ಪ್ರೇರಣಾ ತರಗತಿ : ಅವಸರದ ತೀರ್ಮಾನ ಮತ್ತು ಹಠಮಾರಿತನ

 ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಪತ್ರಕರ್ತರು

ಈಗಿನ ವಿವಾದಗಳನ್ನು ನೋಡಿದರೆ ಹೊಸ ಶಾಸಕರಿಗೆ ತರಬೇತಿಯ ಜೊತೆಯಲ್ಲಿ ಸನ್ಮಾನ್ಯ ಹೊಸ ವಿಧಾನಸಭಾಧ್ಯಕ್ಷರಿಗೆ ತರಬೇತಿ ಅಲ್ಲದೆ ಇದ್ದರೂ ಸರಿಯಾದ ಮಾರ್ಗದರ್ಶನ/ಸಲಹೆಯ ಅಗತ್ಯವಿರುವಂತೆ ಕಾಣುತ್ತಿದೆ.

ಶಾಸಕರ ತರಬೇತಿಗೆ ಸಂಬಂಧಿಸಿದ ಈಗಿನ ವಿವಾದ ಅವಸರದ ಮತ್ತು ತಪ್ಪು ದಾರಿಗೆಳೆವ ಸಲಹೆಗಳ ಪರಿಣಾಮ. ಶಾಸಕರಿಗೆ ಮುಖ್ಯವಾಗಿ ಹೊಸದಾಗಿ ಆಯ್ಕೆಯಾಗಿರುವವರಿಗೆ ತರಬೇತಿ ನೀಡುವ ಸಂಪ್ರದಾಯ ಹೊಸದೇನಲ್ಲ. ಚುನಾವಣೆಯ ನಂತರ ಹೊಸಸರ್ಕಾರ ರಚನೆಯಾದಾಗ ಇಂತಹ ತರಬೇತಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಆಯೋಜಿಸಲಾಗುತ್ತದೆ.

ಈ ಸ್ಥಾನಕ್ಕೆ ಹೊಸಬರಾಗಿರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತರಬೇತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಖಂಡಿತ ತಮ್ಮ ಕಚೇರಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿರುತ್ತಾರೆ. ಅವರು ಯೋಚಿಸಿ,ವಿವೇಚಿಸಿ ಸೈದ್ಧಾಂತಿಕ ಪೂರ್ವಗ್ರಹಗಳಿಲ್ಲದೆ ಸಲಹೆಗಳನ್ನು ನೀಡಬೇಕಾಗಿತ್ತು.

ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ತರಬೇತಿ ಪಡೆದಿರುವ ಅಧಿಕಾರಿಗಳು ಸಹಜವಾಗಿಯೇ ತಮ್ಮ ಆಲೋಚನೆಗಳನ್ನು ಮುಂದಿಟ್ಟಿದ್ದಾರೆ. “ಸರ್ವರಿಗೂ ಸಲ್ಲಬೇಕು” ಎಂಬ ಹುಟ್ಟು ಸ್ವಭಾವದ ಖಾದರ್ ಅವರಿಗೂ ಈ ಸಲಹೆ ಹಿತವೆನಿಸಿರಬೇಕು. (ಕಾಗೇರಿ ಅವರ ಕಾಲದಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರಿಗೆ ತಿಂಗಳುಕಾಲ ಸರ್ಕಾರಿ ವಾಹನ ನೀಡಿರಲಿಲ್ಲ,ಕಚೇರಿ ಸಿಬ್ಬಂದಿ ನೇಮಕಕ್ಕೂ ಕೊಕ್ಕೆ ಹಾಕಲಾಗಿತ್ತು. ಈಗಲೂ ಅದೇ ಸಿಬ್ಬಂದಿಗಳಿದ್ದಾರೆ)

ಸಭಾಧ್ಯಕ್ಷರು ಇಲ್ಲವೇ ಅವರ ಕಚೇರಿಯ ಅಧಿಕಾರಿಗಳು ಲೋಕಸಭಾಧ್ಯಕ್ಷರ ಕಾರ್ಯಲಯವೇ ನಡೆಸುವ ತರಬೇತಿ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರೆ ಈಗಿನ ಗೊಂದಲ/ವಿವಾದಗಳು ಇರುತ್ತಿರುಲಿಲ್ಲ. ಇದಕ್ಕಾಗಿ ಅವರು ದೆಹಲಿ ಪ್ರವಾಸ ಮಾಡಬೇಕಾಗಿರಲಿಲ್ಲ. ಲೋಕಸಭಾಧ್ಯಕ್ಷರ ಕಚೇರಿಯ ವೆಬ್ ಸೈಟ್ ಗೆ ಒಂದು ಇಣುಕು ಹಾಕಿದ್ದರೆ ಸಾಕಿತ್ತು.

ದೆಹಲಿಯಲ್ಲಿ ವರದಿಗಾರನಾಗಿ ಸಂಸತ್ ಕಲಾಪಗಳ ವರದಿ ಮಾಡಿದ್ದ ನನಗೆ ಸ್ವಲ್ಪ ಮಟ್ಟಿಗೆ ಲೋಕಸಭಾಧ್ಯಕ್ಷರ ಕಾರ್ಯಾಲಯದ ಕಾರ್ಯನಿರ್ವಹಣೆಯ ಬಗ್ಗೆ ಗೊತ್ತಿದೆ. ಸೋಮನಾಥ ಚಟರ್ಜಿ ಅವರು ಲೋಕಸಭಾಧ್ಯಕ್ಷರಾಗಿದ್ದಾಗ ಅವರ ಅಧ್ಯಕ್ಷತೆಯ ಮಾಧ್ಯಮ ಸಲಹಾ ಸಮಿತಿಯ ಸದಸ್ಯನಾಗಿ ನಾನು ಕಾರ್ಯನಿರ್ವಹಿಸಿದ್ದೆ. ಸಂಸತ್ ಕಲಾಪ ವರದಿ ಮಾಡುವ ಪತ್ರಕರ್ತರಿಗೆ ಮಾನ್ಯತಾ ಪತ್ರ ಕೊಡಲು ಸಲಹೆ ನೀಡುವುದು ಈ ಸಮಿತಿಯ ಕೆಲಸವಾಗಿದ್ದರೂ ಅದರ ಸದಸ್ಯನಾಗಿ ಸ್ಪೀಕರ್ ಕಚೇರಿಯ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ಒದಗಿ ಬಂದಿತ್ತು.

ಸಂಸದರು, ಶಾಸಕರು ಮತ್ತು ಸಭಾಧ್ಯಕ್ಷರ ಕಚೇರಿಯ ಅಧಿಕಾರಿಗಳು/ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶಕ್ಕಾಗಿಯೇ Parliamentary Research and Training Institute for Democracies (PRIDE) ಎಂಬ ಸಂಸ್ಥೆ ಇದೆ. ಈ ಸಂಸ್ಥೆಯನ್ನು ಸಂಪರ್ಕಿಸಿದರೆ ತರಬೇತಿಯ ಮಾದರಿ ಮತ್ತು ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನೇ ಕಳಿಸಿಕೊಡುತ್ತಿದ್ದರು. ಬಲರಾಂ ಜಾಖಡ್ ಅವರು ಲೋಕಸಭಾ ಅಧ್ಯಕ್ಷರಾಗಿದ್ದಾಗ ವಿಧಾನಮಂಡಲದ ಸದಸ್ಯರಿಗೂ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದರು. ನಾನು ಮಾಧ್ಯಮ ಸಲಹೆಗಾರನಾಗಿದ್ದ ಅವಧಿಯ ವಿಧಾನ ಸಭಾಧ್ಯಕ್ಷರಿಗೂ ಇದನ್ನು ತಿಳಿಸಿದ್ದೆ, ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಈಗ “ಜ್ಞಾನಪೀಠ” ಎಂದು ಕರೆಯಲಾಗುವ ಸಂಸತ್ ಆವರಣದಲ್ಲಿರುವ ಗ್ರಂಥಾಲಯದಲ್ಲಿಯೇ ಈ ಸಂಸ್ಥೆಗೆ ಸುಸಜ್ಜಿತ ಸಭಾಂಗಣ ಹೊಂದಿರುವ ಕಚೇರಿ ಇದೆ. ಇದು ಸಂಸದರಿಗೆ ಕೃಷಿ, ಹಣಕಾಸು, ಜಲಸಂಪನ್ಮೂಲ, ಹವಾಮಾನ ಬದಲಾವಣೆ, ಅಂತರರಾಷ್ಟ್ರೀಯ ಸಂಬಂಧ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ದುಂಡುಮೇಜಿನ ಸಭೆಗಳನ್ನು ಏರ್ಪಡಿಸುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಕೃಷಿ ತಜ್ಞ ಡಾ.ಎಸ್.ಸ್ವಾಮಿನಾಥನ್, ಆರ್ಥಿಕ ತಜ್ಞ ಡಾ.ಸಿ.ರಂಗರಾಜನ್, ಮಾಧ್ಯಮ ತಜ್ಞ ಪಿ.ಸಾಯಿನಾಥ್, ಜಲತಜ್ಞ ರಾಜೇಂದ್ರ ಸಿಂಗ್, ಪರಿಸರ ತಜ್ಞೆ ಸುನೀತ ನಾರಾಯಣ್ ಸೇರಿದಂತೆ ಹಲವಾರು ತಜ್ಞರು, ನೊಬೆಲ್ ಪ್ರಶಸ್ತಿ ವಿಜೇತರು, ಹಿರಿಯ ಅಧಿಕಾರಿಗಳು, ಪತ್ರಕರ್ತರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾ ಬಂದಿದ್ದಾರೆ

ಇವರಲ್ಲಿ ಹಲವರ ಉಪನ್ಯಾಸಗಳನ್ನು ನಾನೂ ಕೇಳಿದ್ದೇನೆ. ಪಿ.ಸಾಯಿನಾಥ್ ಅವರ ಭಾಷಣಕ್ಕೆ ಸಂಸದರು, ಅಧಿಕಾರಿಗಳು, ಪತ್ರಕರ್ತರು ಕಿಕ್ಕಿರಿದು ನೆರೆದಿದ್ದನ್ನೂ ನಾನು ನೋಡಿದ್ದೆ. ಅಟಲಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಂದೂ ಸಂಸದರ ತರಬೇತಿ ಕಾರ್ಯಕ್ರಮಗಳಿಗೆ ಧಾರ್ಮಿಕ ಗುರುಗಳನ್ನು ಆಹ್ಹಾನಿಸಿರಲಿಲ್ಲ. ನನಗೆ ತಿಳಿದಂತೆ ನರೇಂದ್ರಮೋದಿಯವರು ಪ್ರಧಾನಿಯಾದ ನಂತರದ ದಿನಗಳಲ್ಲಿ ಕೂಡಾ ಇಂತಹ ಧಾರ್ಮಿಕ ಪ್ರವಚನಗಳು ನಡೆದಿರಲಿಲ್ಲ.

ಈಗ ಸನ್ಮಾನ್ಯ ಯು.ಟಿ.ಖಾದರ್ ಅವರು ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಸತ್ ಸದಸ್ಯರಿಗೆ ಆರ್ ಎಸ್ ಎಸ್ ಮತ್ತು ವಿಶ್ವಹಿಂದು ಪರಿಷತ್ ನಾಯಕರು, ಬಾಬಾ ರಾಮದೇವ್, ಜಗ್ಗಿ ವಾಸುದೇವ್ ಮೊದಲಾದ ಮಹನೀಯರನ್ನು ಕರೆಸಿ ಉಪನ್ಯಾಸ ನೀಡುವ ಕಾರ್ಯಕ್ರಮ ಪ್ರಾರಂಭವಾಗಬಹುದು.ಅಂತಹ ಕಾರ್ಯಕ್ರಮಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಒಪ್ಪಿ ಭಾಗವಹಿಸುತ್ತಾರಾ?

ಇದು ಯು.ಟಿ.ಖಾದರ್ ಅವರ ಅವಸರದ ತೀರ್ಮಾನ ಮತ್ತು ಹಠಮಾರಿತನದ ಪರಿಣಾಮ.

 

Donate Janashakthi Media

Leave a Reply

Your email address will not be published. Required fields are marked *