ಭಾರತವನ್ನು ಕಾಶ್ಮೀರಗೊಳಿಸುವ ಹುನ್ನಾರ

ಒಕ್ಕೂಟ ವ್ಯವಸ್ಥೆಯು ಭಾರತದ ಸಂವಿಧಾನದ ಒಂದು ಪ್ರಧಾನ ಅಂಶ. ಭಾರತದ ಸಂವಿಧಾನವನ್ನು ರೂಪಿಸಲು ಆಯೋಜಿಸಿದ್ದ ಸಂವಿಧಾನ ಸಭೆಯ ಸದಸ್ಯರಲ್ಲೊಬ್ಬರಾದ ಪ್ರೊ.ಕೆ.ಟಿ.ಷಾ ಅವರು, ಸಂವಿಧಾನ ರಚನಾ ಸಭೆಯಲ್ಲಿ, ಭಾರತ ಎಂಬುದು ರಾಜ್ಯಗಳ ಒಂದು ಒಕ್ಕೂಟ ಎಂಬ ಅಂಶವು ಸ್ಪಷ್ಟವಾಗಿರಬೇಕು ಎಂಬ ಉದ್ದೇಶದಿಂದ, “ಧರ್ಮ ನಿರಪೇಕ್ಷ(ಸೆಕ್ಯುಲರ್)” ಎಂಬ ಪದದ ಜೊತೆಗೆ “ಒಕ್ಕೂಟ” (“ಫೆಡರಲ್”) ಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲೇ ಸೇರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ, ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ||ಬಿ.ಆರ್‌.ಅಂಬೇಡ್ಕರ್, ಭಾರತವು ಒಂದು ಗಣರಾಜ್ಯ ಎಂದ ಕೂಡಲೇ ಅದರಲ್ಲಿ ಧರ್ಮ ನಿರಪೇಕ್ಷತೆ ಮತ್ತು ಒಕ್ಕೂಟ ತತ್ವಗಳು ಸೂಚಿತವಾಗುತ್ತವೆ; ಆದ್ದರಿಂದ ಅವುಗಳನ್ನು ನಿರ್ದಿಷ್ಟವಾಗಿ ವಿವರಿಸುವ ಅಗತ್ಯವಿಲ್ಲ ಎಂಬ ನೆಲೆಯಲ್ಲಿ ಸದರಿ ಸಲಹೆಯನ್ನು ತಿರಸ್ಕರಿಸಿದರು. ಸಂವಿಧಾನದ ಏಳನೇ ಷ್ಯೆಡ್ಯೂಲಿನಲ್ಲಿ, ಕೇಂದ್ರ ಮತ್ತು ರಾಜ್ಯಗಳು ಹೊಂದಿರುವ ಅಧಿಕಾರಗಳ ವ್ಯಾಪ್ತಿಯನ್ನು ಎರಡು ಪ್ರತ್ಯೇಕ ಪಟ್ಟಿಗಳಲ್ಲಿ ನಮೂದಿಸಲಾಗಿದೆ. ಮೂರನೆಯ ಪಟ್ಟಿಯಲ್ಲಿ, ಕೇಂದ್ರ ಮತ್ತು ರಾಜ್ಯಗಳು ಈ ಇಬ್ಬರಿಗೂ ಸಮಾನವಾಗಿ ಸೇರಿದ ಅಂಶಗಳ ಅಧಿಕಾರ ವ್ಯಾಪ್ತಿಯನ್ನು ನಮೂದಿಸಲಾಗಿದೆ. ಹಾಗಿದ್ದರೂ ಸಹ, ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಕೇಂದ್ರ ಸರ್ಕಾರವು ಅತಿಕ್ರಮಿಸುತ್ತಲೇ ಬಂದಿದೆ. ಆದರೆ, ಇತ್ತೀಚೆಗೆ ಈ ಪ್ರವೃತ್ತಿ ಎಷ್ಟರಮಟ್ಟಿಗೆ ಬಲಗೊಂಡಿದೆ ಎಂದರೆ, ದೇಶವನ್ನು ಕಾರ್ಯತಃ ಏಕೀಕೃತ ಪ್ರಭುತ್ವದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರೆ ಅದೇನೂ ಅತಿಶಯೋಕ್ತಿಯಾಗುವುದಿಲ್ಲ.

ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಾರಾಟವಾಗುವ ಸರಕು ಸರಂಜಾಮುಗಳ ಮೇಲೆ ಮಾರಾಟ ತೆರಿಗೆ ವಿಧಿಸುವ ಅಧಿಕಾರವನ್ನು ಸಂವಿಧಾನ ದತ್ತವಾಗಿ ಹೊಂದಿದ್ದವು. ಅಲ್ಲದೆ, ಮಾರಾಟ ತೆರಿಗೆಯು ರಾಜ್ಯಗಳ ಆದಾಯದ ಒಂದು ಪ್ರಮುಖ ಮೂಲವೇ ಆಗಿತ್ತು. ಕೇಂದ್ರ ಸರ್ಕಾರದ ಪ್ರಭಾವವೇ ಹೆಚ್ಚಿಗೆ ಇರುವ ಒಂದು ಜಿಎಸ್‌ಟಿ ಕೌನ್ಸಿಲ್ ಮೂಲಕ ಜಾರಿಗೊಳಿಸುವ ಒಂದು ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಗೆ ಹೊರಳುವಂತೆ ರಾಜ್ಯಗಳನ್ನು ಕೇಂದ್ರವು ಪುಸಲಾಯಿಸಿತ್ತು. ತಮ್ಮ ಮಾರಾಟ ತೆರಿಗೆ ಪದ್ಧತಿಗೆ ಬದಲಾಗಿ ಹೊಸದಾಗಿ ಜಾರಿಗೆ ತರುವ ಜಿಎಸ್‌ಟಿ ಪದ್ಧತಿಗೆ ಹೊರಳಿದಾಗ, ಒಂದು ವೇಳೆ ತಮ್ಮ ತೆರಿಗೆ ಆದಾಯವು ಕಡಿಮೆಯಾದರೆ, ಅಷ್ಟು ಮಟ್ಟಿನ ಕೊರತೆಯನ್ನು ತುಂಬಿಕೊಡುವುದಾಗಿ ಕೇಂದ್ರವು ಒಂದು ಭರವಸೆಯನ್ನು ಶಾಸನಬದ್ಧಗೊಳಿಸುವ ಮೂಲಕ ಕೊಟ್ಟಿತ್ತು. ಆದರೆ, ಕೇಂದ್ರವು ಶಾಸನಬದ್ಧವಾಗಿ ಕೊಟ್ಟಿದ್ದ ಭರವಸೆಯನ್ನೂ ಗಾಳಿಗೆ ತೂರಿದೆ. ಹಾಗಾಗಿ, ತೆರಿಗೆ ವಿಧಿಸುವ ಅಧಿಕಾರವನ್ನು ಕಳೆದುಕೊಂಡಿರುವ ರಾಜ್ಯಗಳನ್ನು ಈಗ ನಡು ನೀರಿನಲ್ಲಿ ಕೈ ಬಿಟ್ಟಂತಾಗಿದೆ. ಸದ್ಯಕ್ಕೆ, ಕೇವಲ ಮೂರು ಸರಕುಗಳ ಮೇಲಿನ ತೆರಿಗೆಯನ್ನು ಹೊರತುಪಡಿಸಿದರೆ, ರಾಜ್ಯಗಳಿಗೆ ತೆರಿಗೆ ವಿಧಿಸುವ ಅಧಿಕಾರವೇ ಇಲ್ಲ. ಇತ್ತ, ಕೇಂದ್ರದಿಂದ ಬರಬೇಕಿರುವ ಜಿಎಸ್‌ಟಿಯ ಬಾಕಿಯೂ ರಾಜ್ಯಗಳಿಗೆ ಬರುತ್ತಿಲ್ಲ.

ಸಂಪನ್ಮೂಲಗಳ ಮೇಲಿನ ನಿಯಂತ್ರಣವಷ್ಟೇ ಕೇಂದ್ರೀಕೃತಗೊಂಡಿಲ್ಲ; ನಿರ್ಧಾರ ಕೈಗೊಳ್ಳುವುದನ್ನೂ ಸಹ ಕೇಂದ್ರೀಕರಿಸಲಾಗಿದೆ. ಈ ಕ್ರಮವು ಸಂವಿಧಾನದ ನಿಬಂಧನೆಗಳಿಗೆ ವಿರೋಧವಾಗಿದೆ. ಉದಾಹರಣೆಗೆ, ಶಿಕ್ಷಣವು ಸಮವರ್ತಿ(ಇಬ್ಬರಿಗೂ ಸಮಾನ ಅಧಿಕಾರ ಇರುವ) ಪಟ್ಟಿಯಲ್ಲಿದೆ. ಆದರೂ, ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆಯನ್ನೂ ಮಾಡದೆ, ಕೇಂದ್ರ ಸರಕಾರವು ಇತ್ತೀಚೆಗೆ ಹೊಸ ಶಿಕ್ಷಣ ನೀತಿಯೊಂದನ್ನು ಹೊರ ತಂದಿದೆ. ಮರು ಮಾತಾಡದೇ ಅದನ್ನು ಜಾರಿ ಮಾಡುವುದಷ್ಟೇ ರಾಜ್ಯಗಳ ಕೆಲಸ. ಕೃಷಿ ಸಂಬಂಧಿತ ವಿಷಯಗಳು ರಾಜ್ಯಗಳ ಅಧಿಕಾರದ ವ್ಯಾಪ್ತಿಗೆ ಬರುತ್ತವೆ. ಆದಾಗ್ಯೂ, ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಸಮಾಲೋಚನೆಯನ್ನೂ ಮಾಡದೆ, ಮೂರು ಕೃಷಿ ಸಂಬಂಧಿತ ಮಸೂದೆಗಳನ್ನು ಕೇಂದ್ರವು ಸಂಸತ್ತಿನಲ್ಲಿ ತರಾತುರಿಯಲ್ಲಿ ಪಾಸು ಮಾಡಿಸಿಕೊಂಡಿತು. ಈ ಮಸೂದೆಗಳು ದೇಶದ ಕೃಷಿ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿವೆ. ಈ ಬದಲಾವಣೆಗಳು ರೈತರ ಮೇಲೆ ಅಪಾರ ದುಷ್ಪರಿಣಾಮ ಬೀರಲಿವೆ. ಜೊತೆಗೆ, ರಾಜ್ಯಗಳಿಗೂ ಗಮನಾರ್ಹ ಪ್ರಮಾಣದ ಆದಾಯ ನಷ್ಟ ಉಂಟುಮಾಡಲಿವೆ.

ಪ್ರಾದೇಶಿಕ ಸರ್ಕಾರಗಳು ತಮ್ಮ ಯೋಜನೆಗಳನ್ನು ಸ್ಥಳೀಯ ಉತ್ಪಾದಕರಿಗೆ ನೀಡುತ್ತವೆ ಇಲ್ಲವೇ ಸಾರ್ವಜನಿಕ ವಲಯಕ್ಕೆ ಕೊಡುತ್ತವೆ. ರೈತರಿಂದ ಸ್ವಾಧೀನ ಪಡೆದ ಭೂಮಿಗೆ ನೀಡುವ ಪರಿಹಾರವು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಗುತ್ತಿಗೆ ಕೃಷಿ ಮತ್ತು ಮಾರುಕಟ್ಟೆಗಳ ನಿಯಂತ್ರಣವನ್ನು ಕಳಚಿಹಾಕುವ ಮೂಲಕ ರೈತ ಕೃಷಿಯನ್ನು ಕಾರ್ಪೊರೇಟ್ ಶೋಷಣೆಗೆ ಈಡು ಮಾಡುವ ಕೃಷಿ ಮಸೂದೆಗಳಿಗೆ ರಾಜ್ಯ ಶಾಸನಸಭೆಗಳಿಂದ ಅನುಮತಿ ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ, ಕೃಷಿ ಕ್ಷೇತ್ರದ ಬದಲಾವಣೆಗಳನ್ನು ಕೇಂದ್ರ ಶಾಸನದ ಮೂಲಕ ತರಲಾಗಿದೆ. ಅವುಗಳ ನ್ಯಾಯಸಮ್ಮತತೆಯು ಸಂದೇಹಾಸ್ಪದವಾಗಿದೆ. ಹಾಗಿದ್ದರೂ ಸಹ, ಇಂತಹ ಶಾಸನಗಳನ್ನು ಜನರು ಒಪ್ಪಿಕೊಳ್ಳಲೇಬೇಕಾಗಿರುವ ಪರಿಸ್ಥಿತಿಯು ನಮ್ಮ ನ್ಯಾಯಾಂಗವು ತನ್ನ ಸ್ವಾತಂತ್ರ್ಯವನ್ನು ಎಷ್ಟರಮಟ್ಟಿಗೆ ಕಳೆದುಕೊಂಡಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಒತ್ತುವರಿಯಾಗುತ್ತಿರುವುದು ಕೇವಲ ರಾಜ್ಯಗಳ ಕಾರ್ಯಕ್ಷೇತ್ರದ ವ್ಯಾಪ್ತಿಯಷ್ಟೇ ಅಲ್ಲ. ರಾಜ್ಯಗಳ ಅಸ್ತಿತ್ವವನ್ನೇ ಕೇಂದ್ರವು ಈಗ ಏಕಪಕ್ಷೀಯವಾಗಿ ಬದಲಾಸಬಹುದು. ರಾಜ್ಯ ಶಾಸಕಾಂಗದ ಒಪ್ಪಿಗೆಯನ್ನು ಪಡೆಯದೇ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವುದನ್ನು ನೋಡಿದರೆ ಈ ಅಂಶವು ಸ್ಪಷ್ಟವಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಈ ವಿಭಜನೆಗೆ ರಾಜ್ಯ ಸರ್ಕಾರದ ಒಪ್ಪಿಗೆಯನ್ನು ರಾಜ್ಯಪಾಲರು  ಕೊಟ್ಟಿದ್ದರು ಎಂದು ಹೇಳುತ್ತಾರೆ. ಆದರೆ, ಆ ಸಮಯದಲ್ಲಿ ಜಮ್ಮು-ಕಾಶ್ಮೀರವು ರಾಷ್ಟ್ರಪತಿಗಳ (ಅಥವಾ, ರಾಜ್ಯಪಾಲರ) ಆಳ್ವಿಕೆಗೆ ಒಳಪಟ್ಟಿತ್ತು. ರಾಜ್ಯಪಾಲರನ್ನು ನೇಮಕ ಮಾಡುವ ಅಧಿಕಾರ ಹೇಗೂ ಕೇಂದ್ರದ್ದೇ. ಅವರು ಒಪ್ಪಿಗೆ ಕೊಡು ಅಂದರು, ಇವರು ಕೊಟ್ಟರು. ಅಲ್ಲಿಗೆ ಕತೆ ಮುಗಿತು. ಇಂತಹ ಮಾದರಿಯನ್ನು ಅನುಸರಿಸಿ, ಅಂದರೆ, ಒಂದು ರಾಜ್ಯವನ್ನು ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಡಿಸಿ, ರಾಜ್ಯಪಾಲರಿಂದ ಪಡೆದ ಒಪ್ಪಿಗೆಯನ್ನೇ ಕಾನೂನಿನ ದೃಷ್ಟಿಯಲ್ಲಿ ರಾಜ್ಯ ಶಾಸಕಾಂಗದ ಒಪ್ಪಿಗೆ ಎಂದು ಪರಿಗಣಿಸಿ, ಯಾವುದೇ ಒಂದು ರಾಜ್ಯವನ್ನು, ಯಾವುದೇ ಸಮಯದಲ್ಲಿ ತುಂಡು ತುಂಡುಗಳಾಗಿ ವಿಭಜಿಸಿ, ಆ ತುಂಡುಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ, ಆ ರಾಜ್ಯವನ್ನು ಒಂದು ರಾಜ್ಯವಾಗಿ ಅಸ್ತಿತ್ವದಲ್ಲೇ ಇಲ್ಲದಂತೆ ಮಾಡಬಹುದು. ಈ ರೀತಿಯಲ್ಲಿ, ರಾಜ್ಯಗಳ ಒಂದು ಅಸ್ತಿತ್ವವೇ ಕೇಂದ್ರ ಸರ್ಕಾರದ ಮರ್ಜಿಗೆ ಒಳಪಟ್ಟಿರುವಾಗ, ಏಕೀಕೃತ ಪ್ರಭುತ್ವದತ್ತ ಸಾಗುವಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಾಗಿದೆ.

ಭಾರತವನ್ನು ಕಾರ್ಯತಃ ಒಂದು ಏಕೀಕೃತ ಪ್ರಭುತ್ವವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹಿಂದುತ್ವ ಶಕ್ತಿಗಳು ಮತ್ತು ಜಾಗತಿಕ ಹಣಕಾಸು ಬಂಡವಾಳದೊಂದಿಗೆ ಬೆಸೆದುಕೊಂಡಿರುವ ಕಾರ್ಪೊರೇಟ್-ಹಣಕಾಸು ಕುಳಗಳು ಈ ಎರಡೂ ಗುಂಪುಗಳು ಸಮಾನವಾಗಿ ಹೊಂದಿವೆ. ಭಾರತದ ಪ್ರಸ್ತುತ ರಾಜಕಾರಣವನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಿರುವ ಈ ಬಳಗವು ತಮ್ಮ ಈ ಉದ್ದೇಶವನ್ನು ನೆರವೇರಿಸಿಕೊಳ್ಳಲು ಹವಣಿಸುತ್ತಿವೆ.

ಭಾರತ ಎಂಬುದು ರಾಜ್ಯಗಳ ಒಕ್ಕೂಟ. ರಾಜ್ಯಗಳ ಈ ಒಕ್ಕೂಟ ವ್ಯವಸ್ಥೆಯ ಸ್ವಭಾವವು, ಪ್ರತಿಯೊಬ್ಬ ಭಾರತೀಯನೂ ಸ್ವಭಾವತಃ ರೂಢಿಸಿಕೊಂಡಿರುವ ಎರಡು ರೀತಿಯ ರಾಷ್ಟ್ರೀಯ ಪ್ರಜ್ಞೆಗಳ ಅಭಿವ್ಯಕ್ತಿಯ ಪ್ರತೀಕವಾಗಿದೆ. ತಾನು ಒಬ್ಬ ಭಾರತೀಯ (ಪಾನ್-ಇಂಡಿಯನ್) ಎಂಬುದು ಒಂದು ಪ್ರಜ್ಞೆಯಾದರೆ, ತಾನು ಒಬ್ಬ ಬಂಗಾಳಿ ಅಥವಾ ಗುಜರಾತಿ ಅಥವಾ ತಮಿಳು ಅಥವಾ ಕನ್ನಡಿಗ ಅಥವಾ ಮಹಾರಾಷ್ಟ್ರೀಯ ಅಥವಾ ಪಂಜಾಬಿ ಮುಂತಾದ ಪ್ರಾದೇಶಿಕ-ಭಾಷಿಕ ಗುಂಪಿಗೆ ಸೇರಿದ ಪ್ರಜ್ಞೆ ಇನ್ನೊಂದು. ಈ ಎರಡೂ ರಾಷ್ಟ್ರೀಯ ಪ್ರಜ್ಞೆಗಳೂ ಭಾರತ ಒಕ್ಕೂಟದ ಸ್ವಭಾವ-ಸ್ವರೂಪಗಳನ್ನು ಬಿಂಬಿಸುತ್ತವೆ. ವಸಾಹತು-ವಿರೋಧಿ ಹೋರಾಟದ ಕಾಲದಲ್ಲಿ ಈ ಎರಡೂ ರಾಷ್ಟ್ರೀಯ ಪ್ರಜ್ಞೆಗಳು ಬಲಗೊಂಡವು. ವಸಾಹತೋತ್ತರ ಭಾರತದ ಪ್ರಭುತ್ವವು, ಒಕ್ಕೂಟ ತತ್ವ ಮತ್ತು ಒಕ್ಕೂಟದ ಸ್ವಭಾವ-ಸ್ವರೂಪಗಳನ್ನು ಆವಾಹಿಸಿಕೊಂಡ ಭಾರತವು ಒಂದು ರಾಜ್ಯಗಳ ಒಕ್ಕೂಟವೇ ಎಂಬ ರಾಜಕೀಯ ಏರ್ಪಾಟಿನ ಮೂಲಕ ಈ ಎರಡೂ ರಾಷ್ಟ್ರೀಯ ಪ್ರಜ್ಞೆಗಳನ್ನು ಸಮನ್ವಯಗೊಳಿಸಿತು. ಹಾಗಾಗಿ, ಈ ಎರಡೂ ಪ್ರಜ್ಞೆಗಳ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ ಒಕ್ಕೂಟ ತತ್ವ ಮತ್ತು ಒಕ್ಕೂಟದ ಸ್ವಭಾವ-ಸ್ವರೂಪಗಳು ಮುಕ್ಕಾಗದಂತೆ ಸದಾ ಕಾಲವೂ ನೋಡಿಕೊಳ್ಳಬೇಕಾಗುತ್ತದೆ. ಈ ಎರಡು ಪ್ರಜ್ಞೆಗಳ ಪೈಕಿ ಒಂದನ್ನು ಕಡೆಗಣಿಸಿ ಮತ್ತೊಂದನ್ನು ಪುರಸ್ಕರಿಸಿದಾಗ ಈ ಸಮತೋಲನಕ್ಕೆ ಧಕ್ಕೆಯಾಗುತ್ತದೆ; ಮತ್ತು ಅದು ದೇಶದ ಐಕ್ಯತೆಯನ್ನು ಚೂರು ಚೂರು ಮಾಡುತ್ತದೆ. ಉದಾಹರಣೆಯಾಗಿ ಹೇಳುವುದಾದರೆ, ಪ್ರಾದೇಶಿಕ-ಭಾಷಿಕ ಭಾವನೆಗಳನ್ನು ಕಡೆಗಣಿಸಿ ಏಕ ರೂಪತೆಯನ್ನು ಸಾಧಿಸುವ ಪ್ರಯತ್ನಗಳು ಅಥವಾ ಅತಿರೇಕದ ಕೇಂದ್ರೀಕರಣಗಳು ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸುತ್ತವೆ.

ಆದರೆ, ಭಾರತದ ಈ ಸಂಕೀರ್ಣತೆಯು ಹಿಂದುತ್ವವಾದಿಗಳಿಗೆ ಅರ್ಥವಾಗುವುದಿಲ್ಲ. ಏಕೆಂದರೆ, ವಸಾಹತುಶಾಹಿ-ವಿರೋಧಿ ಹೋರಾಟಕ್ಕೂ ಅವರಿಗೂ ಸಂಬಂಧವೇ ಇಲ್ಲ. ಸ್ವಾತಂತ್ರ್ಯ ಹೋರಾಟದ ತಲೆಮಾರಿನ ಹಿಂದುತ್ವವಾದಿಗಳು, ಅವರಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ, ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ಹೊರತುಪಡಿಸಿದ ಆ ಒಬ್ಬ ಹಿಂದುತ್ವದ ಪಿತಾಮಹರೂ ಸಹ ಬ್ರಿಟಿಷರ ಕ್ಷಮೆ ಕೋರಿ ಹೋರಾಟದಿಂದ ದೂರ ಸರಿದರು. ಹೊತ್ತವರಿಗಷ್ಟೆ ಗೊತ್ತು ನೆತ್ತಿಯ ಭಾರ ಎನ್ನುವಂತೆ, ಹೋರಾಟದಲ್ಲಿ ಜೀವ ತೆತ್ತ ಹುತಾತ್ಮರಿಗೆ ಮತ್ತು ತಮ್ಮ ಭೋಗ ಭಾಗ್ಯಗಳನ್ನು ತ್ಯಜಿಸಿ ಸೆರೆಮನೆಗೆ ಹೋದ ಮಹಾನ್ ಚೇತನಗಳಿಗೆ ಅಪಚಾರವಾಗದಂತೆ ನಡೆದುಕೊಳ್ಳುವ ಚಾರಿತ್ರ್ಯವೂ ಹೋರಾಟದಲ್ಲಿ ಭಾಗವಹಿಸದೇ ಇದ್ದವರಿಗೆ ಇರುವುದಿಲ್ಲ. ಅವರಿಗೆ ಭಾರತವು ಇನ್ನೂ ರೂಪುಗೊಳ್ಳತ್ತಿರುವ ಒಂದು ಉದಯೋನ್ಮುಖ ದೇಶವಾಗಿ ಕಾಣುವುದಿಲ್ಲ. ಬದಲಿಗೆ, ಭಾರತವು ಅನಾದಿಕಾಲದಿಂದಲೂ ಹಿಂದೂಗಳೇ ನೆಲೆಸಿದ್ದ “ಹಿಂದೂ ದೇಶ”. ಈ ನೆಲೆಯಲ್ಲೇ ಅವರು ಪ್ರಾದೇಶಿಕ-ಭಾಷಿಕ ಪ್ರಜ್ಞೆಯನ್ನು ಮತ್ತು ಅದರ ಸಮ್ಮಿಳಿತದಿಂದಾದ ಭಾರತೀಯ ಪ್ರಜ್ಞೆಯನ್ನು ಒಪ್ಪುವುದಿಲ್ಲ. ಮಾತ್ರವಲ್ಲ, ಅದನ್ನು ತಿರಸ್ಕಾರದಿಂದ ಕಾಣುತ್ತಾರೆ. ಒಂದು ಕೇಂದ್ರವು ಹೊರಡಿಸಿದ ಆದೇಶದ ಮೇರೆಗೆ “ಒಂದು ಭಾಷೆ” ಮತ್ತು “ಒಂದು ಸಂಸ್ಕೃತಿ”ಯಂತಹ ಏಕರೂಪತೆಯನ್ನು ಎಲ್ಲರ ಮೇಲೂ ಹೇರಲು ಪ್ರಯತ್ನಿಸುತ್ತಾರೆ. ಒಂದು ವಿಶಿಷ್ಟ ಮತ್ತು “ಆದರ್ಶವಾದಿ” ಏಕತೆಯು ಎಲ್ಲರಲ್ಲೂ ಸ್ವಾಭಾವಿಕವಾಗಿಯೇ ಅಂತರ್ಗತವಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ. ಹಾಗಾಗಿ, ಯಾರ ಅಥವಾ ಯಾವ ನೆಡೆ ಅವರ ಈ ಗ್ರಹಿಕೆಗೆ ತಕ್ಕಂತೆ ಇಲ್ಲವೋ ಅದೆಲ್ಲವೂ “ದೇಶ ವಿರೋಧಿ” ನಡತೆಯೇ ಆಗುತ್ತದೆ. ದೇಶದ ಒಕ್ಕೂಟದ (ಫೆಡರಲ್) ಪರಿಕಲ್ಪನೆಯೇ ಅವರಿಗೆ ಹಿಡಿಸುವುದಿಲ್ಲ. ಏಕೆಂದರೆ, ಇಂತಹ ಪರಿಕಲ್ಪನೆಯ ಅಥವಾ ಗ್ರಹಿಕೆಯ ಮೇಲೆ ನಿಂತಿರುವ ಒಕ್ಕೂಟವು “ರಾಷ್ಟ್ರ”ವನ್ನು ದುರ್ಬಲಗೊಳಿಸುತ್ತದೆ ಎಂಬುದು ಅವರ ಅಂಬೋಣ.

ಕೆಲವು ಅವಕಾಶವಾದಿ ಕಾರಣಗಳಿಂದಾಗಿ ಕೇಂದ್ರೀಕರಣವನ್ನು ಹಿಂದುತ್ವವಾದಿಗಳು ಸಮರ್ಥಿಸುತ್ತಾರೆ. ಈ ಅವಕಾಶವಾದಿ ಕಾರಣಗಳಲ್ಲಿ ಕೆಲವನ್ನು ಲೋಕ ರೂಢಿ ಎಂದು ಒಪ್ಪಿಕೊಂಡರೂ ಸಹ, ಮೂಲಭೂತವಾಗಿ ಮತ್ತು  ಅಂತರಾಳದಲ್ಲಿ ಅವು ಒಕ್ಕೂಟ-ವಿರೋಧಿಯೂ ಮತ್ತು ಏಕೀಕೃತ-ಪ್ರಭುತ್ವ-ಪರವೂ ಆಗಿರುತ್ತವೆ. ಎಲ್ಲ ಪುರೋಹಿತಶಾಹಿ ಪ್ರಭುತ್ವಗಳು ಇರುವುದು ಹೀಗೆಯೇ- ಅವು ಕೇಂದ್ರೀಕರಣವನ್ನು ಬಯಸುತ್ತವೆ.

ಅದೇ ರೀತಿಯಲ್ಲಿ, ಕಾರ್ಪೊರೇಟ್-ಹಣಕಾಸು ಕುಳಗಳೂ ಸಹ ಅಧಿಕಾರದ ಕೇಂದ್ರೀಕರಣವನ್ನು ಬೆಂಬಲಿಸುತ್ತವೆ. ಈ ಕಾರ್ಪೊರೇಟ್ ಕುಳಗಳ ಹಿಡಿತದಲ್ಲಿರುವ ಏಕಸ್ವಾಮ್ಯ ಬಂಡವಾಳವು ಆರ್ಥಿಕ ವಲಯದಲ್ಲಿ ಕೇಂದ್ರೀಕರಣದ ಪ್ರತೀಕವಾಗಿದೆ. ಈ ಏಕಸ್ವಾಮ್ಯ ಬಂಡವಾಳವು ತನ್ನ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳಲು ಬೇಕಾದ ಬೆಂಬಲ ನೀಡುವ ಪ್ರಭುತ್ವವೂ ಕೇಂದ್ರೀಕೃತಗೊಂಡಿರಬೇಕಾಗುತ್ತದೆ. ಏಕಸ್ವಾಮ್ಯ ಬಂಡವಾಳವು ತನ್ನ ಮಹತ್ವಾಕಾಂಕ್ಷೆಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಅಗತ್ಯವಾಗುವ ಒಂದು ಅಸ್ತ್ರವೆಂದರೆ, ಕೇಂದ್ರೀಕೃತಗೊಂಡ ಪ್ರಭುತ್ವವೇ.

ಈ ಅಭಿಪ್ರಾಯಕ್ಕೆ ಒಂದು ಮುಖ್ಯವಾದ ಅಪವಾದವಿದೆ. ಮೆಟ್ರೊಪಾಲಿಟನ್ ಬಂಡವಾಳವೂ ಸೇರಿದಂತೆ ಏಕಸ್ವಾಮ್ಯ ಬಂಡವಾಳದ ಬಗ್ಗೆ, ದೇಶದ ಕೆಲವು ನಿರ್ದಿಷ್ಟ ಪ್ರದೇಶಗಳ ರಾಜ್ಯ ಸರ್ಕಾರಗಳು ಮಧುರ ಬಾಂಧವ್ಯ ಹೊಂದಿರುವ ಸಮಯದಲ್ಲಿ, ಅದರೊಂದಿಗೆ ಕೇಂದ್ರ ಸರ್ಕಾರವು ಇಟ್ಟುಕೊಳ್ಳುವ ಸಂಬಂಧವು ಅಷ್ಟೊಂದು ಮಧುರವಾಗಿಲ್ಲದೆ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಏಕಸ್ವಾಮ್ಯ ಬಂಡವಾಳವೇ ಆಗಲಿ ಅಥವಾ ಮೆಟ್ರೊಪಾಲಿಟನ್ ಬಂಡವಾಳವೇ ಆಗಲಿ, ಪ್ರಾದೇಶಿಕ ಸರ್ಕಾರಗಳು ಬಲಗೊಳ್ಳುವುದನ್ನು ಮತ್ತು ಕೇಂದ್ರ ಸರ್ಕಾರವು ದುರ್ಬಲಗೊಳ್ಳುವುದನ್ನು ಬಯಸುತ್ತದೆ. (ಸಮಕಾಲೀನ ಜಗತ್ತಿನಲ್ಲಿ, ಸಾಮ್ರಾಜ್ಯಶಾಹಿಗಳ ನಡುವಿನ ವೈಷಮ್ಯದ ಲಕ್ಷಣಗಳು ಅಷ್ಟೊಂದು ಗಡುಸಾಗಿಲ್ಲದ ಕಾರಣದಿಂದಾಗಿ ಮೆಟ್ರೊಪಾಲಿಟನ್ ಬಂಡವಾಳ ಮತ್ತು ಏಕಸ್ವಾಮ್ಯ ಬಂಡವಾಳ ಈ ಎರಡು ಪದಗಳನ್ನು ಅದಲು ಬದಲು ಮಾಡಿಕೊಳ್ಳಬಹುದಾದ ರೀತಿಯಲ್ಲಿ ಬಳಸಲಾಗಿದೆ). ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ, ಸಂಪನ್ಮೂಲಗಳು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಹಂತಗಳು “ಕೇಂದ್ರೀಕರಣಗೊಳ್ಳಬೇಕೆಂದು ಬಂಡವಾಳವು ಬಯಸುತ್ತದೆ ಮತ್ತು ಅಂತಿಮವಾಗಿ ಈ ಪ್ರಾದೇಶಿಕ ಸರ್ಕಾರಗಳು ಪ್ರತ್ಯೇಕತೆಯ ಹಾದಿ ಹಿಡಿಯುವಂತೆ ಅವುಗಳನ್ನು ಪ್ರೋತ್ಸಾಹಿಸುತ್ತದೆ. ದೊಡ್ಡ ಒಕ್ಕೂಟವನ್ನು ವಿಭಜಿಸುವ ಮೂಲಕ ಹೊಸದಾಗಿ ರೂಪಗೊಂಡ ಕೇಂದ್ರೀಕೃತ ಪ್ರದೇಶಗಳನ್ನು ತನ್ನ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದು ಅದಕ್ಕೆ ಸುಲಭವಾಗುತ್ತದೆ.

ಯುಗೊಸ್ಲಾವಿಯದ ವಿಭಜನೆಯು ಇದಕ್ಕೊಂದು ಸ್ಪಷ್ಟ ನಿದರ್ಶನವಾಗುತ್ತದೆ. ಜರ್ಮನ್ ಬಂಡವಾಳವು ಯುಗೊಸ್ಲಾವಿಯದ ವಿಭಜನೆಯನ್ನು ಪ್ರೋತ್ಸಾಹಿಸಿತು. ಏಕೆಂದರೆ, ಸಂಯುಕ್ತ ಯುಗೊಸ್ಲಾವಿಯದ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸುವುದು ಸಾಧ್ಯವಾಗಿರಲಿಲ್ಲ. ಏಕೆಂದರೆ, ಸಂಯುಕ್ತ ಯುಗೊಸ್ಲಾವಿಯದ ಭಾಗವಾಗಿದ್ದ ಸರ್ಬಿಯಾ ಪ್ರಾಂತ್ಯವು, ನಾಜಿ-ವಿರೋಧಿ ಹೋರಾಟದ ಇತಿಹಾಸ ಮತ್ತು ಜರ್ಮನ್ ಬಂಡವಾಳದ ಮಹತ್ವಾಕಾಂಕ್ಷೆಗಳ ಬಗ್ಗೆ ಬಲವಾದ ಅನುಮಾನಗಳನ್ನು ಹೊಂದಿದ್ದ ಒಂದು ಬಲಶಾಲಿ ಘಟಕವಾಗಿತ್ತು.

ಭಾರತದಲ್ಲಿ ಸ್ವತಃ ಕೇಂದ್ರ ಸರ್ಕಾರವೇ ಕಾರ್ಪೊರೇಟ್-ಹಣಕಾಸು ಕುಳಗಳ ಹಿತಾಸಕ್ತಿಗಳನ್ನು ವಿಸ್ತರಿಸಲು ಅನುಕೂಲಕರವಾಗಿದೆ. ಈ ಕಾರ್ಪೊರೇಟ್ ಕುಳಗಳು ಅಧಿಕಾರ, ಸಂಪನ್ಮೂಲಗಳು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಹಂತಗಳು ಕೇಂದ್ರೀಕರಣಗೊಳ್ಳಬೇಕೆಂದು ಬಯಸುತ್ತವೆ. ಏಕೆಂದರೆ, ಭಿನ್ನ ಭಿನ್ನ ರಾಜಕೀಯ ನಿಲುವಿನ ಹಲವು ರಾಜ್ಯ ಸರ್ಕಾರಗಳೊಂದಿಗೆ ಏಗುವುದರ ಬದಲಾಗಿ, ಒಂದೇ ಒಂದು ಕೇಂದ್ರೀಕರಣಗೊಂಡ ಕೇಂದ್ರ ಸರ್ಕಾರದ ಮೂಲಕ ತನ್ನ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದು ಸುಲಭವಾಗುತ್ತದೆ. ಹೇಗೆಂದರೆ, ಪ್ರಾದೇಶಿಕ ಸರ್ಕಾರಗಳು ತಮ್ಮ ಯೋಜನೆಗಳನ್ನು ಸ್ಥಳೀಯ ಉತ್ಪಾದಕರಿಗೆ ನೀಡುತ್ತವೆ ಇಲ್ಲವೇ ಸಾರ್ವಜನಿಕ ವಲಯಕ್ಕೆ ಕೊಡುತ್ತವೆ. ರೈತರಿಂದ ಸ್ವಾಧೀನ ಪಡೆದ ಭೂಮಿಗೆ ನೀಡುವ ಪರಿಹಾರವು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಗುತ್ತಿಗೆ ಕೃಷಿ ಮತ್ತು ಮಾರುಕಟ್ಟೆಗಳ ನಿಯಂತ್ರಣವನ್ನು ಕಳಚಿಹಾಕುವ ಮೂಲಕ ರೈತ ಕೃಷಿಯನ್ನು ಕಾರ್ಪೊರೇಟ್ ಶೋಷಣೆಗೆ ಈಡು ಮಾಡುವ ಕೃಷಿ ಮಸೂದೆಗಳಿಗೆ ರಾಜ್ಯ ಶಾಸನ ಸಭೆಗಳಿಂದ ಅನುಮತಿ ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ, ಕೃಷಿ ಕ್ಷೇತ್ರದ ಬದಲಾವಣೆಗಳನ್ನು ಕೇಂದ್ರ ಶಾಸನದ ಮೂಲಕ ತರಲಾಗಿದೆ. ಅವುಗಳ ನ್ಯಾಯಸಮ್ಮತತೆಯು ಸಂದೇಹಾಸ್ಪದವಾಗಿದೆ. ಹಾಗಿದ್ದರೂ ಸಹ, ಇಂತಹ ಶಾಸನಗಳನ್ನು ಜನರು ಒಪ್ಪಿಕೊಳ್ಳಲೇಬೇಕಾಗಿರುವ ಪರಿಸ್ಥಿತಿಯು ನಮ್ಮ ನ್ಯಾಯಾಂಗವು ತನ್ನ ಸ್ವಾತಂತ್ರ್ಯವನ್ನು ಎಷ್ಟರಮಟ್ಟಿಗೆ ಕಳೆದುಕೊಂಡಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಭಾರತವನ್ನು ವಾಸ್ತವಿಕವಾಗಿ ಒಂದು ಏಕೀಕೃತ ಪ್ರಭುತ್ವವನ್ನಾಗಿ ಪರಿವರ್ತಿಸುವ ಪ್ರಶ್ನೆಯ ಮೇಲೆ, ಹಿಂದುತ್ವ ಶಕ್ತಿಗಳ ಮತ್ತು ಕಾರ್ಪೊರೇಟ್ ಕುಳಗಳ ದೃಷ್ಟಿಕೋನಗಳು ಏಕೀಭವಿಸುತ್ತವೆ. ಈ ಯೋಜನೆಯನ್ನು ಮುಂದೆ ಕೊಂಡೊಯ್ಯುವಲ್ಲಿ ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಪ್ರತಿನಿಧಿಸುವ ಕೇಂದ್ರದ ಈಗಿನ ಬಿಜೆಪಿ ಸರ್ಕಾರವು ನಿರತವಾಗಿದೆ ಎಂಬುದು ಆಶ್ಚರ್ಯವೇನಲ್ಲ. ಈ ಪ್ರವೃತ್ತಿಯು ಪ್ರಕಟವಾಗುತ್ತಿರುವುದು ಕೇವಲ ರಾಜಕೀಯ ಮತ್ತು ಆರ್ಥಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಸಹ ಇದೇ ತೆರನಾದ ಪ್ರವೃತ್ತಿಯು ಬಲವಾಗಿ ಪ್ರಕಟವಾಗುತ್ತಿರುವುದನ್ನು ಕಾಣಬಹುದು. ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಚತುರ ಪ್ರಯತ್ನಗಳಿಗೆ ಸದ್ಯಕ್ಕೆ ತಡೆಯಾಗಿರಬಹುದು. ಆದರೆ, ಇಂತಹ ಪ್ರಯತ್ನಗಳು ಪುನರ್ಜನ್ಮ ಪಡೆಯುತ್ತವೆ. ಹೊಸ ಶಿಕ್ಷಣ ನೀತಿಯ ಪ್ರಕಾರ, ಕೇಂದ್ರ ಸರ್ಕಾರವು ರಾಜ್ಯಗಳ ಜತೆ ಯಾವುದೇ ಸಮಾಲೋಚನೆ ಮಾಡದೆ, ಪಠ್ಯಕ್ರಮವನ್ನು ನಿಗದಿ ಮಾಡಬಹುದು. ಇವೆಲ್ಲವೂ, ಭಾರತವನ್ನು ಗುರುತಿಸುವ ವೈವಿಧ್ಯತೆಯ ಸ್ಥಾನದಲ್ಲಿ, “ಏಕ ಸಂಸ್ಕೃತಿ”ಯನ್ನು ಹೇರುವ ಸೂಚಕಗಳಾಗಿವೆ.

ಪ್ರಾದೇಶಿಕ ಭಾಷಾ ಪ್ರಜ್ಞೆಯ ವಾಸ್ತವತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮತ್ತು ಅದನ್ನು ಅತಿಕ್ರಮಿಸಿ ಏಕರೂಪತೆಯನ್ನು ಬಲವಂತವಾಗಿ ಹೇರುವ ಹಠಕ್ಕೆ ದೇಶವು ಒಂದು ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ.  ಏಕೆಂದರೆ, ಅದು ತನ್ನದೇ ವೈರುಧ್ಯವನ್ನು ನಮ್ಮ ಭವಿಷ್ಯದಲ್ಲಿ ಅಪಾಯಕಾರಿಯಾಗುವ ರೀತಿಯಲ್ಲಿ ಸೃಷ್ಟಿಸುತ್ತದೆ.

 

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *