ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಮತೀಯ ಗೂಂಡಾಗಿರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮತೀಯ ಗೂಂಡಾಗಿರಿ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿರುವ ಹೇಳಿಕೆಗಳಿಂದಾಗಿಯೇ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಮುಖ್ಯಮಂತ್ರಿಯವರಿಗೆ ಕಾನೂನಿನ ಬಗ್ಗೆ, ಭಾರತೀಯ ದಂಡ ಸಂಹಿತೆಯ ಬಗ್ಗೆ ಅರಿವಿದೆಯೇ, ಪೊಲೀಸ್ ನವರನ್ನು ಇಟ್ಟುಕೊಂಡಿರುವುದು ಏಕೆ, ಇಂತಹ ಘಟನೆಗಳು ಆಗುವುದನ್ನು ತಪ್ಪಿಸಬೇಕಲ್ಲವೇ. ಕಾನೂನು ಸುವ್ಯವಸ್ಥೆಯಡಿ ಬೇರೆಯವರು ಅನಗತ್ಯವಾಗಿ ಮಧ್ಯಪ್ರವೇಶಿಸುವುದು ಖಂಡನೀಯ, ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಪ್ರಚೋದನೆ ಕೊಡುವ ರೀತಿಯಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಮತೀಯ ಗೂಂಡಾಗಿರಿ ಘಟನೆಗಳು ಜರುಗಿವೆ. ಇದನ್ನು ಖಂಡಿಸುತ್ತೇನೆ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾನೂನಿನಲ್ಲಿ ಎಲ್ಲಿದೆ ಅಂತಹ ಅವಕಾಶ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಭತ್ತು ವರ್ಷಗಳಾಗಿವೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದ್ದರೆ ಹತ್ತಿಕ್ಕಲಿ. ಅವರಿಗೆ ಅಧಿಕಾರವಿದೆ, ಬರೀ ಜನರನ್ನು ಪ್ರಚೋದಿಸಿ ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಡುವುದಕ್ಕೆ ಅಧಿಕಾರ ನೀಡಿದ್ದಲ್ಲ ಎಂದು ಆರೋಪಿಸಿದರು.
ಕೊಲೆ ಮಾಡಿದರೆ ಮತ್ತೊಂದು ಕೊಲೆ ಮಾಡಬೇಕು ಎಂಬ ಕಾನೂನು ಇದೆಯೇ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಭಯೋತ್ಪಾದನೆಗೆ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿಲ್ಲ. ಬಿಜೆಪಿಯವರು ಅದನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.