~ ಚೇತನಾ ತೀರ್ಥಹಳ್ಳಿ
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೇರಠ್ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಮುಗಿಬಿದ್ದರಲ್ಲ, ಆಗ ಅವರೆಲ್ಲರೂ ಒಂದು ಸ್ಫೂರ್ತಿಗೀತೆಯನ್ನು ಗುನುಗುತ್ತ ಹೋರಾಡಿದ್ದರಂತೆ. ಆ ದಂಗೆಯ ಕಿರುಯುದ್ಧಗಳಲ್ಲಿ ಅವರ ಉದ್ಗಾರ – “ಮಾದರ್ ಎ ವತನ್ ಜಿಂದಾಬಾದ್” ಎಂದಾಗಿತ್ತು. ರಾಷ್ಟ್ರಮಾತೆಗೆ ಜಯವಾಗಲಿ (ತಾಯಿ ಭಾರತಿಗೆ ಜಯವಾಗಲಿ) ಅನ್ನೋದು ಇದರರ್ಥ. ಈ ಘೋಷಣೆಯನ್ನು ಸೈನಿಕರಿಗೆ ಕೊಟ್ಟು ಹುರಿದುಂಬಿಸಿದ್ದು ಅಜೀಮುಲ್ಲಾ ಖಾನ್.
ಅಜೀಮ್ ಉಲ್ಲಾ ಖಾನ್ ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಬರೆದಿದ್ದ ರಾಷ್ಟ್ರಗೀತೆ, ಅದೇ, ಮೇರಠ್ ಸೈನಿಕರು ಗುನುಗುತ್ತಿದ್ದ ಸ್ಫೂರ್ತಿಗೀತೆ, ಈ ದೇಶದ ಮೊಟ್ಟಮೊದಲ ರಾಷ್ಟ್ರಗೀತೆ ಎಂದು ಹೇಳಲಾಗುತ್ತದೆ.
ಕೆಲವು ಸುಳ್ಳರ ಪ್ರಕಾರ 1857ರ ಸಂಗ್ರಾಮದಲ್ಲಿ ಸ್ಫೂರ್ತಿಗೀತೆಯಾಗಿದ್ದು ‘ವಂದೇ ಮಾತರಂ’. ಆದರೆ ಬಂಕಿಮರು ಅದನ್ನು ಬರೆದಿದ್ದು 1870ರಲ್ಲಿ, ಮತ್ತು ಆ ಘೋಷಣೆ ಪಾಪ್ಯುಲರ್ ಆಗಿದ್ದು ಅನಂತರದಲ್ಲಿ. ಸಿಪಾಯಿ ದಂಗೆ ಅಥವಾ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ.
ಇದನ್ನೂ ಓದಿ:ಸುಲಿಗೆ ಎನ್ನುವುದೇ ಇಲ್ಲಿ ಮುಖ್ಯ ಕಾನೂನು
ಬಂಕಿಮರ ಆನಂದಮಠವೂ ಸ್ವಾತಂತ್ರ್ಯ ಸಂಗ್ರಾಮದ ಕಥಾವಸ್ತು ಹೊಂದಿರುವ ಕೃತಿ. ಬಹುಶಃ ಅವರ ‘ವಂದೇ ಮಾತರಂ’ ಗೀತೆಗೆ ಮಾದರ್ ಎ ವತನ್ ಘೋಷಣೆಯೇ ಪ್ರೇರಣೆ ಇರಬೇಕು. ಅಜೀಮ್ ಉಲ್ಲಾ ಖಾನ್ ಪರ್ಷಿಯನ್ ಹಿಂದಿಯಲ್ಲಿ ಹೇಳಿದ್ದನ್ನು ಬಂಕಿಮರು ಸಂಸ್ಕೃತಕ್ಕೆ ತಂದುಕೊಂಡಿರಬೇಕು.
ಇರಲಿ. ಅಜೀಮ್ ಉಲ್ಲಾ ಖಾನ್ ಒಂದಿಡೀ ಕಾದಂಬರಿ ಬರೆಯಬಹುದಾದಷ್ಟು ಆಕರ್ಷಕ ವ್ಯಕ್ತಿತ್ವ. ಸದ್ಯಕ್ಕೆ ಅವರ ‘ಕೌಮಿ ತರಾನಾ’ದ ಒಂದು ಕಚ್ಚಾ ಅನುವಾದ ನಿಮಗಾಗಿ…
ಕೌಮಿ ತರಾನಾ (ಕ್ವಾಮಿ ತರಾನಾ) ರಾಷ್ಟ್ರಗೀತೆ
ಮಾದರ್ ಎ ವತನ್ ಜಿಂದಾಬಾದ್ : ರಾಷ್ಟ್ರಮಾತೆಗೆ ಜಯವಾಗಲಿ!!
ಈ ಮಣ್ಣಿನ ಒಡೆಯರು ನಾವೇ, ಹಿಂದೂಸ್ತಾನವಿದು ನಮ್ಮದು
ಪುಣ್ಯಭೂಮಿ ಈ ದೇಶ ನಮ್ಮದು, ಸ್ವರ್ಗಕಿಂತಲೂ ಹಿರಿದು.
ನಮ್ಮ ಸ್ವಂತದ ನೆಲೆಯಿದು, ಈ ಹಿಂದೂಸ್ತಾನ ನಮ್ಮದು.
ಇದರ ಅಂತರಂಗದ ಬೆಳಕಿಂದಲೇ ಜಗವು ಬೆಳಗುತಿಹುದು.
ಅತಿ ಪುರಾತನ, ಅತಿ ಪ್ರಶಾಂತ, ಲೋಕದಲೇ ಅತಿ ಸುಂದರ;
ಹರಿಯುತಿವೆ ತೋಯಿಸಲಿದನು ಗಂಗಾ – ಯಮುನಾ ಧಾರಾ.
ಶಿರದಲಿದೆ ಹಿಮ – ಹಿಮಾಲಯ, ನಮ್ಮಯ ಕಾವಲುಗಾರ!
ಪದತಲದಲ್ಲಿ ನೆರೆಗಳ ರಿಂಗಣ, ಸಾಗರಗಳ ನಮಸ್ಕಾರ.
ಈ ಭೂಮಿಯಾಳದ ಗಣಿ – ಗಣಿಯಲ್ಲೂ ಚಿನ್ನ, ವಜ್ರ ವೈಢೂರ್ಯ;
ಇದರ ಹಿರಿಮೆಗೆ ಇದರ ಗರಿಮೆಗೆ ಜಗದ ತುಂಬ ಜೈಕಾರ!
ಇದನಾಲಿಸಿ ಬಂದರು ಫಿರಂಗಿ ಜನರು, ಮಂಕು ಬೂದಿ ಎರಚಿದರು;
ಎರಡೂ ಕೈಯಲೂ ಬಾಚಿ ಬಾಚಿ, ನಮ್ಮ ನೆಲವನು ದೋಚಿದರು.
ಈ ಮಣ್ಣಿನ ಋಣ ತೀರಿಸುವ ಸಮಯ ಬಂದಿದೆ ಬಂಧು,
ಹಿಂದೂ ಮುಸ್ಲಿಮ್ ಸಿಕ್ಖರೆಲ್ಲರೂ ಒಂದಾಗಬೇಕಿದೆ ಇಂದು.
ಬೇಡಿ ತೊಡೆದು ಬೆಂಕಿಯುಗುಳುತ ಹೋರಾಡೋಣ ನಿರಂತರ,
ಸ್ವತಂತ್ರ ಧ್ವಜಕೆ ತಲೆಬಾಗುತ ಸಲ್ಲಿಸೋಣ ನಮಸ್ಕಾರ.