90 ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ನಿರ್ಧಾರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹಲವು ದೇವಾಲಯಗಳಿಗೆ ನೆಲಸಮ ಭೀತಿ ಎದುರಾಗಿದೆ. ನಗರದಲ್ಲಿ ಬರೋಬ್ಬರಿ 93 ದೇವಾಲಯಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ.

ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.

ಅಗ್ರಹಾರದ 101 ಗಣಪತಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆಗೂಡು ದುರ್ಗಾ ಪರಮೇಶ್ವರಿ, ನ್ಯೂ ಸಯ್ಯಾಜಿರಾವ್ ಪಂಚಮುಖಿ ಗಣಪತಿ ದೇವಾಲಯ, ವಿಜಯನಗರದ ಚಾಮುಂಡೇಶ್ವರಿ ದೇವಾಲಯ, ಶಾರದಾ ದೇವಿ ನಗರದ ಪಾರ್ಕ್​ನಲ್ಲಿರುವ ಪಂಚಮುಖಿ ಗಣಪತಿ, ವಿವಿ ಮಾರುಕಟ್ಟೆಯ ನವಗ್ರಹ ದೇವಸ್ಥಾನ ಸೇರಿದಂತೆ 93 ದೇಗುಲಗಳ ಹೆಸರು ಆ ಪಟ್ಟಿಯಲ್ಲಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಕೆಲವು ಕಡೆ ತಮ್ಮ ದೇಗುಲಗಳ ತೆರವು ಮಾಡದಂತೆ ನಿಷೇಧಾಜ್ಞೆ ತಂದಿದ್ದಾರೆ.

ಅನಧಿಕೃತವಾಗಿ ನಿರ್ಮಾಣಗೊಂಡ ಹಿಂದೂ ದೇವಾಲಯಗಳ ತೆರವಿನ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು, ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಮೈಸೂರಿನ 101 ಗಣಪತಿ ದೇವಾಲಯದ ಮುಂದೆ ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ದೇಗುಲ ನೆಲಸಮಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಈಗಾಗಲೇ ಆರೇಳು ದೇವಸ್ಥಾನಗಳನ್ನು ನೆಲಸಮ ಮಾಡಿದ್ದೀರಿ. ಬೆಳಗ್ಗೆ 3,4,5 ಗಂಟೆಗೆಲ್ಲಾ ಬಂದು ದೇವಸ್ಥಾನ ಒಡಿತಿದ್ದೀರಿ. ನಿಮಗೆ ದೇವಸ್ಥಾನ ಮಾತ್ರ ಕಾಣೋದಾ.. ಮಸೀದಿ, ದರ್ಗಾ, ಚರ್ಚ್ ಯಾಕೆ ಲಿಸ್ಟಲಿಲ್ಲ ಅಂತ ಪ್ರಶ್ನಿಸಿದ್ದಾರೆ.

ಮಾತೆತ್ತಿದ್ದರೆ ಸುಪ್ರೀಂ ಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರನೂ ಸುಪ್ರೀಂ ಕೋರ್ಟ್ ಆರ್ಡರ್ ಇದೆ. ಸುಪ್ರೀಂ ಕೋರ್ಟ್ 2009 ರಲ್ಲಿ ಮಧ್ಯಂತರ ಆದೇಶ ನೀಡಿದೆ. ಎಂಟು ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. 2009 ಕ್ಕೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಇದರ ಅನ್ವಯ ಎಲ್ಲವನ್ನೂ ಪಟ್ಟಿ ಮಾಡಿ ಎಂದು ಆಗ್ರಹಿಸಿದ್ದಾರೆ.

ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿ ಹಾಕಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ರಾಜ್ಯ ಬಿಜೆಪಿ ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು ಎಂದು ಹೇಳಿದ್ದಾರೆ.

ನ್ಯಾಯಾಲಯದ ಆದೇಶವಿದ್ದರೂ ಅದ‌ನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮುನ್ನ ಜಿಲ್ಲಾಡಳಿತ ಪರಿಣಾಮದ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆ‌ನಪಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ದೇವಸ್ಥಾನಗಳ ತೆರವು ಕಾರ್ಯಾಚಾರಣೆಯನ್ನು ರಾಜಕೀಯ ದಾಳವಾಗಿಸಿ ಕೊಳ್ಳಲು ಎಲ್ಲರು ಪ್ರಯತ್ನಿಸುತ್ತಿದ್ದಾರೆ. ಜನರ ಬಗ್ಗೆ ಕಾಳಜಿ ಮಾಡಬೇಕಿದ್ದ ಸರಕಾರಗಳು ಅನಗತ್ಯ ಗೊಂದಲ ಸೃಷ್ಟಿಸಿ ಜನರ ಸಮಸ್ಯೆಗಳನ್ನು ಮರೆ ಮಾಚುತ್ತಿವೆ. ಜನ ಪ್ರಶ್ನಿಸದಂತೆ ಧಾರ್ಮಿಕ ವಿಚಾರಗಳಲ್ಲಿ ಕಚ್ಚಾಡಿಕೊಂಡಿರಲಿ ಎಂದು ಸರಕಾರ ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *