ಎಂಎಸ್‌ಪಿ ಖಾತರಿಗೆ ಆಗ್ರಹ: ದೆಹಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ ರೈತರು

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳು ದೇಶದ ಸಮಸ್ತರಿಗೂ ಮಾರಕವಾಗಿದ್ದು, ಅದು ಕರಾಳ ಕಾಯ್ದೆಗಳಾಗಿವೆ. ಅವುಗಳನ್ನು ವಾಪಸ್ಸುಪಡೆಯಬೇಕೆಂದು ಆಗ್ರಹಿಸಿ ರೈತರು ನಡೆಸಿದ ಆಂದೋಲನ ಇಂದಿಗೆ ಒಂದು ವರ್ಷ ಪೂರೈಸಲಿದೆ. ಈ ಹಿನ್ನೆಲೆ ದೆಹಲಿಯ ಗಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು.

ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಕರೆ ನೀಡಿದ ಸಂಯುಕ್ತ ಕಿಸಾನ್‌ ಮೋರ್ಚಾ ದೇಶದ ಎಲ್ಲಾ ರಾಜ್ಯ ಕೇಂದ್ರಾಡಳಿಯ ಪ್ರದೇಶಗಳಲ್ಲಿನ ಪ್ರಮುಖ ಭಾಗಗಳಲ್ಲಿ ಚಳುವಳಿಯನ್ನು ನಡೆಸುತ್ತಿದೆ. ಇದರ ಭಾಗವಾಗಿ ದೇಶದ ರಾಜಧಾನಿ ದೆಹಲಿಯಲ್ಲಿಯೂ ಸಹ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿದ್ದು, ದೇಶದ ರೈ ಆಂದೋಲನಕ್ಕೆ ಮತ್ತಷ್ಟು ಹುರುಪು ನೀಡಿದೆ.

ಇದನ್ನು ಓದಿ: ರೈತರ ಹೋರಾಟಕ್ಕೆ ವರ್ಷ : ರೈತ ಶಕ್ತಿ ಮುಂದೆ ಮಂಡಿಯೂರಿದ ಚೌಕಿದಾರ

ರೈತ ಹೋರಾಟದ ತೀವ್ರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ವಿವಿಧ ಗಡಿ ಭಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಕಳೆದ ನವೆಂಬರ್ 26, 2020 ರಿಂದ ದೆಹಲಿಯ ಮೂರು ಗಡಿಗಳಲ್ಲಿಯೂ ರೈತರು ಪ್ರತಿಭಟನೆ ಕುಳಿತಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮೊಕ್ಕಾಂ ಹೂಡಿದ್ದಾರೆ. ಕಳೆದ ವರ್ಷ ನವೆಂಬರ್ 26 ಮತ್ತು 27ರಂದು “ದಿಲ್ಲಿ ಚಲೋ” ಕಾರ್ಯಕ್ರಮದೊಂದಿಗೆ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಚಳುವಳಿ ಆರಂಭವಾಯಿತು.

ದೆಹಲಿಯ ಟಿಕ್ರಿ-ಸಿಂಘು ಗಡಿ ಕೇಂದ್ರಗಳಲ್ಲಿ ರೈತರು

ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನಾ ನಿರತರಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದರು.

ಟಿಕ್ರಿ ಗಡಿಯ ಪಕೋರಾ ಚೌಕ್‌ನಲ್ಲಿ ದೊಡ್ಡ ಟೆಂಟ್ ಹಾಕಿ ಸಮಾವೇಶಗೊಳಿಸಲಾಗಿತ್ತು. ಇನ್ನೊಂದು ಮುಖ್ಯ ವೇದಿಕೆ ಸಿಂಘು ಗಡಿಯಲ್ಲಿ ಸಿದ್ದವಾಗಿದ್ದು, ಸರ್ಕಾರ ರೈತ ವಿರೋಧಿ ನೀತಿಗಳ ಬಗ್ಗೆ ಪ್ರತಿಭಟನಾಕಾರರಲ್ಲಿ ವಿವರಿಸಿದರು.

ಇದನ್ನು ಓದಿ: ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ರೈತರು

ಕರ್ನಾಟಕದಲ್ಲಿ ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ. ತಮಿಳುನಾಡು, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಜಂಟಿಯಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ರಾಯ್ಪುರ ಮತ್ತು ರಾಂಚಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿಗಳು ನಡೆದಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೃಹತ್‌ ರ‍್ಯಾಲಿವೊಂದು ನಡೆದಿದೆ.

ಮೋಗಾ, ಬಟಿಂಡಾ, ಫರೀದ್‌ಕೋಟ್, ಸಂಗ್ರೂರ್ ಮತ್ತು ಅಮೃತಸರದಿಂದ ಟ್ರ್ಯಾಕ್ಟರ್ ರ‍್ಯಾಲಿಗಳಲ್ಲಿ ರೈತರು ಜಮಾವಣೆಗೊಂಡರು. ರೈತರು ಎರಡು ಗಡಿ ಕೇಂದ್ರಗಳಲ್ಲಿ ಕಾರುಗಳಲ್ಲಿ ಮತ್ತು ಸೋನಿಪತ್‌ ನಲ್ಲಿ ರೈಲುಗಳಲ್ಲಿ ಪ್ರತಿಭಟನಾ ಸ್ಥಳಗಳಿಗೆ ಆಗಮಿಸಿದರು.

ಭಾರತೀಯ ಕಿಸಾನ್ ಯೂನಿಯನ್, ಪಂಜಾಬ್, ಪ್ರಧಾನ ಕಾರ್ಯದರ್ಶಿ ಓಂಕಾರ್ ಸಿಂಗ್, ಹೆಚ್ಚಿನ ರೈತರು ಗೋಧಿಯನ್ನು ಬಿತ್ತನೆ ಮಾಡಿದ್ದಾರೆ. ರೈತರ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವ ಆಚರಿಸಲು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ ಎಂದರು.

ಇತರೇ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಕೆ

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆಗೆ ಒಂದು ವರ್ಷ ಪೂರೈಸಿದ್ದು, ಕೇಂದ್ರದಿಂದ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಅಶೋಕ್‌ ಧಾವಳೆ “ರೈತ ಸಂಘಟನೆಗಳ ಜಂಟಿ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ರೈತರ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತದೆ. ಕೇಂದ್ರವು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

ಹರಿಯಾಣದ ರೈತರೂ ಎರಡು ಗಡಿ ಕೇಂದ್ರಗಳಲ್ಲಿ ಸೇರಿದ್ದರು. ನಮ್ಮ ಇತರೆ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿರುವ ರೈತ ಮುಖಂಡ ಇಂದರ್‌ಜೀತ್ ಸಿಂಗ್ ಹೇಳಿದರು.

ಇದನ್ನು ಓದಿ: ನ.26ರಂದು ರಾಜ್ಯದ್ಯಂತ ಎಲ್ಲೆಡೆ ರೈತ ಹೋರಾಟ: ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್

“ಪಂಜಾಬ್‌ನ ಪ್ರತಿ ಹಳ್ಳಿಯಿಂದ 50 ರಿಂದ 500 ರೈತರು ದೆಹಲಿ ಗಡಿಯನ್ನು ತಲುಪಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳಿಂದ ಟಿಕ್ರಿ ಗಡಿಯಲ್ಲಿ ಒಂದು ಲಕ್ಷ ರೈತರು ಸೇರಿರುವ ಸಾಧ್ಯತೆ ಇದೆ” ಎಂದು ಭಾರತೀಯ ಕಿಸಾನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಕಲಾನ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು.

ರೈತರ ಸುದೀರ್ಘ ಹೋರಾಟಕ್ಕೆ ಮಣಿಯಲೇಬೇಕಾಗಿ ಬಂದ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ಕಳೆದ ವಾರ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ನವೆಂಬರ್ 24ರಂದು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟದಿಂದಲೂ ಅನುಮೋದನೆ ದೊರೆತಿದೆ.

ದೇಶದ ರೈತರು ಸುದೀರ್ಘ ಹೋರಾಟ ನಡೆಸುತ್ತಾರೆ ಎಂದರೆ ಸರ್ಕಾರಗಳು ಮಾತ್ರ ಸಂವೇದನಾಶೀಲತೆ ಮತ್ತು ದುರಹಂಕಾರವನ್ನು ತೋರಿಸುತ್ತದೆ. ಶ್ರಮಜೀವಿಗಳ ಬಗ್ಗೆ ಸರ್ಕಾರ ತೋರುವ ನಿಲುವಿನ ಸ್ಪಷ್ಟ ಪ್ರತಿಬಿಂಬವಾಗಿರುತ್ತದೆ. ರೈತ ಆಂದೋಲನದಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ “ವಿಶ್ವದ ಇತಿಹಾಸದಲ್ಲೇ ಅತಿದೊಡ್ಡ ಮತ್ತು ಸುದೀರ್ಘವಾದ ಪ್ರತಿಭಟನಾ ಚಳುವಳಿಯ 12 ತಿಂಗಳ ಅವಧಿಯಲ್ಲಿ, ಕೋಟ್ಯಂತರ ಜನರು ಭಾಗವಹಿಸಿದ್ದರು. ಇದು ಭಾರತದ ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಹಳ್ಳಿಗೆ ವ್ಯಾಪಿಸಿತು. ಮೂರು ರೈತ ವಿರೋಧಿ ಕಾನೂನುಗಳ ರದ್ದತಿಗೆ ಸರ್ಕಾರದ ನಿರ್ಧಾರ ಮತ್ತು ಸಚಿವ ಸಂಪುಟ ಅನುಮೋದನೆಯ ಹೊರತಾಗಿ, ಆಂದೋಲನವು ರೈತರು, ಸಾಮಾನ್ಯ ನಾಗರಿಕರು ಮತ್ತು ರಾಷ್ಟ್ರಕ್ಕೆ ಹಲವು ಗೆಲುವನ್ನು ತಂದುಕೊಟ್ಟಿದೆ” ಎಂದು ತಿಳಿಸಿದೆ.

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದಾಗಿರುವುದು ರೈತ ಚಳುವಳಿಗೆ ಸಿಕ್ಕ ಮೊದಲ ಗೆಲುವು. ಪ್ರತಿಭಟನಾನಿರತ ರೈತರು ಉಳಿದ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಕಾಯುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದ್ದು, “ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಐತಿಹಾಸಿಕ ಕೃಷಿ ಚಳುವಳಿಯ ಒಂದು ವರ್ಷವನ್ನು ಆಚರಿಸಲು ಕರೆ ನೀಡಲಾಗಿದ್ದು, ದೂರದ ರಾಜ್ಯಗಳ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಮೋರ್ಚಾಗಳು, ರೈತರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ದೆಹಲಿಯ ವಿವಿಧ ಪ್ರತಿಭಟನಾ ಸ್ಥಳಗಳಿಗೆ ಸಾವಿರಾರು ಸಂಖ್ಯೆಯ ಮತ್ತಷ್ಟು ರೈತರು ಆಗಮಿಸುತ್ತಿದ್ದಾರೆ. ದೆಹಲಿಯಿಂದ ದೂರವಿರುವ ರಾಜ್ಯಗಳಲ್ಲಿ ರ‍್ಯಾಲಿಗಳು, ಧರಣಿಗಳು ಮತ್ತು ಇತರ ಕಾರ್ಯಕ್ರಮಗಳು ನಡೆಯುತ್ತಿವೆ. ” ಎಂದು ಸಂಯುಕ್ತ ಕಿಸಾಣ್‌ ಮೋರ್ಚಾ ಹೇಳಿದೆ.

ದೆಹಲಿ ಗಡಿಯಲ್ಲಿ ಹೆಚ್ಚಿದ ಭದ್ರತೆ

ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ದೆಹಲಿ ಪೊಲೀಸ್ ಸಿಬ್ಬಂದಿ ಜೊತೆ ಅರೆಸೇನಾ ಪಡೆಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ. “ಸಾಕಷ್ಟು ಭದ್ರತೆ ಮಾಡಲಾಗಿದ್ದು, ಸ್ಥಳದಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ನಿಕಟ ಮೇಲ್ವಿಚಾರಣೆ ಇರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ನಾವು ವೃತ್ತಿಪರ ಪೋಲೀಸಿಂಗ್ ಅನ್ನು ಬಳಸುತ್ತಿದ್ದೇವೆ” ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ವಲಯ – 1ರ ವಿಶೇಷ ಪೊಲೀಸ್ ಆಯುಕ್ತ ದೇವೇಂದ್ರ ಪಾಠಕ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *