ಗುರುರಾಜ ದೇಸಾಯಿ
ಆ ಊರಿನಲ್ಲಿ ಮುಸ್ಲಿಂರೇ ಇಲ್ಲ. ಆದರೆ ಮೊಹರಂ ಹಬ್ಬವನ್ನು ಊರ ಹಬ್ಬವಾಗಿ ಆಚರಿಸಲಾಗುತ್ತದೆ. ಜಾತಿ- ಮತಗಳನ್ನು ಮೀರಿ ಊರ ಜನರೆಲ್ಲ ಸೇರಿ ಐದು ದಿನಗಳ ಕಾಲ ಸಂಭ್ರಮದ ಮೊಹರಂ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ವಿಶೇಷ.
ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಅಲ್ಲಪ್ಪಜ್ಜನ ಜಾತ್ರಿ (ಮೊಹರಂ) ವಿಜ್ರಂಭಣೆಯಿಂದ, ಸೌಹಾರ್ಧತೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಮುಸ್ಲಿಂ ಧರ್ಮದವರು ಒಬ್ಬರು ಇಲ್ಲ. ಮೊಹರಂ ಬಂತೆಂದರೆ ಸಾಕು ಹಿಂದೂಗಳೇ ಪಂಝಾಗಳನ್ನು ಸ್ಥಾಪಿಸುತ್ತಾರೆ. ನೆರೆಯ ಯಲಬುರ್ಗ ನಗರದಿಂದ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕರೆಯಿಸಿ, ಅವರ ಮೂಲಕ ಪಾಂಜಾಗಳನ್ನು ಕೂರಿಸುತ್ತಾರೆ. ಸಾಂಪ್ರದಾಯಿಕವಾಗಿ ಓದಿಕೆ (ಫಾತೀಯಾ) ಮಾಡಿಸುತ್ತಾರೆ. ಹಲವು ದಶಕಗಳಿಂದ ಪ್ರತಿವರ್ಷ ಸಂಪ್ರದಾಯದಂತೆ ಮೊಹರಂ ಹಬ್ಬದ ಆಚರಣೆಯಲ್ಲಿಗ್ರಾಮದ ಪ್ರತಿಯೊಬ್ಬರು ವಿಶೇಷ ಪೂಜೆ ಸಲ್ಲಿಸುತ್ತಿರುವುದು ವಿಶೇಷ. ಇದು ಇವತ್ತು ನಿನ್ನೆಯಿಂದ ನಡೆದುಕೊಂಡ ಬಂದ ಸಂಪ್ರದಾಯವಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಹಿರಿಯರು ಹಾಕಿದ ಸೌಹಾರ್ಧ ದಾರಿಯಲ್ಲೆ ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಮೊಹರಂನ ದೇವರು ಕುಳಿತ ಮೊದಲ ದಿನದಿಂದ ಪಕೀರರಾಗುತ್ತಾರೆ. ಐದು ದಿನದ ಪಕೀರರು, ಮೂರು ದಿನದ ಪಕೀರರು, ಎರಡು ದಿನದ ಪಕೀರರು ಎಂದು ಅವರು ಹರಕೆ ಹೊತ್ತಂತೆ ಇಲ್ಲವೆ ಮನೆಯ ಸಂಪ್ರದಾಯದಂತೆ ಪಕೀರರಾಗುತ್ತಾರೆ. ಹೊಸ ಬಟ್ಟೆ, ಬಣ್ಣ ಬಣ್ಣದ ಲಾಡಿಗಳನ್ನು ಎರಡು ಕೈಗಳಿಗೆ ಕಟ್ಟಿಕೊಂಡು ಮತ್ತೊಂದು ಲಾಡಿಯನ್ನು ಕೊರಳಿಗೆ ಹಾಕಿಕೊಳ್ಳುತ್ತಾರೆ. ಇವರೊಂದಿಗೆ ಅತ್ಯಂತ ಗೌರವದಿಂದ ಎಲ್ಲರು ನಡೆದುಕೊಳ್ಳುತ್ತಾರೆ. ಇವರ ಜೊತೆ ಯಾರೂ ಜಗಳವಾಡುವುದಿಲ್ಲ, ಕೆಟ್ಟ ಭಾಷೆಗಳನ್ನು ಪ್ರಯೋಗಿಸುವುದಿಲ್ಲ ಒಂದುರೀತಿ ವಿಶೇಷ ಸ್ಥಾನಮಾನಗಳನ್ನು ಐದು ದಿನಗಳಕಾಲ ಅವರು ಪಡೆದಿರುತ್ತಾರೆ.
ಜಾತಿಗಳನ್ನು ಮೀರಿ ಇಲ್ಲಿ ಸಕ್ರಿ ಓದ್ಸಲಾಗುತ್ತದೆ. ಪ್ರತಿ ಮನೆಯವರು ಸಕ್ರಿ ಓದ್ಸಿ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ 3 ಮತ್ತು 4 ನೇ ದಿನ ಎಲ್ಲರೂ ಸಿಹಿಯೂಟ ಮಾಡುತ್ತಾರೆ. ಹೋಳಿಗೆ, ಮಾದ್ಲಿ ಈ ಜಾತ್ರೆಯ ವಿಶೇಷ. ದಿನಂಪ್ರತಿ ಸಂಜೆ ನಾಲ್ಕರಿಂದ ರಾತ್ರಿ 10 ರ ವರೆಗೆ ಹಲಗೆ ಹೊಡೆಯಲಾಗುತ್ತದೆ. ಇದು ಅತ್ಯಂತ ಸಂತೋಷವನ್ನು ಕೊಡುತ್ತದೆ. ಜಾತ್ರೆಗಾಗಿ ತೋಡಿರುವ ಅಲೈಕುಣಿ (ಅಲಾದೇವರ ಕುಣಿ) ಯಲ್ಲಿ ಬೆಂಕಿಹಾಕಿ ಹಲಿಗೆ ಕಾಸಿ ಹೊಡೆಯುತ್ತಿದ್ದರೆ ಅದರ ನಾದ ಉನ್ಮಾದವನ್ನು ಮೂಢಿಸುತ್ತದೆ. ಬಣ್ಣ ಬಣ್ಣದ ಬಣ್ಣದ ಬಟ್ಟೆಗಳನ್ನು, ಕಾಗದಗಳನ್ನು ತೊಡಿಸಿದ ಪಾಂಜಾಗಳನ್ನು (ನಿಂದರಕಿ ದೇವರು) ನೋಡಲು ಎರಡುಕಣ್ಣು ಸಾಲದು.
ಖತಲ ರಾತ್ರಿ : ಮೊಹರಂ ಹಬ್ಬದ ನಾಲ್ಕನೇ ದಿನ ಇಲ್ಲವೇ 9 ನೇ ದಿನ ಖತಲ ರಾತ್ರಿಯನ್ನು ಆಚರಿಸಲಾಗುತ್ತದೆ. ರಾತ್ರಿಯಲ್ಲೆ ಹಲಗೆ, ನೃತ್ಯದ ಮೂಲಕ ಜನ ಸಂತೋಷವನ್ನು ಹೊರಹಾಕುತ್ತಾರೆ. ಹುಲಿ ಕುಣಿತ, ಹೆಜ್ಜೆ ಕುಣಿತ, ಲಾವಣಿ ಹಾಡುಗಳ ಮೂಲಕ ಜನಪದ ಕಲೆಗಳನ್ನು ಉಳಿಸಿಕೊಂಡು ಬರಲಾಗಿದೆ. ಮರುದಿನ ಮನೆ ಮನೆಗೆ ಹೋಗಿ ಹೆಜ್ಜೆ ಹಾಕುವುದು, ಹುಲಿಕುಣಿತದ ಮೂಲಕ ಮನೆ ಮಂದಿಯನ್ನೆಲ್ಲ ಸಂತೋಷ ಪಡಿಸುತ್ತಾರೆ. ಅಂದು ಸಂಜೆ ಅಲಾಯಿ ಕುಣಿಯಲ್ಲಿ ಬೆಂಕಿ ಹಾಕಿ ಎಲ್ಲರು ಅದರ ಸುತ್ತಲು ಐದು ಸುತ್ತು ತಿರುಗುತ್ತಾರೆ.
ಕಳ್ಳೋಳ್ಳಿ ವೇಷ (ಅಚ್ಚೊಳ್ಳಿ, ಅಳ್ಳಿಳ್ಳಿ ಬವ್ವಾ) : ಈ ಜಾತ್ರೆಯ ಇನ್ನೊಂದು ಆಕರ್ಷಣೆ. ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು, ವಿಭೂತಿಯಿಯನ್ನು ಬಳಸಿಕೊಂಡು ಕಪ್ಪು ಮುಖಕ್ಕೆ ಬಿಳಿಯ ಚುಕ್ಕೆಗಳನ್ನು ಇಟ್ಟುಕೊಳ್ಳುತ್ತಾರೆ. ಉದ್ದಾದದ ಮೀಸೆ, ಗಡ್ಡ ಕಟ್ಟಿಕೊಂಡಿರುತ್ತಾರೆ.
ಸೊಂಟಕ್ಕೆ ಗಂಟೆ, ಗೆಜ್ಜೆ, ಕಟ್ಟಿಕೊಂಡಿರುತ್ತಾರೆ. ವಿಧ ವಿಧ ಬಣ್ಣದ ಪೇಪರಿನಿಂದ ಮಾಡಿದ ಟೋಪಿಯನ್ನು ಧರಿಸಿ ಮಕ್ಕಳನ್ನು, ಯುವಕರನ್ನು ಮನರಂಜಿಸುತ್ತಾರೆ. ಕಳ್ಳಳ್ಳಿಯನ್ನು ತೋರಿಸಿ ಚಿಕ್ಕಮಕ್ಕಳನ್ನು ಹೆದರಿಸಿ ಮಕ್ಕಳಿಗೆ ಊಟ ಮಾಡಿಸುವುದು, ಸ್ನಾನ ಮಾಡಿಸುವುದು ಇತ್ಯಾದಿಗಳನ್ನು ಮಾಡಿಸುತ್ತಾರೆ. ಮಕ್ಕಳ ಹಠವನ್ನು ಕಳ್ಳೊಳ್ಳಿ ನಿಯಂತ್ರಿಸುವುದಕ್ಕೆ ತಾಯಂದಿರು ನಿಟ್ಟುಸಿರು ಬಿಡುತ್ತಾರೆ.
ಮೂಢನಂಬಿಕೆಗಳು ಹೆಚ್ಚಾಗುತ್ತಿವೆ : ಇದು ಸೌಹಾರ್ಧತೆಯ ಹಬ್ಬವಾಗಿದ್ದರು, ಕೆಲವರು ಈ ಹಬ್ಬದಲ್ಲಿ ಮೂಢನಂಬಿಕೆ ಬಿತ್ತಿ ಜನರಿಗೆ ಹಸಿ ಸುಳ್ಳಗಳ ಮೂಲಕ ಅಪಾಯದ ಸನ್ನಿವೇಶವನ್ನು ತಂದೊಡ್ಡುತ್ತಿದ್ದಾರೆ. ಮಗುವನ್ನು ತೂರುವುದು, ಬೆಂಕಿಯಲ್ಲಿ ಹಾಯುವುದು, ಮೈಮೇಲೆ ದೇವರು ಬಂದಂತೆ ನಟಿಸುವುದು ಇತ್ಯಾದಿಗಳು ಹೆಚ್ಚಾಗುತ್ತಿವೆ. ಬೆಂಕಿ ಹಾಯಲು ಹೋಗಿ ಎಷ್ಟೊ ಜನ ಕಾಲು ಸುಟ್ಟುಕೊಂಡು ಅಂಗವಿಕಲರಾಗಿರುವ ಉದಾಹರಣೆಗಳಿವೆ. ಕಣ್ಣಿಗೆ ಬೆಂಕಿ ಬಿದ್ದು ಕಣ್ಣನ್ನೆ ಕಳೆದುಕೊಂಡವರಿದ್ದಾರೆ. ಕೂಡಾ ಇಂತಹ ಹುಸಿ ಸುಳ್ಳುಗಳನ್ನು ನಂಬಿತ್ತಿರುವುದು ವೈಜ್ಞಾನಿಕ ಜಾಗೃತಿಯ ಕೊರತೆ ಇಲ್ಲದಿರುವುದನ್ನು ತೋರಿಸುತ್ತದೆ. ಸೌಹಾರ್ಧತೆಯ ಜೊತೆಯಲ್ಲಿಯೇ ಜನ ಪ್ರಜ್ಞೆಯಿಂದ ಹಬ್ಬಗಳನ್ನು ಆಚರಸಬೇಕಿದೆ.