ನವದೆಹಲಿ: ಸಂಸತ್ತು ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ವಿರೋಧ ಪಕ್ಷಗಳ ನಾಯಕರು ತೀವ್ರ ಗದ್ದಲದಿಂದಾಗಿ ಕೆಲಕಾಲ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳನ್ನು ಕೆಲ ಕಾಲ ಮುಂದೂಡಬೇಕಾಯಿತು.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಂಸತ್ತಿನಲ್ಲಿ ವೈಎಸ್ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರಿಸಿದರು.
ನೂತನ ಸಚಿವರ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರು ಮಾತನಾಡಿ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆ ಸಂಸತ್ತಿಗೆ ಹೆಚ್ಚಿನ ಉತ್ಸಾಹ ಬಂದಂತ್ತಾಗಿದೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರು ನೂತನ ಸಚಿವರ ಕುರಿತು ಮಾತನಾಡುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಈ ನಡೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜನಾಥ್ ಸಿಂಗ್ ಅವರು ಮಾತನಾಡುತ್ತಿದ್ದಂತೆಯೇ ವಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡಿದರು. ಬಳಿಕ ಲೋಕಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ರಾಜ್ಯ ಸಭೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಸದನದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಈ ವರ್ಷ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಕಲಾಪವನ್ನು ಮಧ್ಯಾಹ್ನ 12.24ಕ್ಕೆ ಮುಂದೂಡಲಾಯಿತು.
ಸದನ ಆರಂಭಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪೆಗಾಸಸ್ ಬಗ್ಗೆ ಮಾಧ್ಯಮಗಳ ವರದಿ ಬೆನ್ನಲ್ಲೇ ನಮ್ಮ ರಾಷ್ಟ್ರೀಯ ಭದ್ರತೆಯು ಅಪಾಯದಲ್ಲಿದೆ. ಈ ವಿಷಯವನ್ನು ನಾನು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದರು. ಸಂಸತ್ ಪ್ರವೇಶಿಸಿದ ಕೂಡಲೇ ಪೆಗಾಸಸ್ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯೂ ಹೇಳಿದರು.
ರೈತರ ಹೋರಾಟ ವಿಚಾರವು ಬಹುಮುಖ್ಯವಾಗಿದೆ. ಇದರ ಜೊತೆಗೆ ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಭಜ್ವಾ ತಿಳಿಸಿದ್ದಾರೆ.
ಟಿಎಂಸಿ ಸಂಸದರು ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿ ಸಂಸತ್ತಿಗೆ ಆಗಮಿಸಿದರು.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಎದುರು ಶಿರೋಮಣಿ ಅಕಾಲಿ ದಳದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್ 13ರಂದು ಮುಕ್ತಾಯವಾಗಲಿದೆ. 19 ಕಲಾಪಗಳಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿವೆ.