ಸಾಮಾಜಿಕ ಜಾಗೃತಿ ಮೂಡಿಸಲಾದರೂ ಜನನಾಯಕರು (?) ಜನಮುಖಿಯಾಗಬೇಕಿದೆ.
ನಾ ದಿವಾಕರ
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಪೋಟದ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆಗಳನ್ನು ಗಮನಿಸಿದರೆ, ಇಡೀ ಕಾರ್ಯಾಚರಣೆಗೆ ಮೈಸೂರು ಕೇಂದ್ರ ಸ್ಥಾನವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ. ತನಿಖಾಧಿಕಾರಿಗಳೂ ಸಹ ತೀವ್ರ ಶೋಧ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಗಂಭೀರ ಪರಿಶೋಧನೆ ನಡೆಸುತ್ತಿದ್ದಾರೆ. ಈ ಘಟನೆಗೆ ಅಂತಾರಾಷ್ಟ್ರೀಯ ಸಂಪರ್ಕಗಳಿರುವುದನ್ನೂ ಗಮನಿಸಲಾಗಿದ್ದು, ಮೈಸೂರಿನ ಕಾನೂನು ನಿರ್ವಾಹಕ ಸಂಸ್ಥೆಗಳು ಹಗಲಿರುಳೆನ್ನದೆ ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕನ್ನಡದ ಸುದ್ದಿ ಮಾಧ್ಯಮಗಳ ರಂಜನೀಯ/ರೋಮಾಂಚಕಾರಿ/ಟಿಆರ್‌ಪಿ ಕೇಂದ್ರಿತ ಅಬ್ಬರದ ಪ್ರಸಾರದ ಪರಿಣಾಮ ಜನಸಾಮಾನ್ಯರಲ್ಲೂ ಸಹ ಸುಪ್ತ ಆತಂಕಗಳು ಮೂಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇಂತಹ ವಿಷಮ ಸನ್ನಿವೇಶಗಳಲ್ಲಿ ಸಂಯಮದಿಂದ ವರದಿಗಾರಿಕೆ ಮಾಡುವ ವ್ಯವಧಾನವನ್ನೇ ಕಳೆದುಕೊಂಡಿರುವ ಕನ್ನಡದ ಸುದ್ದಿಮನೆಗಳಿಂದ ಹೆಚ್ಚಿನದೇನೂ ನಿರೀಕ್ಷಿಸಲಾಗುವುದಿಲ್ಲ.
ಸಾಂಸ್ಕೃತಿಕ ನಗರಿ ಎಂದೇ ಹೆಸರುವಾಸಿಯಾಗಿರುವ ಮೈಸೂರು ತನ್ನ ಸಾಮಾಜಿಕ-ಸಾಂಸ್ಕೃತಿಕ ಸೌಹಾರ್ದತೆಯನ್ನು ಕಾಪಾಡಿಕೊಂಡೇ ಬಂದಿದೆಯಾದರೂ, ಇತ್ತೀಚಿನ ಕೆಲವು ಆಘಾತಕಾರಿ ಘಟನೆಗಳಿಗೆ ಈ ಘಟನೆ ಮತ್ತಷ್ಟು ಕಾವು ನೀಡಿದೆ. ಭಯೋತ್ಪಾದನೆಯಿಂದ ಅಥವಾ ಭಯೋತ್ಪಾದಕರಿಂದ ಮೈಸೂರು ಸುರಕ್ಷಿತವಾಗಿದೆ ಎನ್ನುವುದು ಸರ್ವವಿಧಿತ. ಏಕೆಂದರೆ ಮೈಸೂರಿನ ಜನತೆ ಮೂಲತಃ ಶಾಂತಿ ಪ್ರಿಯರಾಗಿದ್ದಾರೆ. ಆದರೂ ಭಯೋತ್ಪಾದಕ ಚಟುವಟಿಕೆಗಳು, ಉಗ್ರವಾದಿ ಸಂಘಟನೆಗಳ ಕಾರ್ಯಾಚರಣೆಗಳು ಸದಾ ನೇಪಥ್ಯದಲ್ಲೇ ನಡೆಯುತ್ತಿರುತ್ತವೆ. ಸಾರ್ವಜನಿಕರ ಕಣ್ಣೆದುರೇ ಸುಳಿದಾಡುತ್ತಿರುವ ವ್ಯಕ್ತಿಯೊಬ್ಬ ಹಠಾತ್ತನೆ ಭಯೋತ್ಪಾದಕ ಕೃತ್ಯದ ರೂವಾರಿ ಎಂದು ತಿಳಿದಾಗ, ಸಹಜವಾಗಿಯೇ ಸಮಾಜದಲ್ಲಿ ಆಂತರಿಕ ಕ್ಷೋಭೆ ಮತ್ತು ಆತಂಕಗಳು ಹೆಚ್ಚಾಗುತ್ತವೆ. ಪ್ರಸ್ತುತ ಕುಕ್ಕರ್ ಸ್ಫೋಟದ ಘಟನೆಯನ್ನು ಅತ್ಯುತ್ತಮ ರೀತಿಯಲ್ಲಿ, ಸಂಯಮದೊಂದಿಗೆ ನಿರ್ವಹಿಸುತ್ತಿರುವ ಎನ್‌ಐಎ, ಪೊಲೀಸ್ ಮತ್ತು ತನಿಖಾಧಿಕಾರಿಗಳನ್ನು ಅಭಿನಂದಿಸುತ್ತಲೇ , ಮೈಸೂರಿನ ನಾಗರಿಕರ ನಡುವೆ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಪ್ರಯತ್ನಗಳಿಗೆ ನಾವು ಮುಂದಾಗಬೇಕಿದೆ.
ಪ್ರಸ್ತುತ ಘಟನೆಯನ್ನು ಬದಿಗಿಟ್ಟು ನೋಡಿದಾಗಲೂ, ಮೈಸೂರಿನಲ್ಲಿ ಇತ್ತೀಚೆಗೆ ಪಾತಕಿ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ರೀತಿಯ ಕೆಲವು ಘಟನೆಗಳು ಜನಸಾಮಾನ್ಯರ ನಡುವೆ ಆತಂಕ ಮತ್ತು ಭೀತಿಯನ್ನು ಸೃಷ್ಟಿಸುವುದೇ ಅಲ್ಲದೆ, ಬದಲಾಗುತ್ತಿರುವ ಭಾರತದ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ಅನುಮಾನಗಳನ್ನೂ ಹುಟ್ಟುಹಾಕುತ್ತವೆ. ಈ ಅನುಮಾನಗಳನ್ನೇ ಬಳಸಿಕೊಂಡು ಸಾರ್ವಜನಿಕ ಜೀವನದಲ್ಲಿ ಪರಸ್ಪರ ಸಹಯೋಗದೊಂದಿಗೆ ಬಾಳ್ವೆ ನಡೆಸುವ ಸಾಮಾನ್ಯ ಜನರ ನಡುವೆ ಇನ್ನೂ ಎತ್ತರದ ಗೋಡೆಗಳನ್ನು ನಿರ್ಮಿಸುವ ಶಕ್ತಿಗಳು ನಮ್ಮ ನಡುವೆ ಹೇರಳವಾಗಿವೆ. ಇಂತಹ ಶಕ್ತಿಗಳಿಗೆ ಕನ್ನಡದ ಸುದ್ದಿಮನೆಗಳು ಭೂರಿ ಭೋಜನ ಒದಗಿಸುತ್ತವೆ ಎನ್ನುವುದನ್ನು ಹೇಳಬೇಕಿಲ್ಲ. ಕುಕ್ಕರ್ ಸ್ಫೋಟದ ಘಟನೆ ನಮ್ಮ ಸಮಾಜವನ್ನು ಕಾಡುತ್ತಿರುವ ಆಳವಾದ ಒಳಬೇನೆಯ ಒಂದು ಆಯಾಮ ಎನ್ನುವುದನ್ನು ನಾವು ಗಮನಿಸಬೇಕಿದೆ. ಅದೂ ಮೈಸೂರಿನಂತಹ ಸೌಹಾರ್ದಯುತ ನಗರವೇ ಇಂತಹ ವಿಧ್ವಂಸಕ, ಸಮಾಜಘಾತುಕ ಚಟುವಟಿಕೆಗಳ ಕೇಂದ್ರ ಸ್ಥಾನವಾಗುವುದು ಅಪೇಕ್ಷಣೀಯವಲ್ಲ.
ಇಂತಹ ವಿಷಮ ಸನ್ನಿವೇಶಗಳಲ್ಲಿ ಸಮಾಜದ ಹಿರಿಯ ನಾಗರಿಕರು, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು, ಪಾಲಿಕೆಯಿಂದ ಸಂಸತ್ತಿನವರೆಗಿನ ಜನಪ್ರತಿನಿಧಿಗಳು ಮತ್ತು ಜನನಾಯಕರಂತೆ ಬಿಂಬಿಸಿಕೊಳ್ಳುವ/ಬಿಂಬಿಸಲ್ಪಡುವ ವ್ಯಕ್ತಿಗಳ ನೈತಿಕ ಜವಾಬ್ದಾರಿ ತುಸು ಹೆಚ್ಚಾಗಿಯೇ ಇರುತ್ತದೆ. ಮೈಸೂರು ನಾಗರಿಕರ ನಡುವೆ ನಿರ್ಭೀತಿಯ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಒಂದು ವಿಶಾಲ ವೇದಿಕೆಯ ನಾಗರಿಕ ಸಮಿತಿ ಈ ಸಂದರ್ಭದಲ್ಲಿ ಅತ್ಯವಶ್ಯವಾಗಿರುತ್ತದೆ. ಕುಕ್ಕರ್ ಸ್ಫೋಟ ಪ್ರಕರಣವು ಇಂತಹ ಒಂದು ವಿಶಾಲ ವೇದಿಕೆಯ ಅವಶ್ಯಕತೆಯನ್ನು ಎತ್ತಿ ತೋರುತ್ತದೆ. ರಾಜಕೀಯ, ತಾತ್ವಿಕ-ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸಮುದಾಯಗಳ ಜನರನ್ನು ಪ್ರಾತಿನಿಧಿಕವಾಗಿ ಒಂದು ವೇದಿಕೆಯ ಮೇಲೆ ತರುವ ಪ್ರಯತ್ನಕ್ಕೆ ಇಲ್ಲಿನ ಜನಪ್ರತಿನಿಧಿಗಳು ಮುಂದಾಗಬೇಕಿದೆ.
ದುರಾದೃಷ್ಟವಶಾತ್ ನಾವು ಗತ ಇತಿಹಾಸದಲ್ಲಿ ಮುಳುಗಿದ್ದೇವೆ. ವರ್ತಮಾನಕ್ಕೆ ಕುರುಡಾಗಿದ್ದೇವೆ. ಹಾಗಾಗಿಯೇ ನಮ್ಮ ನಡುವೆ ನಡೆಯುತ್ತಿರುವ ಹತ್ಯೆಗಳಿಗಿಂತಲೂ 18ನೆಯ ಶತಮಾನದಲ್ಲಿ ಟಿಪ್ಪು ಮಾಡಿದ ಹತ್ಯೆಗಳು ನಮ್ಮನ್ನು ಹೆಚ್ಚು ಬಾಧಿಸುತ್ತಿವೆ. ನಾಲ್ವಡಿ ಒಡೆಯರ್ ಆಳ್ವಿಕೆಯ ಸಾಮಾಜಿಕ ನ್ಯಾಯದ ವಾತಾವರಣವನ್ನು ವೈಭವೀಕರಿಸುತ್ತಿರುವ ನಮಗೆ, ಪಕ್ಕದ ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆ ನೀರುಕುಡಿದ ಕಾರಣಕ್ಕೆ ನೀರಿನ ತೊಟ್ಟಿಯನ್ನೇ ಗೋಮೂತ್ರದಿಂದ ಶುದ್ಧೀಕರಿಸುವಂತಹ ಅಮಾನುಷ ಕೃತ್ಯಗಳು ಅಷ್ಟೇನೂ ಅಪಾಯಕಾರಿ ಎನಿಸುತ್ತಿಲ್ಲ. ಕುಕ್ಕರ್ ಸ್ಫೋಟದ ಪ್ರಕರಣ ಇಂದಲ್ಲಾ ನಾಳೆ ತಾರ್ಕಿಕ ಅಂತ್ಯ ಕಾಣುತ್ತದೆ, ಅಪರಾಧಿ ಶಿಕ್ಷೆಗೊಳಗಾಗುತ್ತಾನೆ , ಪರಿಸ್ಥಿತಿ ತಿಳಿಯಾಗುತ್ತದೆ. ಆದರೆ ಹೆಗ್ಗೋಠಾರ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಮೈಸೂರು ಬೆಂಗಳೂರು ರೈಲು ಯಾವ ಹೆಸರಿನಲ್ಲಿ ಓಡಿದರೂ, ಅವಘಡ-ಅಪಘಾತ-ವಿಧ್ವಂಸಕ ಘಟನೆಗಳಿಗೆ ಬಲಿಯಾಗುವುದು ಸಾಮಾನ್ಯ ಜನರೇ. ಬಸ್ ತಂಗುದಾಣದ ಸೂರು ಯಾವ ಆಕಾರದಲ್ಲಿದ್ದರೂ ನೆರಳಿಗಾಗಿ ಅದನ್ನು ಆಶ್ರಯಿಸುವುದು, ಕುಸಿದರೆ ಘಾಸಿಗೊಳ್ಳುವುದು ಜನಸಾಮಾನ್ಯರೇ. ಅಲ್ಲವೇ ?
ಈ ಅಪಸವ್ಯಗಳನ್ನೆಲ್ಲಾ ಬದಿಗಿಟ್ಟು ಮೈಸೂರಿನ ಎಲ್ಲ ರಾಜಕೀಯ ಮುಖಂಡರು, ಜನನಾಯಕರು(?), ಜನ ಪ್ರತಿನಿಧಿಗಳು ಮತ್ತು ಸಮಾಜಮುಖಿ ವ್ಯಕ್ತಿಗಳು ತಮ್ಮ ಇತರ ಎಲ್ಲ ಭಿನ್ನ ಭೇದಗಳನ್ನು ಬದಿಗಿಟ್ಟು ಒಂದು ವಿಶಾಲ ವೇದಿಕೆಯನ್ನು ರೂಪಿಸಬೇಕಿದೆ. ಮೈಸೂರು ನಗರದ ಎಲ್ಲ ಬಡಾವಣೆಗಳನ್ನೂ, ಎಲ್ಲ ಸಮುದಾಯಗಳನ್ನೂ, ಎಲ್ಲ ಸಾಮಾಜಿಕಾರ್ಥಿಕ ಸ್ತರಗಳನ್ನೂ ಪ್ರತಿನಿಧಿಸುವ ಒಂದು ವೇದಿಕೆ “ಮೈಸೂರು ನಾಗರಿಕ ವೇದಿಕೆ” ಹೆಸರಿನಲ್ಲಿ ರಚನೆಯಾಗಬೇಕಿದೆ. ಇದು ರಾಜಕೀಯ ಪ್ರೇರಿತವಾಗದೆ, ಸಮಾಜಮುಖಿಯಾಗಿ, ಮೈಸೂರಿನಲ್ಲಷ್ಟೇ ಅಲ್ಲದೆ, ನೆರೆ ಜಿಲ್ಲೆಗಳಲ್ಲೂ ಸಹ ಜನಸಾಮಾನ್ಯರ ನಡುವೆ ವಿಶ್ವಾಸ ಮೂಡಿಸುವ ಹಾಗೂ ಸೌಹಾರ್ದತೆಯನ್ನು ಮೂಡಿಸುವ ಒಂದು ಸಾತ್ವಿಕ ಪ್ರಯತ್ನವಾಗಬೇಕಿದೆ. ತಮ್ಮ ರಾಜಕೀಯ ಅಸ್ಮಿತೆ, ಪಾರಮ್ಯ, ಶ್ರೇಷ್ಠತೆ ಮತ್ತು ಮಡಿವಂತಿಕೆಗಳನ್ನು ಬದಿಗೆ ಸರಿಸಿ ಎಲ್ಲ ಹಾಲಿ/ಭಾವಿ/ಆಕಾಂಕ್ಷಿ/ನಿವೃತ್ತ ಜನಪ್ರತಿನಿಧಿಗಳು ಮೈಸೂರು ನಗರದ ನಾಗರಿಕರಲ್ಲಿ ಅಭಯ ಮೂಡಿಸುವ, ಪರಸ್ಪರ ವಿಶ್ವಾಸ ಮೂಡಿಸುವ ಮತ್ತು ಸಮನ್ವಯ-ಸೌಹಾರ್ದತೆ-ಸಂಯಮವನ್ನು ಸೃಷ್ಟಿಸುವ ಈ ಒಂದು ಪ್ರಯತ್ನಕ್ಕೆ ಮುಂದಾಗಬೇಕಿದೆ. ಹಾಗಾದಲ್ಲಿ ಮಾತ್ರ ಸಮಾಜದಲ್ಲಿ ಕ್ಷೋಭೆ ಸೃಷ್ಟಿಸುವಂತಹ ಯಾವುದೇ ಶಕ್ತಿಗಳನ್ನು ದೂರ ಸರಿಸಲು ಸಾಧ್ಯವಾಗುತ್ತದೆ.
ತಮ್ಮ ನಡುವಿನ ರಾಜಕೀಯ ವರ್ಣಭೇದಗಳನ್ನು ಮರೆತು, ಚುನಾವಣಾ ರಾಜಕಾರಣದ ವೈಷಮ್ಯಗಳನ್ನು ಬದಿಗಿಟ್ಟು, ಸಾಂಸ್ಕೃತಿಕ ತಡೆಗೋಡೆಗಳನ್ನು ಕೆಡವಿ, ಮೈಸೂರಿನ ಸಮಸ್ತ ಜನಪ್ರತಿನಿಧಿಗಳು, ಹಿರಿಯ ನಾಗರಿಕರೊಡನೆ ಸಂವಾದ ನಡೆಸುವ ಮೂಲಕ, ಸಂಘ ಸಂಸ್ಥೆಗಳನ್ನು ಒಳಗೊಳ್ಳುವ ಮೂಲಕ, ಎಲ್ಲಲ ಮೊಹಲ್ಲ, ಕೇರಿ, ಬಡಾವಣೆಗಳ ಜನರನ್ನು ಪ್ರತಿನಿಧಿಸುವ ಒಂದು ಪ್ರಾತಿನಿಧಿಕ ವೇದಿಕೆಯನ್ನು ರೂಪಿಸುವ ತುರ್ತು ನಮಗೆ ಎದುರಾಗಿದೆ. ಅಪರಾಧಿಗಳನ್ನು ಹೆಕ್ಕಿ ತೆಗೆಯುವ ಬದಲು, ಅಪರಾಧದ ಸುಳಿವಿಲ್ಲದಂತೆ ಜಾಗ್ರತೆ ವಹಿಸುವುದು ಹೆಚ್ಚು ವಿವೇಕಯುತ ಕ್ರಮವಾಗುತ್ತದೆ. ಈ ನಿಟ್ಟಿನಲ್ಲಿ ಮೈಸೂರಿನ ಜನಪ್ರತಿನಿಧಿಗಳು ತಮ್ಮ ಗೂಡುಗಳಿಂದ ಹೊರಬಂದು, ಐಕ್ಯತೆ ಮತ್ತು ಐಕಮತ್ಯದೊಂದಿಗೆ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗುತ್ತಾರೆ ಎಂಬ ಆಶಯದೊಂದಿಗೆ ಈ ಮನವಿ.