ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೋಮೋಟೊ) ವಿಷಕಾರಿ ಅಲ್ಲ!

ಈ ಶಿರ್ಷಿಕೆ ನೋಡಿಯೇ ಅನೇಕರು ಬೆಂಕಿಯಾಗಿ ಬಿಡುತ್ತೀರಿ. ಅಡುಗೆಯನ್ನು ರುಚಿ ಮಾಡುವ ಈ ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ: ಇದು ತಯಾರಿಸುವ ಕಂಪನಿತ ಹೆಸರು) ಎಷ್ಟೆಲ್ಲಾ ಜನರ ಆರೋಗ್ಯ ತಿಂದು ಹಾಕಿದೆ !. ಎಷ್ಟು ಜನರ ಜೋಬಿಗೆ ಕತ್ತರಿ ಆಡಿಸಿದೆ !. ಎಷ್ಟು ಹೊಟೇಲಿನವರು ಇದನ್ನು ಬಳಸಿ ಜನರಿಗೆ ಮೋಸ ಮಾಡುತ್ತಿದಾರೆ? !. ಇದು ಚೈನಾ ಉಪ್ಪು ಎಂದು ಕರೆಸಿಕೊಳ್ಳುತ್ತದೆ? ಚೈನಾ ವಸ್ತುವನ್ನು ಹೊಗಳಿ ಭಾರತ ಮಾತೆಯ ವಿರೋಧ ಮಾಡುತ್ತಿರಾ? ಎಂಬೆಲ್ಲಾ ಮಾತುಗಳು ಪುಂಖಾನುಪುಂಕವಾಗಿ ಬರುವುದು ಬಹಳ ಸಹಜ.

ಡಾ. ಎನ್.ಬಿ. ಶ್ರೀಧರ

ಇಲ್ಲಿ ನಾನು ಹೇಳಲು ಹೊರಟಿರುವುದು ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೋಮೋಟೋ ಎಂದು ತಪ್ಪಾಗಿ ಕರೆಯಲ್ಪಡುವ) ಎಂಬ ರುಚಿಕಾರಕದ ಬಗ್ಗೆ. ಇದನ್ನು ಮೊದಲು ತಯಾರಿಸಿದ ಜಪಾನಿನ ಅಜಿನೊಮೋಟೋ ಕಂಪನಿಯ ಹೆಸರು ಇದಕ್ಕೂ ಬಿದ್ದಿದೆ. ಉದಾಹರಣೆಗೆ ಹಾಲು ಮಾರಾಟ ಮಾಡುವ ಕೆಎಂಎಪ್ ಇದರ ಹೆಸರನ್ನು ಹಾಲಿಗಿಟ್ಟ ಹಾಗೆ. ಕಾರಣ ಈ ಲೇಖನದಲ್ಲಿ ಅಜಿನೊಮೋಟೊ ಎಂದರೆ ಓದುಗರಿಗೆ ಸುಲಭವಾಗಿ ತಿಳಿಯಲಿ ಎಂದು ಮಾತ್ರ ಬದಲಾಗಿ ಅದನ್ನು ಮೊನೊ ಸೋಡಿಯಂ ಗ್ಲುಟಾಮೇಟ್ ಎಂದೇ ಓದಿಕೊಳ್ಳಬೇಕು.

ನೂರು ಜನ ಸುಳ್ಳನ್ನು ಸತ್ಯವೆಂದು ಬಿಂಬಿಸಿದರೆ ಮತ್ತು ಹೇಳಿದ್ದನ್ನೇ ಸಹಸ್ರಾರು ಬಾರಿ ಹೇಳಿದರೆ ಅದು ಸತ್ಯವೇ ಆಗಿಬಿಡುತ್ತದೆ. ಇದೇ ಆಗಿದ್ದು ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ) ಎಂಬ ರುಚಿಕಾರಕ ವಸ್ತುವಿನ ವಿಷಯದಲ್ಲಿ. ಇದನ್ನು ಯಾರೋ ದುರ್ಬಳಕೆ ಮಾಡಿಕೊಂಡರೆ ಅವರನ್ನು ದೂರಬೇಕೇ ಹೊರತು ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ)ನ್ನಲ್ಲ !. ಹೊಟೆಲಿನಲ್ಲಿ ಏನೇನೋ ತಿಂದು ಹೊಟ್ಟೆ ಕೆಡಿಸಿಕೊಂಡರೆ ದೂರುವುದು ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ)ವನ್ನು?

ಇದನ್ನೂ ಓದಿ: ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿದ್ಯಾರ್ಥಿಗಳಿಂದ “ಬೆಳಗಾವಿ ಚಲೋ”

ಬಾಯಲ್ಲಿ ನೀರೂರಿಸುವ ಗೋಬಿ ಮಂಚೂರಿಯನ್, ಫ್ರೈಡ್ ರೈಸ್, ನ್ಯೂಡಲ್ಸ್, ಹೀಗೆ ಹಲವಾರು ಸಂಜೆಯ ಸ್ನಾಕ್ಸ್‌ಗಳನ್ನು ಮನೆಯಲ್ಲಿ ತಯಾರಿಸಿ, ಎಷ್ಟೇ ಅನುಭವವಿದ್ದರೂ, ಕೈ ಪಳಗಿದ್ದರೂ, ಈ ತಿಂಡಿಗಳನ್ನು ಹೊರಗಿನ ಹೊಟೆಲುಗಳಲ್ಲಿ ತಿನ್ನುವಾಗ ಸಿಗುವ ರುಚಿ ಮನೆಯ ತಿಂಡಿಯಲ್ಲಿ ಭರಿಸಲು ಸಾಧ್ಯವೇ ಇಲ್ಲ. ಕಾರಣ ಅದಕ್ಕೆ ಒಂದಿಷ್ಟು ರುಚಿ ಭರಿಸುವ ರುಚಿ ಪ್ರವರ್ತಕ, ರುಚಿಕಾರಕ, ರುಚಿವರ್ಧಕ ಎಂದೆಲ್ಲಾ ಕರೆಯುವ ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ) ಪೌಡರ್ ಸೇರಿಸಿರುತ್ತಾರೆ. ಒಮ್ಮೆ ಚೈನೀಸ್ ಫುಡ್ ಅಥವಾ ಸ್ನಾಕ್ಸ್‌ಗಳನ್ನು ಸವಿದರೆ ಮತ್ತೆ ಮತ್ತೆ ತಿನ್ನುವ ತವಕ. ನಾಲಿಗೆಯಲ್ಲಿ ಸಿಗುವ ರುಚಿಯ ಮಜಲನ್ನು ಪುನಃ ನೆನಪಿಸಿಕೊಂಡು ಪದೇ ಪದೆ ತಿನ್ನುವಂತೆ ಮಾಡುತ್ತಾ ಉಪ್ಪು, ಹುಳಿ, ಖಾರ, ಸಿಹಿಗೆ ಮೀರಿದ ರುಚಿಯನ್ನು ನೀಡುತ್ತಾ ನಮ್ಮ ನಾಲಿಗೆಯನ್ನು ಮರಳು ಮಾಡುತ್ತಾ ಹೋಗುತ್ತದೆ.

ಮೊದಲು ಅಂಗಡಿ ಮುಂಗಟ್ಟುಗಳಲ್ಲಿ ಸಿಗಲೊಲ್ಲದ್ದು, ಈಗ ಯಥೇಚ್ಛವಾಗಿ ಸಿಗುತ್ತಿರುವುದರಿಂದ ಅಸಮರ್ಪಕ ಬಳಕೆಯ ಬೆಳವಣಿಗೆ ಕಂಡುಬಂದಿದೆ. ಉಪ್ಪಿನಂತೆ ಒಂದು ಚಿಟಿಕೆಯಷ್ಟು ಅಥವಾ ರುಚಿಗೆ ಅಗತ್ಯವಾದಷ್ಟು ಬಳಕೆಗೆ ಸೂಕ್ತವಾದ ಈ ಪುಡಿಯನ್ನು ನಾಲಿಗೆಯ ರುಚಿ ಹೆಚ್ಚಿಸಲು ಪ್ರತಿಯೊಂದಕ್ಕೂ ಸುರಿಯುತ್ತಿರುವುದು ಮಾತ್ರ ಅನಪೇಕ್ಷಣೀಯ. ಅಷ್ಟೇ ಏಕೆ, ಹಿಂದೆ ಮುಂದೆ ತಿಳಿಯದೇ, ಸುಲಭವಾಗಿ ಸಿಗುತ್ತಿರುವ ಇದನ್ನು ರುಚಿಯೊಂದನ್ನೇ ಗುರಿಯಾಗಿಟ್ಟುಕೊಂಡು ಕುಟುಂಬದ ಸದಸ್ಯರ ಅಥವಾ ಗಂಡನ (ಪ್ರಿಯತಮನ ?) ಒಲವು ಗಳಿಸಲು ಇಡ್ಲಿ, ಸಾಂಬಾರ್, ಚಟ್ನಿ, ಸಾರು, ಚಿತ್ರಾನ್ನಕ್ಕೂ ಅನೇಕ ಗೃಹಿಣಿಯರು ಬಳಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಹಾಗಿದ್ದರೇ ಏನಿದು ಅಜಿನೊಮೋಟೋ? ತಿಳಿದುಕೊಳ್ಳೋಣ. ಟೇಸ್ಟಿಂಗ್ ಪೌಡರ್ ಎನಿಸಿಕೊಳ್ಳುವ ಅಜಿನೊಮೋಟೊ ಇದರ ರಾಸಾಯನಿಕ ಹೆಸರು ಮೋನೊಸೋಡಿಯಂ ಗ್ಲುಟಾಮೇಟ್. ಸೋಡಿಯಂ (ಉಪ್ಪು), ಅಮೈನೊ ಆಮ್ಲ ಮತ್ತು ಗ್ಲುಟಾಮೇಟ್‌ಗಳ ಸಂಯೋಜನೆಯಿದು. ಅನೇಕರು ತಿಳಿದಂತೆ ಇದರ ಮೂಲ ಚೈನಾ ಅಲ್ಲವೇ ಅಲ್ಲ. ಇದೇನೂ ಹೊಸ ಸಂಶೋಧನೆಯಲ್ಲ ಇತ್ತೀಚಿನದೂ ಅಲ್ಲ. 1908ರಲ್ಲಿ ಜಪಾನಿ ಸಂಶೋಧಕ ‘ಕಿಕುನೆ ಇಕೆಡಾ’ ಎಂಬಾತ ಇದನ್ನು ಕಂಡು ಹಿಡಿದ ಮತ್ತು ಇದಕ್ಕೆ “ಉಮಾಮಿ” (ಖಾರದ ರುಚಿಕರತೆ) ಎಂದು ಹೆಸರಿಟ್ಟ.

ಅಡುಗೆಯಲ್ಲಿ ಬಳಸುವ ಉಪ್ಪು (ಸೋಡಿಯಂ ಕ್ಲೋರೈಡ್), ಸಕ್ಕರೆ, ಹುಳಿ ಮತ್ತು ಖಾರ ಎಂಬೆಲ್ಲಾ ವಸ್ತುಗಳು ಒಂದಲ್ಲ ಒಂದು ರೀತಿಯ ರಾಸಾಯನಿಕಗಳೆ. ಆದರೆ ಅವುಗಳನ್ನು “ರಾಸಾಯನಿಕ” ಎನ್ನಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಮೊನೊ ಸೋಡಿಯಮ್ ಗ್ಲುಟಾಮೇಟ್ ಇದನ್ನು ಕಬ್ಬು, ಸಕ್ಕರೆ, ಜೋಳ, ಕಾಕಂಬಿ ಅಥವಾ ಮರಗೆಣಸು ತಿರುಳು ಬಳಸಿ ತಯಾರಿಸುತ್ತಾರೆ. 1909ರಲ್ಲಿ ಜಪಾನಿನ ಟೋಕಿಯೋದ ಅಜಿನೊಮೊಟೋ ಕಂಪನಿ ಇದನ್ನು ತಯಾರಿಸಲು ಪ್ರಾರಂಭಿಸಿದ ಮೇಲೆ ಇದಕ್ಕೆ ಅದೇ ಕಂಪನಿಯ ಹೆಸರು ಬಂತು. ಇದು ಒಂಥರಾ ಯಂತ್ರದಲ್ಲಿ ಪ್ರತಿ ಮಾಡುವುದಕ್ಕೆಲ್ಲಾ ಜೆರಾಕ್ಸ್ ಮಾಡುವುದು ಎಂಬಂತೆ ಮೂಲ ತಯಾರಿಸಿದ ಕಂಪನಿಯ ನಾಮದೇಯವೇ ಇದಕ್ಕೆ ಅಂಟಿಕೊಂಡಿತು. ಪ್ರಾಥಮಿಕವಾಗಿ ಜಪಾನಿನ ವಸ್ತುವಾಗಿದ್ದ ಇದು ೧೯೨೮ ರಲ್ಲಿ ಟೈವಾನ್ ಪ್ರವೇಶಿಸಿತು ಮತ್ತು ಅಲ್ಲಿನ ಅಡುಗೆ ಮನೆಯ ಸಾಮಾನ್ಯ ವಸ್ತುವಾಯಿತು.

ಆದರೆ ಅಜಿನೊಮೋಟೊ ಎಂಎಸ್ ಜಿ ಯನ್ನು ಚೈನಾ ಪ್ರವೇಶ ಮಾಡುವಂತೆ ಮಾದಲು ಹೆಣಗಾಡಬೇಕಾಯಿತು. 1918ರಲ್ಲಿ ಚೈನಾದ ಶಾಂಗೈನಲ್ಲಿ ಇದರ ಪ್ರವೇಶವಾದರೂ ಇದು ಸಾಕಷ್ಟು ಪ್ರತಿಭಟನೆ ಎದುರಿಸಬೇಕಾಯಿತು. ಚೈನಾದ ಅಡುಗೆ ಭಟ್ಟರುಗಳು (ಶೆಪ್ಪುಗಳು) ಇದನ್ನು ಒಪ್ಪಲೇ ಇಲ್ಲ. ಇಷ್ಟೊತ್ತಿಗಾಗಲೇ ಇದರ ರುಚಿ ಗೊತ್ತಾಗಿದ್ದರಿಂದ ಚೈನಾದ ಅಡುಗೆ ಪದಾರ್ಥಗಳ ದೈತ್ಯ ತಯಾರಕ ಟಿಯಾನ್ ಚು ಕಂಪನಿ ಮೊನೊ ಸೋಡಿಯಂ ಗ್ಲುಟಾಮೇಟನ್ನು “ರಾಷ್ಟ್ರ‍ೀಯ ರುಚಿಕಾರಕ” ಎಂಬಂತೆ ಬಿಂಬಿಸಿ ಇದು ಅಜಿನೊಮೊಟೊ ಕಂಪನಿಯ ಉತ್ಪನ್ನಕ್ಕಿಂತಲೂ ಭಿನ್ನ ಎಂದು ಹೇಳಿಕೊಂಡು ತನ್ನದೇ ಬ್ರಾಂಡಿನಲ್ಲಿ ಮಾರತೊಡಗಿತು.

ಅಜಿನೊಮೋಟೊ ಕಂಪನಿಯೂ ಸಹ ಇದಕ್ಕೆ ಸ್ಪರ್ಧೆ ಒಡ್ಡಲು ವಿವಿಧ ಚೈನೀಸ್ ಹೆಸರಿನಲ್ಲಿ ಮಾರತೊಡಗಿತು. ಅನೇಕ ವಿವಿಧ ಕಂಪನಿಗಳೂ ಸಹ ಪೈಪೋಟಿಗಿಳಿದವು. ಟಿಯಾನ್ ಚು ಕಂಪನಿ ಇದನ್ನು ಬುದ್ಧನ ಹಸ್ತದಿಂದ ಪ್ರಸಾದಿತವಾದ ಸಸ್ಯಾಹಾರಿ ವಸ್ತು ಎಂಬಂತೆ ಬಿಂಬಿಸಿತು. ಆಗಲೆ ಬುದ್ಧನಿಂದ ಪ್ರಭಾವಿತರಾದ ಚೀನಾದ ಜನ ಇದನ್ನು ಸುಲಭವಾಗಿ ಸ್ವೀಕರಿಸಿದರು. 1950 ರಷ್ಟರ ಹೊತ್ತಿಗೆ ಇದು ಇಡೀ ಚೀನಾದ ಅಡುಗೆ ಮನೆಯನ್ನು ಸೇರಿಬಿಟ್ಟಿತ್ತು. ಎಷ್ಟರ ಮಟ್ಟಿಗೆ ಅಂದರೆ ಇದು ಜಪಾನಿನ ಮೂಲ ಉತ್ಪನ್ನ ಎನ್ನುವುದು ನಮಗೆ ಮತ್ತು ನಿಮಗೆ ಮರೆತು ಇದು ಚೀನಾದ ಮೂಲ ಉತ್ಪನ್ನ ಎಂಬ ಹಾಗೆ.

ಇದು ಅಮೇರಿಕಾ ಸಂಯುಕ್ತ ಸಂಸ್ಥಾನ ಸೇರಿದ್ದು 1938 ರಲ್ಲಿ. ಟಿಯಾನ್ ಚು ಮತ್ತು ಅಜಿನೊಮೋಟೋ ಎರಡೂ ಕಂಪನಿಗಳು ಪೈಪೋಟಿಯಲ್ಲಿ ಇದನ್ನು ಮಾರಾಟ ಮಾಡಲು ಪ್ರಯತ್ನಿಸಿದವು. ಈಗಾಗಲೇ ಅಮೇರಿಕನ್ನರು ಚೈನೀಸ್ ಆಹಾರದ ರುಚಿಗೆ ಮಾರುಹೋಗಿದ್ದರಿಂದ ಅಜಿನೊಮೋಟೊ ಕಂಪನಿಯ ಮಾರಾಟ ಸುಲಭವಾಯಿತು. 1941 ರ ಹೊತ್ತಿಗೆ ಅಮೇರಿಕಾದ ಕ್ಯಾಂಪ್ಬೆಲ್ಸ್ ಸೂಪ್ ಕಂಪನಿ ಇದನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಜಿನೊಮೊಟೊ ಕಂಪನಿಯಿಂದ ಖರೀದಿಸಿ ತನ್ನ ಬ್ರಾಂಡಿನಲ್ಲಿ ಮಾರಾಟ ಪ್ರಾರಂಭಿಸಿತು. ಎರಡನೆಯ ವಿಶ್ವಯುದ್ಧದ ಹೊತ್ತಿಗೆ ಇದು ಅಮೇರಿಕಾ ಸೈನಿಕರ ಆಹಾರದ ಡಬ್ಬಿಯ ಒಂದು ಭಾಗವೇ ಆಗಿ ಹೋಯಿತು ಮತ್ತು ಮನೆ ಮಾತಾಯಿತು. 1962 ರ ಹೊತ್ತೊಗೆ ಕೀಟನಾಶಕಗಳ ವಿಷಪರಿಣಾಮ ಮನುಷ್ಯನ ಆರೋಗ್ಯ ಹಾಳುಗೆಡವುತ್ತದೆ ಎಂದು ಗೊತ್ತಾಗಿದ್ದರಿಂದ 1968ರಲ್ಲಿ ಸ್ಯಾಕರಿನ್ ಎಂಬ ಸಿಹಿಕಾರಕ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ಗೊತ್ತಾಗಿತ್ತು. ಕಾರಣ ಮೊನೊ ಸೋಡಿಯಂ ಗ್ಲುಟಾಮೇಟ್ ಸಹ ಇದೇ ರೀತಿ ಸಂಶಯಕ್ಕೊಳಗಾಯಿತು.

ಎಪ್ರಿಲ್ 1928 ರಲ್ಲಿ ಅಮೇರಿಕಾದ ಮೆರಿಲ್ಯಾಂಡಿನ ರಾಬರ್ಟ್ ಹೋ ಮ್ಯಾನ್ ಕ್ವಾಕ್ ಎಂಬ ಚೈನೀಸ್-ಅಮೇರಿಕನ್ ವೈದ್ಯ ನ್ಯು ಇಂಗ್ಲಾಂಡ್ ಜರ್ನಲ್ ಆಫ್ ಮೆಡಿಸಿನ್ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಚೈನಾ ಆಹಾರ ತಿಂದು ಮರಗಟ್ಟುವಿಕೆ ಮತ್ತು ಎದೆ ಬಡಿತ ಏರ‍ಳಿತವಾಗಿದೆ ಎಂದು ವರದಿ ಮಾಡಿದ. ಇದಕ್ಕೆ ನಿಯತಕಾಲಿಕವು “ಚೈನೀಸ್ ರೆಸ್ಟೋರೆಂಟ್ ಸಿಂಡ್ರೋಮ್” ಎಂದು ಹೆಸರಿಸಿತು. ಇದಾದ ಮೇಲೆ ಇದು ಅದ್ಯಾವ ಪರಿ ಪರಿಚಲಿತವಾಯಿತೆಂದರೆ ಅಮೇರಿಕಾದ ವೈದ್ಯರು ಯಾವ ಖಾಯಿಲೆ ಬಂದರೂ ” ಚೈನಾದ ಊಟ ಮಾಡಿದ್ದೀರಾ” ಎಂಬ ಪ್ರಥಮ ಪ್ರಶ್ನೆಯನ್ನು ರೋಗಿಗಳಿಗೆ ಕೇಳುವ ಹಾಗಾಯಿತು. ಆದರೆ ಇದು ಕೇವಲ 1/2% ಅಲರ್ಜಿ ಇರುವ ಜನರಲ್ಲಿ ಮಾತ್ರ ಇದೆ ಎಂದು ಸಂಶೋಧನೆಯಿಂದ ಕಂಡು ಬಂತು.

ಅಮೇರಿಕಾದ ಶ್ವೇತ ಭವನದ ಜೀನ್ ಮೇಯರ್ 23-10-1969ರಂದು ಅಜಿನೊಮೋಟೊವನ್ನು ಮಕ್ಕಳ ಆಹಾರದಲ್ಲಿ ನಿಷೇಧ ಮಾಡಬೇಕೆಂದು ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಗೆ ಸೂಚಿಸಿದ. ಇದಕ್ಕೆ ಆಧಾರ ಡಾ: ಜಾನ್ ಒನ್ಲೆ ಈತ ಮೂಷಿಕಗಳಿಗೆ ಎಂ ಎಸ್ ಜಿ ಚುಚ್ಚು ಮದ್ದು ನೀಡಿದಾಗ ಅವುಗಳ ಮೆದುಳು ಹಾಳಗುತ್ತದೆ ಎಂಬ ವರದಿ. ಇದು ವಿವಾದಕ್ಕೆ ತಿರುಗುತ್ತಿದ್ದಂತೆ ಅಮೇರಿಕಾದ ಆಗಿನ ಅಧ್ಯಕ್ಷ ನಿಕ್ಸನ್ ಆಹಾರದ ರುಚಿಕಾರವಾದ ಮತ್ತು ಸಂರಕ್ಷಿಸಲು ಬಳಸುವ ಎಲ್ಲ ವಸ್ತುಗಳನ್ನು ತಪಾಸಣೆಗೆ ಒಳಪಡಿಸಲು ಸೂಚಿಸಿದರು. 1970ರ ದಶಕದಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟ್ ಇದರ ಹಾನಿಕಾರಕ ಗುಣದ ಬಗ್ಗೆ ಸಾಕಷ್ಟು ಸಂಶೋಧನೆಗಳಾದರೂ ಸಹ ಇದು ಮನುಷ್ಯನ ಆರೋಗ್ಯಕ್ಕೆ ಭಾರಿ ಹಾನಿಕಾರಕ ಎಂದು ಸಾಬೀತಾಗದೇ ಇರುವ ಹಿನ್ನೆಲೆಯಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ) ಆಹಾರದ ಭಾಗವಾಗಿ ಮುಂದುವರೆಯಿತಾದರೂ ಸಹ ಅದರ ಹೆಚ್ಚಿನ ಯಥೇಚ್ಚ ಬಳಕೆಯ ಬಗ್ಗೆ ಎಚ್ಚರ ನೀಡಲಾಯಿತು.

ಇಷ್ಟೊತ್ತಿಗೆ ನಮ್ಮ ವಾಟ್ಸಪ್ ವಿಶ್ವವಿದ್ಯಾಲಯಗಳು ಹಬ್ಬಿಸುವ ಸುಳ್ಳು ಸುದ್ಧಿಗಳಂತೆ ಮೊನೊ ಸೋಡಿಯಂ ಹುಟ್ಟಿದ ಹುಟ್ಟಿದ ಜಪಾನಿನಲ್ಲಿಯೇ ಅದಕ್ಕೆ ಅತ್ಯಂತೆ ಹೆಚ್ಚಿನ ಪ್ರತಿರೋಧ ವ್ಯಕ್ತವಾಯಿತು. ಟೋಕಿಯೋದಲ್ಲಿನ ಜನಪ್ರಿಯ ಪತ್ರಿಕೆಯೊಂದು ಅಜಿನೊಮೋಟೊವನ್ನು ಹಾವಿನಿಂದ ತಯಾರಿಸಲಾಗುತ್ತದೆ ಎಂದು ಗುಲ್ಲೆಬ್ಬಿಸಿತು ಮತ್ತು ಕಂಪನಿ ಇದನ್ನು ಅಲ್ಲಗಳೆಯಿತು. ಗುಂಜಿ ಅಸ್ಟುಟಕಾ ಎಂಬಾತ ಅಜಿನೊಮೋಟೊ ಕಂಪನಿಯ ವಿರುದ್ಧ ಯುದ್ಧವನ್ನೇ ಸಾರಿದ ಮತ್ತು ಎಂ ಎಸ್ ಜಿಯನ್ನು ಪೆಟ್ರ‍ೋಲಿನಿಂದ ತಯಾರಿಸಲಾಗುತ್ತದೆ ಎಂದ. ಇಷ್ಟಕ್ಕೂ ಬಿಡದೇ ಆತ ಜಪಾನ್ ಮತ್ತು ಅಮೇರಿಕಾದ ಗೃಹಿಣಿಯರ ಅಡುಗೆಯ ಕಲೆಯನ್ನು ಮತ್ತು ಆಧ್ಯಾತ್ಮಿಕ ಗುಣಗಳನ್ನು ನಾಶಮಾಡಲೆಂದೇ ಅಜಿನೊಮೋಟೊ ಕಂಪನಿ ಹುಟ್ಟಿಕೊಂಡಿದ್ದು ಅದರ ಉತ್ಪನ್ನಗಳ ಬಗ್ಗೆ ಜನರ ಅರಿವು ಮೂಡಿಸಲು ಅನೇಕ ಪುಸ್ತಕಗಳನ್ನು ಬರೆದ.

ಇದರಿಂದ 1970 ರಲ್ಲಿ ಅಜಿನೊಮೊಟೊ ಕಂಪನಿಯ ಮೊನೊ ಸೋಡಿಯಂ ಗ್ಲುಟಾಮೇಟ್ ಮಾರಾಟ ಪ್ರಥಮ ಭಾರಿಗೆ 24% ಕುಸಿಯಿತು. ಆದರೂ ಕಂಪನಿಯ ಪ್ರತಿನಿಧಿಗಳು ಅಲ್ಲಾ ದಾಖಲೆಗಳ ಸಮೇತ ಅಲ್ಲಗಳೆದರು. ಇದರ ಜನಪ್ರಿಯತೆಯನ್ನು ಪುನಸ್ಥಾಪಿಸಲು ಇದರ ಮೂಲ ಹೆಸರಾದ ” ಉಮಾಮಿ ಮಸಾಲೆ” ಎಂದು ಕರೆದರು. ಇದಕ್ಕೆ ಪರಿಮಳ ಕಾರಕ ವೆಂದು ಮರು ನಾಮಕರಣವಾಯಿತು. ಈ ಮಧ್ಯೆ ಅಜಿನೊಮೋಟೊ ಕಂಪನಿ ವಿವಿಧ ಸಂಶೋಧನೆಗಾಗಿ ಪ್ರಯೋಗಾಲಯಗಳನ್ನು ವಿವಿಧ ದೇಶಗಳಲ್ಲಿ ತೆರೆಯಿತು.

ಇಸವಿ 2000 ದಲ್ಲಿ ಅಮೇರಿಕಾದ ಶರೀರಕ್ರಿಯಾ ಶಾಸ್ತ್ರಜ್ಞರ ಸಂಘವು ಪ್ರಸಿದ್ಧ ನೇಚರ್ ಪತ್ರಿಕೆಯಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟಿನಲ್ಲಿರುವ ಅಮೈನೋ ಆಮ್ಲವು ನಾಲಿಗೆಯಲ್ಲಿರುವ ರುಚಿಗ್ರಾಹಿಗಳು ಸಶಕ್ತವಾಗಿ ಕೆಲಸ ನಿರ್ವಹಿಸಲು ಸಹಕರಿಸುತ್ತದೆ ಎಂದು ಪ್ರಕಟಿಸಿತು. 2001 ರಲ್ಲಿ ಜಪಾನಿನ ಹಿರೋಸಾಕಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಲಿಗಳಿಗೆ ಜಾಸ್ತಿ ನೀಡಿದರೆ ಅವು ಕುರುಡಾಗುತ್ತವೆ ಎಂದು ಪ್ರಕಟಿಸಿದರು. ಅಮೇರಿಕಾದ ವಿಜ್ಞಾನಿಗಳು ಮಾತ್ರ ಇದು ಉಪ್ಪು, ಸಕ್ಕರೆ, ಹುಳಿ ಮತ್ತು ಖಾರದಂತೆ ಒಂದು ರುಚಿಕಾರಕ ಮತ್ತು ಇದರ ಸಾಮಾನ್ಯ ಪ್ರಮಾಣದ ಬಳಕೆಗೆ ಯಾವುದೇ ತೊಂದರೆ ಇಲ್ಲ ಎಂದರು.

ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ)ದಲ್ಲಿ ಯಾವುದೇ ಜೀವಸತ್ವಗಳು, ಪ್ರೋಟೀನ್‌, ಫ್ಯಾಟ್‌ ಇತ್ಯಾದಿ ಅಂಶಗಳು ಇಲ್ಲ. ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೊಟೊ) ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಆಹಾರದಲ್ಲಿನ ಇತರ ಎಲ್ಲಾ ರುಚಿಗಳನ್ನು ಸಮನ್ವಯಗೊಳಿಸುತ್ತದೆ ಅಷ್ಟೆ. ಇವೆಲ್ಲಾ ಇವೆ ಎಂದು ಯಾರೂ ಸಹ ಹೇಳಿಕೊಂಡಿಲ್ಲ.

ಪ್ರಪಂಚದಲ್ಲಿ ಪಾಕಿಸ್ಥಾನದ ಮಾತ್ರ ಇದನ್ನು ನಿಷೇಧಿಸಿದ ಏಕೈಕ ದೇಶ.ಅಲ್ಲಿಯ ಸಾಕ್ಷರತೆಯ ಮಟ್ಟ ಎಲ್ಲರಿಗೂ ತಿಳಿದಿದೆ. ಇಡೀ ದೇಶದಲ್ಲಿ ಅದನ್ನು ನಿಶೇಧಿಸಿಲ್ಲ ಬದಲಾಗಿ ನ್ಯಾಯಾಲಯದ ಆದೇಶದ ಮೇಲೆ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ಮಾತ್ರ ಇದನ್ನು 2018 ರಲ್ಲಿ ನಿಷೇಧಿಸಲಾಯಿತು. ಮಕ್ಕಳ ಆಹಾರದಲ್ಲಿ ಇದನ್ನು ಉಪಯೋಗಿಸಬಾರದೆಂದು 50ಕ್ಕೂ ಹೆಚ್ಚಿನ ರಾಷ್ಟ್ರಗಳು ನಿರ್ಬಂಧ ವಿಧಿಸಿವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ( ಎಫ್ಎಸ್ಎಸ್ಎಐ) ದ ಪ್ರಕಾರ ಪಾಸ್ತಾ ಮತ್ತು ನೂಡಲ್ಲುಗಳಲ್ಲಿ ಇದರ ಅಂಶ ಇರಬಾರದು ಎಂದಿದೆ. ಡಬ್ಬಿಗಳಲ್ಲಿ ಸಂಗ್ರಹಿಸುವ ಏಡಿಗಳ ಮಾಂಸದಲ್ಲಿ ಇದರ ಪ್ರಮಾಣ 0.5 ಗ್ರಾಂ/ ಕಿಲೋ ಕ್ಕಿಂತ ಜಾಸ್ತಿ ಇರಬಾರದು. ನಮ್ಮ ದೇಶದಲ್ಲಿ ಇತರ ಯಾವುದೇ ಆಹಾರದಲ್ಲಿ ಎಂ ಎಸ್ ಜಿ ಪ್ರಮಾಣ ಇಂತಿಷ್ಟೇ ಎಂದು ನಿಗದಿಪಡಿಸಿಲ್ಲ.

ನೆಸ್ಲೆ ಕಂಪನಿಯ ಜನಪ್ರಿಯ ಮ್ಯಾಗಿ ನೂಡಲ್ಲುಗಳು ಜಾಸ್ತಿ ಪ್ರಮಾಣದಲ್ಲಿ ಅಜಿನೊಮೋಟೊ ಹೊಂದಿವೆ ಎಂದು ಉತ್ತರಪ್ರದೇಶದಲ್ಲಿ 2015 ರಲ್ಲಿ ಎರಡು ಡಜನ್ ವಶಪಡಿಸಿಕೊಳ್ಳಲಾಯಿತು. ಇದೇ ರೀತಿಯ ತಪಾಸಣೆಗಳು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ನಡೆದವು. ಆದರೆ ಕೊನೆಯಲ್ಲಿ ಅವುಗಳಲ್ಲಿ ಇದರ ಸಾಮಾನ್ಯ ರೀತಿಯಲ್ಲಿಯೇ ಎಂಬಲ್ಲಿಗೆ ಪ್ರಕರಣ ಕೈಬಿಡಲಾಯಿತು. ಸಧ್ಯ ಭಾರತದಲ್ಲಿ ಇರುವ ನಿಯಮದ ಪ್ರಕಾರ ಆಹಾರ ತಯಾರಿಸುವ ಕಂಪನಿಯವರು “ಇದರಲ್ಲಿ ಎಂ ಎಸ್ ಜಿ ಇಲ್ಲ” ಎಂದು ಘೋಷಿಸಿಕೊಂಡು ನಂತರ ಅದು ಪತ್ತೆಯಾದರೆ ಅದು ದಂಡನೀಯ ಅಪರಾಧ.

ಮೊನೊ ಸೋಡಿಯಂ ಗ್ಲುಟಾಮೇಟ್ ಭಾರತಕ್ಕೆ ಅನೇಕ ವರ್ಷಗಳ ಹಿಂದೆಯೇ ಪ್ರವೇಶಿಸಿದೆ ಮತ್ತು ಅನೇಕ ಹೊಟೇಲುಗಳಲ್ಲಿ ಮತ್ತು ರಸ್ತೆಯ ಬದಿಯ ತಿಂಡಿ ತಯಾರಿಕೆಯಲ್ಲಿ ಬಹಳ ಸಾಮಾನ್ಯವಾಗಿ ಬಳಸುತ್ತಾರೆ. ಇದರ ಮೂಲ ತಯಾರಕ ಅಜಿನೊಮೋಟೊ ಕಂಪನಿ ಭಾರತ ಪ್ರವೇಶಿಸಿದ್ದು 2003 ರಲ್ಲಿ ಮತ್ತು ಅದು ಕಾರ್ಯ ನಿರ್ವಹಿಸುವುದು ತಮಿಳುನಾಡಿನ ಚೆನ್ನೈನಿಂದ. ಇದರ ಕಚೇರಿಗಳು ಬೆಂಗಳೂರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರಭಾರತದ ಅನೇಕ ಪಟ್ಟಣಗಳಲ್ಲಿದ್ದು ಉಮಾಮಿ ಮಸಾಲೆ ಉತ್ಪನ್ನ (ಅಜಿ-ನೊ-ಮೋಟೊ), ಹಪಿಮಾ ( ಚಿತ್ರಾನ್ನ), ಅಜಿಟ್ಯೂಡ್ ( ರುಚಿಕಾರಕ) ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಭಾರತಲ್ಲಿ ಆಹಾರ ಉತ್ಪನ್ನಗಳನ್ನು ಮಾರಲು ಅವಶ್ಯವಿರುವ ಎಲ್ಲಾ ಕಾನೂನಾತ್ಮಕ ರಹದಾರಿಗಳನ್ನು ಹೊಂದಿದೆ.

ಅಜಿನೊಮೊಟೋ ಅಥವಾ ಎಂ ಎಸ್ ಜಿ ತಲೆನೋವು ಮತ್ತು ಸುಸ್ತು ಉಂಟು ಮಾಡುತ್ತದೆ ಎಂದು ಹೇಳಲಾಗಿದೆಯಾದರೂ ಇದಕ್ಕೆ ಯಾವುದೇ ಅಧ್ಯಯನದ ದಾಖಲೆಗಳಿಲ್ಲ. ಪ್ರಪಂಚದ ಬಹುತೇಕ ಪ್ರತಿಷ್ಟಿತ ಆಹಾರ ರಹದಾರಿ ಸಂಸ್ಥೆಗಳು ಮೊನೊ ಸೋಡಿಯಂ ಗ್ಲುಟಾಮೇಟ್ ರುಚಿಕಾರಕವಾಗಿ ಸುರಕ್ಷಿತವೆಂದು ಹೇಳಿವೆ. ಮನುಷ್ಯನ ಶರೀರವನ್ನು ಸೇರುವ ಇದು ಕರುಳಿನಲ್ಲಿ ಜೀರ್ಣಗೊಂಡು ಮಲ ಮೂತ್ರದಲ್ಲಿ ವಿಸರ್ಜನೆ ಹೊಂದುತ್ತದೆ.

ಇದನ್ನು ಆಹಾರದಲ್ಲಿ0.2-0.8% ( 2/8 ಗ್ರಾಮ್/ 100 ಗ್ರಾಂ ಆಹಾರಕ್ಕೆ ) ಸುರಕ್ಶಿತವಾಗಿ ಬೆರೆಸಬಹುದು. ಇದು ಮನುಷ್ಯನ ದೇಹವನ್ನು 30-60ಮಿಲಿಗ್ರಾಮ್ / ಪ್ರತಿ ಕಿಲೊ ( 3.5 -4.5 ಗ್ರಾಮ್) ಸೇರಿದರೆ ಯಾವುದೇ ತೊಂದರೆ ಇರದು. ಇದರ ಅತ್ಯಲ್ಪ ಪ್ರಮಾಣ ಕರುಳಿನಿಂದ ಹೀರಲ್ಪಟ್ಟು ರಕ್ತವನ್ನು ಸೇರುವುದರಿಂದ ಇದರ ವಿಷಕಾರಿ ಗುಣ ಇಲಿಗಳಿಗೆ ಚುಚ್ಚುಮದ್ದು ನೀಡಿದಾಗ ಮಾತ್ರ ಕಂಡುಬಂದಿದೆ. ಇದರಿಂದ ತೊಂದರೆ ಆಗಿದೆ ಎಂಬ ಪ್ಲಾಸೆಬೋ ಪರಿಣಾಮವೇ ಜಾಸ್ತಿ ತೊಂದರೆ ಕೊಡುತ್ತದೆ. ವಿವಿಧ ಆಹಾರ ಮೂಲಗಳಿಂದ ನೈಸರ್ಗಿಕವಾಗಿಯೇ ಸುಮಾರು10-15 ಗ್ರಾಂ ಗ್ಲುಟಾಮೇಟ್ ಅಂಶ ದೇಹವನ್ನು ಸೇರುತ್ತದೆ. ಇದರ ವಿಷಕಾರಿ ಪ್ರಮಾಣ 15-18ಗ್ರಾಮ್/ಕಿಲೊ ಅಥವಾ ಮನುಷ್ಯನಿಗೆ ವಿಷಕಾರಿಯಾಗಬೇಕಾದರೆ ಇದನ್ನು 1.2-1.5ಕಿಲೊ ಸೇವಿಸಬೇಕು ಮತ್ತು ಇದು ಅಸಾಧ್ಯ. ಅಂದರೆ ಉಪ್ಪಿಗಿಂತ ಇದು ಐದಾರು ಪಟ್ಟು ಕಡಿಮೆ ವಿಷಕಾರಿ. ಆ ಮಟ್ಟಿಗೆ ಇದು ಸುರಕ್ಷಿತ.

ಈ ವಿಷಯಗಳನ್ನು ಗಮನಿಸಿ.

*ಉಪ್ಪು, ಸಕ್ಕರೆ ಇತ್ಯಾದಿ ಅನೇಕ ವಸ್ತುಗಳು ಅತಿಯಾದರೆ ಹಾನಿಕರ. ಸರಿಯಾದ ಪ್ರಮಾಣದಲ್ಲಿ ಬಳಸದ ” ಎಲ್ಲವೂ” ಹಾನಿಕರ. ಇವೆಲ್ಲವೂ ಜನಸಾಮಾನ್ಯರ ವಸ್ತುಗಳೇ. ಆದರೆ ಇವು ಹೆಚ್ಚಾದರೆ ನಮ್ಮ ನಾಲಿಗೆ ಗುರುತಿಸುತ್ತದೆ. ಅಜಿನೊಮೋಟೊ (ಮೊನೊಸೋಡಿಯಂ ಗ್ಲುಟಾಮೇಟ್ ) ಸಹ ದೇಹಕ್ಕೆ ಗ್ಲುಟಾಮೇಟ್ ರೂಪದಲ್ಲಿ ಅವಶ್ಯ. ಹಾಲಿನಲ್ಲಿ, ಮಾಂಸದಲ್ಲಿ, ಟೊಮ್ಯಾಟೊದಲ್ಲಿ ನೈಸರ್ಗಿಕವಾಗಿಯೇ ಅಜಿನೊಮೋಟೊ ಇದೆ. ಹಾಗೆಂದ ಮಾತ್ರಕ್ಕೆ ಇದನ್ನೆಲ್ಲಾ ತಿನ್ನಬೇಡಿ ಎನ್ನುವಿರೆ? ಆದರೆ ಅದಕ್ಕೆ ಒಂದು ಪ್ರಮಾಣವಿದೆ. ಅದನ್ನು ಮೀರಕೂಡದು. ಉತ್ತರ ಕರ್ನಾಟಕದಲ್ಲಿ ಭಯಂಕರ ಖಾರ ಇಷ್ಟಪಡುತ್ತಾರೆ. ಆದರೆ ನಮಗೆ ಜಾಸ್ತಿ ಖಾರ ತಿಂದರೆ ಎಸಿಡಿಟಿ ಆಗುತ್ತೆ. ಹಾಗಂತ ರೊಟ್ಟಿ ಬಿಡುತ್ತೇವೆಯೇ? ಇದೂ ಹಾಗೆ.

*ಹೊಟೇಲಿನಲ್ಲಿ ಅಡುಗೆ ಮನೆಯ ಅವತಾರ ಬೇರೆಯೇ ಇರುತ್ತದೆ. ಅವರು ಬಳಸುವ ತರಕಾರಿ ಸಂತೆಯಲ್ಲಿ ಕೊನೆಗೆ ಎಲ್ಲರೂ ಬಿಟ್ಟ ಕಡಿಮೆ ದರದ ತರಕಾರಿ, ಅತ್ಯಂತ ಕಡಿಮೆ ಗುಣ ಮಟ್ಟದ ದಿನಸಿಗಳು, ಬಳಸಿದ ಎಣ್ಣೆ, ಕೊಳಕು ಅಡುಗೆ ವಿಧಾನ, ಇಲಿ, ಜಿರಲೆಗಳ ಹಾವಳಿ ಇದೆಲ್ಲವನ್ನೂ ಗಮನಿಸಿ. ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅನೇಕ ಇತರ ವಸ್ತುಗಳೂ ಇವೆ. ಅಜಿನೊಮೋಟೊ ಇದರ ಒಂದು ಭಾಗ ಅಷ್ಟೆ. ಜನರ ಅಭಿಪ್ರಾಯ ಬೇರೆ, ಲಕ್ಷಾಂತರ ಇಂತಹ ವಿಧಗಳನ್ನು ಅಧ್ಯಯನ ಆಧರಿಸಿ ಬರೆದ ವೈಜ್ಞಾನಿಕ‌ ಲೇಖನಗಳನ್ನು ಆಧರಿಸಿ ಹೇಳುವ ಅಭಿಪ್ರಾಯ ಬೇರೆ.

*ಅಜಿನೊಮೋಟೋ 15-18 ಗ್ರಾಂ /ಪ್ರತಿ ಕಿಲೋ ಅಥವಾ ಒಬ್ಬ ಮನುಷ್ಯ ದಿನಕ್ಕೆ 1-1.5 ಕಿಲೋ ತಿಂದರೆ ಸಾವು ಸಂಭವಿಸೀತು. ಸಾಮಾನ್ಯವಾಗಿ ಇದನ್ನು ದಿನಕ್ಕೆ 100-150 ಮಿಗ್ರಾಂ ದಿನ ಪ್ರತಿ ತಿಂದರೆ ತೊಂದರೆ ಇಲ್ಲವೆಂದು ಆದ್ಯಯನ ಹೇಳುತ್ತದೆ ಅಲ್ಲದೇ 2-5 ಗ್ರಾಂ / ಕಿಲೊ ತೂಕಕ್ಕೆ ತಿಂದರೆ ಸಣ್ಣ ಪ್ರಮಾಣದ ತೊಂದರೆ ಕಾಣಿಸಿಕೊಳ್ಳುವುದರಿಂದ ಇದು ತೀವ್ರ ವಿಷಕಾರಿ ವರ್ಗದಲ್ಲಿ ಬರುವುದಿಲ್ಲ. ಉಪ್ಪು ಇದಕ್ಕಿಂತ ೫ ಪಟ್ಟು ಹೆಚ್ಚು ವಿಷಕಾರಿ. ಉಪ್ಪು ಸಕ್ಕರೆಯ ತರ ಇದನ್ನು ಅಡುಗೆಯಲ್ಲಿ ಸುರಕ್ಷಿತವಾಗಿ ಬಳಸಬಹುದು. ಅತಿಯಾದರೆ ಉಪ್ಪು ಮತ್ತು ಸಕ್ಜರೆಯಂತೆ ಎಲ್ಲವೂ ವಿಷ ಎಂಬುದು ಇದಕ್ಕೂ ಅನ್ವಯವಾಗುತ್ತದೆ.

*ಹೊಟೇಲಿನಲ್ಲಿ ತಿಂಡಿ ತಿಂದಾಗ ಆಗುವ ಎಲ್ಲಾ ತೊಂದರೆಗಳಿಗೆ ಅಜಿನೊಮೊಟೋವನ್ನು ಕಾರಣ ಮಾಡುವುದು ತಪ್ಪು ನಂಬಿಕೆಯಿಂದ. ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಅವರು ಜಾಸ್ತಿ ಬೆರೆಸಿದರೂ ಸಹ ಇದರಿಂದ ಆಗುವ ಅಡ್ಡ ಪರಿಣಾಮಗಳು ಬಹಳ ಕಡಿಮೆ. ಅಸ್ಥಮಾ ಇರುವವರಿಗೆ ಒಂದಿಷ್ಟು ತೊಂದರೆಯಾಗಬಹುದು ಎಂದು ಅಧ್ಯಯನ ಹೇಳುತ್ತದೆ.

*ಮೊನೊ ಸೋಡಿಯಂ ಗ್ಲುಟಾಮೇಟ್ ಇದಕ್ಕೆ “ಚೈನೀಸ್ ಉಪ್ಪು” ಎಂಬುದು ತಪ್ಪು ನಾಮಕರಣ. ಇದರ ಮೂಲ ದೇಶ ಜಪಾನ್. ಭಾರತವು ಚೈನಾ, ಥೈಲ್ಯಾಂಡ್ ಮತ್ತು ಜರ್ಮನಿಗಳಿಂದ ಪ್ರತಿ ವರ್ಷ 7.2 ಮೆಟ್ರಿಕ್ ಟನ್ನುಗಳಷ್ಟು ಆಮದು ಮಾಡಿಕೊಂಡು ಪ್ರಪಂಚದಲ್ಲಿ ಅತ್ಯಂತ ದೊಡ್ದ ಆಮದು ದೇಶವೆನಿಸಿದೆ. ಮೊದಲ ದೇಶ ಅಮೇರಿಕಾ ಮತ್ತು ಮೂರನೆಯ ದೇಶ ವಿಯೆಟ್ನಾಂ.

*ಅಡುಗೆಯಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೋಟೊ) ಹಾಕುವುದು ಮತ್ತು ಇದರಿಂದ ಆರೋಗ್ಯ ಕೆಡುವುದು ಎಂಬುದಕ್ಕೆ ದಾಖಲೆಗಳಿಲ್ಲ. ಮದುವೆ ಮನೆಯ ಊಟದಲ್ಲಿ ಹೇರಳ ಎಣ್ಣೆ, ಮಸಾಲೆ ಇರುವುದರಿಂದ ಮತ್ತು ಉದರಕ್ಕೆ ಇದ್ದಕ್ಕಿದ್ದ ಹಾಗೆ ಹೊಸ ವಸ್ತುಗಳು ಸೇರುವುದರಿಂದ ಮತ್ತು ಅವನ್ನೆಲ್ಲ ಜೀರ್ಣ ಮಾಡಿಕೊಳ್ಳಲು ಜೀರ್ಣಾಂಗ ವ್ಯವಸ್ಥೆ ಅನಿರೀಕ್ಷಿತವಾದ ತಯಾರಿ ಮಾಡಿಕೊಳ್ಳಬೇಕಾಗಿರುವುದರಿಂದ ಹೊಟ್ಟೆ ಗುಡು ಗುಡು‌ ಪ್ರಾರಂಭವಾಗುತ್ತದೆ.

*ನಾವು ಹೊಟೇಲಿಗೆ ಹೋಗಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಮಶ್ರೂಮ್ ಮಂಚೂರಿ, ಫ಼್ರೈಡ್ ರೈಸ್, ನೂಡಲ್ಸ್ ಇವುಗಳಿಗೆಲ್ಲಾ ಎಂ ಎಸ್ ಜಿ ಹಾಕಿಯೇ ಹಾಕಬಹುದು ಅಥವಾ ಹಾಕದೆಯೂ ಇರಬಹುದು.

*ಮೊನೊ ಸೋಡಿಯಂ ಗ್ಲ್ಟಾಮೇಟ್ ಹಾಕಿದ ಆಹಾರವನ್ನು ಆರಾಮವಾಗಿ ಚಪ್ಪರಿಸಿಕೊಂಡು ಸೇವಿಸಿ. ಹೊಟೇಲಿನಲ್ಲಿ ಆಹಾರ ಸೇವಿಸಿದಾಗ ಹೆಚ್ಚಿನ ತೊಂದರೆಗಳು ಆಹಾರದಲ್ಲಿ ಮೊನೊ ಸೋಡಿಯಂ ಗ್ಲುಟಾಮೇಟ್ (ಅಜಿನೊಮೋಟೊ) ಇದೆ ಎಂಬ “ಭ್ರಮೆ” “ಪ್ಲಾಸೆಬೊ” ಅಥವಾ “ನೋಸೆಬೋ” ಪರಿಣಾಮದಿಂದ ಆಗುತ್ತವೆ ಎಂದು ಅಧ್ಯಯನ ಹೇಳುತ್ತದೆ. ಇದೊಂಥರಾ ಹಲ್ಲಿ ಬಿದ್ದಾಗ ಅದನ್ನು ನೆನೆಸಿಕೊಂಡಾಗ ಆಗುವ ವಾಕರಿಕೆಯ ಸಮೂಹ ಸನ್ನಿಯ ಹಾಗೆ.

ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಪ್ ವಿಶ್ವವಿದ್ಯಾಲಯಗಳಲ್ಲಿ ಹರಿದಾಡುವ ಸುಳ್ಳು ಸುದ್ಧಿಗಳನ್ನು ನಂಬದೇ ವೈಜ್ಞಾನಿಕ ಸಂಶೋಧನಾ ಮಾಹಿತಿ ಆಧಾರಾತ ನೈಜ ಮಾಹಿತಿಗಳು ಲಭ್ಯವಾಗಲಿ ಎಂಬುದೇ ಈ ಧೀರ್ಘ ಲೇಖನದ ಉದ್ದೇಶ.

ಇದನ್ನೂ ನೋಡಿ: Karnataka Legislative Assembly Day 02 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *