‘ತಾಯಿ’ ಸಹನೆಯ ಕಣಜ

– ಎಚ್.ಆರ್.ನವೀನ್ ಕುಮಾರ್, ಹಾಸನ

ಬೆಂಗಳೂರಿನಿಂದ ಹಾಸನಕ್ಕೆ ಬರಲೆಂದು ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಟ್ರೈನ್ ಹತ್ತಿದೆ. ಸಂಜೆ 6 ಗಂಟೆಗೆ ಹೊರಡುವ ರೈಲಿಗೆ ಇನ್ನೂ 10 ನಿಮಿಷ ಸಮಯವಿತ್ತು. ಸಾಮಾನ್ಯ ಬೋಗಿಯಲ್ಲಿ ಬಂದು ಕುಳಿತಿದ್ದೆ. ನಾನು ಕುಳಿತ ಸೀಟಿನಲ್ಲಿ ನಾನೂ ಸೇರಿ 4 ಜನ ಕುಳಿತಿದ್ದೆವು. ಮುಂದಿನ ಸೀಟಿನಲ್ಲಿ ಮೂರು ಜನ ಕುಳಿತಿದ್ದರು. ಇನ್ನೇನು ರೈಲು ಹೊರಡಬೇಕು ಎನ್ನುವಷ್ಟರಲ್ಲಿ ಮೂವರು ಮಕ್ಕಳನ್ನು ಕರೆದುಕೊಂಡು ಜೊತೆಗೆರಡು ಬ್ಯಾಗುಗಳನ್ನು ಹಿಡಿದು ಒಬ್ಬ ತಾಯಿ ರೈಲು ಹತ್ತಿ ಸೀಟಿಗಾಗಿ ಎಲ್ಲಡೆ ಹುಡುಕಾಡಿ ನಾವು ಕುಳಿತಿದ್ದ ಸೀಟಿನತ್ತ ಬಂದರು. ನಾನು ಕುಳಿತಿದ್ದ ಮುಂದಿನ ಸೀಟಿನಲ್ಲಿ ಖಾಲಿಯಿದ್ದ ಜಾಗದಲ್ಲಿ ಬಂದು ಕುಳಿತರು.

ಎರಡು ವರ್ಷದ ಒಂದು ಗಂಡು ಮಗು, ಸುಮಾರು 8-9 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು. ಒಬ್ಬಳು ಅವರ ತಂಗಿಯ ಮಗಳು, ಮತ್ತೊಬ್ಬಳು ಅವರದೇ ಮಗಳು ಎಂದು ನಂತರ ಗೊತ್ತಾಯಿತು.

ರೈಲಿಗೆ ಬಂದ ಕೂಡಲೇ ಇಬ್ಬರು ಹೆಣ್ಣುಮಕ್ಕಳು ನಾನು ಇಲ್ಲಿ ಕೂರುತ್ತೇನೆ, ನಾನು ಅಲ್ಲಿ ಕೂರುತ್ತೇನೆ ಎಂದು ಹಠ ಮಾಡಲು ಪ್ರಾರಂಭಿಸಿದರು. ಅವರನ್ನು ಒಂದು ಕಡೆ ಕೂರಿಸಲು ಕಂಕುಳಲ್ಲಿದ್ದ ಮಗುವನ್ನು ಸಂಭಾಳಿಸುತ್ತಾ ಇವರಿಬ್ಬರನ್ನು ಒಂದೆಡೆ ಕೂರಿಸಲು ಹರಸಾಹಸ ಪಡುತ್ತಿದ್ದರು. ಒಂದೆಡೆ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಅವರನ್ನು ಸಮಾಧಾನ ಮಾಡಬೇಕು, ಮತ್ತೊಂದೆಡೆ ಸುತ್ತಲೂ ಕುಳಿತಿದ್ದವರು ತನ್ನ ಬಗ್ಗೆ ತನ್ನ ಮಕ್ಕಳ ಬಗ್ಗೆ ಏನು ತಿಳಿಯುತ್ತಾರೋ ಎನ್ನೋ ಭಾವನೆ. ಈ ಮಕ್ಕಳಿಗೆ ಮನೆ ಮತ್ತು ಟ್ರೈನ್ ನ ಯಾವ ವ್ಯತ್ಯಾಸವೂ ಇಲ್ಲದಂತೆ ಕಾದ ಹೆಂಚಿನ ಮೇಲೆ ಹುರುಳಿಕಾಳು ಸಿಡಿದಂತೆ ಪಟಪಟಾ ಎಂದು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಬಿಹಾರಕ್ಕಿಲ್ಲ ವಿಶೇಷ ಸ್ಥಾನಮಾನ: ಸ್ಪೋಟವಾಗುತ್ತಾ ನಿತೀಶ್ ಅಸಮಾಧಾನ..?

ಈಗಿನ ಹೊಸತಲೆಮಾರಿನ ಮಕ್ಕಳೇ ಹಾಗೆ.. ಎಲ್ಲವನ್ನೂ ಸಂಬಾಳಿಸಿ‌ ಮೇಲಿನ ಸೀಟುಗಳಲ್ಲಿ ಲಗೇಜುಗಳ ಮಧ್ಯ ಜಾಗ ಮಾಡಿ ಇಬ್ಬರನ್ನೂ ಕೂರಿಸಿ ಸಮಾಧಾನ ಮಾಡಿಕೊಳ್ಳುವಷ್ಟರಲ್ಲಿ ಕಂಕುಳಲ್ಲಿದ್ದ ಮಗು ತನ್ನ ವರಸೆ ಆರಂಭಿಸಿತು… ಅದು ಒಂದೇ ಸಮ ಅಳಲು ಶುರುಮಾಡಿತು.

ಈ ಮಗುವನ್ನು ಸಮಾಧಾನ ಮಾಡಲು ಏನ್ ಬೇಕಪ್ಪ, ಹಾಲು ಕುಡಿತಿಯಾ (ರೈಲಿನಲ್ಲಿ ಮಗುವಿಗೆ ಹಾಲುಣಿಸುವ ವ್ಯವಸ್ಥೆ ಮತ್ತು ವಾತಾವರಣ ಎರಡೂ ಇರುವುದಿಲ್ಲ) ಬಿಸ್ಕೇಟ್ ತಿಂತಿಯಾ, ನೀರ್ ಕುಡಿತಿಯಾ… ಹೀಗೇ ಅವನ ಅಳುವಿಗೆ ಕಾರಣಗಳನ್ನು ಹುಡುಕುತ್ತಾ, ಅವನನ್ನು ಸಮಾಧಾನ ಮಾಡಲು ಆರಂಭಿಸಿದರು.

ಅಷ್ಟರಲ್ಲೇ ನಿರೀಕ್ಷೆ ಎಂಬಂತೆ ಮೇಲೆ ಕುಳಿತಿದ್ದ ಇಬ್ಬರು ಮಕ್ಕಳ ಗಲಾಟೆ ಹೆಚ್ಚಾಯಿತು. ಕೆಳಗಿನಿಂದ ಸುಮ್ಮನಿರಿಸಲು ಅಮ್ಮ ದೊಡ್ಡ ಕಣ್ಣುಗಳನ್ನು ಬಿಡುತ್ತಾರೆ, ಇದಕ್ಕೆಲ್ಲಾ ಲೆಕ್ಕವೇ ಇಲ್ಲದಂತೆ ಅವರ ಪಾಡಿಗೆ ಅವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಮತ್ತೊಮ್ಮೆ ಅಮ್ಮ ಜೋರುಮಾಡುತ್ತಾ ‘ಇದು ಮನೆಯಲ್ಲ, ಹಿಂಗೆ ಆಡುತ್ತಿದ್ದರೆ ಅಪ್ಪನಿಗೆ ಫೋನ್ ಮಾಡುತ್ತೇನೆ, ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸುತ್ತೇನೆ, ವಿಡಿಯೋ ಕಾಲ್ ಮಾಡುತ್ತೇನೆ’ ಎಂದಾಗ ಸ್ವಲ್ಪ ಸುಮ್ಮನಾದವರು. ಅಮ್ಮನ ಗಮನ ಬೇರೆಡೆ ಹೊರಳುತ್ತಿದ್ದಂತೆ ಮತ್ತೆ ಯಥಾ ಪ್ರಕಾರ ಜೋರಾಗಿ‌ ಮಾತನಾಡುತ್ತಾ ತಮ್ಮ ಆಟವನ್ನು ಮುಂದುವರೆಸಿದರು.

ಇವರ ಈ ಆಟಗಳನ್ನು ನೋಡುತ್ತಾ ತಲೆತಲೆ ಚಚ್ಚಿಕೊಳ್ಳುತ್ತಾ ಸುತ್ತಲಿರುವವರಿಂದ ಅವಮಾನವಾದಂತೆ ಭಾವಿಸುತ್ತಾ ಕೈಯಲ್ಲಿದ್ದ ಮಗುವಿನ ಕಡೆ ಗಮನ ನೀಡುತ್ತ ಬ್ಯಾಗಿನಲ್ಲಿದ್ದ ಡಬ್ಬ ಒಂದನ್ನು ತೆಗೆದು ಅದರಲ್ಲಿದ್ದ ಬಿಸ್ಕೆಟನ್ನು ಮಗುವಿನ ಕೈಗೆ ಕೊಟ್ಟರು. ಆ ಮಗು ಬಿಸ್ಕೆಟನ್ನು ಅರ್ಧ ತಿಂದು ಇನ್ನರ್ಧದಲ್ಲಿ ಆಟವಾಡಲು ಶುರುಮಾಡಿತು. ಕೆಳಗಡೆ ಬೀಳಿಸುತ್ತೆ; ಅದನ್ನೇ ತೆಗೆದುಕೊಂಡು ಬಾಯಿಗೆ ಹಾಕಲು ಪ್ರಯತ್ನಿಸುತ್ತದೆ. ಅದನ್ನು ಕಾವಲಿನಂತೆ ಅಮ್ಮ ಕಾಯ್ದು ಬಿಸ್ಕೆಟನ್ನು ಕೆಳಗೆ ಬೀಳದಂತೆ ಎಚ್ಚರ ವಹಿಸುತ್ತಿದ್ದಳು. ಪದೇ ಪದೇ ಆ ಬಿಸ್ಕೆಟನ್ನೇ ತಿನ್ನಲು ಮಗು ಪ್ರಯತ್ನಿಸುತ್ತಿದ್ದಾಗ ಅದನ್ನು ಕಿತ್ತುಕೊಂಡು ಹೊರಗೆ ಎಸೆಯಲು ಪ್ರಯತ್ನಿಸಿದ್ದಕ್ಕೆ ಕಿಟಾರ್ ಎಂದು ಚೀರುತ್ತಾ ಇಡೀ ಬೋಗಿಯ ಜನರೆಲ್ಲಾ ಏನೋ ದುರಂತವೇ ನಡೆದಂತೆ ಇತ್ತಕಡೆ ಗಮನ ಹರಿಸುವಂತೆ ಮಾಡಿದ‌ ಮಗುವಿನ ಮೇಲೆ ಸಿಟ್ಟಿಗೇರಿದ ಅಮ್ಮ ಮತ್ತೆ ತನ್ನನ್ನು ತಾನೇ ಸಾವರಿಸಿಕೊಳ್ಳುತ್ತಾ ಮಗುವನ್ನು ಮುದ್ದಾಡಿ ರಮಿಸಿ ಸಮಾಧಾನ ಮಾಡುತ್ತಾಳೆ.

ಅಷ್ಟರಲ್ಲೇ ಈ ಮಗು ತನ್ನ ಕೈಯನ್ನು ಕುಂಡಿಯ ಮೇಲಿಟ್ಟು ಅಮ್ಮಾ ಅಮ್ಮಾ ಎಂದು ಕೂಗುತ್ತದೆ. ಈ ಕೂಗಿನ ದ್ವನಿಯಲ್ಲೇ ಸಮಸ್ಯೆಯನ್ನು ಅರ್ಥೈಸಿಕೊಂಡ ಈಕೆ ಮಗುವಿನ ಚಡ್ಡಿಯ ಒಳಭಾಗದಲ್ಲಿರುವ ಪ್ಯಾಂಪರ್ ಪರೀಕ್ಷಿಸಿ ನೋಡಿದಳು… ಮಗು ಯಾರನ್ನು, ಯಾವ ಸಮಯವನ್ನೂ ಯಾವ ಜಾಗವನ್ನೂ ನೋಡದೆ ತನ್ನ ಪಾಡಿಗೆ ತನ್ನ ಕೆಲಸವನ್ನು ಮುಗಿಸಿತ್ತು. ಕೂಡಲೇ ಆ ಮಗುವನ್ನು ಎತ್ತಿಕೊಂಡು ಬಾತ್ ರೂಂ ಕಡೆ ಹೊರಟ ತಾಯಿ ಮೇಲೆ ಕುಳಿತಿದ್ದ ಇಬ್ಬರು ಮಕ್ಕಳಿಗೂ ಎಚ್ಚರಿಕೆಯನ್ನು ನೀಡಿ ‘ನಾನು ಬರುವವರೆಗೂ ಸುಮ್ಮನೆ ಕುಳಿತಿರಬೇಕು’ ಎಂದು ಹೇಳುವುದನ್ನು ಮರೆಯಲಿಲ್ಲ.

ಸರಿಸುಮಾರು ಮೂರು ಗಂಟೆಗಳ ಕಾಲ ಈ ಮೂರು ಮಕ್ಕಳನ್ನು ಸಮಾಧಾನ ಮಾಡುವಷ್ಟರಲ್ಲಿ ಎದುರಿಗೆ ಕುಳಿತಿದ್ದ ನನಗೆ ಒಂದು‌ ಕ್ಷಣ ತಾಳ್ಮೆ ಕೆಟ್ಟಂತಾಯಿತು. ಈ ತಾಯಿ ಒಂದು ಕ್ಷಣವೂ ತನಗಾಗಿ ಸಮಯ ಕೊಡಲಾಗಲಿಲ್ಲ. ಇನ್ನೂ 9 ತಿಂಗಳು ತನ್ನ ದೇಹದ ಭಾಗವಾಗಿಯೇ ಇಟ್ಟುಕೊಂಡು ಹೊತ್ತು ಆನಂತರ ಹೆತ್ತು ಆ ಮಗು ಸ್ವತಂತ್ರವಾಗಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವಂತಾಗುವವರೆಗೂ ಈಕೆ ತನ್ನೆಲ್ಲವನ್ನು ಈ ಮಗುವಿಗೆ ಧಾರೆ ಎರೆಯುವ ಮೂಲಕ ಆ ಮಗುವಿನ ಸಣ್ಣ ಪುಟ್ಟ ಖುಷಿಗಳಲ್ಲಿ, ಅದರ ತೊದಲು ಮಾತುಗಳಲ್ಲಿ, ಅದರ ಬೆಳವಣಿಗೆಯಲ್ಲಿ ತನ್ನ ಸಂತೋಷವನ್ನು ಕಾಣುತ್ತಾಳೆ.

ಇವಳೇ ಸಹನಾಮಯಿ ತಾಯಿ… ಇವಳ ಈ ಕೆಲಸ ಎಲ್ಲಿಯೂ ಪರಿಗಣಿಸಲ್ಪಡುವುದಿಲ್ಲ, ಆದರೆ ಈ ತಾಯಿಯ ತ್ಯಾಗವಿಲ್ಲದೆ ಸಮಾಜ ಮುಂದಕ್ಕೆ ಚಲಿಸುವದಿಲ್ಲ…

ಇದನ್ನೂ ನೋಡಿ: ರಾಜ್ಯದಲ್ಲಿ ಹದಿನಾಲ್ಕೂವರೆ ಲಕ್ಷ ಸರ್ಕಾರಿ ಜಮೀನು, ಗೋಮಾಳ ಜಮೀನು ಕುರಿತು ಕಂದಾಯ ಸಚಿವ ಸ್ಪಷ್ಟನೆJanashakthi Media

Donate Janashakthi Media

Leave a Reply

Your email address will not be published. Required fields are marked *