ಬೆಂಗಳೂರು: 1ರಿಂದ 10ನೇ ತರಗತಿವರೆಗಿನ ಶಾಲಾ ಪಠ್ಯ ಪುಸ್ತಕ ಪರಿಷ್ಕೃತ ಭಾಗದಲ್ಲಿ ಮೈಸೂರು ಹುಲಿ ಎಂದೇ ಬಿಂಬಿತವಾಗಿದ್ದ ಟಿಪ್ಪು ಸುಲ್ತಾನ್ ಬಗ್ಗೆ ಏಕವಚನ ಪದ ಪ್ರಯೋಗ ಬಳಕೆ ಮಾಡಲಾಗಿದೆ. ಅಲ್ಲದೆ, ಮೈಸೂರು ರಾಜ ವಂಶಸ್ಥರ ಬಗ್ಗೆ ಹೆಚ್ಚು ವೈಭವೀಕಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಮಾಡಿರುವ ಪರಿಷ್ಕೃತ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಬಿರುದುಗಳಿಗೂ ಕತ್ತರಿ ಪ್ರಯೋಗವಾಗಿದೆ. ಈತನಿಗೆ ಮೈಸೂರು ಹುಲಿ ಎಂದು ಯಾರು, ಯಾವ ಕಾರಣಕ್ಕಾಗಿ ಬಿರುದು ಕೊಟ್ಟಿದ್ದರು ಎಂಬುದನ್ನು ಸಹ ಪ್ರಶ್ನೆ ಮಾಡಲಾಗಿದೆ. ಇನ್ನು ಮುಂದೆ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್‍ಗೆ ಮೈಸೂರು ಹುಲಿ ಎಂಬ ಬಿರುದು ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದು ಶಿಕ್ಷಣ ತಜ್ಞರು ಆರೋಪಿಸಿದ್ದಾರೆ.
ಇದನ್ನು ಓದಿ: 10ನೇ ತರಗತಿ ಶಾಲಾಪಠ್ಯದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ
ಮತ್ತೊಂದು ವಿಶೇಷವೆಂದರೆ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಠ್ಯವನ್ನು ರಚಿಸಲಾಗಿದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಎಂಬ ಬಿರುದು ಬಳಸಿಲ್ಲ. ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು.
ಮೈಸೂರು ರಾಜ ವಂಶಸ್ಥರ ಬಗ್ಗೆ ಹೆಚ್ಚಿನ ವೈಭವೀಕರಣ ಮಾಡಲಾಗಿದ್ದು, ಬೇರೆ ರಾಜರಂತೆ ಸಾಮ್ರಾಜ್ಯ ವಿಸ್ತರಣೆಗೆ ಒತ್ತು ಕೊಡದ ಯದುವಂಶಸ್ಥರು ನಾಡಿನ ಜನ ಕಲ್ಯಾಣಕ್ಕಾಗಿ ಆದ್ಯತೆ ನೀಡಿದ್ದರು ಎಂದು ಉಲ್ಲೇಖ ಮಾಡಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಇದನ್ನು ಓದಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠ ಕೈಬಿಟ್ಟಿರುವ ರಾಜ್ಯ ಸರಕಾರ : ಎಸ್.ಎಫ್.ಐ ಖಂಡನೆ
ಇತರೆ ರಾಜವಂಶಸ್ಥರು ಸಾಮ್ರಾಜ್ಯ ವಿಸ್ತರಣೆಯೇ ಏಕೈಕ ಗುರಿಯಾಗಿದ್ದರೆ ಮೈಸೂರು ವಂಶಸ್ಥರು ನೀರಾವರಿ, ಕೃಷಿ, ಸಾಮಾಜಿಕ ನ್ಯಾಯ, ಮಹಿಳೆಯರ ಸಬಲೀಕರಣ, ಉದ್ಯೋಗ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಒತ್ತು ಕೊಟ್ಟಿದ್ದರು. ಕರ್ನಾಟಕದಲ್ಲಿ ಇದು ಅತ್ಯಂತ ವಿಶಿಷ್ಟ ಮತ್ತು ಜನಪರವಾದ ರಾಜಮನೆತನವಾಗಿತ್ತು ಎಂದು ಪಠ್ಯ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ದೂರಲಾಗಿದೆ.