ಮುಚ್ಚಿರುವ ಇಂದಿರಾ ಕ್ಯಾಂಟೀನ್​ ತೆರೆಯದಿದ್ದಲ್ಲಿ ಧರಣಿ ಕೂರುವೆ: ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್‍ಗಳನ್ನು ತೆರೆದು ಗುಣಮಟ್ಟದ ಊಟ-ತಿಂಡಿ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ. ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್‍ಗಳ ಮುಂದೆ ಧರಣಿ ಕೂರುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಇಂದಿರಾ ಕ್ಯಾಂಟೀನ್​ಗಳಿಗೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಒಂದು ನೆಪ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ದುರುದ್ದೇಶದಿಂದ ಕ್ಯಾಂಟೀನ್ ತಿಂಡಿ-ಊಟದ ಗುಣಮಟ್ಟವನ್ನು ಕೆಡಿಸುತ್ತಿದೆ. ಇದರ ಜೊತೆಗೆ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದಿದ್ದಾರೆ.

‘ಬಿಜೆಪಿ ಸರಕಾರ ತನ್ನ ಮೊದಲ ಬಜೆಟ್‍ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಣೆ ಮಾಡಿತ್ತು. ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ ಬಿಜೆಪಿ, ಇರುವ ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚುತ್ತಿದೆ’ ಎಂದು ಆರೋಪಿಸಿದ್ದಾರೆ.

ಬಡಜನರ ಹೊಟ್ಟೆ ಮೇಲೆ ಯಾಕೆ ನಿಮ್ಮ ಕೆಂಗಣ್ಣು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ? ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಗಳಿಗೆ ದುಡ್ಡು ನೀಡದೆ ಬೀಗ ಹಾಕುತ್ತಿದ್ದೀರಿ, ಖಜಾನೆಯಲ್ಲಿ ದುಡ್ಡಿಲ್ಲದೆ ಇದ್ದರೆ ಸರ್ಕಾರಕ್ಕೆ ಬೀಗ ಹಾಕಿ ಹೊರಟುಬಿಡಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಬೆಲೆ ಏರಿಕೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಒಂದು ಊಟಕ್ಕೆ ಇಂದು 50-60 ರೂ. ನೀಡಬೇಕಾಗಿದೆ. ನಗರದ ಬಡವರು ಮತ್ತು ಬೇರೆ ಊರುಗಳಿಂದ ಬಂದವರಿಗೆ ಅಕ್ಷಯ ಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಿ ಅವರ ಶಾಪಕ್ಕೆ ಯಾಕೆ ತುತ್ತಾಗುತ್ತೀರಿ? ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

‘ನಮ್ಮ ಸರಕಾರ ಇಂದಿರಾ ಕ್ಯಾಂಟೀನ್‍ಗಾಗಿ 2017-18ರಲ್ಲಿ 100 ಕೋಟಿ ರೂ. ಮತ್ತು 2018-19ರಲ್ಲಿ 145 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ನೀಡಿತ್ತು. 2022-23ರ ಬಿಜೆಪಿ ಸರಕಾರ ಬಜೆಟ್‍ನಲ್ಲಿ ಹಣ ನೀಡದೆ ಖರ್ಚಿನ ಭಾರವನ್ನು ಬಿಬಿಎಂಪಿ ತಲೆ ಮೇಲೆ ಹೊರಿಸಿರುವುದೇ ಈಗಿನ ಹಣದ ಕೊರತೆಗೆ ಕಾರಣ’ ಎಂದಿದ್ದಾರೆ.

‘ಕ್ಯಾಂಟೀನ್ ಗುತ್ತಿಗೆಯ ನವೀಕರಣಕ್ಕಾಗಿ ರಾಜ್ಯ ಬಿಜೆಪಿ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಆರು ತಿಂಗಳುಗಳಿಂದ ಬಿಬಿಎಂಪಿಗೆ ಕ್ಯಾಂಟೀನ್ ವೆಚ್ಚದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಯಾವುದೇ ಕ್ಷಣದಲ್ಲಿ ಉಳಿದ ಕ್ಯಾಂಟೀನ್‍ಗಳಿಗೆ ಆಹಾರ ಪೂರೈಕೆ ನಿಲ್ಲಿಸಬಹುದು’ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸರಕಾರ ಬೆಂಗಳೂರು ನಗರದ ಎಲ್ಲ 198 ವಾರ್ಡ್‍ಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲಿ ಈಗ 40 ಕ್ಯಾಂಟಿನ್‍ಗಳು ಮುಚ್ಚಿವೆ. ಬೆಂಗಳೂರು ನಗರವೂ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್‍ಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *