ಎಂಎಸ್‌ಪಿ ಜಾರಿಗಾಗಿ ದೆಹಲಿಗೆ ಪಾದಯಾತ್ರೆ ಹೊರಟ ಎಂಎಸ್ಸಿ ಪದವೀಧರ

ಹೆಗಲಲ್ಲಿ ಬಟ್ಟೆ ತುಂಬಿದ ಒಂದು ಬ್ಯಾಗ್, ಕೈಯಲ್ಲೊಂದು ಕುಡಿಯುವ ನೀರಿನ ಬಾಟಲ್, ಗುರಿ 6000 ಕಿಲೋಮೀಟರ್ ನಡಿಗೆ,  ಈಗ ಕಳೆದ 65 ದಿನಗಳಲ್ಲಿ ಕ್ರಮಿಸಿರುವುದು 1200 ಕಿಲೋಮೀಟರ್ 13 ಜಿಲ್ಲೆಗಳು. ಹೆಸರು ನಾಗರಾಜ್ ಕಲಕುಟಗರ್ ಮೂಲತಹ ಬಾಗಲಕೋಟೆಯವರಾದ 39 ವರ್ಷದ ಈ ಯುವಕ ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ವೈಜ್ಞಾನಿಕ ಬೆಲೆ ನಿಗದಿಗೆ (ಎಂಎಸ್‌ಪಿ) ಕಾನೂನು ಜಾರಿಮಾಡಬೇಕೆಂದು ಒತ್ತಾಯಿಸಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಶಾಂತಿಯುತ ಪ್ರತಿಭಟನೆಗಳನ್ನು ಬೆಂಬಲಿಸಿ ಪಾದಯಾತ್ರೆ ಮೂಲಕ ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ.

ಎಂಎಸ್ಸಿ ಎಂಟೆಕ್ ವಿದ್ಯಾಭ್ಯಾಸ ಮಾಡಿ ಖಾಸಗಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಕೈತುಂಬ ಸಂಬಳ ಪಡೆದು ಜೀವನವನ್ನು ಜಾಲಿಯಾಗಿ ಜರ್ಮನಿಯ ಬರ್ಲಿನ್‌ನಲ್ಲಿ ಕಳೆಯುತ್ತಿರುವಾಗ ದೂರದ ಆದರೆ ತನ್ನ ತವರೂರಾದ ಭಾರತದಲ್ಲಿ ನಡೆದ ಎರಡು ಘಟನೆಗಳು ಇವರ ಮೇಲೆ ಘಾಡವಾದ ಪ್ರಭಾವವನ್ನು ಬೀರಿ, ಇವರ ಆಲೋಚನೆಗಳನ್ನೇ ಬದಲಿಸುತ್ತವೆ. ಮೊದಲನೆಯದಾಗಿ ಇಂಡಿಯಾ ಅಗೆನೆಸ್ಟ್ ಕರಪ್ಷನ್ ಹೋರಾಟದಿಂದ ಪ್ರಭಾವಿತರಾಗುತ್ತಾರೆ. ಮತ್ತು ದೆಹಲಿ ನಿರ್ಭಯ ಅತ್ಯಾಚಾರ ಪ್ರಕರಣ ಮತ್ತು ನಿರ್ಭಯಳಿಗೆ ನ್ಯಾಯಕ್ಕಾಗಿ ದೇಶಾಧ್ಯಂತ ನಡೆದ ವ್ಯಾಪಕ ಚಳುವಳಿ ಇವರನ್ನು ಘಾಡವಾಗಿ ಪ್ರಭಾವಿಸುತ್ತದೆ. ಎಷ್ಟರಮಟ್ಟಿಗೆ ಎಂದರೆ “ನನಗೆ ಮಗಳಿದ್ದು ಅವಳಿಗೂ ನಾಳೆ ದಿನ ಈ ರೀತಿ ನಡೆದರೆ” ಎಂದು ನೆನೆಸಿಕೊಂಡು ಬೆಚ್ಚಿಬೀಳುತ್ತಾರೆ. ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಮತ್ತು ಅತ್ಯಾಚಾರ ಇವುಗಳ ವಿರುದ್ಧ ಏನಾದರೂ ಮಾಡಬೇಕೆಂದು ನಿರ್ಧರಿಸಿ ವಾಪಸ್ ಭಾರತಕ್ಕೆ ಬರುತ್ತಾರೆ.

ಭಾರತದಲ್ಲಿ ಥ್ಯಾಂಕ್ಯೂಸ್ ನ್ಯಾಚುರಲ್ ಎಂಬ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಭ್ರಷ್ಟಾಚಾರದ ವಿರುದ್ದ ತಮ್ಮ ತವರು ಜಿಲ್ಲೆಯಾದ ಬಾಗಲಕೋಟೆಯಲ್ಲಿ ಹೋರಾಟಗಳನ್ನು ನಡೆಸುತ್ತಾ 2018 ರಲ್ಲಿ ರಾಜ್ಯದ ಗಮನ ಸೆಳೆಯುವಂತೆ ಅಕ್ರಮ ಮರಳು ದಂದೆಯ ವಿರುದ್ಧ ಎಂಟು ಸಾವಿರ ಕಟ್ಟಡ ಕಾರ್ಮಿಕರನ್ನು ಸೇರಿಸಿಕೊಂಡು ಬೃಹತ್ ಹೋರಾಟವನ್ನು ಸಂಘಟಿಸುತ್ತಾರೆ. ನಂತರ ಬಾಗಲಕೋಟೆ ಜಿಲ್ಲೆಯ ಎಎಪಿಯ ಸಂಚಾಲಕರಾಗಿ ಕೆಲಸ ಮಾಡುತ್ತಾರೆ.

ಈ ಮಧ್ಯೆ 2017 ರಲ್ಲಿ ಬಾಗಲಕೋಟೆ ಜಿಲ್ಲೆಯ ಸುಮಾರು 25 ಹಳ್ಳಿಗಳಲ್ಲಿ ಏಕಾಂಗಿಯಾಗಿ ಗ್ರಾಮವಾಸ್ತವ್ಯ ಮಾಡುವ ಮೂಲಕ ಹಳ್ಳಿಯ ಬದುಕು, ರೈತರ ಕಷ್ಟಗಳು, ಕೃಷಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮತ್ತು ಈ ಕುರಿತು ಗಂಭೀರವಾದ ಅಧ್ಯಯನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಾರೆ. ರೈತರ ಜೊತೆಗಿನ ಚರ್ಚೆ ಮತ್ತು ಅವರ ಅಧ್ಯಯನದಿಂದ ಕಂಡುಕೊಂಡ ಸತ್ಯವೇನೆಂದರೆ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿಯಾದರೆ ಅವರ ಎಲ್ಲ ಕಷ್ಟಗಳು ನಿವಾರಣೆಯಾಗುತ್ತವೆ. ಮಾತ್ರವಲ್ಲ ರೈತರು ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುತ್ತದೆ. ಎಂಬ ನಿಲುವಿಗೆ ಬಂದಿದ್ದರು. ತಮ್ಮ ಜಿಲ್ಲೆಯ ಕಬ್ಬು ಬೆಳೆಗಾರರ ಸ್ಥಿತಿಯೂ ಇದೇ ಆಗಿತ್ತು. ಒಂದೆಡೆ ಬೆಳೆಗೆ ಬೆಲೆ ಇಲ್ಲ ಮತ್ತೊಂದೆಡೆ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಾಕಿಯನ್ನು ವರ್ಷಾನುಗಟ್ಟಲೆ ಕೊಡುವುದೇ ಇಲ್ಲ. ಇದರ ಜೊತೆಗೆ ತಮ್ಮ ಊರಿನಲ್ಲಿ ಕೃಷಿ ಚಟುವಟಿಕೆಯ ಜೊತೆ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

 

ಯಾವಾಗ ದೆಹಲಿಯ ಗಡಿಗಳಲ್ಲಿ ರೈತ ಚಳುವಳಿ ಪ್ರಾರಂಭವಾಯಿತೋ ಆಗಿನಿಂದ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾಗರಾಜ್‌ಗೆ ಒಂದು ದಿನ ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಹೋರಾಟಗಾರರನ್ನು “ಆಂದೋಲನ ಜೀವಿಗಳು” ಎಂದು ಕರೆದದ್ದು ತುಂಬ ಬೇಸರವನ್ನು ಮತ್ತು ಸಿಟ್ಟನ್ನು ಉಂಟುಮಾಡಿತು. ಈ ಸಿಟ್ಟು ಇಂದು ಅವರನ್ನು ದೆಹಲಿಯ ಕಡೆ ನಡೆಯುವಂತೆ ಮಾಡಿದೆ.

ಫೆಬ್ರವರಿ 11 ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶರ ಬೆಟ್ಟದಿಂದ ಆರಂಬಿಸಿದ ಇವರ ಪಾದಯಾತ್ರೆ ಸಧ್ಯ ಕರ್ನಾಟಕದ 13 ಜಿಲ್ಲೆಗಳಲ್ಲಿ ಸಂಚರಿಸಿ ಮುಂದೆ ಸಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಮುಗಿಸಿ ನಂತರ ಮಹಾರಾಷ್ಟ್ರದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿಯತ್ತ ಹೆಜ್ಜೆ ಹಾಕಲಿರುವ ನಾಗರಾಜ್‌ರವರಿಗೆ ಕಳೆದ 56 ದಿನಗಳ ಪಾದಯಾತ್ರೆ ದೊಡ್ಡ ಅನುಭವವನ್ನು ನೀಡಿದೆ. ಈ ಕುರಿತು ಅವರು ಮಾತನಾಡುತ್ತಾ “ನಾನು ರೈತರ ಪರವಾಗಿ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಆರಂಭಿಸಿದ ಪಾದಯಾತ್ರೆಯ ಪ್ರಾರಂಭದ ದಿನಗಳಲ್ಲಿ ಕೆಲವು ಸಮಸ್ಯೆಗಳಾದವು ಆನಂತರ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಾದಯಾತ್ರೆಯ ವಿಚಾರ ಪ್ರಚಾರವಾದ ಮೇಲೆ ಎಲ್ಲೆಡೆ ವ್ಯಾಪಕ ಜನ ಬೆಂಬಲ ಸಿಗುತ್ತಿದೆ ಮಾತ್ರವಲ್ಲ ಎಲ್ಲ ರೀತಿಯ ಜನರ ಸಂಪರ್ಕದಿಂದ ಅವರ ಸಮಸ್ಯೆಗಳು ಅವರ ಸಂಸ್ಕೃತಿಗಳ ಪರಿಚಯವಾಗುತ್ತಿದೆ. ಪ್ರತಿದಿನ ನಡಿಗೆ ಆರಂಭಿಸಿದ ಮೇಲೆ ದಾರಿಯಲ್ಲಿ ಸಿಗುವ ಹಳ್ಳಿಗಳನ್ನು, ಜನರನ್ನು ಮಾತನಾಡಿಸುತ್ತಾ ವಿಚಾರ ವಿನಿಮಯ ಮಾಡುತ್ತಾ ಸಾಗುತ್ತಿದ್ದೇನೆ. ಸಂಘಟನೆಗಳು ಸ್ನೇಹಿತರು ಇರುವ ಕಡೆ ಸಭೆಗಳು ಮತ್ತು ಊಟ, ವಸತಿ ವ್ಯವಸ್ಥೆ ಮಾಡುತ್ತಾರೆ. ಇಲ್ಲದಿದ್ದರೆ ನಾನು ರಾತ್ರಿಯ ವೇಳೆ ಯಾವ ಊರಿನಲ್ಲಿರುತ್ತೇನೆಯೋ ಅದೇ ಊರಿನಲ್ಲಿ ಗ್ರಾಮಸ್ಥರೊಂದಿಗೆ ಮಾತನಾಡಿ ಅಲ್ಲಿಯೇ ವಾಸ್ಥವ್ಯ ಮಾಡುತ್ತೇನೆ. ಹಳ್ಳಿಗಳಲ್ಲಿರುವ ಜನರಲ್ಲಿ ಈ ಕೃಷಿ ಕಾನೂನುಗಳ ಬಗ್ಗೆ ಆಕ್ರೋಶ ಇದೆ. ಆದರೂ ಕೆಲವರು ಮೋದಿಗೆ ಬೆಂಬಲಿಸುವ ಮಾತುಗಳನ್ನಾಡುತ್ತಾರೆ. ಆದ್ದರಿಂದ ಈ ಕಾಯ್ದೆಗಳ ಕರಾಳತೆಯನ್ನು ಎಲ್ಲ ಸಂಘಟನೆಗಳು ಸೇರಿ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಅರ್ಥಮಾಡಿಸಿ ಅವರನ್ನು ಈ ಆಂದೋಲನದಲ್ಲಿ ತೊಡಗಿಸುವ ಮೂಲಕ ಈ ಹೋರಾಟ ದೇಶವ್ಯಾಪಿಯಾಗಿ ಹಬ್ಬಿಕೊಳ್ಳುವಂತೆ ಮಾಡಬೇಕು ಎಂಬುದು ನನ್ನ ಆಶಯ” ಎನ್ನುತ್ತಾರೆ.

“ನನ್ನ ಮೇಲೆ ಅನ್ನದ ಋಣ ಇರುವುದರಿಂದ ನಾನು ಇಂತಹ ಕೆಲಸಕ್ಕೆ ಕೈ ಹಾಕಿದ್ದೇನೆ, ನನಗೆ ಸಿಗುತ್ತಿರುವ ಪ್ರೋತ್ಸಾಹ, ಸಹಕಾರ ಮತ್ತು ಜನಬೆಂಬಲದಿಂದಾಗಿ ಹುಮ್ಮಸ್ಸು ಹಿಮ್ಮಡಿಗೊಂಡಿದೆ. ಇದೇ ಹುಮ್ಮಸ್ಸಿನಲ್ಲಿ ಮುಂದೆ ಸಾಗುತ್ತೇನೆ”ಎನ್ನುತ್ತಾರೆ. ಇಂತಹ ಕಾನೂನುಗಳು ಒಬ್ಬರು ಪಾದಯಾತ್ರೆ ಮಾಡುವುದರಿಂದ ಯಾವ ಬದಲಾವಣೆಯನ್ನೂ ತರಲು ಸಾಧ್ಯವಿಲ್ಲದಿರಬಹುದು ಆದರೆ ಇವರು ನಡೆದ ದಾರಿಯುದ್ದಕ್ಕೂ ಇವರು ಭೇಟಿ ಮಾಡಿದ ಜನರಲ್ಲಿ ಒಂದು ಚರ್ಚೆ ಮತ್ತು ಆಲೋಚನೆಯ ಜೊತೆಗೆ ಒಂದು ಸಂಚಲನವನ್ನು ಉಂಟುಮಾಡುತ್ತಿದೆ. ಜೊತೆಗೆ ಇವರು ಇಂತಹ ಮಹತ್ ಕಾರ್ಯಕ್ಕೆ ನಿರ್ಧರಿಸಿರುವ ಇವರ ಬದ್ಧತೆಯ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್.ಆರ್. ನವೀನ್ ಕುಮಾರ್ ಹಾಸನ

Donate Janashakthi Media

Leave a Reply

Your email address will not be published. Required fields are marked *