ಆದಿತ್ಯ ಭಾರದ್ವಾಜ್
ಹನ್ನೊಂದು ವರ್ಷಗಳ ನನ್ನ ಕ್ರೈಂ ವರದಿಗಾರಿಕೆಯ ಅನುಭವದಲ್ಲಿ ಹೇಳಬಲ್ಲೆ: ಕೋಮು ಸೂಕ್ಷ್ಮ ಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಬಲ್ಲ ಒಂದು ಸಾವು ಸಂಭವಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳುವ ಮೊದಲ ಕ್ರಮ ಮೃತದೇಹದ ಮೆರವಣಿಗೆಯನ್ನು ತಡೆಯುವುದು, ಆದಷ್ಟು ಬೇಗ ಜನ ಜಂಗುಳಿ ಇಲ್ಲದೆ ಅಂತ್ಯಸಂಸ್ಕಾರ ನಡೆಸಿಬಿಡುವುದು.
ಆದರೆ, ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮೃತದೇಹದ ಮೆರವಣಿಗೆ ಮಾಡಲಾಗಿದೆ. ಹಿರಿಯ ಸಚಿವರಾದ ಈಶ್ವರಪ್ಪನವರು ಮತ್ತು ಶಿವಮೊಗ್ಗದ ಸಂಸದರಾದ ರಾಘವೇಂದ್ರ ಅವರೇ ಈ ಮೆರವಣಿಗೆಯ ನೇತೃತ್ವ ವಹಿಸಿದ್ದರು! ಈ ಮೆರವಣಿಗೆ ಸಾಗಿದ ದಾರಿಯಲ್ಲೇ ದೊಂಬಿ ನಡೆದಿದೆ.
೨೦೦೨ರಲ್ಲಿ ಗೋಧ್ರಾದಲ್ಲಿ ಸತ್ತ ಕರಸೇವಕರ ಶವಗಳ ಮೆರವಣಿಗೆಯೇ ಕೋಮುಗಲಭೆಯನ್ನು ರಾಜ್ಯಕ್ಕೆಲ್ಲಾ ಹಬ್ಬಿಸಿತು. ಕಳೆದ ವರ್ಷ ಡಿ ಜೆ ಹಳ್ಳಿಯ ಗಲಭೆಯಲ್ಲಿ ಮೂರು ಜನ ಪೋಲೀಸ್ ಫೈರಿಂಗ್ ಅಲ್ಲಿ ಸತ್ತರು. ಮರುದಿನ ಈ ಮೂರು ಕುಟುಂಬಗಳನ್ನು ಸದ್ದುಗದ್ದಲವಿಲ್ಲದೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಪೋಲೀಸರು ಅಂತ್ಯಕ್ರಿಯೆ ನಡೆಸಿಕೊಟ್ಟರು. ಅವತ್ತು ಅಲ್ಲಿ ಆ ಮೂವರ ಮೃತದೇಹಗಳು ಡಿ ಜೆ ಹಳ್ಳಿಯಲ್ಲಿ ಇದ್ದಿದ್ದರೆ, ಸಾವಿರಾರು ಜನ ಸೇರಿದ್ದರೆ! ನೆನೆಸಿಕೊಳ್ಳಲೂ ಭಯ ಆಗುತ್ತೆ. ಹಾಥ್ರಸ್ ಅಲ್ಲಿ ಆ ನತದೃಷ್ಟ ಹುಡುಗಿಯ ಅಂತ್ಯಕ್ರಿಯೆಯೂ ಹೀಗೆ ಅವಸರದಲ್ಲಿ ನಡೆಯಿತು, ಆದರೆ ಅದರ ಉದ್ದೇಶ ಒಳ್ಳೆಯದಿರಲಿಲ್ಲ. ಸಾಕ್ಷಿ ನಾಶವೇ ಪ್ರಮುಖವಾಗಿತ್ತು. ಕುಟುಂಬಸ್ಥರ ಕೈಲಿ ಅಂತ್ಯಕ್ರಿಯೆ ನಡೆಸುವ ಮಾನವೀಯತೆಯೂ ಇಲ್ಲದಾಯಿತು.
ಇವತ್ತು ಮೃತದೇಹದ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದು ಅಕ್ಷರಶಃ ಅಪರಾಧ. ರಾಜಕಾರಣಿಗಳು ನೂರು ಹೇಳ್ತಾರೆ. ಆದರೆ ಶಿವಮೊಗ್ಗದ ಕಾನೂನು ಸುವ್ಯವಸ್ಥೆಗೆ ಜವಾಬ್ದಾರರಾದ ಪೊಲೀಸ್ ಅಧಿಕಾರಿಗಳು ವೃತ್ತಿಪರರಾಗಿದ್ದರೆ ಇದಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ.
ಇನ್ನು ಗೃಹಮಂತ್ರಿ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೊಂದು ಕಿವಿ ಮಾತು. ಆಡಳಿತದ ಜವಾಬ್ದಾರಿ ಹೊತ್ತವರು ಎಲ್ಲಿ ರಾಜಕಾರಣವನ್ನು ನಿಲ್ಲಿಸಿಕೊಂಡು, ಆಡಳಿತಗಾರರಾಗಬೇಕು ಎಂಬ ಸ್ಪಷ್ಟತೆ ಹೊಂದಿರಬೇಕು. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಕರ್ನಾಟಕ by and large ಉತ್ತಮವಾಗಿದೆ. ಈಗಾಗಲೇ ನಮ್ಮನ್ನು ದಕ್ಷಿಣದ ಉತ್ತರಪ್ರದೇಶ ಎಂದು ಕರೆಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯಲ್ಲೂ ನಾವು ಉತ್ತರಪ್ರದೇಶ ಆಗುವುದು ಬೇಡ. ಶಾಲೆ ಕಾಲೇಜುಗಳ ಕ್ಯಾಂಪಸ್ಸುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದೆ ರಾಜ್ಯಾದ್ಯಂತ ರಜೆ ಘೋಷಿಸಿದಾಗಲೇ ಆಡಳಿತ ನಡೆಸುವವರಿಗೆ ಲಜ್ಜೆ ಮೂಡಬೇಕಿತ್ತು. ಈಗ ಶಿವಮೊಗ್ಗದ ಗಲಭೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದ ಯಾವುದೇ ಸರ್ಕಾರವನ್ನು, ಪಕ್ಷಾತೀತವಾಗಿ, ನಮ್ಮ ನಾಡು ತಿರಸ್ಕರಿಸಿದೆ ಎಂಬುದನ್ನು ಮುಖ್ಯಮಂತ್ರಿಗಳು ಗುರುತಿಸಬೇಕು.