ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಕಾಂಗ್ರೆಸ್ ತೊರೆಯುತ್ತಿರುವ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿರುವ ಮಧ್ಯೆ, ಅವರು ಬಿಜೆಪಿ ಸೇರುವ ಬಗ್ಗೆ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಎಂದು ಅವರ ನಿಕಟ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರಿದ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳೊಂದಿಗೆ ಭಾರಿ ಬಹುಮತ ಗಳಿಸಿತ್ತು. ಈ ವೇಳೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತದರೂ 66 ಸ್ಥಾನದೊಂದಿಗೆ ಹೀನಾಯವಾಗಿ ಸೋತಿತ್ತು. ಈ ಫಲಿತಾಂಶವು ಕಮಲ್ ನಾಥ್ ಅವರ ರಾಜಕೀಯ ಭವಿಷ್ಯಕ್ಕೆ ಭಾರಿ ಹೊಡೆತ ನೀಡಿದೆ.
ಕಮಲ್ ನಾಥ್ ಅವರು ತಮ್ಮ ಭದ್ರಕೋಟೆಯಾದ ಛಿಂದ್ವಾರಾದಿಂದ ಒಂಬತ್ತು ಬಾರಿ ಸಂಸದರಾಗಿದ್ದಾರೆ. ಆದರೆ 2019 ರಲ್ಲಿ ಈ ಕ್ಷೇತ್ರವನ್ನು ಅವರ ಮಗ ನಕುಲ್ ಅವರಿಗೆ ಬಿಟ್ಟುಕೊಟ್ಟಿದ್ದರು. 2018 ರ ವಿಧಾನಸಭಾ ಚುನಾವಣೆಗೆ ಮೊದಲು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (MPPCC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಅಧಿಕಾರ ವಹಿಸಿದ ನಂತರ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಿತಾದರೂ, ನಂತರ ಅಧಿಕಾರ ಕಳೆದುಕೊಂಡು ಪಕ್ಷದ ಪರಿಸ್ಥಿತಿಯು ಹೀನಾಯ ಸ್ಥಿತಿಗೆ ತಳ್ಳಲ್ಪಟ್ಟಿತು. ಅದರ ಮೇಲೆ ಕಳೆದ ವರ್ಷ ವಿಧಾನಸಭಾ ಚುನಾವಣೆಯ ಸೋಲಿನೊಂದಿಗೆ ಅವರ ಅಧಿಕಾರಾವಧಿಯು ಕೊನೆಗೊಂಡಿತ್ತು. ಅವರ ನಂತರ ಜಿತು ಪಟ್ವಾರಿ ಅವರನ್ನು ಎಂಪಿಪಿಸಿಸಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಚಂಡೀಗಢ ಮೇಯರ್ ವಿವಾದ – ಪ್ರಕರಣ ವಿಚಾರಣೆಗೂ ಮುನ್ನ ರಾಜೀನಾಮೆ ನೀಡಿದ ಬಿಜೆಪಿ ಮೇಯರ್
ಕಮಲ್ ನಾಥ್ ಅವರು 2018 ರ ಮೇ ತಿಂಗಳಲ್ಲಿ ರಾಜ್ಯ ಚುನಾವಣೆಗೆ ಆರು ತಿಂಗಳ ಮುಂಚಿತವಾಗಿ MPCC ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಸಮಯದಲ್ಲಿ ಕಾಂಗ್ರೆಸ್ ಬಹುತೇಕ ಜಿಲ್ಲೆಗಳಲ್ಲಿ ಸಂಘಟನೆಯ ಕೊರತೆಯನ್ನು ಹೊಂದಿತ್ತು ಮತ್ತು ಗುಂಪುಗಾರಿಕೆಯಿಂದ ಕೂಡಿತ್ತು. ಚಾಣಾಕ್ಷ ರಾಜಕಾರಣಿ ಮತ್ತು ಸಂಧಾನಕಾರರಾಗಿ ವರ್ತಿಸಿದ ಕಮಲ್ ನಾಥ್ ಅವರು ಗುಂಪುಗಾರಿಕೆಯನ್ನು ಜಯಿಸಿ ರಾಜ್ಯದ ಕಾಂಗ್ರೆಸ್ ಅನ್ನು ಒಂದುಗೂಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.
ಕಮಲ್ ನಾಥ್ ಅವರು ತನ್ನನ್ನು ತಾನು ಹನುಮ ಭಕ್ತನೆಂದು ಬಿಂಬಿಸಿ ಪಕ್ಷವನ್ನು ಮೃದು ಹಿಂದುತ್ವದ ಕಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾಗ್ಯೂ, ಅವರ ಚುನಾವಣಾ ವಿಜಯ 15 ತಿಂಗಳುಗಳವರೆಗೆ ಮಾತ್ರವಾಗಿತ್ತು. ಅವರ ಸರ್ಕಾರದ ವಿರುದ್ಧ ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಗುಂಪು ಬಂಡಾಯ ಎದ್ದು ಸರ್ಕಾರ ಉರುಳಿಸಿತ್ತು.
ಇದನ್ನೂ ಓದಿ: ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ – ಕೇಂದ್ರ ಸರ್ಕಾರದ ಪ್ರಸ್ತಾಪ
ಇಲ್ಲಿಂದ ಪಕ್ಷವು ಹಿನ್ನಡೆ ಅನುಭವಿಸಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 28 ರಲ್ಲಿ ಜಯಗಳಿಸಿತ್ತು. ಅದಾಗ್ಯೂ, ಕಮಲ್ ನಾಥ್ ಅವರ ಕ್ಷೇತ್ರ ಛಿಂದ್ವಾರವನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈ ಸೋಲಿಗೆ ಕಮಲ್ ನಾಥ್ ಅವರ ನಾಯಕತ್ವ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮಧ್ಯಪ್ರದೇಶ ಕಾಂಗ್ರೆಸ್‌ನ ಒಂದು ಬಣ ತೀವ್ರವಾಗಿ ಟೀಕಿಸುತ್ತಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
ರಾಜ್ಯದ ಚುನಾವಣಾ ಉಸ್ತುವಾರಿಯಾಗಿದ್ದ ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಅದರಿಂದ ಹಿಂದೆ ಸರಿದಿದ್ದರು ಎನ್ನಲಾಗಿದೆ. ಅವರು ಮತ್ತು ಕೇಂದ್ರ ಕಾಂಗ್ರೆಸ್‌ನ ಮಧ್ಯಪ್ರದೇಶದ ಉಸ್ತುವಾರಿ ಜೈ ಪ್ರಕಾಶ್ ಅಗರ್ವಾಲ್ ಅವರೊಂದಿಗೆ ಮನಸ್ತಾಪ ಇಟ್ಟುಕೊಂಡಿದ್ದರು. ಯಾಕೆಂದರೆ ಅಗರ್ವಾಲ್ ಅವರು ಮಧ್ಯಪ್ರದೇಶ ಚುನಾವಣೆಯಲ್ಲಿ ಕಮಲ್ ನಾಥ್ ಅವರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಲು ನಿರಾಕರಿಸಿದ್ದರು. ಈ ಸಂಘರ್ಷದ ಕಾರಣಕ್ಕೆ ಚುನಾವಣೆಗೆ ಎರಡು ತಿಂಗಳ ಮೊದಲು ಉಸ್ತುವಾರಿಯಾಗಿ ರಣದೀಪ್ ಸುರ್ಜೆವಾಲಾ ಅವರನ್ನು ಬದಲಾಯಿಸಲಾಗಿತ್ತು.
ಇದನ್ನೂ ಓದಿ: ಮೋದಿ ನೇತೃತ್ವ ಸರ್ಕಾರದ ದೊಡ್ಡ ಭ್ರಷ್ಟಾಚಾರ : ಚುನಾವಣಾ ಬಾಂಡ್ ಹಗರಣ Janashakthi Media