ಹೊರ ಗುತ್ತಿಗೆ ನೇಮಕಾತಿ ಏಜೆನ್ಸಿ ಬದಲಾಗಿ ವಿವಿಧೋದ್ದೇಶ ಸಹಕಾರ ಸಂಘ

ಬೆಂಗಳುರು : ನೌಕರರಿಗೆ ಏಜೆನ್ಸಿಗಳಿಂದ ಹೊರ ಗುತ್ತಿಗೆ ನೇಮಕಾತಿಯಲ್ಲಿ ಆಗುತ್ತಿರುವ ಶೋಷಣೆ ತಪ್ಪಿಸಲು ಜಿಲ್ಲಾ ಮಟ್ಟದಲ್ಲೇ ವಿವಿಧೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸುಮಾರು ಎರಡೂವರೆ ಲಕ್ಷ ಹೊರ ಗುತ್ತಿಗೆ ನೌಕರರು ರಾಜ್ಯ ಸರ್ಕಾರದಲ್ಲೇ ಇದ್ದಾರೆ. ಡೇಟಾ ಎಂಟ್ರಿ ಆಪರೇಟರ್, ಲಿಫ್ಟ್ ಆಪರೇಟರ್, ಚಾಲಕರು, ಭದ್ರತೆ, ಡಿ. ಗ್ರೂಪ್ ನೌಕರರನ್ನು ಹೊರ ಗುತ್ತಿಗೆಯಲ್ಲಿ ನೇಮಕ ಮಾಡಲಾಗುತ್ತಿದೆ. ಏಜೆನ್ಸಿಗಳ ಮೂಲಕ ನೇಮಕವಾಗುವ ನೌಕರರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಅದನ್ನು ತಪ್ಪಿಸಬೇಕು ಎಂಬುದೇ ಕಾರ್ವಿುಕ ಇಲಾಖೆ ಉದ್ದೇಶವಾಗಿದೆ. ಅದಕ್ಕಾಗಿ ಕಾರ್ವಿುಕ ಇಲಾಖೆ ಈ ವ್ಯವಸ್ಥೆ ಜಾರಿಗೆ ಪ್ರಯತ್ನ ನಡೆಸಿದೆ.

ಜಿಲ್ಲಾ ಮಟ್ಟದಲ್ಲಿ ಹೊರ ಗುತ್ತಿಗೆ ನೌಕರರ ನೇಮಕ ಮಾಡುತ್ತಿರುವ ಖಾಸಗಿ ವ್ಯವಸ್ಥೆಗೆ ತಿಲಾಂಜಲಿ ಇಟ್ಟು ಸಹಕಾರಿ ವಲಯಕ್ಕೆ ಜವಾಬ್ದಾರಿ ನೀಡುವುದು ಸರ್ಕಾರದ ಆಶಯ. ಅದಕ್ಕಾಗಿ ಬೀದರ್ ಮಾದರಿ ಅನುಸರಿಸಲು ಮುಂದಾಗಿದೆ. ನೇಮಕಾತಿ ಏಜೆನ್ಸಿಗಳು, ಅಧಿಕಾರಿಗಳ ಅಕ್ರಮ ಕೂಟದಿಂದಾಗಿ ನೌಕರರ ಶೋಷಣೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನಿಯಮ ರೂಪಿಸಿದರೂ ಪ್ರಾಮಾಣಿಕವಾಗಿ ಜಾರಿಗೆ ಬಂದಿಲ್ಲ. ಆದ್ದರಿಂದಲೇ ಈಗ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುತ್ತಿದೆ.

ಇದನ್ನು ಓದಿ : ಬಿಹಾರದಲ್ಲಿ 1600 ಕೋಟಿಯ ವೆಚ್ಚದಲ್ಲಿ ನಿರ್ಮಾಣವಾಗುತಿದ್ದ ಸೇತುವೆ ಕುಸಿತ

ಸಂಘದಲ್ಲಿ ಯಾರ್ಯಾರು?: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ವಿುಕ ಸೇವೆಯ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲಾಗುತ್ತದೆ. ಅದರಲ್ಲಿ ಜಿಪಂ ಸಿಇಒ, ಬಾಲ ಕಾರ್ವಿುಕ ಅಧಿಕಾರಿ, ಜಿಲ್ಲಾ ರಿಜಿಸ್ಟ್ರಾರ್, ಕಾರ್ವಿುಕ ಅಧಿಕಾರಿ, ಆರು ಜನ ಚುನಾಯಿತ ಸದಸ್ಯರು ಇರುತ್ತಾರೆ. ವರ್ಷಕ್ಕೆ ಕನಿಷ್ಠ 4 ಸಭೆ ನಡೆಸಬೇಕಾಗಿರುವ ಈ ಸಂಘದ ಅವಧಿ ಐದು ವರ್ಷಗಳಾಗಿರುತ್ತದೆ. ಪ್ರತ್ಯೇಕ ಬೈಲಾ ಸಹ ಸಿದ್ಧಪಡಿಸಿದ್ದು, ಅದರ ಮೂಲಕ ಸರ್ಕಾರಿ, ಅರೆ ಸರ್ಕಾರಿ, ಸಹಕಾರಿ ಸಂಸ್ಥೆಗಳಿಗೆ ಬೇಕಾದ ಹೊರ ಗುತ್ತಿಗೆ ಸಿಬ್ಬಂದಿ ನೇಮಕಾತಿ ನಡೆಸಲಾಗುತ್ತದೆ.

ನೌಕರರಿಗೆ ಭಯ ಬೇಡ: ಈಗ ಕೆಲಸ ನಿರ್ವಹಿಸುತ್ತಿರುವ ಯಾವುದೇ ನೌಕರರಿಗೆ ಅನ್ಯಾಯವಾಗುವುದಿಲ್ಲ. ಅವ ರನ್ನು ಸಂಘಗಳ ಮೂಲಕವೇ ಮುಂದುವರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇತರ ಸೌಲಭ್ಯಗಳು: ಸಂಘ ಸಂಬಳ, ಪಿಎಫ್ ಮಾತ್ರ ನೀಡುವುದಿಲ್ಲ. ಕೌಶಲ ರಹಿತ ಸಿಬ್ಬಂದಿಗೆ ಕೌಶಲ ತರಬೇತಿ ನೀಡುವುದು, ಉಳಿತಾಯದಲ್ಲಿ ಸಾಲ ಸೌಲಭ್ಯ ಒದಗಿಸುವುದು, ನಿರುದ್ಯೋಗಕ್ಕೆ ಮುಕ್ತಿ ನೀಡಿ ನೌಕರರ ಜೀವನ ಮಟ್ಟ ಸುಧಾರಣೆಗೆ ಪ್ರಯತ್ನ ಮಾಡಲಿದೆ. ಹೆಚ್ಚುವರಿ ಅವಧಿ ಕೆಲಸ ಮಾಡಿದರೆ ಹೆಚ್ಚಿನ ಭತ್ಯೆ ಕೊಡಿಸಲು ಶ್ರಮಿಸಲಿದೆ.

ಪ್ರಾಯೋಗಿಕ ಜಾರಿ: ಹಣಕಾಸು ಇಲಾಖೆಯ ಆತಂಕದಿಂದ ಸದ್ಯ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಕಾರ್ವಿುಕ ಇಲಾಖೆ ಉದ್ದೇಶಿಸಿದೆ. ಬೀದರ್ ಬೈಲಾವನ್ನು ಎಲ್ಲ ಜಿಲ್ಲಾಧಿಕಾರಿಗಳಿಗೂ ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ. ಯಾವ ಜಿಲ್ಲಾಧಿಕಾರಿ ಸಂಘ ಸ್ಥಾಪನೆಗೆ ಮುಂದಾಗುತ್ತಾರೋ ಅಂತಹ ಮೂರು ಜಿಲ್ಲೆಗಳಲ್ಲಿ ತಕ್ಷಣ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ಆ ನಂತರ ಸಾಧಕ-ಬಾಧಕ ಗಮನಿಸಿ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.

ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೀದರ್ ವ್ಯವಸ್ಥೆ ತರುವು ದಕ್ಕೆ ಹಣಕಾಸು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅಕ್ರಮಗಳಾದರೆ ಎಂಬುದು ಆರ್ಥಿಕ ಇಲಾಖೆಯ ಆತಂಕ. ಆದರೆ ಕಾರ್ವಿುಕ ಇಲಾಖೆ ಮಾತ್ರ ವ್ಯವಸ್ಥೆ ಪಾರದರ್ಶಕವಾಗಿರುತ್ತದೆ ಎಂದು ಮನವೊಲಿಸಿದೆ.

ಬೀದರ್​ನಲ್ಲಿ ಯಶಸ್ವಿ: ಹೊರಗುತ್ತಿಗೆ ನೌಕರರ ನೇಮಕಕ್ಕೆ ಸಂಬಂಧಿಸಿದಂತೆ ಬೀದರ್​ನಲ್ಲಿ ಆರಂಭ ಮಾಡಿರುವ ವಿವಿದ್ಧೋದ್ದೇಶ ಸಹಕಾರ ಸಂಘ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹರ್ಷಗುಪ್ತ ಬೀದರ್ ಜಿಲ್ಲಾಧಿಕಾರಿಯಾಗಿದ್ದಾಗ 2008ರಲ್ಲಿ ಮಾಡಿದ ಪ್ರಯೋಗ ಈಗ ಎಲ್ಲೆಡೆ ಪ್ರಾರಂಭ ಮಾಡಲು ಪ್ರೇರಣೆಯಾಗಿದೆ. ಅಲ್ಲಿ ಸುಮಾರು 2,500 ನೌಕರರು ಈ ಸಂಘದ ಮೂಲಕ ನೇಮಕಾತಿಗೊಂಡಿದ್ದಾರೆ. ಸಕಾಲಕ್ಕೆ ಸಂಬಳ, ಪಿಎಫ್, ಇಎಸ್​ಐ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗುತ್ತಿಲ್ಲ. ಸಂಬಳ ನೇರವಾಗಿ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ. ನೌಕರರಿಗೆ ಶೋಷಣೆಯಾಗುತ್ತಿಲ್ಲ.

ಪ್ರತ್ಯೇಕ ಸಾಫ್ಟ್​ವೇರ್: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಕಾರ ಸಂಘ ಆರಂಭವಾದ ನಂತರ ಪ್ರತ್ಯೇಕ ಸಾಫ್ಟ್​ವೇರ್ ಸಿದ್ಧ ಪಡಿಸಲಾಗುತ್ತದೆ. ಅದರ ಮೂಲಕ ವೇತನದಿಂದ ಹಿಡಿದು ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತದೆ.

ಇದನ್ನು ನೋಡಿ : ಸಚಿವರ ಮನೆಗೆ ರೈತರ ಮುತ್ತಿಗೆ | ನಮ್ಮ ಭೂಮಿ ನಮಗೆ ಕೊಡಿ ರೈತರ ಆಗ್ರಹ

Donate Janashakthi Media

Leave a Reply

Your email address will not be published. Required fields are marked *