ನವದೆಹಲಿ: “ನನ್ನ ಜನರಿಗೆ ಇನ್ನೂ ಅನೇಕ ದೇವಸ್ಥಾನಗಳಿಗೆ ಪ್ರವೇಶಿಸಲು ಅನುಮತಿಯಿಲ್ಲ”. ಹೀಗಿರುವಾಗ ನಾನು ಆಯೋಧ್ಯೆಗೆ ಹೋದರೆ ಬಿಜೆಪಿ ಹಾಗೂ ಸಂಘಪರಿವಾರದವರು ಸಹಿಸಿಕೊಳ್ಳುವರೇ?” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಪ್ರಶ್ನಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ‘ಐಡಿಯಾ ಎಕ್ಸ್ ಚೇಂಜ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಮತ್ತು ಹೊಸ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಕೋವಿಂದ್ ಅವರಿಗೆ ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಲು ಬಿಜೆಪಿ ಹಾಗೂ ಸಂಘಪರಿವಾರ ಅವಕಾಶ ನೀಡಿಲ್ಲ. ದೇಶದಾದ್ಯಂತ ಪರಿಶಿಷ್ಟ ಜಾತಿಗಳು ಇನ್ನೂ ತಾರತಮ್ಯವನ್ನು ಎದುರಿಸುತ್ತಿವೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರಣ’ಕ್ಕೆ ಅವಮಾನಿಸಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭವೆಂದ ಮಲ್ಲಿಕಾರ್ಜುನ ಖರ್ಗೆ
“ನನ್ನ ಜನರಿಗೆ ಇಂದಿಗೂ ಎಲ್ಲಾ ದೇವಾಲಯಗಳಲ್ಲಿ ಪ್ರವೇಶವಿಲ್ಲ. ರಾಮ ಮಂದಿರ ಬಿಡಿ, ನೀವು ಎಲ್ಲಿಗೆ ಹೋದರೂ, ಪ್ರವೇಶಕ್ಕಾಗಿ ಹೋರಾಟ ಮಾಡಬೇಕು. ಹಳ್ಳಿಯಲ್ಲಿ ಸಣ್ಣ ದೇವಾಲಯಗಳಿಗೂ ಅಲ್ಲಿನ ಪ್ರಬಲ ಜಾತಿಯವರು ಅನುಮತಿಸುವುದಿಲ್ಲ. ಕುಡಿಯುವ ನೀರಿಗೆ ಅವಕಾಶ ನೀಡುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ. ಕುದುರೆ ಮೇಲೆ ಮೆರವಣಿಗೆ ಹೋಗುವ ಮದು ಮಗನನ್ನು ಸಹ ನೀವು (ಬಿಜೆಪಿ-ಆರ್‌ಎಸ್‌ಎಸ್) ಸಹಿಸುವುದಿಲ್ಲ. ಜನರು ಅವರನ್ನು ಎಳೆದುಕೊಂಡು ಹೊಡೆಯುತ್ತಾರೆ. ದಲಿತರು ಮೀಸೆ ಬಿಟ್ಟರೆ ಸಹಿಸುವುದಿಲ್ಲ. ನಾನು ರಾಮ ಮಂದಿರಕ್ಕೆ ಹೋಗಿದ್ದರೆ, ಅವರು (ಮೋದಿ-ಬಿಜೆಪಿ) ಸಹಿಸಿಕೊಳ್ಳುತ್ತಿದ್ದರೇ? ಎಂದು ಖರ್ಗೆ ಕೇಳಿದ್ದಾರೆ.
ಕಾಂಗ್ರೆಸ್ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಥವಾ ಬಿಡುವುದು ಅದು ವೈಯುಕ್ತಿಕ ನಂಬಿಕೆ. ಯಾರು, ಯಾವಾಗ ಬೇಕಾದರು ಅಲ್ಲಿಗೆ ಹೋಗಬಹುದು. ಮೋದಿ ಪೂಜಾರಿಯಲ್ಲ. ರಾಮ ವಿಗ್ರಹ ಪ್ರತಿಷ್ಠಾಪಿಸುವಲ್ಲಿ ಅವರೇಕೆ ಮುಂದಾಳತ್ವ ವಹಿಸಬೇಕು? ಅವರು ಅದನ್ನು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಮಾಡಿದ್ದಾರೆ. ದೇವಾಲಯದ ಮೂರನೇ ಒಂದು ಭಾಗ ಇನ್ನೂ ಪೂರ್ಣಗೊಂಡಿಲ್ಲ. ಇದು ರಾಜಕೀಯ ಕಾರ್ಯವೇ ಅಥವಾ ಧಾರ್ಮಿಕ ಕಾರ್ಯವೇ? ರಾಜಕೀಯದೊಂದಿಗೆ ಧರ್ಮವನ್ನು ಏಕೆ ಬೆರೆಸುತ್ತಿದ್ದೀರಿ? ರಾಜಕೀಯ ಬಲವಂತದ ಕಾರಣದಿಂದ ಕಾಂಗ್ರೆಸ್ ರಾಮ ಮಂದಿರದ ಶಂಕುಸ್ಥಾಪನೆಯಿಂದ ದೂರ ಉಳಿದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಎನ್‌ಡಿಎ 400 ಸೀಟ್ ಪಡೆಯಲಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖರ್ಗೆ, “ಜನರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಹಾಗಾಗಿ, ಮೂರನೇ ಬಾರಿಯ ಕನಸು ಈಡೇರುವುದಿಲ್ಲ” ಎಂದಿದ್ದಾರೆ. ಈಗಲೇ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ.
ಇದನ್ನೂ ನೋಡಿ: ದ್ವೇಷ ಬಿಟ್ಟು ದೇಶ ಕಟ್ಟಿ – ಡಾ ಹಂಸಲೇಖ Janashakthi Media