ಕೊನೆಗೂ ಕೇಂದ್ರ ಸರಕಾರ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನು ಹಕ್ಕಾಗಿ ಮಾಡಬೇಕು ಎಂಬ ರೈತರ ಆಗ್ರಹವನ್ನು ಮತ್ತು ಇತರ ಪ್ರಶ್ನೆಗಳನ್ನುಪರಿಶೀಲಿಸಲು ಒಂದು ಸಮಿತಿಯನ್ನು ನೇಮಿಸಿದೆ. ಆದರೆ ಈ ಕುರಿತು ರೈತ ಸಂಘಟನೆಗಳಿಗೆ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ಕ್ಕೆ ಇದ್ದ ಎಲ್ಲಾ ಆತಂಕಗಳು ನಿಜವಾಗಿವೆ. ಸರ್ಕಾರದ ಪ್ರತಿನಿಧಿಗಳು ಮತ್ತು ಅದರ ನಿಷ್ಠಾವಂತರಿಂದ ತುಂಬಿರುವ ಈ ಸಮಿತಿಯ ಕಾರ್ಯಸೂಚಿಯಲ್ಲಿ ಎಂಎಸ್‌ಪಿ ಕಾನೂನನ್ನು ಚರ್ಚಿಸಲು ಯಾವುದೇ ಅವಕಾಶವಿಲ್ಲ. ಅಲ್ಲದೆ ಕೃಷಿ ಮಾರ್ಕೆಟಿಂಗ್‌ನಲ್ಲಿ ಸುಧಾರಣೆಗಳ ಹೆಸರಿನಲ್ಲಿ, ಮೂರು ಕರಾಳ ಕಾನೂನುಗಳನ್ನು ಮರಳಿ ತರಲು ಸರ್ಕಾರ ಪ್ರಯತ್ನಿಸಬಹುದಾದ ಐಟಂ ಅನ್ನು ಸೇರಿಸಲಾಗಿದೆ.
ಆದ್ದರಿಂದ ಈ ಸಮಿತಿಯನ್ನು ತಿರಸ್ಕರಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಇಂತಹ ರೈತ ವಿರೋಧಿ ಸಮಿತಿಯೊಂದಿಗೆ ಮೋರ್ಚಾ ಯಾವುದೇ ಸಂಬಂಧ ಹೊಂದಲು ಸಾಧ್ಯವಿಲ್ಲ. ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪ್ರತಿನಿಧಿಗಳನ್ನು ಈ ಸಮಿತಿಗೆ ಕಳುಹಿಸಲು ಯಾವುದೇ ತಾರ್ಕಿಕ ಆಧಾರವಿಲ್ಲವಾಗಿದೆ, ರೈತರ ಬೆಳೆಗೆ ನ್ಯಾಯಯುತ ಬೆಲೆ ಖಾತ್ರಿಪಡಿಸಲು ಎಂಎಸ್‌ಪಿ ಕಾನೂನು ಖಾತರಿಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ಎಸ್‌ಕೆಎಂ ಸ್ಪಷ್ಟಪಡಿಸಿದೆ.
ನವೆಂಬರ್ 19 ರಂದು ಮೂರು ಕರಾಳ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ, ಎಂಎಸ್‌ಪಿ ಬಗ್ಗೆ ಒಂದು ಸಮಿತಿಯನ್ನು ನೇಮಿಸಲಾಗುವುದು ಎಂದು ಪ್ರಧಾನ ಮಂತ್ರಿಯವರು ಘೋಷಿಸಿದಾಗಿನಿಂದ ಈ ಬಗ್ಗೆ ತನಗಿರುವ ಅನುಮಾನಗಳನ್ನು ಎಸ್‌ಕೆಎಂ ಸಾರ್ವಜನಿಕವಾಗಿ ವ್ಯಕ್ತಗೊಳಿಸಿದೆ. ಮಾರ್ಚ್ ತಿಂಗಳಿನಲ್ಲಿ ಸರ್ಕಾರವು ಈ ಸಮಿತಿಗೆ ಹೆಸರುಗಳನ್ನು ಕೇಳಿದಾಗ, ಮೋರ್ಚಾವು ಸಮಿತಿಯ ಬಗ್ಗೆ ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೇಳಿತ್ತು, ಅದಕ್ಕೆ ಉತ್ತರವೇ ಬಂದಿಲ್ಲ. ಜುಲೈ 3 ರಂದು, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಭೆಯು ಸರ್ವಾನುಮತದಿಂದ “ಸರ್ಕಾರವು ಈ ಸಮಿತಿಯ ಅಧಿಕಾರ ವ್ಯಾಪ್ತಿ ಮತ್ತು ಉಲ್ಲೇಖದ ನಿಯಮಗಳನ್ನು ಸ್ಪಷ್ಟಪಡಿಸದ ಹೊರತು, ಈ ಸಮಿತಿಗೆ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡುವಲ್ಲಿ ಯಾವುದೇ ಅರ್ಥವಿಲ್ಲ” ಎಂದು ನಿರ್ಧರಿಸಿತು.
ಈ ಸಮಿತಿಯ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾದ ಎಲ್ಲಾ ಅನುಮಾನಗಳು ಸರ್ಕಾರ ಹೊರಡಿಸಿದ ಅಧಿಸೂಚನೆಯಿಂದ ನಿಜವಾಗಿವೆ. ನಿಸ್ಸಂಶಯವಾಗಿ, ಇಂತಹ ರೈತ ವಿರೋಧಿ ಮತ್ತು ಅರ್ಥಹೀನ ಸಮಿತಿಗೆ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳನ್ನು ಕಳುಹಿಸುವುದಕ್ಕೆ ಯಾವುದೇ ತಾರ್ಕಿಕ ಆಧಾರವಿಲ್ಲ ಎಂದು ಎಸ್‌ಕೆಎಂ ರಾಷ್ಟ್ರೀಯ ಮುಖಂಡರು ಒಂದು ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.
ಸರ್ಕಾರವು ಈ ಸಮಿತಿಗೆ ಹೆಸರುಗಳನ್ನು ಸೂಚಿಸಲು ಎಸ್‌ಕೆಎಂ ನ್ನು ಕೇಳಿದಾಗ, 24 ಮಾರ್ಚ್ 2022 ರಂದು ಕೃಷಿ ಕಾರ್ಯದರ್ಶಿಗೆ ಕಳುಹಿಸಲಾದ ಇಮೇಲ್‌ನಲ್ಲಿ, ಈ ಕೆಳಗಿನ ಸ್ಪಷ್ಟೀಕರಣಗಳನ್ನು ಸರಕಾರದಿಂದ ಕೇಳಲಾಯಿತು.
1) ಈ ಸಮಿತಿಯ ಉಲ್ಲೇಖದ ಷರತ್ತುಗಳು(ಟಿಒಆರ್) ಏನಾಗಿರುತ್ತವೆ?
2) ಸಂಯುಕ್ತ ಕಿಸಾನ್ ಮೋರ್ಚಾವನ್ನು ಹೊರತುಪಡಿಸಿ, ಈ ಸಮಿತಿಯಲ್ಲಿ ಇತರ ಯಾವ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಪದಾಧಿಕಾರಿಗಳನ್ನು ಸೇರಿಸಲಾಗುವುದು?
3) ಸಮಿತಿಯ ಅಧ್ಯಕ್ಷರು ಯಾರು ಮತ್ತು ಅದರ ಕಾರ್ಯಚಟುವಟಿಕೆ ಹೇಗಿರುತ್ತದೆ?
4) ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಎಷ್ಟು ಸಮಯವನ್ನು ಪಡೆಯುತ್ತದೆ?
5) ಸಮಿತಿಯ ಶಿಫಾರಸುಗಳನ್ನು ಸರ್ಕಾರ ಜಾರಿಮಾಡಲು ಬದ್ಧವಾಗಿದೆಯೇ?
ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲಿಲ್ಲ. ಆದರೂ ಕೃಷಿ ಸಚಿವರು ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರತಿನಿಧಿಗಳ ಹೆಸರು ಬರದ್ದರಿಂದಾಗಿ ಸಮಿತಿ ರಚನೆಯು ಸ್ಥಗಿತಗೊಂಡಿದೆ ಎಂದು ಹೇಳಿಕೆಗಳನ್ನು ನೀಡುತ್ತಲೇ ಬಂದರು.
ಈಗ ಸಂಸತ್ ಅಧಿವೇಶನದ ಮುನ್ನ ಈ ಸಮಿತಿಯನ್ನು ಪ್ರಕಟಿಸಿ ಸರ್ಕಾರ ದಾಖಲೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿದೆ. ಆದರೆ ಅಧಿಸೂಚನೆಯು ಈ ಸಮಿತಿಯ ಹಿಂದೆ ಸರ್ಕಾರದ ದುರುದ್ದೇಶ ಮತ್ತು ಈ ಸಮಿತಿಯ ಅಪ್ರಸ್ತುತತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಎಸ್‌ಕೆಎಂ ಹೇಳಿದೆ. ಇದಕ್ಕೆ ಅದು ಮೂರು ಕಾರಣಗಳನ್ನು ಕೊಟ್ಟಿದೆ:
- ಸಮಿತಿಯ ಅಧ್ಯಕ್ಷರು ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಎಲ್ಲಾ ಮೂರು ರೈತ ವಿರೋಧಿ ಕಾನೂನುಗಳನ್ನು ರಚಿಸಿದವರು ಇವರೇ. ಅವರೊಂದಿಗೆ, ಈ ಮೂರು ಕಾನೂನುಗಳ ಮುಖ್ಯ ಪ್ರತಿಪಾದಕರಾಗಿದ್ದ ನೀತಿ ಆಯೋಗ್‌ನ ಸದಸ್ಯ ರಮೇಶ್ ಚಂದ್ ಅವರೂ ಇದ್ದಾರೆ. ತಜ್ಞರಾಗಿ ಎಂಎಸ್‌ಪಿಗೆ ಕಾನೂನು ಸ್ಥಾನಮಾನ ನೀಡುವುದನ್ನು ವಿರೋಧಿಸಿದವರು ಅರ್ಥಶಾಸ್ತ್ರಜ್ಞರು.
- ಸಮಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ 3 ಪ್ರತಿನಿಧಿಗಳಿಗೆ ಜಾಗ ಬಿಡಲಾಗಿದೆ. ಆದರೆ ಉಳಿದ ಜಾಗಗಳಲ್ಲಿ, ರೈತ ನಾಯಕರ ಹೆಸರಿನಲ್ಲಿ, ಸರ್ಕಾರವು ಎಲ್ಲಾ ಮೂರು ರೈತ ವಿರೋಧಿ ಕಾನೂನುಗಳನ್ನು ಬಹಿರಂಗವಾಗಿ ಪ್ರತಿಪಾದಿಸಿದ ತನ್ನ 5 ನಿಷ್ಠಾವಂತರನ್ನು ಇರಿಸಿದೆ. ಇವರೆಲ್ಲ ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ ಅಥವಾ ಅವರ ನೀತಿಯನ್ನು ಬೆಂಬಲಿಸುತ್ತಾರೆ. ಕೃಷ್ಣ ವೀರ್ ಚೌಧರಿ ಅವರು ಇಂಡಿಯನ್ ಫಾರ್ಮರ್ಸ್ ಸೊಸೈಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಬಿಜೆಪಿಯ ನಾಯಕರಾಗಿದ್ದಾರೆ. ಸೈಯದ್ ಪಾಶಾ ಪಟೇಲ್ ಮಹಾರಾಷ್ಟ್ರದ ಮಾಜಿ ಬಿಜೆಪಿ ಎಂಎಲ್‌ಸಿ. ಪ್ರಮೋದ್ ಕುಮಾರ್ ಚೌಧರಿ ಅವರು ಆರ್‌ಎಸ್‌ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಶೇತ್ಕರಿ ಸಂಘಟನೆಗೆ ಸಂಬಂಧಿಸಿದ ಗುಣವಂತ್ ಪಾಟೀಲ್ ಅವರು ಡಬ್ಲ್ಯುಟಿಒ ಪ್ರತಿಪಾದಕರು ಮತ್ತು ಸ್ವತಂತ್ರ ಭಾರತ್ ಪಕ್ಷ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಗುಣಿ ಪ್ರಕಾಶ್ ಅವರು ರೈತರ ಚಳವಳಿಯನ್ನು ವಿರೋಧಿಸುವಲ್ಲಿ ಒಬ್ಬ ಹರಿಕಾರರು. ಈ ಐದು ಜನರು ಎಲ್ಲಾ ಮೂರು ರೈತ ವಿರೋಧಿ ಕಾನೂನುಗಳ ಪರವಾಗಿ ಬಹಿರಂಗವಾಗಿ ಮಾತನಾಡಿದವರು ಮತ್ತು ಅವರಲ್ಲಿ ಹೆಚ್ಚಿನವರು ರೈತರ ಚಳವಳಿಯ ವಿರುದ್ಧ ವಿಷವನ್ನು ಉಗುಳುತ್ತ ಬಂದಿದ್ದಾರೆ.
- ಸಮಿತಿಯ ಕಾರ್ಯಸೂಚಿಯಲ್ಲಿ ಎಂಎಸ್‌ಪಿ ಕುರಿತು ಕಾನೂನು ಮಾಡುವ ಯಾವುದೇ ಉಲ್ಲೇಖವಿಲ್ಲ. ಅಂದರೆ, ಈ ಪ್ರಶ್ನೆಯನ್ನು ಸಮಿತಿಯ ಮುಂದೆ ಇಡಲಾಗುವುದಿಲ್ಲ. ಸರ್ಕಾರದ ಸಮಿತಿಯನ್ನು ಈಗಾಗಲೇ ಸ್ಥಾಪಿಸಿರುವ ಕೆಲವು ಐಟಂಗಳನ್ನು ಕಾರ್ಯಸೂಚಿಯಲ್ಲಿ ಹಾಕಲಾಗಿದೆ. ಕೃಷಿ ಮಾರ್ಕೆಟಿಂಗ್‌ನಲ್ಲಿ ಸುಧಾರಣೆಗಳ ಹೆಸರಿನಲ್ಲಿ, ಮೂರು ಕರಾಳ ಕಾನೂನುಗಳನ್ನು ಮರಳಿ ತರಲು ಸರ್ಕಾರ ಪ್ರಯತ್ನಿಸಬಹುದಾದ ಐಟಂ ಅನ್ನು ಸೇರಿಸಲಾಗಿದೆ.
ಈ ಸಂಗತಿಗಳ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪ್ರತಿನಿಧಿಗಳನ್ನು ಈ ಸಮಿತಿಗೆ ಕಳುಹಿಸಲು ಯಾವುದೇ ತಾರ್ಕಿಕ ಆಧಾರ ಇಲ್ಲ ಎಂದಿರುವ ಈ ಹೇಳಿಕೆ ರೈತರ ಬೆಳೆಗೆ ನ್ಯಾಯಯುತ ಬೆಲೆ ಖಾತ್ರಿಪಡಿಸಲು ಎಂಎಸ್‌ಪಿ ಕಾನೂನು ಖಾತರಿಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದೆ.