– ಡಾ.ಕೆ.ಸುಶೀಲಾ
ಮಂಕಿ ಪಾಕ್ಸ್ ಗೆ ಕಾರಣವಾದ ವೈರಸ್ ʼಸ್ಮಾಲ್ ಪಾಕ್ಸ್ʼ (ಸಿಡುಬು) ಖಾಯಿಲೆಯನ್ನುಂಟು ಮಾಡುವ ʼವೇರಿಯಾಲʼಎನ್ನುವ ಡಿ.ಎನ್.ಎ ಕುಟುಂಬಕ್ಕೆ ಸೇರಿದ ವೈರಸ್. ಈ ವೈರಸ್ ‘ಸ್ಮಾಲ್ ಪಾಕ್ಸ್’ ಜಾತಿಗೆ ಸೇರಿರುವುದರಿಂದ ‘ಸ್ಮಾಲ್ ಪಾಕ್ಸ್ ಲಸಿಕೆ ನೀಡುವುದು ಈ ಖಾಯಿಲೆಯನ್ನು ಪ್ರತಿಶತ 85 ಜನರಲ್ಲಿ ತಡೆಗಟ್ಟಬಹುದು. ಮುಂದಿನ ದಿನಗಳಲ್ಲಿ ಖಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಕೋವಿಡ್-19 ಹಾಗೂ ಸ್ಮಾಲ್ ಪಾಕ್ಸ್ ಗಳಂತೆ ಈ ಖಾಯಿಲೆ ಕ್ಷಿಪ್ರವಾಗಿ ಹರಡುವುದಿಲ್ಲ ಹಾಗೂ ಸ್ಮಾಲ್ ಪಾಕ್ಸ್ ನಂತೆ ಅತೀ ಹೆಚ್ಚಿನ ನೋವು, ಸಾವು (30%)ಗಳಿಗೆ ಕಾರಣವಾಗಿಲ್ಲ. ಹಾಗಾಗಿ ಚಿಂತೆಗೆ ಅವಕಾಶವಿಲ್ಲ. ಆದರೆ ಮುಂಜಾಗ್ರತೆ ಅತ್ಯಂತ ಅವಶ್ಯಕ.
ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಕೋವಿಡ್ -19 ಆರ್ಭಟ ಕುಗ್ಗುತ್ತಿರುವಾಗ ʼಮಂಕಿಪಾಕ್ಸ್ʼ ಎನ್ನುವ ಸೋಂಕು ಹಲವಡೆ ಕಾಣಿಸಿಕೊಳ್ಳುತ್ತಿರುವುದು ವರದಿಯಾಗಿದೆ.
ಏನಿದು ಈ ಮಂಕಿಪಾಕ್ಸ್?
ಮೊಟ್ಟ ಮೊದಲು 1958 ರಲ್ಲಿ ಪ್ರಯೋಗಾಲಯದ ಮಂಗವೊಂದರಲ್ಲಿ ʼಮಂಕಿಪಾಕ್ಸʼಗೆ ಕಾರಣವಾಗುವ ವೈರಸ್ ಪತ್ತೆಯಾಗಿದ್ದು, 1970 ರಲ್ಲಿ ಆಫ್ರಿಕಾದ ʼಕಾಂಗೊʼ ದಲ್ಲಿ ಪ್ರಥಮ ಮಾನವ ಸೋಂಕು ಕಾಣಿಸಿಕೊಂಡಿತು. ಮುಂದೆ ನೈಜೀರಿಯಾ ಮತ್ತು ಕಾಂಗೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಕಾಣಿಸಿತ್ತು. ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಲ್ಲಿ ಸಣ್ಣ ಪ್ರಮಾಣದಲ್ಲಿ ವರದಿಯಾಗುತ್ತಿದ್ದ ಈ ಸೋಂಕು ಈ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದ ಪ್ರಪಂಚದ ಇತರ ದೇಶಗಳ ಕೆಲವೇ ಜನರಲ್ಲಿ ಆಗಾಗ ಈ ವೈರಸ್ ಕಾಣಿಸಿಕೊಳ್ಳುತ್ತಿತ್ತು.
ಆದರೆ ನೈಜೀರಿಯಾಕ್ಕೆ ಬೇಟಿ ಇತ್ತ ಇಂಗ್ಲೆಂಡಿನ ವ್ಯಕ್ತಿಯೊಬ್ಬರಲ್ಲಿ ಮೇ 7ನೇ ತಾರೀಖಿನಂದು ಪ್ರಥಮವಾಗಿ ಕಾಣಿಸಿಕೊಂಡ ಈ ಮಂಗನ ಖಾಯಿಲೆ, ಮೇ 22 ನೇ ತಾರೀಖಿನೊಳಗೆ ಯುರೋಪ್, ಉತ್ತರ ಅಮೇರಿಕಾ, ಆಸ್ಟ್ರೇಲಿಯಾವನ್ನು ಒಳಗೊಂಡಂತೆ ಒಟ್ಟು 12 ದೇಶದಲ್ಲಿ ಹಬ್ಬಿತು. ಪ್ರಯೋಗಾಲಯದಲ್ಲಿ ಧೃಢಪಟ್ಟ 98 ಪ್ರಕರಣಗಳು ಹಾಗೂ ಖಾಯಿಲೆಯ ಈ ಗುಣಲಕ್ಷಣ ಹೊಂದಿದ 28 ಸಂಶಯಿತ ಪ್ರಕರಣಗಳು ಇದಾಗಲೇ ಈ ದೇಶದಿಂದ ವರದಿಯಾಗಿದೆ..ಇದರಲ್ಲಿ ಕೊಂಚ ಆತಂಕಕಾರಿ ವಿಷಯವೆಂದರೆ ಈ ರೋಗಿಗಳಲ್ಲಿ ಹಲವರು ಪಶ್ಚಿಮ,ಪೂರ್ವ ಆಫ್ರಿಕಾ ದೇಶಗಳಿಗೆ ಭೇಟಿ ಕೊಟ್ಟಿರಲಿಲ್ಲ ಅಂದಾದ ಮೇಲೆ ಸ್ಥಳೀಯವಾಗಿ ಈ ಸೋಂಕು ಹರುಡುತ್ತಿದೆಯೇ? ಎಂಬ ಆತಂಕ ಕಾಡುತ್ತಿದೆ.
ಈ ರೋಗವು ಹರಡುವ ವಿಧಾನ : ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ತಗಲಿದ ಇಲಿ, ಹೆಗ್ಗಣ, ಅಳಿಲು ಇವುಗಳ ಅಥವಾ ಇವುಗಳ ಮಾಂಸ ಸಂಪರ್ಕಕ್ಕೆ ಬಂದಾಗ ಖಾಯಿಲೆ ಆರೋಗ್ಯವಂತರಿಗೆ ಈ ರೋಗ ತಗುಲುತ್ತದೆ.
ಮಾನವರಿಂದ ಮಾನವರಿಗೆ ಈ ವೈರೆಸ್ ಹೇಗೆ ಹರಡುತ್ತದೆ ?
ಸೋಂಕು ತಗುಲಿದ ಮಾನವರ ನಿಕಟ ಸಂಪರ್ಕಕಕ್ಕೆ ಬಂದಾಗ, ಕೆಮ್ಮುವಾಗ ಅವರ ಎಂಜಲಿನ ಚಿಕ್ಕ ಬಿಂದು ಅಥವಾ ಅವರ ದೇಹದ ಮೇಲಾಗಿರುವ ಖಾಯಿಲೆಯ ಧಡಿಕೆ, ಒಣಗುತ್ತಿರುವ ಅದರ ಹೆಚ್ಚಿನ ಸಂಪರ್ಕಕ್ಕೆ ಬಂದಾಗ ಅಥವಾ ಸೋಂಕಿತರು ಉಪಯೋಗಿಸುವ ವೈರಾಣುಗಳಿಂದ ಕಲುಷಿತವಾದ ಅವರ ಬಟ್ಟೆ ಪಾತ್ರೆಗಳ ಉಪಯೋಗದಿಂದ ಈ ಸೋಂಕು ಹರಡುತ್ತದೆ. ಆದರೆ ಈ ರೀತಿಯಲ್ಲಿ ಹರಡುವ ಪ್ರಮಾಣ ಕಡಿಮೆ ರೋಗಿಯ ಸಂಪರ್ಕಕ್ಕೆ ಬರುವವರಲ್ಲಿ ಶೇಕಡಾ 3 ಜನರಿಗೆ ಈ ಸೋಂಕು ತಗಲುವ ಸಂಭವವಿದೆ.
ರೋಗದ ಗುಣಲಕ್ಷಣ: ಸೋಂಕು ತಗುಲಿದ 5 ರಿಂದ 25 ದಿನಗಳೊಳಗೆ ಖಾಯಿಲೆಯ ಗುಣಲಕ್ಷಣ ಕಾಣಿಸಿಕೊಳ್ಳಬಹುದಾದರೂ ಸಾಮಾನ್ಯವಾಗಿ ಈ ಈ ವೈರೆಸ್ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಸಮಯ 1ರಿಂದ 2 ವಾರಗಳಾಗಿರುತ್ತದೆ. ಮೊದಲು ಜ್ವರ, ಅತಿಯಾದ ತಲೆನೋವು, ಬೆನ್ನು ಮತ್ತು ಮೈಕೈ ನೋವು, ನಿಶ್ಶಕ್ತಿ, ಹಾಗೂ ದುಗ್ದ ಗ್ರಂಥಿ(ಲಿಂಫ್ ನೋಡ್ಸ್)ಗಳಲ್ಲಿ ಊತ ಕಾಣಿಸಿಕೊಳ್ಳುವುದು. ಇದಾದ 1ರಿಂದ 3 ದಿನಗಳೊಳಗೆ ಮೊಟ್ಟ ಮೊದಲು ಮುಖದ ಮೇಲೆ,ಕೈಕಾಲು, ಹಸ್ತ, ಪಾದಗಳ ಮೇಲೆ ರ್ಯಾಶ್(ದದ್ದು, ದಡಿಕೆ) ಕಾಣಿಸಿಕೊಳ್ಳವುದು. ಮುಂದಿನ ದಿನಗಳಲ್ಲಿ ಇವುಗಳಲ್ಲಿ ದ್ರವ ತುಂಬಿ ಗುಳ್ಳೆಗಳಾಗಿ ಕೆಲ ಸಮಯದಲ್ಲಿ ಇವುಗಳ ಒಣಗಿ ಚರ್ಮದ ಹೊಟ್ಟು (scab)ಕಾಣಿಸಿಕೊಳ್ಳುವುದು. ಆದರೆ ಸಾಧಾರಣ 2ರಿಂದ 4 ವಾರದಲ್ಲಿ ರೋಗಿ ಕಾಯಿಲೆಯಿಂದ ಮುಕ್ತನಾಗುತ್ತಾನೆ.
ಚಿಕಿತ್ಸೆ: ಇತರ ಎಲ್ಲ ವೈರಸ್ ಸೋಂಕಿನಂತೆ ಈ ಖಾಯಿಲೆಗೂ ನಿರ್ಧಿಷ್ಟ ಚಿಕಿತ್ಸೆ ಇಲ್ಲ. ಹೆಚ್ಚಾಗಿ ರೋಗಿ ರೋಗ ಲಕ್ಷಣಗಳ ಶಮನಕ್ಕೆ ಬೇಕಾದ ಚಿಕಿತ್ಸೆ ನೀಡಬಹುದು.ರೋಗಿಯ ದೇಹದ ಮೇಲೆ ಏಳುವ ವಿವಿಧ ಹಂತದಲ್ಲಿರುವ ಗುಳ್ಳೆಗಳು ಶುಚಿಯಾಗಿರುವಂತೆ ನೋಡಿಕೊಳ್ಳುವುದು ಅಗತ್ಯ.ಇತ್ತೀಚೆಗೆ ಇತರ ಕೆಲವು ವೈರಲ್ ಖಾಯಿಲೆಗೆ ನೀಡುವ ಪ್ರತಿರೋಧಕ ಔಷದಗಳನ್ನು, ಈ ಖಾಯಿಲೆಯು ಗಂಭೀರ ಹಂತಕ್ಕೆ ಹೋದಾಗ ಅದರಿಂದ ಪಾರು ಮಾಡಲು ನೀಡುವುದರಿಂದ ಸಹಾಯಕವಾಗಬಹುದು ಎನ್ನಲಾಗಿದೆ.
ಮರಣದ ಪ್ರಮಾಣ: ಪಶ್ಚಿಮ ಆಫ್ರಿಕಾ ವೈರಸ್ ಸೋಂಕಿನಲ್ಲಿ ಶೇಕಡಾ 1ರಿಂದ ಶೇಕಡಾ3.6 ಇದ್ದರೆ, ಮಧ್ಯಆಫ್ರಿಕಾದ ವೈರಸ್ ನಲ್ಲಿ ಮರಣದ ಪ್ರಮಾಣ ಶೇಕಡಾ 10 ರಷ್ಟಿದೆ .ಇತ್ತೀಚೆಗೆ ಈ ರೋಗ ಹರಡಿರುವ ಯಾವುದೇ ದೇಶದಲ್ಲಿ ಈ ರೋಗದಿಂದಾಗಿ ಮರಣ ಸಂಭವಿಸಿದ ವರದಿ ಇಲ್ಲಿಯ ತನಕ ಬಂದಿಲ್ಲ.
ʻಮಂಕಿಪಾಕ್ಸ್ʼ ತಡೆಗಟ್ಟುವುದು ಹೇಗೆ ?
- ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿರುವಂತೆ ಸೋಂಕಿತರನ್ನು ಇತರರಿಂದ ಪ್ರತ್ಯೇಕಿಸುವುದು.
- ಇವರ ಆರೈಕೆ ಮಾಡುವವರು ರೋಗಿಯ ನಿಕಟ ಸಂಪರ್ಕಕ್ಕೆ ಬರದಂತೆ ಸೂಕ್ತ ಎಚ್ಚರಿಕೆ ವಹಿಸುವುದು.
- ಮಕ್ಕಳು,ಗರ್ಭಿಣಿಯರು, ರೋಗನಿರೋಧಕ ಶಕ್ತಿಯಲ್ಲಿ ಕುಂದಿರುವವರಿಗೆ ಖಾಯಿಲೆ ಗಂಭೀರ ಮಟ್ಟಕ್ಕೆ ಹೋಗಬಹುದಾದುದರಿಂದ ಇವರನ್ನು ಸೋಂಕಿತರಿಂದ ದೂರವಿಡುವುದು.
- ಖಾಯಿಲೆ ತಡೆಗಟ್ಟಲು ಲಸಿಕೆಯ ಉಪಯೋಗ: ಈ ಖಾಯಿಲೆಯ ವೈರಸ್ , ಸ್ಮಾಲ್ ಪಾಕ್ಸ್ ಜಾತಿಗೆ ಸೇರಿರುವುದರಿಂದ ಸ್ಮಾಲ್ ಪಾಕ್ಸ್ ಲಸಿಕೆ ನೀಡುವುದು ಈ ಖಾಯಿಲೆಯನ್ನು ಪ್ರತಿಶತ 85 ಜನರಲ್ಲಿ ತಡೆಗಟ್ಟ ಬಹುದು. ಮುಂದಿನ ದಿನಗಳಲ್ಲಿ ಖಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಕೋವಿಡ್-19 ಹಾಗೂ ಸ್ಮಾಲ್ ಪಾಕ್ಸ್ ಗಳಂತೆ ಈ ಖಾಯಿಲೆ ಕ್ಷಿಪ್ರವಾಗಿ ಹರಡುವುದಿಲ್ಲ ಹಾಗೂ ಸ್ಮಾಲ್ ಪಾಕ್ಸ್ ನಂತೆ ಅತೀ ಹೆಚ್ಚಿನ ನೋವು, ಸಾವು (30%)ಗಳಿಗೆ ಕಾರಣವಾಗಿಲ್ಲ. ಹಾಗಾಗಿ ಚಿಂತೆಗೆ ಅವಕಾಶವಿಲ್ಲ. ಆದರೆ ಮುಂಜಾಗ್ರತೆ ಅತ್ಯಂತ ಅವಶ್ಯಕ.