂಡುಕೊಳ್ಳಬಹುದಾದ ಸರಕುಗಳು ಎಂದು ಭಾವಿಸುವ ಒಂದು ಪರಂಪರೆಗೆ ಮತದಾರರು ತಾತ್ಕಾಲಿಕ ಅಂತ್ಯ ಹಾಡಿದ್ದಾರೆ.

 ಎರಡನೆಯ ಗಮನಾರ್ಹ ಅಂಶವೆಂದರೆ ಜಾತಿ ಸಮೀಕರಣದ ನೆಲೆಯಲ್ಲೇ ನಿಷ್ಕರ್ಷೆಯಾಗುತ್ತಿದ್ದ ಅಧಿಕಾರ ರಾಜಕಾರಣವು ತನ್ನ ಬಾಹುಗಳನ್ನು ಮತ್ತಷ್ಟು ವಿಸ್ತರಿಸುವ ರೀತಿಯಲ್ಲಿ ಈ ಚುನಾವಣೆಗಳಲ್ಲಿ ಜಾತಿ ಪ್ರಾತಿನಿಧ್ಯವೇ ಪ್ರಧಾನ ಅಂಶವಾಗಿ ಹೊರಹೊಮ್ಮಿದೆ. ಪ್ರಬಲ ಜಾತಿಗಳ ಪಾರಮ್ಯ ಮತ್ತು ಅಧಿಕಾರ ಕೇಂದ್ರಗಳ ಮೇಲಿನ ಹಿಡಿತ ಮತ್ತಷ್ಟು ಹೆಚ್ಚಾಗಿರುವುದರೊಂದಿಗೇ ಮತ್ತೊಂದು ಬದಿಯಲ್ಲಿ ದಲಿತ ಸಮುದಾಯದ ನಿರ್ಣಾಯಕ ಮತದಾನವು ರಾಜಕೀಯ ಪಕ್ಷಗಳನ್ನು ಕೊಂಚ ಮಟ್ಟಿಗಾದರೂ ವಿಚಲಿತಗೊಳಿಸಿದೆ. ಪರಾಭವಗೊಂಡಿರುವ ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಪಂಗಡ ಹಾಗೂ ದಲಿತರಲ್ಲಿ ಎಡಗೈ ಬಣದ ಸಮುದಾಯಗಳನ್ನು ಓಲೈಸುವ ದೃಷ್ಟಿಯಿಂದಲೇ ಮೀಸಲಾತಿ ನೀತಿಯ ತಿದ್ದುಪಡಿ ಮಾಡಿದರೂ, ಈ ಸಮುದಾಯದ ಮತದಾರರು ಸರ್ಕಾರದ ತುಷ್ಟೀಕರಣ ಅಥವಾ ಓಲೈಕೆ ರಾಜಕಾರಣಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೀಸಲಾತಿ ಸೌಲಭ್ಯವು ಶೋಷಿತ ಸಮುದಾಯಗಳ ಸಾಂವಿಧಾನಿಕ ಹಕ್ಕು ಎಂದು ಅರಿತಿದ್ದರೂ ರಾಜಕೀಯ ಪಕ್ಷಗಳು ಮೀಸಲಾತಿಯನ್ನು ರಾಜಕೀಯ ಅಸ್ತ್ರವಾಗಿಯೇ ಬಳಸುತ್ತಿರುವುದಕ್ಕೆ ಪದಚ್ಯುತ ಬಿಜೆಪಿ ಸರ್ಕಾರ ಪ್ರತ್ಯಕ್ಷ ಸಾಕ್ಷಿ ಒದಗಿಸಿದೆ. ಸರ್ಕಾರಿ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನೇ ಇಲ್ಲದಂತೆ ಮಾಡಿ, ಮೀಸಲಾತಿಯ ನಾಟಕವಾಡುವ ರಾಜಕೀಯ ಪಕ್ಷಗಳಿಗೆ ಶೋಷಿತ ಸಮುದಾಯಗಳು ತಮಗೆ ಅನ್ನ ನೀರು ವಸತಿ ಮತ್ತು ಉದ್ಯೋಗವೇ ಪ್ರಧಾನ ಗುರಿ ಎಂದು ನಿರೂಪಿಸಿರುವುದು ಈ ಚುನಾವಣೆಗಳ ವೈಶಿಷ್ಟ್ಯ.

 ಜಾತಿ ರಾಜಕಾರಣದ ವಿಸ್ತೃತ ಬಾಹುಗಳು

ಆದರೆ ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿರುವುದು, ಜಾತಿ ರಾಜಕಾರಣದ ಮತ್ತೊಂದು ಆಯಾಮವನ್ನು. ತಮ್ಮ ಜೀವನ ಹಾಗೂ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸಲು ಕೈಜೋಡಿಸುವ ರಾಜಕೀಯ ಪಕ್ಷಗಳೊಂದಿಗೆ ಹೆಜ್ಜೆ ಹಾಕುವ ಶೋಷಿತ ಸಮುದಾಯಗಳಿಗೂ, ತಮ್ಮ ಜಾತಿ ಪ್ರಾಬಲ್ಯ ಹಾಗೂ ಸಾಮುದಾಯಿಕ ಪಾರಮ್ಯವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅಧಿಕಾರ ರಾಜಕಾರಣದ ಭೂಮಿಕೆಯನ್ನು ಆಕ್ರಮಿಸಲು ಯತ್ನಿಸುವ ಪ್ರಬಲ ಮೇಲ್ಜಾತಿಯ ಹಾಗೂ ಒಬಿಸಿ ಸಮುದಾಯಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಬೇಕಿದೆ. ಡಾ ಬಿ ಆರ್‌ ಅಂಬೇಡ್ಕರ್‌ ಅವರ ಜಾತಿ ವಿನಾಶದ ಆಲೋಚನೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಎನ್ನುವುದು ಕುಟುಂಬ-ಸಮಾಜ-ಸಮುದಾಯದ ಚೌಕಟ್ಟುಗಳನ್ನೂ ದಾಟಿ ಆಡಳಿತ ವ್ಯವಸ್ಥೆಯಲ್ಲೂ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವುದು ದುರಂತ ವಾಸ್ತವ. ಜಾತಿ ವಿನಾಶವೂ ಆಗದೆ ಜಾತಿ ಪ್ರಜ್ಞೆಯು ಇನ್ನೂ ಆಳಕ್ಕಿಳಿಯುತ್ತಿರುವ ವಿಷಮ ಸನ್ನಿವೇಶದ ಫಲಾನುಭವಿಗಳು ಶೋಷಿತ ಸಮುದಾಯಗಳೇ ಆಗಿದ್ದರೆ, ಆಳುವ ವರ್ಗಗಳ ಬುನಾದಿಯನ್ನು ಅಲುಗಾಡಿಸಲು ಸಾಧ್ಯವಾಗಬಹುದಿತ್ತು. ಆದರೆ ನೆಲಮಟ್ಟದ ವಾಸ್ತವವನ್ನು ಅರ್ಥಮಾಡಿಕೊಳ್ಳದೆಯೇ ರಾಜಕೀಯ ಪ್ರಜ್ಞೆಯನ್ನು ವೃದ್ಧಿಸಿಕೊಳ್ಳಲು ಹೊರಟಿರುವ  ಶೋಷಿತ ಸಮುದಾಯಗಳು ಮತ್ತಾವುದೋ ಮೇಲ್ಜಾತಿ ಪ್ರಾಬಲ್ಯ ಇರುವ ರಾಜಕೀಯ ಪಕ್ಷಗಳ ಬಾಲಂಗೋಚಿಗಳಾಗಿಯೇ ಮುಂದುವರೆಯಬೇಕಿದೆ.

ಈ ರಾಜಕೀಯ ಅನಿವಾರ್ಯತೆಗಳ ನಡುವೆಯೂ ಪ್ರತಿಯೊಂದು ಜಾತಿ/ಉಪಜಾತಿಗೂ ಸ್ಥಾಪಿಸಲ್ಪಟ್ಟಿರುವ ಆಧ್ಯಾತ್ಮಿಕ ಮಠಗಳು ವಾಲ್ಮೀಕಿ ಭಗೀರಥರಿಂದ ಹಿಡಿದು ಸಂಗೊಳ್ಳಿ ರಾಯಣ್ಣನವರೆಗೂ ತಮ್ಮ ಪ್ರಾತಿನಿಧ್ಯವನ್ನು ಹರಡುವಲ್ಲಿ ಯಶಸ್ವಿಯಾಗಿವೆ. ಚರಿತ್ರೆ ಮತ್ತು ಪುರಾಣದಿಂದ ಹೆಕ್ಕಿ ತೆಗೆಯಬಹುದಾದ ಪ್ರತಿಯೊಬ್ಬ ದಾರ್ಶನಿಕರನ್ನೂ ಒಂದೊಂದು ಜಾತಿ ತನ್ನದಾಗಿಸಿಕೊಳ್ಳುತ್ತಿರುವ ಹಾಗೆಯೇ ಈ ಮಹನೀಯರನ್ನು ಸಾಮುದಾಯಿಕವಾಗಿ ಪ್ರತಿನಿಧಿಸುವ ಆಧ್ಯಾತ್ಮಿಕ/ಧಾರ್ಮಿಕ ಮಠಗಳೂ ಸಹ ತಮ್ಮ ಬುನಾದಿಯನ್ನು ಸದೃಢವಾಗಿ ಕಾಪಾಡಿಕೊಳ್ಳುತ್ತಿವೆ. ಆದರೆ ಇಲ್ಲಿ ಕಳೆದುಹೋಗುತ್ತಿರುವ ಕೊಂಡಿ  ಎಂದರೆ ಶೋಷಿತ ಸಮುದಾಯಗಳು ಮತ್ತು ಅವುಗಳ ರಾಜಕೀಯ ಪ್ರಾತಿನಿಧ್ಯ. ಕರ್ನಾಟಕದ ರಾಜಕಾರಣದಲ್ಲಿ ಆರಂಭದಿಂದಲೂ ತಮ್ಮ ಪ್ರಾಬಲ್ಯವನ್ನು ಕಾಪಾಡಿಕೊಂಡೇ ಬಂದಿರುವ ಲಿಂಗಾಯತ ಹಾಗೂ ಒಕ್ಕಲಿಗ ಮಠಗಳು ಈ ಚುನಾವಣೆಯ ನಂತರದಲ್ಲೂ ಸಹ ತಮ್ಮ ಪ್ರಾತಿನಿಧ್ಯವನ್ನು ಮತ್ತಷ್ಟು ದೃಢೀಕರಿಸಿಕೊಳ್ಳಲು ಯತ್ನಿಸುತ್ತಿವೆ. ಮತ್ತೊಂದೆಡೆ ಶೋಷಿತರಲ್ಲೇ ಸಾಮಾಜಿಕ ಪ್ರಾಬಲ್ಯ ಹೊಂದಿರುವ ಮಠಗಳು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವಲ್ಲಿ ಸಕ್ರಿಯವಾಗಿವೆ.

ಜಾತಿ ಪ್ರಜ್ಞೆ ಮತ್ತು ಜಾತಿ ಅಸ್ತಿತ್ವದ ನೆಲೆಗಳು ಎಷ್ಟೇ ಸದೃಢವಾಗಿದ್ದರೂ ನವ ಉದಾರವಾದದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಸಂಪನ್ಮೂಲಗಳು ಮತ್ತು ಸಾರ್ವಜನಿಕ ಸಂಪತ್ತಿನ ಮೇಲೆ ಯಜಮಾನಿಕೆ ಸ್ಥಾಪಿಸುವುದೇ ಜಾತಿ ಸಮುದಾಯಗಳ ಸಾಮಾಜಿಕ ಪ್ರಾಬಲ್ಯಕ್ಕೆ ಬುನಾದಿಯಾಗುತ್ತದೆ. ಕ್ರೋಢೀಕೃತ ಬಂಡವಾಳ, ಮಾರುಕಟ್ಟೆ ಬಂಡವಾಳ ಹಾಗೂ ಸಂಪನ್ಮೂಲಗಳ ಒಡೆತನ ಮತ್ತು ವಿತರಣೆಯಲ್ಲಿ ಬಿಗಿಯಾದ ಹಿಡಿತ ಮತ್ತು ವಿಸ್ತರಣೆಯ ಸಾಮರ್ಥ್ಯವನ್ನು ಹೊಂದಿರುವುದರಿಂದಲೇ ಕರ್ನಾಟಕದಲ್ಲಿ ಚುಂಚನಗಿರಿಯಿಂದ ಪಂಚಮಸಾಲಿಯವರೆಗೆ ಎಲ್ಲ ಜಾತಿ ಕೇಂದ್ರಿತ ಮಠಗಳೂ ತಮ್ಮ ಸಾಮಾಜಿಕ-ರಾಜಕೀಯ ಪ್ರಾಬಲ್ಯವನ್ನೂ ಹೆಚ್ಚಿಸಿಕೊಂಡಿವೆ. ಹಾಗಾಗಿಯೇ ಅಧಿಕಾರ ರಾಜಕಾರಣದ ವಾರಸುದಾರರೂ ಸಹ ಈ ಜಾತಿ-ಸಮುದಾಯ ಕೇಂದ್ರಿತ ಮಠಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು  ರಾಜಕೀಯ ಅನಿವಾರ್ಯತೆಯಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುವುದೇ ಅಲ್ಲದೆ, ಸಾರ್ವಜನಿಕ ಜೀವನದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಔದ್ಯಮಿಕ ವಲಯಗಳಲ್ಲೂ ತಮ್ಮ ಕಬಂಧ ಬಾಹುಗಳನ್ನು ಚಾಚಿರುವ ಮಠಮಾನ್ಯಗಳು ಮಠೋದ್ಯಮಗಳಾಗಿ ಪರಿವರ್ತಿತವಾಗಿವೆ. ಈ ಔದ್ಯಮಿಕ ಹಿತಾಸಕ್ತಿಯೇ ಮಠಗಳಿಗೆ ಜನಪ್ರತಿನಿಧಿಗಳ ಮೇಲೆ ಹಿಡಿತ ಸಾಧಿಸಲೂ ನೆರವಾಗುತ್ತದೆ. 2008ರ ನಂತರದಲ್ಲಿ ರಾಜ್ಯ ರಾಜಕಾರಣದಲ್ಲಿ ಈ ಮಠಮಾನ್ಯಗಳಿಗೆ ಸರ್ಕಾರಗಳಿಂದಲೇ ಅನುದಾನ ನೀಡುವ ಪರಂಪರೆ ಆರಂಭವಾಗಿದ್ದು, ಇಂದಿಗೂ ಸಹ ನಡೆದುಕೊಂಡುಬಂದಿದೆ.

ಜಾತಿ ಮಠಗಳ ರಾಜಕೀಯ ಸ್ವರೂಪ

ಭೌತಿಕವಾಗಿ ಹಾಗೂ ಆರ್ಥಿಕವಾಗಿ ಜಾತಿ ಮಠಗಳನ್ನು ಸರ್ಕಾರಗಳೇ ಪೋಷಿಸುತ್ತಿರುವುದರಿಂದ ಈ ಮಠಾಧೀಶರು ಇಂದು ಅಧಿಕಾರ ರಾಜಕಾರಣದ ಆವರಣವನ್ನೂ ಪ್ರವೇಶಿಸಿ ತಮ್ಮ ಆಯ್ಕೆಯ ವ್ಯಕ್ತಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುತ್ತಿವೆ. ಮೇ 10ರಂದು ನಡೆದ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ಬಿಜೆಪಿಯ ದುರಾಡಳಿತ ಮತ್ತು ಅಸೂಕ್ಷ್ಮ-ಕೋಮುವಾದಿ ದ್ವೇಷ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಎಲ್ಲ ಸಮುದಾಯಗಳೂ ಕಾಂಗ್ರೆಸ್‌ ಪರವಾಗಿ ಮತ ನೀಡಿದ್ದು, ವಿಶೇಷವಾಗಿ ದಲಿತ ಸಮುದಾಯದ ಶೇ 63ರಷ್ಟು ಮತದಾರರು ಕಾಂಗ್ರೆಸ್‌ ಪರವಾಗಿ ನಿಂತಿದ್ದಾರೆ. ಇದರಲ್ಲಿ ದಲಿತ ಸಂಘಟನೆಗಳ ಮಹತ್ತರ ಕೊಡುಗೆಯನ್ನು ನಿರಾಕರಿಸಲಾಗುವುದಿಲ್ಲ. ಆದರೆ ರಾಜ್ಯದಲ್ಲಿ ಅಧಿಕಾರ ನಡೆಸಲು ಮುಂದಾಳತ್ವ ವಹಿಸಬೇಕಾದ ಸಂದರ್ಭದಲ್ಲಿ ಮತ್ತದೇ ಪ್ರಬಲ ಜಾತಿಗಳು ತಮ್ಮ ವಾರಸುದಾರಿಕೆಗಾಗಿ ಹೊಡೆದಾಡುತ್ತಿವೆ. ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ಕುರುಬ ಸಮುದಾಯದ ಸಾಮಾನ್ಯ ಜನತೆಯ ವಾರಸುದಾರರು ತಾವೇ ಎಂದು ಘೋಷಿಸಿಕೊಳ್ಳುವ ಮೂರೂ ಸಮುದಾಯದ ಮಠಗಳು ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಒತ್ತಡ ಹೇರುತ್ತಿವೆ. ಇದಕ್ಕೆ ಪೂರಕವಾಗಿ ಚುನಾಯಿತ ಪ್ರತಿನಿಧಿಗಳೂ ಸಹ ತಮ್ಮ ಸ್ಥಾನಪಲ್ಲಟವಾಗದಂತೆ ನೋಡಿಕೊಳ್ಳಲು ಮಠಮಾನ್ಯಗಳ ಮೊರೆ ಹೋಗುತ್ತಿರುವುದನ್ನೂ ಕಾಣುತ್ತಿದ್ದೇವೆ.

ಮೇ 10ರ ಚುನಾವಣೆಗಳಲ್ಲಿ 39 ಲಿಂಗಾಯತ, 21 ಒಕ್ಕಲಿಗ ಸಮುದಾಯದ ಜಾತಿ ಪ್ರತಿನಿಧಿಗಳು ಕಾಂಗ್ರೆಸ್‌-ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದು, ಈಗ ಈ ಸಾಮುದಾಯಿಕ ಪ್ರಾಬಲ್ಯವನ್ನು ಆಧರಿಸಿ ಸರ್ಕಾರವನ್ನು ನಡೆಸುವ ಅಧಿಕಾರ ಪೀಠವನ್ನೇ ನೀಡುವಂತೆ ಮಠಾಧೀಶರು ಆಗ್ರಹಿಸುತ್ತಿರುವುದು ಕಾಂಗ್ರೆಸ್‌ ಹೈಕಮಾಂಡನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಒಕ್ಕಲಿಗ ಸಮುದಾಯವನ್ನೇ ಅವಲಂಬಿಸಿ ರಾಜಕಾರಣ ನಡೆಸುವ ಜಾತ್ಯತೀತ ಜನತಾದಳ ತನ್ನ ಜಾತಿ ಬಾಂಧವರ ಬೆಂಬಲವನ್ನೂ ಗಳಿಸಲಾಗದೆ ಹೀನಾಯ ಪರಾಭವ ಅನುಭವಿಸಿದೆ. ಈ ಜಾತಿ ಧೃವೀಕರಣಕ್ಕೆ ಸೂಕ್ತ ನೆಲೆಯನ್ನು ಕಲ್ಪಿಸಿ, ರಾಜ್ಯಾದ್ಯಂತ ತಮ್ಮ ಶಾಖೆಗಳ ಮೂಲಕ ಮತಗಳಿಕೆಗಾಗಿ ಶ್ರಮಿಸುವ ಒಕ್ಕಲಿಗ ಮಠಗಳು ಈಗ ಕಾಂಗ್ರೆಸ್‌ ಪಕ್ಷದಲ್ಲೇ ತಮ್ಮ ಪ್ರತಿನಿಧಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿವೆ. ಉರಿಗೌಡ-ನಂಜೇಗೌಡ ಪ್ರಹಸನದಲ್ಲಿ ತಮ್ಮ ಪ್ರಬುದ್ಧ ಸಾರ್ವಜನಿಕ ಹೇಳಿಕೆಯ ಮೂಲಕ ಪ್ರಜ್ಞಾವಂತ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಆದಿಚುಂಚನಗಿರಿ ಮಠದ ಸ್ವಾಮಿ ನಿರ್ಮಲಾನಂದನಾಥರು ಚುನಾವಣಾ ಫಲಿತಾಂಶದ ನಂತರ ಒಂದೆರಡು ಮೆಟ್ಟಿಲು ಕೆಳಗಿಳಿದು, ತಮ್ಮ ಜಾತಿ ಪ್ರಜ್ಞೆಗೆ ಪೂರಕವಾಗಿ ಡಿ. ಕೆ. ಶಿವಕುಮಾರ್‌ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವಂತೆ ಆಗ್ರಹಿಸಿದ್ದಾರೆ. ಒಕ್ಕಲಿಗ ಜನಪ್ರತಿನಿಧಿಗಳ ಒಟ್ಟಾರೆ ಪ್ರಾತಿನಿಧಿತ್ವವನ್ನು ತಾವು ವಹಿಸಿಕೊಂಡಿದ್ದೇವೆ ಎಂಬ ಧೋರಣೆ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇದಕ್ಕೆ ಸ್ಪಂದನೆಯಾಗಿ, ಕುರುಬ ಸಮುದಾಯದ ಹಲವು ಮಠಗಳೂ ಸಹ ಅಷ್ಟೇ ಪ್ರಬಲವಾಗಿ ಮಾಜಿ ಸೀಎಂ ಸಿದ್ಧರಾಮಯ್ಯ ಅವರ ಪರ ವಕಾಲತ್ತು ವಹಿಸಿವೆ.

ಮಠ ಕೇಂದ್ರಿತ ರಾಜಕಾರಣದ ಸೋಂಕು ಬಹಳ ಶೀಘ್ರವಾಗಿ ಎಲ್ಲ ಸಮುದಾಯಗಳಿಗೂ ಹರಡುವುದು ಸಹಜ. ಹಾಗಾಗಿಯೇ ಲಿಂಗಾಯತ ಸಮುದಾಯದ ಹಲವಾರು ಮಠಗಳು ಧಿಗ್ಗನೆದ್ದು ಕುಳಿತಿವೆ. ಬೆಳಗಾವಿಯ ರುದ್ರಾಕ್ಷಿ ಮಠಾಧೀಶರಾದ ಅಲ್ಲಮಪ್ರಭು ಲಿಂಗಾಯತರಿಗೇ ಮುಖ್ಯ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಇದೇ ಬೇಡಿಕೆಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.  ಬಹುಮಟ್ಟಿಗೆ ಅಧಿಕಾರ ರಾಜಕಾರಣದಿಂದ ದೂರವೇ ಉಳಿದಿದ್ದ ತುಮಕೂರು ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಿದ್ದ ಪರಾಜಿತ ಬಿಜೆಪಿ ನಾಯಕ ಸೋಮಣ್ನ ಸ್ವಾಮಿಗಳ ಆಶೀರ್ವಚನದೊಂದಿಗೇ ತಮಗೆ, ತಮ್ಮ ಪುತ್ರನಿಗೆ ಟಿಕೆಟ್‌ ಭಾಗವನ್ನೂ ಕರುಣಿಸುವಂತೆ ಕೋರಿ ಭೇಟಿ ನೀಡಿದ್ದುದನ್ನು ಇಲ್ಲಿ ಸ್ಮರಿಸಬಹುದು. ಈ ಭೇಟಿ ಫಲಪ್ರದವಾಗದಿದ್ದರೂ, ಜಾತಿ ಪ್ರಾತಿನಿಧ್ಯದ ಮೂಲಕವೇ ಜನಪ್ರತಿನಿಧಿಯಾಗಲು ಬಯಸುವ ಎಲ್ಲ ಪಕ್ಷಗಳ ನಾಯಕರೂ ತಮ್ಮ ತಮ್ಮ ಅಸ್ಮಿತೆಗಳಿಗನುಗುಣವಾಗಿ ಮಠಾಧೀಶರ ಕೃಪಾಕಟಾಕ್ಷಕ್ಕೆ ಮೊರೆ ಹೋಗುತ್ತಿರುವುದನ್ನು ಗಮನಿಸಬಹುದು.

ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪನವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಂದಾಗಿ ತಮ್ಮ ಒಕ್ಕೊರಲ ಆಗ್ರಹ ಮಂಡಿಸಿದ ವೀರಶೈವ-ಲಿಂಗಾಯತ ಮಠಗಳು, ಅವರ ಪದಚ್ಯುತಿಯ ನಂತರ ತಮ್ಮ ಸಾಮುದಾಯಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಲು ಒತ್ತಡ ಹೇರಿದ್ದನ್ನು ಕಂಡಿದ್ದೇವೆ. ವಿವಿಧ ಪ್ರಬಲ ಜಾತಿ ಮಠಾಧೀಶರು ತಮ್ಮ ಔದ್ಯಮಿಕ ಅಸ್ಮಿತೆಯನ್ನು ಪ್ರದರ್ಶಿಸುತ್ತಲೇ, ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಸರ್ಕಾರ ರಚನೆಯ ಸಂದರ್ಭದಲ್ಲೂ ಬಹುಮತ ಪಡೆದ ಪಕ್ಷಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ತುಸು ಎಚ್ಚರಿಕೆ ಹಾಗೂ ವಿಷಾದದೊಂದಿಗೇ ಪರಾಮರ್ಶಿಸಬೇಕಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ಪಕ್ಷದೊಡನೆ ಕೈಜೋಡಿಸಿರುವ ದಲಿತ ಸಮುದಾಯಗಳು ಸಹಜವಾಗಿಯೇ ತಮ್ಮ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಪದವಿ ನೀಡಲು ಆಗ್ರಹಿಸುತ್ತಿವೆ.

ಶೋಷಿತರ ಅಸ್ಮಿತೆಯ ಕಡೆಗಣನೆ

ಈವರೆಗೂ ಕರ್ನಾಟಕ ಕಂಡ 23 ಮುಖ್ಯಮಂತ್ರಿಗಳ ಪೈಕಿ 16 ಮಂದಿ ಲಿಂಗಾಯತ-ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿರುವುದು ಒಂದು ಅಂಶವಾದರೆ, ಈವರೆಗೂ ಯಾವುದೇ ಪ್ರಮುಖ ರಾಜಕೀಯ ಪಕ್ಷವೂ ದಲಿತ ಮುಖ್ಯಮಂತ್ರಿಯ ಬಗ್ಗೆ ಆಲೋಚನೆಯನ್ನೂ ಮಾಡದಿರುವುದು  ಮತ್ತೊಂದು ನಿರ್ಣಾಯಕ ಅಂಶ. ಪರಿಶಿಷ್ಟ ಜಾತಿಗಳ ಆಯ್ಕೆಯಾಗಿ ಜಿ. ಪರಮೇಶ್ವರ್‌ ಹಾಗೂ ಪರಿಶಿಷ್ಟ ಪಂಗಡಗಳ ಪ್ರತಿನಿಧಿಯಾಗಿ ಸತೀಶ್‌ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಈ ಸಮುದಾಯಗಳೂ ಒತ್ತಾಯಿಸುತ್ತಿವೆ. ಈ ಒತ್ತಾಯವನ್ನು ಜಾತಿ ಮಸೂರದಿಂದ ನೋಡಿದರೆ ಜಾತಿ ರಾಜಕಾರಣದಂತೆಯೇ ಕಾಣುತ್ತದೆ. ಆದರೆ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದಾಗ ಇದು ನ್ಯಾಯಯುತವಾಗಿಯೇ ಕಾಣುತ್ತದೆ. ಆದರೆ ಸಮಸ್ಯೆ ಇರುವುದು ಅಧಿಕಾರ ರಾಜಕಾರಣದ ಮಾರುಕಟ್ಟೆ ಆವರಣದಲ್ಲಿ.

ಶೋಷಿತ ಸಮುದಾಯಗಳು ಸೂಚಿಸುವ ಪ್ರತಿನಿಧಿಗಳು ಎಷ್ಟೇ ಅಪ್ಯಾಯಮಾನವಾಗಿ ಕಂಡರೂ, ಅಧಿಕಾರ ರಾಜಕಾರಣದ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾಗಿ ಪರಿಗಣಿಸಲ್ಪಡುವ ಆರ್ಥಿಕ ಸಾಮರ್ಥ್ಯ, ಸಂಪನ್ಮೂಲಗಳ ಒಡೆತನ ಮತ್ತು ಬಂಡವಾಳ-ಮಾರುಕಟ್ಟೆ ಪ್ರಾತಿನಿಧ್ಯ ಇಲ್ಲಿ ಸೂಕ್ಷ್ಮವಾಗಿ ಒಳಪ್ರವೇಶ ಮಾಡುತ್ತದೆ.  ಈ ಸಂಪನ್ಮೂಲದ ಬುನಾದಿ ಇಲ್ಲದ ಶೋಷಿತ ಸಮುದಾಯದ ಮಠಗಳು ಎಷ್ಟೇ ಸಾಮುದಾಯಿಕ ಪ್ರಾತಿನಿಧ್ಯ ವಹಿಸಿದರೂ ಅಂತಿಮವಾದ ರೇಸ್‌ನಲ್ಲಿ ಪ್ರಬಲ ಜಾತಿಗಳಿಗೆ ಎಡೆಮಾಡಿಕೊಟ್ಟು ಬದಿಯಲ್ಲಿ ನಿಲ್ಲಬೇಕಾಗಿದೆ. ಎಡ-ಬಲದ ಸಂಘರ್ಷದಲ್ಲಿ ತಮ್ಮದೇ ಆದ ಐಕಮತ್ಯವನ್ನು ಸಾಧಿಸಲಾಗದೆ ಯುವ ಪೀಳಿಗೆಯ ನಡುವೆ ದಲಿತ ಪ್ರಜ್ಞೆಯೊಡನೆಯೇ ರಾಜಕೀಯ ಪ್ರಜ್ಞೆ ಮೂಡಿಸುವಲ್ಲಿ ವಿಫಲವಾಗಿರುವ ಶೋಷಿತ ಸಮುದಾಯದ ಸಾವಿರಾರು ಸಂಘಟನೆಗಳು ಯಾವುದೇ ಆಧ್ಯಾತ್ಮಿಕ ಮಠಮಾನ್ಯಗಳನ್ನು ಅವಲಂಬಿಸದೆಯೇ ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡಬೇಕಿದೆ. ಈ ಅಧ್ಯಾತ್ಮ ಕೇಂದ್ರಗಳಿಗಿಂತಲೂ ಪ್ರಬಲವಾದ ಸಾಂವಿಧಾನಿಕ ಚೌಕಟ್ಟು ಮತ್ತು ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ರಾಜಕೀಯ ಮುನ್ನೋಟ ಶೋಷಿತ ಸಮುದಾಯಗಳಿಗೆ ದಾರಿದೀಪವಾಗುತ್ತದೆ.

ಅಂತಿಮವಾಗಿ

 ಈ ಜಿಜ್ಞಾಸೆಗಳ ನಡುವೆಯೇ ಪ್ರಜಾಪ್ರಭುತ್ವವನ್ನು ಪ್ರೀತಿಸುವ, ಸಂವಿಧಾನದ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ಪ್ರಜ್ಞಾವಂತ ನಾಗರಿಕರು ರಾಜ್ಯ ರಾಜಕಾರಣದಲ್ಲಿ ಪ್ರಬಲ ಜಾತಿ ಮಠಗಳ ಪ್ರಾಬಲ್ಯ ಮತ್ತು ಪಾರಮ್ಯ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಜಯಶಾಲಿಯಾಗಿ ಹೊರಬರುವ ಪ್ರತಿನಿಧಿಗಳು ತಮ್ಮ ಜಾತಿ ಹಣೆಪಟ್ಟಿಯನ್ನು ಬದಿಗಿಟ್ಟು, ನೈಜ ಜನಪ್ರತಿನಿಧಿಗಳಾಗಿ ಕರ್ತವ್ಯನಿರತರಾಗುವಂತೆ ಮಾಡುವುದು ನಾಗರಿಕ ಸಮಾಜದ ಜವಾಬ್ದಾರಿಯೂ ಆಗಿದೆ. ಚುನಾಯಿತರಾಗುವ ಪ್ರತಿಯೊಬ್ಬ ರಾಜಕಾರಣಿಯೂ ತಾನು ಪ್ರತಿನಿಧಿಸುವುದು ಸಂವಿಧಾನವನ್ನು ಮತ್ತು ಸಂವಿಧಾನವನ್ನೇ ಆಶ್ರಯಿಸುವ ಸಮಸ್ತ ಜನಕೋಟಿಯನ್ನು ಎಂಬ ಪ್ರಜ್ಞೆಯನ್ನು ರೂಢಿಸಿಕೊಂಡರೆ, ಬಹುಶಃ ಅಧಿಕಾರ ರಾಜಕಾರಣದ ಆವರಣದಿಂದ ಜಾತಿ ಕೆಂದ್ರಿತ ಮಠೋದ್ಯಮಿಗಳನ್ನು ಹೊರಗಿಡುವುದು ಸುಲಭವಾದೀತು. ಈ ನಿಟ್ಟಿನಲ್ಲಿ ಸಮಾಜ ವಿಫಲವಾದರೆ, ಮುಂಬರುವ ದಿನಗಳಲ್ಲಿ ಶಾಸನ ಸಭೆಗಳು ಜಾತಿ ಕೂಪಗಳಾಗಿ ಮಾರ್ಪಟ್ಟು, ಶತಮಾನಗಳ ಹಿಂದಿನ ಆಡಳಿತ ವ್ಯವಸ್ಥೆಯ ಆಧುನಿಕ ಅವತಾರಗಳಾಗಿಬಿಡುತ್ತವೆ. ಕ್ಯಾನ್ಸರ್‌ ಕೋಶಗಳಂತೆ ಅಧಿಕಾರ ರಾಜಕಾರಣವನ್ನು ವ್ಯಾಪಿಸಿರುವ ಜಾತಿ ಪ್ರಜ್ಞೆಯನ್ನು ಹೋಗಲಾಡಿಸಿ ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಪ್ರತಿನಿಧಿಸುವಂತಹ ಆಡಳಿತ ವ್ಯವಸ್ಥೆಗಾಗಿ ಶ್ರಮಿಸುವುದು ನಾಗರಿಕ ಸಮಾಜದ ಮುಂದಿನ ಬಹುದೊಡ್ಡ ಸವಾಲಾಗಿದೆ.

(ವಿಸೂ : ಈ ಲೇಖನ ಪೂರ್ಣಗೊಳಿಸುವ ವೇಳೆಗೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಖಚಿತ ಸುದ್ದಿ ಬಂದಿದೆ. ಇದರಿಂದ ಲೇಖನದ ಮೂಲ ಸ್ಥಾಯಿಭಾವಕ್ಕೆ ಭಂಗ ಆಗುವುದಿಲ್ಲ..)

 

 

Donate Janashakthi Media

Leave a Reply

Your email address will not be published. Required fields are marked *