ಬೆಂಗಳೂರು: ಕಳೆದೆರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದ ಶಿಕ್ಷಣ ವ್ಯವಸ್ಥೆಯ ಮೇಲೆ ಈಗ ಮೂಲಭೂತವಾದ ಮತ್ತು ಕೋಮುವಾದದ ಕರಿ ನೆರಳು ಆವರಿಸಿದೆ. ಇದ್ದಕ್ಕಿದ್ದಂತೆ ಉಡುಪಿ ಸರಕಾರಿ ಪಿ.ಯು. ಕಾಲೇಜಿನಲ್ಲಿ ಹಿಜಾಬ್-ಶಿರ ವಸ್ತ್ರದ ವಿವಾದ ಎದ್ದಿದೆ. ಅದು ಮುಂದುವರೆದು ಸ್ವತಃ ಪ್ರಿನ್ಸಿಪಾಲರೇ ಖುದ್ದಾಗಿ ಗೇಟ್ ಬಂದ್ ಮಾಡಿ ಹಿಜಾಬ್ ಧರಿಸಿ ಬಂದ ಮುಸ್ಲಿಂ ಯುವತಿಯರನ್ನು ಒಳಗೆ ಬಾರದಂತೆ ತಡೆದಿರುವುದು ನಡದಿದೆ.
ಶಿಕ್ಷಣ ಸಂಸ್ಥೆಗಳನ್ನು ಮೂಲಭೂತವಾದಿ ಮತ್ತು ಕೋಮುವಾದಿ ಶಕ್ತಿಗಳ ಕಪಿಮುಷ್ಠಿಯಿಂದ ರಕ್ಷಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ), ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸಿದೆ.
ಹೇಳಿಕೆ ನೀಡಿರುವ ಎಐಡಿಡಬ್ಲ್ಯೂಎ ರಾಜ್ಯ ಅಧ್ಯಕ್ಷೆ ದೇವಿ ಅವರು, ಕರಾವಳಿಯಲ್ಲಿ ಪ್ರಾರಂಭವಾಗಿ ಈಗ ರಾಜ್ಯದ ಇತರೆಡೆ ಹಬ್ಬಲು ಪ್ರಯತ್ನಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿನ ವಸ್ತ್ರ ಸಂಹಿತೆಯ ವಿವಾದದಿಂದಾಗಿ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ ಮೇಲೆ ಪರಿಣಾಮ ಬೀರಿದೆ. ಹಿಜಾಬ್-ಶಿರವಸ್ತ್ರಗಳನ್ನು ತಮ್ಮ ಧಾರ್ಮಿಕ ನಂಬಿಕೆಯ ಕಾರಣದಿಂದ ಮುಸ್ಲಿಂ ಮಹಿಳೆಯರು ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿ ಧರಿಸುವುದು ಕರ್ನಾಟಕದಂತಹ ರಾಜ್ಯಗಳಲ್ಲಿ ಸಾಮಾನ್ಯ ಸಂಗತಿ. ಇದಕ್ಕೆ ವಿರೋಧವಾಗಿ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹೊದ್ದು ಬಂದು ಅನಗತ್ಯ ಕೋಮು ಭಾವನೆಯನ್ನು ಕೆರಳಿಸಲು ಪ್ರಯತ್ನಗಳನ್ನು ನಡೆಸುತ್ತಿರುವುದೂ ವರದಿಯಾಗುತ್ತಿದೆ. ಈ ಘಟನೆಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಮೂಲಭೂತವಾದಿ ಮತ್ತು ಕೋಮುವಾದೀ ಶಕ್ತಿಗಳು ಈ ತೆರನ ವಸ್ತ್ರ ವಿವಾದವನ್ನು ಆಗಾಗ ಕೆದಕಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುವುದು ಕರ್ನಾಟಕದಲ್ಲಿ ನಡೆಯುತ್ತಲೇ ಇದೆ. ಆದರೆ ಸರಕಾರಗಳು ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯದೇ ಪ್ರಕ್ಷುಬ್ದದ ಬೆಂಕಿಯಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೆಯಿಸಿಕೊಳ್ಳುವ ಕುಟಿಲತೆಯನ್ನು ಮೆರೆದಿವೆ. ತತ್ಪರಿಣಾಮವಾಗಿ ಪ್ರಚೋದಕ ಶಕ್ತಿಗಳ ಕುಮ್ಮಕ್ಕಿನಿಂದ ಈ ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುವ ಬದಲು ವಸ್ತ್ರ ಸಂಹಿತೆಯ ವಿವಾದವನ್ನಿಟ್ಟುಕೊಂಡು ಬೀದಿಯ ಮೇಲೆ ಇರುವಂತಾಗಿದೆ. ಮತ್ತು ಅದರ ನೇರ ದುಷ್ಪರಿಣಾಮ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಮೇಲಾಗುತ್ತಿದ್ದು ಅದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು ʻದೇಶದ ಸಂವಿಧಾನ ಪ್ರತಿಯೊಬ್ಬರ ಧಾರ್ಮಿಕ ಹಕ್ಕನ್ನು ಗೌರವಿಸಲು ಹೇಳುತ್ತದೆ. ಕಲಮು 25 ಇದನ್ನು ಸ್ಪಷ್ಟಪಡಿಸುತ್ತದೆ. ಹಾಗೆಯೇ ಕಲಮು 15(1) ಮತ್ತು 15(2) ಹುಟ್ಟಿದ ಸ್ಥಳ, ಧರ್ಮ, ಲಿಂಗ ಜಾತಿ ಮುಂತಾದ ಯಾವುದೇ ಕಾರಣಗಳಿಂದಾಗಿ ತಾರತಮ್ಯ ಮಾಡದಂತೆ ಮತ್ತು ಯಾರಿಗೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವನ್ನು ನಿರಾಕರಿಸಲಾಗದು ಎಂದಿದೆ. ಕಲಮು 21-ಎ ಶಿಕ್ಷಣದ ಹಕ್ಕನ್ನೂ ನೀಡುತ್ತದೆ. 29(2) ರಾಜ್ಯ ಸರಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಹಾಗೆಯೇ ಕಲಮು 21 ಎಲ್ಲರಿಗೂ ಘನತೆಯ ಬದುಕನ್ನು ಖಚಿತಪಡಿಸುತ್ತದೆ. ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಈ ಎಲ್ಲ ಹಕ್ಕುಗಳಿಂದ ವಂಚಿತರಾಗುತ್ತಾರೆ.
ಪ್ರಕರಣವೀಗ ಕರ್ನಾಟಕ ಹೈಕೋರ್ಟಿನ ಅಂಗಳದಲ್ಲಿದೆ. ಹಾಗಿದ್ದಾಗ್ಯೂ ಈ ಮಧ್ಯೆ ಕರ್ನಾಟಕ ಸರಕಾರವು 2014 ರಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸಮವಸ್ತ್ರದ ಕುರಿತು ಹೊರಡಿಸಲಾದ ಸರಕಾರದ ನಡವಳಿಯನ್ನು 05-02-2022 ರಂದು ಮತ್ತೆ ಹೊರಡಿಸಿ ಸಮವಸ್ತ್ರ ನೀತಿಯನ್ನು ಉಲ್ಲೇಖಿಸಿದೆ. ಆದರೆ ಇಡೀ ಶೈಕ್ಷಣಿಕ ವರ್ಷದಲ್ಲಿ ಈ ಬಗ್ಗೆ ಯಾವುದೇ ಸೂಚನೆ ಇಲ್ಲದೇ ಈಗ ಏಕಾಏಕಿ ವಿವಾದವನ್ನೂ ಎಬ್ಬಿಸಿ, ಸಮವಸ್ತ್ರ ನೀತಿಯನ್ನು ಉಲ್ಲೇಖಿಸಿದೆ.
ಆದರೆ ರಾಜ್ಯದ ಶಿಕ್ಷಣ ಸಚಿವರು ‘ರಾಜ್ಯದಲ್ಲಿ 2013 ಮತ್ತು 2018ರಲ್ಲಿ ರೂಪಿಸಿದ ನಿಯಮದ ಪ್ರಕಾರ ಶಾಲಾ ಕಾಲೇಜು ಅಭಿವೃದ್ದಿ ಸಮಿತಿಗಳು ಸಮವಸ್ತ್ರ ಜಾರಿ ಮಾಡಿವೆ’ ಎಂದು ಹೇಳಿದ್ದಾರೆ. ಹೀಗೆ ಒಂದಕ್ಕೊಂದು ವ್ಯತಿರಿಕ್ತ ನಡವಳಿಗಳು, ಮಾರ್ಗಸೂಚಿಗಳು ಸರಕಾರದಿಂದಲೇ ಬಂದಿರುವಾಗ ಇವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಲ್ಲವೇ ಎಂದು ಸಂಘಟನೆಯು ಪ್ರಶ್ನಿಸಿದೆ.
ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಅವರ ಮೈ ಮುಚ್ಚುವಂತೆ ಬಟ್ಟೆ ಧರಿಸಿಲ್ಲದ್ದಕ್ಕೇ ದೌರ್ಜನ್ಯಗಳು ನಡೆದವೆಂದು ದೂಷಣೆ ಮಾಡುವ ಮನಸ್ಸುಗಳೇ ತಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಭಾಗವಾಗಿ ಮುಸ್ಲಿಂ ಯುವತಿಯರು ಧರಿಸುವ ದೇಹದ ಕೆಲವು ಭಾಗಗಳನ್ನು ಮರೆ ಮಾಡುವ ಹಿಜಾಬ್-ಶಿರವಸ್ತ್ರಗಳು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಎಂಬರ್ಥದ ಮಾತುಗಳಲ್ಲಿ ಸ್ಪಷ್ಟ ರಾಜಕಾರಣ ಇಣುಕುತ್ತಿದೆ.
ಇದೇ ನಡವಳಿಯಲ್ಲಿ ಪ್ರಸ್ತಾಪಿಸಿದಂತೆ ಕಾಲೇಜು ಅಭಿವೃದ್ದಿ ಮಂಡಳಿಗೆ ಸಮವಸ್ತ್ರವನ್ನು ನಿರ್ಧರಿಸುವ ಅಧಿಕಾರವನ್ನೂ ನೀಡಲಾಗಿದೆ. ಆ ಅಧಿಕಾರವನ್ನು ಪ್ರಯೋಗಿಸುವಾಗ ಅಭಿವೃದ್ದಿ ಮಂಡಳಿಗಳು ತಮ್ಮ ಸೈದ್ದಾಂತಿಕ ನಿಲುವಿಗನುಗುಣವಾಗಿ ಸಮವಸ್ತ್ರ ನೀತಿಯನ್ನು ರೂಪಿಸುವ ಅಪಾಯವಿದೆ. ಇವು ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ ಆಚರಣೆಗಳು ಮತ್ತು ಪರಿಪಾಠಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದಲ್ಲಿ ಅದು ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಈ ಎಚ್ಚರವನ್ನು ಸರಕಾರ ತೆಗೆದುಕೊಳ್ಳಬೇಕು ಮತ್ತು ಯಾವುದೇ ಕಾರಣದಿಂದ ಹೆಣ್ಣುಮಕ್ಕಳು ವಿದ್ಯಾಭ್ಯಾಸದ ಅವಕಾಶದಿಂದ ವಂಚಿತರಾಗದಂತೇ ಕ್ರಮವಹಿಸಬೇಕೆಂದು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದೇ ಸರಿಯಾದ ನಡೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಒತ್ತಾಯಿಸಿದೆ.
ಉಡುಪಿಯಲ್ಲಿನ ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಮತ್ತು ಆ ಮೂಲಕ ಪ್ರಜಾತಾಂತ್ರಿಕ ವ್ಯವಸ್ಥೆಯ ಭಾಗವಾಗಿ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಕಾಶದಿಂದ ಅವರನ್ನು ವಂಚಿತರನ್ನಾಗಿಸುವುದನ್ನು ಸಂಘಟನೆ ವಿರೋಧಿಸಿದೆ.
ವಿದ್ಯಾರ್ಥಿಗಳು ಪ್ರಚೋದಕರ ಪ್ರಚೋದನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳದೆಯೇ, ತಾವು ಶಿಕ್ಷಣದ ಸಂದರ್ಭದಲ್ಲಿ ಎದುರಿಸುತ್ತಿರುವ ಹಲವು ಮೂಲಭೂತ ಸಮಸ್ಯೆಗಳತ್ತ ಸರಕಾರದ ಗಮನ ಸೆಳೆಯುವ ಮತ್ತು ಆಡಳಿತ ಮಂಡಳಿಯು ಸಕ್ರಿಯಾತ್ಮಕವಾಗಿ ಸ್ಪಂದಿಸುವಂತೆ ಒತ್ತಾಯಿಸುವ ಪ್ರಗತಿಪರ ಹೋರಾಟಗಳ ಮೂಲಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಬೇಕೆಂದು ವಿನಂತಿಸಿಕೊಂಡಿದೆ.