‘ಅಮ್ಮ’ ನಿನಗೂ ಒಂದು ದಿನ

 ‘ಅಮ್ಮ’ ನಿನಗೂ ಒಂದು ದಿನ

– ನಾ ದಿವಾಕರ

ಇಂದು ಅಮ್ಮಂದಿರ ದಿನವಂತೆ ನಿನಗೂ
‘ಅಮ್ಮ’ನಿಗೂ ಒಂದು ದಿನ-ಆಚರಣೆ ಬೇಕೇ ?
ಏನೆಂದು ಆಚರಿಸಲಿ ಅಮ್ಮಾ
ನೀನು ಕಣ್ಮರೆಯಾಗಿ ಮೂವತ್ತೈದು
ವಸಂತಗಳೇ ಸಂದುಹೋದವು ; ನಿನಗೂ

ಭಾವಚಿತ್ರವ ದಿಟ್ಟಿಸುವಾಗೆಲ್ಲಾ
‘ಕರೂ’ ಎಂಬ ಆ ನಲ್ಮೆಯ ಕರೆ
ಅಮೂರ್ತ ವಾಣಿಯಂತೆ ಎದೆ ಇರಿಯುತ್ತದೆ
ಅಂತರಂಗದ ಭಾವ ತಂತುಗಳು
ಒಂದೆರಡು ಹನಿಗಳಾಗಿ ಬತ್ತಿಹೋಗುತ್ತವೆ ;

ವಯೋಮಾನದ ನೊಗ ಭಾರಕ್ಕೆ
ನಿನ್ನ ‘ಮಗು’ ತಲ್ಲಣಿಸಿ ದಣಿದಾಗಲೆಲ್ಲಾ
ಆ ನೋವಿನ ಒಳದನಿಯಲಿ
ನಿನ್ನ ಸ್ವಾಭಿಮಾನದ ಛಾಯೆ ಹರಡುತ್ತದೆ
ಭರವಸೆಯ ಕಡಲಿನ ಹಾಗೆ ;

ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ 400 ಮಿಸೈಲ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ ಸ್ಪಷ್ಟನೆ

ಎಲ್ಲರೂ ಕಳೆದುಹೋದರಮ್ಮಾ
ಒಬ್ಬಳ ಹೊರತು
ಘಾಸಿಯಾದ ಮನಸ್ಸು ಮಡಿಲಿಗಾಗಿ
ಹಂಬಲಿಸುವಾಗ
ತಲೆಯ ನೇವರಿಸುತ್ತಿದ್ದ ನಿನ್ನ ಕೈಗಳು
ಮರಳಿ ಸ್ಪರ್ಶಿಸಿದಂತಾಗುತ್ತದೆ ;

ಕಣ್ಣಂಚಿನ ಹನಿಗಳು
ದಿನಚರಿಯ ಪುಟಗಳಲಿ ಕರಗಿಹೋದಾಗ
ಅಮ್ಮಾ, ನಿನ್ನೊಲುಮೆಯ
ಮಧುರ ಕ್ಷಣಗಳು ಮರುಕಳಿಸಿದಂತಾಗುತ್ತದೆ
ಎದೆಯೊಳಡಗಿದ ನೋವಿಗೆ
ಮುಲಾಮಿನ ಹಾಗೆ ;

ನೀ ಮರಳಿ ಬರಲಾರೆ
ನೆನಪಿನ ಬಿಂದುಗಳಲಿ ನೆಲೆಸಿರುವೆ
ಅಮ್ಮಂದಿರ ಈ ದಿನ
ಆ ಬಿಂದುಗಳಲಿ ನೀನು
ನಿನ್ನ ಒಡಲು ಮತ್ತು ‘ ಕರೂ ‘
ಎಂಬ ಕರೆ ಸಾಕಲ್ಲವೇ ಅಮ್ಮಾ ?

(ಅಮ್ಮ ನನ್ನನ್ನು ಕರೆಯುತ್ತಿದ್ದುದೇ ‘ಮಗೂ’ ಇಲ್ಲವೇ ‘ಕರೂ’ ಎಂದು) 

ಇದನ್ನೂ ನೋಡಿ: ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು Janashakthi Media

Donate Janashakthi Media

Leave a Reply

Your email address will not be published. Required fields are marked *