ಪಾಟ್ನಾ: ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ರಾಜೇಶ್ ರಂಜನ್, ಅಂದರೆ ಪಪ್ಪು ಯಾದವ್ ರನ್ನು, 1995ರ ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿ 6ರ ತಡರಾತ್ರಿ ಬಂಧಿಸಿದ ಬಳಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 7ರಂದು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಪಿಎಂಸಿಎಚ್)ಗೆ ದಾಖಲಿಸಲಾಗಿದೆ ಎಂದು newindianexpress ವರದಿ ಮಾಡಿದೆ.
ಬಂಧನದ ತಕ್ಷಣವೇ ಫೆಬ್ರವರಿ 6ರ ರಾತ್ರಿ ಪಪ್ಪು ಯಾದವ್ ಅವರನ್ನು ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐಜಿಐಎಂಎಸ್)ಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ತಪಾಸಣೆಗಾಗಿ ಇಂದಿರಾ ಗಾಂಧಿ ಹೃದ್ರೋಗ ಸಂಸ್ಥೆ (ಐಜಿಐಸಿ)ಗೆ ಕರೆದೊಯ್ಯಲಾಗಿದೆ.
ಪಾಟ್ನಾದ ಗಾರ್ಡನಿಬಾಘ್ ಪ್ರದೇಶದಲ್ಲಿ ಅಕ್ರಮವಾಗಿ ಮನೆ ಬಾಡಿಗೆಗೆ ಪಡೆದು ಅದನ್ನು ತಮ್ಮ ಪಕ್ಷದ ಕಚೇರಿಯಾಗಿ ಬಳಸಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಗಾರ್ಡನಿಬಾಘ್ ಪೊಲೀಸ್ ಠಾಣೆಯಲ್ಲಿ ಪಪ್ಪು ಯಾದವ್ ಹಾಗೂ ಇತರರ ವಿರುದ್ಧ ದಾಖಲಿಸಲಾಗಿತ್ತು.
ಇದನ್ನೂ ಓದಿ: ಫೆ. 7ರಿಂದ 10ನೇ ಟಿ20 ವಿಶ್ವಕಪ್ ಆರಂಭ; ಭಾರತ – ಯುಎಸ್ಎ ಮುಖಾಮುಖಿ!
ಮಂಡಿರಿ ಪ್ರದೇಶದಲ್ಲಿರುವ ತಮ್ಮ ನಿವಾಸಕ್ಕೆ ಪೊಲೀಸರು ಬಂಧಿಸಲು ಬಂದಾಗ, ತಮ್ಮ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಪಪ್ಪು ಯಾದವ್,
“ನಾನು ಆರೋಗ್ಯವಾಗಿಲ್ಲ… ನನಗೆ ಏನಾಗುತ್ತದೆ ಎಂಬುದೇ ಗೊತ್ತಿಲ್ಲ. ಪೊಲೀಸರು ನನಗೆ ಹಾನಿ ಮಾಡಬಹುದು ಎಂಬ ಅನುಮಾನ ಇದೆ. ಪೊಲೀಸ್ ಠಾಣೆಗೆ ಅಲ್ಲ, ನೇರವಾಗಿ ನ್ಯಾಯಾಲಯಕ್ಕೆ ಕರೆದೊಯ್ಯಬೇಕು” ಎಂದು ಹೇಳಿದರು.
ಮುಂದುವರೆದು ಅವರು,“ನ್ಯಾಯಾಲಯ ನನಗೆ ಮುಂದಿನ ದಿನ ಹಾಜರಾಗಲು ಸೂಚಿಸಿತ್ತು. ನನಗೆ ಗೃಹಬಂಧನ ವಿಧಿಸುವ ಸಾಧ್ಯತೆಯೂ ಇತ್ತು. ಪೊಲೀಸರು ಸಾಮಾನ್ಯ ಉಡುಪಿನಲ್ಲಿ ನನ್ನ ಮನೆಗೆ ಬಂದಿದ್ದರು. ಅವರು ನನ್ನನ್ನು ಕೊಲ್ಲಲು ಬಂದಿದ್ದಾರೆ ಎಂದು ಭಾವಿಸಿದೆ. ಇದು ಅಪರಾಧಿಯ ಮನೆನಾ? ಸುಮಾರು 35 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗ ಬಂಧಿಸಲು ಬಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪಪ್ಪು ಯಾದವ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಪಾಟ್ನಾದಲ್ಲಿ ನೀಟ್ ಪರೀಕ್ಷಾರ್ಥಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಾಗೂ ಅದಕ್ಕೆ ನಂತರ ನಡೆದ ಬೆಳವಣಿಗೆಗಳು ವ್ಯವಸ್ಥೆಯೊಳಗಿನ ಗಂಭೀರ ಕುಸಿತವನ್ನು ಬಹಿರಂಗಪಡಿಸುತ್ತವೆ. ಸಂತ್ರಸ್ತ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದಾಗ, ಬಿಜೆಪಿ–ಎನ್‌ಡಿಎಯ ಹಳೆಯ ತಂತ್ರಗಳು ಕಾರ್ಯರೂಪಕ್ಕೆ ಬಂದವು — ಪ್ರಕರಣವನ್ನು ದಾರಿ ತಪ್ಪಿಸುವುದು, ಕುಟುಂಬವನ್ನು ಕಿರುಕುಳ ನೀಡುವುದು ಹಾಗೂ ರಾಜ್ಯಾಧಿಕಾರದ ಮೂಲಕ ಆರೋಪಿಗಳನ್ನು ರಕ್ಷಿಸುವುದು” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, “ಆ ಪುತ್ರಿಯ ನ್ಯಾಯಕ್ಕಾಗಿ ಧೈರ್ಯವಾಗಿ ಧ್ವನಿ ಎತ್ತಿದವರು ಸಂಸದ ಪಪ್ಪು ಯಾದವ್. ಅವರನ್ನು ಬಂಧಿಸಿರುವುದು ರಾಜಕೀಯ ಪ್ರತೀಕಾರದ ಸ್ಪಷ್ಟ ಉದಾಹರಣೆ; ಹೊಣೆಗಾರಿಕೆಯನ್ನು ಕೇಳುವ ಪ್ರತಿಯೊಬ್ಬ ಧ್ವನಿಯನ್ನು ಮೌನಗೊಳಿಸುವ ಉದ್ದೇಶ ಇದಾಗಿದೆ. ಇದು ಒಂದೇ ಪ್ರಕರಣಕ್ಕೆ ಸೀಮಿತವಾಗಿಲ್ಲ. ಇನ್ನೂ ಅನೇಕ ಪುತ್ರಿಯರು ಬಲಿಯಾಗುತ್ತಿರುವ ಆತಂಕಕಾರಿ ಪ್ರವೃತ್ತಿಯನ್ನು ಇದು ಸೂಚಿಸುತ್ತದೆ. ಇದು ರಾಜಕೀಯವಲ್ಲ; ಇದು ನ್ಯಾಯ, ಬಿಹಾರದ ಪುತ್ರಿಯರ ಗೌರವ ಮತ್ತು ಸುರಕ್ಷತೆಯ ಪ್ರಶ್ನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media
