ಕೋವಿಡ್ ಎಂಬ ವೈರಾಣು ಅದರ ಎರಡನೇ ಅಲೆ ಎಂಬ ಸುನಾಮಿಯ ಹೊಡೆತಕ್ಕೆ ಧರೆಗುರುಳಿದ ಮತ್ತೊಂದು ಮರ ಮೈಥಿಲಿ ಶಿವರಾಮನ್. ಅದೊಂದು ಆಲವಾಗಿತ್ತು. ಅದರ ಬಿಳಲುಗಳು ಸುತ್ತೆಲ್ಲ ಇವೆ. ಅದರ ಗಟ್ಟಿತನದ ಸತ್ವ ಪರೀಕ್ಷೆಯ ಕಾಲ ಇದು – ಕೆ.ಎಸ್. ವಿಮಲ
ಅಲ್ಲೊಂದು ವಿಶೇಷವಾದ ಶಕ್ತಿ ಇತ್ತು. ಅದು ಸೂಜಿಗಲ್ಲಿನಂತೆ ಸೆಳೆಯುವ ಮತ್ತು ಅಯಸ್ಕಾಂತದಂತೆ ಹಿಡಿದಿಡುವ ಅಷ್ಟೇ ಗಟ್ಟಿಯಾಗಿ ಸೈದ್ದಾಂತಿಕ ಬದ್ಧತೆಯನ್ನು ರೂಢಿಸುವ ವ್ಯಕ್ತಿತ್ವವಾಗಿತ್ತು. ಮೈಥಿಲಿ ಶಿವರಾಮನ್ ವ್ಯಕ್ತಿ ಮಾತ್ರವಲ್ಲ ವ್ಯಕ್ತಿತ್ವವಾಗಿ ಗುರುತಿಸಬೇಕಾದವರು.
ಮಣ್ಣೊಂದನ್ನು ಮೂರ್ತಿಯಾಗಿಸಿದ ಶಿಲ್ಪಿ
ನಾನೊಂದು ಚಿಕ್ಕ ಸಸಿಯಾಗಿದ್ದೆ. ಆಗ ತಾನೇ ಬೀಜ ಒಡೆದು ಹೊರ ಪ್ರಪಂಚಕ್ಕೆ ಮೊಗ ಮಾಡಿ ನಿಲ್ಲುವ ಎಳೆ ಹಸಿರಿನ ಅರೆ ಕವಚ ಹೊತ್ತ ಸಸಿಯದು. ಹೊರಗಿನ ಪ್ರಪಂಚದ ಹಲವು ತಣ್ಣನೆಯ ಕ್ರೌರ್ಯಗಳಿಗೆ ಬಲಿಯಾಗಿಯೂ ಒಳಗಿನ ಹೆಣ್ತನದ ಘನತೆಯ ಭಾವಕ್ಕೆ ಕುಂದಾಗದಂತೆ ಬದುಕಲು ಹವಣಿಸುತ್ತಿದ್ದಾಗ, ಬಿರುಗಾಳಿ ಬೀಸುವಾಗ ಮೇಲಿನಿಂದ ಕಳಚಿ ಕೆಳಗಿಳಿದ ಎಲೆಯೇ ಸಸಿಗೆ ಕವಚ ಒದಗಿಸುವ ಹಾಗೆ ಒದಗಿ ಬಂದಿದ್ದು ಜನವಾದಿ. ಅಲ್ಲಿ ಸಿಕ್ಕ ಕೆಲವು ಅಪರೂಪದ ವ್ಯಕ್ತಿಗಳಲ್ಲಿ ಮೈಥಿಲಿ ಕೂಡಾ ಒಬ್ಬರು.
ಜಡ ಮೌಲ್ಯಗಳಿಗೆದುರಾಗಿ ಚೈತನ್ಯಶೀಲತೆ
ತಮಗರಿವಿಲ್ಲದೆಯೇ ಪುರುಷ ಶ್ರೇಷ್ಟತೆಯ ಮೌಲ್ಯಗಳಿಗೆ ನೀರೆರೆದು ಪೋಷಿಸುವ ಕೆಲಸಕ್ಕೆ ಮಹಿಳೆಯರೇ ತೊಡಗಿಬಿಡುವ ವಿಪರೀತಗಳು ನಮ್ಮ ಕಣ್ಣಮುಂದಿವೆ. ತಮ್ಮನ್ನೂ ತೊಡಗಿಸಿಕೊಂಡು ತಾವೇ ಅದಕ್ಕೆ ಬಲಿಯಾಗುವ ಮಹಿಳಾ ಸಮೂಹವೂ ಸೇರಿದಂತೆ ಇಡೀ ಸಮಾಜ ಈ ಮೌಲ್ಯಗಳ ಬಲಿಪಶು. ಅದರ ವಿರುದ್ಧ ಎದ್ದ ಧ್ವನಿಗಳಲ್ಲಿ ಒಂದು ಜನವಾದಿ. ಅದರ ಬೇರುಗಳಲ್ಲಿನ ಕಸುವು ಅದರ ಸಂಸ್ಥಾಪಕರಿಗೆ ಈ ಸಮಾಜ ಮತ್ತದರಲ್ಲಿ ಅಡಕಗೊಂಡಿರುವ ವರ್ಗ ಗುಣದ ಬಗ್ಗೆ ಇದ್ದ ಸ್ಪಷ್ಟತೆಯಾಗಿತ್ತು. ಅಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ, ಪ್ರಗತಿಪರ ಮತ್ತು ಪುರುಷ ಶ್ರೇಷ್ಟ ಮೌಲ್ಯಗಳಿಗೆದುರಾಗಿ ಮಾನವೀಯ ಅರ್ಥಾತ್ ಮಹಿಳಾ ಪರ ಮೌಲ್ಯಗಳ ಕುರಿತು ಇದ್ದ ಸ್ಪಷ್ಟತೆಯಾಗಿತ್ತು. ಈ ಸ್ಪಷ್ಟತೆಯನ್ನು ಮೈಗೂಡಿಸಿಕೊಂಡವರು ಮೈಥಿಲಿ ಶಿವರಾಮನ್. ಅದಕ್ಕೆ ಬೇಕಾದ ಅಧ್ಯಯನಶೀಲತೆಗೂ ತನ್ನನ್ನು ತೆರೆದುಕೊಂಡು ಅಷ್ಟೇ ಸಶಕ್ತವಾಗಿ ನೆಲ ಮೂಲದಲ್ಲಿ ಮಹಿಳೆಯರನ್ನು ಸಂಘಟಿಸುವ ಹೋರಾಟಗಳಲ್ಲಿ ತೊಡಗಿಸುತ್ತ ತಾನೂ ಸಕ್ರಿಯವಾಗಿ ಪಾಲ್ಗೊಳ್ಳುವ ಮತ್ತು ತನ್ನೆಲ್ಲ ಶಕ್ತಿ ಸಾಮರ್ಥ್ಯವನ್ನು ಜನ ಚಳುವಳಿಗೆ ನಿಸ್ವಾರ್ಥವಾಗಿ ಒದಗಿಸಿದ ಮೈಥಿಲಿ ಒಂದು ರೀತಿಯ ಬೆರಗು.
ಅಧ್ಯಯನಕ್ಕೆ ಆಕರವಾಗುವ ಬದುಕು
ಅವರ ಜೀವನದ ಒಂದೊಂದು ಎಳೆಗಳನ್ನು ಬಿಡಿಸಲು ಹೊರಟರೆ ಅಲ್ಲಿ ತೆರೆದುಕೊಳ್ಳುವ ಹಲವು ಸಂಗತಿಗಳು ಬಹುಷಃ ಜನ ಚಳುವಳಿಗಳ ಅದರಲ್ಲಿಯೂ ಮಹಿಳಾ ಚಳುವಳಿಗಳ ಹೊಸ ತಲೆಮಾರಿಗೆ ಅದೊಂದು ಅಧ್ಯಯನ ಕೇಂದ್ರವೆಂದರೆ ಅತಿಶಯೋಕ್ತಿಯಲ್ಲ. ತಿಳಿಯುವ ಆಸೆ ಇದ್ದರೆ ಬೆಳೆಯುವ ಮತ್ತು ಬೆಳೆಸುವ ಹಂಬಲವಿದ್ದರೆ ಮೈಥಿಲಿಯಂಥಹ ಆಲದಮರದ ಬಿಳಿಲುಗಳಾಗಿ ಗಟ್ಟಿಗೊಳ್ಳಲು ಎಷ್ಟೊಂದು ಆಕರಗಳು ಕೈಅಳತೆಯಲ್ಲಿವೆ.
ಹುಟ್ಟಿ ಬೆಳೆದಿದ್ದು ಈ ಸಮಾಜದ ಪರಿಭಾಷೆಯ ಒಂದು ಸುಶಿಕ್ಷಿತ, ಸುರಕ್ಷಿತ ಬ್ರಾಹ್ಮಣ ಕುಟುಂಬದಲ್ಲಿ. 60ರ ದಶಕದಲ್ಲಿ ಅವರ ವಿದ್ಯಾಭ್ಯಾಸ ನಡೆದಿದ್ದು ಅಮೇರಿಕಾದ ಸೈರಾಕ್ಯೂಸ್ ಯುನಿವರ್ಸಿಟಿಯಲ್ಲಿ. ಅದು ವಿಯಟ್ನಾಂ ಯುದ್ಧದ ವಿರುದ್ಧ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದ್ದ ಕಾಲಘಟ್ಟ, ಹಾಗೂ ಕರಿಯರ ಹಕ್ಕುಗಳ ಮಾತುಗಳು ಗಟ್ಟಿಗೊಳ್ಳುತ್ತಿದ್ದ ಮತ್ತು ಸ್ತ್ರೀವಾದ ತನ್ನ ಅಸ್ತಿತ್ವವನ್ನು ಪಡೆದುಕೊಳ್ಳುತ್ತಿದ್ದ ಕಾಲ. ಕಪ್ಪು ಜನರ ಹಕ್ಕುಗಳ ಹೋರಾಟದತ್ತ ತಾನು ಆಕರ್ಷಿತಳಾಗಿದ್ದೆ ಎಂದು ಮೈಥಿಲಿಯೇ ಹೇಳಿದ್ದರು.
ಸಾಮ್ರಾಜ್ಯಶಾಹಿಯ ವಿರುದ್ಧ ಗಟ್ಟಿಗೊಂಡ ಸೈದ್ದಾಂತಿಕ ಬದ್ಧತೆ
ತನ್ನ ವಿದ್ಯಾಭ್ಯಾಸದ ನಂತರ ಸುಮಾರು ಎರಡು ವರ್ಷ ಅವರು ವಿಶ್ವಸಂಸ್ಥೆಯ ಸಮಿತಿಯೊಂದರಲ್ಲಿ ಕಾರ್ಯನಿರ್ವಹಿಸಿದವರು ಮತ್ತು ಆ ಸಮಯದಲ್ಲಿ ಸಾಮ್ರಾಜ್ಯಶಾಹಿಯ ದುರುದ್ದೇಶಗಳನ್ನು, ಮನುಷ್ಯ ವಿರೋಧಿ ಧೋರಣೆಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಅದೇ ಸಂದರ್ಭದಲ್ಲಿ ಅಮೆರಿಕಾದ ಸೆರಗಿನಲ್ಲಿಯೇ ಕುಳಿತು ಸಾಮ್ರಾಜ್ಯಶಾಹಿಗೆ ಸವಾಲೊಡ್ಡುವ ಸೈದ್ಧಾಂತಿಕ ಸ್ಪಷ್ಟತೆಯ ಕ್ಯೂಬಾ ಎಂಬ ಪುಟ್ಟ ರಾಷ್ಟ್ರಕ್ಕೆ ಯಾವ ವೀಸಾ ಇಲ್ಲದೆಯೇ ಸಾಮಾನ್ಯ ಭಾಷೆಯಲ್ಲಿ ಹೇಳುವ ಕಾನೂನುಬಾಹಿರ ಭೇಟಿ ಕೊಟ್ಟ ಒಬ್ಬ ಗಟ್ಟಿಗಿತ್ತಿ. ಆ ಭೇಟಿ ಅವರೊಳಗೊಂದು ಅಚ್ಚಳಿಯದ ಪ್ರಭಾವವನ್ನು ಇಳಿಸಿಬಿಟ್ಟಿತು. ಈ ಬಗ್ಗೆ ಉಮಾ ಚಕ್ರವರ್ತಿಯವರು ಅವರ ಕುರಿತು ನಿರ್ಮಿಸಿದ ಸಾಕ್ಷ್ಯಚಿತ್ರವೊಂದರಲ್ಲಿ ಅವರೇ ಹೇಳಿಕೊಳ್ಳುತ್ತಾರೆ. ಕ್ಯೂಬಾಗೆ ಭೇಟಿ ಕೊಡುವ ತಮ್ಮ ಆಸೆ ಮತ್ತು ಅದಕ್ಕಾಗಿ ಪಡೆದ ಸಲಹೆಗಳು ಅದರ ಆಧಾರದಲ್ಲಿ ನೇರವಾಗಿ ವಿಮಾನವೊಂದರ ಮೂಲಕ ಕೇವಲ ಒಂದು ಚಿಕ್ಕ ಬ್ಯಾಗ್ ಹಿಡಿದು ತಾನು ಹೇಗೆ ಭಾಷೆ ಬಾರದವಳ ಹಾಗೆ ನಟಿಸಿ ಕ್ಯೂಬಾಗೆ ಪ್ರಯಾಣ ಮಾಡಿದ್ದನ್ನು ಅವರ ಎಂದಿನ ಕಣ್ಣರಳಿಸಿ ಮಗುವಿನ ಮುಗ್ಧತೆಯ ಭಾವದಲ್ಲಿ ವಿವರಿಸಿದ್ದಾರೆ. ಅದೊಂದು ಟಪ್ಪಾಲು ಒಯ್ಯುವ ವಿಮಾನವಂತೆ. ಟಪ್ಪಾಲು ಮೂಟೆಗಳ ಜೊತೆ ಮೂಟೆಯಾಗಿ ಕುಳಿತು ಪ್ರಯಾಣಿಸಿದ್ದರಂತೆ!
ಕ್ಯೂಬಾಗೆ ಇಂಥಹ ಅಡ್ವೆಂಚರಿಸ್ಟ್ ಭೇಟಿ ಕೊಡುವ ಮೊದಲೇ ಅವರು ಫೋರ್ಡ್ ಫೌಂಡೇಷನ್ ನಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಕೊಟ್ಟಿದ್ದರಂತೆ. ಕ್ಯೂಬಾದಲ್ಲಿ ಅವರಿಗೆ ಗೈಡ್ ರೀತಿಯಲ್ಲಿ ಸಹಾಯ ಮಾಡಿದ ವ್ಯಕ್ತಿ ಅವರನ್ನು ಅವರ ಬದುಕಿನ ಮುಂದಿನ ಪ್ಲಾನ್ ಏನು ಎಂದು ಕೇಳಿದ್ದರಂತೆ. ಆಗ ತುಂಬ ಸರಳವಾಗಿ ಕೆಲಸಕ್ಕೆ ಕೊಟ್ಟ ಸಂದರ್ಶನದ ಕುರಿತು ಮತ್ತು ಅಲ್ಲಿಗೆ ಸೇರಿಕೊಳ್ಳುವ ಅಭಿಲಾಷೆಯನ್ನು ವ್ಯಕ್ತಪಡಿಸಿದರಂತೆ. ಆಗ ಆತನಿಗೆ ಆಶ್ಚರ್ಯವಾಗಿ ಇದು ಆಕೆಯ ಮುಗ್ಧತೆಯೋ ಅಥವಾ ಆಕೆಯನ್ನು ಪ್ರಭಾವಿಸಿದ ಅಂಶಗಳನ್ನು ಮುಂದೆ ಒಯ್ಯಲು ಅದು – (ಅವರು ಮುಂದೆ ಸೇರಿಕೊಳ್ಳಲಿರುವ ಉದ್ಯೋಗ) ಸಹಾಯವಾಗುತ್ತದೆಂಬ ವಿಶ್ವಾಸವಿದೆಯೇ ಎಂದು ಚಕಿತರಾಗಿದ್ದರಂತೆ. ಯಾಕೆಂದರೆ ಅಮೆರಿಕಾದ ಸವಾಲುಗಳಿಗೆ ಎದೆಯೊಡ್ಡಿ ಸೆಡ್ಡು ಹೊಡೆದು ನಿಂತ ಕ್ಯೂಬಾದ ಬಗ್ಗೆ ಕುತೂಹಲ ಇಟ್ಟುಕೊಂಡು ತನ್ನ ಜೀವವನ್ನೇ ಪಣಕ್ಕಿಟ್ಟು ಕಾನೂನುಬಾಹಿರವಾಗಿ ಕ್ಯೂಬಾಕ್ಕೆ ಬಂದಿಳಿದ ಯುವತಿ, ಫೋರ್ಡ್ ಫೌಂಡೇಷನ್ ನ ಉದ್ಯೋಗಾಕಾಂಕ್ಷಿ ಎಂಬುದೇ ಆತನಿಗೆ ಅಚ್ಚರಿ ಮೂಡಿಸಿತ್ತು. ಮೈಥಿಲಿಯೊಳಗೆ ಅದು ಬೀರಿದ ಪ್ರಭಾವವೆಂದರೆ ಅವರು ಆ ಕೆಲಸಕ್ಕೆ ಸೇರದಿರುವ ತೀರ್ಮಾನ ತೆಗೆದುಕೊಂಡಿದ್ದು.
ಮುಂದಿನ ದಿನಗಳಲ್ಲಿ ಸ್ಪಷ್ಟ ಸಮಾಜಮುಖೀ ಚಿಂತನೆಗಳನ್ನು ರೂಢಿಸಿಕೊಳ್ಳಲು ಮತ್ತು ಮಾನವ ಸಮೂಹಕ್ಕೆ ಒಳಿತು ಮಾಡುವ ಮೂಲ ಗುಣ ಇರುವುದು ಮಾರ್ಕ್ಸ್ವಾದಿ ಸಿದ್ದಾಂತದಲ್ಲಿ ಎಂಬುದನ್ನು ಹುಡುಕಿಕೊಳ್ಳಲು ಕೂಡಾ ಕ್ಯೂಬಾದ ಘಟನೆ ಸಹಾಯವಾಯಿತೆನ್ನಬಹುದೇನೊ. ಕ್ಯೂಬಾಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಕ್ರಾಂತಿಗೆ ಇನ್ನೂ ದಶಕವೂ ತುಂಬಿರಲಿಲ್ಲವಂತೆ. ಆದರೆ ಆ ವೇಳೆಗಾಗಲೇ ಭೂಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯಾಗಿ ಬಿಟ್ಟಿತ್ತು. ಚೆ ಗೆವೆರಾ ರ ಕನಸಿನ ಮೊದಲ ಗುರಿಯಾಗಿತ್ತು ಅದು. 1959ರಲ್ಲಿಯೇ ಭೂ ಸುಧಾರಣೆಯ ಕಾನೂನಿನ ಚಿತ್ರ ಸಿದ್ಧಗೊಳಿಸಿಕೊಂಡಿದ್ದ ಚೆ ಯ ಕನಸಿನ ಸಾಕಾರವನ್ನು ಕಣ್ಣಾರೆ ನೋಡುವ ಅವಕಾಶ ಮೈಥಿಲಿಗೆ ಸಿಕ್ಕಿತ್ತು. ಹಾಗೆಯೇ ಚೆ ಯ ಕ್ಯೂಬಾದಲ್ಲಿ 1961ನೇ ಇಸವಿಯನ್ನು ಬೃಹತ್ ಸಮೂಹ ಸಾಕ್ಷರತೆಗಾಗಿ ಮುಡಿಪಿಟ್ಟು ಒಂದು ಲಕ್ಷ ಸ್ವಯಂ ಸೇವಕರನ್ನು ಗ್ರಾಮೀಣ ರೈತರಿಗೆ ಅಕ್ಷರಾಭ್ಯಾಸ ಮಾಡಿಸಲು ಸಜ್ಜುಗೊಳಿಸಲಾಗಿತ್ತು. ಉನ್ನತ ವ್ಯಾಸಂಗವೆಂಬುದು ಕನ್ನಡಿಯ ಗಂಟಾಗದಂತೆ ಎಲ್ಲರಿಗೂ ಲಭ್ಯವಾಗುವ ಜನಸಾಮಾನ್ಯರ ಅಗತ್ಯದಂತೆ ಪೂರೈಸಬೇಕೆಂಬ ದಿಟ್ಟ ಮತ್ತು ಸ್ಪಷ್ಟ ನಿಲುವು ಚೆ ಗೆವಾರ ರವರದ್ದಾಗಿತ್ತು. ಮುಂದೆ ತನ್ನ ಕಾರ್ಯಕ್ಷೇತ್ರದಲ್ಲಿ ಮೈಥಿಲಿ ಈ ಎರಡೂ ಕ್ಷೇತ್ರಗಳ ಬಗ್ಗೆ ಆಸಕ್ತಿ ವಹಿಸಿದ್ದರ ಹಿಂದೆ ಈ ಪ್ರಭಾವವಿತ್ತೆಂದು ನಾವು ಪರಿಗಣಿಸಬಹುದು.
ಹಲವು ಸಾಮರ್ಥ್ಯಗಳ ವ್ಯಕ್ತಿ ಮತ್ತು ರೂಪುಗೊಂಡ ವ್ಯಕ್ತಿತ್ವ
ಮೈಥಿಲಿ ಒಬ್ಬ ಪತ್ರಕರ್ತೆಯಾಗಿ ಕೂಡಾ ಕೆಲಸ ನಿರ್ವಹಿಸಿದ್ದರು. ನಾಲ್ಕು ವರ್ಷಗಳ ಕಾಲ ‘ದಿ ರ್ಯಾಡಿಕಲ್ ರಿವ್ಯೂ’ ಸಂಪಾದಕಿಯಾಗಿ ಕೆಲಸ ಮಾಡಿದಾಗ ಭೂಸುಧಾರಣೆ ಮತ್ತು ಶಿಕ್ಷಣ ಕುರಿತು ಚರ್ಚೆ ಮಾಡುತ್ತಿದ್ದರು. ಇದು ಅವರ ರಾಜಕೀಯ ತಿಳುವಳಿಕೆಯನ್ನು ಇನ್ನಷ್ಟು ಹರಿತಗೊಳಿಸಲು ಸಹಾಯಕವಾಯಿತೆನ್ನಬಹುದು. ʻರ್ಯಾಡಿಕಲ್ ರಿವ್ಯೂ’ ಪತ್ರಿಕೆಯಲ್ಲಿ ಕ್ಯೂಬಾ ಕ್ರಾಂತಿಯ ಕುರಿತು ಬಹಳ ಬರೆಯುತ್ತಿದ್ದರು ಮತ್ತು ಅದು ತನ್ನ ಸಾಮ್ರಾಜ್ಯಶಾಹಿ ವಿರೋಧಿ ನಿಲುವನ್ನು ಯಾವತ್ತೂ ಸಡಿಲಗೊಳಿಸದಂತೆ ನೋಡಿಕೊಂಡರು, ಕ್ಯೂಬಾ ಮಾದರಿಯೊಂದು ಭಾರತದಲ್ಲಿ ಹುಟ್ಟುವ ರೀತಿಯಲ್ಲಿ ಕಲ್ಪಿಸಿಕೊಳ್ಳುತ್ತಿರುವಷ್ಟರ ಮಟ್ಟಿಗೆ ಅವರ ಬರಹಗಳು ಇತ್ತೆಂದು ಅವರ ‘ಹಾಂಟೆಡ್ ಬೈ ಫೈರ್’ ಕೃತಿಯ ಪರಿಚಯದ ಪುಟಗಳಲ್ಲಿ ಬರೆಯಲಾಗಿದೆ.
ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳಲು ಹುಡುಕಾಟ
ವಿಶ್ವ ಸಂಸ್ಥೆಯ ತನ್ನ ಕೆಲಸವನ್ನು ತೊರೆದು, ಫೋರ್ಡ್ ಫೌಂಡೇಷನ್ ಕೆಲಸಕ್ಕೂ ಸೇರಿಕೊಳ್ಳದೇ ಮೈಥಿಲಿ ಅಮೇರಿಕಾದಿಂದ ಭಾರತಕ್ಕೆ ವಾಪಸ್ ಬರುತ್ತಾರೆ. ತಾನು ತೊಡಗಿಕೊಂಡು ಕೆಲಸ ಮಾಡಬಹುದಾದ ಸಂಘಟನೆಗಳ ಹುಡುಕಾಟ ಶುರು ಇಟ್ಟುಕೊಳ್ಳುತ್ತಾರೆ. ಜಯಪ್ರಕಾಶ್ ನಾರಾಯಣ್ ರವರ ಮಾತುಗಳನ್ನು ಕೇಳುತ್ತಾರೆ. ಆ ಸಮಯದಲ್ಲಿ ಅವರಿಗೆ ಸಿಕ್ಕವರು ಕೃಷ್ಣಮ್ಮಾಳ್ ಮತ್ತು ಜಗನ್ನಾಥನ್ ಎಂಬಿಬ್ಬರು ತಮಿಳ್ನಾಡಿನ ದಲಿತರ ಮಧ್ಯೆ ಕೆಲಸ ಮಾಡುತ್ತಿದ್ದ ವಿನೋಬಾ ಭಾವೆಯವರ ಅನುಯಾಯಿಗಳು. ಅವರೇ ಸಾಕ್ಷ್ಯಚಿತ್ರದಲ್ಲಿ ಹೇಳಿಕೊಂಡಂತೆ ವಿನೋಬಾ ಭಾವೆಯವರನ್ನು ಭೇಟಿ ಮಾಡುತ್ತಾರೆ. ಭೂದಾನ ಚಳುವಳಿಯನ್ನು ಗಮನಿಸುತ್ತಾರೆ. ಅಮೇರಿಕಾದಲ್ಲಿರುವಾಗಲೇ ಈ ಚಳುವಳಿಯನ್ನು ಗಮನಿಸಿದ ಇವರು ಮತ್ತು ಇವರ ಸ್ನೇಹಿತರು ಅದಕ್ಕಾಗಿ ಅಲ್ಲಿ ಹಣವನ್ನೂ ಸಂಗ್ರಹಿಸಿರುತ್ತಾರೆ. ಆದರೆ ಅಲ್ಲಿಗೆ ಭೇಟಿ ನೀಡಿದ ನಂತರ ಯಾಕೋ ಆ ಮಾರ್ಗದಲ್ಲಿ ಭೂಹಂಚಿಕೆ ಸರಾಗವಾಗಿ ಆಗದಿರಬಹುದೆಂಬ ಭಾವ ಅವರಿಗೆ ಬಂತೆಂದು ಅವರು ಒಂದು ಸಂದರ್ಶನದಲ್ಲಿ ಹಂಚಿಕೊಂಡ ಮಾತುಗಳಿಂದ ವ್ಯಕ್ತವಾಗುತ್ತದೆ. ಹಾಗೆಯೇ ವಿನೋಬಾ ಆಶ್ರಮದ ಪರಿಸರದ ರೆಜಿಮೆಂಟೇಷನ್ ಅವರಿಗೆ ಕಿರಿಕಿರಿ ಎನಿಸಿತು ಎಂದೂ ಉಲ್ಲೇಖಿಸಲಾಗಿದೆ (ಹಾಂಟೆಡ್ ಬೈ ಫೈರ್)
ಕೀಳೆವಣ್ಮಣೀ -ದಲಿತರ ಮೇಲಿನ ದೌರ್ಜನ್ಯಕ್ಕೆದುರಾಗಿ
ಅದೇ ವೇಳೆಗೆ ತಮಿಳ್ನಾಡಿನ ಕೀಳೆವಣ್ಮಣಿ ಎಂಬ ಊರಿನಲ್ಲಿ ನಡೆದ ದಲಿತ ಹತ್ಯಾಕಾಂಡ ತಲ್ಲಣವನ್ನು ಸೃಷ್ಟಿಸುತ್ತದೆ. ಪುಟ್ಟ ಮಕ್ಕಳೂ ಸೇರಿದಂತೆ 44 ಜನ ದಲಿತ ಕುಟುಂಬದವರನ್ನು ಪುಟ್ಟದೊಂದು ಗುಡಿಸಿಲಿನಲ್ಲಿ ಕೂಡಿ ಹಾಕಿ ಬೆಂಕಿ ಹಾಕಿದ ಜಮೀನ್ದಾರರ ಅಟ್ಟಹಾಸವದು. ಕ್ರೌರ್ಯದ ಪರಮಾವಧಿಯನ್ನು ಮೀರಿದ ಆ ಘಟನೆಯ ಸ್ಥಳಕ್ಕೆ ಮೈಥಿಲಿ ಭೇಟಿ ನೀಡುತ್ತಾರೆ. ಅಲ್ಲಿಯ ಘನಘೋರ ದೃಶ್ಯ, ಯಾವ ಮನುಷ್ಯರೂ ಸಹಿಸಿಕೊಳ್ಳಲಾರದ ಹಾಗೆ ಪುಟ್ಟ ಮಕ್ಕಳು, ಮಹಿಳೆಯರನ್ನು ಜೀವಂತವಾಗಿ ದಹಿಸಿ ಬೆಂದ ದೇಹಗಳ ಕುರುಹು ಬಿಟ್ಟ ಸ್ಮಶಾನವಾಗಿತ್ತದು. ಒಬ್ಬ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮತ್ತು ಕೃಷ್ಣಮ್ಮಾಳ್ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಮೈಥಿಲಿಯವರನ್ನು ಸ್ಥಳೀಯ ಪೋಲೀಸರು ಬಹುತೇಕ ವಶದಲ್ಲಿಟ್ಟುಕೊಂಡಂತೆಯೇ ಇಡೀ ರಾತ್ರಿ ಕಳೆಯಬೇಕಾಯಿತಂತೆ. ಅದಕ್ಕೆ ಯಾರೋ ಹೊರಗಿನವರು ಬಂದಿದ್ದು ಒಂದು ಕಾರಣವಾದರೆ ಇನ್ನೊಂದು ಮೈಥಿಲಿಯವರನ್ನು ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೇರಳದ ಕೆ.ಅಜಿತಾ ಎಂದು ಭಾವಿಸಿದ್ದೂ ಕೂಡ ಎಂದು ಮೈಥಿಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈಸ್ಟ್ ತಂಜಾವೂರಿನ ಕೀಳೆವಣ್ಮಣಿ ಗ್ರಾಮದಲ್ಲಿ ನಡೆದ ನರಹತ್ಯಾಕಾಂಡ ಮೈಥಿಲಿಯವರ ಅಂತಸ್ಸತ್ವವನ್ನು ಮತ್ತೊಮ್ಮೆ ಬಡಿದೆಬಿಸಿತ್ತು. ಅವರಿಗೆ ಅಲ್ಲಿ ತಿಳಿದ ಸತ್ಯವೆಂದರೆ ಆ ದಲಿತ ಕೂಲಿಕಾರರು ಜಮೀನ್ದಾರರ ದಬ್ಬಾಳಿಕೆಯ ವಿರುದ್ಧ ತಮ್ಮ ಘನತೆಯ ಬದುಕಿಗಾಗಿ ಧ್ವನಿ ಎತ್ತ ತೊಡಗಿದ್ದರು, ಮತ್ತು ಕಮ್ಯುನಿಸ್ಟ್ ಚಳುವಳಿಯ ಜೊತೆ ಸೇರತೊಡಗಿದ್ದರು. ಇದನ್ನು ಸಹಿಸಲಾಗದ ಭೂಮಾಲಿಕರಿಂದ ನಡೆದ ಕಗ್ಗೊಲೆ ಮತ್ತು ಘಟನೆಯ ನಂತರವೂ ಆ ಕ್ರೂರಿಗಳಿಗೆ ಲವಲೇಶವೂ ಪಶ್ಚಾತ್ತಾಪವಾಗದಿರುವುದು ಅವರನ್ನು ಕಲಕಿತ್ತು. ಮತ್ತು ಅರ್ಥವಾಗಿತ್ತು ಅಲ್ಲಿ ನಡೆದ ಕಗ್ಗೊಲೆಗೆ ಕಾರಣ ಕೇವಲ ಕೂಲಿ ಅಥವಾ ವೇತನದ ಪ್ರಶ್ನೆಯಾಗಿರಲಿಲ್ಲ ಬದಲಿಗೆ ಅದೊಂದು ವರ್ಗಹೋರಾಟದ ಭಾಗವಾಗಿತ್ತು. ಆ ಕೂಲಿಕಾರರು ಕಮ್ಯುನಿಸ್ಟ್ ಸಿದ್ದಾಂತದ ಪರ ವಾಲುತ್ತ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಿದ್ಧರಾಗುತ್ತಿದ್ದರು.
ದಮನಿತರ ಬದುಕಿಗೆ ಕನಿಷ್ಟ ಬೆಲೆಯೂ ಇಲ್ಲದ ಸಮಾಜದಲ್ಲಿ ನ್ಯಾಯವ್ಯವಸ್ಥೆ ಕೂಡಾ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಸುಲಭವಾಗಿ ನಿಲ್ಲುವುದಿಲ್ಲ. ಕೀಳೆವಣ್ಮಣೀಯಲ್ಲಿಯೂ ನಮ್ಮ ಕಂಬಾಲಪಲ್ಲಿಯ ತರಹದ್ದೇ ತೀರ್ಪು ಬಂದಿತ್ತು. ತೀರ್ಪಿನಲ್ಲಿ ಬರೆದ ಅಂಶಗಳನ್ನು ಮೈಥಿಲಿ ಕಟುವಾಗಿ ಟೀಕಿಸಿ ʻರ್ಯಾಡಿಕಲ್ ರಿವ್ಯೂ’ ಗೆ ವರದಿ ಬರೆದಿದ್ದರು. ಆ ತೀರ್ಪಿನಲ್ಲಿ ಜಮೀನ್ದಾರರು ‘ಪ್ರತಿಷ್ಟಿತರು’ ಅವರ ಕೈಲಿ ಅಪಾರ ಸಂಪತ್ತು, ವಾಹನ ಮತ್ತಿತರ ನಾಗರಿಕ ಸೌಲಭ್ಯಗಳೆಲ್ಲ ಇರುವವರಾಗಿ ಇಂಥಹ ಕೃತ್ಯ ಎಸಗುವುದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಅದಕ್ಕೆ ತಮ್ಮ ಲೇಖನದಲ್ಲಿ ‘ಪ್ರತಿಷ್ಠಿತ ವ್ಯಕ್ತಿಗಳು ಪ್ರತಿಷ್ಟಿತ ಕೊಲೆಗಾರರೂ’ ಆಗಬಲ್ಲರು ಎಂದು ಬರೆದಿದ್ದರು.
ಎಡ ಚಳುವಳಿಯ ಜೊತೆ ಸಂಪರ್ಕ
ನಂತರ ಮೈಥಿಲಿ ಆ ಪ್ರದೇಶದಲ್ಲಿ ಕೆಲಸ ಮಾಡಲು ಬಯಸಿದರಾದರೂ ಅದು ಸುಲಭವಾಗಲಿಲ್ಲ. ಈ ಅವಧಿಯಲ್ಲಿಯೇ ಕಾರ್ಮಿಕ ಮುಂದಾಳು, ಸಿ.ಪಿ.ಐ.(ಎಂ) ನ ವಿ.ಪಿ.ಚಿಂತನ್ ರವರನ್ನು ಮೈಥಿಲಿ ಭೇಟಿಯಾಗುತ್ತಾರೆ. ಮತ್ತು ಮತ್ತೊಮ್ಮೆ ಕೀಳೆವಣ್ಮಣೀಗೆ ಭೇಟಿ ಮಾಡುವಾಗ ಅವರ ಕೈಯಲ್ಲಿ ಕಾಮ್ರೇಡ್ ವಿ.ಪಿ.ಚಿಂತನ್ ರವರ ಕಾಗದವೊಂದಿರುತ್ತದೆ. ಅದು ಅವರಿಗೆ ರಹದಾರಿ ಪತ್ರದಂತೆ ಸ್ಥಳೀಯ ಕೃಷಿಕೂಲಿಕಾರರು, ಕೂಲಿಕಾರ ಸಂಘದ ಮುಖಂಡರು ರೈತರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿತು. ಮುಂದಿನ ದಿನಗಳಲ್ಲಿ ಕೃಷಿ ಪ್ರಶ್ನೆಗಳ ಕುರಿತು ಅವರ ಬರಹಗಳಿಗೆ ಅದು ಸಹಾಯವಾಯಿತು.
ವಿದ್ಯಾರ್ಥಿ ಮತ್ತು ಭಾಷಾ ಅಸ್ಮಿತೆಯ ಚಳುವಳಿಯ ಜೊತೆ
ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ನಡೆದ ಚಳುವಳಿಗಳಿಗಾಗಿ ರೂಪುಗೊಂಡ ವೇದಿಕೆಗಳಲ್ಲಿ ನೇರ ಭಾಗವಲ್ಲದಿದ್ದರೂ ಅದರ ಸಂಪರ್ಕದಲ್ಲಿ ಮೈಥಿಲಿ ಇದ್ದರು ಎಂದು ವಿ. ಗೀತಾ ಮತ್ತು ಕಲ್ಪನಾ ತಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ಅದೇ ವೇಳೆಗೆ ವಿಯಟ್ನಾಂ ಯುದ್ಧದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮೈಥಿಲಿ ಪಾಲ್ಗೊಳ್ಳುತ್ತಾರೆ. ಕ್ಯೂಬಾದ ಕುರಿತು ಒಂದು ಭಿತ್ತಿಚಿತ್ರ ಪ್ರದರ್ಶನವನ್ನು ಮೈಥಿಲಿ ಮತ್ತು ಕೆಲವರು ನಗರದ ಮಧ್ಯೆ ಏರ್ಪಡಿಸಿ ಸಾಮ್ರಾಜ್ಯವಾದದ ವಿರುದ್ಧ ಯುವಜನರನ್ನು ಎಚ್ಚರಿಸಲು ಪ್ರಯತ್ನಿಸುತ್ತಾರೆ.
ಕಾರ್ಮಿಕ ನಾಯಕಿಯಾಗಿ ಒಡಮೂಡಿದ ಮೈಥಿಲಿ
1969ರಲ್ಲಿ ಸಿಪಿಐ(ಎಂ) ಪಕ್ಷದ ಸದಸ್ಯರಾಗಿ ಸೇರುವ ಅವರು ಸಿ.ಐ.ಟಿ.ಯು. ನಲ್ಲಿ ಕೆಲಸ ಪ್ರಾರಂಭಿಸುತ್ತಾರೆ. ಆ ಮೂಲಕ ಅಶೋಕ ಲೈಲ್ಯಾಂಡ್, ಟಾಬ್ಲೆಟ್ಸ್ ಇಂಡಿಯಾ, ಮೆಟಲ್ ಬಾಕ್ಸ್ ಮುಂತಾದ ಹಲವು ಫ್ಯಾಕ್ಟರಿಗಳ ಕಾರ್ಮಿಕ ಸಂಘಟನೆಗಳ ಜೊತೆ ಕೆಲಸ ಮಾಡುತ್ತಾರೆ. ಅವರ ಪ್ರತಿಭಟನೆ-ಮುಷ್ಕರಗಳಲ್ಲಿ ಪಾಲ್ಗೊಳ್ಳುತ್ತಾರೆ. ಟ್ಯಾಬ್ಲೆಟ್ಸ್ ಇಂಡಿಯಾ ಕಂಪನಿಯ ಮಹಿಳಾ ಉದ್ಯೋಗಿಗಳ ಪ್ರಶ್ನೆಗಳನ್ನೆತ್ತಿಕೊಂಡು ಹೋರಾಟಗಳನ್ನು ಸಂಘಟಿಸುತ್ತಾರೆ. ಹಾಗೆಯೇ ಅವರು ಗ್ರಾನೈಟ್ ಕ್ವಾರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುವ ಸಮಸ್ಯೆಗಳ ತೀವ್ರತೆಯನ್ನು ಅರಿತು ಹೋರಾಟಗಳನ್ನು ಸಂಘಟಿಸುತ್ತಾರೆ, ಮತ್ತು ಪ್ರಗತಿಪರ ಎಂದು ಕರೆದುಕೊಳ್ಳುವ ಎಡ ಕಾರ್ಮಿಕ ಸಂಘಟನೆಗಳ ನಾಯಕತ್ವದಲ್ಲಿ ಕೂಡಾ ಇರುವ ಈ ಸಮಾಜದಲ್ಲಿ ಬೇರೂರಿರುವ ಪಾಳೆಯಗಾರಿ ಮೌಲ್ಯಗಳನ್ನು ಗುರುತಿಸುತ್ತಾರೆ. ಕಾರ್ಮಿಕ ಸಂಘಟನೆಗಳ ನಾಯಕತ್ವ ಮಹಿಳೆಯರನ್ನು ನಾಯಕತ್ವದಲ್ಲಿ ಗುರುತಿಸಲು ಬಯಸದ ಹಾಗೂ ಅವರ ಮಾತುಗಳಿಗೆ ಮನ್ನಣೆ ಕೊಡದ ಧೋರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮೈಥಿಲಿಯಲ್ಲಿ ಇದ್ದ ಸಹಜ ನಾಯಕತ್ವದ ಮತ್ತು ಒಳಗೊಳ್ಳುವ ಗುಣಗಳಿಂದಾಗಿಯೇ ಮಹಿಳೆಯರನ್ನು ಸಂಘಟಿಸಲು ಹೋರಾಟಗಳಲ್ಲಿ ಅಣಿನೆರೆಸಲು ಸಾಧ್ಯವಾಯಿತು ಎಂದು ಅವರ ನಿಕಟವರ್ತಿಗಳು ಅಭಿಪ್ರಾಯ ಪಡುತ್ತಾರೆ.
ಜಾತಿ ಮತ್ತು ಲಿಂಗ ತಾರತಮ್ಯದ ಪ್ರಶ್ನೆಗಳು
ಜೊತೆಗೇ ತಮಿಳ್ನಾಡಿನ ರಾಜಕಾರಣದಲ್ಲಿ ಅತಿ ಪ್ರಮುಖ ಅಂಶವಾದ ಜಾತಿ ಆಧಾರಿತ ಸಂಗತಿಯಲ್ಲಿ ಹುಟ್ಟಿನ ಕಾರಣದಿಂದ ಇರುವ ಚಹರೆಗೆ ಬದಲಾಗಿ ತಾನೊಬ್ಬಳು ದುಡಿಯುವ ಜನರ ಧ್ವನಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಗೊಳಿಸುವ ಅನಿವಾರ್ಯತೆಗೆ ಮೈಥಿಲಿ ಒಳಗಾಗುತ್ತಿದ್ದರು.
ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಗುರುತಿಸುವ ನಿಟ್ಟಿನಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ರಚನೆ ಮತ್ತು ಕಾರ್ಯಶೀಲತೆಯಲ್ಲಿ ಕೂಡಾ ಮೈಥಿಲಿಯವರ ಕೊಡುಗೆ ಇದೆ. ಇಷ್ಟೆಲ್ಲ ಮಾಡುವಾಗಲೂ ಮಹಿಳೆ ಮತ್ತು ಅವಿವಾಹಿತ ಮಹಿಳೆಯಾಗಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವಾಗ ಲಿಂಗತ್ವದ ನೆಲೆಯ ಎಲ್ಲ ರೀತಿಯ ಮುಜುಗರಗಳನ್ನೂ ಮೈಥಿಲಿ ಕೂಡಾ ಅನುಭವಿಸಿದ್ದರು. ಯುವತಿಯಾಗಿ ಪೋಷಕರಿಂದ ನೆರೆಹೊರೆಯವರಿಂದ ಕೂಡಾ ಟೀಕೆ, ಮೂದಲಿಕೆಗಳನ್ನು ಎದುರಿಸಿಯೇ ಇದ್ದರಾದರೂ ಅವು ಅವರ ಬದ್ಧತೆಯನ್ನು ಕುಗ್ಗಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಅವರು ಬರೆದ ‘ಟುವರ್ಡ್ಸ್ ಈಕ್ವಾಲಿಟಿ’ಯ ಬರಹದಲ್ಲಿ ಈ ಮೌಲ್ಯಗಳ ಕುರಿತು ಅವರು ಬರೆಯುತ್ತಾರೆ. ಅದು 1988ರಲ್ಲಿಯೇ ‘ವಿಮೋಚನೆಯೆಡೆಗೆ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಕೂಡಾ ಪ್ರಕಟಗೊಂಡಿದೆ.
ತಮಿಳುನಾಡಿನಲ್ಲಿ ಮಹಿಳಾ ಸಂಘಟನೆಯ ರಚನೆ
1973ರಲ್ಲಿ ಮದ್ರಾಸ್ ನಲ್ಲಿ ಮಹಿಳಾ ಸಂಘಟನೆ ರಚನೆಯಾಗುತ್ತದೆ. ‘ಜನನಾಯಕ ತಮಿಳ್ ಮಾತೃ ಸಂಘಂ’ ಹೆಸರಿನ ಈ ಸಂಘಟನೆಯ ರಚನೆಯಲ್ಲಿ ಜಾನಕಿ ಅಮ್ಮಾಳ್, ಪಾಪಾ ಉಮಾನಾಥ್ ಮತ್ತು ಮೈಥಿಲಿಯವರ ಪಾತ್ರ ಅತಿ ಪ್ರಮುಖವಾದುದು. ನಂತರ ಅದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜೊತೆ ಸಂಯೋಜಿತ ಸಂಘಟನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮೈಥಿಲಿ ಜನವಾದಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬಹಳ ಕಾಲ ಜವಾಬ್ದಾರಿ ನಿರ್ವಹಿಸಿದರು.
ಲೇಖಕಿ ಮತ್ತು ವಿಮರ್ಶಕಿಯಾಗಿ
1975ರಲ್ಲಿ ವಿಶ್ವಸಂಸ್ಥೆ ಆ ವರ್ಷವನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ ಘೋಷಿಸಿದಾಗ ಸಮಾಜವಾದಿ ನೆಲೆಯಲ್ಲಿ ಮಹಿಳಾ ಪ್ರಶ್ನೆಗಳನ್ನಾಧರಿಸಿ ಅವರು ಹಲವಾರು ಲೇಖನಗಳನ್ನು ಬರೆದರು. ಪತ್ರಿಕೆಯೊಂದನ್ನು ನಡೆಸುವುದು ಯಾವಾಗಲೂ ಸುಲಭವಲ್ಲವೆಂಬುದು ಸತ್ಯ. ಹಾಗೆ ‘ದಿ ರ್ಯಾಡಿಕಲ್ ರಿವ್ಯು’ ಕೂಡಾ ನಿಲ್ಲಬೇಕಾಯಿತು, ಆದರೆ ಮೈಥಿಲಿಯವರ ಬರಹ ನಿಲ್ಲಲಿಲ್ಲ. ಪ್ರಸಿದ್ಧ ‘ಇಕಾನಾಮಿಕ ಅಂಡ್ ಪೊಲಿಟಿಕಲ್ ವೀಕ್ಲಿ’ (ಇ.ಪಿ.ಡಬ್ಲ್ಯೂ) ನಲ್ಲಿ ಅವರ ಹಲವಾರು ಲೇಖನಗಳು ಪ್ರಕಟಗೊಂಡಿವೆ. ತಮಿಳು ಭಾಷೆಯಲ್ಲಿ ಹಲವಾರು ಲೇಖನಗಳು, ಪುಸ್ತಕಗಳ ವಿಮರ್ಶೆಗಳು ಹೀಗೆ ಅವರ ಕುರಿತು ಒಂದು ಅಧ್ಯಯನವನ್ನೇ ಮಾಡುವಷ್ಟು ಅಪಾರ ಸಂಪತ್ತು ಅವರು. ಮಹಿಳಾ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಹಲವಾರು ಲೇಖನಗಳ ಜೊತೆ ನಿರಂತರವಾಗಿ ಅವರು ಮಹಿಳಾ ಕಾರ್ಯಕರ್ತರಿಗೆ ರಾಜಕೀಯ ಸ್ಪಷ್ಟತೆ ಮತ್ತು ಪ್ರಜ್ಞೆ ಹಾಗೂ ಸೈದ್ಧಾಂತಿಕ ಬದ್ಧತೆ ಮೂಡಿಸಲು ಹೆಚ್ಚು ಗಮನ ಹರಿಸುತ್ತಿದ್ದರು.
ಅವರ “ವಿಮೋಚನೆಯೆಡೆಗೆ” ಎಂಬ ಪುಸ್ತಕದಲ್ಲಿ ಅವರು ಮುಖ್ಯವಾಗಿ ಮೂರು ಅಂಶಗಳನ್ನಿಟ್ಟು ಚರ್ಚೆ ಮಾಡುತ್ತ ಪುರುಷ ವಿರೋಧಿ ಸ್ವೇಚ್ಚಾ ಪೃವೃತ್ತಿಯನ್ನು ಸ್ತ್ರೀವಾದವೆಂದು ಕರೆಯುತ್ತಿದ್ದ ಅಂದಿನ ಅಭಿಪ್ರಾಯಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಅದರಲ್ಲಿ ಅವರು ಬಹು ಮುಖ್ಯವಾಗಿ “ಮಹಿಳೆಗೆ ಸ್ವತಂತ್ರ ವ್ಯಕ್ತಿತ್ವ ಇದೆಯೇ? ಪುರುಷನ ಬದುಕಿನ ಪರಿಧಿಯಾಚೆ ಮಹಿಳೆಯ ಅಸ್ತಿತ್ವಕ್ಕೆ ಯಾವ ಅರ್ಥವೂ ಇಲ್ಲ ಎಂಬುದೇ ಸತ್ಯವಾದರೆ ಮಾನವ ಇತಿಹಾಸದ ಆರಂಭದ ಕಾಲದಿಂದಲೂ ಹೀಗೇ ಇತ್ತೇ? ಎಲ್ಲ ರೀತಿಯಿಂದ ಅಬಲೆಯಂತೆ ಬದುಕುತ್ತಿರುವ ಮಹಿಳೆಯ ವಿಮೋಚನೆಯ ದಾರಿ ಯಾವುದು?” ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸಿದ್ದಾರೆ. ವರ್ಗ ಸಮಾಜದೊಂದಿಗೇ ಉದ್ಭವಿಸಿದ ಮಹಿಳಾ ಶೋಷಣೆಯು ವರ್ಗ ಸಮಾಜದೊಂದಿಗೇ ಅಸ್ತಂಗತವಾಗುವುದು ಅನಿವಾರ್ಯ. ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಮಾಡುವ ಹೋರಾಟವೇ ಒಟ್ಟು ಮಾನವ ವಿಮೋಚನೆಯ ದಾರಿಯನ್ನು ಸೂಚಿಸುತ್ತದೆ. ಮಹಿಳಾ ವಿಮೋಚನೆಯೂ ಕೂಡಾ ಮಾನವರ ಸರ್ವಾಂಗೀಣ ಬಿಡುಗಡೆಯ ಅವಿಭಾಜ್ಯ ಅಂಗ ಎಂದು ಉತ್ತರದಲ್ಲಿ ಪ್ರತಿಪಾದಿಸಿದ್ದಾರೆ.
ಮಹಿಳಾ ಸಂಘಟನೆಯ ನಾಯಕಿಯಾಗಿ
ಮಹಿಳಾ ಸಂಘಟನೆಯ ನಾಯಕಿಯಾಗಿ ಅವರು ಮಹಿಳೆಯರನ್ನು ಬಾಧಿಸುವ ಹಲವು ಸಂಗತಿಗಳನ್ನು ಹೋರಾಟದ ಮೂಲಕ ಮುನ್ನೆಲೆಗೆ ತಂದಿದ್ದರು. ಮಹಿಳೆಯರ ಪ್ರಶ್ನೆಗಳೆಂದರೆ ಸಾಮಾನ್ಯವಾಗಿ ಪರಿಭಾವಿಸುವ ವರದಕ್ಷಿಣೆ, ಕೌಟುಂಬಿಕ ಕಿರುಕುಳಗಳ ಮಟ್ಟಕ್ಕೆ ನಿಲ್ಲಿಸದೆ, ಮಹಿಳೆಯೊಬ್ಬಳು ಕೌಟುಂಬಿಕ ನೆಲೆಯಲ್ಲಿ ಅನಿವಾರ್ಯವಾಗಿ ಮತ್ತು ಸಮಾಜ ಸಹಜವಾಗಿ ಪರಿಗಣಿಸುವ ಗೃಹಕೃತ್ಯಗಳು- ಕುಡಿಯುವ ನೀರಿಗಾಗಿ ಮಾಡುವ ಓಡಾಟಗಳು, ಸ್ವಚ್ಛತೆಯ ಕೆಲಸಗಳು, ಮನೆಯವರ ಲಾಲನೆ ಪಾಲನೆಗಳ ಸಂಬಂಧೀ ವಿಷಯಗಳನ್ನು ಚರ್ಚೆಗೆ ಒಡ್ಡಿ ಮದ್ರಾಸಿನ ಕನ್ಸರ್ವೇಟಿವ್ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಜಾತಿ ವ್ಯವಸ್ಥೆಯಲ್ಲಿ ಮಹಿಳೆಯ ಮೇಲೆ ನಡೆಯುವ ದುಪ್ಪಟ್ಟು ದೌರ್ಜನ್ಯಗಳನ್ನು ಗಂಭೀರವಾಗಿ ಗುರುತಿಸಿದ ಮದ್ರಾಸಿನ ಮೊದಲ ಮಹಿಳಾ ಸಮ್ಮೇಳನದಲ್ಲಿಯೇ, ಜಾತಿ ಆಧಾರಿತ ತಾರತಮ್ಯವನ್ನು ಕೈಗೆತ್ತಿಕೊಳ್ಳುವ ತೀರ್ಮಾನವನ್ನು ಮಾಡಲಾಗಿತ್ತು.
ಸ್ತ್ರೀಭ್ರೂಣ ಹತ್ಯೆಯ ವಿರುದ್ಧ ಆಂದೋಳನವನ್ನು ಸಂಘಟಿಸುತ್ತ ತಮಿಳ್ನಾಡಿನಲ್ಲಿ ವ್ಯಾಪಕವಾಗಿದ್ದ ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಧ್ವನಿ ಎತ್ತಿದ್ದರು. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧವೂ ಕೆಲಸ ಮಾಡುತ್ತ ಆ ಮಕ್ಕಳ ಅಭಿವೃದ್ದಿಗಾಗಿ ಹಲವು ಕೆಲಸಗಳಿಗೆ ಮುಂಚೂಣಿಯಲ್ಲಿದ್ದರು.
ಮಹಿಳಾ ಸಂಘಟನೆಯ ಎಲ್ಲ ಚಟುವಟಿಕೆಗಳ ಮುಂಚೂಣಿಯಲ್ಲಿದ್ದು ಕರಪತ್ರ ತಯಾರಿ, ಲೇಖನ ತಯಾರಿ, ತಮಿಳ್ನಾಡಿನ ಸಂಘಟನೆ ತರುತ್ತಿದ್ದ ‘ಮಹಿಳೈ ಸಿಂಘನೈ’ ಪತ್ರಿಕೆಗೂ ಕೆಲಸ ಮಾಡುತ್ತಿದ್ದರು. ಮಗಳು ಕಲ್ಪನಾ ನೆನಪಿಸಿಕೊಳ್ಳುವಂತೆ ಮಹಿಳಾ ಸಂಘಟನೆಯ ಹೊಸ ತಲೆಮಾರಿನ ನಾಯಕರ ಜೊತೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಲೇ ಅವರು ಮಾಡುವ ತಪ್ಪುಗಳಿಗೆ ಕೆಲವೊಮ್ಮೆ ಕೋಪಿಸಿಕೊಳ್ಳುತ್ತಿದ್ದರೂ ಕೂಡಾ. ಆದರೆ ಆಕೆಯೊಳಗೆ ಇದ್ದ ತಾಯಿ ಭಾವ ಮತ್ತು ಸಂಘಟನಾ ಕ್ರಮಬದ್ಧತೆಯೇ ಅದಕ್ಕೆ ಮೂಲ ಕಾರಣವಾಗಿತ್ತು. ಒಬ್ಬ ಹೆಂಡತಿ, ತಾಯಿ, ಕುಟುಂಬದ ದೇಖರೇಖೆ ನೋಡಿಕೊಳ್ಳುವ ಜವಾಬ್ದಾರಿಯ ಹೆಣ್ಣಾಗಿ ಈ ಸಮಾಜ ಬಯಸುವ ಜವಾಬ್ದಾರಿ ಹೊರುವ ಒಬ್ಬಳಾಗಿ ಬದುಕಿದ್ದಕ್ಕಿಂತ ಹೆಚ್ಚು ಇವರು ಸಮಾಜಮುಖೀ ಜೀವಿಯಾಗಿ, ಸಂಘಟನೆಯ ಕಟ್ಟುವವಳಾಗಿಯೇ ಬದುಕಿದ್ದವರು.
ಕರ್ನಾಟಕದ ಜನವಾದಿಯ ಬೇರುಗಳಲ್ಲಿ ಮೈಥಿಲಿಯ ಹೆಸರು
ಕರ್ನಾಟಕದ ಜೊತೆ ಅವರ ನಂಟು ಜನವಾದಿಯ ಕೇಂದ್ರ ಸಮಿತಿಯಿಂದ ಮಾರ್ಗದರ್ಶಕರಾಗಿ. ಇಲ್ಲಿ ಜನವಾದಿಯನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. 90ರ ದಶಕದಲ್ಲಿ ಅವರು ನಿರಂತರವಾಗಿ ಇಲ್ಲಿನ ಚಟುವಟಿಕೆಗಳ ಜೊತೆ ನಂಟು ಹೊಂದಿದ್ದರು. ರಾಜ್ಯ ಸಮಿತಿಗೆ ಅವರು ಕೊಡುತ್ತಿದ್ದ ಗಮನದಿಂದಾಗಿಯೇ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಂಘಟನೆಯನ್ನು ಕಟ್ಟುವ ಪ್ರಯತ್ನ ಸಫಲವಾಯಿತು. ಮೆದು ಮಾತಿನ ಸರಳ ಜೀವವಾಗಿದ್ದರೂ ಸಂಘಟನಾಕ್ರಮಗಳ, ಶಿಸ್ತಿನ ಉಲ್ಲಂಘನೆಯನ್ನು ಯಾವತ್ತೂ ಸಹಿಸುತ್ತಿರಲಿಲ್ಲ. ಮತ್ತೆ ಮತ್ತೆ ಹೇಳುತ್ತಿದ್ದ ಮಾತು ನಾಯಕತ್ವದಲ್ಲಿ ಇರುವವರಿಗೆ ಕೇಳುವ ಕಿವಿ ಬೇಕು. ಅರಿಯುವ ಹಸಿವು ಬೇಕು. ಅಧ್ಯಯನದ ಬಯಕೆ ಬೇಕು ಎಂದಾಗಿತ್ತು. ಸಂಘಟನೆಯ ಸಂವಿಧಾನ ಕಾರ್ಯಕ್ರಮಗಳನ್ನು ಪ್ರತಿನಿತ್ಯದ ಆಗುಹೋಗುಗಳಿಗೆ ಅನ್ವಯಿಸಿಕೊಳ್ಳುವಷ್ಟು ಪರಿಣತಿಯನ್ನು ಮುಖ್ಯ ನಾಯಕತ್ವ ಪಡೆದರೆ ಅವರು ಅರ್ಧ ಗೆದ್ದಂತೆ, ಮತ್ತರ್ಧ ಮಾಡುವ ಕೆಲಸವನ್ನು ಒರೆಗೆ ಹಚ್ಚಿಕೊಳ್ಳುವ ಮತ್ತು ಅದು ಸಂಘಟನೆಯ ಬೆಳವಣಿಗೆಗೆ ಎಷ್ಟು ಮಾತ್ರ ಸಹಕಾರಿ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವ ಕೆಲಸ ನಿರಂತರವಾಗಿ ನಡೆಯಬೇಕು. ಮುಖ್ಯ ನಾಯಕತ್ವದಲ್ಲಿ ಇರುವವರಿಗೆ ತಮ್ಮನ್ನು ತಾವು ನಿರ್ದಾಕ್ಷಿಣ್ಯವಾಗಿ ವಿಮರ್ಶೆಗೆ ತೊಡಗಿಸಿಕೊಳ್ಳುವ ಮತ್ತು ಆ ಮೂಲಕ ಕಾರ್ಯಕರ್ತರಿಗೆ ಮಾದರಿಯಾಗಿ ನಿಲ್ಲುವ ಗುಣ ಇರಲೇಬೇಕು. ಅದು ಮಾತ್ರವೇ ತಪ್ಪು ಸರಿಗಳ ವಿಮರ್ಶೆಗೆ ಸರಿದಾರಿ ತೋರಿಸುತ್ತದೆ ಎನ್ನುತ್ತಿದ್ದರು.
ದಣಿದ ಜೀವ ಆರಿತು ದೀಪ
ಸಣ್ಣವರಿರುವಾಗಲೇ ಪ್ರಾರಂಭಿಸಿದ ದಣಿವರಿಯದ ಕೆಲಸಗಳು, ಸದಾ ಸರ್ವದಾ ತೀವ್ರ ಒತ್ತಡಗಳ ಮಧ್ಯೆ ಮಾಡುತ್ತಿದ್ದ ಕೆಲಸದ ಒತ್ತಡಗಳಿರಬಹುದು ಇಲ್ಲಿಗೆ ಬರುವಾಗಲೇ ಒಳ್ಳೇಯ ಆರೋಗ್ಯ ಹೊಂದಿರಲಿಲ್ಲ. ಸದಾ ಮೈಗ್ರೇನ್ ತಲೆನೋವಿನಿಂದ, ಅರೆ ತಲೆಶೂಲೆಯಿಂದ ಬಳಲುತ್ತಿದ್ದ ಅವರು ನೋವಿನಿಂದ ಪಾರಾಗಲು ಮಾತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಅವರ ಬದ್ಧತೆ ಎಷ್ಟಿತ್ತೆಂದರೆ ಅವುಗಳ ದುಷ್ಪರಿಣಾಮ ತನ್ನ ಮೇಲೆ ಆಗುವುದೆಂದು ತಿಳಿದಿದ್ದರೂ ತನ್ನ ಅನಾರೋಗ್ಯ ಸಂಘಟನೆಯ ಕೆಲಸದೆದುರು ಬಂದು ನಿಲ್ಲದಂತೆ, ಅಡ್ಡಿಯಾಗದಂತೇ ಕಣ್ಗಾವಲಿಟ್ಟುಕೊಳ್ಳುತ್ತಿದ್ದರು.
ಜನವಾದಿಯ ಪ್ರಾರಂಭದ ದಿನಗಳಿಂದ ನನ್ನ ಬೆರಳು ಹಿಡಿದು ನಡೆಸಿದ ಮಾರ್ಗದರ್ಶಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪೆಸಗಿದಾಗ ನಿರ್ದಾಕ್ಷಿಣ್ಯವಾಗಿ ಸರಿಪಡಿಸಿಕೊಳ್ಳಲು ಹೇಳುತ್ತಿದ್ದ, ಬೆಂಗಳೂರಿಗೆ ಬಂದಾಗೆಲ್ಲ ನಮ್ಮ ಮನೆಯಲ್ಲೇ ತಂಗುತ್ತಿದ್ದ, ಮೇಲ್ಮಹಡಿಯ ಪುಟ್ಟ ಕೊಠಡಿಯನ್ನು ತುಂಬಾ ಇಷ್ಟಪಡುತ್ತಿದ್ದ ಮೈಥಿಲಿ ಅಲ್ಜೈಮರ್ ರೋಗಕ್ಕೆ ತುತ್ತಾದರು. ಅದಿನ್ನೂ ಪ್ರಾರಂಭದ ಹಂತವಿತ್ತೋ ಏನೋ, ಯಾವುದೋ ಕಾರಣಕ್ಕೆ ಚೆನ್ನೈಗೆ ಹೋದಾಗ ಮನೆಗೆ ಭೇಟಿ ಕೊಟ್ಟಿದ್ದೆವು. ತಾಸೆರಡು ತಾಸು ಮಾತಾಡಿದ್ದರು. ಹಳೆಯದೆಲ್ಲ ನೆನಪಿಸಿಕೊಳ್ಳುವ, ಕರ್ನಾಟಕದಲ್ಲಿ ಸಂಘಟನೆ ವಿಸ್ತರಿಸಿ ಚಳುವಳಿಯ ರೂಪ ಪಡೆಯಬೇಕೆಂಬ ಕನಸನ್ನು ಇಬ್ಬರೂ ಹಂಚಿಕೊಂಡೆವು. ನಂತರ ಕಾನ್ಪುರದ ಸಮ್ಮೇಳನದಲ್ಲಿ ಅವರ ಭೇಟಿ. ಅಷ್ಟೊತ್ತಿಗಾಗಲೇ ನೆನಪು ನೇಪಥ್ಯಕ್ಕೆ ಸರಿದಿತ್ತು. ಪಕ್ಕದಲ್ಲಿಯೇ ಕುಳಿತು ಮಾತನಾಡಿದಾಗ ಎಷ್ಟೋ ಹೊತ್ತು ಮಾತನಾಡಿದ ಮೈಥಿಲಿ ಮತ್ತೆ ನನಗೆ ಪ್ರಶ್ನಿಸಿದ್ದು… ನೀನು ಯಾವ ಕಾಲೇಜಿನಲ್ಲಿ ಓದುತ್ತಿದ್ದೀ… ಎಂದು. ನನಗರಿವಿಲ್ಲದೆಯೇ ನನ್ನ ಕಣ್ಣಿನಿಂದ ನೀರು ಹರಿದಿತ್ತು. ಒಬ್ಬ ಅತ್ಯಂತ ಮೇಧಾವಿ, ಸೂಕ್ಷ್ಮಮತಿ, ತೀಕ್ಷ್ಮಮತಿ, ಬುದ್ದಿಮತಿಯೊಬ್ಬರು ಹೀಗೊಂದು ರೋಗಕ್ಕೆ ತುತ್ತಾಗುವ ಮತ್ತು ಹಾಗೆಯೇ ಕರಗಿ ಹೋಗುವುದು ಅದೆಷ್ಟು ನೋವು. ಅವರಿಗೆ ಪ್ರಾರಂಭವಾಗಿದ್ದು ಮಾನಸಿಕ ಖಿನ್ನತೆಯಿರಬಹುದು ಆದರೆ ಅದನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎನ್ನುವುದು ಕುಟುಂಬದವರ ಅಭಿಪ್ರಾಯ. ಆದರೆ ಅವರನ್ನು ಮಗುವಿನಂತೆ ನೋಡಿಕೊಂಡ ಕುಟುಂಬವನ್ನು ವಂಚಿಸಿ ಕೋವಿಡ್ ಅವರನ್ನು ಸೆಳೆದೊಯ್ದಿದೆ. ವ್ಯವಸ್ಥೆಯ ವೈಫಲ್ಯವಿದು. ಕ್ಷಮಿಸಲಾಗದು.