ಮೂರುಕಣ್ಣು ಗುಡ್ಡ: ಮೀಸಲು ಅರಣ್ಯ ಅತಿಕ್ರಮಣ ತೆರವಿಗೆ ಕ್ರಮ- ಏಳು ಗ್ರಾಮಸ್ಥರಲ್ಲಿ ಆತಂಕ

ಸಕಲೇಶಪುರ: ಮಲೆನಾಡಿನ ಮೂರುಕಣ್ಣುಗುಡ್ಡ ಸುತ್ತಲಿನ ಮಿಸಲು ಅರಣ್ಯ ಪ್ರದೇಶ ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಮಂದಾಗಿದೆ. ಇದರಿಂದ ಸುತ್ತಮುತ್ತಲಿನ 7 ಗ್ರಾಮಸ್ಥರಿಗೆ ಆತಂಕ ಎದುರಾಗಿದೆ. ತಾಲೂಕಿನ ಹಾನುಬಾಳ್ ಹೋಬಳಿಯಲ್ಲಿನ ಮೂರುಕಣ್ಣು ಗುಡ್ಡ ಸುತ್ತಮುತ್ತ ಶೋಲ ಕಾಡು ರಕ್ಷಣೆಗಾಗಿ ಅರಣ್ಯ ಭೂಮಿ ಒತ್ತುವರಿ ತಡೆಯಲು 1920ರಲ್ಲಿ ಬ್ರಿಟೀಷರು ಸರ್ವೆ ನಡೆಸಿ ಅಧಿಸೂಚನೆ ಜಾರಿಗೆ ತಂದಿದ್ದರು. ಹಳೆಯ ರಕ್ಷಿತಾ ಅರಣ್ಯ ಘೊಷಣೆ ಅಧಿಸೂಚನೆಯನ್ನು ಜಾರಿಗೆ ತರಲು ಇದೀಗ ಅರಣ್ಯ ಇಲಾಖೆ ಮುಂದಾಗಿದೆ.

ತೆರವಿಗೆ ಕಾರಣವೇನು

ಮೂರುಕಣ್ಣು ಗುಡ್ಡದ ಸುತ್ತಲಿನ ಅಚ್ಚನಹಳ್ಳಿ, ನಡಹಳ್ಳಿ, ಕಾಡುಮನೆ, ಮಂಜನಹಳ್ಳಿ ಎಸ್ಟೇಟ್, ಅಗನಿ, ಜಂಭರಡಿ ಸೇರಿ 7  ಗ್ರಾಮಗಳಲ್ಲಿ ಒಟ್ಟು 7938 ಎಕರೆಯಷ್ಟು ಭೂಮಿ, ರಕ್ಷಿತಾ ಅರಣ್ಯಕ್ಕೆ ಒಳಪಡಲಿದೆ. ಇದರಲ್ಲಿ 2 ಸಾವಿರ ಎಕರೆಗಿಂತ ಹೆಚ್ಚು ಭೂಮಿ ಒತ್ತುವರಿಯಾಗಿದೆ ಎಂಬುದು ಅರಣ್ಯ ಇಲಾಖೆಯ  ಆರೋಪವಾಗಿದೆ. ಇದರಲ್ಲಿ ಬಹುತೇಕ ಪ್ರದೇಶ ಕಾಫಿ ತೋಟಗಳಾಗಿ ಪರಿವರ್ತನೆಯಾಗಿದೆ. ಇನ್ನೂ ಕೆಲವರು ಪಾಳು ಬಿಟ್ಟಿದ್ದಾರೆ. ಕಾಡಂಚಿನಲ್ಲಿರುವ ಈ ಪ್ರದೇಶದಲ್ಲಿ ಅಧಿಕೃತ ದಾಖಲೆಗಿಂತ ಹೆಚ್ಚುವರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವುದೇ ಅಧಿಕವಾಗಿದೆ.

ಈ ಸಂಬಂಧ ಕೆಲ ತಿಂಗಳಿಂದ ಅರಣ್ಯ ಇಲಾಖೆ ನಡೆಸಿದ್ದ ಸರ್ವೆಕಾರ್ಯ, ಬಹುತೇಕ ಮುಗಿದಿದ್ದು ತೆರವು ಕಾರ್ಯ ಮಾತ್ರ ಬಾಕಿ ಇದೆ. ಅತಿಕ್ರಮಿಸಿಕೊಂಡಿರುವ ಕಾಫಿ ತೋಟದಲ್ಲಿ ಯಾವುದೇ ಮರ ಕಟಾವು ಇನ್ನಿತರೆ ಚಟುವಟಿಕೆ ನಡೆಸುವಂತಿಲ್ಲ. ಮಾಡಿದವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ.

ನೂರಾರು ಕುಟುಂಬಗಳಲ್ಲಿ ಆತಂಕ

ಆದರೆ ಸರ್ಕಾರದ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಇದೇ ಮಿಸಲು ಅರಣ್ಯ ಪ್ರದೇಶದಲ್ಲೇ ಅನುಷ್ಠಾನಗೊಳ್ಳುತ್ತಿದ್ದು, ಒಂದು ಚೆಕ್ ಡ್ಯಾಮ್ ಸಹ ಬರಲಿದೆ. ಆದರೂ ಒತ್ತುವರಿ ತೆರವಿಗೆ ಮುಂದಾಗಿರುವ ಅರಣ್ಯ ಇಲಾಖೆಯ ಈ ನಡೆ ಆರೇಳು ದಶಕಗಳ ಹಿಂದಿನಿಂದಲೂ ಇದೇ ಜಮೀನಿನಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡು ಬಂದಿರುವ ಕುಟುಂಬಗಳ ನಿದ್ದಗೆಡಿಸಿದೆ.

ತಜ್ಞರು ಹೇಳುವುದೇನು

ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ನೀರಿನ ಮೂಲವಾಗಿರುವ ಈ ಮೂರುಕಣ್ಣು ಗುಡ್ಡದ ಸುತ್ತಮುತ್ತ ಶೋಲಾ ಕಾಡು ನಾಶವಾಗಬಾರದು, ಮಂದಿನ ಪೀಳಿಗೆ ನೀರಿನ ಮೂಲವಾದ ಅರಣ್ಯ ಉಳಿಸುವ ಉದ್ದೇಶದಿಂದ ಅಂದಿನ ಬ್ರಿಟಿಷ್ ಆಡಳಿತ ಅಧಿಸೂಚನೆ ಜಾರಿ ಮಾಡಿತ್ತು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಕಬ್ಬಿನಾಲೆ, ಕಾಗಿನೆರೆ, ಶಿರಾಡಿಯಿಂದ ಚಾರ್ಮಾಡಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿಯೇ ಈ ಭೂ ಭಾಗ ಬರುವುದರಿಂದ ಇದರ ರಕ್ಷಣೆ  ಅತಿಮುಖ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕಂದಾಯ ಇಲಾಖೆ ಯಡವಟ್ಟು

ಬ್ರಿಟೀಷರ ಕಾಲದ ಈ ಅಧಿಸೂಚನೆಯನ್ನು ಮರೆಮಾಚಿ 1920ರ ನಂತರದ ವರ್ಷಗಳಲ್ಲಿ ಅಂದಿನ ಮೈಸೂರು ಸರ್ಕಾರದಿಂದ ಹಿಡಿದು ಇಲ್ಲಿಯವರೆಗೆ ಒಟ್ಟ 252 ಜನರಿಗೆ 1500 ಎಕರೆಗಿಂತ ಹೆಚ್ಚಿನ ಜಮೀನು ಮಂಜೂರಾಗಿದ್ದು, ಇದು ಅಕ್ರಮ ಎಂದು ಅರಣ್ಯ ಇಲಾಖೆ ದೂರುತ್ತಿದೆ. ಇತ್ತೀಚಿನ ವರ್ಷಗಳಲ್ಲೂ ಸಾಕಷ್ಟು ಜನರು ಈ ಭಾಗದಲ್ಲಿ ಜಮೀನು ಖರೀದಿಸಿದ್ದಾರೆ. ಇದೀಗ ಜಮೀನು ಜೊತೆ ಹಣವನ್ನೂ ಕಳೆದುಕೊಳ್ಳುವ ಭಯ ಮೂಡಿದೆ. ಹಿಂದೆ ಮಂಜೂರಾದ ಮೂಲ ವ್ಯಕ್ತಿಗಳಿಂದ ಹತ್ತಾರು ಜನರಿಗೆ ಜಮೀನು ಕೈ ಬದಲಾಗಿದೆ. ಇದರಲ್ಲಿ ಕೆಲವರು ಆಕ್ರಮವಾಗಿ ಖಾತೆ ಮಾಡಿಕೊಂಡಿರುವುದರಿಂದ ಅಂತಹ ಖಾತೆ ರದ್ದು ಮಾಡುವಂತೆ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ದೂರು ನೀಡಿದೆ.

ಈ ಭಾಗದಲ್ಲಿ 120 ಹೋಂ ಸ್ಟೇ ಹಾಗೂ 30 ಕ್ಕೂ ಹೆಚ್ಚು ರೇಸಾರ್ಟ್ ಇವೆ. ಇದರಿಂದ ಭೂಮಿ  ಬೆಲೆಯೂ ಅಧಿಕವಾಗಿತ್ತು, ಕೆಲ ಹೋಂ ಸ್ಟೇ ಹಾಗೂ ರೇಸಾರ್ಟ್‌ ಗಳಿಗೂ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ಕೆಲ ರೆಸಾರ್ಟ್ ಮಾಲೀಕರ ಮೇಲೆ ದೂರು ದಾಖಲಾಗಿದೆ. ಆದರೆ ಇತ್ತೀಚಿನ ಅರಣ್ಯ ಇಲಾಖೆ ನಿರ್ಧಾರದಿಂದ ಈ ಭಾಗದಲ್ಲಿ ಭೂಮಿ ಮಾರಾಟ ಹಾಗೂ ಪರಿವರ್ತನೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಬಗ್ಗೆ ಕಾಫಿ ಬೆಳೆಗಾರರ ಸಂಘ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಸಚಿವರಿಗೂ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

ಜಮೀನು ಕಳೆದುಕೊಳ್ಳುವ ಭೀತಿ

ಹಾನುಬಾಳ್ ಹೋಬಳಿಯ ಏಳು ಗ್ರಾಮಗಳ ನೂರಾರು ಕಾಫಿ ಬೆಳೆಗಾರರು ತಮ್ಮದಲ್ಲದ ತಪ್ಪಿಗೆ ಜಮೀನು ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಹಿಂದೆ ಮೂರುಕಣ್ಣು ಗುಡ್ಡ ರಕ್ಷಿತ ಅರಣ್ಯ ವ್ಯಾಪ್ತಿಗೆ ಈ ಗ್ರಾಮಗಳನ್ನು ಸೇರಿಸಿ ರಕ್ಷಿತಾ ಅರಣ್ಯವಾಗಿಸಿದ್ದರೂ, ಈ ದಾಖಲೆಗಳನ್ನು ಮುಚ್ಚಿಟ್ಟು ಕಂದಾಯ ಇಲಾಖೆ ಹಲವರಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದೆ. ಇದೀಗ ಅವರೇ ತೆರವಿಗೆ ಸಿದ್ಧತೆ ನಡೆಸಿದ್ದಾರೆ. ಯಾವುದೇ ಚಟುವಟಿಕೆ ಮಾಡುವಂತಿಲ್ಲ ಎಂದು ಸರ್ವೆ ಕಾರ್ಯ ನಡೆಸಿದ ನಂತರವೂ ತಮ್ಮ ತೋಟಗಳಲ್ಲಿ ಮರ ಕಟಾವು ಮಾಡಿದ ಬೆಳೆಗಾರರ ವಿರುದ್ಧ ಕಳೆದೊಂದು ತಿಂಗಳಿನಿಂದ 73 ಎಫ್‌ಐಆರ್ ದಾಖಲಿಸಲಾಗಿದೆ.

ಏಳು ಗ್ರಾಮಗಳ 252 ಬೆಳೆಗಾರರಿಗೆ 1500 ಎಕರೆಗೂ ಅಧಿಕ ಭೂಮಿಯನ್ನು ಕಂದಾಯ ಇಲಾಖೆ 1920ರ ಮಂಜೂರು ಮಾಡಿದೆ. ಆದರೆ ಮಂಜೂರಾತಿ ಪಡೆದವರಿಗಿಂತ ಅಕ್ರಮವಾಗಿ ಒತ್ತುವರಿ ಮಾಡಿರುವ ಜಮೀನೇ ಹೆಚ್ಚಿದ್ದು 10 ಎಕರೆ ಪಹಣಿ ಇದ್ದರೆ 50 ಎಕರೆಗೂ ಅಧಿಕ ಭೂಮಿ ಸಾಗುವಳಿ ಮಾಡುತ್ತಿರುವ ನೂರಾರು ಬೆಳೆಗಾರರಿಗೆ ಈಗ ಬರಿಗೈ ಆತಂಕ ಎದುರಾಗಿದೆ.

ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಈ ಸಮಸ್ಯೆ ಪರಿಹರಿಸಬೇಕು. ನಮ್ಮ ತಾತ ಮುತ್ತಾತರ ಕಾಲದಿಂದಲೂ ನಾವು ಇದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಏಕಾಏಕಿ ಅರಣ್ಯ ಇಲಾಖೆಯವರು ಸರ್ವೆ ಮಾಡಿ ಇದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳಿದರೆ ನಾವು ಎಲ್ಲಿಗೆ ಹೋಗಬೇಕು
– ಅನಿಲ್ ಕುಮಾರ್, ಚಿಮ್ಮಿಕೋಲು ಗ್ರಾಮಸ್ಥ

ನಮಗೆ ಬೆಳೆಗಾರರ ವಿರುದ್ಧ ಯಾವುದೇ ದ್ವೇಷ ಇಲ್ಲ. ರಕ್ಷಿತ ಅರಣ್ಯ ಪ್ರದೇಶವನ್ನು ನಾವು ಉಳಿಸಿ ಕಾಪಾಡಬೇಕಿದೆ. ಹಿಂದಿನ ಆದೇಶದಂತೆ ನಾವು ಕೆಲಸ ಮಾಡುತ್ತಿದ್ದೇವೆ. ರಕ್ಷಿತ ಅರಣ್ಯವನ್ನು ಅತಿಕ್ರಮಿಸುವುದು ಅಪರಾಧ
– ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 

ಸಕಲೇಶಪುರ ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಸಮಸ್ಯೆ ಮತ್ತು ಅರಣ್ಯ ಇಲಾಖೆ ಹಾಗು ಒತ್ತುವರಿ ರೈತರ ನಡುವೆ ಹಲವು ವರ್ಷಗಳಿಂದ ಸಮಸ್ಯೆಗಳಿವೆ. ಹಲವು ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಬಡ ರೈತರು ಸಾಗುವಳಿ‌ ಮಾಡುತ್ತಿರುವ ಭೂಮಿಯ ಸಕ್ರಮಕ್ಕಾಗಿ ಸರ್ಕಾರದ ಮುಂದೆ ಅಧಿಕೃತ ಅರ್ಜಿಗಳನ್ನು ಸಲ್ಲಿಸಿ ಭೂ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಇನ್ನೂ ಕೆಲವರಿಗೆ ಅದೇ ಪ್ರದೇಶಗಳಲ್ಲಿ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನೂ ವಿತರಿಸಲಾಗಿದೆ. ಈಗಲೂ ಬಡ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ಅರಣ್ಯ ಇಲಾಖೆಗೆ ಸೇರಬೇಕಾದದ್ದಾ, ಅಥವಾ ಕಂದಾಯ ಇಲಾಖೆಗೆ ಸೇರಬೇಕಾದದ್ದಾ ಎಂಬ ಪ್ರಶ್ನೆ ಇನ್ನೂ ಇತ್ಯರ್ಥವಾಗಿದೆ ಉಳಿದಿದೆ.

ಇಷ್ಟೆಲ್ಲದರ ನಡುವೆಯೂ ಅರಣ್ಯ ಇಲಾಖೆಯು ಪದೇ ಪದೇ ರೈತರಿಗೆ ನೋಟೀಸ್ ಜಾರಿ‌ಮಾಡಿ ತೆರವು ಗೊಳಿಸುವ ಬೆದರಿಕೆಯನ್ನು ಒಡ್ಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಕಂದಾಯ ಮತ್ತು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಅರ್ಹ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕಾದ ತುರ್ತು ಅಗತ್ಯವಿದೆ. ಎಚ್.ಆರ್.ನವೀನ್ ಕುಮಾರ್, ಜಿಲ್ಲಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ. ಹಾಸನ ಜಿಲ್ಲೆ

Donate Janashakthi Media

Leave a Reply

Your email address will not be published. Required fields are marked *