ಬೆಂಗಳೂರು : ಘನ ತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಯಿಂದ ಮಾಸಿಕ ರೂ.100 ಸಂಗ್ರಹಕ್ಕೆ ಮುಂದಗಿರುವ ಬಿಬಿಎಂಪಿ ಕ್ರಮಕ್ಕೆ ಸಿಪಿಐಎಂ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಆಕ್ರೋಶ ವ್ಯಕ್ತಪಡಿಸಿವೆ.
ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್ ಮಂಜುನಾಥ್, ಎನ್. ಪ್ರತಾಪ್ ಸಿಂಹ ಜಂಟಿ ಹೇಳಿಕೆ ನೀಡಿದ್ದು, ಘನ ತ್ಯಾಜ್ಯ ನಿರ್ವಹಣೆಗಾಗಿ ಬಿಬಿಎಂಪಿ 2021-22 ರಲ್ಲಿ 1622 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. 2022-23 ಸಾಲಿನಲ್ಲಿ ರೂ.1469 ಕೋಟಿಗಳನ್ನು ಮೀಸಲಿಟ್ಟಿದೆ. ಕೇಂದ್ರ ಸರ್ಕಾರವೂ ಸಹ ಸ್ವಚ್ಛ ಭಾರತ್ ಸೆಸ್ ಹೆಸರಿನಲ್ಲಿ ಸಾವಿರಾರು ಕೋಟಿ ಸಂಗ್ರಹಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜಕೀಯ ನೈತಿಕತೆಯೂ ಅಧಿಕಾರ ರಾಜಕಾರಣವೂ
ಆಸ್ತಿ ತೆರಿಗೆ ಸಂಗ್ರಹಿಸುವಾಗ ಘನ ತ್ಯಾಜ್ಯ ನಿರ್ವಹಣೆ ಸೆಸ್ ಸಹ ಸಂಗ್ರಹಿಸಲಾಗುತ್ತಿದೆ. ಹೀಗಿರುವಾಗ ಹೆಚ್ಚುವರಿಯಾಗಿ ಪ್ರತಿ ಮನೆಗೆ ರೂ.100 ಮತ್ತು ವಾಣಿಜ್ಯ ಹಾಗೂ ಸಂಘ ಸಂಸ್ಥೆಗಳಿಂದ ರೂ.200 ಘನ ತ್ಯಾಜ್ಯ ನಿರ್ವಹಣೆ ಶುಲ್ಕ ಮೂಲಕ ವರ್ಷಕ್ಕೆ ರೂ.800 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದನ್ನು ಸಂಗ್ರಹಿಸಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಯಮಿತ ಕಂಪನಿ(ಬಿಎಸ್‌ಡಬ್ಲೂಎಂಎಲ್)ಗೆ ವಹಿಸಿದೆ. ರಾಜ್ಯ ಸರ್ಕಾರದ ಈ ಜನ ವಿರೋಧಿ ನಡೆಯನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಭಾರಿ ಭ್ರಷ್ಟಾಚಾರವು ಬೆಂಗಳೂರಿಗೆ ಕೆಟ್ಟ ಹೆಸರನ್ನು ತಂದಿಟ್ಟಿದೆ. ತ್ಯಾಜ್ಯ ವ್ಯವಹಾರವನ್ನು ಮಾಫಿಯಾಗಳು ನಿಯಂತ್ರಿಸುತ್ತಿವೆ. ಪೌರ ಕಾರ್ಮಿಕರ ಸಂಖ್ಯೆ ಮತ್ತು ತ್ಯಾಜ್ಯ ಸಂಗ್ರಹ ವಾಹನಗಳ ಸಂಖ್ಯೆಯಲ್ಲಿ ನಡೆಯುವ ಹಾಗೂ ಘನ ತ್ಯಾಜ್ಯದ ಮಾಪನದಲ್ಲಿ ನಡೆಯುವ ವಂಚನೆಯು ಬಟಾಬಯಲಾಗಿದ್ದರೂ, ಇದನ್ನು ನಿಯಂತ್ರಿಸುವ ಇಚ್ಛಾಶಕ್ತಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರವಾಗಲಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರವಾಗಲಿ ತೋರಿಲ್ಲ.
ಇಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಿದ್ದಲ್ಲಿ ತ್ಯಾಜ್ಯ ನಿರ್ವಹಣೆ ಹೊರೆ ಆಗಲಾರದು. ಮಾತ್ರವಲ್ಲದೇ ಇದರಿಂದ ಆದಾಯವನ್ನು ಗಳಿಸುವ ವಿಧಾನಗಳನ್ನು ತಜ್ಞರು ತೋರಿಸಿದ್ದಾರೆ. ಆದರೆ ಇದ್ಯಾವುದನ್ನು ಮಾಡದ ಸರ್ಕಾರಬೆಂಗಳೂರಿನ ನೈರ್ಮಲ್ಯ ಕಾಪಾಡುವ ಹೊಣೆಗಾರಿಕೆಯನ್ನು ಹಂತಹಂತವಾಗಿ ಖಾಸಗಿ ಕಂಪನಿಗಳಿಗೆ ವಹಿಸಲು ಹುನ್ನಾರ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಪ್ರತಿ ಮನೆಗೆ ತ್ಯಾಜ್ಯ ನಿರ್ವಹಣೆ ಶುಲ್ಕ ಸಂಗ್ರಹಿಸುವ ಜನ ವಿರೋಧಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಆಗ್ರಹಿಸಿವೆ. ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ವಾಪಸ್ಸು ಪಡೆಯದಿದ್ದಲ್ಲಿ 2024 ಜೂನ್ 26 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿವೆ.
ಇದನ್ನೂ ನೋಡಿ: ನಿರಂಜನ 100 ಚಿರಸ್ಮರಣೆ | ಮೃತ್ಯುಂಜಯ ನಾಟಕದ ಆಯ್ದ ಭಾಗ