ಮುಂಬಯಿ: ನವಂಬರ್ 28 ಮುಂಬೈಯ ಐತಿಹಾಸಿಕ ಆಝಾದ್ ಮೈದಾನ್ ಇನ್ನೊಂದು ಮಹತ್ವದ ಘಟನೆಗೆ ಸಾಕ್ಷಿಯಾಯಿತು. ಮಹಾರಾಷ್ಟ್ರದ ಎಲ್ಲೆಡೆಗಳಿಂದ ಬಂದ ಸಾವಿರ-ಸಾವಿರ ರೈತರನ್ನು ಉದ್ದೇಶಿಸಿ ದೇಶದ ಎಲ್ಲೆಡೆಗಳಿಂದ ಬಂದ ರೈತ ಮುಖಂಡರು ಮಾತನಾಡಿದರು.
“ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಏಕೆಂದರೆ ಮೋದಿ ಸರಕಾರ ಎಂಎಸ್‍ಪಿ ಕುರಿತ ಕಾಯ್ದೆ, ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ವಾಪಸಾತಿ ಮತ್ತು ಮಂತ್ರಿ ಅಜಯ್ ಮಿಶ್ರ ರಾಜೀನಾಮೆ/ವಜಾದ ಆಗ್ರಹಗಳನ್ನು ಒಪ್ಪಿಕೊಂಡಿಲ್ಲ. ಅದು ಈಡೇರುವ ವರೆಗೆ ಏನೇ ಆಗಲಿ, ನಾವು ಪ್ರತಿಭಟಿಸುತ್ತಲೇ ಇರುತ್ತವೆ”- ಇದು ಅಲ್ಲಿ ನೆರೆದ ರೈತರ ದೃಢನಿರ್ಧಾರವಾಗಿತ್ತು.
ನವಂಬರ್ 28 ಮಹಾರಾಷ್ಟ್ರದ ಪ್ರಖ್ಯಾತ ಸಮಾಜ ಸುಧಾರಕ ಜ್ಯೋತಿಬಾ ಪುಲೆಯವರ ಮರಣ ವಾರ್ಷಿಕದ ದಿನ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಮಹಾರಾಷ್ಟ್ರದ ಶೇತ್ಕರಿ ಕಾಮ್ಗಾರ್ ಮೋರ್ಚಾ ಮತ್ತಿತರ ಸಂಘಟನೆಗಳು ಈ ಮಹಾಪಂಚಾಯತ್ ಏರ್ಪಡಿಸಲು ಈ ದಿನವನ್ನೇ ಆರಿಸಿಕೊಂಡರು. ಇದು ಭಾಗಶಃವಾದರೂ ಐತಿಹಾಸಿಕವಾದ ರೈತರ ಹೋರಾಟದ ವಿಜಯದ ಆಚರಣೆಯೊಂದಿಗೆ, ಈ ಶಾಂತಿಯುತ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ 700ಕ್ಕೂ ಹೆಚ್ಚು ರೈತರಿಗೆ ಶ್ರದ್ಧಾಂಜಲಿ ಸಭೆಯೂ ಆಗಿತ್ತು. ಲಖಿಂಪುರ ಖೇರಿಯಲ್ಲಿ ಕೇಂದ್ರ ಮಂತ್ರಿಯ ಕಾರುಗಳಿಗೆ ಬಲಿಯಾದ ರೈತರ ‘ಅಸ್ಥಿ ಕಲಶ’ಗಳೊಂದಿಗೆ ’ ಅಕ್ಟೋಬರ್ 27ರಂದು ಪುಣೆಯಿಂದ ಆರಂಭವಾಗಿದ್ದ ‘ಶಹೀದ್ ಕಲಶ್ ಯಾತ್ರಾ’ ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರದ 30 ಜಿಲ್ಲೆಗಳನ್ನು ಹಾದು ನವೆಂಬರ್ 28ರಂದು ಆಝಾದ್ ಮೈದಾನಿಗೆ ಬಂದಿತು. ನಂತರ ಹುತಾತ್ಮ ಚೌಕ್ ನಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಅದನ್ನು ಗೇಟ್ ವೇ ಆಫ್ ಇಂಡಿಯಾದ ಬಳಿ ಅರಬ್ಬೀ ಸಮುದ್ರದಲ್ಲಿ ವಿಸರ್ಜಿಸಲಾಯಿತು.
“ಮೋದಿ ಸರಕಾರ ದುರಹಂಕಾರಿ. ಆದರೆ ರೈತರು ಅವರಿಗೆ ಅವರ ಜಾಗ ತೋರಿಸಿದ್ದಾರೆ. ನಿಮ್ಮ ಸರ್ವಾಧೀಕಾರವನ್ನು ಇನ್ನು ಸಹಿಸುವುದಿಲ್ಲ ಎಂದು ಮುಂಬೈಯಲ್ಲಿ ರೈತರು ಅವರಿಗೆ ಮತ್ತು ಅವರ ಬಂಟ ಗೆಳೆಯರಿಗೆ ಹೇಳುತ್ತಿದ್ದಾರೆ. ನೀವು ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡುವುದಾಗಿ ಪ್ರಕಟಿಸುವಂತೆ ಮಾಡಿದ್ದೇವೆ; ಎಂಎಸ್‍ಪಿ ಖಾತ್ರಿಯ ಕಾಯ್ದೆಯನ್ನು ತರುವಂತೆಯೂ ಮಾಡುತ್ತೇವೆ, ವಿದ್ಯುತ್ ಮಸೂದೆಯನ್ನು ರದ್ದು ಮಾಡುವಂತೆಯೂ ಮತ್ತು ನಾಲ್ಕು ಕಾರ್ಮಿಕ-ವಿರೋಧಿ ಸಂಹಿತೆಗಳನ್ನು ಹಿಂತೆಗೆದುಕೊಳ್ಳುವಂತೆಯೂ ಮಾಡುತ್ತೇವೆ” ಎಂದು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ ಧವಳೆ ಸಾರಿದರು.
“ಅವರು ನಮ್ಮನ್ನು ಜಾತಿಗಳಲ್ಲಿ, ಪ್ರದೇಶಗಳಲ್ಲಿ ಹಂಚಿ ಮುರಿಯಲು ಪ್ರಯತ್ನಿಸಿದರು. ನಾವು ದೇಶ-ವಿರೋಧಿಗಳು ಮತ್ತು ಇನ್ನೇನೇನೋ ಎಂದು ಹಣೆಪಟ್ಟಿ ಹಚ್ಚಿದರು. ಕೊನೆಗೆ ಅವರೇ ಬಿಟ್ಟುಕೊಡಬೇಕಾಯಿತು. ಏಕೆಂದರೆ, ರೈತರು ಐಕ್ಯತೆಯಿಂದಿದ್ದರು, ಗುರಿಸಾಧನೆಗೆ ಧೈರ್ಯವಾಗಿ ಹೋರಾಡಿದರು. ವರ್ಷವಿಡೀ ನಿಮ್ಮ ಅದ್ಭುತ ಬೆಂಬಲಕ್ಕೆ ಉತ್ತರಪ್ರದೇಶ, ಹರ್ಯಾಣ, ಪಂಜಾಬಿನ ರೈತರು ಕೃತಜ್ಞರು. ಆದರೆ ಸಮರ ಇನ್ನೂ ಮುಗಿದಿಲ್ಲ, ಎಂಎಸ್‍ಪಿ ಆಗ್ರಹವನ್ನು ಕೂಡ ಒಪ್ಪಿಕೊಳ್ಳಬೇಕು ಎಂದು ಮೋದಿ ಸರಕಾರಕ್ಕೆ ಮನವಿ ಮಾಡುತ್ತೇನೆ, ಏಕೆಂದರೆ ನೀವು ಚುನಾವಣೆಯ ಮೊದಲು ಭರವಸೆ ನೀಡಿದ್ದೀರಿ” ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯ್ತ್ ಹೇಳಿದರು.
ರಾಜ್ಯಾದ್ಯಂತ ಕಾರ್ಮಿಕರೂ ಈ ಮಹಾಪಂಚಾಯತ್ ಗೆ ಬೆಂಬಲ ನೀಡಿದರು. ನಾಶಿಕ್ ನಿಂದ ಸಿಐಟಿಯು ಕಾರ್ಯಕರ್ತರ ಒಂದು ತಂಡ 101 ವಾಹನಗಳಲ್ಲಿ ಮುಂಬೈಗೆ ಬಂದಿತ್ತು. ಎನ್.ಎ.ಪಿ.ಎಂ. ನ ವಿವಿಧ ಘಟಕಗಳು ಈ ಮಹಾಪಂಚಾಯ್ತಿನಲ್ಲಿ ಭಾಗವಹಿಸಿದರು.
“ನಾವು ಭಯ, ಭೂಖ್, ಭ್ರಮೆಯಲ್ಲಿರಬೇಕೆಂದು ಅವರು ಬಯಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಸಿಲುಕಿದ ವ್ಯಕ್ತಿ ತನಗೆ ಹೇಳಿದನ್ನೆಲ್ಲ ಮಾಡುತ್ತಾರೆ. ಇದು ಫ್ಯಾಸಿಸ್ಟರ ವಿಧಾನ. ಆದರೆ ಈ ವಿಧಾನವನ್ನು ಅವಿರತ ಹೋರಾಟದಿಂದ ಸೋಲಿಸಬಹುದು ಎಂದು ದೇಶದ ರೈತರು ತೋರಿಸಿ ಕೊಟ್ಟಿದ್ದಾರೆ ಎಂಧು ಸರ್ವಹಾರಾ ಜನಾಂದೋಲನದ ಉಲ್ಕಾ ಮಹಾಜನ್ ಹೇಳಿದರು.
“ಮುಂಬೈಗೆ ದೊಡ್ಡ ಸಂಖ್ಯೆಯಲ್ಲಿ ಬಂದ ರೈತರನ್ನು ವಂದಿಸಿದ ಮಹಾರಾಷ್ಟ್ರ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಳೆ “ರೈತರೀಗ ಎಚ್ಚೆತ್ತಿದ್ದಾರೆ. ತಮ್ಮ ಶಕ್ತಿಯನ್ನು ಅರಿತಿದ್ದಾರೆ, ಗೆಲ್ಲುವ ವರೆಗೂ ಹೋರಾಡಲು ಸಿದ್ಧರಿದ್ದಾರೆ. ಈ ಚಳುವಳಿಯನ್ನು ಮುರಿಯುವ ಎಲ್ಲ ತಂತ್ರಗಳೂ ಕಳೆದ ಒಂದು ವರ್ಷದಲ್ಲಿ ವಿಫಲವಾಗಿರುವುದು ಮೋದಿ ಸರಕಾರಕ್ಕೆ ಗೊತ್ತಿರಬೇಕು.ಆದ್ದರಿಂದ ಎಲ್ಲ ಆರು ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಒಳ್ಳೆಯದು” ಎಂದು ಎಚ್ಚರಿಸಿದರು.
ಮಹಿಳೆಯರು ಈ ಮಹಾಪಂಚಾಯ್ತ್ ನಲ್ಲಿ ದೊಡ್ಡ ಸಂಖ‍್ಯೆಯಲ್ಲಿ ಭಾಗವಹಿಸಿದರು. “ಮಹಿಳೆಯರು ಯಾವುದೇ ಮನೆಯ ಬೆನ್ನೆಲುಬು. ಅವರು ಇಲ್ಲಿಗೆ ಪ್ರತಿಭಟನೆಯನ್ನು ಬೆಂಬಲಿಸಲು ಬಂದಿದ್ದಾರೆ. ಏಕೆಂದರೆ ರೈತರು ತಮಗೆ ವಿಶ್ವಾಸಘಾತವಾಗಿದೆ ಎಂದು ಭಾವಿಸುತ್ತಿದ್ದಾರೆ. ಅವರ ಬೆಳೆಗಳಿಗೆ ಸರಿಯಾದ ಬೆಲೆಗಳು ಸಿಗುತ್ತಿಲ್ಲ. ಬೆಳೆಸುವ ಖರ್ಚಿನ ಅರ್ಧದಷ್ಟೂ ಕೂಡ ಸಿಗುತ್ತಿಲ್ಲ. ಆದ್ದರಿಂದ ಎಂಎಸ್‍ಪಿ ಕಾಯ್ದೆ ಬೇಕಾಗಿದೆ” ಎಂದು ಅಲಿಬಾಗ್‍ನಿಂದ ಬಂದ ಸಯಾಲೀ ಪಾಟೀಲ್ ಹೇಳಿದರು.
ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಪ್ರಕಟಣೆಯೂ ಒಂಧು ಜುಮ್ಲಾ ಆಗಿರಬಹುದು. ಸಂಸತ್ತಿನಲ್ಲಿ ಅದನ್ನು ಹಿಂತೆಗೆದುಕೊಂಡರೇ ರೈತರು ಇದನ್ನು ನಂಬುವುದು ಎಂದು ಸಿಪಿಐ(ಎಂ)ನ ಮಾಜಿ ಶಾಸಕ ಜೆ ಪಿ ಗವಿತ್ ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಇತರ ಮುಖಂಡರಾದ ಡಾ.ದರ್ಶನ್ ಪಾಲ್, ಹನ್ನನ್ ಮೊಲ್ಲ, ಯುಧ್ದವೀರ್ ಸಿಂಗ್, ಅತುಲ್ ಕುಮಾರ ಅಂಜನ್, ಯೋಗೇಂಧ್ರ ಯಾದವ್, ಮೇಧಾ ಪಾಟ್ಕರ್, ಪ್ರತಿಭಾ ಶಿಂದೆ, ಬಿ.ವೆಂಖಟ್, ನರಸಯ್ಯ ಅದಂ ಮತ್ತಿತರೂ ರೈತರನ್ನುದ್ದೇಶಿಸಿ ಮಾತಾಡಿದರು.
ಈ ಮಹಾಪಂಚಾಯ್ತ್ ಗೆ ಎಡಪಕ್ಷಗಳಲ್ಲದೆ ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ, ಪಿಡಬ್ಲ್ಯುಪಿ ಮತ್ತು ಎಎಪಿ ರಾಜ್ಯ ಘಟಕಗಳು ಬೆಂಬಲ ನೀಡಿದವು.