ಮೂಲಭೂತ ಹಕ್ಕುಗಳಿಂದಾಗಿ ಮಹಿಳೆಯರ-ದಲಿತರ ಹಕ್ಕುಗಳ ರಕ್ಷಣೆ: ನ್ಯಾಯಮೂರ್ತಿ ವಿ. ಗೋಪಾಲಗೌಡ

ಬೆಂಗಳೂರು: “ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಸ್ಪಷ್ಟಸ್ವರೂಪ ನೀಡಿದರು. ಮೂಲಭೂತ ಹಕ್ಕುಗಳಿಂದಾಗಿ ಶೇ 50 ರಷ್ಟಿರುವ ಮಹಿಳೆಯರು, ಎಸ್.ಸಿ, ಎಸ್.ಟಿ ಸಮುದಾಯದ ಹಕ್ಕುಗಳ ರಕ್ಷಣೆಯಾಗುತ್ತಿದೆ” ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.

ಇಂಡಿಯನ್ ಕಾನ್ಪರೆನ್ಸ್ ಆಫ್ ಇಂಟಲೆಕ್ಷ್ಯುಲ್ ಸಂಸ್ಥೆ ಆಯೋಜಿಸಿದ್ದ “ಮೂಲಭೂತ ಹಕ್ಕುಗಳು – ನ್ಯಾಯಾಂಗದ ಪಾತ್ರ” ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂಲಭೂತ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ತನ್ನ ಪಾತ್ರವನ್ನು ಮಹತ್ವದಿಂದ ನಿರ್ವಹಿಸುತ್ತಿದೆ. ಎಲ್ಲರ ಪರಿಶ್ರಮದಿಂದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ವಿವಿಧ ವಲಯಗಳಲ್ಲಿ ಮೀಸಲಾತಿ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್, ಸಂವಿಧಾನದ ನೀಡಿರುವ ಮೂಲಭೂತ ಹಕ್ಕುಗಳು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಈ ವಲಯದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಾರದು ಎಂದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ರಕ್ಷಣೆ ಮಾಡುವುದರ ಜೊತೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಸಹ ಸಂರಕ್ಷಿಸಬೇಕು. ಸಂವಿಧಾನ ನಮಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ದೇಶದ ಸಾರ್ವಭೌಮತೆ, ಏಕತೆಗೆ ಧಕ್ಕೆ ಬಂದಾಗ ಮಾತ್ರ ನಿರ್ಬಂಧಗಳನ್ನು ವಿಧಿಸಬೇಕು ಎಂದು ರಾಜ್ಯಪಾಲರು ಹೇಳಿದರು.

“ಕಾನೂನಿಗೆ ಸಮಾಜದ ಮಾನವೀಯ ಮುಖವಿರಬೇಕು. ಮೊದಲು ದೇಶ, ನಂತರ ನಾಗರೀಕರು ಎನ್ನುವ ತತ್ವ ಪರಿಪಾಲನೆಯಾದಲ್ಲಿ, ಸೌಹಾರ್ದತೆ ಮನೆ ಮಾಡುತ್ತದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಮೂಲ ರಚನೆ, ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಬಹುದು ಎಂದು ಹೇಳಿದೆ. ಈ ತೀರ್ಪು ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದು” ಎಂದು ಬಿಸ್ವ ಭೂಷಣ್ ಹರಿಚಂದನ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಮಾಜ ಸೇವೆಗಾಗಿ ಕರ್ನಾಟಕದ ಹೈಕೋರ್ಟ್ ವಕೀಲ ಶಂಕರಪ್ಪ ಅವರಿಗೆ ‘ಭಾರತದ ಹೆಮ್ಮೆಯ ಪುತ್ರ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಮ್ಮೇಳನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ನಟರಾಜನ್, ಎಸ್. ಸುನೀಲ್ ದತ್ ಯಾದವ್, ಕೆ. ಭಕ್ತ ವತ್ಸಲ, ಸಂಜೀವ್ ಕುಮಾರ್ ಪಾಣಿ ಗ್ರಾಹಿ, ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಿ.ಆರ್. ರೆಡ್ಡಿ, ಏರೋನಾಟಿಕಲ್ ಸಿಸ್ಟಮ್ಸ್ ನ ಪ್ರಧಾನ ನಿರ್ದೇಶಕಿ ತೆಸ್ಸಾ ಥಾಮಸ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತಿತರ ಗಣ್ಯರು ಪಾಲ್ಗೊಂಡರು.

Donate Janashakthi Media

One thought on “ಮೂಲಭೂತ ಹಕ್ಕುಗಳಿಂದಾಗಿ ಮಹಿಳೆಯರ-ದಲಿತರ ಹಕ್ಕುಗಳ ರಕ್ಷಣೆ: ನ್ಯಾಯಮೂರ್ತಿ ವಿ. ಗೋಪಾಲಗೌಡ

Leave a Reply

Your email address will not be published. Required fields are marked *