ಬೆಂಗಳೂರು: ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವು ದೇಶದ ಮಣ್ಣಿನ ಮಕ್ಕಳಿಗೆ ಸಿಕ್ಕ ಅಭೂತಪೂರ್ವ ಜಯವಾಗಿದೆ. ರೈತ ಹೋರಾಟಗಾರರಿಗೆ ಅಭಿನಂದನೆಗಳು. ಕೇವಲ ಕೃಷಿ ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು. ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆಸಿದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ತಲಾ `25 ಲಕ್ಷ ಪರಿಹಾರ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇದನ್ನು ಓದಿ: ಮೂರೂ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧಾರ – ಪ್ರಧಾನಿ ಮೋದಿ
ರೈತರ ಹೋರಾಟದಲ್ಲಿ ಅಪಾರ ಸಾವು-ನೋವುಗಳು ಸಂಭವಿಸಿವೆ. 700 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿ, ವಾಹನಗಳನ್ನು ನುಗ್ಗಿಸಿ ಕೊಲ್ಲಲಾಯಿತು. ಪೊಲೀಸ್ ಮುಂತಾದ ಶಕ್ತಿಗಳನ್ನು ಬಳಸಿ ಹೋರಾಟವನ್ನು ದಮನಿಸಲು ಪ್ರಯತ್ನಿಸಲಾಗಿತ್ತು. ಆದರೂ ಕೂಡ ರೈತರು ಉಕ್ಕಿನಂತೆ ನಿಂತು ಸರ್ವಾಧಿಕಾರಿ ಪ್ರಭುತ್ವವನ್ನು ಸೋಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಹಿಂಸಾ ಮಾರ್ಗದ ಧೀರೋದ್ಧಾತ ಹೋರಾಟ
ಸ್ವಾತಂತ್ರ್ಯ ಹೋರಾಟದ ನಂತರ ಅಹಿಂಸಾ ಮಾರ್ಗದಲ್ಲಿ ನಡೆಸಿದ ಬೃಹತ್ ಹೋರಾಟ ಇದಾಗಿದೆ. ನಮ್ಮ ರೈತರು ಚಳಿ, ಮಳೆ, ಸುಡುವ ಬಿಸಿಲು, ಕೊಲೆಗಡುಕ ಕೊರೊನಾ ಎಲ್ಲವನ್ನು ನಿಗ್ರಹಿಸಿ ದೇಶದ ಜನರಿಗೆ ಹೋರಾಟ ಮತ್ತು ಗೆಲುವಿನ ಮಹತ್ವವೇನು ಎಂದು ತೋರಿಸಿಕೊಟ್ಟಿದ್ದಾರೆ. ಆದರೂ ಇದು ತಾತ್ಕಾಲಿಕ ಗೆಲುವು. ಯಾಕೆಂದರೆ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಚುನಾವಣೆಗಳ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಹಿಟ್ಲರ್ ಶಾಹಿ ಆಡಳಿತ ಮಾಡಿದರೆ ಚುನಾವಣೆಗಳಲ್ಲಿ ನಾವು ಚಿಂದಿಯಾಗಿ ಹೋಗುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಅವರಿಗೆ ಬಹುಶಃ ಗುಪ್ತಚರ ವರದಿಗಳು ಮಾಹಿತಿ ನೀಡಿರಬಹುದು. ಹಾಗಾಗಿ ಚುನಾವಣೆಗಳು ಮುಗಿಯಲಿ ಆಮೇಲೆ ನೋಡೋಣ ಎಂದು ರೈತ ದ್ರೋಹಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ಸು ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರೈತ ಆಂದೋಲನದ ಒಂದು ಐತಿಹಾಸಿಕ ವಿಜಯವಾಗಲಿದೆ – ಸಂಯುಕ್ತ ಕಿಸಾನ್ ಮೋರ್ಚಾ
ರೈತರ ಹೋರಾಟ ಸ್ಮರಣೀಯ:
ದೇಶದ ಜನ ಕೊರೊನಾ ಸಾಂಕ್ರಾಮಿಕ ರೋಗದಿಂದ ನರಳುತ್ತಿದ್ದಾಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2020ರ ಮೇ-ಜೂನ್‌ನಲ್ಲಿ ರೈತದ್ರೋಹಿಯಾದ ಕಾಯ್ದೆಗಳಾದ ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ-2020, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ- 2020 ಮುಂತಾದವನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿತ್ತು. ರೈತರು ವೀರೋಚಿತವಾದ, ಧೀರೋದಾತ್ತವಾದ ಹೋರಾಟವನ್ನು ಮಾಡುತ್ತಾ ಬಂದರು. ಕಡೆಗೂ ಮೋದಿ ಸರ್ಕಾರ ಈ ಜನದ್ರೋಹಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕಾಯಿತು. ಹಾಗಾಗಿ ರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ ಎಂದು ಹೇಳಿದ್ದಾರೆ.
ಸ್ವಾಮಿನಾಥನ್ ವರದಿ ಜಾರಿಯಾಗಲಿ
ಈಗ ನಾವು ಒತ್ತಾಯಿಸಬೇಕಿರುವುದು ಕೂಡಲೇ ಸ್ವಾಮಿನಾಥನ್ ಅವರ ವರದಿಯನ್ನು ಅಂಗೀಕರಿಸಿ ವೈಜ್ಞಾನಿಕ ಬೆಲೆಗಳನ್ನು ಜಾರಿಗೊಳಿಸಬೇಕು. ನಾನು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿರುವ ವಿಚಾರವನ್ನು ಈಗಲೂ ಒತ್ತಾಯಿಸುತ್ತೇನೆ. ರೈತರು ಬೆಳೆಯುವ ಪ್ರತಿ ಉತ್ಪನ್ನಕ್ಕೂ ವೈಜ್ಞಾನಿಕ ಬೆಲೆ ನಿಗಧಿಗೊಳಿಸಿ ಆ ಬೆಲೆಗಳನ್ನು ಕಾನೂನುಬದ್ಧಗೊಳಿಸಬೇಕು. ಸರ್ಕಾರ ನಿಗಧಿಗೊಳಿಸಿದ ಬೆಲೆಗಳಿಗಿಂತ ಕಡಿಮೆ ದರಕ್ಕೆ ಕೊಳ್ಳುವುದನ್ನು ನಿರ್ಬಂದಿಸಬೇಕು.
ಇದನ್ನು ಓದಿ: ರೈತರ ಐತಿಹಾಸಿಕ ವಿಜಯ : ಯಾರೆಲ್ಲ ಏನು ಹೇಳಿದರು? ಪ್ರತಿಕ್ರಿಯೆ ನೋಡಿ
ವೈಜ್ಞಾನಿಕ ದರವು ಕೊಳ್ಳುವ ಗ್ರಾಹಕರಿಗೂ ಅನ್ವಯಿಸಬೇಕು. ಅದಾನಿ, ಅಂಬಾನಿ, ದಮಾನಿ ಮುಂತಾದ ಬೃಹತ್ ಕಾರ್ಪೊರೇಟ್ ಮಧ್ಯವರ್ತಿಗಳನ್ನು ಮುಲಾಜಿಲ್ಲದೆ ನಿರ್ಬಂಧಿಸಬೇಕು. ಇವರೆಲ್ಲ ರೈತನಿಂದ ಹತ್ತು ರೂಪಾಯಿಗೆ ಕೊಂಡು ಗ್ರಾಹಕರಿಗೆ ನೂರು ರೂಪಾಯಿಗೆ ಮಾರುವ ಜನ. ಇಂಥ ದರ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ರೈತರು ಮತ್ತು ಗ್ರಾಹಕರನ್ನು ಒಂದೆ ವೇದಿಕೆಗೆ ತರುವ ವ್ಯವಸ್ಥೆಗಳನ್ನು ರೂಪಿಸಬೇಕು. ಹೋಬಳಿ, ದೊಡ್ಡ ಗ್ರಾಮ ಪಂಚಾಯತ್ ಕೇಂದ್ರಗಳಲ್ಲೂ ಎಪಿಎಂಸಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.