ಪೀರ್ ಬಾಷಾ
ಸಾಹಿತ್ಯ ಸಮ್ಮೇಳನದಲ್ಲಿ 13 ಜನ ಮುಸ್ಲಿಮರಿಗೆ ಅವಕಾಶ ನೀಡಿದ್ದಾರಂತೆ ಮಹೇಶ್ ಜೋಶಿಯವರು. ತಲೆ ಎಣಿಸುವ ಕೆಲಸ ಇವರಿಗೆ ಚೆನ್ನಾಗಿಯೇ ಗೊತ್ತಿರುವಂತಿದೆ. ಸಮ್ಮೇಳನದ ಗೋಷ್ಠಿಗಳಲ್ಲಿ ಮುಸ್ಲಿಂ ಲೇಖಕರಿಲ್ಲ ಎಂದು ಪ್ರಶ್ನಿಸಿದರೆ ನಮ್ಮ ನಡುವೆ ಇಲ್ಲದ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರ ಹಾಕಿದ್ದೇವೆ, ವೇದಿಕೆಗೆ ಶರೀಫರ ಹೆಸರಿಟ್ಟಿದ್ದೇವೆ ಎಂದಿದ್ದಾರೆ. ಇಷ್ಟು ಹೇಳಿದ್ದರೂ ಪರವಾಗಿರಲಿಲ್ಲ. ಮುಂದುವರಿದು ಅವರು ʻʻಕನ್ನಡ ರಥ’’ ತಯಾರಿಸಿದವರು ಷಹಜಹಾನ್ ಮುದಕವಿ, ಮತ್ತು ರಾಜ್ಯದಾದ್ಯಂತ ರಥವನ್ನು ಮುನ್ನಡೆಸುತ್ತಿರುವವರು ನಬಿಸಾಬ್ ಕುಷ್ಠಗಿ ಇವರೆಲ್ಲ ಮುಸ್ಲಿಮರಲ್ಲವೇ ಎಂದು ಮರು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಸಾಹಿತ್ಯ ಸಮ್ಮೇಳನದಲ್ಲಿ ತಾರತಮ್ಯ : ಕವಿಗೋಷ್ಠಿಯಿಂದ ಹಿಂದೆ ಸರಿದ ಕವಿಗಳು
ಮಹೇಶ್ ಜೋಶಿಯವರ ಈ ಬಗೆಯ ಪ್ರತಿಕ್ರಿಯೆಯ ಹಿಂದೆ ಇರುವ ಕುಹಕ ಮತ್ತು ವ್ಯಂಗ್ಯಗಳು ಇನ್ನಷ್ಟು ಅವಮಾನ ಮಾಡುವಂಥದ್ದಾಗಿವೆ. ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯವಿಲ್ಲ ಎಂದು ಕೇಳಿದರೆ, ಕಾರಿನ ಡ್ರೈವರ್ ಮುಸ್ಲಿಂ ಎಂದು ಹೇಳುತ್ತಿರುವ ಇವರು ಉದ್ದೇಶ ಪೂರ್ವಕವಾಗಿ ಮುಸ್ಲಿಂ ಲೇಖಕರನ್ನು ಗೇಲಿ ಮಾಡುವಂತಿದೆ. ಮುಸ್ಲಿಮರು ರಥ ತಯಾರಿಸಲು ಅಥವಾ ಇವರ ರಥಗಳ ಡ್ರೈವರ್ ಆಗಿರಲು ಮಾತ್ರ ಯೋಗ್ಯರು ಎಂದು ತಮಾಷೆ ಮಾಡಿದಂತೆ ಕಾಣಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ.)ದಂತಹ ಸಂಸ್ಥೆಯ ಅಧ್ಯಕ್ಷನಾಗಿರಲು ಯೋಗ್ಯತೆ ಇಲ್ಲದ ಮನುಷ್ಯ ಮಾತ್ರ ಇಂತಹ ಅಸಂಬದ್ಧ ಉದಾಹರಣೆಗಳನ್ನು ನೀಡಬಲ್ಲ. ಕನ್ನಡ ರಥ ತಯಾರಿಸುವುದು, ಮುನ್ನಡೆಸುವುದು ಖಂಡಿತ ಗೌರವದ ಹೆಮ್ಮೆಯ ಕೆಲಸಗಳೆ ಅಲ್ಲವೆಂದವರಾರು? ರಾಮರಥಯಾತ್ರೆಯ ಸಾರಥಿಯಾಗಿದ್ದ ಅದ್ವಾನಿಯವರ ಕಾರಿನ ಚಾಲಕನೂ ಮುಸ್ಲಿಮನೇ ಆಗಿದ್ದ ಎಂಬುದೂ ಗೊತ್ತಿದೆ.
ಇದೇ ಹುಮ್ಮಸ್ಸಿನಲ್ಲಿ ಮುಂದುವರಿದ ಜೋಶಿಯವರು, ಮುಸ್ಲಿಂ ಲೇಖಕರನ್ನು ಹೊರಗಿಟ್ಟ ಬಗ್ಗೆ ಗಂಭೀರವಾಗಿ ಚರ್ಚೆ ಹುಟ್ಟುಹಾಕಿ ಪ್ರತಿರೋಧ ಸಮ್ಮೇಳನವಾಗುವಲ್ಲಿ ಪ್ರೇರಣೆ ನೀಡಿದ ಪುರುಷೋತ್ತಮ ಬಿಳಿಮಲೆಯವರನ್ನು ತೇಜೋವಧೆ ಮಾಡಲು ಹುಟ್ಟುಹಾಕಿರುವ ಪದ “ಪೆಂಡಾಲು”. ಭಲೇ! ದೆಹಲಿಯಲ್ಲಿ ದೀರ್ಘಕಾಲದಿಂದ ವಾಸಿಸಿರುವ ಬಿಳಿಮಲೆಯವರು “ಮುಸ್ಲಿಂ ವ್ಯಾಪಾರಿಗೆ ಪೆಂಡಾಲು” ಹಾಕುವ ವ್ಯವಹಾರ ನೀಡಲು ಶಿಫಾರಸ್ಸು ಮಾಡಿದ್ದರಂತೆ. ಇಂತಹ ಚಿಲ್ಲರೆ ಮಾತುಗಳಿಗೆ ಯೋಗ್ಯನಾದ ವ್ಯಕ್ತಿಯೊಬ್ಬ ಕ.ಸಾ.ಪ.ದಂತಹ ಅಧ್ಯಕ್ಷ ಸ್ಥಾನದಲ್ಲಿರುವಂತಾಯಿತಲ್ಲ ಎಂದು ವಿಷಾದಿಸಬೇಕಷ್ಟೆ. ಸಾಹಿತ್ಯಕ ವಾಗ್ವಾದವೊಂದು ಹುಟ್ಟಬೇಕಿದ್ದ ಸಾಂಸ್ಕೃತಿಕ ಸಂದರ್ಭದಲ್ಲಿ ಈ ಜೋಶಿಯವರ ಆರೋಪದ ಭಾಷೆ ಹೇಸಿಗೆ ಹುಟ್ಟಿಸುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಒದಗಿದ ದುರಂತಕ್ಕೆ ಜೋಶಿಯವರನ್ನು ಸಾಕ್ಷಿಯಾಗಿಸುತ್ತದೆ.
ಇದನ್ನು ಓದಿ: ಪೆಂಡಾಲ್ ಹೇಳಿಕೆ : ಸಾಕ್ಷಿ ನೀಡುವಂತೆ ಸವಾಲೆಸೆದ ಬಿಳಿಮಲೆ
ಮುಸ್ಲಿಮರನ್ನು ಹೇಗೆಲ್ಲ ಬಳಸಿಕೊಳ್ಳಬಹುದೆಂಬ ಜೋಶಿಯಂಥವರ ಕುಶಲತನ ಅರ್ಥವಾಗಲಾರದ್ದೇನಲ್ಲ. ಮುಸ್ಲಿಂ ಸಾಹಿತಿಗಳನ್ನು ಕುರಿತ ಚರ್ಚೆಯ ನಡುವೆ ಪೆಂಡಾಲು ಹಾಕುವವ, ರಥ ತಯಾರಕ, ರಥ/ಕಾರಿನ ಚಾಲಕ ಇಂತಹ ಉದಾಹರಣೆ ನೀಡುತ್ತಿರುವ ಜೋಶಿಯವರಿಗೆ ಕನ್ನಡ ಸಾಹಿತ್ಯ ಪರಂಪರೆಯ ಗಂಧವೂ ಗೊತ್ತಿಲ್ಲ ಎನ್ನುವುದಂತೂ ಸತ್ಯ.
ತಮ್ಮ ಸಮರ್ಥನೆಯ ಮುಂದುವರಿಕೆಯಲ್ಲಿ ಇವರು ಗೋಷ್ಠಿಗಳ ನಿರ್ವಹಣೆ, ನಿರೂಪಣೆ, ಸ್ವಾಗತ, ವಂದನಾರ್ಪಣೆಗಳನ್ನು ಮಾಡಲಿರುವವರ ಹೆಸರುಗಳನ್ನು ಹೇಳಿ “ನೋಡಿ, ಇವರೆಲ್ಲ ಮುಸ್ಲಿಮರಲ್ಲವೇ” ಎಂಬಂತೆ ತೋರಿಸಿದ್ದಾರೆ. ಮತ್ತದೇ ಬುದ್ಧಿಯ ಪ್ರದರ್ಶನ!
ಜೋಶಿಯವರು ಪರಿಷತ್ತಿನ ಅಧ್ಯಕ್ಷರು. ಆದರೆ ಅಧ್ಯಕ್ಷರು ಪರಿಷತ್ತಿನ ಸರ್ವಾಧಿಕಾರಿಗಳಲ್ಲ. ನನ್ನ ಪ್ರಶ್ನೆಯಿರುವುದು, ಇಂತಹ ಈ ಬಾಲಿಶ ವ್ಯಕ್ತಿಯನ್ನು ನಿರ್ಣಾಯಕ ಸ್ಥಾನದಲ್ಲಿ ಕೂಡಿಸಿ ಈ ಬಗೆಯ ಅಪದ್ಧಗಳನ್ನು ಮಾಡಲು ಬಿಟ್ಟು ಕೈಕಟ್ಟಿಕೊಂಡು ನಿಂತಿದ್ದಾರಲ್ಲ ಪದಾಧಿಕಾರಿಗಳೆಂಬುವವರು ಇವರಿಗಾದರೂ ಏನಾಗಿದೆ? ಈ ಸಮ್ಮೇಳನದ ಗೋಷ್ಠಿಗಳನ್ನು ಆಯೋಜಿಸಿರುವ ಮಹಾನುಭಾವರಾದರೂ ಯಾರು? ಅವರುಗಳಿಗೆ ನಿಜಕ್ಕೂ ಯಾರನ್ನು ಕರೆಯಬಹುದೆಂದು ತಿಳಿದಿಲ್ಲವೇ ಅಥವಾ ಇವರ ತಿಳಿವಳಿಕೆಯನ್ನೂ ಕಾಣದ ಯಾಜಮಾನರು ಮೂಗುದಾಣ ಪೋಣಿಸಿ ನಿಯಂತ್ರಿಸಿದರೆ?
ಕತ್ತೆಬಾಲ! ಮೇಳ, ಸಮ್ಮೇಳನಗಳ ಗೋಷ್ಟಿಗಳಿಂದ ಒಬ್ಬ ನಿಜವಾದ ಸಾಹಿತಿಗೆ ಆಗಬೇಕಾದ್ದೇನಿಲ್ಲ. ಆದರೆ ಪ್ರತಿಭಾಶಾಲಿ, ವಿದ್ವಾಂಸರನ್ನು ಹೊರಗಿಟ್ಟ ಸಮ್ಮೇಳನ ಅದೊಂದು ಆಡಂಬೋಲವಷ್ಟೆ. ಬುದ್ಧಿಜೀವಿಗಳೆಂದರೆ ತಮಾಷೆಯ ವಸ್ತುಗಳಾಗಿ ಹೋದ ಸಮಾಜದಲ್ಲಿ, ಸಾಹಿತ್ಯ ಸಮ್ಮೇಳನಗಳು ಎಂತೆಂಥ ಮಹಾನುಭಾವರಿಂದ ತುಂಬಿ ತುಳುಕ ಬಲ್ಲವು ಎಂಬುದನ್ನು ಕಂಡಿದ್ದೇವೆ. ಆದರೆ, ಹೀಗೆ ಆಗಬಾರದು, ಸಮ್ಮೇಳನ ಗೋಷ್ಠಿಗಳೆಂಬುದಕ್ಕೆ ಘನತೆ ಇರಬೇಕು ಎಂದು ಬಯಸಿದಾಗ ಸಾತ್ವಿಕವಾದ ಸಿಟ್ಟು ಹೊರಸಿಡಿಯುತ್ತದೆ. ಇದನ್ನೇ ಪ್ರತಿರೋಧದ ಸಮ್ಮೇಳನ ಎನ್ನುವುದು. ಹೊಂದಿಕೊಂಡು ಕೊಟ್ಟಷ್ಟು ಉಂಡು ಬದುಕಬೇಕು ಎನ್ನುವ ಜಾಣರಂತೂ ಇದ್ದೇ ಇರುತ್ತಾರೆ, ಕರೆದರೆ ಅಲ್ಲೂ ಕರೆದಾಗ ಇಲ್ಲೂ.
ಇದನ್ನು ಓದಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ
ಮುಸ್ಲಿಂ ಸಾಹಿತಿಗಳ ವಿಷಯ ಬಂದಾಗ ರಥಚಾಲಕ, ರಥ ನಿರ್ಮಾಪಕ, ಪೆಂಡಾಲು ಹಾಕುವವ, ನಿರೂಪಣೆ ವಂದನಾರ್ಪಣೆಗಳನ್ನು ತೋರಿಸುವ ಜಾಣ ಜೋಶಿಗಳು ನೆನಪಿಟ್ಟುಕೊಳ್ಳಬೇಕು. ಹೌದು ಮುಸ್ಲಿಮರು ಬರೀ ಡ್ರೈವರ್ರು, ಕ್ಲೀನರ್ರು, ಪೆಂಡಾಲು ಗ್ಯಾರೇಜು ಮಾತ್ರವಲ್ಲ…., ಕರೀಂಖಾನ್, ನಿಸಾರ್ ಅಹಮ್ಮದ್ ರಿಂದ ಹಿಡಿದು ಫಾತಿಮಾ, ಚಾಂದ್ ಪಾಶಾ ತನಕ ಅಸಂಖ್ಯ ಹೆಸರುಗಳಿವೆ. ಅವನ್ನೆಲ್ಲಾ ಹೇಳಿಕೊಳ್ಳಬೇಕಿಲ್ಲ. ಆದರೆ ಇಷ್ಟಂತೂ ಹೇಳುತ್ತೇನೆ. ಮುಸ್ಲಿಮರನ್ನು ಪೆಂಡಾಲು, ಡ್ರೈವರು ಇತ್ಯಾದಿ ಚಾಕರಿ ಕೆಲಸಗಳಲ್ಲಿ ಮಾತ್ರ ಫಿಕ್ಸ್ ಮಾಡುವ ನಿಮ್ಮ ತಂತ್ರ ಅರ್ಥವಾಗದ್ದೇನಲ್ಲ. ಇದಕ್ಕೆಲ್ಲ ಉತ್ತರ ಹೇಳಿಕೊಳ್ಳಬೇಕಿಲ್ಲ.
ಸಾಹಿತ್ಯವೋ, ಕಲೆಯೋ ಇದಕ್ಕೆ ಯಾರೂ ದೊಡ್ಡಪ್ಪಂದಿರಿಲ್ಲ. ಯಾರ ದೊಣ್ಣೆ ನಾಯಕನ ಹಂಗು ಅಪ್ಪಣೆಗಳು ಬೇಕಿಲ್ಲ. ಅಷ್ಟಕ್ಕೂ ಸಮ್ಮೇಳನದ ಗೋಷ್ಟಿಗಳಿಂದ ಮುಸ್ಲಿಂ ಲೇಖಕರನ್ನು ಹೊರಗಿಡಲಾಗಿದೆ ಎಂದು ಹೇಳುತ್ತಿದ್ದೇವೆ ಹೊರತು “ಕೊಡಿ” ಎಂದು ಕೇಳುತ್ತಿಲ್ಲ. ನೆನಪಿರಲಿ. ಕ.ಸಾ.ಪ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನಲಾಗಿತ್ತು. ಹಾಗೆಂದು ಪ್ರಶ್ನಿಸಲಾಯ್ತು. ಒಂದು ಸಮುದಾಯದ ಪ್ರಾತಿನಿಧಿತ್ವವನ್ನೇ ಹೊರಗಿಟ್ಟ ಬಳಿಕ ಅದು ಯಾವ ಅರ್ಥದಿಂದಲೂ ಸಮಗ್ರ ಕನ್ನಡಿಗರ ಸಂಸ್ಥೆಯಾಗಲಾರದು.
ನಮಗೆ ವಿಷಾದವಿರುವುದು, ಇಂತಹ ಸಂಸ್ಥೆಯೊಂದು ಈ ರೀತಿಯಲ್ಲಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆಯಷ್ಟೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ